ಭಾರತ ಒಕ್ಕೂಟಕ್ಕೆ ಬೇಕೇ ಇಲ್ಲದ ಒಂದು ವಿಚಾರ ಕ್ಷೇತ್ರ ಮರುವಿಂಗಡಣೆ. ಈ ಪ್ರಸ್ತಾವವನ್ನು 30 ವರ್ಷ ಮುಂದಕ್ಕೆ ಹಾಕಿ ಎಂದು ತಮಿಳುನಾಡಿನಲ್ಲಿ ನಡೆದ ಸರ್ವ ಪಕ್ಷಗಳ ಸಭೆ ನಿರ್ಣಯ ಅಂಗೀಕರಿಸಿದೆ. ಒಂದು ರಾಜ್ಯ ಅಥವಾ ಪ್ರದೇಶದ ಹಿತಾಸಕ್ತಿಯನ್ನು ರಕ್ಷಿಸುವುದಷ್ಟೇ ಇದರ ಹಿಂದಿನ ಗುರಿ ಅಲ್ಲ. ರಾಷ್ಟ್ರೀಯ ಏಕತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶವೂ ಇದೆ. ಕ್ಷೇತ್ರ ಮರುವಿಂಗಡಣೆ ಪ್ರಸ್ತಾವವನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದರೆ, ಭಾರತ ಒಕ್ಕೂಟವು ಎದುರಿಸಬಹುದಾದ ಕೆಲವು ಸವಾಲುಗಳಿಂದ ರಕ್ಷಣೆ ಪಡೆಯಬಹುದು. ‘ಗಣರಾಜ್ಯ ಕರಾರು’ವಿಗೆ ಗೌರವ ನೀಡುವ ಅತ್ಯುತ್ತಮ ದಾರಿ ಎಂದರೆ, ಪ್ರಸಕ್ತ ಲೋಕಸಭಾ ಕ್ಷೇತ್ರ ಹಂಚಿಕೆಯನ್ನು ‘ಕಲ್ಲಿನಲ್ಲಿ ಕೆತ್ತಲಾಗಿದೆ’, ಸಂವಿಧಾನ ರಚನೆಕಾರರು ಮಾಡಿರುವ ಈ ಪವಿತ್ರವಾದ ಅಧಿಕಾರ ಹಂಚಿಕೆಯನ್ನು ಪರಿಷ್ಕರಿಸಲು ಎಂದಿಗೂ ಅವಕಾಶ ಇಲ್ಲ ಎಂದು ಭಾವಿಸುವುದು.
ಇದು ಬಹಳ ಪ್ರಬಲವಾದ ಮತ್ತು ಅಸಾಮಾನ್ಯವಾದ ಪ್ರಸ್ತಾವ. ಕ್ಷೇತ್ರ ಮರುವಿಂಗಡಣೆಯನ್ನು ವಿರೋಧಿಸು
ವವರು ಈ ಪ್ರಕ್ರಿಯೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿ ಎಂಬ ಬೇಡಿಕೆಯನ್ನು ಮುಂದಿಟ್ಟಿಲ್ಲ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡುವುದರಿಂದ ‘ಜನಸಂಖ್ಯೆ ನಿಯಂತ್ರಣ’ದಲ್ಲಿ ಯಶಸ್ವಿಯಾದ ಕೆಲವು ರಾಜ್ಯಗಳಿಗೆ ಅನ್ಯಾಯ ಆಗುತ್ತದೆ ಎಂಬುದು ಸೀಮಿತವಾದ ಮತ್ತು ಲೋಪಗಳಿಂದ ಕೂಡಿದ ವಾದವಾಗಿದೆ. ಇಂಗಿತ ರೂಪದಲ್ಲಿರುವ ಆದರೆ ಉಲ್ಲಂಘಿಸಲು ಅವಕಾಶವೇ ಇಲ್ಲದ ‘ಗಣರಾಜ್ಯ ಕರಾರು’ವಿನ ವಿಚಾರ ಇಲ್ಲಿನ ಚರ್ಚೆಗಳಲ್ಲಿ ಪ್ರಸ್ತಾಪವೇ ಆಗುತ್ತಿಲ್ಲ. ಈ ವಿಚಾರವು ಸಹಜವಾಗಿಯೇ ಗಂಭೀರವಾದ ಪ್ರಶ್ನೆಗಳು ಮತ್ತು ಆಕ್ಷೇಪಗಳಿಗೆ ಕಾರಣ ಆಗಬಹುದು.
ಯಾವುದೇ ರಾಜ್ಯದಲ್ಲಿ ವಿಧಾನಸಭೆ ಕ್ಷೇತ್ರಗಳ ಸಂಖ್ಯೆ ಏರಿಕೆ ಮಾಡುವುದನ್ನು ಯಾರೂ ಆಕ್ಷೇಪಿಸುವುದಿಲ್ಲ. ಇದು ಗಣರಾಜ್ಯದ ಸಮತೋಲನವನ್ನು ತಪ್ಪಿಸುವುದಿಲ್ಲ. ಆದರೆ ಲೋಕಸಭಾ ಕ್ಷೇತ್ರಗಳನ್ನು ಮರು ಹಂಚಿಕೆ ಮಾಡುವುದು ಇಲ್ಲಿನ ನಿಜವಾದ ಸಮಸ್ಯೆ. ಪ್ರತಿ ಸಂಸದನೂ ಹೆಚ್ಚು ಕಡಿಮೆ ಒಂದೇ ಸಂಖ್ಯೆಯ ಜನರನ್ನು ಪ್ರತಿನಿಧಿಸಬೇಕು ಎಂದು ಪ್ರಜಾಸತ್ತಾತ್ಮಕ ತತ್ವವು ಹೇಳುತ್ತದೆ. ಇದು ಪಾಲನೆ ಆಗದೇ ಇದ್ದರೆ, ದೊಡ್ಡ ಕ್ಷೇತ್ರದ ಜನರ ಮತಕ್ಕೆ ಸಣ್ಣ ಕ್ಷೇತ್ರದ ಜನರ ಮತಕ್ಕಿಂತ ಕಡಿಮೆ ಮೌಲ್ಯ ಬರುತ್ತದೆ. ಉದಾಹರಣೆಗೆ, ಮಧ್ಯಪ್ರದೇಶದ ಒಬ್ಬ ಸಂಸದ 32 ಲಕ್ಷ ಜನರನ್ನು ಪ್ರತಿನಿಧಿಸುತ್ತಾನೆ. ಆದರೆ, ಕೇರಳದ ಸಂಸದ ಪ್ರತಿನಿಧಿಸುವ ಜನರ ಸಂಖ್ಯೆ 18 ಲಕ್ಷಕ್ಕಿಂತ ಕಡಿಮೆ ಇದೆ. ಹೀಗಾದಾಗ, ಕೇರಳದ ಮತದಾರರ ಮತದ ಮೌಲ್ಯವು ಮಧ್ಯಪ್ರದೇಶದ ಮತದಾರನ ಮತ ಮೌಲ್ಯಕ್ಕಿಂತ ದುಪ್ಪಟ್ಟು. ಈ ತಾರತಮ್ಯವನ್ನು ನಿವಾರಿಸಲೇಬೇಕಿದೆ. ಇಲ್ಲದೇ ಇದ್ದರೆ, ಇದಕ್ಕಿಂತ ಹೆಚ್ಚು ಬಲವಾದ ಮಾನದಂಡಗಳನ್ನು ರೂಪಿಸಿಕೊಳ್ಳಬೇಕು. ಸಣ್ಣ ರಾಜ್ಯಗಳ ವಿಚಾರದಲ್ಲಿ ಈ ತತ್ವದ ಉಲ್ಲಂಘನೆಗೂ ಸಂವಿಧಾನವು ಅವಕಾಶ ಕೊಟ್ಟಿದೆ (ಗೋವಾ, ಅರುಣಾಚಲ ಪ್ರದೇಶದಲ್ಲಿ 8 ಲಕ್ಷಕ್ಕೂ ಕಡಿಮೆ ಜನರಿಗೆ ಒಂದು ಕ್ಷೇತ್ರ ಸೃಷ್ಟಿಸಲಾಗಿದೆ). ಈ ರಾಜ್ಯಗಳ ಜನಸಂಖ್ಯೆ ಕಡಿಮೆ ಇದ್ದರೂ ಲೋಕಸಭೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಇಲ್ಲಿ ‘ಅಸಮರೂಪಿ ಗಣತಂತ್ರ’ ತತ್ವವನ್ನು ಅನುಸರಿಸಲಾಗಿದೆ. ಒಕ್ಕೂಟದ ವಿವಿಧ ರೀತಿಯ ಘಟಕ
ಗಳಿಗೆ ಸಾಂವಿಧಾನಿಕವಾದ ವಿಶೇಷ ರಕ್ಷಣೆಯನ್ನು ಒದಗಿಸುವ ಮೂಲಕ ಸಾಮಾನ್ಯ ಪ್ರಜಾಸತ್ತಾತ್ಮಕ ತತ್ವವನ್ನು ಉಲ್ಲಂಘಿಸಲಾಗಿದೆ.
ಸಂವಿಧಾನ ರಚನೆಕಾರರು ಆಗ ಕಂಡಿಲ್ಲದ ಮತ್ತು ಕಾಣಲು ಸಾಧ್ಯವೂ ಇಲ್ಲದ ವಾಸ್ತವವನ್ನು ಗಣನೆಗೆ ತೆಗೆದುಕೊಂಡು ಈ ವಿಶೇಷ ರಕ್ಷಣೆಯನ್ನು ‘ಸಾರ್ವತ್ರಿಕ’ಗೊಳಿಸಬೇಕು ಎಂಬುದು ನನ್ನ ವಾದ. ಇದು ಜನಸಂಖ್ಯಾ ನಿಯಂತ್ರಣ ನೀತಿಯ ಅನುಷ್ಠಾನದಲ್ಲಿ ಸಿಕ್ಕ ಯಶಸ್ಸು ಅಥವಾ ವೈಫಲ್ಯದ ಪ್ರಶ್ನೆ ಅಲ್ಲವೇ ಅಲ್ಲ. ಹೆಚ್ಚು ಸಮೃದ್ಧವಾದ ರಾಜ್ಯಗಳು ಮತ್ತು ಸಾಮಾಜಿಕ ಗುಂಪುಗಳಲ್ಲಿ ಜನಸಂಖ್ಯೆಯು ಬೇಗನೆ ಕುಸಿಯುತ್ತದೆ. ಇದರ ಹಿರಿಮೆಯನ್ನು ಸರ್ಕಾರಗಳು ತೆಗೆದುಕೊಳ್ಳುವುದು ಸರಿಯಲ್ಲ.
ಭಾರತವು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಎದುರಿಸುತ್ತಾ ಬಂದಿರುವ ಬಿಕ್ಕಟ್ಟುಗಳು ಈ ಮೂರು ದಶಕಗಳಲ್ಲಿ ಇನ್ನಷ್ಟು ಹರಿತವಾಗಿವೆ. ಕ್ಷೇತ್ರ ಮರುವಿಂಗಡಣೆ ಸೃಷ್ಟಿಸಬಹುದಾದ ಹೊಸ ಬಿಕ್ಕಟ್ಟು ಈ ಬಿಕ್ಕಟ್ಟುಗಳನ್ನು ಇನ್ನಷ್ಟು ಸಕ್ರಿಯಗೊಳಿಸಬಹುದು. ಹಾಗಾಗಿಯೇ ಶಾಶ್ವತ ಸ್ಥಗಿತವು ಮುಖ್ಯವಾಗುತ್ತದೆ.
ಮೊದಲನೆಯದಾಗಿ, ಸಾಂಸ್ಕೃತಿಕ ಬಿಕ್ಕಟ್ಟು. ಹಿಂದಿ ಮಾತನಾಡುವ ಉತ್ತರ ಭಾರತದ ರಾಜ್ಯಗಳು, ಹಿಂದಿ ಮಾತನಾಡದ ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ರಾಜ್ಯಗಳ ನಡುವೆ ಮೊದಲಿನಿಂದಲೂ ವ್ಯತ್ಯಾಸಗಳಿವೆ. ಭಾಷಿಕ ರಾಜ್ಯ ರಚನೆ ಮತ್ತು ಒಂದೇ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಹೇರದಿರುವ ಮೂಲಕ ಈ ಬಿಕ್ಕಟ್ಟು ಇನ್ನಷ್ಟು ಗಾಢವಾಗದಂತೆ ನಮ್ಮ ರಾಜಕೀಯ ನಾಯಕತ್ವವು ನೋಡಿಕೊಂಡಿತು. ಎರಡನೆಯದಾಗಿ, ಕಳೆದ ಮೂರು ದಶಕಗಳಲ್ಲಿನ ಆರ್ಥಿಕ ಅಭಿವೃದ್ಧಿಯು ದಕ್ಷಿಣ–ಪಶ್ಚಿಮ ಭಾರತ ಮತ್ತು ಉತ್ತರ–ಪೂರ್ವ ಭಾರತದ ರಾಜ್ಯಗಳ ನಡುವೆ ಕಣ್ಣಿಗೆ ಕುಕ್ಕುವಂತಹ ಅಸಮಾನತೆ ಸೃಷ್ಟಿಸಿದೆ. ಆಸಕ್ತಿಕರವೆಂದರೆ, ಭಾಷಿಕವಾಗಿ ಅನ್ಯಾಯಕ್ಕೆ ಒಳಗಾಗಿರುವ ಪ್ರದೇಶಗಳು ಆರ್ಥಿಕವಾಗಿ ಮೇಲುಗೈ ಪಡೆದಿವೆ.
ಮೂರನೆಯದಾಗಿ, ಬಿಜೆಪಿಯು ಮುಂಚೂಣಿಗೆ ಬರುವುದರೊಂದಿಗೆ ರಾಜಕೀಯವಾಗಿ ಮತ್ತೊಂದು ಬಿಕ್ಕಟ್ಟು ಮುನ್ನೆಲೆಗೆ ಬಂದಿದೆ. ಬಿಜೆಪಿ ಪ್ರಾಬಲ್ಯದ ಉತ್ತರ ಭಾರತದ ರಾಜ್ಯಗಳು ಮತ್ತು ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ ಪಕ್ಷಗಳಿರುವ ಇತರ ರಾಜ್ಯಗಳು (ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ), ಬಿಜೆಪಿಗೆ ಹೆಚ್ಚಿನ ಅಸ್ತಿತ್ವ ಇಲ್ಲದ ರಾಜ್ಯಗಳ (ಆಂಧ್ರಪ್ರದೇಶ, ತಮಿಳುನಾಡು, ಕೇರಳ) ನಡುವೆ ಇನ್ನೊಂದು ಬಿಕ್ಕಟ್ಟು ಸೃಷ್ಟಿ
ಆಗಿದೆ. ಈ ಮೂರೂ ಬಿಕ್ಕಟ್ಟುಗಳು ಒಮ್ಮೆಗೇ ಪೂರ್ಣವಾಗಿ ಎದುರಾಗಬೇಕಾಗಿಲ್ಲ. ಆದರೆ, ಹಿಂದಿ ಭಾಷಿಕ ಪ್ರದೇಶ ಮತ್ತು ದಕ್ಷಿಣ ಭಾರತದ ರಾಜ್ಯಗಳು ಈ ಬಿಕ್ಕಟ್ಟುಗಳ ವಿಚಾರದಲ್ಲಿ ವಿರುದ್ಧ ದಿಕ್ಕಿನಲ್ಲಿ ಇವೆ. ಕ್ಷೇತ್ರ ಮರು ವಿಂಗಡಣೆಯ ನಿಜವಾದ ಅಪಾಯವೆಂದರೆ, ಅದು ಇದೇ ಮಾದರಿಯಲ್ಲಿ ಇನ್ನೊಂದು ಬಿಕ್ಕಟ್ಟಿಗೆ ಅವಕಾಶ ಮಾಡಿಕೊಡುತ್ತದೆ.
2026ರಲ್ಲಿ ಇರಬಹುದಾದ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿ
ದರೆ ಏನಾಗಬಹುದು ಎಂಬುದನ್ನು ಮಿಲನ್ ವೈಷ್ಣವ್ ಮತ್ತು ಜೇಮಿ ಹಿನ್‌ಸ್ಟನ್ ವಿಶ್ಲೇಷಿಸಿದ್ದಾರೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳು, ಅಂದರೆ ಕೇರಳ (8), ತಮಿಳುನಾಡು (8), ಆಂಧ್ರಪ್ರದೇಶ ಮತ್ತು ತೆಲಂಗಾಣ (8), ಕರ್ನಾಟಕ (2) ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ. ಕ್ಷೇತ್ರಗಳನ್ನು ಕಳೆದುಕೊಳ್ಳಲಿರುವ ಇತರ ರಾಜ್ಯಗಳು ಕೂಡ ಹಿಂದಿ ಭಾಷಿಕವಲ್ಲದವೇ ಆಗಿವೆ. ಅವೆಂದರೆ, ಪಶ್ಚಿಮ ಬಂಗಾಳ (4), ಒಡಿಶಾ (3) ಮತ್ತು ಪಂಜಾಬ್ (1). ತಲಾ ಎರಡು ಕ್ಷೇತ್ರಗಳನ್ನು ಕಳೆದುಕೊಳ್ಳಲಿರುವ ಹಿಮಾಚಲ ಪ್ರದೇಶ, ಉತ್ತರಾಖಂಡವನ್ನು ಬಿಟ್ಟರೆ ಉತ್ತರ ಭಾರತದ ಎಲ್ಲ ಹಿಂದಿ ಭಾಷಿಕ ರಾಜ್ಯಗಳಿಗೆ ಲಾಭ ಆಗಲಿದೆ. ಉತ್ತರ ಪ್ರದೇಶ (11), ಬಿಹಾರ (10), ರಾಜಸ್ಥಾನ (6), ಮಧ್ಯ ಪ್ರದೇಶದಲ್ಲಿ (4) ಕ್ಷೇತ್ರಗಳು ಹೆಚ್ಚಾಗಲಿವೆ. ಲೋಕಸಭೆಯ 543 ಕ್ಷೇತ್ರಗಳ ಪೈಕಿ 226 ಈಗ ಹಿಂದಿ ಭಾಷಿಕ ರಾಜ್ಯಗಳಲ್ಲಿವೆ. ಅವು 259ಕ್ಕೆ ಏರಲಿವೆ. ಸರಳ ಬಹುಮತಕ್ಕೆ ಬಹಳ ಹತ್ತಿರವಾದ ಸಂಖ್ಯೆ ಇದು. ದಕ್ಷಿಣ ಭಾರತದಲ್ಲಿ ಈಗ 132 ಕ್ಷೇತ್ರಗಳಿದ್ದು, ಪೂರ್ವ ಅಥವಾ ಪಶ್ಚಿಮ ರಾಜ್ಯಗಳ ಜೊತೆಗೂಡಿ ಸಂವಿಧಾನ ತಿದ್ದುಪಡಿಯಂತಹ ಸಂದರ್ಭದಲ್ಲಿ ಅದನ್ನು ತಡೆಯುವ ಶಕ್ತಿಯನ್ನು ಹೊಂದಿವೆ. ಆದರೆ, ಕ್ಷೇತ್ರ ಮರುವಿಂಗಡಣೆ ಆದರೆ, ಈ ಶಕ್ತಿಯೇ ಕೈತಪ್ಪಲಿದೆ.
ವೈವಿಧ್ಯದಲ್ಲಿ ಏಕತೆಯ ಚಿಂತನೆ, ಅತಿ ಪ್ರಾಬಲ್ಯ ಯಾರಿಗೂ ಇಲ್ಲ ಎಂಬ ಸ್ಫೂರ್ತಿಯು ಭಾರತ ಒಕ್ಕೂಟದ ಅಡಿಪಾಯವಾಗಿದೆ. ಆದರೆ, ಕ್ಷೇತ್ರ ಮರುವಿಂಗಡಣೆಯು ಈ ಸ್ಫೂರ್ತಿಗೆ ವಿರುದ್ಧವಾಗಿದೆ. ಭಾರತವು ರಾಜ್ಯಗಳೆಲ್ಲ ಒಟ್ಟಾಗಿ ರೂಪಿಸಿಕೊಂಡ ಸಾಂಪ್ರದಾಯಿಕವಾದ ಒಕ್ಕೂಟ ಆಗಿದ್ದರೆ ಅಲ್ಲಿ ಎಲ್ಲವೂ ಲಿಖಿತವಾಗಿಯೇ ಇರುತ್ತಿತ್ತು. ಅದು, ರಾಜ್ಯಗಳು ‘ಪರಸ್ಪರ ಜೊತೆ’ಯಾದ ಒಕ್ಕೂಟ. ಹಾಗಾಗಿ, ಇಲ್ಲಿ ಕರಾರು ಎಂಬುದು ಅಂತರ್ಗತ ಮತ್ತು ಅದುವೇ ತಳಪಾಯ. ಇಂತಹುದೊಂದು ಕರಾರಿಗೆ ಮನ್ನಣೆ ಕೊಟ್ಟರೆ ಎರಡು ವಿಚಾರಗಳನ್ನು ಶಾಶ್ವತವಾಗಿ ಮುಚ್ಚಿಬಿಡಬಹುದು: ಅವೆಂದರೆ, ಜನಸಂಖ್ಯೆ ಆಧಾರಿತವಾದ ರಾಜಕೀಯ ಪ್ರಾತಿನಿಧ್ಯ ಮತ್ತು ಒಕ್ಕೂಟದ ಸಂಪನ್ಮೂಲದಲ್ಲಿ ತೆರಿಗೆ ಪಾಲು ಆಧಾರಿತ ಹಂಚಿಕೆ. ಹೀಗೆ ಆದರೆ, ಹಿಂದಿ ಭಾಷಿಕ ಮತ್ತು ಹಿಂದಿಯೇತರ ಭಾಷಿಕ ರಾಜ್ಯಗಳಿಗೆ ಒಂದೆಡೆ ಲಾಭವೂ ಮತ್ತೊಂದೆಡೆ ನಷ್ಟವೂ ಉಂಟಾ
ಗುತ್ತದೆ. ಅಲ್ಪಾವಧಿಯ ಚುನಾವಣಾ ಲಾಭ–ನಷ್ಟದ ಲೆಕ್ಕಾಚಾರಗಳನ್ನು ಬದಿಗೊತ್ತಿ ಇಂತಹ ಕರಾರಿನ ಕುರಿತು ರಾಷ್ಟ್ರೀಯ ಸಹಮತ ಏರ್ಪಡಬೇಕು. ಆಗ, ಪಾರ್ಥ ಚಟರ್ಜಿ ಹೇಳಿದಂತೆ, ಭಾರತವು ‘ನ್ಯಾಯಯುತ
ಗಣರಾಜ್ಯ’ವಾಗುತ್ತದೆ. ಇದುವೇ ಭಾರತ ಗಣರಾಜ್ಯದ ಸ್ಥಾಪಿತ ತತ್ವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.