
‘ಗುರು ಪರಂಪರೆ’ಗೆ ತಿಲಕಪ್ರಾಯದಂತೆ ಇರುವ ನಾರಾಯಣಗುರು ಅವರನ್ನು ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಮಹಾತ್ಮ ಗಾಂಧೀಜಿ ಅವರು ಭೇಟಿ ಮಾಡಿ ನೂರು ವರ್ಷಗಳು ತುಂಬಿವೆ. ಭಾರತದ ಸಾಮಾಜಿಕ ಚರಿತ್ರೆಯ ಆ ಅಪೂರ್ವ ವಿದ್ಯಮಾನಗಳ ಅವಲೋಕನಕ್ಕೆ, ವರ್ತಮಾನದ ತವಕ ತಲ್ಲಣಗಳಿಗೆ ಉತ್ತರಗಳನ್ನು ದೊರಕಿಸಿಕೊಡುವ ಶಕ್ತಿಯಿದೆ.
ಸಾಮಾಜಿಕ ಬದಲಾವಣೆಯನ್ನು ಹಂಬಲಿಸುವ ಎಲ್ಲರಿಗೂ, ಕೇರಳವನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ನಾರಾಯಣಗುರು ಅವರು ನಡೆಸಿದ ಪ್ರಯೋಗಗಳು ಎಲ್ಲ ಕಾಲಕ್ಕೂ ದಾರಿದೀಪದಂತಿವೆ. ಗುರುಗಳು ರೂಪಿಸಿದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಆಂದೋಲನಗಳು ಭಾರತಕ್ಕೆ ದಿಕ್ಕುದೆಸೆ ತೋರಿಸುವಂತಿವೆ.
ಕೇರಳದಲ್ಲಿ ಪೊಲೆಯ, ಪರಯ ಮುಂತಾದ, ‘ಅಸ್ಪೃಶ್ಯ’ ಎಂದು ಕರೆಸಿಕೊಂಡ ಸಮುದಾಯಗಳನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುತ್ತಿದ್ದ ದಿನಗಳಿದ್ದವು. ಸೂರ್ಯ ಹುಟ್ಟುವ–ಮುಳುಗುವ ಹೊತ್ತಿನಲ್ಲಿ ಅವರ ನೆರಳು ಸವರ್ಣೀಯರಿಗೆ ತಾಕಿದರೆ ಮೈಲಿಗೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಅವರ ಸಂಚಾರಕ್ಕೆ ನಿರ್ಬಂಧಗಳಿದ್ದವು. ಅವರು ತಮ್ಮ ಉಗುಳನ್ನು ಸೊಂಟಕ್ಕೆ ಕಟ್ಟಿಕೊಂಡ ಮಡಿಕೆಗಳಲ್ಲಿ ಉಗಿದುಕೊಳ್ಳಬೇಕಾಗಿತ್ತು. ಇಂಥ ದುಃಸ್ಥಿತಿಗಿಂತ ನೂಲಿನಷ್ಟು ಮೇಲಿದ್ದ ಕೇರಳದ ಈಳವ ಸಮುದಾಯದ ಬದುಕು ಕೂಡ ಅಸಹನೀಯವೇ ಆಗಿತ್ತು. ಜಾತಿ ಕಾರಣದಿಂದಾಗಿ ಮುಖ್ಯವಾಹಿನಿಯ ಪಾಲಿಗೆ ನಿಕೃಷ್ಟರಾಗಿದ್ದ ಸಮುದಾಯಗಳಲ್ಲಿ ಅರಿವು ಮತ್ತು ಆತ್ಮಗೌರವ ತುಂಬಿದ್ದು ನಾರಾಯಣಗುರು ಅವರ ಪ್ರಮುಖ ಸಾಧನೆ.
ಕೇರಳದಲ್ಲಿ ಅಸ್ಪೃಶ್ಯ ಪದ್ಧತಿಯನ್ನು ಕಂಡು ನೊಂದುಕೊಂಡಿದ್ದ ಸ್ವಾಮಿ ವಿವೇಕಾನಂದರು, ‘ಇದೊಂದು ಹುಚ್ಚರ ಸಂತೆ’ ಎಂದಿದ್ದರು. ಆ ಹುಚ್ಚರ ಸಂತೆಯಲ್ಲಿ ಜಾಗೃತಿ ಉಂಟಾಗಿ, ಕೆಳವರ್ಗಗಳು ಸುಧಾರಣೆಗೊಂಡು, ಶಿಕ್ಷಣ ಪಡೆದು, ಘನತೆಯಿಂದ ಬದುಕುವ ಸ್ಥಿತಿ ರೂಪುಗೊಂಡಿರುವಲ್ಲಿ ನಾರಾಯಣಗುರು ಅವರ ಪಾತ್ರ ಮಹತ್ವದ್ದು.
ನಾರಾಯಣಗುರು ಜನಿಸಿದ್ದು ಈಳವ ಸಮಾಜದಲ್ಲಿ. ಜಾತಿಶ್ರೇಣಿಗಳಲ್ಲಿ ಸಾವಿರಾರು ಕಾಲುಗಳು ತಮ್ಮ ತಲೆಯ ಮೇಲಿದ್ದರೂ ಸಹಿಸುವ, ಕಾಲಿಡಲು ಒಂದು ತಲೆಸಿಕ್ಕರೂ ತನ್ನ ಮೇಲರಿಮೆ ಪ್ರದರ್ಶಿಸಲು ಮುಂದಾಗುವ ಸಾಮಾಜಿಕ ವ್ಯವಸ್ಥೆಯಲ್ಲಿ ಅವರು ಸಹಜವಾಗಿಯೇ ಅವಮಾನಗಳನ್ನು ಎದುರಿಸಬೇಕಾಯಿತು. ಆದರೆ, ಅವಮಾನಗಳಿಂದ ಎದೆಗುಂದದೆ, ಅವುಗಳಿಗೆ ವೈಚಾರಿಕತೆಯ ಮೂಲಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದರು. ಮಲಯಾಳ, ತಮಿಳು, ಸಂಸ್ಕೃತ ಭಾಷೆಯಲ್ಲಿನ ಸಾಹಿತ್ಯದ ಗಾಢ ಅಧ್ಯಯನ ನಡೆಸಿದರು. ಆ ಮೂಲಕ ಅಪಾರ ಜ್ಞಾನ ಸಂಪತ್ತು ಗಳಿಸಿದರು. ಯಾವ ಧಾರ್ಮಿಕ ಸಂಪ್ರದಾಯಗಳನ್ನು ಮುಂದಿಟ್ಟುಕೊಂಡು ಕೆಳಸಮುದಾಯಗಳನ್ನು ಮೌಢ್ಯದಲ್ಲಿಡಲಾಗಿತ್ತೋ, ಅದೇ ಧರ್ಮವನ್ನು ತಮ್ಮ ಶಕ್ತಿಯನ್ನಾಗಿಸಿಕೊಂಡು, ದಮನಿತರನ್ನು ಒಂದುಗೂಡಿಸಲು ಪ್ರಯತ್ನಿಸಿದರು.
ಮೌಢ್ಯಗಳಿಂದ ಹೊರತಾದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ನೆಲೆಗಟ್ಟಿನ ದೇವಾಲಯಗಳನ್ನು ದಮನಿತರಿಗಾಗಿ ರೂಪಿಸಿಕೊಟ್ಟರು. ಈಳವ ಸಮಾಜ ಸೇರಿದಂತೆ ಕೆಳಸಮುದಾಯಗಳಿಗಾಗಿ, ಪ್ರಕೃತಿಯ ಮಡಿಲಲ್ಲಿ ಮಂದಿರಗಳನ್ನು ಸ್ಥಾಪಿಸಿದರು. ಆ ಮಂದಿರಗಳಿಗೆ ಅಸ್ಪೃಶ್ಯ ಎನ್ನಿಸಿಕೊಂಡ ಸಮುದಾಯಗಳಿಗೆ ಪ್ರವೇಶ ದೊರಕಿಸಿಕೊಡುವ ಮೂಲಕ, ಅವರಿಗೆ ಅಧ್ಯಾತ್ಮದ ಸ್ಪರ್ಶ ನೀಡಿದರು, ನೈತಿಕ ಧೈರ್ಯ ತುಂಬಿದರು.
ದೇವರು ನಮ್ಮ ಆತ್ಮದಲ್ಲಿಯೇ ಇದ್ದಾನೆ. ಕೆಳಸಮುದಾಯಗಳನ್ನು ಮೌಢ್ಯದಲ್ಲಿ ಮುಳುಗಿಸಿ ಶೋಷಿಸುತ್ತ, ಅರ್ಥವಿಲ್ಲದ ಡಾಂಭಿಕ ಪೂಜೆಗಳಿಂದ ದೇವರನ್ನು ಕಾಣಲು ಸಾಧ್ಯವಿಲ್ಲ. ಪವಿತ್ರಸ್ಥಳ ಎಂದು ಭ್ರಮಿಸಿ ದೂರದ ಸ್ಥಳಗಳಿಗೆ ದುಂದುವೆಚ್ಚದಿಂದ ಹೋಗಬೇಕಾಗಿಲ್ಲ ಎಂಬ ತಿಳಿವಳಿಕೆಯನ್ನು ಮುಗ್ಧ ಸಮುದಾಯಗಳಿಗೆ ಮನಮುಟ್ಟುವಂತೆ ನೀಡಿದರು. ದೈವವನ್ನು ಕಾಣುವ ಸರಳಮಾರ್ಗಗಳನ್ನು ತಿಳಿಹೇಳುತ್ತ, ‘ಒರುಧರ್ಮ, ಒರುಕುಲ, ಒರುಮತ’ ಎಂಬುದನ್ನು ಸ್ಪಷ್ಟವಾಗಿ ಮನದಟ್ಟು ಮಾಡಿದರು.
ಒಮ್ಮೆ ಕೇರಳದ ಇಡುಕ್ಕಿಯಲ್ಲಿದ್ದ ದೇವಾಲಯದ ಬಗ್ಗೆ ಈಳವ ಸಮಾಜದ ಇಬ್ಬರು ಮುಖಂಡರಿಗಿದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಸಭೆಯೊಂದು ನಡೆಯಿತು. ಜನರು ಕಿಕ್ಕಿರಿದು ಸೇರಿದ್ದ ಆ ಸಭೆಯಲ್ಲಿ, ದೂರದಲ್ಲಿ ನಿಂತ ಕೆಲವರು ಆಸೆಗಣ್ಣಿನಿಂದ ತಮ್ಮತ್ತ ನೋಡುತ್ತಿರುವುದನ್ನು ನಾರಾಯಣಗುರು ಗಮನಿಸಿದರು. ಅಲ್ಲಿ ನಿಂತಿರುವ ಜನರು ಯಾರು? ಯಾಕೆ ಅವರು ಅಷ್ಟು ದೂರದಲ್ಲಿ ನಿಂತಿದ್ದಾರೆ? ಎಂದು ಗುರುಗಳು ಸಭೆಯನ್ನು ಪ್ರಶ್ನಿಸಿದಾಗ, ಭಿನ್ನಾಭಿಪ್ರಾಯವಿದ್ದ ಈಳವ ಮುಖಂಡರಿಬ್ಬರೂ– ‘ಅವರು ಪೊಲೆಯ ಜಾತಿಯವರು. ಇಲ್ಲಿಗೆ ಬರುವಂತಿಲ್ಲ’ ಎಂದು ಒಕ್ಕೊರಲಿನಿಂದ ಹೇಳಿದರು. ಆ ಉತ್ತರದಿಂದ ಗುರುಗಳು ದುಃಖಿತರಾದರು. ‘ದೂರದಲ್ಲಿ ನಿಂತಿರುವವರನ್ನು ಕರೆಯಿರಿ, ಈ ಸಭೆಯಲ್ಲಿ ಅವರೂ ಪಾಲ್ಗೊಳ್ಳಲಿ’ ಎಂದು ಹೇಳಿದರು. ಗುರುಗಳ ಮಾತಿಗೆ ಮುಖಂಡರು ಒಪ್ಪಲಿಲ್ಲ. ಪೊಲೆಯರು ನಮ್ಮ ಸಭೆಗೆ ಬರುವಂತಿಲ್ಲ ಎನ್ನುವ ಹಟ ಅವರದು. ಆಗ ನಾರಾಯಣಗುರು, ‘ಆ ಜನರನ್ನು ದೂರವಿಡಲು ನೀವಿಬ್ಬರೂ ಒಂದಾಗಿದ್ದೀರಲ್ಲ!’ ಎಂಬ ವಿಷಾದದ ಮಾತುಗಳನ್ನಾಡಿ, ‘ಆ ನಮ್ಮ ಸಹಜೀವಿಗಳನ್ನು ಕರೆಸಿ ಈ ಸಭೆಯಲ್ಲಿ ಪಾಲ್ಗೊಳ್ಳಲು ನೀವು ಅವಕಾಶ ನೀಡಬೇಕು, ಇಲ್ಲದಿದ್ದರೆ ನಾನು ಈ ಸಭೆಯಲ್ಲಿರಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು. ಕೊನೆಗೆ, ಆ ಮುಖಂಡರಿಬ್ಬರು ನಾರಾಯಣಗುರು ಅವರಲ್ಲಿ ಕ್ಷಮೆ ಕೋರಿದರು. ಗುರುಗಳ ಆಶಯದಂತೆ ಪೊಲೆಯ ಜನರನ್ನು ಸಭೆಗೆ ಕರೆಸಲಾಯಿತು. ಅಲ್ಲಿ ನೆರೆದಿದ್ದ ಜನರಿಗೆ, ‘ಅಸ್ಪೃಶ್ಯತೆಯ ಆಚರಣೆ ಅಮಾನವೀಯ. ನಮ್ಮೆಲ್ಲರ ಮೈಯಲ್ಲೂ ಹರಿಯುವುದು ಒಂದೇ ರಕ್ತವಲ್ಲವೇ?’ ಎಂದು ತಿಳಿಹೇಳಿದರು. ಈಳವ ಸಮಾಜದ ಮುಖಂಡರಿಬ್ಬರಿಗೂ ನಿಜಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟರು. ಮತ ಸುಧಾರಣೆಯ ಕೆಲಸಕ್ಕೆ ಅವರಿಬ್ಬರನ್ನೇ ನೇಮಿಸಿದರು. ಈ ಬಗೆಯ ನೂರಾರು, ಸಾವಿರಾರು ಕೆಲಸಗಳನ್ನು ನಾರಾಯಣಗುರು ಅವರು ಮಾಡಿರುವುದನ್ನು ಕೇರಳ ಪ್ರವಾಸ ಮಾಡಿದಾಗ, ನನ್ನ ಕ್ಷೇತ್ರಕಾರ್ಯದ ಅನುಭವಗಳಲ್ಲಿ ಕಂಡಿದ್ದೇನೆ. ನಾರಾಯಣಗುರು ಅವರು ನಡೆಸಿದ ಆಂದೋಲನ, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಕನ್ನಡನಾಡಿನಲ್ಲಿ ಮಾಡಿದ ಧಾರ್ಮಿಕ ಆಂದೋಲನದಷ್ಟೇ ಮಹತ್ವದ್ದಾಗಿದೆ.
ಮಾನಸಿಕ ಸ್ವಚ್ಛತೆಯ ಮೂಲಕ ಮಾನವಜೀವಿಗಳು ಒಗ್ಗೂಡಿ ಬೆರೆಯುವಂಥ ಧಾರ್ಮಿಕ ಶ್ರದ್ಧೆಯ ಮಾನವೀಯ ಕೆಲಸಗಳನ್ನು, ಸಂತವ್ಯಕ್ತಿತ್ವದ ನಾರಾಯಣಗುರು ನಡೆಸಿದರು. ಕೇರಳ ರಾಜ್ಯದಾದ್ಯಂತ ನಿರಂತರವಾಗಿ ಬಹುದೊಡ್ಡ ಸಾಮಾಜಿಕ ಆಂದೋಲನವನ್ನೇ ರೂಪಿಸಿದರು. ಅದರಿಂದ ಕೆಳಸಮುದಾಯಗಳು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಕೊಂಚವಾದರೂ ಸಹನೀಯ ಬದುಕು ನಡೆಸುವಂತಾಗಿದೆ.
ನಾರಾಯಣಗುರು ಅವರು ಸ್ಥಾಪಿಸಿರುವ ಪ್ರಕೃತಿಯ ನಡುವಿನ ಆಧ್ಯಾತ್ಮಿಕ ಧ್ಯಾನಕೇಂದ್ರಗಳಲ್ಲಿ, ತಿರುವನಂತಪುರದಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿರುವ, ಬೆಟ್ಟಗುಡ್ಡಗಳಿಂದ ಆವೃತವಾಗಿರುವ, ನದಿಗಳ ಸಂಗಮವಾಗಿರುವ ವರ್ಕೆಲದಲ್ಲಿರುವ ‘ಶಿವಗಿರಿಮಠ’ ಮುಖ್ಯವಾದುದು. ಪ್ರಕೃತಿಯ ಮಡಿಲಲ್ಲಿರುವ ಶಿವಗಿರಿಮಠದಲ್ಲಿ ನಾರಾಯಣಗುರು ಅವರ ಸಮಾಧಿಯೂ ಇದೆ. ಅಲ್ಲಿಗೆ ದೇಶ–ವಿದೇಶಗಳ, ಜೀವಪರ ನಿಲುವಿನ ಅಸಂಖ್ಯ ಪ್ರಾಜ್ಞರು ಭೇಟಿ ನೀಡುತ್ತಾರೆ. ಧ್ಯಾನಕೇಂದ್ರವಾಗಿಯೂ ಪ್ರಸಿದ್ಧವಾಗಿರುವ ವರ್ಕೆಲದ ಈ ಶಿವಗಿರಿಮಠಕ್ಕೆ ಭೇಟಿ ನೀಡಿರುವವರಲ್ಲಿ– ಕವಿ ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧೀಜಿ, ರಮಣ ಮಹರ್ಷಿ, ಸಿ. ರಾಜಗೋಪಾಲಚಾರಿ, ವಿ.ವಿ. ಗಿರಿ, ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಮುಂತಾದವರು ಸೇರಿದ್ದಾರೆ. ಶಿವಗಿರಿ ಪರಿಸರದಲ್ಲಿ ಜೀವಿಸಿದ ಧ್ಯಾನಿಸಿದ ನಾರಾಯಣಗುರು ಅವರು– ಮಲಯಾಳ, ತಮಿಳು ಹಾಗೂ ಇಂಗ್ಲಿಷ್‌ನಲ್ಲಿ ಜನಸಾಮಾನ್ಯರಿಗೆ ತಲಪುವಂತಹ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಆ ಕೃತಿಗಳು ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ, ಇಂಗ್ಲಿಷ್, ಫ್ರೆಂಚ್, ಜರ್ಮನ್ ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ.
ನಾರಾಯಣಗುರು ಅವರ ಶಿಷ್ಯರಾದ ಸ್ವಾಮಿ ಧರ್ಮತೀರ್ಥ, ಸ್ವಾಮಿ ಆನಂದತೀರ್ಥ, ಮಲಯಾಳದ ಮಹಾಕವಿ ಕುಮಾರನ್ ಆಶಾನ್, ಡಾ. ಪದ್ಮನಾಭ ಪಲ್ಪು, ಪ್ರೊ. ಜೋಸೆಫ್ ಮುಂಡಶ್ಯೇರಿ ಮುಂತಾದವರು ‘ಶ್ರೀನಾರಾಯಣಗುರು ಧರ್ಮ ಪರಿಪಾಲನಂ’ ಎಂಬ ಸಂಘ ಸ್ಥಾಪಿಸಿ, ನಾರಾಯಣಗುರು ಅವರ ದಟ್ಟ ಮಾನವಪ್ರೀತಿಯ ಕೆಲಸಗಳು ಜೀವಂತವಾಗಿರಲು ಶ್ರಮಿಸಿರುವುದರ ಕುರುಹುಗಳನ್ನು ಈಗಲೂ ಕಾಣಬಹುದಾಗಿದೆ.
ರವೀಂದ್ರನಾಥ ಟ್ಯಾಗೋರ್ ಅವರು 1922ರ ನವೆಂಬರ್ 22ರಂದು ಶಿವಗಿರಿಮಠದಲ್ಲಿ ನಾರಾಯಣಗುರು ಅವರನ್ನು ಭೇಟಿ ಮಾಡಿದ್ದರು. ‘ನಾನು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಪ್ರವಾಸ ಮಾಡಿದ್ದೇನೆ. ಆ ಪ್ರವಾಸಗಳಲ್ಲಿ ನನಗೆ ಹಲವಾರು ಸಂತರು, ಮಹರ್ಷಿಗಳನ್ನು ಭೇಟಿಯಾಗುವ ಅವಕಾಶ ದೊರೆತಿದೆ. ನಾನು ಪ್ರಾಮಾಣಿಕವಾಗಿ ಹೇಳಬೇಕಾದ ಒಂದು ವಿಷಯ ಏನೆಂದರೆ, ಕೇರಳದ ನಾರಾಯಣಗುರುಗಳಿಗಿಂತ ಆಧ್ಯಾತ್ಮಿಕವಾಗಿ ದೊಡ್ಡವರು ಯಾರೂ ಇಲ್ಲ. ಗುರುಗಳಂತೆ ಆಧ್ಯಾತ್ಮಿಕ ಸಾಧನೆ ಇರುವ ಯಾರನ್ನೂ ನಾನು ನನ್ನ ಜೀವನದಲ್ಲಿ ಕಂಡೇ ಇಲ್ಲ. ದೈವೀ ಬೆಳಕಿನ ವೈಭವವೇ ಪ್ರಕಾಶಿಸುತ್ತಿರುವ ಆ ಮುಖವನ್ನು ಮತ್ತು ದೂರದ ದಿಗಂತ ಬಿಂದುವನ್ನೇ ದಿಟ್ಟಿಸಿರುವ ಯೋಗಿಯ ಆ ಕಣ್ಣುಗಳನ್ನು ನಾನೆಂದೂ ಮರೆಯುವುದಿಲ್ಲ’ ಎಂದು ಟ್ಯಾಗೋರರು ಹೇಳಿದ್ದಾರೆ.
ಮಹಾತ್ಮ ಗಾಂಧೀಜಿಯವರು 1923ರ ಮಾರ್ಚ್ 13ರಂದು ಶಿವಗಿರಿಮಠದಲ್ಲಿ ಶ್ರೀನಾರಾಯಣಗುರು ಅವರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದರು. ‘ನಾನು ತಿರುವಾಂಕೂರು ರಾಜ್ಯಕ್ಕೆ ಭೇಟಿ ನೀಡಿ, ಪೂಜ್ಯ ನಾರಾಯಣಗುರು ಅವರ ದರ್ಶನ ಮಾಡಿದ್ದು ನನಗೆ ಒದಗಿಬಂದ ದೊಡ್ಡ ಸದ್ವಿಶೇಷ ಎಂದು ಭಾವಿಸುತ್ತೇನೆ. ನನಗೆ ಅಲ್ಲಿ ಒಂದು ದಿನ ತಂಗುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’ ಎಂದಿದ್ದಾರೆ.
ಈ ದೇಶ ಕಂಡ ಬಹುದೊಡ್ಡ ಗುರು ಹಾಗೂ ಮಹಾತ್ಮರ ಭೇಟಿ–ಸಂವಾದಕ್ಕೆ ನೂರು ವರ್ಷಗಳು ತುಂಬಿದ ವಿದ್ಯಮಾನವನ್ನು ಕರ್ನಾಟಕವೂ ಸೇರಿದಂತೆ ವಿವಿಧೆಡೆ ನೆನಪಿಸಿಕೊಳ್ಳಲಾಗುತ್ತಿದೆ. ಇಂಥ ನೆನಪುಗಳು ವರ್ತಮಾನದ ಬಿಕ್ಕಟ್ಟುಗಳಿಗೆ ಉತ್ತರದ ಕಣ್ಣುಗಳಾಗಿ ನಮಗೆ ಒದಗಿ ಬರಬಲ್ಲವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.