ADVERTISEMENT

ವಿಶ್ಲೇಷಣೆ: ಎಐ ಆರ್ಥಿಕತೆ ಎತ್ತ ಸಾಗಿದೆ?

ವೇಣುಗೋಪಾಲ್‌ ಟಿ.ಎಸ್‌.
Published 19 ನವೆಂಬರ್ 2025, 0:18 IST
Last Updated 19 ನವೆಂಬರ್ 2025, 0:18 IST
   

ಕೃತಕ ಬುದ್ಧಿಮತ್ತೆ (ಎಐ) ದೊಡ್ಡ ಬಿಕ್ಕಟ್ಟಿನಲ್ಲಿದೆ ಅನ್ನುವುದು ಈಗ ದೊಡ್ಡ ಸುದ್ದಿ. ಇಂದು ಜಾಗತಿಕ ಆರ್ಥಿಕತೆ ಕೃತಕ ಬುದ್ಧಿಮತ್ತೆಯ ಸುತ್ತ ಬೆಳೆಯುತ್ತಿದೆ. ಅಮೆರಿಕದ ಆರ್ಥಿಕತೆ ಸಂಪೂರ್ಣವಾಗಿ ‘ಎಐ’ಯನ್ನೇ ನೆಚ್ಚಿಕೊಂಡಿದೆ. ಅದರ ಜಿಡಿಪಿಯ ಶೇ 40ರಷ್ಟನ್ನು ಎಐ ತುಂಬಿಕೊಟ್ಟಿದೆ. ಅಮೆರಿಕದ ಸ್ಟಾಕುಗಳಿಗೆ, ಅದರಲ್ಲೂ ಟೆಕ್ ದೈತ್ಯ ಕಂಪನಿಗಳ ಸ್ಟಾಕುಗಳಿಗೆ ವಿಪರೀತ ಬೇಡಿಕೆಯಿದೆ. ಆದರೆ, ಕೈಗಾರಿಕೆ, ಆರೋಗ್ಯ, ಬ್ಯಾಂಕ್ ಇತ್ಯಾದಿ ಕ್ಷೇತ್ರಗಳಲ್ಲಿ ಅಮೆರಿಕ ಬೇರೆ ದೇಶಗಳಿಗಿಂತ ಹಿಂದಿದೆ. ತಾನು ಎದುರಿಸುತ್ತಿರುವ ನಿರುದ್ಯೋಗ, ಹಣದುಬ್ಬರ, ಸಾಲ, ಆರ್ಥಿಕ ಹಿಂಜರಿತ ಎಲ್ಲಾ ಸಮಸ್ಯೆಗಳಿಗೂ ಎಐಯನ್ನೇ ಪರಿಹಾರವಾಗಿ ನೋಡುತ್ತಿದೆ. ವಲಸೆಗೆ ಕಡಿವಾಣ ಹಾಕಿದ್ದರಿಂದ ಕಾರ್ಮಿಕರ ಕೊರತೆ ಇದೆ. ಎಐ ಬಳಕೆಯಿಂದ ಕಾರ್ಮಿಕರ ಉತ್ಪಾದಕತೆ ಹೆಚ್ಚುತ್ತದೆ. ಅದರಿಂದ ಕಾರ್ಮಿಕರ ಕೊರತೆಯ ಸಮಸ್ಯೆ ನೀಗುತ್ತದೆ ಎಂದು ಅದು ಭಾವಿಸಿದೆ

ಅಮೆರಿಕದ ಸಾಲ 38 ಲಕ್ಷ ಕೋಟಿ ಡಾಲರ್ ದಾಟಿದೆ. ವಿತ್ತೀಯ ಕೊರತೆಯೂ ಹೆಚ್ಚುತ್ತಿದೆ. ಎಐ ತರಲಿರುವ ಆರ್ಥಿಕ ಪ್ರಗತಿ ಇದಕ್ಕೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿದೆ ಅಮೆರಿಕ. ಸರ್ಕಾರ ಸಹಜವಾಗಿಯೇ ಎಐ ಕ್ಷೇತ್ರವನ್ನು ಬೆಂಬಲಿಸುತ್ತಿದೆ. ಹೂಡಿಕೆ ಈ ಕ್ಷೇತ್ರಕ್ಕೆ ವಿಶೇಷವಾಗಿ ಹರಿದುಬರುತ್ತಿದೆ. 2016ಕ್ಕೆ ಹೋಲಿಸಿದರೆ ಎಐ ಮೇಲಿನ ಹೂಡಿಕೆ ಈಗ ಅಮೆರಿಕದಲ್ಲಿ ಸುಮಾರು ಹತ್ತು ಪಟ್ಟು ಹೆಚ್ಚಿದೆ. ಕಂಪನಿಗಳಿಗೆ ಎಐಯನ್ನು ತಮ್ಮ ಉತ್ಪಾದನಾ ಪ್ರಕ್ರಿಯೆಯ ಭಾಗವನ್ನಾಗಿ ಮಾಡಿಕೊಳ್ಳಬೇಕಾದ ಒತ್ತಡ ಹೆಚ್ಚುತ್ತಿದೆ. ‘ಎಲ್ಲರೂ ಎಐನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ನೀವು ಮಾಡದೆ ಹೋದರೆ ಹಿಂದೆ ಬೀಳುತ್ತೀರಿ’ ಎಂಬ ಒತ್ತಡ ಕಂಪನಿಗಳ ಮೇಲಿದೆ. ಕಂಪನಿಗಳು ಬಿಲಿಯನ್‌ಗಟ್ಟಲೆ ಬಂಡವಾಳ ತೊಡಗಿಸುತ್ತಿವೆ. ಸಮಸ್ಯೆಯೆಂದರೆ ಲಾಭ ಬರುತ್ತಿಲ್ಲ. ಲಾಭ ಹೇಗೆ ಮಾಡಿಕೊಳ್ಳುವುದು ಅನ್ನುವುದೂ ಸ್ಪಷ್ಟವಿಲ್ಲ. ಇಡೀ ವ್ಯವಹಾರದಲ್ಲಿ ಒಂದು ಅನಿಶ್ಚಿತ ಪರಿಸ್ಥಿತಿ ಇದೆ. ‘ಓಪನ್‌ಎಐ’ ಕಂಪನಿ 2025ರ ಪ್ರಾರಂಭದಲ್ಲಿ 3.7 ಶತಕೋಟಿ ಡಾಲರ್ ಗಳಿಸಿತ್ತು. ಆದರೆ, ಖರ್ಚು 7ರಿಂದ 9 ಶತಕೋಟಿಯಷ್ಟಿತ್ತು. 2029ರವರೆಗೆ ಇದೇ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಓಪನ್‌ಎಐನ ಸಿಇಒ ಸ್ಯಾಮ್ ಆಲ್ಟ್‌ಮನ್ ಒಪ್ಪಿಕೊಂಡಿದ್ದಾರೆ. ಬಹುತೇಕ ಎಐ ಕಂಪನಿಗಳ ಖರ್ಚು ಆದಾಯಕ್ಕಿಂತ ಹೆಚ್ಚಿದೆ. ಅವುಗಳಿಗೆ ನಿಜವಾಗಿ ಲಾಭ ಬರುವುದಕ್ಕೆ ಇನ್ನು ಹತ್ತು ವರ್ಷಗಳಾದರೂ ಬೇಕಾಗಬಹುದಂತೆ.

ಇಂದು ಕೃತಕ ಬುದ್ಧಿಮತ್ತೆಯ ಉದ್ಯಮ ಹೆಚ್ಚು ಹೆಚ್ಚು ಕೇಂದ್ರೀಕೃತವಾಗುತ್ತಿದೆ. ಇಡೀ ಎಐ ಕ್ಷೇತ್ರವನ್ನು ಏಳು ಬೃಹತ್ ಕಂಪನಿಗಳಾದ ಅಲ್ಫಬೆಟ್, ಅಮೆಜಾನ್, ಆಪಲ್, ಮೆಟಾ, ಮೈಕ್ರೊಸಾಫ್ಟ್, ಎನ್‌ವಿಡಿಯಾ ಮತ್ತು ಟೆಸ್ಲಾ ನಿಯಂತ್ರಿಸುತ್ತಿವೆ. ಎಐ ಕಂಪನಿಗಳ ಸ್ಟಾಕುಗಳ ಬೆಲೆ ವಿಪರೀತ ಏರುತ್ತಿರುವುದರಿಂದ, ಅವುಗಳ ಮೌಲ್ಯವೂ ಹೆಚ್ಚುತ್ತಿದೆ. ಪ್ರತಿಯೊಂದು ಕಂಪನಿಯ ಮೌಲ್ಯ ಒಂದು ಲಕ್ಷ ಕೋಟಿ ದಾಟಿದೆ. ಚಿಪ್ ಉತ್ಪಾದಿಸುವ ಎನ್‌ವಿಡಿಯಾ 5 ಲಕ್ಷ ಕೋಟಿ ಡಾಲರ್‌ ಮೌಲ್ಯದ ಕಂಪನಿಯಾಗಿದೆ. ಭಾರತ, ಕೆನಡಾ ಹಾಗೂ ಜಪಾನ್ ದೇಶಗಳ ಜಿಡಿಪಿಗಿಂತ ಅದರ ಸಂಪತ್ತು ಹೆಚ್ಚಿದೆ. ಕೃತಕ ಬುದ್ಧಿಮತ್ತೆ ಇಂದು ಆಕರ್ಷಕ ತಂತ್ರಜ್ಞಾನವಾಗಿದೆ. ಎಐ ಬಳಸುವ ಕಂಪನಿಗಳಿಗೆ ಹೂಡಿಕೆಯ ಕೊರತೆಯಿಲ್ಲ. 2025ರಲ್ಲಿ ಜಾಗತಿಕ ವೆಂಚರ್ ಕ್ಯಾಪಿಟಲ್‌ನ ಶೇ 50ರಷ್ಟು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಉತ್ಪನ್ನ, ಸೇವೆ, ಅಥವಾ ತಂತ್ರಜ್ಞಾನವನ್ನು ನಿರ್ಮಿಸಲಿರುವ ಹೊಸ ಕಂಪನಿಗಳಿಗೆ ಹೋಗಿದೆ. ಅದೇ ಕಾರಣಕ್ಕೆ ಬಹುತೇಕ ಕಂಪನಿಗಳು ಎಐ ಬಳಸುತ್ತಿವೆ. ಆದರೆ, ಎಂಐಟಿಯ ಅಧ್ಯಯನದ ಪ್ರಕಾರ, ಎಐ ಬಳಸಿಕೊಂಡ ಯೋಜನೆಗಳಲ್ಲಿ ಬರೀ ಶೇ 5ರಷ್ಟು ಯೋಜನೆಗಳು ಮಾತ್ರ ಲಾಭದಲ್ಲಿವೆ.

ADVERTISEMENT

ಟೆಕ್ ಕಂಪನಿಗಳ ಹೂಡಿಕೆಯ ಕ್ರಮವೇ ಅನುಮಾನವನ್ನು ಮೂಡಿಸಿದೆ. ಅವು ತಮ್ಮ ತಮ್ಮಲ್ಲೇ ಹೂಡಿಕೆ ಮಾಡಿಕೊಳ್ಳುತ್ತಿವೆ. ಎನ್‌ವಿಡಿಯಾ ಕಂಪನಿಯು, ಓಪನ್‌ಎಐ ಕಂಪನಿಯಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ. ಓಪನ್‌ಎಐ ಎನ್‌ವಿಡಿಯಾದಿಂದ ಚಿಪ್ ಖರೀದಿಸುತ್ತದೆ. ಸ್ವತಃ ನಷ್ಟದಲ್ಲಿರುವ ಓಪನ್‌ಎಐ 300 ಶತಕೋಟಿ ಡಾಲರ್‌ಗಳನ್ನು ಒರಾಕಲ್ ಕಂಪನಿಯಲ್ಲಿ ಹೂಡಿದೆ. ಓಪನ್‌ಎಐ ಕಂಪನಿಗೆ ತನ್ನ ಮಾಡೆಲ್‌ಗಳಿಗೆ ತರಬೇತಿ ನೀಡಲು, ಮಾಹಿತಿಗಳನ್ನು ಸಂಗ್ರಹಿಸಿಡಲು ಒರಾಕಲ್ ಕಂಪನಿಯ ಡೇಟಾ ಸೆಂಟರ್ ನೆರವು ಬೇಕು. ಒರಾಕಲ್ ಚಿಪ್‌ಗಳನ್ನು ಎನ್‌ವಿಡಿಯಾದಿಂದ ಕೊಳ್ಳುತ್ತದೆ. ಹೀಗೆ ಈ ಕಂಪನಿಗಳು ಒಂದು ಇನ್ನೊಂದರ ಗ್ರಾಹಕರಾಗುತ್ತಾ, ಹೂಡಿಕೆದಾರರಾಗುತ್ತಾ ಮ್ಯೂಸಿಕಲ್ ಚೇರ್ ಆಡುತ್ತಿವೆ. ಈ ಪ್ರಕ್ರಿಯೆಯಲ್ಲಿ ಸ್ಟಾಕ್ ಬೆಲೆ ಏರುತ್ತಾ ಹೋಗುತ್ತದೆ. ಜನ ಲಾಭದ ಆಸೆಯಿಂದ ಸ್ಟಾಕುಗಳನ್ನು ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಈಗ ಪಿಂಚಣಿ ನಿಧಿಯೂ ಎಐನಲ್ಲಿ ಹೂಡಿಕೆಯಾಗುತ್ತಿದೆ.

ಫೇಸ್‌ಬುಕ್ ಇತ್ಯಾದಿಗಳಲ್ಲಿ ನಾವು ತುಂಬುವ ಫೋಟೊಗಳು, ಮಾಹಿತಿಗಳು, ಸರ್ಕಾರದ ಮಾಹಿತಿಗಳು, ಇವೆಲ್ಲಾ ಡೇಟಾ ಸೆಂಟರ್‌ಗಳಲ್ಲಿ ಶೇಖರವಾಗಿರುತ್ತವೆ. ಕೃತಕ ಬುದ್ಧಿಮತ್ತೆಯ ಮಾಡೆಲ್‌ಗಳನ್ನು ಸಿದ್ಧಪಡಿಸುವುದಕ್ಕೂ ಡೇಟಾ ಸೆಂಟರ್ ಅವಶ್ಯಕ. ಇವೆಲ್ಲಾ ಅಪಾರ ಗಣಕಶಕ್ತಿಯನ್ನು ಬೇಡುತ್ತವೆ. ಸ್ಪರ್ಧೆಯಲ್ಲಿ ಮುಂದಿರಬೇಕಾದರೆ ನಿರಂತರವಾಗಿ ಬೆಳೆಯುತ್ತಾ, ಉತ್ತಮಗೊಳ್ಳುತ್ತಾ ಹೋಗಬೇಕು. ಹೆಚ್ಚೆಚ್ಚು ಪ್ರಬಲವಾದ ಡೇಟಾ ಸೆಂಟರ್‌ಗಳು ಬೇಕಾಗುತ್ತವೆ. ಹಾಗಾಗಿ ಇಂದು ಅವುಗಳ ಮೇಲೆ ಅಪಾರ ಹೂಡಿಕೆಯಾಗುತ್ತಿದೆ. ಕಳೆದ ವರ್ಷ ಅಮೆರಿಕದ ಜಿಡಿಪಿಯ ಸುಮಾರು ಶೇ 1.2ರಷ್ಟು ಇದಕ್ಕೆ ಖರ್ಚಾಗಿದೆಯಂತೆ. ಅವಕ್ಕೆ ವಿಪರೀತ ವಿದ್ಯುತ್ ಬೇಕು. ಅಮೆರಿಕ ಉತ್ಪಾದಿಸುವ ವಿದ್ಯುತ್ತಿನ ಶೇ 12ರಷ್ಟನ್ನು ಈ ಡೇಟಾ ಸೆಂಟರ್‌ಗಳು ಬಳಸುತ್ತವಂತೆ. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಶಾಖವನ್ನು ತಂಪು ಮಾಡುವುದಕ್ಕೆ ವಿಪರೀತ ನೀರು ಬೇಕಾಗುತ್ತದೆ. ಇವರಿಗೆ ವಿದ್ಯುತ್‌ ಹಾಗೂ ನೀರು ರಿಯಾಯಿತಿ ದರದಲ್ಲಿ ಪೂರೈಕೆಯಾಗುತ್ತದೆ. ಕೆಲವು ಕಡೆ ತೆರಿಗೆ ರಿಯಾಯಿತಿಯನ್ನೂ ಗಿಟ್ಟಿಸಿಕೊಳ್ಳುತ್ತಾರೆ.

ಬ್ಯಾಂಕೇತರ ಖಾಸಗಿ ಸಂಸ್ಥೆಗಳು ಡೇಟಾ ಸೆಂಟರ್ ಇತ್ಯಾದಿ ಮೂಲಸೌಕರ್ಯದ ನಿರ್ಮಾಣಕ್ಕೆ ಸಾಲವನ್ನು ಹೆಚ್ಚಾಗಿ ನೀಡುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಅವು ಬ್ಯಾಂಕ್‌ಗಳು ಸೇರಿದಂತೆ ಹಲವು ಕಡೆಗಳಿಂದ ಹಣವನ್ನು ಕ್ರೋಡೀಕರಿಸಿ, ಖಾಸಗಿ ಮಾರುಕಟ್ಟೆಯಲ್ಲಿ ಸಾಲ ಕೊಡುತ್ತಿವೆ. ಅವು ಬ್ಯಾಂಕಿನಿಂದ ಪಡೆದುಕೊಳ್ಳುತ್ತಿರುವ ಸಾಲದ ಪ್ರಮಾಣ ಕ್ರಮೇಣ ಹೆಚ್ಚುತ್ತಿದೆ. ಅಕಸ್ಮಾತ್ ಕೃತಕ ಬುದ್ಧಿಮತ್ತೆಯ ಆರ್ಥಿಕತೆ ಕುಸಿದರೆ, ಬ್ಯಾಂಕ್‌ಗಳಿಗೂ ಹೊಡೆತ ಬೀಳುತ್ತದೆ.

ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆಗಿಂದಾಗ್ಗೆ ಇಂತಹ ಗುಳ್ಳೆಗಳು ಕಾಣಿಸಿಕೊಳ್ಳು
ತ್ತಿರುತ್ತವೆ. ಜಗತ್ತನ್ನೇ ಬದಲಿಸಿಬಿಡುತ್ತದೆ ಅನ್ನುವ ತಂತ್ರಜ್ಞಾನ ಸೃಷ್ಟಿಯಾದಾಗ ಅಪಾರವಾದ ಬಂಡವಾಳ ಹೂಡಿಕೆಯಾಗುತ್ತದೆ. ರೈಲ್ವೆ, ಇಂಟರ್‌ನೆಟ್ ಇತ್ಯಾದಿಗಳು ಬಂದಾಗ ಹೀಗೆ ಆಗಿತ್ತು. ಸ್ಟಾಕ್ ಬೆಲೆಗಳು ಏರಿದವು. ಆದರೆ, ಆಗಲೂ ಆದಾಯ ಇರಲಿಲ್ಲ. ಡಾಟ್‌ಕಾಂ ಗುಳ್ಳೆ ಒಡೆಯಿತು. ಸ್ಟಾಕ್ ಬೆಲೆ ಶೇ 50ರಿಂದ 90ರವರೆಗೆ ಕುಸಿದಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ಮೂಲಸೌಕರ್ಯ ನಿರ್ಮಿಸಿದ ಕಂಪನಿಗಳು ಅಪಾರ ನಷ್ಟ ಅನುಭವಿಸಿದವು. ಆದರೆ, ಬಿಕ್ಕಟ್ಟು ಮರೆಯಾದ ಮೇಲೆ ರೈಲ್ವೆ ಹಳಿಗಳು, ಫೈಬರ್ ಆಪ್ಟಿಕ್ ಕೇಬಲ್ಸ್ ಇವೆಲ್ಲಾ ನಂತರದ ದಿನಗಳಲ್ಲಿ ಬಳಕೆಗೆ ಬಂದವು. ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಇದು ಸಾಧ್ಯವಾಗದೆ ಇರಬಹುದು. ಈಗ ಬಳಸುತ್ತಿರುವ ಚಿಪ್‌ಗಳು ಕೆಲವೇ ತಿಂಗಳಿನಲ್ಲಿ ಹಳತಾಗಿಬಿಡುತ್ತವೆ. ಉಪಯೋಗಕ್ಕೆ ಬಾರದೆ ಹೋಗಬಹುದು.

ಕೃತಕ ಬುದ್ಧಿಮತ್ತೆಯಿಂದ ಉದ್ಯೋಗದ ಮೇಲೆ ಪರಿಣಾಮವಾಗುತ್ತದೆ ಅನ್ನುವ ಆತಂಕವಿದೆ. ಅಮೆರಿಕದಲ್ಲಿ ಈ ವರ್ಷ ಸುಮಾರು 10 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ಹೊಸ ನೇಮಕಾತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆರ್ಥಿಕತೆಯ ಬೆಳವಣಿಗೆ ನಿಧಾನವಾಗಿರುವುದರಿಂದ ಒಟ್ಟಾರೆ ಬೇಡಿಕೆ ಕಡಿಮೆಯಾಗಿದೆ. ಉತ್ಪಾದನೆಯ ಖರ್ಚನ್ನು ಇಳಿಸುವುದಕ್ಕಾಗಿ ಕಾರ್ಮಿಕರನ್ನು ನೌಕರಿಯಿಂದ ತೆಗೆಯಲಾಗುತ್ತಿದೆ. ಎಐ ಬಳಕೆಯಿಂದಲೂ ಉದ್ಯೋಗ ಕಡಿಮೆಯಾಗುತ್ತಿದೆ. ಎಐ ಕುಸಿದರೆ ಹಲವರು ಕೆಲಸ ಕಳೆದುಕೊಳ್ಳುತ್ತಾರೆ. ಎಐ ಉದ್ಯಮ ಕುಸಿದರೂ ತಂತ್ರಜ್ಞಾನ ಹಾಗೂ ಯಾಂತ್ರೀಕರಣ ಪ್ರಕ್ರಿಯೆ ಮುಂದುವರಿಯುತ್ತದೆ. ಡೇಟಾ ಎಂಟ್ರಿ, ಕಸ್ಟಮರ್ ಸಪೋರ್ಟ್ ಇತ್ಯಾದಿ ಕೆಲಸಗಳಿಗೆ ಯಂತ್ರಗಳ ನೆರವನ್ನು ಪಡೆಯಲಾಗುತ್ತದೆ. ಜನ ಕೆಲಸ ಕಳೆದುಕೊಳ್ಳುತ್ತಾರೆ. ವಿದೇಶಿ ಬಳಕೆದಾರರಿಗೆ ಎಐ ಸೇವೆಯನ್ನು ಒದಗಿಸುತ್ತಿರುವ ಇನ್ಫೊಸಿಸ್, ಟಿಸಿಎಸ್‌ನಂತಹ ಸಂಸ್ಥೆಗಳಿಗೆ ಹೊಡೆತ ಬೀಳುತ್ತದೆ. ಆ ಸಂಸ್ಥೆಗಳನ್ನು ನೆಚ್ಚಿಕೊಂಡು ಸುಮಾರು 50 ಲಕ್ಷ ಜನ ಜೀವನ ನಡೆಸುತ್ತಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತ ಡೆರಾನ್ ಅಸಿಮೊಗ್ಲು, ಕೃತಕ ಬುದ್ಧಿಮತ್ತೆಯನ್ನು ಕುರಿತಂತೆ ನಮ್ಮ ನೋಟಕ್ರಮ ಬದಲಾಗಬೇಕು ಎನ್ನುತ್ತಾರೆ. ಯಂತ್ರಗಳು ಮನುಷ್ಯರ ಜಾಗವನ್ನು ಆಕ್ರಮಿಸುವಂತಾಗಬಾರದು. ಮನುಷ್ಯರಿಗೆ ನೆರವಾಗಬೇಕು. ಅವರಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಮಾನವ ಸಂಪನ್ಮೂಲವನ್ನು ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸುವುದಕ್ಕೆ ಸಾಧ್ಯವಾಗಬೇಕು. ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದಕ್ಕೆ ತಂತ್ರಜ್ಞಾನ ಹಾಗೂ ಮಾಹಿತಿಗಳ ಬಳಕೆಯಾಗಬೇಕು. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ನಮ್ಮ ಆದ್ಯತೆಯಾಗಬಾರದು. ಹೆಚ್ಚು ಉಪಯುಕ್ತವಾದ ಉತ್ಪನ್ನಗಳನ್ನು ತಯಾರಿಸುವುದು ನಮ್ಮ ಆದ್ಯತೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.