‘ಲಿಂಗಾಯತ ಸಮುದಾಯದಲ್ಲಿರುವ ಬೇಡಜಂಗಮರನ್ನು ನೀವು ಎಸ್‌ಸಿ (ಪರಿಶಿಷ್ಟ ಜಾತಿ) ಪಟ್ಟಿಗೆ ಸೇರಿಸುತ್ತಿದ್ದೀರಿ. ನಾಲ್ಕು ಲಕ್ಷ ಜನ ಎಸ್‌ಸಿ ಪಟ್ಟಿಗೆ ಹೇಗೆ ಬಂದರು? ಲಿಂಗಾಯತರಲ್ಲಿನ ಬಡವರ್ಗದವರಿಗೆ ಅಗತ್ಯ ಬಿದ್ದರೆ ಪ್ರೋತ್ಸಾಹ ನೀಡೋಣ. ಆದರೆ ಬೇಡಜಂಗಮರು ತಾವು ಎಸ್‌ಸಿ ಎಂದು ತೋರಿಸುವುದು ತಪ್ಪು. ಸುಳ್ಳು ಜಾತಿಪತ್ರ ನೀಡುವವರನ್ನು ಒಳಹಾಕಬೇಕು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹೊಸಪೇಟೆಯಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಗುಡುಗಿದ್ದಾರೆ.
ಇದಕ್ಕೂ ಮುಂಚೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ‘ನಡಾವಳಿ’ಯೊಂದನ್ನು ಹೊರಡಿಸಿ, ಇದೇ ಬೇಡ ಜಂಗಮ, ಬುಡ್ಗಜಂಗಮ ವಿವಾದದ ಬಗ್ಗೆ ಪ್ರಸ್ತಾಪಿಸಿ, ವೀರಶೈವ ಲಿಂಗಾಯತರು ಪರಿಶಿಷ್ಟ ಪಟ್ಟಿಯಲ್ಲಿರುವ ಬುಡ್ಗ–ಬೇಡ ಜಂಗಮರ ಮೀಸಲಾತಿ ಕಸಿಯುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ. ಒಳಮೀಸಲಾತಿ ಸಂಬಂಧ ಪರಿಶಿಷ್ಟ ಜಾತಿಗಳ ಸಮೀಕ್ಷೆ ಮಾಡುತ್ತಿರುವ ಸಂದರ್ಭದಲ್ಲಿ ಈ ವಿವಾದ ಮುನ್ನೆಲೆಗೆ ಬಂದಿದೆ.
ವೀರಶೈವ ಲಿಂಗಾಯತರ ಒಂದು ವರ್ಗದವರು ಬೇಡ– ಬುಡ್ಗ ಜಂಗಮರ ಮೀಸಲಾತಿಯನ್ನು ಕಸಿಯುತ್ತಿದ್ದಾರೆ ಎಂಬ ಆರೋಪ ನಿನ್ನೆ ಮೊನ್ನೆಯದಲ್ಲ. ನಾಲ್ಕೈದು ದಶಕಗಳಿಂದಲೂ ಇದು ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಆ ಸಂದರ್ಭದ ಬಿಸಿ ಮುಗಿದ ನಂತರ ತಣ್ಣಗಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಲು ಯಾವ ಪಕ್ಷದ ನೇತೃತ್ವದ ಸರ್ಕಾರವೂ ಪ್ರಯತ್ನಿಸಿಲ್ಲ.
ಬೇಡಜಂಗಮ, ಬುಡ್ಗಜಂಗಮ ಮತ್ತು ಬೇಡುವ ಜಂಗಮ ಎಂಬ ಹೆಸರುಗಳಲ್ಲಿ ‘ಜಂಗಮ’ ಎಂಬ ಪದ ಇರುವುದರಿಂದಲೂ ವೀರಶೈವರಲ್ಲಿ ‘ಜಂಗಮ’ ಪಂಗಡದವರು ಪ್ರಮುಖವಾಗಿ ಇರುವುದರಿಂದಲೂ ಅದರಲ್ಲೂ ವೀರಶೈವರಲ್ಲಿ ಬೇಡುವ ಜಂಗಮ ಎಂಬ ಪಂಗಡದವರೇ ಇರುವುದರಿಂದಲೂ ಇದರ ಫಲವನ್ನು ವೀರಶೈವರು ಪಡೆಯಲಾರಂಭಿಸಿದರು (ಬೇಡುವ ಜಂಗಮರು ಮೂಲತಃ ಹಿಂದುಳಿದ ವರ್ಗಗಳ ಪ್ರವರ್ಗ 3(ಬಿ) ಪಟ್ಟಿಯಲ್ಲಿ ಬರುತ್ತಾರೆ). ಇದರಿಂದಾಗಿ, ಅಲೆಮಾರಿಗಳಾದ ಬುಡ್ಗ–ಬೇಡ ಜಂಗಮರಿಗೆ ಅಪಾರ ಅನ್ಯಾಯ ಆಗತೊಡಗಿತು. ಹಾಗೆ ನೋಡಿದರೆ, ಅಲೆಮಾರಿಗಳಾದ ಬುಡ್ಗ–ಬೇಡ ಜಂಗಮರಿಗೂ ಜಾತಿ ಶ್ರೇಣೀಕರಣದ ಮೇಲಿರುವ ಬೇಡುವ ಜಂಗಮ ಎಂಬ ವೀರಶೈವರಿಗೂ ಯಾವುದೇ ಸಂಬಂಧವಿಲ್ಲ. ತಮ್ಮ ಪಾಲನ್ನು ಇತರರು ತಿನ್ನುತ್ತಿರುವುದರ ವಿರುದ್ಧ ಬುಡ್ಗ–ಬೇಡ ಜಂಗಮರು ದಶಕಗಳಿಂದಲೂ ಹೋರಾಟ ಮಾಡುತ್ತಲೇ ಇದ್ದಾರೆ. ರಾಜಕೀಯ ಪ್ರಾತಿನಿಧ್ಯ, ಪ್ರಭಾವ ಇಲ್ಲದ ಈ ಬುಡ್ಗ–ಬೇಡಜಂಗಮ ಎಂಬ ಅಸಂಘಟಿತ ನತದೃಷ್ಟರ ಹೋರಾಟಕ್ಕೆ ಸರ್ಕಾರಗಳು ಜಾಣ ಕಿವುಡಾಗುತ್ತಲೇ ಇವೆ!
ನೂರಾರು ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಅಲೆಮಾರಿ ಜೀವನ ಸಾಗಿಸುತ್ತಾ ಬಂದಿರಬಹುದಾದ ಬುಡ್ಗ–ಬೇಡ ಜಂಗಮರು ಇಂದಿಗೂ ಅಲೆಮಾರಿ ಜೀವನವನ್ನೇ ನಡೆಸುತ್ತಿದ್ದಾರೆ. ಇವರಿಗೆ 1990ರವರೆಗೂ ತಮ್ಮ ಜಾತಿ ಯಾವುದೆಂದೇ ಗೊತ್ತಿರಲಿಲ್ಲ. ಊರ ಹೊರಗಿನ ಬಯಲಿನಲ್ಲಿ, ರೈಲ್ವೆ ಹಳಿಗಳ ಆಸುಪಾಸಿನಲ್ಲಿ, ಹೆದ್ದಾರಿ ಪಕ್ಕ, ಸ್ಮಶಾನಗಳ ಸೆರಗಿನಲ್ಲಿ, ಪಾಳು ಮಂಟಪಗಳಲ್ಲಿ ಹಳೆಯ ಬಟ್ಟೆ, ಟಾರ್ಪಾಲು, ಪ್ಲಾಸ್ಟಿಕ್ ಚೀಲಗಳಿಂದ ಗುಡಾರ ಹಾಕಿಕೊಂಡು ಜೀವನ ನಡೆಸುವ ಇವರ ಮಾತೃಭಾಷೆ ಬುಡ್ಗಬಾಷೆ ಮತ್ತು ತೆಲುಗು. ಕುಲಶಾಸ್ತ್ರೀಯ ಅಧ್ಯಯನಕಾರರು ಮತ್ತು ಮಾನವಶಾಸ್ತ್ರಜ್ಞರು ಇವರು ಬದುಕುವ ಪ್ರದೇಶ ಹಾಗೂ ವೇಷಭಾಷೆ ಆಧರಿಸಿ ಬುರ‍್ರಕತೆಯವರು, ಬಹುರೂಪಿಗಳು, ಬೈರಾಗಿಗಳು, ಭಿಕ್ಷುಕರು ಎಂದು ಕರೆದರು. ‘ಬುಡ್ಗ’ ಎಂಬ ತಂಬೂರಿವಾದ್ಯ ನುಡಿಸುತ್ತಾ ಭಿಕ್ಷೆ ಬೇಡುತ್ತಾ ಊರೂರು ಅಲೆಯುವ ಕಾರಣಕ್ಕೆ ಬುಡ್ಗ ಜಂಗಮರು ಎಂದರು.
ಅಳಿಲು, ಆಮೆ, ಉಡ, ಕಾಡುಬೆಕ್ಕು, ಮುಂಗುಸಿ, ಬಯಲು ಇಲಿಗಳನ್ನು ಬೇಟೆಯಾಡಿ ತಿನ್ನುವುದರಿಂದ ಇವರನ್ನು ಬೇಡಜಂಗಮ ಎಂದು ಕರೆದರು. ಬೇಡರಂತೆ ಬೇಟೆಯಾಡುವುದೇ ಇವರಿಗೆ ಬೇಡಜಂಗಮ ಎಂತಲೂ ಹೆಸರು ಬರಲು ಕಾರಣವಾಯಿತು. ಪರಿಶಿಷ್ಟರ ಪಟ್ಟಿ ತಯಾರು ಮಾಡಿದವರು ಈ ಬಡವರಿಗೆ ಅನ್ಯಾಯ ಆಗದಿರಲೆಂದು ಬುಡ್ಗಜಂಗಮ ಮತ್ತು ಬೇಡಜಂಗಮ ಎರಡೂ ಹೆಸರುಗಳನ್ನು ಸೇರಿಸಿರುವ ಸದುದ್ದೇಶ ಇದ್ದಂತಿದೆ. ಆದರೆ ಇದನ್ನು ಬೇಡುವ ಜಂಗಮರು ಬಳಸಿಕೊಳ್ಳಬಹುದೆಂದು ಆಗಿನ ಕಾಲದಲ್ಲಿ ಅವರು ಎಣಿಸಿರಲಾರರು. ಬೇಡುವ ಜಂಗಮರು ಮೂಲತಃ ವೀರಶೈವರಾಗಿದ್ದು, ಇವರಲ್ಲಿ ಕೆಲವರು ತಮ್ಮ ಮಠಕ್ಕಾಗಿ ಭಿಕ್ಷಾಟನೆ ಮಾಡುವುದು ನಿಜ. ಇವರು ಭಿಕ್ಷೆಗೆ ಹೋದಾಗ ಬುಡ್ಗಜಂಗಮರಂತೆ ಟೆಂಟುಗಳಲ್ಲಿ ವಾಸಿಸುವುದಿಲ್ಲ, ಮಾಂಸಾಹಾರ ಸೇವಿಸುವುದಿಲ್ಲ (ಇವರು ಅಪ್ಪಟ ಸಸ್ಯಾಹಾರಿಗಳು). ಬದಲಿಗೆ ಯಾವುದೋ ಮಠದಲ್ಲೋ ಶಿವಾಲಯದಲ್ಲೋ ಶರಣರ ಮನೆಗಳಲ್ಲೋ ತಂಗುತ್ತಾರೆ. ಇವರು ಭಿಕ್ಷೆ ಬೇಡುವುದು ಬಹುತೇಕ ವೀರಶೈವರ ಮನೆಗಳಲ್ಲೇ. ಇವರ ಉದ್ದೇಶ ಧರ್ಮಪ್ರಚಾರ ಮತ್ತು ಮಠಗಳ ಮುನ್ನಡೆಸುವಿಕೆ, ಅಷ್ಟೆ.
ಬುಡ್ಗ–ಬೇಡ ಜಂಗಮರಿಗೆ ತಮ್ಮದೇ ಆದ ಬೆಡಗುಗಳಿವೆ. ಆಲಂ, ಅವದೂತ, ಇನಕೊಂಡ, ಈರಪಲ್ಲಿ ಮುಂತಾಗಿ 150 ಬೆಡಗುಗಳಿವೆ. ಆದರೆ ಬೇಡುವ ಜಂಗಮರನ್ನು ತಗ್ಗಿನಮಠ, ಗಚ್ಚಿನಮಠ, ಹಿರೇಮಠ, ಚಿಕ್ಕಮಠ ಮುಂತಾಗಿ ಗುರುತಿಸುತ್ತಾರೆ. ಸುಂಕಲಮ್ಮ, ಜಂಬಾಲಮ್ಮ, ಮಾರಮ್ಮ, ಪೋಷಮ್ಮ ಅವರು ಬುಡ್ಗ–ಬೇಡ ಜಂಗಮರ ಆರಾಧ್ಯದೈವಗಳಾಗಿದ್ದು, ಇವರಿಗೆ ಯಾವುದೇ ಗುರುಪೀಠವಿಲ್ಲ. ಆದರೆ ಬೇಡುವ ಜಂಗಮರಿಗೆ ತಮ್ಮದೇ ಆದ ವೀರಶೈವ ಪುರಾಣಗಳಿವೆ. ಹೀಗೆ ಬುಡ್ಗ–ಬೇಡಜಂಗಮ ಮತ್ತು ಬೇಡುವ ಜಂಗಮರ ನಡುವೆ ಆಕಾಶ, ಭೂಮಿಯಷ್ಟೇ ಅಂತರವಿದೆ.
ಈ ವಿವಾದ ಆರಂಭವಾದುದು ಬುಡ್ಗ–ಬೇಡ ಜಂಗಮರ ಜನಸಂಖ್ಯೆ ಏಕಾಏಕಿ ಅತಿಯಾಗಿ ಬೆಳೆದ ಕಾರಣಕ್ಕೆ! ಹಿಂದಿನ ಆರು ದಶಕಗಳಲ್ಲಿ ಜನಗಣತಿ ಆಯುಕ್ತರು ದಾಖಲಿಸಿದಂತೆ, ಕರ್ನಾಟಕದಲ್ಲಿ ಬೇಡ–ಬುಡ್ಗ ಜಂಗಮರ ಸಂಖ್ಯೆ 1961ರಲ್ಲಿ 5,141 ಇದ್ದದ್ದು 1971ರಲ್ಲಿ 13,676ಕ್ಕೆ ಬೆಳೆಯಿತು. ನ್ಯಾಯಮೂರ್ತಿ ಸದಾಶಿವ ಆಯೋಗ ಗುರುತಿಸಿದಂತೆ, ಕ್ರಮವಾಗಿ 1981ರಲ್ಲಿ 3,035, 1991ರಲ್ಲಿ 1,21,056, 2001ರಲ್ಲಿ 54,873, 2010ರಲ್ಲಿ 20,289ರಂತೆ ಹೆಚ್ಚುಕಡಿಮೆ ಆಗತೊಡಗಿತು. ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಂತೆ, 2011ರಲ್ಲಿ 1,17,164 ಇದ್ದದ್ದು 2014ಕ್ಕೆ ಒಮ್ಮೆಲೇ 4,10,804ಕ್ಕೆ ಏರಿತು! ಈ ರೀತಿಯಲ್ಲಿ ಇದೊಂದೇ ಸಮುದಾಯದ ಜನಸಂಖ್ಯೆಯಲ್ಲಿ ಏರುಪೇರಾಗುವುದಕ್ಕೆ ಆಗ ಇದ್ದ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಕಾರಣವಾಗಿರಬಹುದು. ಏಕೆಂದರೆ ವೀರಶೈವ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾಗ ಮಾತ್ರ ಅತ್ಯಂತ ಧೈರ್ಯವಾಗಿ ಬುಡ್ಗಜಂಗಮ ಮತ್ತು ಬೇಡ ಜಂಗಮ ಹೆಸರಿನಲ್ಲಿ ಹೆಚ್ಚು ಜಾತಿ ಪ್ರಮಾಣಪತ್ರಗಳನ್ನು ಪಡೆಯಲು ಕಾರಣವಾಗಿರುವ ಸಾಧ್ಯತೆ ಇದೆ.
ಇಂತಹ ಬೆಳವಣಿಗೆಯ ಬಗ್ಗೆ 2011ರಲ್ಲಿಯೇ ಬೇಸರ ವ್ಯಕ್ತಪಡಿಸಿದ್ದ ಸಂಶೋಧಕ ಎಂ.ಎಂ.ಕಲಬುರ್ಗಿ ಅವರು, ‘ಬುಡ್ಗಜಂಗಮರಿಗೆ ಅರ್ಹವಾಗಿ ದೊರೆಯಬೇಕಿದ್ದ ಸೌಲಭ್ಯಗಳನ್ನು ವೀರಶೈವ ಜಂಗಮರು ಬೇಡಜಂಗಮರ ಹೆಸರಿನಲ್ಲಿ ಪಡೆಯುತ್ತಿದ್ದಾರೆ. ಇದಕ್ಕೆ ಕೆಲವು ಲಿಂಗಾಯತ ಮಠಾಧೀಶರು ಪ್ರೋತ್ಸಾಹ ನೀಡುತ್ತಿರುವುದು ದುರ್ದೈವ. ಮೇಲ್ವರ್ಗದವರು ಎನ್ನಿಸಿಕೊಂಡವರಿಂದಲೇ ಬುಡ್ಗಜಂಗಮರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಸಮಾಜದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದರು. ಈ ಹಿಂದೆ ಬುಡ್ಗಜಂಗಮ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದ ರವೀಂದ್ರಸ್ವಾಮಿ ಎನ್ನುವವರಿಗೆ ಹೈಕೋರ್ಟ್ ₹ 1 ಲಕ್ಷ ದಂಡ ಹಾಕಿತ್ತು. ಇಂದಿಗೂ ಇದಕ್ಕೆ ಸಂಬಂಧಿಸಿದ ನೂರಾರು ಪ್ರಕರಣಗಳು ಸಿ.ಆರ್.ಇ. ಸೆಲ್‌ನಲ್ಲಿ ಬಾಕಿ ಇವೆ. ಇದಕ್ಕೆ ಪರಿಹಾರ ಕಷ್ಟಸಾಧ್ಯವಲ್ಲ. ಸಿ.ಆರ್.ಇ. ಸೆಲ್ ಅನ್ನು ಚುರುಕುಗೊಳಿಸಿ, ಈವರೆಗೂ ಬುಡ್ಗ–ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದವರನ್ನು ತನಿಖೆಗೆ ಒಳಪಡಿಸಬಹುದು. ಅವರ ಹಿನ್ನೆಲೆ ಮತ್ತು ಕುಲಶಾಸ್ತ್ರೀಯ ಅಧ್ಯಯನದಿಂದ ನಕಲಿಗಳನ್ನು ಬೇರ್ಪಡಿಸಿ ಸಮಸ್ಯೆ ಪರಿಹರಿಸುವುದು ಸುಲಭ. ಬೇಡಜಂಗಮ ಎನ್ನುವುದೇ ಈ ಸಮಸ್ಯೆಗೆ ಕಾರಣವಾಗಿರುವುದರಿಂದ ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡಜಂಗಮ ಎನ್ನುವುದನ್ನು ತೆಗೆದು ಬುಡ್ಗಜಂಗಮ ಹೆಸರನ್ನು ಮಾತ್ರ ಉಳಿಸಿಕೊಳ್ಳಬಹುದು.
ಬೇಡಜಂಗಮ ಜಾತಿ ಪ್ರಮಾಣಪತ್ರ ನೀಡುವಾಗ ಸುಪ್ರೀಂ ಕೋರ್ಟ್ ಆದೇಶದಂತೆ, ಸ್ಥಳ ಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ನೀಡಲು ತಹಶೀಲ್ದಾರರಿಗೆ ಆದೇಶಿಸಬಹುದು. ಪರಿಹಾರಗಳೇನೋ ಇವೆ, ಆದರೆ ಎಲ್ಲದಕ್ಕೂ ಸರ್ಕಾರಕ್ಕೆ ಇಚ್ಛಾಶಕ್ತಿ ಇರಬೇಕಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.