ADVERTISEMENT

ವಿಶ್ಲೇಷಣೆ | ಜಾನುವಾರು ಗಣತಿ ಏಕೆ? ಹೇಗೆ?

ಗುರುರಾಜ್ ಎಸ್.ದಾವಣಗೆರೆ
Published 5 ಜನವರಿ 2025, 23:30 IST
Last Updated 5 ಜನವರಿ 2025, 23:30 IST
   

ದೇಶದಾದ್ಯಂತ ಜಾನುವಾರು ಗಣತಿ ನಡೆಯುತ್ತಿದೆ. 1919ರಲ್ಲಿ ಮೊದಲ ಬಾರಿಗೆ ಶುರುವಾದ ಜಾನುವಾರು ಗಣತಿಯು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುತ್ತಾ ಬಂದಿದ್ದು, ಈಗ 21ನೇ ಜಾನುವಾರು ಗಣತಿಯು 22 ರಾಜ್ಯಗಳಲ್ಲಿ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಗೊಂಡಿದೆ. ಈ ಗಣತಿಯು ಹಿಂದಿನ ಎಲ್ಲಾ ಜಾನುವಾರು ಗಣತಿಗಳಿಗಿಂತ ಅತ್ಯಂತ ವಿಶೇಷವೆನಿಸಿದ್ದು, ಪಶುಸಂಗೋಪನೆಯಲ್ಲಿ ತೊಡಗಿರುವ ಪಶುಪಾಲಕರ ಸಂಖ್ಯೆ ಎಷ್ಟು ಎಂಬುದನ್ನು ಪ್ರಥಮ ಬಾರಿಗೆ ಲೆಕ್ಕ ಹಾಕಲಿದೆ.

ಹೊಸದಾಗಿ ರೂಪಿಸಲಾಗಿರುವ ಮೊಬೈಲ್ ಆ್ಯಪ್ ಮೂಲಕ ನಡೆಯುತ್ತಿರುವ ಗಣತಿ ಕಾರ್ಯದಲ್ಲಿ ಎಮ್ಮೆ, ಕೋಣ, ಎತ್ತು, ಒಂಟೆ, ಕುದುರೆ, ಕುರಿ, ಕೋಳಿ, ಯಾಕ್, ಆಡು, ಕತ್ತೆ, ನಾಯಿ, ಮೊಲ, ಆನೆ, ಪೌಲ್ಟ್ರಿ ಕೋಳಿ, ಹುಂಜ, ಬಾತುಕೋಳಿ, ಎಮು, ಆಸ್ಟ್ರಿಚ್, ಮಿಥುನ್ (ಈಶಾನ್ಯ ಭಾರತದ ಎಮ್ಮೆತಳಿ), ಹಂದಿ, ಹೇಸರಗತ್ತೆ,  ಚಮರೀಮೃಗ, ಸಣ್ಣಕುದುರೆ, ಆಕಳು ಮತ್ತು ಹೋರಿಗಳ ಸಂಖ್ಯೆಯನ್ನು ಲೆಕ್ಕ ಹಾಕಲು, ತರಬೇತಿ ಪಡೆದ ಒಂದು ಲಕ್ಷ ಸಿಬ್ಬಂದಿ ಮನೆಮನೆಗೂ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಮೊದಲ ಬಾರಿಗೆ ಪಶುಪಾಲಕರ ಗಣತಿಗೆ ಮುಂದಾಗಿರುವ ಕೇಂದ್ರ ಪಶುಸಂಗೋಪನೆ ಮತ್ತು ಹೈನು
ಗಾರಿಕೆ ಸಚಿವಾಲಯವು ದೇಶದ 35 ನಾಗರಿಕ ಸೇವಾ ಸಂಘಟನೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವವರು ಇದುವರೆಗೆ ಮರೆತಿದ್ದ ಬೃಹತ್ ಸಮುದಾಯವನ್ನು ಜಾನುವಾರು ಗಣತಿಯಲ್ಲಿ ಸೇರಿಸಿರುವುದು ಆರ್ಥಿಕ ತಜ್ಞರಿಂದ ಪ್ರಶಂಸೆ ಪಡೆದಿದೆ. ಜೊತೆಗೆ ದೇಶದ ಜಿಡಿಪಿಗೆ ಶೇಕಡ 3ರಷ್ಟು ಕೊಡುಗೆ ನೀಡುತ್ತಿರುವ ಪಶುಸಂಗೋಪನಾ ವ್ಯವಸ್ಥೆಯ ಬಗ್ಗೆ ಇಷ್ಟು ವರ್ಷ ಗಮನ ನೀಡದೇ ಇದ್ದುದು ಅತ್ಯಂತ ದೊಡ್ಡ ತಪ್ಪು ಎಂಬ ಮಾತು ಜೋರಾಗಿ ಕೇಳಿಬಂದಿದೆ.

ADVERTISEMENT

ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಜಾನುವಾರು ಗಣತಿಯ ಜೊತೆಗೆ, ಪಶುಪಾಲಕರಲ್ಲಿ ಪುರುಷರೆಷ್ಟು ಮಹಿಳೆಯರೆಷ್ಟು, ಪಶುಪಾಲನೆಗೆ ಬೇಕಾದ ಮೂಲಭೂತ ಅಗತ್ಯಗಳೇನು, ವರ್ಷದ ಯಾವ ಋತುವಿನಲ್ಲಿ ಪಶುವಲಸೆ ನಡೆಯುತ್ತದೆ, ಎಂಥೆಂಥ ಪ್ರದೇಶಗಳಲ್ಲಿ ಮೇವು ದೊರಕುತ್ತದೆ ಎಂಬುದು ಪಶುಪಾಲಕರಿಗೆ ಹೇಗೆ ತಿಳಿಯುತ್ತದೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪಶುಪಾಲಕರು ತಮ್ಮ ಸಾಕುಪ್ರಾಣಿಗಳಿಗೆ ಆಹಾರ ಒದಗಿಸಲು ವರ್ಷವೊಂದಕ್ಕೆ ಎಷ್ಟು ಕಿಲೊಮೀಟರ್ ಸಂಚರಿಸುತ್ತಾರೆ, ಸಂಚರಿಸುವ ದಾರಿಯಲ್ಲಿ ಕುರಿ–ಮೇಕೆ ಹಾಕುವ ಹಿಕ್ಕೆ, ಪಶುಗಳು ಹಾಕುವ ಸಗಣಿಯ ಪ್ರಮಾಣವೆಷ್ಟು, ಹೊಮ್ಮಿಸುವ ಮೀಥೇನ್ ಅನಿಲದ ಪ್ರಮಾಣ ಎಷ್ಟು ಎಂಬುದರ ಬಗ್ಗೆ ನಿಖರ ಅಧ್ಯಯನಗಳಾಗಿಲ್ಲ. ಜಾನುವಾರು ಗಣತಿ ನಡೆಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿ, ಗಣತಿಯ ಕ್ರಮದ ಕುರಿತು ಅಗತ್ಯ ತರಬೇತಿ ನೀಡಲಾಗಿದೆ. ರಾಜ್ಯ ಸಮಿತಿಯಲ್ಲಿ ಪಶುಸಂಗೋಪಕರ ಪ್ರತಿನಿಧಿಯೊಬ್ಬರು ಇರುತ್ತಾರೆ. ಜಿಲ್ಲಾವಾರು ಸಮೀಕ್ಷೆಯ ಮುಖ್ಯಸ್ಥರು ಗಣತಿಕಾರರನ್ನು ನಿರಂತರವಾಗಿ ಸಂಪರ್ಕದಲ್ಲಿ ಇರಿಸಿ ಕೊಂಡು, ವಾರದ ಯಾವ ಯಾವ ದಿನ ಊರಿನಲ್ಲಿ ಪಶುಪಾಲಕರು ಹಾಗೂ ಪಶುಗಳ ಸಂಖ್ಯೆ ಹೆಚ್ಚಾಗಿರುತ್ತದೆ ಎಂಬ ಮಾಹಿತಿ ನೀಡಿ ಗಣತಿ ಕಾರ್ಯಕ್ಕೆ ನೆರವಾಗುತ್ತಾರೆ. ಪಶುಪಾಲಕರನ್ನು ಸಮಾಜದ ಯಾವ ವರ್ಗಕ್ಕೆ ಸೇರಿಸು ವುದು ಎಂಬ ಬಗ್ಗೆ ಗೊಂದಲಗಳಿದ್ದುದರಿಂದ ಅವರ ಗಣತಿ ವಿಳಂಬವಾಯಿತು ಎಂಬ ಮಾತಿದೆ. ಈಗ ಪಶುಪಾಲಕರನ್ನು ಸಾಂಪ್ರದಾಯಿಕ ಸಮುದಾಯವೆಂದು ಪರಿಗಣಿಸಲಾಗಿದೆ. ಗಣತಿಯ ಜೊತೆ ಜೊತೆಗೆ ಪಶುಗಳ ಜೀವ ಮತ್ತು ಆರೋಗ್ಯ ವಿಮೆಯ ಕಡೆಗೂ ಗಮನ ಹರಿಸ ಲಾಗುತ್ತಿರುವುದು ಶ್ಲಾಘನೀಯ ಸಂಗತಿಯೇ ಸರಿ.

ಅತ್ಯವಶ್ಯವಾದ ಜನಗಣತಿಯು 2021ರಲ್ಲಿ ನಡೆಯಬೇಕಿತ್ತು. ಅದನ್ನು ಮಾಡಲು ಇನ್ನೂ ಸಾಧ್ಯವಾಗಿಲ್ಲ. ಈ ನಡುವೆ ಜಾನುವಾರು ಗಣತಿಗೆ ಏಕೆ ಇಷ್ಟೊಂದು ಮಹತ್ವ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಅದಕ್ಕೆ ಕಾರಣ ಇದೆ. ಪ್ರಮುಖವಾಗಿ ಪ್ರಾಣಿಗಳಿಗೆ ಆಹಾರ ಅರಸಿ ಪ್ರತಿವರ್ಷ ಬೃಹತ್ ಸಂಖ್ಯೆಯ ಪಶುಪಾಲಕರು ನಿಯಮಿತವಾಗಿ ತಮ್ಮ ಪ್ರಾಣಿಗಳೊಂದಿಗೆ ದೇಶದ ಒಂದು ಭೌಗೋಳಿಕ ಪರಿಸರದಿಂದ ಇನ್ನೊಂದಕ್ಕೆ ವಲಸೆ ಹೋಗುತ್ತಾರೆ. ಹಲವಾರು ವರ್ಷಗಳಿಂದ ಈ ಕೆಲಸದಲ್ಲಿ ನಿರತರಾಗಿರುವ ಜನರನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ಯಾವ ಪ್ರಯತ್ನವೂ ಇದುವರೆಗೆ ನಡೆದಿರಲಿಲ್ಲ. ದೇಶದ ಹೈನುಗಾರಿಕೆ, ಮಾಂಸೋದ್ಯಮ ಮತ್ತು ವಾಯುಗುಣ ಏರಿಳಿತಕ್ಕೆ ತನ್ನದೇ ಕೊಡುಗೆ ನೀಡುತ್ತಿರುವ ಪಶುಪಾಲಕರ ಕುರಿತು ಯಾವುದೇ ಖಚಿತ ಮಾಹಿತಿ ನಮ್ಮಲ್ಲಿ ಈಗಲೂ ಇಲ್ಲ.

ಪಶುಗಳು ಮೇಯುವ ಜಾಗಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಅದು ಶಾಖವರ್ಧಕ ಅನಿಲವಾದ ಇಂಗಾಲದ ಡೈಆಕ್ಸೈಡ್ ಅನ್ನು ನೈಸರ್ಗಿಕವಾಗಿ ಹಿಡಿದಿಟ್ಟುಕೊಂಡು ವಾಯುಗುಣ ಏರುಪೇರು ನಿಯಂತ್ರಣಕ್ಕೆ ದೊಡ್ಡ ಕೊಡುಗೆ ನೀಡುತ್ತದೆ ಎಂಬುದು ಪರಿಸರ ವಿಶ್ಲೇಷಕರ ವಾದ. ಹುಲ್ಲುಗಾವಲುಗಳು ದೊಡ್ಡ ಕಾರ್ಬನ್ ಸಿಂಕ್‌ಗಳಂತೆ ಕೆಲಸ ಮಾಡುವುದು ನಮಗೆ ಗೊತ್ತೇ ಇದೆ. ವಾಸ್ತವದಲ್ಲಿ ನೂರಾರು ದನ– ಕುರಿಗಳು ಮೇಯುವುದರಿಂದ ವಾರ್ಷಿಕ ಶೇಕಡ 35ರಷ್ಟು ಮಣ್ಣಿನ ಸವಕಳಿ ಆಗುತ್ತದೆ ಎಂಬ ವರದಿ ಇದೆ. ಹಿಂದಿನ ಶತಮಾನದ ಕೊನೆಯಲ್ಲಿ ಪಶ್ಚಿಮ ಘಟ್ಟದ ಪ್ರದೇಶಗಳ ಬಳಿ ಕುರಿಗಾಹಿಗಳು ಸಾವಿರಾರು ಕುರಿಗಳನ್ನು ಮೇಯಿಸಲು ಬರುವುದನ್ನು ಪರಿಸರಪ್ರೇಮಿಗಳು ತೀವ್ರವಾಗಿ ವಿರೋಧಿಸುತ್ತಿದ್ದರು. ಒಂದೆಡೆ, ಶೇ 14.6ರಷ್ಟು ಶಾಖವರ್ಧಕ ಅನಿಲಗಳನ್ನು ಹೊಮ್ಮಿಸಿ ಭೂಮಿಯ ಬಿಸಿ ಏರಿಸುವ ಜಾನುವಾರುಗಳು, ಇನ್ನೊಂದೆಡೆ, ತಮ್ಮ ಸಗಣಿ ಮತ್ತು ಗಂಜಲದಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.

2019ರಲ್ಲಿ ಜರುಗಿದ ಗಣತಿಯಲ್ಲಿ, ಆಗ ದೇಶದಲ್ಲಿ 53.67 ಕೋಟಿ ಜಾನುವಾರುಗಳಿವೆ ಎಂಬ ಮಾಹಿತಿ ದೊರಕಿತ್ತು. 51.41 ಕೋಟಿ ಜಾನುವಾರುಗಳು ಗ್ರಾಮೀಣ ಪ್ರದೇಶದಲ್ಲಿದ್ದರೆ 2.26 ಕೋಟಿ ಜಾನುವಾರುಗಳು ನಗರ ಪ್ರದೇಶಗಳಲ್ಲಿ ಇವೆ. ಒಟ್ಟು ದನಗಳ ಪೈಕಿ 5.13 ಕೋಟಿ ದೇಸಿ ತಳಿ ಮತ್ತು 14.2 ಕೋಟಿ ಹೈಬ್ರಿಡ್ ತಳಿಗಳಿವೆ. 19.34 ಕೋಟಿ ದನ, 10.98 ಕೋಟಿ ಎಮ್ಮೆ, 7.5 ಕೋಟಿ ಕುರಿ, 14.8 ಕೋಟಿ ಆಡು, 1.5 ಕೋಟಿ ಬೀದಿನಾಯಿ, 90 ಲಕ್ಷ ಹಂದಿ, 3.5 ಲಕ್ಷ ಕುದುರೆ, 2.5 ಲಕ್ಷ ಒಂಟೆ... ಹೀಗೆ 16 ಪ್ರಭೇದಗಳಿಗೆ ಸೇರಿದ ಜಾನುವಾರುಗಳು ದೇಶದಲ್ಲಿವೆ. ಹತ್ತು ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆ ಶೇ 4.6ರ ಪ್ರಮಾಣದ ಏರಿಕೆ ಕಂಡಿದೆ.

ಮನೆಗಳಲ್ಲಿ ಸಾಕಲಾಗಿರುವ ಪ್ರಾಣಿಗಳ ಗಣತಿ ಮಾಡುವುದು ಸುಲಭ. ಸದಾ ವಲಸೆಯಲ್ಲಿರುವ ಪ್ರಾಣಿಗಳನ್ನು ಹೇಗೆ ಎಣಿಕೆ ಮಾಡಲಾಗುತ್ತದೆ ಎಂಬ ಬಗ್ಗೆ ಕುತೂಹಲವಿದೆ. ಅದಕ್ಕಾಗಿ ಸರ್ಕಾರವು ನಾಗರಿಕ ಸಂಘಟನೆಗಳಾದ ಸಹಜೀವನ್, ಸೆಂಟರ್ ಫಾರ್ ಪ್ಯಾಸ್ಟೋರಲಿಸಂ, ವಾಟರ್‌ಶೆಡ್ ಸಪೋರ್ಟ್ ಸರ್ವಿಸಸ್ ಆ್ಯಂಡ್ ಆ್ಯಕ್ಟಿವಿಟೀಸ್ ನೆಟ್‌ವರ್ಕ್ (ವಾಸನ್), ಫೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ (ಎಫ್ಇಎಸ್) ಹಾಗೂ ಹಲವು ಗ್ರಾಮೀಣ ಯುವಕರ ಸಂಘಟನೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಯಾವುದೇ ಹಂತ ಮತ್ತು ರೀತಿಯಲ್ಲೂ ಗ್ರಾಮ ಪಂಚಾಯಿತಿಗಳನ್ನು ಬಳಸಿಕೊಳ್ಳದೆ ನೇರವಾಗಿ ಪಶುಚಿಕಿತ್ಸಾಲಯದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಜಾನುವಾರು ಗಣತಿಯ ಅಧಿಕಾರ ವಹಿಸಲಾಗಿದೆ.

ಇನ್ನು ಮುಂದೆ ಪಶುಸಂಗೋಪನಾ ಇಲಾಖೆ ಕೈಗೊಳ್ಳುವ ಪ್ರತಿ ಯೋಜನೆಯೂ ಪಶುಪಾಲಕರನ್ನು
ಗಮನದಲ್ಲಿ ಇರಿಸಿಕೊಂಡು ರೂಪುಗೊಳ್ಳುತ್ತದೆ ಎಂಬ ನಿರ್ಧಾರವು ಇಲಾಖೆಯ ಅಭಿವೃದ್ಧಿ ಕೆಲಸಗಳಿಗೆ ಹೊಸ ದಿಕ್ಸೂಚಿಯಾಗಲಿದೆ. ಜಾನುವಾರು ಪೋಷಣೆ ಮಾಡುವವರ ಒಟ್ಟು ಸಂಖ್ಯೆ ಎಷ್ಟು ಎಂಬ ಖಚಿತ ಮಾಹಿತಿಯ ಸಲುವಾಗಿ ದೇಶವ್ಯಾಪಿ ಕಾರ್ಯಕ್ರಮ ರೂಪಿಸಿರುವ ಕೇಂದ್ರ ಸರ್ಕಾರವು ದೇಶದ ಯಾವ ಯಾವ ಭಾಗಗಳಲ್ಲಿ ಪಶುಪಾಲನೆ ಸಮರ್ಪಕವಾಗಿ ನಡೆಯುತ್ತಿದೆ ಎಂಬುದನ್ನು ಪತ್ತೆಹಚ್ಚಲು ನಿರ್ಧರಿಸಿದೆ. ಹಾಲಿನ ಉತ್ಪನ್ನ ಮತ್ತು ಮಾಂಸ ಎರಡಕ್ಕೂ ದೊಡ್ಡ ಮಾರುಕಟ್ಟೆ ಸೃಷ್ಟಿಸಿರುವ ಜಾನುವಾರುಗಳು ಅತಿಹೆಚ್ಚಿನ ಶಾಖವರ್ಧಕ ಅನಿಲವಾದ ಮೀಥೇನನ್ನು ವಾತಾವರಣಕ್ಕೆ ಹೊಮ್ಮಿಸುತ್ತಿರುವುದು ಪರಿಸರ ವಿಜ್ಞಾನಿಗಳ ನಿದ್ದೆಗೆಡಿಸಿದೆ.

ಸಂತಾನೋತ್ಪತ್ತಿಯ ಅವಧಿ ಮೀರಿದ ಮತ್ತು ಕಾಯಿಲೆ ಬಿದ್ದಿರುವ ಜಾನುವಾರುಗಳನ್ನು ಗೋಶಾಲೆಗಳಲ್ಲಿ
ನೋಡಿಕೊಳ್ಳಲಾಗುತ್ತದೆಯಾದರೂ ಅವುಗಳ ಸಂಖ್ಯೆ ಒಟ್ಟು ಜಾನುವಾರುಗಳ ಸಂಖ್ಯೆಯ ಎದುರು ಅತ್ಯಂತ ಕಡಿಮೆಯೆ. ದನದ ಮಾಂಸ ಮಾರಾಟವು ದೇಶದ ಎಲ್ಲಾ ರಾಜ್ಯಗಳಲ್ಲಿ ನಿಷೇಧಗೊಂಡಿಲ್ಲವಾದ್ದರಿಂದ ಬೃಹತ್ ಸಂಖ್ಯೆಯ ಜಾನುವಾರುಗಳು ಕಸಾಯಿಖಾನೆ ಸೇರುತ್ತಿರುವುದು ಸುಳ್ಳಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.