ADVERTISEMENT

ಆಫ್ಗನ್ ಮಹಿಳೆ: ಇಲ್ಲವಾದೀತೇ ಹಕ್ಕು‌?

ಅಮೆರಿಕ– ತಾಲಿಬಾನ್‌ ಶಾಂತಿ ಒಪ್ಪಂದದ ಮಾತುಕತೆ ಆತಂಕ ಹುಟ್ಟಿಸಿದೆ

ಲಾರಾ ಜೇಕ್ಸ್‌
Published 28 ಆಗಸ್ಟ್ 2019, 20:15 IST
Last Updated 28 ಆಗಸ್ಟ್ 2019, 20:15 IST
   

ರೋಯಾ ರೆಹ್ಮಾನಿ ಅವರು ಬಲಾಢ್ಯ ಕುಟುಂಬದವರೂ ಅಲ್ಲ, ಪ್ರತಿಷ್ಠಿತ ಕುಟುಂಬದವರೂ ಅಲ್ಲ. ಹಾಗಾಗಿ, ತಮ್ಮ ನ್ನು ಅಮೆರಿಕದಲ್ಲಿನ ಅಫ್ಗಾನಿಸ್ತಾನದ ಮೊದಲ ಮಹಿಳಾ ರಾಯಭಾರಿಯಾಗಿ ನೇಮಿಸಿದಾಗ ಅವರಿಗೆ ಆಶ್ಚರ್ಯವಾಗಿತ್ತು. ಆ ರೀತಿ ಮಾಡಿದ್ದು ಏಕೆ ಎಂಬುದು ಅವರಿಗೀಗ ಅರ್ಥವಾಗಿದೆ; ಅಮೆರಿಕವು ತಾಲಿಬಾನ್ ಜೊತೆ ಶಾಂತಿ ಒಪ್ಪಂದದ ಮಾತುಕತೆ ನಡೆಸುತ್ತಿರುವ ಹೊತ್ತಿನಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ತನಗೆ ಬದ್ಧ ತೆಯಿದೆ ಎಂಬ ಸಂದೇಶ ನೀಡಲು ಅಫ್ಗಾನಿಸ್ತಾನ ಬಯ ಸಿತ್ತು.

ರೆಹ್ಮಾನಿ ಅವರು ಮಹಿಳೆಯರ ಹಕ್ಕುಗಳ ಕಾರ್ಯಕರ್ತೆಯಾಗಿ ಬಹುಕಾಲದಿಂದ ಕೆಲಸ ಮಾಡುತ್ತಿದ್ದಾರೆ. 90ರ ದಶಕದಲ್ಲಿ ತಾಲಿಬಾನೀಯರ ಆಡಳಿತದಲ್ಲಿ ಅಫ್ಗಾನಿಸ್ತಾನ ಹೇಗಿತ್ತು ಎಂಬುದನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರೆ. ಮನೆಯಿಂದ ಹೊರಬಂದಿದ್ದಕ್ಕೆ ಮಹಿಳೆಯರಿಗೆ ಹೊಡೆಯಲಾಗುತ್ತಿತ್ತು, ಹೆಣ್ಣುಮಕ್ಕಳು ಶಾಲೆಗೆ ಹೋಗುವಂತಿರಲಿಲ್ಲ, ಮಹಿಳೆಯರು ಕೆಲಸಕ್ಕೆ ಸೇರುವಂತಿರಲಿಲ್ಲ. ‘ಜನರಲ್ಲಿ ಆಸೆಯೇ ಬತ್ತಿಹೋಗಿತ್ತು’ ಎಂದು ರೆಹ್ಮಾನಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇಂದು ಅಲ್ಲಿನ ಸಂಸತ್ತಿನಲ್ಲಿ ಶೇಕಡ 28ರಷ್ಟು ಪ್ರತಿನಿಧಿಗಳು ಮಹಿಳೆಯರು. ತಾಲಿಬಾನ್ ಮತ್ತು ಅಮೆರಿಕದ ನಡುವೆ ಒಪ್ಪಂದವೊಂದು ಸನ್ನಿಹಿತ ಆಗುತ್ತಿರುವ ಹೊತ್ತಿನಲ್ಲಿ, ಮಹಿಳೆಯರು ಸರಿಸುಮಾರು ಎರಡು ದಶಕಗಳ ಅವಧಿಯಲ್ಲಿ ಪಡೆದ ಹಕ್ಕುಗಳು ಮೊಟಕಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಶಿಕ್ಷಣ, ಉದ್ಯೋಗ ಮತ್ತು ಸರ್ಕಾರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಇರಲಿವೆ ಎಂಬ ಸ್ಪಷ್ಟ ಭರವಸೆಯು ಪ್ರಾಥಮಿಕ ಒಪ್ಪಂದದಲ್ಲಿ ಇರಲಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಮಾತುಕತೆಗಳಲ್ಲಿ ಮಹಿಳೆಯರ ಹಕ್ಕಿನ ಕುರಿತೂ ಪ್ರಸ್ತಾಪ ಆಗಬಹುದು. ಅಮೆರಿಕ ಮತ್ತು ಅಫ್ಗಾನಿಸ್ತಾನದ ಕೆಲವು ಅಧಿಕಾರಿಗಳು ಹೇಳುವ ಪ್ರಕಾರ, ತಾಲಿಬಾನ್ ಪ್ರತಿನಿಧಿಗಳು ಮಹಿಳೆಯರ ಹಕ್ಕುಗಳ ವಿಚಾರದಲ್ಲಿ ಹಿಂದಿಗಿಂತಲೂ ಹೆಚ್ಚು ಸ್ಪಂದನಾಶೀಲರಾಗಿದ್ದಾರೆ. ಹೀಗಿದ್ದರೂ, ಅಂತಿಮ ಒಪ್ಪಂದದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಔಪಚಾರಿಕ ಉಲ್ಲೇಖವಷ್ಟೇ ಆಗಬಹುದು ಅಥವಾ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲೂಬಹುದು ಎಂದು ಕೆಲವರು ಆತಂಕ ವ್ಯಕ್ತ ಪಡಿಸಿದ್ದಾರೆ. ‘ತಮಗೆ ಶಾಂತಿ ಬೇಕು, ಆದರೆ ತಮ್ಮ ಹಕ್ಕುಗಳನ್ನು ಹತ್ತಿಕ್ಕಬಾರದು ಎನ್ನುವುದನ್ನು ಅಫ್ಗಾನಿಸ್ತಾ ನದ ಮಹಿಳೆಯರು ಖಚಿತವಾಗಿ ಹೇಳಿದ್ದಾರೆ’ ಎಂದು ಅಮೆರಿಕದ ಸೆನೆಟರ್ ಜೀನ್ ಶಾಹೀನ್ ಹೇಳುತ್ತಾರೆ.

ADVERTISEMENT

‘ಯುದ್ಧಪೀಡಿತ ಈ ದೇಶದಲ್ಲಿ ಸ್ವಾತಂತ್ರ್ಯದ ತತ್ವ ಪಸರಿಸುವಲ್ಲಿ ಮಹಿಳೆಯರೇ ದೊಡ್ಡ ಆಸ್ತಿ ಎಂಬುದನ್ನು ಟ್ರಂಪ್ ಆಡಳಿತ ಅರ್ಥ ಮಾಡಿಕೊಳ್ಳಬೇಕು. ಮಾತುಕತೆ ವೇಳೆ ಅವರ ಹಕ್ಕುಗಳನ್ನು ನಿರ್ಲಕ್ಷಿಸುವಂತಿಲ್ಲ’ ಎಂದು ಶಾಹೀನ್ ಹೇಳಿದ್ದಾರೆ. ಒಸಾಮ ಬಿನ್ ಲಾಡೆನ್ ಮತ್ತು ಅಲ್-ಕೈದಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಪಡೆಗಳು, ತಾಲಿಬಾನೀಯರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಅಫ್ಗಾನಿಸ್ತಾನದ ಮಹಿಳೆಯರು ಮನೆಗಳಿಂದ ಹೊರಬರುವಂತಾಯಿತು. ಈಗ 35 ಲಕ್ಷಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ, 1 ಲಕ್ಷ ಯುವತಿಯರು ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.

ಅಮೆರಿಕದವರ ಲೆಕ್ಕಾಚಾರದ ಅನ್ವಯ ಸರಿಸುಮಾರು 85 ಸಾವಿರ ಆಫ್ಗನ್ ಮಹಿಳೆಯರು ಶಿಕ್ಷಕಿಯರಾಗಿ, ವಕೀಲರಾಗಿ, ಕಾನೂನು ಜಾರಿ ಅಧಿಕಾರಿಗಳಾಗಿ ಮತ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧಿಸಿದ್ದರು. ಮಹಿಳೆಯರು ಬೇರೆ ಬೇರೆ ರಂಗಗಳಲ್ಲಿ ಮುನ್ನಡೆ ಸಾಧಿಸಿರುವುದು ರಾಜಧಾನಿ ಕಾಬೂಲ್‌ ಮತ್ತು ಇತರ ಪ್ರಮುಖ ನಗರಗಳಲ್ಲೇ ಹೆಚ್ಚು. ಈಚಿನ ವರ್ಷಗಳಲ್ಲಿ ದೇಶದಾದ್ಯಂತ ತಾಲಿಬಾನೀಯರ ಹಿಡಿತ, ಪ್ರಮುಖವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ವಿಸ್ತರಿಸಿದೆ. ಅಫ್ಗಾನಿಸ್ತಾನದ ಕನಿಷ್ಠ ಶೇಕಡ 10ರಷ್ಟು ಜನಸಂಖ್ಯೆ ತಾಲಿಬಾನೀಯರ ನಿಯಂತ್ರಣದಲ್ಲಿದೆ.

ಮುಂದಿನ ಹಂತದ ಶಾಂತಿ ಮಾತುಕತೆಯ ಭಾಗವಾಗಿ ಅಮೆರಿಕ ಮತ್ತು ಅಫ್ಗಾನಿಸ್ತಾನದ ಅಧಿಕಾರಿಗಳು ಶಾಶ್ವತ ಕದನ ವಿರಾಮಕ್ಕೆ ಒತ್ತು ನೀಡುತ್ತಿದ್ದಾರೆ. ಈ ಕದನ ವಿರಾಮ ಕೂಡ ಆಫ್ಗನ್ ಮಹಿಳೆಯರ ಪಾಲಿಗೆ ಶಾಂತಿಯ ಭರವಸೆ ಕೊಡುವುದಿಲ್ಲ ಎನ್ನುತ್ತಾರೆ ರೆಹ್ಮಾನಿ. ‘ನಾವು ಶಾಂತಿಯ ಬಗ್ಗೆ ಮಾತನಾಡುವಾಗ, ಬಂದೂಕಿನ ಮೊರೆತ, ಬಾಂಬ್ ಸ್ಫೋಟಗಳಿಂದ ಮುಕ್ತವಾದ ವಾತಾವರಣ ಬೇಕು ಎಂದಷ್ಟೇ ಹೇಳುತ್ತಿಲ್ಲ. ಮನುಷ್ಯನಿಗೆ ಭದ್ರತೆ ಕಲ್ಪಿಸುವ, ದೈಹಿಕ ಮತ್ತು ಮಾನಸಿಕ ಹಿಂಸೆಗಳಿಂದ ಮುಕ್ತವಾದ ವಾತಾವರಣವನ್ನೂ ಬಯಸುತ್ತೇವೆ’ ಎಂದು ಅವರು ಹೇಳುತ್ತಾರೆ. ಇಸ್ಲಾಂ ಪ್ರಕಾರ ಮಹಿಳೆಯರ ಸ್ಥಾನವೇನು ಎಂಬುದನ್ನು ಅಮೆರಿಕ ಮತ್ತು ತಾಲಿಬಾನ್‌ ಪ್ರತಿನಿಧಿಗಳು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದನ್ನು ಆಧರಿಸಿ, ಅಂತಿಮ ಒಪ್ಪಂದದ ವೇಳೆ ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆ ಆಗಬಹುದು ಎಂಬ ನಿರೀಕ್ಷೆ ಇದೆ.

2004ರಲ್ಲಿ ಅಂಗೀಕಾರ ಪಡೆದ ಆಫ್ಗನ್ ಸಂವಿಧಾನದ ಅನ್ವಯ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕಾನೂನು ಹಕ್ಕುಗಳು, ಹೊಣೆಗಾರಿಕೆಗಳು ಇವೆ. ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಸಂವಿಧಾನವು ‘ಮಹಿಳೆಯರಿಗೆ ಸಮತೋಲಿತ ಶಿಕ್ಷಣ ಬೇಕು’ ಎನ್ನುತ್ತದೆ. ತನ್ನ ಎಲ್ಲ ಅಂಶಗಳು ಮತ್ತು ಕಾನೂನುಗಳು ಇಸ್ಲಾಮಿಕ್ ನಂಬಿಕೆಗಳಿಗೆ ಅನುಗುಣವಾಗಿವೆ ಎಂದು ಸಂವಿಧಾನ ಹೇಳುತ್ತದೆ. ಪತಿಯ ಆಯ್ಕೆ, ಆಸ್ತಿಯಲ್ಲಿ ಹಕ್ಕು, ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳು ಸೇರಿದಂತೆ ಕೆಲವು ಹಕ್ಕುಗಳು ಇಸ್ಲಾಂನ ಅಡಿ ಮಹಿಳೆಯರಿಗೆ ಇರುವುದನ್ನು ಗುರುತಿಸಿದ್ದಾಗಿ ತಾಲಿಬಾನ್‌ ಫೆಬ್ರುವರಿಯಲ್ಲಿ ಹೇಳಿತ್ತು. ‘ಮಹಿಳೆಯರ ಅರ್ಹ ಹಕ್ಕುಗಳಿಗೆ ಧಕ್ಕೆಯಾಗದಂತೆ, ಆಫ್ಗನ್ ಮೌಲ್ಯಗಳಿಗೆ ಹಾನಿಯಾಗದಂತೆ ನೋಡಿ ಕೊಳ್ಳುವುದು’ ತನ್ನ ನೀತಿ ಎಂದು ಹೇಳಿತ್ತು.

ಮಹಿಳೆಯರ ಹಕ್ಕುಗಳ ಹೆಸರಿನಲ್ಲಿ ಆಫ್ಗನ್ ಆಚರಣೆಗಳನ್ನು ಉಲ್ಲಂಘಿಸಲು ಮಹಿಳೆಯರಿಗೆ ಹೇಳುವ ಧರ್ಮಗಳು ಹಾಗೂ ಪಶ್ಚಿಮದ ಪ್ರಭಾವವು ‘ಅನೈತಿಕ ಮತ್ತು ಅಸಭ್ಯ’ ಎಂದು ತಾಲಿಬಾನ್‌ ಹೇಳಿಕೆ ನೀಡಿತ್ತು. ‘ಪಾಶ್ಚಿಮಾತ್ಯ, ಆಫ್ಗನ್‌ ಮೂಲದ್ದಲ್ಲದ ಹಾಗೂ ಇಸ್ಲಾಮಿಕ್‌ ಅಲ್ಲದ ನಾಟಕ ಮತ್ತು ಧಾರಾವಾಹಿಗಳು’ ಆಫ್ಗನ್ ಮಹಿಳೆಯರು ಕೆಡುತ್ತಿರುವುದಕ್ಕೆ ಸಾಕ್ಷಿ ಎಂದೂ ಅದು ಹೇಳಿತ್ತು.

2001ರ ನಂತರದ ಅವಧಿಯಲ್ಲಿ ತಾಲಿಬಾನೀಯರು ಬದಲಾಗಿದ್ದಾರೆ, ಅವರು ಮಹಿಳೆಯರ ಹಕ್ಕುಗಳ ವಿಚಾರದಲ್ಲಿ ಇನ್ನಷ್ಟು ಮುಕ್ತವಾ ಗಿರಬಹುದು ಎಂದು ತಾಲಿಬಾನ್ ಮತ್ತು ಅಮೆರಿಕದ ಅಧಿಕಾರಿಗಳ ನಡುವಿನ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಆಫ್ಗನ್ ಅಧಿಕಾರಿಗಳು ಹೇಳಿದ್ದಾರೆ.

‘20 ಅಥವಾ 18 ವರ್ಷಗಳ ಹಿಂದೆ ಇದ್ದ ತಾಲಿಬಾನೀಯರು ಅಲ್ಲ ಇಂದಿನ ತಾಲಿಬಾನೀಯರು ಎಂಬುದನ್ನು ಗುರುತಿಸಿದ್ದೇವೆ’ ಎನ್ನುತ್ತಾರೆ ಮಾನವ ಹಕ್ಕುಗಳ ಕಾರ್ಯಕರ್ತೆ ಆಸಿಲಾ ವಾರ್ದಕ್. ಆದರೆ, ಆಫ್ಗನ್ ವಿದ್ಯಮಾನಗಳಲ್ಲಿ ತಜ್ಞರಾದವರು ತಾಲಿಬಾನೀಯರು ಮಹಿಳೆಯರ ಹಕ್ಕುಗಳ ವಿಚಾರದಲ್ಲಿ ಈಗ ತಾಳಿರುವ ನಿಲುವಿನ ಬಗ್ಗೆ ಅನುಮಾನ ಹೊಂದಿದ್ದಾರೆ. ತಾವು ಶಾಂತಿ ಬಯಸುತ್ತಿರುವುದಾಗಿ ತಾಲಿಬಾನಿ ನಾಯಕರು ಹೇಳುತ್ತಿದ್ದಾರಾದರೂ, ಅಫ್ಗಾನಿ ಸ್ತಾನದ ಕೆಲವೆಡೆ ತಾಲಿಬಾನ್ ಸದಸ್ಯರು ಮಹಿಳೆಯರ ಮೇಲೆ ದಾಳಿ ನಡೆಸಿದ್ದಾರೆ. ಹೆಣ್ಣುಮಕ್ಕಳ ಶಾಲೆಯೊಂದರ ಮೇಲೆ ಈ ವರ್ಷ ದಾಳಿ ನಡೆದಿದೆ, ಮಹಿಳೆಯರು ಕೆಲಸ ಮಾಡುತ್ತಿದ್ದ ರೇಡಿಯೊ ಕೇಂದ್ರವೊಂದನ್ನು ಬಲವಂತದಿಂದ ಮುಚ್ಚಿಸಲಾಗಿದೆ.

‘ಅಫ್ಗಾನಿಸ್ತಾನದವರಿಗೆ ಶಾಂತಿ ಬೇಕಾಗಿದೆ. ಮಹಿಳೆಯರು ಇದುವರೆಗೆ ಸಾಧಿಸಿರುವ ಮುನ್ನಡೆ ಯನ್ನೆಲ್ಲ ಬಿಟ್ಟುಕೊಡಿ ಎಂಬ ಒತ್ತಡ ತರಬಾರದು. ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗ ಹುಡುಕೋಣ ಎಂದು ತಾಲಿಬಾನೀಯರು ಹೇಳಿದರೆ ಅಡ್ಡಿಯಿಲ್ಲ. ಆದರೆ, ಹಿಂದಿನ ಅನುಭವ ಆಧರಿಸಿ ಹೇಳುವುದಾದರೆ, ಅಫ್ಗಾನಿಸ್ತಾನದ ಮಹಿಳೆಯರ ಪಾಲಿಗೆ ಎಚ್ಚರಿಕೆ ಗಂಟೆಯೊಂದು ಬಾರಿಸುತ್ತಿದೆ’ ಎಂದು ರೆಹ್ಮಾನಿ ಹೇಳುತ್ತಾರೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.