ADVERTISEMENT

ಅಯೋಧ್ಯೆ ತೀರ್ಪು | ಪೂಜೆ, ಪ್ರಾರ್ಥನೆಯೂ ಸಲ್ಲಲಿ..

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:32 IST
Last Updated 9 ನವೆಂಬರ್ 2019, 19:32 IST
ಡಾ.ಸೈಯದ್ ಶಾ ಮುರ್ತುಜಾ ಹುಸೇನಿ ಹಶ್ಮಿ
ಡಾ.ಸೈಯದ್ ಶಾ ಮುರ್ತುಜಾ ಹುಸೇನಿ ಹಶ್ಮಿ   

ವಿಜಯಪುರ: ಅಯೋಧ್ಯೆಯಲ್ಲಿನ ರಾಮ ಜನ್ಮ ಭೂಮಿ– ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ.

ಅಯೋಧ್ಯೆ ವಿವಾದ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಅನಿಶ್ಚಿತ ಸ್ಥಿತಿ ಈ ಮೊದಲೇ ಇತ್ಯರ್ಥವಾಗಬೇಕಿತ್ತು. ಸುಮ್ಮನೆ ಗೊಂದಲ ಮೂಡಿಸಿ ಇಬ್ಬರಲ್ಲೂ ಅಶಾಂತ ಮನಸ್ಥಿತಿಯನ್ನು ಸೃಷ್ಟಿಸಲಾಗಿತ್ತು. ಈಗ ಬಂದಿರುವ ತೀರ್ಪು ಒಳ್ಳೆಯದಾಗಿದೆ. ಹಿಂದೂ– ಮುಸ್ಲಿಂ ಇಬ್ಬರೂ ಇದನ್ನು ಒಪ್ಪಿಕೊಳ್ಳಬೇಕು. ಈ ವಿಷಯದಲ್ಲಿ ಮತ್ತೆ ಗೊಂದಲ ಸೃಷ್ಟಿಸುವುದು ಬೇಡ. ದೇಶದ ಅಭಿವೃದ್ಧಿ ದೃಷ್ಟಿಯಿಂದ ತೀರ್ಪನ್ನು ಸ್ವಾಗತಿಸಬೇಕು.

ಈ ದೇಶದಲ್ಲಿ ಮಂದಿರ, ಮಸೀದಿಗಳ ಸಂಖ್ಯೆ ಕಡಿಮೆ ಏನಿಲ್ಲ. ಇಂಥಲ್ಲೇ ಪೂಜೆ, ಪ್ರಾರ್ಥನೆ ಸಲ್ಲಿಸಬೇಕು ಎಂದೇನಿಲ್ಲ. ಹಿಂದೂ– ಮುಸ್ಲಿಂ ಯಾರೇ ಆಗಿರಲಿ, ಮೊದಲು ನಾವು ಮನುಷ್ಯರು. ಆ ಬಳಿಕ ಭಾರತೀಯರು. ಆ ನಂತರ ಹಿಂದೂ– ಮುಸ್ಲಿಮರು. ಈ ದೇಶದಲ್ಲಿ ನಾವು ವಾಸಿಸುತ್ತಿದ್ದೇವೆ. ಭಾರತ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರ. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪನ್ನು ಗೌರವಯುತವಾಗಿ ಒಪ್ಪಿಕೊಳ್ಳಬೇಕು.

ADVERTISEMENT

ಈ ತೀರ್ಪು ಎಲ್ಲರನ್ನೂ ಸಮಾಧಾನಪಡಿಸಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ, ಅಲ್ಲಿ ಹಿಂದೂಗಳು ಪೂಜೆ ಸಲ್ಲಿಸಲಿ. ಸುನ್ನಿ ಬೋರ್ಡ್‌ಗೆ ಕೊಡಮಾಡುವ ಐದು ಎಕರೆ ಜಮೀನಿನಲ್ಲಿ ಭವ್ಯವಾದ ಮಸೀದಿ ನಿರ್ಮಾಣವಾಗಿ, ಅಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವಂತಾಗಲಿ. ಆಗ ಪೂಜೆ, ಪ್ರಾರ್ಥನೆ ಎರಡೂ ನಡೆಯುತ್ತವೆ. ಎಲ್ಲರಿಗೂ ಒಳಿತಾಗುತ್ತದೆ.

‘ನಾ ಹಿಂದೂ ಬನೇಗಾ, ನಾ ಮುಸಲ್ಮಾನ್ ಬನೇಗಾ, ಇನ್‌ಸಾನ್‌ ಕಿ ಔಲಾದ್ ಹೈ, ಇನ್‌ಸಾನ್ ಬನೇಗಾ’ (ಹಿಂದೂವೂ ಆಗೂದಿಲ್ಲ, ಮುಸ್ಲಿಂನೂ ಆಗುವುದಿಲ್ಲ; ಮನುಷ್ಯನ ಮಗುವಿದು, ಮನುಷ್ಯನಾಗ್ತಾನೆ) ಎಂಬಂತೆ ನಾವೆಲ್ಲರೂ ಮೊದಲು ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಭಾರತದಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಜೈನ ಮತ್ತು ಪಾರ್ಸಿ ಸೇರಿದಂತೆ ಎಲ್ಲ ಧರ್ಮೀಯರೂ ಇದ್ದಾರೆ. ಈ ದೇಶದಲ್ಲಿ ಎಲ್ಲರಿಗೂ ಧಾರ್ಮಿಕ ಹಕ್ಕು ಇದೆ. ‘ಹಠ’ ಹಿಡಿಯುವುದಕ್ಕಿಂತ ಪರಸ್ಪರ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳಬೇಕು ಎಂಬುದು ಎಲ್ಲರ ಆಶಯ. ಅದಕ್ಕಾಗಿ ಶಾಂತಿಯನ್ನು ಕಾಪಾಡಬೇಕು. ಈ ವಿವಾದಕ್ಕೆ ತೆರೆ ಎಳೆಯಬೇಕು.

ಪ್ರವಾದಿ ಮಹಮ್ಮದ್ ಪೈಗಂಬರ್, ಎಲ್ಲರಿಗೂ ಗೌರವ ಕೊಡಬೇಕು ಎಂದು ಹೇಳಿದ್ದಾರೆ. ಅವರ ಬಳಿ ಯಾವುದೇ ಧರ್ಮದವರು ಹೋದರೂ ಕಂಬಳಿ ಹಾಸಿ, ಕೂರಿಸುತ್ತಿದ್ದರು. ಪರಸ್ಪರರು ಗೌರವಿಸಿದಾಗಲೇ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಆಗಿ ಹೋಗಿದ್ದರ ಬಗ್ಗೆ ಚರ್ಚಿಸದೆ, ಎಲ್ಲರೂ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಈ ಭೂಮಿಯಲ್ಲಿ ನಾವು ಇರುವುದೇ ನಾಲ್ಕು ದಿನ. ಪ್ರೀತಿ ಮಾಡಲು ಸಮಯ ಸಿಗುತ್ತಿಲ್ಲ. ಇನ್ನು ಜಗಳ ಯಾವಾಗ ಮಾಡೋಣ?.

(ಲೇಖಕರು ವಿಜಯಪುರದ ಹಜರತ್ ಹಾಶಿಂಪೀರ್ ದರ್ಗಾದ ಪೀಠಾಧ್ಯಕ್ಷರು)

ನಿರೂಪಣೆ: ಸುಭಾಸ ಎಸ್.ಮಂಗಳೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.