ADVERTISEMENT

ವಿಶ್ಲೇಷಣೆ: ಸಮಾನ ಶಾಲಾ ಶಿಕ್ಷಣ ಸಾಕಾರ ಎಂದು?

ಪ್ರೊ.ಬರಗೂರು ರಾಮಚಂದ್ರಪ್ಪ
Published 21 ಮೇ 2025, 20:30 IST
Last Updated 21 ಮೇ 2025, 20:30 IST
   

ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ನೀತಿ ನಿರೂಪಣೆ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ನಮ್ಮ ಸರ್ಕಾರಗಳು ಸಮಾನ ಶಾಲಾ ಶಿಕ್ಷಣದ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ. ಅಷ್ಟೇ ಅಲ್ಲ, ಆಯೋಗಗಳೂ ಈ ಕುರಿತು ಪರಿಹಾರ ಮಾರ್ಗಗಳನ್ನು ಹುಡುಕಿದ್ದು ಇಲ್ಲ ಎನ್ನುವಷ್ಟು ಕಡಿಮೆ. ಈಗಂತೂ ಶಿಕ್ಷಣವೆಂಬುದು ಅಧಿಕೃತವಾಗಿಯೇ ಉದ್ಯಮವಾಗಿಬಿಟ್ಟಿದೆ.

ಗ್ಯಾಟ್ ಒಪ್ಪಂದದಲ್ಲಿ ಶಿಕ್ಷಣವನ್ನು ‘Knowledge Industry’ (ಜ್ಞಾನ ಉದ್ಯಮ) ಎಂದು ಕರೆಯಲಾಗಿದೆ. ಬೋಧಕರನ್ನು ‘Knowledge Industry workers’ (ಜ್ಞಾನ ಉದ್ಯಮದ ಕಾರ್ಮಿಕರು) ಎಂದು ಹೆಸರಿಸಲಾಗಿದೆ. ವಿದ್ಯಾರ್ಥಿಗಳ ವಿನಿಮಯವನ್ನು ‘Consumption Abroad’ (ವಿದೇಶಗಳಲ್ಲಿ ಬಳಕೆ) ಎಂದು, ವಿದೇಶಿ ಶಿಕ್ಷಣವನ್ನು ‘Cross Border Supply’ (ಗಡಿಯಾಚೆಗೆ ಪೂರೈಕೆ) ಎಂದು, ಸ್ವದೇಶದಲ್ಲಿ ಸ್ಥಾಪಿತವಾಗುವ ವಿದೇಶಿ ವಿಶ್ವವಿದ್ಯಾಲಯಗಳನ್ನು ‘Commercial Presence’ (ವಾಣಿಜ್ಯಿಕ ಇರುವಿಕೆ) ಎಂಬುದಾಗಿ ಮತ್ತು ಒಟ್ಟು ವಿದ್ಯಾರ್ಥಿಗಳನ್ನು ‘Knowledge Industry Clients’ (ಜ್ಞಾನ ಉದ್ಯಮದ ಸೇವೆ ಪಡೆಯುವವರು) ಎಂದು ನಮೂದಿಸಲಾಗಿದೆ. ಇಲ್ಲಿ ಶಿಕ್ಷಣ ಕ್ಷೇತ್ರದ ಪರಿಭಾಷೆಯು ಉದ್ಯಮದ ಪರಿಭಾಷೆಯಾಗಿ ಪರಿವರ್ತನೆಗೊಂಡಿರುವುದನ್ನು ಗಮನಿಸಬಹುದು.

ಅಷ್ಟೇ ಅಲ್ಲ, ಉದ್ಯಮಸ್ನೇಹಿಯಾದ ಶಿಕ್ಷಣವನ್ನು ರೂಪಿಸಿಬೇಕೆಂಬ ಮಾತುಗಳು ಬಹಳಷ್ಟು ಕೇಳಿಬರುತ್ತಿವೆ. ಉದ್ಯಮಸ್ನೇಹಿಯಾಗುವುದಕ್ಕೂ ಉದ್ಯೋಗಸ್ನೇಹಿಯಾಗುವುದಕ್ಕೂ ವ್ಯತ್ಯಾಸವಿದೆ. ಉದ್ಯೋಗಸ್ನೇಹಿಯಾದ ಶಿಕ್ಷಣವು ಯಾವ ಹಂತದಿಂದ ಆರಂಭವಾಗಬೇಕೆಂಬ ಖಚಿತತೆ ಕಾಣುತ್ತಿಲ್ಲ. ಎಲ್ಲಿಯವರೆಗೆ ಕೇವಲ ಜ್ಞಾನಮುಖಿ ಶಿಕ್ಷಣ, ಎಲ್ಲಿಂದ ಉದ್ಯೋಗಮುಖಿ ಶಿಕ್ಷಣ ಇರಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿಲ್ಲ. ಅದರ ಬದಲು ಆರಂಭದ ಹಂತದಿಂದಲೇ ಕೌಶಲಾಭಿವೃದ್ಧಿ ಶಿಕ್ಷಣವನ್ನು ಸೇರಿಸುವ ಉತ್ಸಾಹ ಕಾಣುತ್ತಿದೆ.

ADVERTISEMENT

ಜ್ಞಾನಮುಖಿ ಮತ್ತು ಉದ್ಯೋಗಮುಖಿಯನ್ನು ಸಮನ್ವಯಗೊಳಿಸುವ ಚಿಂತನೆ ಕೂಡ ನಡೆಯುತ್ತಿಲ್ಲ; ತಾಂತ್ರಿಕ ವಿಷಯಗಳೇ ಮಹತ್ವ ಪಡೆದುಕೊಳ್ಳುತ್ತ ಶಿಕ್ಷಣದ ತತ್ವಜ್ಞಾನವನ್ನು ‘ತಂತ್ರ’ಜ್ಞಾನ ನುಂಗಿಹಾಕುತ್ತಿದೆ. ಹೀಗಾಗಿ ಸಮಾನ ಶಾಲಾ ಶಿಕ್ಷಣವೆಂಬ ಪರಿಕಲ್ಪನೆಗೆ ಕೋವಿಡ್ ಕಾಯಿಲೆ ಬರುವಂತೆ ಮಾಡಲಾಗಿದೆ. ಸಮಾನ ಶಾಲಾ ಶಿಕ್ಷಣದ ಪರಿಕಲ್ಪನೆಗೆ ಮೂಲಾಧಾರವೆಂದರೆ ಶೈಕ್ಷಣಿಕ ಸಮಾನತೆ. ಆದರೆ ನಮ್ಮಲ್ಲಿ ಹಸುಗೂಸುಗಳ ಹಂತದಲ್ಲೇ ಶೈಕ್ಷಣಿಕ ಅಸಮಾನತೆ ಆರಂಭವಾಗುತ್ತದೆ.

ಬಡವರ ಮಕ್ಕಳು ಅಂಗನವಾಡಿಗಳಿಗೆ ಮತ್ತು ಉಳ್ಳವರ ಮಕ್ಕಳು ಕಿಂಡರ್ ಗಾರ್ಟನ್ ಖಾಸಗಿ ಶಾಲೆಗಳಿಗೆ ಎಂಬುದು ಇಂದಿನ ವಾಸ್ತವ. ನಮ್ಮ ರಾಜ್ಯದಲ್ಲಿ ಅಂದಾಜು 65,911 ಅಂಗನವಾಡಿಗಳಿವೆ. ಅಂಗನವಾಡಿ ಮಕ್ಕಳ ವಯೋಮಾನಕ್ಕೆ ಸಮಾನರಾದ ಉಳ್ಳವರ ಮಕ್ಕಳು ಸೇರುವುದು ಕಿಂಡರ್ ಗಾರ್ಟನ್‌ಗಳಿಗೆ; ಅದೂ ಖಾಸಗಿ ಸಂಸ್ಥೆಗಳಿಗೆ. ಪೂರ್ವ ಪ್ರಾಥಮಿಕ ಶಿಕ್ಷಣದ ಹೆಸರಿನಲ್ಲಿ ನಡೆಯುವ ಈ ಖಾಸಗಿ ಕಿಂಡರ್ ಗಾರ್ಟನ್‌ಗಳ ನಿಯಂತ್ರಣಕ್ಕಾಗಿ 1995ರಲ್ಲೇ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಅದು ಜಾರಿಯಾಗಿಲ್ಲ. ಅಂಗನವಾಡಿ ಮತ್ತು ಕಿಂಡರ್ ಗಾರ್ಟನ್‌ಗಳಿಂದಾಗುತ್ತಿರುವ ಶೈಕ್ಷಣಿಕ ಅಸಮಾನತೆಯನ್ನು ಹೋಗಲಾಡಿಸುವ ನೀತಿ ನಿರೂಪಣೆಯೂ ನಡೆದಿಲ್ಲ.

ಪ್ರಾಥಮಿಕ ಶಾಲಾ ಹಂತದಲ್ಲಿ ಸರ್ಕಾರಗಳೇ ವಿಭಿನ್ನ ಮಾದರಿಗಳ ಶಾಲೆಗಳನ್ನು ನಡೆಸುತ್ತ ಶೈಕ್ಷಣಿಕ ಅಸಮಾನತೆಯನ್ನು ಸಹಜಗೊಳಿಸಿವೆ! ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್‌ ಮಾಧ್ಯಮ, ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆ, ರಾಜ್ಯ ಪಠ್ಯಕ್ರಮ ಮತ್ತು ಕೇಂದ್ರ ಪಠ್ಯಕ್ರಮ– ಹೀಗೆ ವಿವಿಧ ವ್ಯತ್ಯಾಸದ ಶಾಲಾ ಮಾದರಿಗಳು ಅಸಮಾನತೆಗೆ ಸಾಕ್ಷಿಯಾಗಿವೆ. ಗುಣಮಟ್ಟದ ಹೆಸರಿನಲ್ಲಿ ನವೋದಯ, ಮೊರಾರ್ಜಿ, ಅಂಬೇಡ್ಕರ್, ರಾಣಿ ಚೆನ್ನಮ್ಮ ಮುಂತಾದ ವಿಶೇಷ ವಸತಿ ಶಾಲೆಗಳ ಜೊತೆಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೆಚ್ಚಿಸುವ ಉತ್ಸಾಹ ಕಾಣುತ್ತಿದೆ. ಹೀಗೆ ನಮ್ಮ ಸರ್ಕಾರಗಳೇ ಗುಣಮಟ್ಟದ ಹೆಸರಿನಲ್ಲಿ ಕೆಲವು ವಿಶೇಷ ಶಾಲೆಗಳನ್ನು ನಡೆಸುತ್ತವೆಯೆಂದರೆ, ತಾರ್ಕಿಕವಾಗಿ ಉಳಿದ ಶಾಲೆಗಳು ಇಷ್ಟು ಗುಣಮಟ್ಟದವಲ್ಲ ಎಂದರ್ಥ.

ಅಲ್ಲದೆ, ಒಂದೇ ವಯಸ್ಸಿನ ಮಕ್ಕಳಿಗೆ ಸಮಾನ ಶಿಕ್ಷಣ ಕೊಡುವ ಬದಲು ಅಸಮಾನ ಶಿಕ್ಷಣವೇ ನೀತಿಯಾಗಿರುವುದಕ್ಕೆ ಈ ವಿವಿಧ ಮಾದರಿಗಳೇ ನಿದರ್ಶನ. ಇಲ್ಲಿ ಮುಖ್ಯವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಸಾಮಾನ್ಯ ಸರ್ಕಾರಿ ಶಾಲೆಗಳ ಮಕ್ಕಳು ಮತ್ತು ವಿಶೇಷ ಶಾಲೆಗಳಿಗೆ ಹೊರತಾದ ಮಕ್ಕಳು. ಅಂದರೆ ಸರ್ಕಾರಿ ಶಾಲೆಗಳು ದುರ್ಬಲವಾಗುವುದಕ್ಕೆ ಶಾಲಾ ನೀತಿಯಲ್ಲೇ ಕೆಲವು ಕಾರಣಗಳಿವೆ.

ದೇಶದಲ್ಲಿ ಅಂದಾಜು 10,83,678 ಸರ್ಕಾರಿ ಶಾಲೆಗಳಿವೆ. ನಮ್ಮ ರಾಜ್ಯದಲ್ಲಿ ಅಂದಾಜು 44,615 ಸರ್ಕಾರಿ ಪ್ರಾಥಮಿಕ ಶಾಲೆಗಳೂ 5,240 ಸರ್ಕಾರಿ ಪ್ರೌಢಶಾಲೆಗಳೂ ಇವೆ. 4,000 (ಆದಿವಾಸಿ) ಆಶ್ರಮ ಶಾಲೆಗಳಿವೆ. ರಾಜ್ಯದ ಸುಮಾರು ಶೇ 72ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಈ ಸರ್ಕಾರಿ ಶಾಲೆಗಳಲ್ಲೇ ‘ವಿಶೇಷ’ ಮತ್ತು ‘ಸಾಮಾನ್ಯ’ವೆಂಬ ಅಸಮಾನತೆಯಿದೆ. ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ‘ಅಸಮಾನತೆ’ಯ ಕಂದಕವೂ ದೊಡ್ಡದಾಗುತ್ತಿದೆ.

ಸರ್ಕಾರಿ ಪ್ರಾಥಮಿಕ ಶಾಲೆಗಳೆಂದರೆ ಬಹುಪಾಲು ಕನ್ನಡ ಮಾಧ್ಯಮದ ಶಾಲೆಗಳು. ಖಾಸಗಿ ಶಾಲೆಗಳನ್ನೂ ಒಳಗೊಂಡಂತೆ ರಾಜ್ಯದ ಎಲ್ಲ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಅಥವಾ ಮಾತೃಭಾಷೆಯೇ ಬೋಧನಾ ಮಾಧ್ಯಮವಾಗಿರಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು 1993 ಮತ್ತು 1999ರಲ್ಲಿ ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿತ್ತು. ಆದರೆ 2014ರಲ್ಲಿ ಬಂದ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ತೀರ್ಪು ಶಿಕ್ಷಣ ಮಾಧ್ಯಮದ ಆಯ್ಕೆಯು ಪೋಷಕರ ಸ್ವಾತಂತ್ರ್ಯ ಎಂದಿತು. ಮರುಪರಿಶೀಲನಾ ಅರ್ಜಿಯೂ ವಜಾಗೊಂಡಿತು. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಜಾರಿಗೆ ಅಡ್ಡಿಯಾಗುವುದಿಲ್ಲವಾದರೂ ಖಾಸಗಿ ಶಾಲೆಗಳಿಗೆ ಬೋಧನಾ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ. ಖಾಸಗೀಕರಣದ ಆರ್ಥಿಕ ನೀತಿಯ ಫಲವಾಗಿ ವಿವಿಧ ಕ್ಷೇತ್ರಗಳ ಮೇಲೆ ಆಗುತ್ತಿರುವ ಪರಿಣಾಮಕ್ಕೆ ಇದು ಒಂದು ಸಾಕ್ಷಿ. ಖಾಸಗೀಕರಣಕ್ಕೆ ರಾಷ್ಟ್ರೀಕರಣವೇ ಉತ್ತರವಾಗಬೇಕು. ಆದರೆ ಬಂಡವಾಳಶಾಹಿ ನೀತಿಯ ಸರ್ಕಾರಗಳಿಂದ ಇದು ಸಾಧ್ಯವೆ? ಸಾಧ್ಯವೆನ್ನಿಸದೆ ಇದ್ದರೂ ಒತ್ತಾಯವಂತೂ ಜೀವಂತವಾಗಿರಬೇಕು.

ಇಷ್ಟಾಗಿಯೂ ಎಲ್ಲ ಸಮಸ್ಯೆಗಳ ನಡುವೆ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲೇಬೇಕಾಗಿದೆ. ಹಾಗೆಂದು ಯಾವುದೇ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸಬೇಕೆಂದು ಕಾನೂನು ಮಾಡಲು 2014ರ ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಸಾಧ್ಯವಿಲ್ಲ. ಇಂಥ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಮೂಲ ಸೌಕರ್ಯಗಳ ಮೂಲಕ ಬಲಗೊಳಿಸುವ ಹಾಗೂ ಆಕರ್ಷಕವಾಗಿಸುವ ಕೆಲಸವಾಗಬೇಕು. ಸೂಕ್ತ ಕಟ್ಟಡಗಳ ನಿರ್ಮಾಣವಾಗಬೇಕು; ಇಂಗ್ಲಿಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಸಮರ್ಥವಾಗಿ ಕಲಿಸುವ ವ್ಯವಸ್ಥೆ ಆಗಬೇಕು. ಪೂರ್ಣ ಪ್ರಮಾಣದ ಅಧ್ಯಾಪಕರನ್ನು ಒದಗಿಸಬೇಕು. ಒಂದು ಅಂದಾಜಿನ ಪ್ರಕಾರ 41,869 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು, 8,292 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು, 3,539 ಪಿಯುಸಿ ಅಧ್ಯಾಪಕರ ಹುದ್ದೆಗಳು– ಒಟ್ಟು 53,700 ಹುದ್ದೆಗಳು ಖಾಲಿಯಿವೆ. ಇತ್ತೀಚೆಗೆ ಹೊಸ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದರೂ ಈಗ ಬಹುಪಾಲು ಅತಿಥಿ ಅಧ್ಯಾಪಕರನ್ನೇ ಅವಲಂಬಿಸಲಾಗಿದೆ.

ಈ ಮಧ್ಯೆ, ರಾಜ್ಯದ ಕೆಲವು ಸರ್ಕಾರಿ ಶಾಲೆಗಳನ್ನು ಸ್ಥಳೀಯರು ಸ್ವಯಂ ಸಬಲೀಕರಣ ಮಾಡಿದ ನಿದರ್ಶನಗಳಿವೆ. ವಿದ್ಯಾರ್ಥಿಗಳು ಖಾಸಗಿ ಶಾಲೆಯನ್ನು ತೊರೆದು ಇಂತಹ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದ ಉದಾಹರಣೆಗಳಿವೆ. ಸಬಲೀಕರಣ ಹೇಗೆ ಸಾಧ್ಯವಾಯಿತೆಂದು ತಿಳಿಯಲು ಈ ಶಾಲೆಗಳ ಅಧ್ಯಾಪಕರು, ಪೋಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರ ಜೊತೆಗೆ ನಮ್ಮ ಸಚಿವರೂ ಅಧಿಕಾರಿಗಳೂ ಮಾತುಕತೆ ನಡೆಸಬೇಕು. ತಜ್ಞರ ಜೊತೆಗೂ ಸಮಾಲೋಚನೆ ನಡೆಸಬೇಕು. ತಾರತಮ್ಯಗಳ ತಾಣವಾದ ಶಾಲಾ ಮಾದರಿಗಳ ಬದಲು ಒಂದೇ ರೀತಿಯ ಸಮಾನ ಶಾಲಾ ಶಿಕ್ಷಣ ಜಾರಿಗೆ ಮುಂದಾಗಬೇಕು.

‘ವಿಲೀನ’ ಎಂಬ ವೇಷಭಾಷೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಬದಲು ಸೂಕ್ತ ಪರಿಹಾರ ಮಾರ್ಗಕ್ಕೆ ಮುಂದಾಗಬೇಕು. ಸಂಬಂಧಪಟ್ಟವರ ಜೊತೆಗಿನ ಪ್ರಜಾಸತ್ತಾತ್ಮಕ ಚರ್ಚೆಯು ಮೊದಲ ಹೆಜ್ಜೆಯಾಗಬೇಕು. ಏಕಪಕ್ಷೀಯ ತೀರ್ಮಾನಗಳು ತರವಲ್ಲ ಎಂಬ ತಿಳಿವಳಿಕೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.