ADVERTISEMENT

ವಿಶ್ಲೇಷಣೆ | ರಕ್ಷಿಸಿಕೊಳ್ಳೋಣ ‘ಜೀವ ಖಜಾನೆ’

ಮಣ್ಣಿನ ಸಂರಕ್ಷಣೆಯ ಕಡೆ ಇಡೀ ವಿಶ್ವ ಗಂಭೀರವಾಗಿ ಚಿಂತಿಸಿ ಕಾರ್ಯಪ್ರವೃತ್ತವಾಗಬೇಕಿದೆ

ಗುರುರಾಜ್ ಎಸ್.ದಾವಣಗೆರೆ
Published 4 ಡಿಸೆಂಬರ್ 2024, 22:30 IST
Last Updated 4 ಡಿಸೆಂಬರ್ 2024, 22:30 IST
   

ಮಣ್ಣಿಂದಲೇ ಅನ್ನ, ಮಣ್ಣಿಂದಲೇ ಚಿನ್ನ, ಮಣ್ಣಿಂದಲೇ ತ್ರಾಣ, ಮಣ್ಣಿಂದಲೇ ಪ್ರಾಣ– ಇವು, ಮಣ್ಣಿನ ಮಹತ್ವವನ್ನು ಸಾರುವ ದಾಸರ ಪದದ ಸಾಲುಗಳು. ಕೃಷಿ ಕ್ಷೇತ್ರದಲ್ಲಿ ಮಣ್ಣನ್ನು ರೈತನ ಕಣ್ಣು ಎನ್ನಲಾಗುತ್ತದೆ. ಹಿಂದಿನ ಎರಡು ಶತಮಾನಗಳಲ್ಲಿ ಮಣ್ಣಿನ ಸ್ವರೂಪ ಬಹಳಷ್ಟು ಬದಲಾಗಿದೆ.

ಪ್ರತಿ ಐದು ಸೆಕೆಂಡಿಗೆ, ಫುಟ್ಬಾಲ್ ಆಟದ ಮೈದಾನದಷ್ಟು ವಿಸ್ತಾರವಾದ ಪ್ರದೇಶದ ಮಣ್ಣು ಸವಕಳಿ ಹೊಂದುತ್ತಿದೆ. ಗಾಳಿ ಬೀಸುವಾಗ, ನೀರು ಹರಿಯುವಾಗ ಮತ್ತು ಉಳುಮೆ ಮಾಡುವಾಗ ಮಣ್ಣಿನ ಸವಕಳಿ ಹೆಚ್ಚು ಸಂಭವಿಸುತ್ತದೆ. ಈಗಾಗಲೇ ಭೂ ಭಾಗದ ಮೂರನೇ ಒಂದರಷ್ಟು ಪ್ರದೇಶ ಸವಕಳಿಯಾಗಿದ್ದು 2050ರ ವೇಳೆಗೆ ಇದರ ಪ್ರಮಾಣ ದುಪ್ಪಟ್ಟಾಗಲಿದೆ ಎಂಬ ಆಘಾತಕಾರಿ ಮಾಹಿತಿ ಇದೆ. ಮಣ್ಣಿನ ಸವಕಳಿಯಿಂದಾಗಿ ಪ್ರತಿವರ್ಷ 750 ಕೋಟಿ ಟನ್ ಫಲವತ್ತಾದ ಮೇಲ್ಮಣ್ಣು ತನ್ನೆಲ್ಲಾ ಪೋಷಕಾಂಶಗಳೊಂದಿಗೆ ಅಣೆಕಟ್ಟು ಇಲ್ಲವೇ ಸಮುದ್ರಗಳ ತಳ ಸೇರುತ್ತಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಶೇಕಡ 71ರಷ್ಟು ಕೃಷಿಭೂಮಿ ನಿಸ್ಸಾರಗೊಳ್ಳಲಿದ್ದು, ಆಹಾರಧಾನ್ಯ ಉತ್ಪಾದನೆ ಕುಸಿಯಲಿದೆ ಎಂಬ ಅಂದಾಜಿದೆ.

ಭೂಮಿಯ ಬಿಸಿಯಷ್ಟೇ ಗಂಭೀರವಾಗಿರುವ ಮಣ್ಣಿನ ಸವಕಳಿ ಸಮಸ್ಯೆಯನ್ನು ತಡೆಯುವುದರ ಕುರಿತು ‘ನಮ್ಮ ನೆಲ, ನಮ್ಮ ಭವಿಷ್ಯ’ ಎಂಬ ತಿರುಳನ್ನು ಇಟ್ಟುಕೊಂಡು, ಮಣ್ಣೆಂಬ ಜೀವ ಖಜಾನೆಯನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು 197 ದೇಶಗಳ ನಾಯಕರು ಇದೇ 2ರಿಂದ 13ರವರೆಗೆ ರಿಯಾದ್ ನಗರದಲ್ಲಿ ನಡೆಯುತ್ತಿರುವ ಸಭೆಯಲ್ಲಿ ವಿಶ್ವ ಕಾರ್ಯಸೂಚಿ ರೂಪಿಸುತ್ತಿದ್ದಾರೆ. ಫಲವತ್ತಾದ ಭೂಮಿಯ ಮರುಭೂಮೀಕರಣದ ಪ್ರಮಾಣವು ಭೂಗೋಳದ ಸುಸ್ಥಿರತೆಯ ಎಲ್ಲ ಮಿತಿ, ಗಡಿಗಳನ್ನು ಮೀರಿರುವ ಬಗ್ಗೆ ಭಾರಿ ಆತಂಕ ಮೊದಲ ದಿನದ ಚರ್ಚೆಗಳಲ್ಲಿ ವ್ಯಕ್ತವಾಗಿದೆ. ಮರುಭೂಮೀಕರಣ ಪ್ರಕ್ರಿಯೆಯು ದೊಡ್ಡ ಅಪಾಯದ ಸೂಚನೆಯಾಗಿದ್ದು, ಮಾನವ ಸಂತತಿಯ ಉಳಿವಿಗೆ ಸಂಚಕಾರ ತರಲಿದೆ ಎಂದು ಯುಎನ್ ಕನ್ವೆನ್ಷನ್ ಟು ಕಂಬ್ಯಾಟ್ ಡೆಸರ್ಟಿಫಿಕೇಶನ್ (ಯುಎನ್‌ಸಿಸಿಡಿ) ಒಕ್ಕೂಟ ಹೇಳಿದೆ.

ADVERTISEMENT

ಅರಣ್ಯನಾಶ, ನಗರೀಕರಣ ಮತ್ತು ಅವೈಜ್ಞಾನಿಕ ಕೃಷಿ ಪದ್ಧತಿಯಿಂದಾಗಿ ಪ್ರತಿವರ್ಷ ಹತ್ತು ಲಕ್ಷ ಚದರ ಕಿಲೊ ಮೀಟರಿನಷ್ಟು ಭೂಮಿಯು ತ್ವರಿತಗತಿಯಲ್ಲಿ ಬರಡಾಗುತ್ತಿದೆ. ಇದು ಇತರ ಜೀವಿ ಪರಿಸ್ಥಿತಿಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ವಿಶ್ವದ 1.5 ಕೋಟಿ ಚದರ ಕಿಲೊ ಮೀಟರ್‌ನಷ್ಟು ವ್ಯಾಪ್ತಿಯ ಭೂಪ್ರದೇಶವು ಈಗಾಗಲೇ ಬರಡಾಗಿದೆ. ಇದು ರಷ್ಯಾ ಅಥವಾ ಅಂಟಾರ್ಕ್ಟಿಕಾ ಖಂಡದ ವಿಸ್ತೀರ್ಣಕ್ಕೆ ಸಮ. ಈ ಜಾಗದಲ್ಲಿ ಒಂದು ಹುಲ್ಲುಕಡ್ಡಿಯೂ ಬೆಳೆಯುತ್ತಿಲ್ಲ. ದುಃಖದ ವಿಷಯವೆಂದರೆ, ಜಗತ್ತಿನ ಬಡವರ ಪೈಕಿ ಹೆಚ್ಚಿನ ಜನ ಈ ನೆಲದಲ್ಲೇ ವಾಸವಿದ್ದಾರೆ.

ನಮ್ಮ ರಾಜ್ಯದ ಶೇ 36ರಷ್ಟು ಭೂ ಪ್ರದೇಶವು ಸಾರ ಕಳೆದುಕೊಂಡು ವೇಗವಾಗಿ ಬರಡಾಗುತ್ತಿದೆ. ಇದರಲ್ಲಿ 20 ಜಿಲ್ಲೆಗಳು ಸೇರಿದ್ದು, ಮಲೆನಾಡಿನ ಭಾಗವೂ ಇರುವುದು ದೊಡ್ಡ ಆತಂಕ ಸೃಷ್ಟಿಸಿದೆ. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಮತ್ತು ಮೈಸೂರು, ಕೊಡಗು, ತುಮಕೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಅನೇಕ ಭಾಗಗಳಲ್ಲಿ ಮರುಭೂಮೀಕರಣ ಹೆಚ್ಚುತ್ತಿದೆ.

ವಾತಾವರಣಕ್ಕಿಂತ ಮೂರು ಪಟ್ಟು ಹೆಚ್ಚಿನ ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮಣ್ಣಿಗಿದೆ. ಅಂತರ್ಜಲದ ಮಾಲಿನ್ಯ ತಡೆಯುವ ಫಿಲ್ಟರ್‌ನಂತೆ ಮಣ್ಣು ಕೆಲಸ ಮಾಡುತ್ತದೆ. ವಿಶ್ವದ ಶೇ 10ರಷ್ಟು ಇಂಗಾಲದ ಡೈಯಾಕ್ಸೈಡ್ ಅನ್ನು ಮಣ್ಣು ಇಂಗಿಸಿಕೊಳ್ಳುತ್ತದೆ. ಕಲ್ಲುಬಂಡೆಗಳು ಪುಡಿಯಾಗುವುದರಿಂದ ಅದರಲ್ಲಿನ ಖನಿಜಗಳು ಮಣ್ಣಾಗಿ ಬದಲಾಗಿ ತೇವಾಂಶ ಹೀರಿಕೊಳ್ಳುವ ಗುಣ ಪಡೆಯುತ್ತವೆ. ಹಿಡಿ ಮಣ್ಣಿನಲ್ಲಿ ಏಳುನೂರು ಕೋಟಿ ಬ್ಯಾಕ್ಟೀರಿಯಾಗಳು ಇರುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಇದರಿಂದಲೇ ಮಣ್ಣಿಗೆ ಫಲವತ್ತತೆ ದೊರಕುತ್ತದೆ. ನಮ್ಮಲ್ಲಿ ಮೆಕ್ಕಲುಮಣ್ಣು, ಕಪ್ಪು, ಕೆಂಪು, ಲ್ಯಾಟರೈಟ್, ಶುಷ್ಕ, ಅರಣ್ಯ ಮತ್ತು ಪರ್ವತ ಮಣ್ಣು, ಜವುಗು, ಲವಣಯುಕ್ತ ಅಥವಾ ಕ್ಷಾರೀಯ ಎಂಬ ಎಂಟು ಬಗೆಯ ಮಣ್ಣುಗಳಿವೆ.

ಯಾವುದೇ ಭೂಪ್ರದೇಶದ ಜೀವಿ ಪರಿಸರದಲ್ಲಿ ಹಲವು ಮಿತಿಗಳಿರುತ್ತವೆ. ವಾತಾವರಣಕ್ಕೆ ಶಾಖವರ್ಧಕ ಅನಿಲಗಳ ಸೇರ್ಪಡೆ ಪ್ರಮಾಣ, ಜೀವಿಗೋಳದ ಏಕತೆ, ಜೀವಿವೈವಿಧ್ಯ ಮತ್ತು ಸಂತತಿ ವಿನಾಶ, ಓಝೋನ್ ಪದರ ತೆಳುವಾಗುವುದು, ಸಾಗರ ನೀರಿನ ಆಮ್ಲೀಕರಣ, ವಾತಾವರಣದಲ್ಲಿ ರಂಜಕ ಮತ್ತು ಸಾರಜನಕದ ಪ್ರಮಾಣ, ನೈಸರ್ಗಿಕ ಭೂಪ್ರದೇಶ- ಕಾಡುಗಳ ನಾಶ, ನಗರೀಕರಣ ಮತ್ತು ಅರಣ್ಯನಾಶ, ಸಿಹಿನೀರಿನ ಮೂಲಗಳ ಬಳಕೆ ಮತ್ತು ಶೋಷಣೆ, ವಾತಾವರಣದಲ್ಲಿರುವ ತೇಲು ಕಣಗಳ ಪ್ರಮಾಣ, ವಾತಾವರಣದ ಮೈಕ್ರೊ ಪ್ಲಾಸ್ಟಿಕ್ ಪ್ರಮಾಣ, ಸಾವಯವ ಮಾಲಿನ್ಯಕಾರಕಗಳು ಹಾಗೂ ದೇಹಗ್ರಂಥಿಗಳ ಕೆಲಸ ಕೆಡಿಸುವ ಹೊಸ ಕಣಗಳಿಗೆ ಇರುವ ಮಿತಿಗಳನ್ನು ಪ್ಲಾನೆಟರಿ ಬೌಂಡರೀಸ್‌ ಎಂದು ಗುರುತಿಸಲಾಗಿದೆ. ಈ ಪೈಕಿ ಹಲವು  ಗಡಿಗಳನ್ನು ಈಗಾಗಲೇ ಅತಿಕ್ರಮಿಸಿದ್ದೇವೆ.

ಇದರಲ್ಲಿ ಭೂವ್ಯವಸ್ಥೆಯೇ ಅತ್ಯಂತ ಪ್ರಮುಖ ಘಟಕವಾಗಿದ್ದು, ಇದರ ಗಡಿಯನ್ನು ನಾವು 30 ವರ್ಷಗಳಿಂದ ಅತಿಕ್ರಮಿಸುತ್ತಾ ಬಂದಿದ್ದೇವೆ. ಸುಸ್ಥಿರ ಗುರಿಗಳಲ್ಲಿ ಒಂದಾಗಿರುವ ಮಣ್ಣಿನ ಸಂರಕ್ಷಣೆಯ ಕಡೆ ಇಡೀ ವಿಶ್ವವೇ ಗಂಭೀರವಾಗಿ ಚಿಂತಿಸಿ ಕಾರ್ಯಪ್ರವೃತ್ತವಾಗಬೇಕಿದೆ. 2022ರಲ್ಲಿ ಮಾಂಟ್ರಿಯಲ್‌ನಲ್ಲಿ ಸಭೆ ಸೇರಿದ್ದ ವಿಶ್ವದ 196 ದೇಶಗಳ ನಾಯಕರು, ಈಗಾಗಲೇ ಬರಡಾಗಿರುವ ಜಾಗದ ಶೇಕಡ 30ರಷ್ಟನ್ನು 2030ರ ವೇಳೆಗೆ ಮರಳಿ ಸಹಜ ಸ್ಥಿತಿಗೆ ತರುತ್ತೇವೆ ಎಂದು ಶಪಥ ಮಾಡಿದ್ದರು.

ಬಳಕೆಯಲ್ಲಿರುವ ಕೃಷಿ ಪದ್ಧತಿಗಳಿಂದಾಗಿ ಭೂಮಿಯ ಸತ್ವ ನಾಶಗೊಂಡು ಅದು ಬರಡಾಗುತ್ತಿದೆ ಮತ್ತು ಮರುಭೂಮಿಯಾಗುತ್ತಿದೆ ಎಂಬ ಪ್ರಮುಖ ಆರೋಪವು ಕೃಷಿಯ ಬಗ್ಗೆ ಕೇಳಿಬರುತ್ತಿದೆ. ಅರಣ್ಯನಾಶ, ಮಣ್ಣು ಸವಕಳಿಯು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಭೂ ವ್ಯವಸ್ಥೆಯಲ್ಲಿ ಇರುವ ಅರಣ್ಯದ ಪ್ರಮಾಣವು ನಾವು ಭೂಮಿಯನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಸಾರಜನಕ ಮತ್ತು ರಂಜಕಯುಕ್ತ ಕೃತಕ ರಾಸಾಯನಿಕ ಗೊಬ್ಬರಗಳಿಂದ ಸಿಹಿನೀರಿನ ಮೂಲಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಕೃಷಿ ವಿಸ್ತರಣೆಯಿಂದ ಅರಣ್ಯಗಳು ಒತ್ತುವರಿಯಾಗಿ, ಅವು ನಮಗೆ ನೀಡುತ್ತಿದ್ದ ನೈಸರ್ಗಿಕ ಕೊಡುಗೆಗಳು ಕಡಿಮೆಯಾಗುತ್ತಿವೆ. ಇದನ್ನು ಕೂಡಲೇ ಅರಿತು ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ತಲೆಮಾರುಗಳು ನೀರು, ಅನ್ನ, ಶುದ್ಧ ಗಾಳಿ, ವಸತಿಗಾಗಿ ಪಡಬಾರದ ಬವಣೆ ಪಡುವಂತಾಗುತ್ತದೆ. ಈಗಾಗಲೇ ನಮ್ಮ ಭೂಭಾಗದ ಶೇಕಡ 30ರಷ್ಟು ಪ್ರದೇಶವು ಮರುಭೂಮಿಯಾಗಿದೆ. 15 ವರ್ಷಗಳಿಂದ ದೇಶದ ಅನೇಕ ರಾಜ್ಯಗಳ ಭೂಪ್ರದೇಶಗಳಲ್ಲಿ ಮಣ್ಣಿನ ಸತ್ವ ದೊಡ್ಡ ಪ್ರಮಾಣದಲ್ಲಿ ಕುಂದುತ್ತಿದೆ. ಮರುಭೂಮಿ ಪ್ರದೇಶಗಳು ವಿಸ್ತಾರಗೊಳ್ಳುತ್ತಿವೆ. ಕೆಲವೇ ಸೆಂಟಿಮೀಟರ್ ಎತ್ತರದ ಮಣ್ಣು ತಯಾರಾಗಲು ಸಾವಿರ ವರ್ಷಗಳೇ ಬೇಕು. ದೇಶದ ಒಟ್ಟು ಭೂಭಾಗದ ಕಾಲು ಭಾಗದಷ್ಟು ಇರುವ ಬರಡು ಪ್ರದೇಶದ ಅಭಿವೃದ್ಧಿಯು ಒಂದೆರಡು ದಿನ ಅಥವಾ ಒಂದೆರಡು ವರ್ಷಗಳ ಕೆಲಸವಲ್ಲ.

ಭಾರತ ಸರ್ಕಾರವು ಮರುಭೂಮೀಕರಣ ತಡೆಯಲು ರಾಷ್ಟ್ರೀಯ ಯೋಜನೆಯನ್ನು ರೂಪಿಸಿದೆ. ಯೋಜನೆಯ ಅಡಿ ದೇಶದ 15 ರಾಜ್ಯಗಳ ಭೂಪ್ರದೇಶಗಳನ್ನು ಬರಡೀಕರಣದಿಂದ ಮುಕ್ತಗೊಳಿಸಲು ಕೆಲಸ ನಡೆಯುತ್ತಿದೆ. ಮರುಭೂಮೀಕರಣವನ್ನು ತಡೆಯಲು ರಾಷ್ಟ್ರೀಯ ಕೃಷಿ ಅರಣ್ಯ ನೀತಿಯನ್ನು ಹತ್ತು ವರ್ಷಗಳ ಹಿಂದೆಯೇ ಜಾರಿಗೊಳಿಸಲಾಗಿದೆ. ಅಡುಗೆಗೆ ಬೇಕಾದ ಉರುವಲು, ಜಾನುವಾರುಗಳ ಮೇವು, ಮನೆ ಕೆಲಸಕ್ಕೆ ಬೇಕಾದ ಮರಮಟ್ಟುಗಳ ಅಗತ್ಯವನ್ನು ಪೂರೈಸಿಕೊಳ್ಳಲು ಇದು ದೊಡ್ಡ ರೀತಿಯಲ್ಲಿ ನೆರವಾಗುತ್ತದೆ. ಹಣ್ಣಿನ ಮರ, ಬಿದಿರಿನ ಕಾಡು, ಹುಲ್ಲುಗಾವಲು ಬೆಳೆಸುವ ಪದ್ಧತಿಗಳು ಮಣ್ಣಿನ ಸವಕಳಿ ತಡೆಯುತ್ತವೆ.

ಬೆಳೆಯ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರ ಬಳಸುತ್ತಿರುವುದು ಮಣ್ಣಿಗೆ ಕಂಟಕಪ್ರಾಯವೆನಿಸಿದೆ. ರೈತರು ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನ ಆರೋಗ್ಯ ಚೀಟಿ (ಸಾಯಿಲ್ ಹೆಲ್ತ್ ಕಾರ್ಡ್) ಪಡೆಯಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ರೈತರಿಗೆ ಈ ಕಾರ್ಡ್ ನೀಡಲಾಗುತ್ತಿದೆ. ಆಹಾರ ಭದ್ರತೆಗೆ ಎದುರಾಗಿರುವ ಬಿಕ್ಕಟ್ಟು ನಿವಾರಿಸಲು ರೈತರು ಮಣ್ಣು ಪರೀಕ್ಷೆಗೆ ಆದ್ಯತೆ ನೀಡಬೇಕು. ಚೀಟಿಯು ಮಣ್ಣಿನಲ್ಲಿರುವ 12 ಪ್ರಮುಖ ಘಟಕಗಳ ಕುರಿತು ಮಾಹಿತಿ ನೀಡುತ್ತದೆ. ಇದನ್ನು ಆಧರಿಸಿ ರೈತರು ವಿವಿಧ ಬೆಳೆಗಳಿಗೆ ಗೊಬ್ಬರ ನೀಡಬೇಕು. ಸರದಿ ಬೆಳೆ, ಹೊದಿಕೆ ಬೆಳೆ, ಬಾಹ್ಯರೇಖೆ ಉಳುಮೆ, ಗಾಳಿ ತಡೆ ಮತ್ತು ತಾರಸಿ ಕೃಷಿ ಪದ್ಧತಿಗಳಿಂದ ಮಣ್ಣಿನ ರಕ್ಷಣೆ ಸಾಧ್ಯ.

ಶಾಲೆ, ಮನೆ ಮತ್ತು ಸಮುದಾಯದ ಜಾಗಗಳಲ್ಲಿ ಗೊಬ್ಬರದ ಗುಂಡಿಗಳನ್ನು ರಚಿಸಿ ಮಣ್ಣಿನ ಗುಣಮಟ್ಟವನ್ನು ಸುಧಾರಿಸಬಹುದು. ಕುಟುಂಬಗಳಿಗೆ ಸೇರಿದ ‘ವಾಡಿ’ಗಳಲ್ಲಿ ನೀರು, ಮಣ್ಣಿನ ಸಂರಕ್ಷಣೆಗೆ ಆದ್ಯತೆ ನೀಡುತ್ತಾ ಕೃಷಿ ಅರಣ್ಯ ಮತ್ತು ತೋಟಗಾರಿಕೆ ಮಾದರಿಯನ್ನು ಅನುಸರಿಸಿದಲ್ಲಿ ಮಣ್ಣಿನ ಸವಕಳಿ ಗಣನೀಯವಾಗಿ ಕಡಿಮೆಯಾಗುತ್ತದೆ. ಸಾವಯವ ಕೃಷಿ ಪದ್ಧತಿಯಲ್ಲೂ ಮಣ್ಣಿನ ಸವಕಳಿ ಕಡಿಮೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.