ಭಾರತದಲ್ಲಿ ಹೆಣ್ಣುಮಗು ಹುಟ್ಟಿದ ದಿನದಿಂದ ಅವಳ ಮದುವೆ ತಯಾರಿ ಆರಂಭವಾಗುತ್ತದೆ. ಅವಳಿಗಾಗಿ ಕೊಡಬೇಕಾದ ವರದಕ್ಷಿಣೆ, ಆಭರಣ, ಹೆಚ್ಚುವರಿ ಬಳುವಳಿಗಳು ಮತ್ತು ಅದ್ದೂರಿ ಮದುವೆ ಖರ್ಚುವೆಚ್ಚವನ್ನು ಲೋಕದ ರೂಢಿ ಮತ್ತು ನಿರೀಕ್ಷೆಯಂತೆ ಅವಳ ಅಪ್ಪನೇ ನಿರ್ವಹಿಸಬೇಕಾದ್ದರಿಂದ, ಸಹಜವಾಗಿ ಅದರ ಲೆಕ್ಕಾಚಾರ ಹಾಗೂ ಗಳಿಕೆಯ ಮಾರ್ಗಗಳನ್ನು ಅವನು ಕಂಡುಕೊಳ್ಳಬೇಕಾಗುತ್ತದೆ. ಹೆಣ್ಣು ಒಂದು ಆರ್ಥಿಕ ಭಾರವೆನ್ನುವ ಪರಿಕಲ್ಪನೆಯಿಂದಾಗಿಯೇ ಹೆಣ್ಣುಮಗುವಿನ ಭ್ರೂಣಹತ್ಯೆಯನ್ನು ಇಂದಿಗೂ ಸಂಪೂರ್ಣವಾಗಿ ಕೊನೆಗಾಣಿಸಲು ಸಾಧ್ಯವಾಗಿಲ್ಲ.
ಇದರ ಜೊತೆಗೆ, ನಮ್ಮ ಸಮಾಜದ ‘ಉಳ್ಳವರು’ ತಮ್ಮ ಮಕ್ಕಳ ವಿವಾಹವನ್ನು ಬಹಳ ಅದ್ದೂರಿಯಿಂದ ಮಾಡಿ ಅದನ್ನು ಮಾಧ್ಯಮಗಳಲ್ಲಿ ವಿಜೃಂಭಿಸುವಂತೆ ಮಾಡುವುದರಿಂದ, ಹೆಣ್ಣು ಹೆತ್ತವರು ಸ್ಪರ್ಧೆಗೆ ಬಿದ್ದವರಂತೆ ಸಾಲ ಮಾಡಿಯಾದರೂ ಮದುವೆಯೆನ್ನುವ ಕೆಲವು ಸ್ಮರಣೀಯ ಕ್ಷಣಗಳನ್ನು ಅವಿಸ್ಮರಣೀಯ ಆಗಿಸಲು ಹರಸಾಹಸ ಮಾಡುವುದನ್ನು ನಾವು ನೋಡುತ್ತೇವೆ.
ಕಾಲ ಬದಲಾಗುತ್ತಿದೆ ಎಂದು ನಾವೆಷ್ಟೇ ಹೇಳಿಕೊಂಡರೂ ಇಂದಿಗೂ ಹೆಣ್ಣುಮಕ್ಕಳ ಶಿಕ್ಷಣಕ್ಕಿಂತ ಗಂಡುಮಕ್ಕಳ ವಿದ್ಯಾರ್ಜನೆಗೆ ಯಥೇಚ್ಛ ಹಣ ಖರ್ಚು ಮಾಡುತ್ತೇವೆ. ಯಾಕೆಂದರೆ, ಹೆಣ್ಣಿನ ಮದುವೆ ಖರ್ಚು ಎನ್ನುವ ಒಂದು ದೊಡ್ಡ ಮಟ್ಟದ ನಿರೀಕ್ಷಿತ ಖರ್ಚಿನ ಅಂದಾಜು ಮನಸ್ಸಿನ ಮೂಲೆಯಲ್ಲಿ ಸದಾ ಎಚ್ಚರವಾಗಿ ಕಾಡುತ್ತಿರುವುದರಿಂದ, ಅವಳಿಗೆ ಮಾಡುವ ಉಳಿದೆಲ್ಲಾ ಖರ್ಚಿನಲ್ಲಿ ಒಂದು ಮಿತಿಯನ್ನು ಹಾಕಿಕೊಳ್ಳುತ್ತೇವೆ.
ಇದಕ್ಕೆ ಅನುಗುಣವಾಗಿ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಒಂದು ವಿದ್ಯಮಾನವನ್ನು ಉದಾಹರಿಸುವುದಾದರೆ, ನಮ್ಮ ಹೆಣ್ಣುಮಕ್ಕಳು, ಗಂಡುಮಕ್ಕಳಿಗೆ ಹೋಲಿಸಿದರೆ ತಮ್ಮ ವಿದ್ಯಾಭ್ಯಾಸವನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಮನೆಕೆಲಸದಲ್ಲಿಯೂ ಹೆತ್ತವರಿಗೆ ನೆರವಾಗುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ಗಂಡುಮಕ್ಕಳು ಆಟ ಆಡಿಕೊಂಡು ಅಥವಾ ಸ್ನೇಹಿತರೊಂದಿಗೆ ಸುತ್ತಾಡಿಕೊಂಡು ಕಾಲಹರಣ ಮಾಡುವುದು ಸಾಮಾನ್ಯ ದೃಶ್ಯ.
ಹೆಚ್ಚು ಸ್ವಾತಂತ್ರ್ಯ ಮತ್ತು ಸೌಲಭ್ಯಗಳನ್ನು ಹೊಂದಿರುವ ಗಂಡಿಗಿಂತ, ಕಟ್ಟುಪಾಡುಗಳನ್ನು ಎದುರಿಸುವ ಮತ್ತು ಮನೆಯ ಕೆಲಸಕ್ಕೂ ಕೈಜೋಡಿಸುವ ಹೆಣ್ಣುಮಕ್ಕಳು ಚೆನ್ನಾಗಿ ಅಂಕ ಗಳಿಸುವುದರ ಹಿಂದಿನ ಮರ್ಮವೇನು ಎನ್ನುವ ಕುತೂಹಲ ಹುಟ್ಟುವುದು ಸಹಜ. ಶಿಕ್ಷಣದಲ್ಲಿ ಹಿಂದೆ ಉಳಿಯುವ ಗಂಡು ಮತ್ತು ಹೆಣ್ಣುಗಳನ್ನು, ಹೆತ್ತವರು ಮತ್ತು ಸಮಾಜ ನಿಭಾಯಿಸುವ ರೀತಿಯಲ್ಲಿ ಅಜಗಜಾಂತರವನ್ನು ಕಾಣುತ್ತೇವೆ. ಗಂಡು ಎಷ್ಟೇ ಬಾರಿ ಫೇಲ್ ಆದರೂ ಪಾಸಾಗಿ ಶಿಕ್ಷಣ ಮುಂದುವರಿಸಬೇಕೆಂದು ಹೆತ್ತವರು ಒತ್ತಾಯಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ ಮತ್ತು ಇನ್ನಷ್ಟು ಖರ್ಚು ಮಾಡಿ ಅವಕಾಶಗಳನ್ನು ನೀಡುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ಹೆಣ್ಣುಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿದರೆ, ಅಲ್ಲಿಗೆ ಅವರ ಶಿಕ್ಷಣ ಮೊಟಕುಗೊಳಿಸಲಾಗುತ್ತದೆ ಮತ್ತು ಅವರ ವಿವಾಹದ ಕುರಿತಂತೆ ಮನೆಯಲ್ಲಿ ಚಿಂತನ-ಮಂಥನ ಪ್ರಾರಂಭವಾಗುತ್ತದೆ. ಇದರಿಂದ ಮುಕ್ತಿ ಸಿಗಲೆಂದೇ ನಮ್ಮ ಹೆಣ್ಣುಮಕ್ಕಳು ಗಂಡಿಗಿಂತ ಹೆಚ್ಚು ಶ್ರಮ ವಹಿಸುತ್ತಾರೆ. ಅವರ ಶಿಕ್ಷಣದ ಮುಂದುವರಿಕೆಯು ‘ಮಾಡು ಇಲ್ಲವೇ ಮಡಿ’ ಎನ್ನುವ ಒತ್ತಡವಾಗಿರುತ್ತದೆ. ಹಾಗಾಗಿ, ಉತ್ತಮ ಫಲಿತಾಂಶ ಮತ್ತು ಸಾಧನೆಯನ್ನು ನಿರಂತರವಾಗಿ ದಾಖಲಿಸುವುದು ಅವರಿಗೆ ಅನಿವಾರ್ಯ.
ಈ ಕಾರಣದಿಂದ, ಮದುವೆಯ ಸಂದರ್ಭವನ್ನು ಅತಿಯಾಗಿ ವೈಭವೀಕರಿಸುವುದು, ಅದಕ್ಕೆ ತಗಲುವ ವೆಚ್ಚವನ್ನು ಸ್ಪರ್ಧಾತ್ಮಕ ಪ್ರತಿಷ್ಠೆಯಾಗಿ ಪ್ರದರ್ಶಿಸುವುದು, ಅವಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡದ ಹಣವನ್ನು ಮದುವೆಗಾಗಿ ಪೋಲು ಮಾಡುವುದು ಮತ್ತು ವರದಕ್ಷಿಣೆ ಕೊಡುವಂತಹವು ಹೆಣ್ಣುಮಕ್ಕಳು ಅರಿವಿನ ಪ್ರಪಂಚಕ್ಕೆ ತೆರೆದುಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನಗಳಿಗೆ ಮಾಡುವ ದೊಡ್ಡ ಅವಮಾನವೇ ಸರಿ.
ನಮ್ಮ ಹೆಣ್ಣುಮಕ್ಕಳಿಗೆ ಇಂದು ಅಗತ್ಯವಾಗಿರುವುದು ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ. ಅದೊಂದೇ ಅವರಿಗೆ ಆತ್ಮವಿಶ್ವಾಸದಿಂದ ಸ್ವಾವಲಂಬಿಯಾಗಿ ಬದುಕುವಂತೆ ಪ್ರೇರೇಪಿಸುವ ದಾರಿದೀಪವಾಗಬಲ್ಲದು. ವರ್ತಮಾನದಲ್ಲಿ ಹೆಣ್ಣಿನ ಮದುವೆ ವೈಭೋಗವನ್ನು ಪ್ರದರ್ಶಿಸುವಂತೆ, ಮಹಿಳಾ ಸೆಲೆಬ್ರಿಟಿಗಳು ತಮ್ಮ ಬಸುರಿ, ಬಾಣಂತನದ ಫೋಟೊಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಕೂಡ ಹೆಚ್ಚಾಗುತ್ತಿದೆ. ಈ ವಿದ್ಯಮಾನವನ್ನು ಉತ್ತಮ ಬೆಳವಣಿಗೆ, ಇದು ಹೆಣ್ಣಿನ ದೈಹಿಕ ಬದಲಾವಣೆಗಳು ಮತ್ತು ಹಂತಗಳನ್ನು ಸಹಜವೆಂದು ಕಾಣುವ ಪ್ರಕ್ರಿಯೆ ಎಂದು ಹೇಳಿಕೊಂಡರೂ ಇದು ಹೆಣ್ಣಿನ ಜೀವನದ ಅನಿವಾರ್ಯ ಮತ್ತು ಸಂಭ್ರಮಿಸಲೇಬೇಕಾದ ಗಳಿಗೆ ಎನ್ನುವ ಸಂದೇಶವೂ ರವಾನೆಯಾಗುತ್ತಿದೆ ಎನ್ನುವುದು ಗಮನಾರ್ಹ. ಹೆಣ್ಣಿನ ಜೀವನವು ಅದ್ದೂರಿ ಮದುವೆ ಮತ್ತು ತಾಯ್ತನದ ಸಂಭ್ರಮಾಚರಣೆ ಎನ್ನುವ ಸೀಮಿತ ಚೌಕಟ್ಟಿನಿಂದ ಹೊರಗೆ ಕೂಡ ತನ್ನತನ ಕಾಣುವ ಹೆಣ್ಣುಮಕ್ಕಳ ಯಶೋಗಾಥೆಗಳು ಹೆಚ್ಚೆಚ್ಚು ಸಾರ್ವಜನಿಕವಾಗಬೇಕಾದುದು ಹಿತ.
ವೈಭವದ ವಿವಾಹಗಳು ವಾಣಿಜ್ಯೀಕರಣಕ್ಕೆ ಒಳಗಾಗಿವೆ. ಅದಕ್ಕಾಗಿ ಉದ್ಯಮಗಳಿವೆ. ಇವು, ಈ ವೈಭವೀಕರಣವು ಹೀಗೆಯೇ ಮುಂದುವರಿಯಬೇಕೆಂದು ಆಶಿಸುತ್ತವೆ ಮತ್ತು ಗ್ರಾಹಕರ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತವೆ, ಕೆಲವೊಮ್ಮೆ ಒತ್ತಡವನ್ನೂ ಹೇರುತ್ತವೆ. ಉದಾಹರಣೆಗೆ, ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ವಿವಾಹಪೂರ್ವ ಹೊರಾಂಗಣ ಚಿತ್ರೀಕರಣ. ಇದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕೆನ್ನುವ ಅತಿರೇಕದ ಹುಚ್ಚು ಬಿಟ್ಟರೆ, ಬಹುತೇಕ ಅನಗತ್ಯ. ಆದರೂ ಮುಂದಿನ ದಿನಗಳಲ್ಲಿ ಇದು ವಿವಾಹದ ಕಡ್ಡಾಯ ಸಾಂಸ್ಕೃತಿಕ ಭಾಗವಾಗುವ ಎಲ್ಲ ಲಕ್ಷಣಗಳನ್ನೂ ಪ್ರಕಟಿಸುತ್ತಿದೆ. ಹಾಗೆಯೇ, ನಿಶ್ಚಿತಾರ್ಥ, ಮೆಹಂದಿ, ಅರಿಸಿನಶಾಸ್ತ್ರ, ರಿಸೆಪ್ಷನ್‌ನಂತಹ ಎಲ್ಲವೂ ವಿಸ್ತರಿಸಿಕೊಳ್ಳುತ್ತಾ ವಿವಾಹದ ಖರ್ಚುಗಳನ್ನು ಇನ್ನಷ್ಟು ಹೆಚ್ಚಾಗಿಸುತ್ತಿವೆ.
ಆತಂಕಕಾರಿ ಬೆಳವಣಿಗೆಯೆಂದರೆ, ಆರ್ಥಿಕವಾಗಿ ಹಿಂದುಳಿದವರು ಕೂಡ ಈ ಸ್ಪರ್ಧೆಯಲ್ಲಿ ಸೇರಿಕೊಂಡು, ವಿಪರೀತ ಸಾಲ ಮಾಡಿಯಾದರೂ ಶ್ರೀಮಂತವಾಗಿ ವಿವಾಹ ನೆರವೇರಿಸುವ ಹುಚ್ಚಿಗೆ ಬೀಳುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿರುವುದು. ವಿಪರ್ಯಾಸವೆಂದರೆ, ಅದ್ದೂರಿ ಮದುವೆಯಾಗಿ ಗಂಡನ ಮನೆ ಸೇರಿಕೊಂಡ ಹೆಣ್ಣು ಅಲ್ಲಿ ಬದುಕಲಾರದೆ ಮರಳಿ ವಾಪಸ್ ಬರಬೇಕೆಂದರೂ, ಅವಳಿಗೆ ಅಗತ್ಯವಾದ ಆರ್ಥಿಕ ನೆರವಿನ ಬೆಂಬಲ ನೀಡಲಾರದಷ್ಟು ದುಃಸ್ಥಿತಿಯಲ್ಲಿರುವ ಅಸಹಾಯಕ ಹೆತ್ತವರನ್ನು ನಾವು ನೋಡುತ್ತೇವೆ. ಜೊತೆಗೆ, ಅದ್ದೂರಿಯಾಗಿ ವಿವಾಹವನ್ನು ಪ್ರದರ್ಶಿಸಿದ ಹೆತ್ತವರು, ವಿವಾಹ ವಿಫಲವಾದಾಗ ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದೆ ಅದನ್ನೊಂದು ಅವಮಾನವೆಂದು ಪರಿಗಣಿಸುವುದನ್ನು ಮತ್ತು ಏನೇ ಆದರೂ ಸಹಿಸಿಕೊಳ್ಳಬೇಕೆಂದು ಹೆಣ್ಣುಮಕ್ಕಳ ಮೇಲೆ ಒತ್ತಡ ಹೇರುವುದನ್ನು ನೋಡುತ್ತೇವೆ. ಅಂದರೆ, ಇಂದು ವಿವಾಹವೆನ್ನುವುದು ಒಂದು ಸಾಮಾಜಿಕ ಪ್ರತಿಷ್ಠೆಯ ಸ್ಪರ್ಧಾತ್ಮಕ ಸಾರ್ವಜನಿಕ ಪ್ರದರ್ಶನವಾಗಿದೆಯೇ ವಿನಾ ಅದರಲ್ಲಿ ಹೆಣ್ಣಿನ ನೆಮ್ಮದಿಯ ಜೀವನದ ಖಾತರಿಯೇನಿಲ್ಲ.
ಈ ದುಃಸ್ಥಿತಿ ಕುರಿತಂತೆ ಸಾರ್ವಜನಿಕ ಹಿತಾಸಕ್ತಿಯ ವರದಿಗಳು ಏನು ಹೇಳುತ್ತಿವೆ? ಒಂದು ಅಂತರರಾಷ್ಟ್ರೀಯ ವರದಿಯ ಪ್ರಕಾರ, ಭಾರತೀಯರು ಮಕ್ಕಳ ವಿದ್ಯಾಭ್ಯಾಸಕ್ಕಿಂತ ವಿವಾಹಕ್ಕೆ ಎರಡು ಪಟ್ಟು ಹೆಚ್ಚು ಖರ್ಚು ಮಾಡುತ್ತಾರೆ. ದೇಶದ ವಿವಾಹ ಉದ್ಯಮ ಸುಮಾರು 10 ಲಕ್ಷ ಕೋಟಿಯದ್ದಾದರೆ, ರಾಷ್ಟ್ರೀಯ ಶಿಕ್ಷಣ ಬಜೆಟ್ ಬರೀ 1.13 ಲಕ್ಷ ಕೋಟಿ. ಹಾಗೆಯೇ, ಜಗತ್ತಿನಲ್ಲಿ ನಡೆಯುವ ಲಿಂಗ ಆಧಾರಿತ ಭ್ರೂಣ ಹತ್ಯೆಯ ಶೇ 40ರಷ್ಟು ಪ್ರಕರಣಗಳು ಭಾರತದಲ್ಲಿ ಸಂಭವಿಸುತ್ತಿವೆ. ಈ ರೀತಿ, ವಿವಾಹವನ್ನು ಜೀವನದ ಅತಿ ಮುಖ್ಯ ಘಟನೆಯನ್ನಾಗಿಸುವುದು ಜೀವನದ ಉಳಿದೆಲ್ಲಾ ಉನ್ನತ ಉದ್ದೇಶಗಳನ್ನು ಗೌಣವಾಗಿಸುತ್ತದೆ. ಹೆಣ್ಣಿಗಾಗಿ ನಾವು ರೂಪಿಸುವ ‘ಕನಸಿನ ವಿವಾಹದ ಬೃಹತ್ ಕಾರ್ಯಯೋಜನೆ’ಯಲ್ಲಿ ಅವಳ ಕನಸಿನ ಜೀವನ ಕಮರಿ ಹೋಗುವುದು ನಮಗೆ ಕಾಣಿಸುತ್ತಿಲ್ಲ.
ಹಾಗಾಗಿ, ಹೆಣ್ಣಿನ ವಿವಾಹವನ್ನು ದುಬಾರಿ ವೈಭೋಗವಾಗಿಸದೆ, ಅವಳ ಸ್ವಪರಿಶ್ರಮದ ಸಾಧನೆಗಳನ್ನೂ ಹೆಮ್ಮೆಯಿಂದ ಸಾರ್ವಜನಿಕಗೊಳಿಸುವುದನ್ನು ಹೆತ್ತವರು ಮಾಡಬೇಕಾಗಿದೆ. ವಿವಾಹಗಳನ್ನು ಸರಳಗೊಳಿಸಿ, ಅದರ ಬದಲಾಗಿ ಹೆಣ್ಣುಮಕ್ಕಳ ಸಾಧನೆಗಳನ್ನು ಬೃಹತ್ ಮಟ್ಟದಲ್ಲಿ ಪ್ರಚುರಗೊಳಿಸಿದರೆ ಅದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಹೀಗಾದಲ್ಲಿ, ನಮ್ಮ ಹೆಣ್ಣುಮಕ್ಕಳು ದೇಹವನ್ನು ಸುಂದರವಾಗಿ ಕಾಣಿಸುವ ದೀರ್ಘ ಕಾಲಹರಣದ ಪ್ರಾಜೆಕ್ಟ್ ಮತ್ತು ರೀಲ್ಸ್ ಪ್ರಪಂಚದಿಂದ ಹೊರಬಂದು ಏನಾದರೂ ಉನ್ನತವಾದದ್ದನ್ನು ಸಾಧಿಸುವ ಕಾಯಕದಲ್ಲಿ ತೊಡಗಿಕೊಂಡಾರು. ಹೆತ್ತವರು ಎಲ್ಲ ರೀತಿಯ ಮಾನಸಿಕ ಮತ್ತು ಆರ್ಥಿಕ ಬೆಂಬಲದೊಂದಿಗೆ, ಮದುವೆಗೆಂದು ಮೀಸಲಿಡುವ ದುಡ್ಡನ್ನೆಲ್ಲಾ ಅವರ ಕನಸು ನನಸಾಗಿಸುವಲ್ಲಿ ವ್ಯಯಿಸುವುದು ಶ್ರೇಯಸ್ಸು.
ಇಂದು ವೈಭವದ ವಿವಾಹವನ್ನು ಸಂಸ್ಕೃತಿಯ ಭಾಗವೆಂದು ಬಿಂಬಿಸಲಾಗುತ್ತಿದೆ. ಆದರೆ, ಸಂಸ್ಕೃತಿಯನ್ನು ಆಕರ್ಷಣೀಯ ಪ್ಯಾಕೇಜ್ ಮಾಡಿ ಅದನ್ನು ಗ್ರಾಹಕರಿಗೆ ಉಣಬಡಿಸಿ ಲೂಟಿ ಮಾಡುವುದೇ ಒಂದು ಬೃಹತ್ ಉದ್ಯಮವಾಗಿದೆ. ಇದು, ಹೆತ್ತವರನ್ನು ಬಡವಾಗಿಸಿ, ವಿವಾಹಕ್ಕೆ ಸಂಬಂಧಿಸಿದ ಉದ್ಯಮಗಳನ್ನು ಶ್ರೀಮಂತವಾಗಿಸುವ ಪ್ರಾಜೆಕ್ಟ್ ಅಷ್ಟೇ. ಹಾಗಾಗಿ, ಈ ಜಾಲದಿಂದ ಬಿಡಿಸಿಕೊಳ್ಳುವುದು, ಸಾಮಾಜಿಕ ಪ್ರತಿಷ್ಠೆಯ ಸ್ಪರ್ಧಾತ್ಮಕವಾದ ಈ ಕಾಲದಲ್ಲಿ ಒಂದು ದೊಡ್ಡ ಸವಾಲೇ ಸರಿ. ಆದ್ದರಿಂದ, ಈ ಮಾಯೆಯಿಂದ ತಪ್ಪಿಸಿಕೊಳ್ಳುವುದು, ಜಾಗ್ರತ, ಪ್ರಜ್ಞಾವಂತ, ನಿರ್ಲಿಪ್ತ ಮತ್ತು ಉನ್ನತ ಸಾಧನೆಗಳಲ್ಲಿ ತನ್ನತನ ಹುಡುಕುವ ಮನಸ್ಸುಗಳಿಗಷ್ಟೇ ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.