ಕನ್ನಡಿಗರು ಇತಿಹಾಸದ ಉದ್ದಕ್ಕೂ ಭಾರತವಷ್ಟೇ ಅಲ್ಲದೆ ಹೊರದೇಶಗಳವರೆಗೂ ತಮ್ಮ ಕೀರ್ತಿ ಪತಾಕೆ ಹಾರಿಸಿದ ನಿದರ್ಶನಗಳು ಲೆಕ್ಕವಿಲ್ಲದಷ್ಟಿವೆ. ಹೀಗಿದ್ದೂ ಸ್ವತಂತ್ರ ಭಾರತದ ದೊಡ್ಡ ದೊಡ್ಡ ಉದ್ಯಮಿಗಳ ಪಟ್ಟಿಯಲ್ಲಿ ಕನ್ನಡಿಗರ ಹೆಸರೇಕೆ ಸಾಮಾನ್ಯವಾಗಿ ಕಂಡುಬರುವುದಿಲ್ಲ ಅನ್ನುವ ಪ್ರಶ್ನೆ ಹಲವರನ್ನು ಕಾಡಿರಬಹುದು. ಒಂದು ಕೆಲಸ ಹಿಡಿದು, ಸಂಬಳ ಪಡೆಯುವ ಅನಿಶ್ಚಿತವಲ್ಲದ ಜೀವನವೇ ಗೌರವಯುತವಾದ ದಾರಿ ಅನ್ನುವ ಮಾನಸಿಕತೆ ನಮ್ಮಲ್ಲಿ ಎಲ್ಲೆಡೆ ಯಾಕೆ ಕಾಣುತ್ತದೆ? ಉದ್ಯಮ ಶುರು ಮಾಡಲು ಬೇಕಿರುವ ಅಗಾಧ ಬಂಡವಾಳದ ಕೊರತೆಯೇ ಇದಕ್ಕೆ ಕಾರಣವೇ ಅಥವಾ ಬಹುತೇಕರು ಹೇಳುವಂತೆ ಕನ್ನಡಿಗರ ಡಿಎನ್‌ಎಯಲ್ಲೇ ಉದ್ಯಮಶೀಲತೆ ಇಲ್ಲವೇ? ಇದನ್ನು ಬದಲಿಸುವುದು ಸಾಧ್ಯವಿಲ್ಲವೇ ಎಂಬಂತಹ ಪ್ರಶ್ನೆಗಳನ್ನು, ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಮುಂದಿರಿಸುತ್ತಿರುವ ಹೊಸ ಸಾಧ್ಯತೆಗಳನ್ನು ಮನಗಂಡು ಮತ್ತೊಮ್ಮೆ ವಿಮರ್ಶಿಸುವ ಅಗತ್ಯವಿದೆ.
ಮೊದಲಿಗೆ, ಭಾರತದ ಉದ್ಯಮಶೀಲತೆಯ ಮುನ್ನೂರು ವರ್ಷಗಳ ಹಿಂದಿನ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ದೇಶದ ಬೇರೆ ಬೇರೆ ಭಾಷಿಕ ಪ್ರದೇಶಗಳಲ್ಲಿನ ಸಮುದಾಯಗಳು ಹೇಗೆ ಮತ್ತು ಯಾವಾಗ ಕೃಷಿಯಿಂದ ಉದ್ಯಮದೆಡೆಗೆ ಚಲಿಸಿದವು ಅನ್ನುವ ಚಿತ್ರಣವನ್ನು ಪತ್ರಕರ್ತ ಹರೀಶ್ ದಾಮೋದರನ್ ಅವರು ಬರೆದಿರುವ ‘ಇಂಡಿಯಾಸ್ ನ್ಯೂ ಕ್ಯಾಪಿಟಲಿಸ್ಟ್ಸ್’ ಪುಸ್ತಕ ತೆರೆದಿಡುತ್ತದೆ. ಅದರ ಸಾರಾಂಶವನ್ನು ಚುಟುಕಾಗಿ ಹೇಳುವುದಾದರೆ, ಬ್ರಿಟಿಷರ ನೇರ ಆಡಳಿತದಲ್ಲಿದ್ದ ಪ್ರದೇಶಗಳಲ್ಲಿ ಅವರ ಒಡನಾಟ ಮತ್ತು ಅವರು ತಮ್ಮ ಪ್ರೆಸಿಡೆನ್ಸಿಯ ಆದಾಯ ಹೆಚ್ಚಿಸಿಕೊಳ್ಳಲು ಮಾಡಿದ ಮೂಲ ಸೌಕರ್ಯಗಳ ಅಭಿವೃದ್ಧಿಯು ಆ ಪ್ರದೇಶದಲ್ಲಿನ ಕೃಷಿ ಸಮುದಾಯಗಳಲ್ಲಿ ಬಂಡವಾಳ ಒಟ್ಟು ಮಾಡಿಕೊಳ್ಳಲು ಮತ್ತು ಅದನ್ನೇ ಬಳಸಿ ಉದ್ಯಮದತ್ತ ಚಲಿಸಲು ನೆರವಾದವು.
ಆಂಧ್ರಪ್ರದೇಶದ ಕರಾವಳಿ ಭಾಗದ ಕಮ್ಮ, ಕಾಪು ಸಮುದಾಯ, ತಮಿಳುನಾಡಿನ ಚೆಟ್ಟಿಯಾರ್ ಮತ್ತು ತಮಿಳು ಬ್ರಾಹ್ಮಣ ಸಮುದಾಯ, ಉತ್ತರ– ಪಶ್ಚಿಮ ಭಾರತದಲ್ಲಿ ಮಾರ್ವಾಡಿ, ಜೈನ ಮತ್ತು ಪಾರ್ಸಿ ಸಮುದಾಯದ ಜನ ಉದ್ಯಮಶೀಲತೆಗೆ ತಿರುಗಿದ ವಿವರವಾದ ಕಥನ ಈ ಪುಸ್ತಕದಲ್ಲಿದೆ. ಈ ಇಡೀ ಪುಸ್ತಕದಲ್ಲಿ ಕನ್ನಡ ಭಾಷಿಕ ಸಮುದಾಯಗಳ ಉದ್ಯಮಶೀಲತೆಯ ಕುರಿತ ವಿವರ ಬರೀ ಒಂದೆರಡು ಪುಟಗಳಿಗೆ ಸೀಮಿತವಾಗಿದೆ. ಇದರ ಅರ್ಥ ಇಷ್ಟೇ: ಬ್ರಿಟಿಷರ ಆಳ್ವಿಕೆಯಲ್ಲಿ ಕನ್ನಡ ನೆಲದ ಯಾವುದೇ ಸಮದಾಯ ದೊಡ್ಡ ಮಟ್ಟದಲ್ಲಿ ಉದ್ಯಮಶೀಲತೆಯೆಡೆ ಚಲಿಸುವ ಬೆಳವಣಿಗೆ ಆಗಲಿಲ್ಲ.
ಇದಕ್ಕೆ ಕಾರಣಗಳೇನು ಎಂದು ನೋಡಿದರೆ, ಕೆಲವು ವಿಷಯಗಳು ಗಮನಕ್ಕೆ ಬರುತ್ತವೆ. ಮೊದಲಿಗೆ, ಬ್ರಿಟಿಷರ ಅಧೀನದಲ್ಲಿದ್ದ ಮೈಸೂರು ಸಂಸ್ಥಾನಕ್ಕೆ ದೊಡ್ಡ ಮಟ್ಟದ ಯಾವುದೇ ನೀರಾವರಿ ಯೋಜನೆಯನ್ನು ಅಂದುಕೊಂಡ ಮಟ್ಟದಲ್ಲಿ ಕಟ್ಟಿಕೊಳ್ಳಲು ಆಗಲಿಲ್ಲ. ಮೈಸೂರು ಸಂಸ್ಥಾನ ಹಲವಾರು ಉದ್ಯಮಗಳನ್ನು ಕಟ್ಟಿದರೂ ಅವೆಲ್ಲವುಗಳನ್ನು ಮೈಸೂರಿನ ಅರಸೊತ್ತಿಗೆಯಡಿ ಕಟ್ಟಲಾಗಿತ್ತೇ ವಿನಾ ಮೈಸೂರು ಭಾಗದ ಜನಸಮುದಾಯಗಳಿಗೆ ಸೇರಿದವರನ್ನು ಉದ್ಯಮಿಗಳನ್ನಾಗಿಸಿ ಕಟ್ಟಿರಲಿಲ್ಲ. ಅವುಗಳಲ್ಲಿ ಹಲವು ಉದ್ಯಮಗಳು ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರದ ತೆಕ್ಕೆಗೆ ಜಾರಿದರೆ, ಹಲವು ಮುಚ್ಚಿ ಹೋದವು. ಇನ್ನೊಂದೆಡೆ, ಉತ್ತರ ಕರ್ನಾಟಕದ ಬಹುತೇಕ ಭಾಗ ಪರೋಕ್ಷವಾಗಿ ಮುಂಬೈ ಪ್ರೆಸಿಡೆನ್ಸಿ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೂ ಹತ್ತಾರು ಮರಾಠ ಸಂಸ್ಥಾನಗಳ ಆಳ್ವಿಕೆಯಿಂದ ನಲುಗಿದ್ದ ಈ ಪ್ರದೇಶ ಮುಂಬೈ ಪಾಲಿಗೆ ಎಂದಿಗೂ ಹತ್ತಿರವಾಗಲೇ ಇಲ್ಲ. ಇದೇ ಕಾರಣಕ್ಕೆ, ಕರ್ನಾಟಕದಲ್ಲಿ ಕೃಷ್ಣಾ ನದಿ ಪಾತ್ರ ಅತ್ಯಂತ ದೊಡ್ಡದಾಗಿದ್ದರೂ ಸ್ವಾತಂತ್ರ್ಯಪೂರ್ವದಲ್ಲಿ ಈ ಪ್ರದೇಶ ದೊಡ್ಡ ಅಣೆಕಟ್ಟುಗಳನ್ನಾಗಲಿ, ಮೂಲ ಸೌಕರ್ಯಗಳನ್ನಾಗಲಿ ಕಾಣಲಿಲ್ಲ. ಇದೇ ಕೃಷ್ಣಾ ನದಿಗೆ 1855ರಲ್ಲೇ ಆಂಧ್ರದಲ್ಲಿ ಬ್ರಿಟಿಷರು ಕಟ್ಟಿದ ಅಣೆಕಟ್ಟು ಅಲ್ಲಿನ ಕರಾವಳಿ ಭಾಗದ ಜನ ಉದ್ಯಮಶೀಲತೆಗೆ ತಿರುಗಲು ಬೇಕಾದ ಬಂಡವಾಳವನ್ನು ದೊಡ್ಡ ಮಟ್ಟದಲ್ಲಿ ಒಟ್ಟುಗೂಡಿಸಿ ಕೊಟ್ಟಿತ್ತು.
ಇನ್ನೊಂದೆಡೆ, ಹೈದರಾಬಾದ್ ನಿಜಾಮನ ಅಡಿಯಲ್ಲಿದ್ದ ಕನ್ನಡ ಭಾಷಿಕ ಪ್ರದೇಶದಲ್ಲೂ ಸ್ವಾತಂತ್ರ್ಯಪೂರ್ವದಲ್ಲಿ ಯಾವುದೇ ಅಭಿವೃದ್ಧಿ ಆಗಲಿಲ್ಲ. ಕರಾವಳಿಯು ಮುಂಬೈ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯ ಹಿಡಿತದಲ್ಲಿದ್ದ ಕಾರಣಕ್ಕೆ ಬ್ರಿಟಿಷರ ಅಲ್ಪಸ್ವಲ್ಪ ಒಡನಾಟ ಅದಕ್ಕೆ ಸಿಕ್ಕಿತ್ತು. ಹೀಗಾಗಿ, ಕರಾವಳಿ ಭಾಗದ ಜನ ಮಾತ್ರ ಕೊಂಚ ಮಟ್ಟಿಗೆ ಉದ್ಯಮಶೀಲತೆಗೆ ತೆರೆದುಕೊಂಡ ಬೆಳವಣಿಗೆ ಕಾಣುತ್ತದೆ. ಆದರೂ ರಾಷ್ಟ್ರ ಮಟ್ಟದ ದೊಡ್ಡ ಉದ್ಯಮಿಗಳನ್ನು ಹುಟ್ಟುಹಾಕುವುದು ಕರಾವಳಿಗರಿಗೂ ಸಾಧ್ಯವಾಗಲಿಲ್ಲ. ಹೀಗೆ, ಬಂಡವಾಳದ ಚಲನೆಯನ್ನು ನಿಯಂತ್ರಿಸುವ ಯಾವುದೇ ಹಂತದಲ್ಲೂ ಕನ್ನಡಿಗರ ಕೈ ಬಲಗೊಳ್ಳಲಿಲ್ಲ. ಸ್ವಾತಂತ್ರ್ಯಾನಂತರ ಕನ್ನಡಿಗರದ್ದೇ ರಾಜಕೀಯ ಅಧಿಕಾರ ಇದ್ದರೂ ಸ್ಥಳೀಯ ಸಮುದಾಯಗಳನ್ನು ಉದ್ದಿಮೆಯತ್ತ ಕರೆದೊಯ್ಯುವ ಯಾವ ವ್ಯವಸ್ಥಿತ ಕಾರ್ಯಯೋಜನೆಗಳೂ ಜಾರಿಗೆ ಬರಲಿಲ್ಲ.
ಹೀಗಿದ್ದ ಕರ್ನಾಟಕದಲ್ಲಿ ಆರ್ಥಿಕ ಉದಾರೀಕರಣದ ನಂತರ, ಹೆಚ್ಚು ಬಂಡವಾಳ ಬೇಡದ, ಬುದ್ಧಿಯೇ ಬಂಡವಾಳವಾಗಿರುವ ಜ್ಞಾನಾಧಾರಿತ ಉದ್ದಿಮೆಗಳು ಹುಟ್ಟುವ ಸಂದರ್ಭ ಬಂದಾಗ ಕೆಲವು ಕನ್ನಡಿಗ ಉದ್ಯಮಿಗಳು ಭಾರತದ ಮಟ್ಟದಲ್ಲಿ ಹೆಸರುವಾಸಿಯಾದರು. ಇತ್ತೀಚೆಗೆ ಸ್ಟಾರ್ಟ್‌ಅಪ್ ವಲಯದಲ್ಲಿ ಜೆರೋಧಾ, ಬೌನ್ಸ್‌ನಂತಹ ಸಂಸ್ಥೆಗಳನ್ನು ಕನ್ನಡಿಗರು ಕಟ್ಟಿದ್ದಾರೆ. ಉದಾರೀಕರಣದ ಜೊತೆ ಜೊತೆಯಲ್ಲೇ ಸೇವಾ ವಲಯದ ವ್ಯಾಪ್ತಿ ಹಿಗ್ಗುತ್ತಿದ್ದಂತೆಯೇ ಸಾರಿಗೆ, ಹೋಟೆಲ್ ಉದ್ಯಮ, ಆರೋಗ್ಯಸೇವೆ (ಇದರಲ್ಲಿ ಕರ್ನಾಟಕದ ಸಿಇಟಿ ವ್ಯವಸ್ಥೆಯ ಕೊಡುಗೆ ದೊಡ್ಡದಿದೆ) ತರಹದ ಕೆಲ ಉದ್ಯಮಗಳಲ್ಲಿ ಕನ್ನಡಿಗರು ತಕ್ಕ ಮಟ್ಟಿಗೆ ಉದ್ದಿಮೆಗಳನ್ನು ಕಟ್ಟುವ ಬೆಳವಣಿಗೆಗಳಾಗಿವೆ. ಆದರೆ ಒಟ್ಟಂದದಲ್ಲಿ ನೋಡಿದರೆ, ಭಾರತದ ಉದ್ಯಮಶೀಲತೆಯ ಚಿತ್ರಣದಲ್ಲಿ ನಮ್ಮ ಪಾಲು ಈಗಲೂ ಬಹಳ ಸಣ್ಣದಿದೆ. ಇದನ್ನು ದೊಡ್ಡ ಮಟ್ಟದಲ್ಲಿ ಬದಲಿಸುವ ದಾರಿಯೇನಾದರೂ ಇದ್ದರೆ ಅದು ಜ್ಞಾನಾಧಾರಿತ ವಲಯದಲ್ಲಿ ಮಾತ್ರ.
ಈಗ ನಾವು ಎ.ಐ ತಂತ್ರಜ್ಞಾನದ ಕಾಲದಲ್ಲಿ ಇದ್ದೇವೆ. ಇದು, ಮನುಕುಲದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದಿಕ್ಸೂಚಿ ಬೆಳವಣಿಗೆಯಾಗಿದೆ. ಒಂದೆಡೆ, ಇದರ ಫಲವಾಗಿ ಐಟಿ ಸೇವಾ ವಲಯದಲ್ಲಿ ಸೃಷ್ಟಿಯಾಗುತ್ತಿದ್ದ ದೊಡ್ಡ ಮಟ್ಟದ ಉದ್ಯೋಗಗಳಿಗೆ ಹೊಡೆತ ಬೀಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಆದರೆ ಇನ್ನೊಂದೆಡೆ, ಜ್ಞಾನ ಮತ್ತು ತಿಳಿವಳಿಕೆಯನ್ನೇ ಸರಕಾಗಿಸುವ ಈ ತಂತ್ರಜ್ಞಾನ, ಜ್ಞಾನಾಧಾರಿತ ಉದ್ದಿಮೆಗಳನ್ನು ಕಟ್ಟಲು ಇದ್ದ ಬಹಳಷ್ಟು ಅಡೆತಡೆಗಳನ್ನು ನಿವಾರಿಸುತ್ತ, ಯಾರು ಬೇಕಿದ್ದರೂ ಜ್ಞಾನಾಧಾರಿತ ಉದ್ಯಮಗಳನ್ನು ಕಟ್ಟಬಹುದು ಅನ್ನುವ ಅವಕಾಶವನ್ನೂ ಒದಗಿಸುತ್ತಿದೆ. ಒಂದು ಸಾಫ್ಟ್‌ವೇರ್ ಉತ್ಪನ್ನವನ್ನು ಅಭಿವೃದ್ಧಿಪಡಿಸಿ ವ್ಯಾಪಾರ ಮಾಡಬೇಕು ಎಂದು ದಾವಣಗೆರೆಯ ಒಬ್ಬ ಹುಡುಗ ಹೊರಟರೆ, ಆತನಿಗೆ ಆ ಉತ್ಪನ್ನದ ಐಡಿಯಾದ ಹಂತದಿಂದ ಹಿಡಿದು ಅದಕ್ಕಾಗಿ ಸಂಸ್ಥೆಯೊಂದನ್ನು ಸ್ಥಾಪಿಸುವ, ಉತ್ಪನ್ನವನ್ನು ಅಭಿವೃದ್ಧಿಪಡಿಸುವ, ಅದಕ್ಕೆ ಬೇಕಾದ ಬಂಡವಾಳ ಸಂಗ್ರಹಿಸುವ, ಅದನ್ನು ಮಾರುಕಟ್ಟೆಗೆ ತಂದು ಪ್ರಚುರಪಡಿಸುವ ಪ್ರತಿ ಹಂತದ ತಿಳಿವಳಿಕೆ ಹೊಂದುವುದನ್ನು ಎ.ಐ ಒಬ್ಬ ಆಪ್ತ ಸಹಾಯಕನ ರೂಪದಲ್ಲಿ ಬೆರಳ ತುದಿಯಲ್ಲೇ ಸಾಧ್ಯವಾಗಿಸುತ್ತದೆ.
ಸಾಫ್ಟ್‌ವೇರ್ ತಂತ್ರಜ್ಞಾನದ ಅಭಿವೃದ್ಧಿಗೆ ತಗಲುತ್ತಿದ್ದ ಬಹುದೊಡ್ಡ ವೆಚ್ಚ ಐ.ಟಿ ಉದ್ಯೋಗಿಗಳ ಸಂಬಳವಾಗಿತ್ತು. ಆದರೆ ಈಗ ಎ.ಐ ಬಹುಪಾಲು ತಂತ್ರಜ್ಞಾನ ಅಭಿವೃದ್ಧಿಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಧ್ಯವಾಗಿಸುವ ಕಾರಣಕ್ಕೆ, ದಾವಣಗೆರೆಯ ಹುಡುಗ ಈಗ ಇಡೀ ಜಗತ್ತಿಗೆ ತನ್ನ ಉತ್ಪನ್ನವನ್ನು ಮಾರಾಟ ಮಾಡುವಂತಹ ತಂತ್ರಜ್ಞಾನದ ಸಾಧ್ಯತೆಯನ್ನು ದಾವಣಗೆರೆಯಲ್ಲಿ ಕೂತೇ ರೂಪಿಸಬಹುದು. ಎ.ಐ ನುಡಿಮಾದರಿಗಳು ಸಹಜವಾದ ನುಡಿಯಲ್ಲಿ ಸೂಚನೆಗಳನ್ನು ಪಡೆದು, ಅತ್ಯಂತ ಕ್ಲಿಷ್ಟವಾದ ತಾಂತ್ರಿಕ ಕೆಲಸಗಳನ್ನು ಚುರುಕಾಗಿ ಮಾಡಿ ಮುಗಿಸುತ್ತವೆ. ಹೀಗಾಗಿ, ತಂತ್ರಜ್ಞಾನದ ಆಳವಾದ ತಿಳಿವಳಿಕೆ ಇಲ್ಲದ, ಸಾಫ್ಟ್‌ವೇರ್ ತಂತ್ರಾಂಶಗಳನ್ನು ಬರೆದ ಅನುಭವ ಇಲ್ಲದವರೂ ಈ ತಂತ್ರಜ್ಞಾನವನ್ನು ಬಳಸಿ ತಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳಬಹುದು. ತಿಳಿವಳಿಕೆಯನ್ನು ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಯಾರಿಗೆ ಬೇಕಿದ್ದರೂ ದೊರಕುವಂತೆ ಮಾಡಿರುವ ಈ ತಂತ್ರಜ್ಞಾನವನ್ನು ಸರಿಯಾದ ರೂಪದಲ್ಲಿ ಬಳಸಿಕೊಂಡು ನಮ್ಮ ಮಕ್ಕಳ ನೈಪುಣ್ಯ ಹೆಚ್ಚಿಸಬೇಕು ಮತ್ತು ಅವರು ಉದ್ಯಮಶೀಲ ಜಗತ್ತಿಗೆ ಧುಮುಕಿ ಹೊಸ ಉತ್ಪನ್ನ, ಹೊಸ ಸೇವೆಗಳನ್ನು ಸೃಷ್ಟಿಸಿ ಮುನ್ನುಗ್ಗುವಂತೆ ಮಾಡಬೇಕು.
ಜ್ಞಾನಾಧಾರಿತ ವಲಯಗಳಲ್ಲಿ ಕನ್ನಡಿಗ ಉದ್ಯಮಿ ಅನ್ನುವ ಗುರುತೊಂದನ್ನು ಗಟ್ಟಿಯಾಗಿ ರೂಪಿಸುವ ಅವಕಾಶ ಖಂಡಿತ ನಮ್ಮ ಮುಂದಿದೆ. ಈಗ ಶುರುವಾಗಿರುವ ಸುಂಕ ಸಮರ ಜಾಗತೀಕರಣದ ಸ್ವರೂಪ ಬದಲಾಗುತ್ತಿರುವುದನ್ನು ಸೂಚಿಸುತ್ತಿದೆ. ಮುಂದಿನ ಹತ್ತು ವರ್ಷಗಳು ಖಂಡಿತವಾಗಿಯೂ ಹಿಂದಿನ ಮೂವತ್ತು ವರ್ಷಗಳಂತೆ ಇರುವುದಿಲ್ಲ. ಈ ಅನಿಶ್ಚಿತವಾದ ಕಾಲಕ್ಕೆ ಬೇಕಿರುವ ಹೊಸ ಚರ್ಚೆ ಶುರು ಮಾಡೋಣವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.