ಸಂವಹನ, ವಾರ್ತಾ ಮತ್ತು ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿಯು, ‘ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ವರ್ಷದಿಂದ ವರ್ಷಕ್ಕೆ ಉದ್ಯೋಗಿಗಳು ಕಡಿಮೆಯಾಗುತ್ತಲೇ ಬರುತ್ತಿದ್ದಾರೆ. ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯೂ ನಡೆಯುತ್ತಿಲ್ಲ’ ಎಂಬ ಆಕ್ಷೇಪಣಾ ವರದಿಯನ್ನು ಹಿಂದಿನ ಡಿಸೆಂಬರ್ 18ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಅದಕ್ಕೆ ಉತ್ತರವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು, ‘ಭಾರತದ ಯುವಕರಲ್ಲಿ ಪ್ರತಿಭೆಯ ಕೊರತೆ ಇದೆ. ಆದ್ದರಿಂದ ಹುದ್ದೆಗಳು ಭರ್ತಿಯಾಗಿಲ್ಲ’ ಎಂಬ ಅಚ್ಚರಿಯ ಹೇಳಿಕೆ ಕೊಟ್ಟಿದೆ. ‘ಮಾಡ್ಲಾರ್ದೇ ಮನೀ ಹಾಳಾತಂತ, ಹೂಡ್ಲಾರ್ದೇ ಹೊಲಾ ಹಾಳಾತಂತ’ ಎಂಬ ಗಾದೆ ಮಾತಿಗೆ ಸರಿಹೊಂದುವ ಶುದ್ಧ ಸಬೂಬಿನ ಹೇಳಿಕೆಯಿದು.
ವಿವಿಧ ಕ್ಷೇತ್ರಗಳ ಪ್ರತಿಭಾವಂತರನ್ನು ಹುಡುಕಿ, ಬೆಳೆಸಿ, ಪ್ರೋತ್ಸಾಹಿಸುವ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳನ್ನು ಮುಚ್ಚುವ ಹಂತಕ್ಕೆ ತಂದಿರುವ ಇಲಾಖೆಯೇ ಇಂಥ ಬೇಜವಾಬ್ದಾರಿ ಹೇಳಿಕೆ ಕೊಟ್ಟಿರುವುದು ಹಾಸ್ಯಾಸ್ಪದವಷ್ಟೇ ಅಲ್ಲ, ದೇಶದ ಕ್ರಿಯಾಶೀಲ ಹಾಗೂ ಸೃಜನಶೀಲ ಪ್ರತಿಭೆಯ ಯುವಕರನ್ನು ನಿಕೃಷ್ಟವಾಗಿ ಪರಿಗಣಿಸುವ ಸಣ್ಣತನವೂ ಹೌದು. ಪ್ರಜಾಪ್ರಭುತ್ವದಲ್ಲಿ ಜನಸ್ನೇಹಿ ಹಾಗೂ ಬಹೂಪಯೋಗಿಯಾಗಿರುವ ಈ ಮಾಧ್ಯಮಗಳನ್ನು ಬದುಕಿಸಲು ಬೇಕಾಗಿರುವ ಕ್ರಮ-ಕರ್ತವ್ಯಗಳನ್ನು ನಿಭಾಯಿಸದೆ, ಇಂಥ ಹೇಳಿಕೆಗಳನ್ನು ಕೊಟ್ಟು ಜನರ ಗಮನವನ್ನು ಬೇರೆಡೆ ಹರಿಸುತ್ತಿರುವುದು ಇಡೀ ದೇಶಕ್ಕೆ ಮಾಡುತ್ತಿರುವ ಬಹುದೊಡ್ಡ ಅವಮಾನ.
ನಮ್ಮ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ‘ಸಮೂಹ ಮಾಧ್ಯಮ ಅಧ್ಯಯನ ವಿಭಾಗ’ಗಳಿವೆ. ವಿವಿಧ ಮಾಧ್ಯಮಗಳ ಕುರಿತಾಗಿ ಕೂಲಂಕಷ ಅಧ್ಯಯನ ಮಾಡಿ, ಪರಿಣತಿ ಪಡೆದು, ಇಂದಿನ ಮಾಧ್ಯಮ ಜಗತ್ತಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಗಳಿಸಿಕೊಂಡ ಸಾವಿರಾರು ವಿದ್ಯಾರ್ಥಿಗಳು ಈ ವಿಭಾಗಗಳಿಂದ ಪ್ರತಿವರ್ಷವೂ ಹೊರಬರುತ್ತಾರೆ. ಅದರಲ್ಲೂ ವಿದ್ಯುನ್ಮಾನ (ದನಿ ಮತ್ತು ದೃಶ್ಯ) ಮಾಧ್ಯಮ ವಿಷಯವನ್ನು ಪ್ರತ್ಯೇಕವಾಗಿಯೇ ಓದುವ ಅಸಂಖ್ಯ ವಿದ್ಯಾರ್ಥಿಗಳೂ ಇದ್ದಾರೆ. ಇಂಥವರ ನೈಜ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉದ್ಯೋಗ ಕಲ್ಪಿಸುವ ಜವಾಬ್ದಾರಿಯನ್ನು ನಿಭಾಯಿಸದೆ, ಸುಳ್ಳು ಕಾರಣ ಕೊಟ್ಟು ಕೈ ತೊಳೆದುಕೊಳ್ಳುತ್ತಿರುವುದು ಪ್ರಸಾರ ಸಚಿವಾಲಯದ ಪಲಾಯನ ತಂತ್ರವೇ ಆಗಿದೆ.
ಈ ಹೇಳಿಕೆಯಲ್ಲಿ, ನಮ್ಮ ಎಲ್ಲ ವಿಶ್ವವಿದ್ಯಾಲಯಗಳೂ ಪ್ರತಿಭಾವಂತರನ್ನು ನಿರ್ಮಿಸುವಲ್ಲಿ ಸೋತುಹೋಗಿವೆಯೆಂಬ ಅರ್ಥವೂ ಇದೆ. ಅಚ್ಚರಿಯ ಮಾತೆಂದರೆ, ಈ ವಿಶ್ವವಿದ್ಯಾಲಯಗಳನ್ನು ಬಹುತೇಕ ಕೇಂದ್ರ ಸರ್ಕಾರವೇ ನಿರ್ವಹಿಸುತ್ತಿದೆ. ಹಾಗಿದ್ದರೆ, ಈ ಎಲ್ಲ ಸಂಸ್ಥೆಗಳು ಹಾಳುಬೀಳಲು ಕಾರಣರಾರು?
ಇನ್ನೊಂದು ಮಾತೆಂದರೆ, ಪ್ರತಿಭಾವಂತರು ವಿಶ್ವವಿದ್ಯಾಲಯಗಳು ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಮಾತ್ರ ನಿರ್ಮಾಣವಾಗುವುದಿಲ್ಲ. ಸಂಗೀತ, ಸಾಹಿತ್ಯ, ಜಾನಪದ, ಕ್ರೀಡೆ, ಕೃಷಿ, ಮಾಧ್ಯಮ, ಉದ್ಯಮ... ಇಂಥ ನೂರಾರು ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ಪ್ರತಿಭೆ ಹೊಂದಿರುವ ಅಸಂಖ್ಯ ಜನ ಈ ದೇಶದಲ್ಲಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳು ಬಯಸುವ ಕಾರ್ಯಕ್ಷಮತೆಯನ್ನು ಹೊಂದಿರುವ ಬುದ್ಧಿವಂತರೂ ಇಲ್ಲಿ ಬಹಳಷ್ಟು ಜನರಿದ್ದಾರೆ. ಅಂಥವರ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಈ ಸಚಿವಾಲಯ ಮಾಡಬಹುದಲ್ಲವೆ? ಅದು ಆಗುತ್ತಲಿಲ್ಲವೆಂದರೆ, ಪ್ರತಿಭೆಯನ್ನು ಗುರುತಿಸಬೇಕಾದ ಸಚಿವಾಲಯದಲ್ಲಿ, ‘ಶುದ್ಧ ಮನಸ್ಸುಗಳ’ ಕೊರತೆ ಇದೆಯೆಂದೇ ಅರ್ಥವಲ್ಲವೆ?
ಆಕಾಶವಾಣಿ ಹಾಗೂ ದೂರದರ್ಶನ ಸಂಸ್ಥೆಗಳ ಮೇಲೆ 1997ರಲ್ಲಿ ‘ಪ್ರಸಾರ ಭಾರತಿ’ ಎಂಬ ಬಿಳಿ ಆನೆ ದಾಳಿ ಮಾಡಿದ ಹಂತದಿಂದಲೇ ಅವುಗಳ ಮೇಲೆ ಕರಿಛಾಯೆ ಆವರಿಸತೊಡಗಿತು. ಆವರೆಗೆ ಈ ಎರಡೂ ಸಂಸ್ಥೆಗಳು ಮಹಾನಿರ್ದೇಶನಾಲಯಗಳ ಮೂಲಕವೇ ತಮ್ಮ ತಮ್ಮ ಆಡಳಿತ, ಕಾರ್ಯಕ್ರಮ ಹಾಗೂ ತಾಂತ್ರಿಕ ವಿಭಾಗಗಳ ಕಾರ್ಯಕ್ಷಮತೆಯನ್ನು ತುಂಬ ಅಚ್ಚುಕಟ್ಟಾಗಿಯೇ ನಿರ್ವಹಿಸಿಕೊಂಡು ಬಂದಿದ್ದವು. ‘ಪ್ರಸಾರ ಭಾರತಿ’ ಬಂದ ಲಾಗಾಯ್ತಿನಿಂದಲೇ ಈ ಸಂಸ್ಥೆಗಳಲ್ಲಿ ಸಿಬ್ಬಂದಿಯ ಕೊರತೆ ಕಾಣತೊಡಗಿತು. ಏಕೆಂದರೆ ಅದು ಈ ಇಲಾಖೆಗಳಿಗೆ ಅಗತ್ಯವಿರುವ ಹುದ್ದೆಗಳನ್ನು ತುಂಬಲಿಲ್ಲ. ನಿಗದಿತ 46 ಸಾವಿರ ಹುದ್ದೆಗಳ ಪೈಕಿ, ಮೂರನೆಯ ಎರಡರಷ್ಟು ಹುದ್ದೆಗಳು ಈಗ ಖಾಲಿ ಇವೆಯೆಂದರೆ ಅದಕ್ಕೆ ಪ್ರಸಾರ ಭಾರತಿಯೇ ಕಾರಣವಲ್ಲವೆ? ಹೀಗಿರುವಾಗ, ಬರೀ ಸಬೂಬುಗಳನ್ನು ಹೇಳಿ ಈ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸಾಧ್ಯವೆ?
ಪ್ರಸಾರ ಭಾರತಿ ಮಾಡಿದ ಮತ್ತೊಂದು ಅನಾಹುತವೆಂದರೆ, ಶುದ್ಧ ಸೃಜನಶೀಲ ಹಾಗೂ ಸಾಂಸ್ಕೃತಿಕ ಸಂಸ್ಥೆಗಳಾಗಿದ್ದ ಆಕಾಶವಾಣಿ ಮತ್ತು ದೂರದರ್ಶನವನ್ನು ಸರ್ಕಾರಕ್ಕೆ ಆದಾಯ ತಂದುಕೊಡುವ ಕಂದಾಯ ಇಲಾಖೆಯಂತೆ ಪರಿಗಣಿಸಿದ್ದು. ಆ ಕೆಲಸವನ್ನೂ ಈ ಸಂಸ್ಥೆಗಳು ಸವಾಲಾಗಿಯೇ ಸ್ವೀಕರಿಸಿ ಸಾವಿರಾರು ಕೋಟಿ ರೂಪಾಯಿ ಆದಾಯವನ್ನು ತಂದುಕೊಟ್ಟವು. ಹಾಗೆ ಬಂದ ಹಣವು ಪ್ರಸಾರ ಭಾರತಿಯ ನಿರ್ವಹಣೆಗೆ ಹೋಯಿತೇ ವಿನಾ, ಅಗತ್ಯವಿರುವ ಹುದ್ದೆಗಳನ್ನು ತುಂಬಲು ಮತ್ತು ಹೊಸ ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳಲು ಬಳಕೆಯಾಗಲಿಲ್ಲ (ಇಂಥ ‘ಪ್ರಸಾರ ಭಾರತಿ’ಗೆ ಕರ್ನಾಟಕದ ಮೂವರು ಮಾಧ್ಯಮ ತಜ್ಞರೂ ಅಧ್ಯಕ್ಷರಾಗಿದ್ದರೆಂಬುದನ್ನು ನೆನೆಯಬೇಕು).
ದುಡಿಯುವ ಪರಿಣತ ಕೈಗಳ ಸಂಖ್ಯೆಯೇ ಕಡಿಮೆಯಾಗುತ್ತಾ ಬಂದಂತೆ ಈ ಸಂಸ್ಥೆಗಳ ಪ್ರಸಾರ ಕಾರ್ಯದಲ್ಲಿ ಮೊದಲಿನ ಮಟ್ಟ ಹಾಗೂ ಕಾರ್ಯಕ್ಷಮತೆಯೂ ಉಳಿಯಲಿಲ್ಲ. ಹಿಂದಿನ 27 ವರ್ಷಗಳಿಂದ ಸಿಬ್ಬಂದಿಯನ್ನೇ ಭರ್ತಿ ಮಾಡಿಲ್ಲವೆಂದರೆ, ಅಲ್ಲಿ ಎಂಥ ಸೃಜನಶೀಲ ಕೆಲಸಗಳಾಗಲು ಸಾಧ್ಯ, ಮಾಡುವವರಾದರೂ ಯಾರು?
ಇದೆಲ್ಲದರ ಪರಿಣಾಮವಾಗಿ, ದೇಶದ ಬಹುತೇಕ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಲ್ಲಿ ಈಗ ಅಳಿದುಳಿದ ಬೆರಳೆಣಿಕೆಯ ಉದ್ಯೋಗಿಗಳು ಮಾತ್ರ ಇದ್ದಾರೆ. ಕರ್ನಾಟಕದ ಎಲ್ಲ ಆಕಾಶವಾಣಿ ಕೇಂದ್ರಗಳಲ್ಲಿ ಈಗ ಒಬ್ಬರು ಅಥವಾ ಇಬ್ಬರು ಕಾರ್ಯಕ್ರಮ ಅಧಿಕಾರಿಗಳು ಮಾತ್ರ ಉಳಿದಿದ್ದಾರೆ. ಅವರೂ 2025- 26ರಲ್ಲಿ ನಿವೃತ್ತಿ ಹೊಂದುವವರೇ. ವಾಸ್ತವ ಸ್ಥಿತಿ ಹೀಗಿರುವಾಗ, ಅಗತ್ಯವಿರುವ ಹುದ್ದೆಗಳನ್ನು ತುಂಬಲು ಪ್ರಯತ್ನ ಮಾಡದೆ, ‘ಭಾರತದ ಯುವಕರಲ್ಲಿ ಪ್ರತಿಭೆಯ ಕೊರತೆ ಇದೆ. ಆದ್ದರಿಂದ ಹುದ್ದೆಗಳು ಭರ್ತಿಯಾಗಿಲ್ಲ’ ಎಂಬಂಥ ಉಡಾಫೆಯ ಹೇಳಿಕೆಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕೊಡುತ್ತಿದೆ. ಇಂಥ ಸುಳ್ಳನ್ನು ಜನತೆ ನಂಬಬಹುದೆ?
ಇನ್ನೂ ಒಂದು ಕುತೂಹಲಕಾರಿ ಅಂಶವೆಂದರೆ, ಸಿಬ್ಬಂದಿ ಕೊರತೆಯ ಈ ಸಮಸ್ಯೆ ಕಾರ್ಯಕ್ರಮ ವಿಭಾಗದಲ್ಲಿದೆಯೇ ವಿನಾ, ತಾಂತ್ರಿಕ ವಿಭಾಗದಲ್ಲಿ ಅಷ್ಟಾಗಿಲ್ಲ. ಒಟ್ಟಾರೆ ಹೇಳಬೇಕಾದುದೆಂದರೆ, ಹೀಗೆ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಹೋಗಿ, ‘ಅದು ತಾನಾಗಿಯೇ ಸತ್ತುಹೋಯಿತು, ಅದಕ್ಕೆ ನಾವು ಕಾರಣರಲ್ಲ’ ಎಂದು ಕೈ ತೊಳೆದುಕೊಳ್ಳುವ ಗೋಪ್ಯ ನಿರ್ಧಾರ ಇಲ್ಲಿ ಆದಂತಿದೆ ಎನಿಸುತ್ತಿದೆ.
ದೇಶದ ಮಹಾನ್ ಸಾಹಿತಿಗಳು, ಸಂಗೀತಗಾರರು, ಕ್ರೀಡಾಪಟುಗಳು, ಕೃಷಿಕರು, ಮಾಧ್ಯಮ ತಜ್ಞರು, ಉದ್ಯಮಿಗಳು ಮತ್ತು ಒಟ್ಟಾರೆಯಾಗಿ ಸಾಂಸ್ಕೃತಿಕ ಕ್ಷೇತ್ರದ ಬಹುದೊಡ್ಡ ಪ್ರತಿಭೆಗಳು ಬೆಳಗುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿರುವ ಈ ಎರಡೂ ಸಂಸ್ಥೆಗಳನ್ನು– ಸಲ್ಲದ ಕಾರಣಗಳನ್ನು ಕೊಟ್ಟು– ನಿಧಾನವಾಗಿ ಕುತ್ತಿಗೆ ಹಿಚುಕಿ ಕೊಲ್ಲುತ್ತಿರುವುದು ಮಾತ್ರ ಬಹುದೊಡ್ಡ ಅನ್ಯಾಯದ ಕೆಲಸ. ಕೆಲವೇ ವರ್ಷಗಳ ಹಿಂದೆ ಸುವರ್ಣಯುಗವನ್ನು ಕಂಡಿದ್ದ ಈ ವಿದ್ಯುನ್ಮಾನ ಮಾಧ್ಯಮಗಳು ಈಗ ಅವನತಿಯ ಹಾದಿ ಹಿಡಿದಿರುವುದನ್ನು ನೋಡಿದಾಗ ಕರುಳು ಚುರ್ರ್ ಎನ್ನುತ್ತದೆ.
ನಮ್ಮ ದೇಶದ ಪ್ರಧಾನಿಯವರು ಪ್ರತಿ ತಿಂಗಳು ತಮ್ಮ ‘ಮನ್ ಕಿ ಬಾತ್’ ಪ್ರಸಾರ ಮಾಡಲು ಇವೇ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವರೇ ಈಗ ಇದನ್ನು ಉಳಿಸುವ ಮತ್ತು ಬೆಳೆಸುವ ಕೆಲಸಕ್ಕೆ ಮನಸ್ಸು ಮಾಡಬೇಕು. ಇಲ್ಲವಾದರೆ ಆಕಾಶವಾಣಿ ಮತ್ತು ದೂರದರ್ಶನವು ಪುರಾಣ ಕಾಲದಲ್ಲಿದ್ದ ‘ಆಕಾಶವಾಣಿ’ಯಂತಾಗಿ (ಪರಿಕಲ್ಪನೆಯಾಗಿ) ಹೋಗುವ ಕಾಲ ದೂರವಿಲ್ಲ. ಅದಕ್ಕಾಗಿ, ವಾಸ್ತವವನ್ನು ಮುಚ್ಚಿಡದೆ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಈಗಲಾದರೂ ಎಚ್ಚೆತ್ತು, ಅಗತ್ಯ ಸಿಬ್ಬಂದಿಯನ್ನು ಭರ್ತಿ ಮಾಡಬೇಕು ಹಾಗೂ ಈ ಸಂಸ್ಥೆಗಳಿಗೆ ಬೇಕಾಗಿರುವ ಪೋಷಕಾಂಶವನ್ನು ಒದಗಿಸಬೇಕು. ಇತಿಹಾಸ ಸೇರಿಹೋಗುವ ಮೊದಲು ಈ ಸಂಸ್ಥೆಗಳನ್ನು ವರ್ತಮಾನದಲ್ಲಿ ಬದುಕಿಸಿ, ಭವಿಷ್ಯಕ್ಕೆ ಕರೆದೊಯ್ಯುವ ಜವಾಬ್ದಾರಿಯನ್ನೂ ಸಚಿವಾಲಯ ನಿರ್ವಹಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.