ಹೆಣ್ಣಿನ ಸಮಸ್ಯೆ ಅವಳೊಬ್ಬಳದೇ ಅಲ್ಲ, ಅದು ಸಮಗ್ರ ಮನುಕುಲದ್ದು
ಅವಳಿಗೆ ತನ್ನದೇ ಸಮಯ ಮತ್ತು ಸ್ಥಳ ಬೇಕು, ಆರ್ಥಿಕ ಸ್ವಾತಂತ್ರ್ಯ ಬೇಕು ಎಂಬ ವರ್ಜೀನಿಯಾ ವುಲ್ಫ್‌ಳ ಮಾತು, ಹೆಣ್ಣು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಉತ್ಕಟ ಹಂಬಲದಿಂದ ಹೊಮ್ಮಿದ್ದು. ಅವಳು ಹೇಳುವ ‘ತನ್ನದೇ ಕೋಣೆ’ ಬಂಧನದ ರೂಪಕವಲ್ಲ, ಬಿಡುಗಡೆಯ ರೂಪಕ! ಅದು ಎಲ್ಲ ಹೆಣ್ಣುಗಳ ಹಂಬಲವೂ ಹೌದು.
ತನ್ನನ್ನು ಎಂದೂ ಅಭಿವ್ಯಕ್ತಿಸಿಕೊಳ್ಳದ ಹೆಣ್ಣು ಈ ನಿಜವನ್ನು ನುಡಿದಾಗ ವ್ಯವಸ್ಥೆ ವಿಚಲಿತಗೊಳ್ಳುವುದು ಸಹಜ. ಯಾಕೆಂದರೆ, ಅಜ್ಜಿ ಅಮ್ಮಂದಿರನ್ನು ಎಂದೂ ಹಾಗೆ ಬಿಡುಬೀಸಾಗಿ ನೋಡಿದ್ದೇ ಇರಲಿಲ್ಲ. ಜಗುಲಿಗೆ ಬರಲು ಅಂಜುತ್ತಿದ್ದ, ದೊಡ್ಡ ದನಿಯಲ್ಲಿ ಎಂದೂ ಮಾತಾಡದ ಅವರು ಸದಾ ಕುಟುಂಬದ ಎಲ್ಲರ ಸೇವೆಯಲ್ಲಿ ಕೈಬರಿದಾಗದಂತೆ ತೊಡಗಿರುತ್ತಿದ್ದರು. ಸಂಜೆ ದೀಪ ಹಚ್ಚುವ ಅಮ್ಮಂದಿರ ಮುಖದ ಕತ್ತಲು ಕಂಗೆಡಿಸುತ್ತಿತ್ತು. ಕೊಟ್ಟಿಗೆ ಸಂದಿಯಲ್ಲೋ ಬಚ್ಚಲಿಗೆ ಉರಿ ಹಾಕುತ್ತಲೋ ಹಿಟ್ಟು ರುಬ್ಬುತ್ತಲೋ ಕಣ್ಣೀರಾಗುತ್ತಿದ್ದುದನ್ನು ಒಮ್ಮೊಮ್ಮೆ ಕಂಡದ್ದುಂಟು.
ಹಿತ್ತಲ ಸೇವಂತಿಗೆ ಗಿಡದಲ್ಲಿ ಹೂಬಿಟ್ಟಾಗ, ಅವರೆ ಚಪ್ಪರ ಹಬ್ಬಿ ಹರಡಿಕೊಂಡಾಗ, ಎಮ್ಮೆಯು ಕರು ಹಾಕಿದಾಗ... ಅವರ ಸಂಭ್ರಮವನ್ನು ನಾವೂ ಉಂಡಿದ್ದಿದೆ. ಜಗುಲಿಯ ಜಗತ್ತಿನ ವಿರಾಮ, ಇಸ್ಪೀಟಾಟದ ಕೇಕೆ, ರಾಜಕೀಯ ಚಪ್ಪರಿಸುವ ಘನಂದಾರಿ ಮಾತುಗಳು, ವ್ಯವಹಾರದ ಸಂಚುಗಳ ನಡುವೆ ಈ ಮೌನಚರಿತೆ ಮೈದಾಳಲೇ ಇಲ್ಲ. ಕುವೆಂಪು ತಮ್ಮ ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ‘ಕಡೆಗೋಲು ಕಂಬದ ಸಾಕ್ಷಿಯಲ್ಲಿ’ ಎಂಬ ಅಧ್ಯಾಯವೊಂದನ್ನು ಬರೆಯುತ್ತಾರೆ. ಅಡುಗೆ ಮನೆಯಲ್ಲಿರುವ ಕಡೆಗೋಲು ಕಂಬಕ್ಕೇನಾದರೂ ಮಾತು ಬರುತ್ತಿದ್ದರೆ, ಒಂದು ಮಹಾಕಾವ್ಯವೇ ಸಂಭವಿಸುತ್ತಿತ್ತು ಎಂಬ ಮಾತು ಅತ್ಯಂತ ಧ್ವನಿಪೂರ್ಣವಾದುದು. ಹೆಣ್ಣಿನ ಜಗತ್ತಿನ ಸುಖ– ದುಃಖ, ಆಕಾಂಕ್ಷೆ, ಹತಾಶೆ, ಸೋಲು– ಗೆಲುವು ಅವಳ ಅಂತರ್ಯುದ್ಧದ ಫಲಿತಗಳು. ಅವು ಅಭಿವ್ಯಕ್ತಿ ಕಾಣದೇ ಸತ್ತುಹೋಗಿವೆ. ಅವಳ ಕಾಲ ಮತ್ತು ಅವಕಾಶವು ಚರಿತ್ರೆಗೆ ಮುಖ್ಯವೇ ಆಗಿರಲಿಲ್ಲ.
ಸೃಷ್ಟಿಯ ಸಹಜ ನಿರ್ಮಿತಿಯಾದ ಲಿಂಗ ಪ್ರಭೇದಗಳು ಯಾವಾಗ ಲಿಂಗ ಸಾಪೇಕ್ಷವಾದ ಪಾತ್ರಗಳನ್ನು ನಿಭಾಯಿಸುವ ಕೃತಕ ವ್ಯವಸ್ಥೆಗೆ ಒಳಗಾದವೋ ಆಗ ಮನೋಲೋಕದ ಸಂಕೀರ್ಣ ಸಿಕ್ಕುಗಳು ಹುಟ್ಟಿಕೊಂಡವು. ಏಕಕಾಲದಲ್ಲಿ ವ್ಯಕ್ತಿಗಳೂ. ಸಮಾಜದ ಸದಸ್ಯರೂ ವಿಶ್ವಮಾನವರೂ ಆಗಿರುವ ನಾವು, ಸ್ವಾತಂತ್ರ್ಯ ಹಾಗೂ ಬಂಧನದ ವಿರುದ್ಧ ಸೆಳೆತಗಳಲ್ಲಿ ನಲುಗುತ್ತೇವೆ. ಸಂಬಂಧಗಳಿಲ್ಲದೇ ಬದುಕಲಾಗದ ಮನುಷ್ಯರಿಗೆ ಸಂಬಂಧಗಳೇ ಬಂಧನವಾಗಿ ಉಸಿರುಗಟ್ಟತೊಡಗುತ್ತದೆ.
ಮನುಷ್ಯರಿಗೆ ಅನ್ನದಷ್ಟೇ ಅಗತ್ಯವಾದುದು ಪ್ರೇಮ. ಪ್ರೇಮವು ಏಕಾಂತದಲ್ಲಿ ಉದ್ಭವಿಸುವ ಭಾವವಲ್ಲ. ಅದಕ್ಕೊಂದು ಸಾಂಗತ್ಯ ಬೇಕು. ಉದ್ದೀಪನ ಬೇಕು. ಪ್ರೇಮವು ವ್ಯಕ್ತಿಗಳೊಂದಿಗೆ, ಮದುವೆಯಂಥ ಸಂಸ್ಥೆಯೊಂದಿಗೆ ಕೊನೆಯಾಗುವುದಲ್ಲ. ಅದು ಮತ್ತೆಮತ್ತೆ ಚಿಗುರಬಲ್ಲ ಮೂಲಸತ್ವ. ಎಷ್ಟೋ ಸಲ ಜೊತೆಗಿರುವ ವ್ಯಕ್ತಿಗಳ ಮಿತಿಗಳು, ವ್ಯಕ್ತಿತ್ವದ ವಿಕೃತಿಗಳು ಪ್ರೀತಿಯು ಬತ್ತಿಹೋಗುವಂತೆ ಮಾಡುತ್ತವೆ. ಸ್ವಾತಂತ್ರ್ಯ ಮತ್ತು ಪ್ರೀತಿ ಒಟ್ಟಿಗೆ ಜೀವಿಸುವುದು ಸಾಧ್ಯವಿಲ್ಲವೇ? ವ್ಯಕ್ತಿ ಸ್ವಾತಂತ್ರ್ಯವು ತನ್ನದೇ ಅರಿವಿನಲ್ಲಿ ವಿಕಾಸಗೊಳ್ಳುವ ಸಾಧ್ಯತೆಯಾದರೆ, ಪ್ರೇಮವು ಸಾಂಗತ್ಯದಲ್ಲಿ ವಿಕಾಸಗೊಳ್ಳುವ ಸಾಧ್ಯತೆ. ಸಾಂಗತ್ಯವು ಜೀವವೊಂದು ಮತ್ತೊಂದು ಜೀವವನ್ನು ಉದ್ದೀಪಿಸುವ ಕ್ರಿಯೆಯಾಗದೇ ತನ್ನ ಅಧಿಕಾರದಲ್ಲಿ ಬಂಧಿಸುವ ಕ್ರಿಯೆಯಾದಾಗ ಪ್ರೇಮದ ಜಾಗದಲ್ಲಿ ಹಿಂಸೆ ತನ್ನ ಹಲ್ಲುಗಳನ್ನು ಊರತೊಡಗುತ್ತದೆ.
ತನ್ನ ‘ರೂಪಿತ’ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಾಗ ಹೆಣ್ಣಿಗೆ ಎಲ್ಲವೂ ಚಂದವಾಗಿಯೇ ಇರುತ್ತವೆ. ಜೋಡಿಸಿಟ್ಟ ಕಪಾಟಿನಂತೆ! ಆದರೆ ಹೆಣ್ಣುಮನಸ್ಸು ಎಂಬುದು ಜೋಡಿಸಿಟ್ಟ ಕಪಾಟಲ್ಲ. ಅದೊಂದು ಕಗ್ಗಾಡು. ಜೀವ ತುಂಬಿ ತುಳುಕುವ ಅಭೇದ್ಯ ಕಾಡು. ಅವಳು ತನ್ನೊಳಗಿನ ಅನಂತ ಸಾಧ್ಯತೆಗಳನ್ನು ಅನ್ವೇಷಿಸುವ ಸ್ವಾತಂತ್ರ್ಯ ಪಡೆದುಕೊಂಡಾಗ ಸ್ವಾರ್ಥಿ ಎನಿಸಿಕೊಳ್ಳುತ್ತಾಳೆ. ಪ್ರೇಮ ಮತ್ತು ಸ್ವಾತಂತ್ರ್ಯ ಒಂದೇ ನಾಣ್ಯದ ಎರಡು ಮುಖಗಳೆಂಬುದು ನಮಗೆ ಕಾಣದಂತೆ ಮಾಡಿರುವುದು ಪಿತೃಪ್ರಧಾನ ವ್ಯವಸ್ಥೆ! ಅದು ಗಂಡಿಗೆ ಹೆಣ್ಣನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಎಂಬುದನ್ನು ಕಲಿಸಿ, ಅವನಲ್ಲಿರುವ ಮೃದುತ್ವ, ಅಂತಃಕರಣವನ್ನು ಮುಚ್ಚಿಹಾಕಿಬಿಟ್ಟಿದೆ. ಅಪ್ಪ ಎಂದರೆ ಭಯ, ಗಂಡನೊಂದಿಗೆ ಕರಗಲು ಮುಜುಗರ. ಯಾಕೆಂದರೆ ಅನೇಕರಿಗೆ ಅಲ್ಲಿ ತಮ್ಮನ್ನು ಮುಕ್ತವಾಗಿ ಅಭಿವ್ಯಕ್ತಿಸಿಕೊಳ್ಳಲು, ತಮ್ಮ ಸೃಜನಶೀಲತೆಯನ್ನು ಪ್ರಕಟಿಸಲು ಸ್ವಾತಂತ್ರ್ಯವಿಲ್ಲ. ಗಂಡಸು ಎಂಬ ಪ್ರಧಾನ ತತ್ವಕ್ಕೆ ತನ್ನನ್ನು ಅರ್ಪಿಸಿಕೊಳ್ಳುವುದೇ ವಿಧಿ ಎಂಬಂತೆ ಬದುಕಿದವರೇ ಹೆಚ್ಚು. ಪಿತೃಪ್ರಧಾನ ವ್ಯವಸ್ಥೆ ಇಂಥ ಭಯಗಳನ್ನು ಪೋಷಿಸುತ್ತಲೇ ಬರುತ್ತದೆ. ಅದಕ್ಕೆ ಇವಳು ತನ್ನ ದಿಗ್ಭಂಧನಗಳನ್ನು ದಾಟಿ ಹೋದರೆ ಎಂಬ ಭಯ! ಆ ಭಯವೇ ಹಿಂಸೆಯ ನಾನಾ ಮುಖಗಳಾಗಿ ಪ್ರಕಟಗೊಳ್ಳತೊಡಗುತ್ತದೆ. ಆಗ ಪ್ರೇಮವೆಂಬುದು ಎಂದೂ ಸಿಗದ ದಿವ್ಯ ಯಾತನೆಯಾಗಿಯೇ ಉಳಿದುಬಿಡುತ್ತದೆ.
ನನ್ನದೇ ಕೋಣೆ ಹಾಗೂ ಸಮಯವನ್ನು ಹಣ ತಂದುಕೊಡುವುದಿಲ್ಲ. ಆರ್ಥಿಕ ಸಮಾನತೆಯು ಆಂತರಿಕ ಹಸಿವನ್ನು ನೀಗಿಸುವುದಿಲ್ಲ. ಆಗ ಬದುಕಿಡೀ ಅಸ್ಮಿತೆಯ ಹುಡುಕಾಟದಲ್ಲಿ ಬಳಲಿದ್ದೇನೆ ಎಂದು ಹೆಣ್ಣಿಗೆ ಅನಿಸತೊಡಗುತ್ತದೆ. ಕುಟುಂಬ ವ್ಯವಸ್ಥೆಯಲ್ಲಿ ಖಾಸಗಿ ಸಮಯವೆಂಬುದು ಪ್ರತ್ಯೇಕವಾಗಿ ಇಲ್ಲವೇ ಇಲ್ಲ. ಅದು ಸಂಬಂಧಗಳ ಸೂಕ್ಷ್ಮವೂ ಸಂಕೀರ್ಣವೂ ಆದ ಹೆಣಿಗೆಯಾಗಿರುವುದರಿಂದ, ಅವಳ ಸಮಯವು ಮಕ್ಕಳಿಗೆ ಕೊಡಬೇಕಾದ ಮೌಲ್ಯಯುತ ಸಮಯ, ವಯಸ್ಸಾದ ತಂದೆ– ತಾಯಿ, ಅತ್ತೆ– ಮಾವನಿಗೆ ನೀಡಬೇಕಾದ ಸಮಯ, ಸಂಗಾತಿಗೆ ನೀಡಬೇಕಾದ ಸಮಯದಲ್ಲಿ ಕರಗಿರುತ್ತದೆ. ಇದರ ಹೊರತಾಗಿ ‘ತನ್ನ ಸಮಯ’ ಎಂದು ಯೋಚಿಸುವುದೇ ಸ್ವಾರ್ಥ ಎಂದು ಪಿತೃಪ್ರಧಾನ ಚಿಂತನೆಯು ಪ್ರಜ್ಞೆಯಲ್ಲಿ ಕೊರೆದುಬಿಟ್ಟಿದೆ. ತನ್ನ ಅಸೀಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ ಹಾಗೂ ಕೌಟುಂಬಿಕ ಸಾಮರಸ್ಯವನ್ನು ಕಾಯ್ದುಕೊಳ್ಳುವ ತಂತಿಯ ಮೇಲಿನ ನಡಿಗೆಯಲ್ಲಿ ಆಧುನಿಕ ಹೆಣ್ಣು ಹೈರಾಣಾಗಿದ್ದಾಳೆ.
ಪುರುಷತ್ವ ಮತ್ತು ಸ್ತ್ರೀತ್ವ ಎಂಬ ಕಣ್ಕಟ್ಟುಗಳನ್ನು ಸೃಷ್ಟಿಸಿದ ಪಿತೃಸತ್ತೆ ಇಬ್ಬರನ್ನೂ ಸಹಜವಾಗಿ ಅರಳಲು ಬಿಡದ ಉರುಳಾಗಿದೆ. ಇಲ್ಲಿ ಹೆಣ್ಣಿನಂತೆ ಗಂಡೂ ಅಸಹಾಯಕ ಬಲಿಪಶುವಾಗುತ್ತಾನೆ. ತನ್ನ ಗಂಡಸುತನವನ್ನು ಸಾಬೀತು ಮಾಡುವುದೇ ಅವನ ಜೀವನದ ಗಮ್ಯವಾಗುತ್ತದೆ. ತನ್ನಲ್ಲೇ ಇರಬಹುದಾದ ಭಾವಸಮೃದ್ಧಿಗೆ ಆತ ಎರವಾಗುತ್ತಾನೆ. ಅಧಿಕಾರವಿಲ್ಲದೇ ಪ್ರೀತಿಸುವುದು ಹೇಡಿತನ ಎನಿಸುತ್ತದೆ. ‘ಪುರುಷತ್ವ’ ಎಂಬ ಮಿಥ್ ಅವನನ್ನು ಸಹಜವಾಗಿ ಪ್ರೇಮಿಸಗೊಡುವುದಿಲ್ಲ. ಕಾಮದಲ್ಲೂ ಆತ ಗೆಲ್ಲಲು ಬಯಸುತ್ತಾನೆ ವಿನಾ ಕರಗಲಾರ. ಆದ್ದರಿಂದಲೇ ಭಕ್ತಿಯಲ್ಲಿ ಪುರುಷನೂ ಹೆಣ್ಣಾಗುವುದು.
ಈ ದ್ವಂದ್ವ ಅಳಿಯಬೇಕಾದರೆ ಮಿಥ್ಯೆಗಳು ಅಳಿಯಬೇಕು. ಇದು ಗಂಡಸನ್ನೂ ಒಳಗೊಂಡು ನಡೆಯಬೇಕಾದ ನಡೆ ಎಂದು ಬೆಲ್‍ಹುಕ್ಸ್ ಎಚ್ಚರಿಸುತ್ತಾಳೆ. ಪಿತೃಪ್ರಧಾನ ವ್ಯವಸ್ಥೆಯ ದಾಳಿಗೆ ಸಿಲುಕಿ ಕಳೆದುಹೋದ ನಮ್ಮ ಗಂಡುಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆಂದು ಆಳವಾಗಿ ಚಿಂತಿಸುತ್ತಾಳೆ. ಹೆಣ್ಣು– ಗಂಡಿನ ಸಂಬಂಧದ ಸಿಕ್ಕುಗಳಿಗೆ ಕಾರಣವಾಗುವ ಸಂಗತಿ ಅವರಿಬ್ಬರ ಹೊರಗೆಲ್ಲೋ ಇದೆ ಎಂಬುದನ್ನು ದರ್ಶನ ಮಾಡಿಸುತ್ತಾಳೆ. ಅದೇ ಪಿತೃಪ್ರಧಾನ ವ್ಯವಸ್ಥೆ.
‘ಸ್ತ್ರೀತ್ವ’, ‘ಪುರುಷತ್ವ’ ಎಂಬ ಕಣ್ಕಟ್ಟುಗಳು ಅಭೇದ್ಯ ಕವಚಗಳಾಗಿ ನಮ್ಮನ್ನು ಪರಸ್ಪರ ಪ್ರೀತಿಸಲಾಗದವರಂತೆ ಮಾಡಿವೆ. ಪ್ರೇಮಿ ಯಜಮಾನನಾದದ್ದು, ಅಪ್ಪ ರಾಕ್ಷಸನಾದದ್ದು ಇದೇ ವಿಕೃತಿಯಿಂದ. ಮೀಸೆ ಚಿಗುರಿದ ಮಗ ದೂರ ಸರಿಯುವುದು, ಅಣ್ಣ– ತಮ್ಮನ ಮನಸ್ಸು ಆಸ್ತಿಪಾಸ್ತಿಯ ಆಮಿಷದಲ್ಲಿ ಒಡೆದುಹೋಗುವುದು ಇದರಿಂದಲೇ. ಪ್ರೇಮವು ಕೊಡುವ, ತೆಗೆದುಕೊಳ್ಳುವ ವ್ಯವಹಾರವಲ್ಲ. ಅದು ಇಂಚಿಂಚಾಗಿ ಸಹಾನುಭೂತಿಯಿಂದ ಜೊತೆಗೆ ಬದುಕುತ್ತಲೇ ಸಂಭವಿಸುವ ಸಮಯಾತೀತ ಭಾವ. ಈ ಭಾವಶಕ್ತಿಯನ್ನು ಉಳಿಸಿಕೊಳ್ಳದೇ ಹೆಣ್ಣು– ಗಂಡು ಇಬ್ಬರಿಗೂ ಉಳಿಗಾಲವಿಲ್ಲ. ಹೆಣ್ಣಿನ ಸಮಸ್ಯೆ ಅವಳೊಬ್ಬಳದೇ ಅಲ್ಲ, ಅದು ಸಮಗ್ರ ಮನುಕುಲದ್ದು, ಹೆಣ್ಣಿನ ಬಿಡುಗಡೆಯಲ್ಲಿ ಗಂಡಿನ ಬಿಡುಗಡೆಯೂ ಇದೆ ಎಂಬ ಅರಿವು ಮಾತ್ರ ಬದುಕನ್ನು ಸಹ್ಯಗೊಳಿಸಬಲ್ಲದು.
ಲೇಖಕಿ: ಸಹ ಪ್ರಾಧ್ಯಾಪಕಿ, ತುಮಕೂರು ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.