
ಬಿಹಾರದಲ್ಲಿನ ಎನ್‌ಡಿಎ ಗೆಲುವಿನ ಹಿಂದೆ ನಿತೀಶ್ ವರ್ಚಸ್ಸು ಕೆಲಸ ಮಾಡಿದೆ. ಕೋಮುದ್ವೇಷಮುಕ್ತ ರಾಜಕಾರಣ ಹಾಗೂ ಒಬ್ಬನೇ ಮಗನನ್ನು ತಮ್ಮ ಉತ್ತರಾಧಿಕಾರಿಯನ್ನಾಗಿಸುವ ದೌರ್ಬಲ್ಯಕ್ಕೆ ಒಳಗಾಗದ ವಿವೇಕ ಅವರನ್ನು ಸಮಕಾಲೀನ ರಾಜಕಾರಣದಲ್ಲಿ ಭಿನ್ನವಾಗಿಸಿದೆ.
ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟಕ್ಕೆ ಗೆಲ್ಲಲು ಹಲವು ಕಾರಣಗಳಿದ್ದವು, ಸೋಲಲು ಕಾರಣಗಳು ಕಡಿಮೆ. ಮಹಾಘಟಬಂಧನಕ್ಕೆ ಸೋಲಲು ಹಲವು ಕಾರಣಗಳಿದ್ದವು, ಗೆಲ್ಲಲು ಕಾರಣಗಳು ಕಡಿಮೆ.
ಎನ್‌ಡಿಎ ಗೆಲುವಿಗೆ ಮೊದಲ ಕಾರಣ, ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ಮೂರು ದಶಕಗಳಿಂದ ಯೋಜಿತ ರೀತಿಯಲ್ಲಿ ಕಟ್ಟಿ ಬೆಳೆಸುತ್ತಾ ಬಂದಿರುವ ಅತಿಹಿಂದುಳಿದ ಜಾತಿ(ಇಬಿಸಿ)ಗಳು ಮತ್ತು ಮಹಿಳೆಯರ ಮತ ಬ್ಯಾಂಕ್. ನಿತೀಶ್ ಕುಮಾರ್ ಬಿಹಾರದಲ್ಲಿ ನಡೆಸಿರುವ ಸಾಮಾಜಿಕ ನ್ಯಾಯ ಹಂಚಿಕೆಯ ಮೌನಕ್ರಾಂತಿಯನ್ನು ಅರ್ಥಮಾಡಿಕೊಳ್ಳದೆ ಹೋದರೆ, ಕಳೆದ ಮೂರು ಚುನಾವಣೆಗಳಲ್ಲಿ ಅವರು ಆಡಳಿತ ವಿರೋಧಿ ಅಲೆಯನ್ನು ಎದುರಿಸಿ ಕೈವಶಮಾಡಿಕೊಂಡ ಗೆಲುವನ್ನು ಖಂಡಿತ ಅರ್ಥಮಾಡಿಕೊಳ್ಳಲು ಸಾಧ್ಯ ಇಲ್ಲ.
ಲಾಲು ಪ್ರಸಾದ್ ಯಾದವ್ ಅವರು ರಾಜ್ಯದ ಜನಸಂಖ್ಯೆಯಲ್ಲಿ ಶೇ 14ರಷ್ಟಿರುವ ಯಾದವರು ಮತ್ತು ಶೇ 18ರಷ್ಟಿರುವ ಮುಸ್ಲಿಮರನ್ನು ಒಳಗೊಂಡ ಎಂ–ವೈ ಸೂತ್ರವನ್ನು ಹೆಣೆದು ಪ್ರಾರಂಭದಿಂದಲೇ ಚುನಾವಣಾ ವಿಜಯದ ಮೆಟ್ಟಿಲುಗಳನ್ನು ಸರಸರನೇ ಮೇಲೇರುತ್ತಾ ಹೋದವರು. ಸಂಖ್ಯಾಬಲ ಇಲ್ಲದ ಹಿಂದುಳಿದ ಕುರ್ಮಿ ಸಮುದಾಯಕ್ಕೆ ಸೇರಿರುವ ತಮ್ಮಿಂದ ಲಾಲು ಜಾತಿಸೂತ್ರವನ್ನು ಭೇದಿಸಿ ಮುನ್ನಡೆಯಲು ಸಾಧ್ಯ ಇಲ್ಲ ಎನ್ನುವುದನ್ನು ಮನಗಂಡಿದ್ದ ನಿತೀಶ್ ಕಣ್ಣಿಟ್ಟದ್ದು ರಾಜ್ಯದ ಅತಿಹಿಂದುಳಿದ ಜಾತಿಗಳ ಮೇಲೆ.
ಬಿಹಾರದಲ್ಲಿ ಶೇ 63ರಷ್ಟಿರುವ ಹಿಂದುಳಿದ ಜಾತಿಗಳಲ್ಲಿ ಅತಿಹಿಂದುಳಿದ ಜಾತಿಗೆ ಸೇರಿರುವ 113 ಜಾತಿಗಳ ಒಟ್ಟು ಜನಸಂಖ್ಯಾ ಪ್ರಮಾಣ ಶೇ 36. ಯಾದವ್ (ಶೇ 14), ಕುರ್ಮಿ (ಶೇ 2.88), ಕೊಯಿರಿ (ಶೇ 4.21) ಮತ್ತಿತರ 30 ಬಲಾಢ್ಯ ಹಿಂದುಳಿದ ಜಾತಿಗಳ ಪ್ರಮಾಣ ಶೇ 27.12. ನಿತೀಶ್ ಕುಮಾರ್ 2005ರಲ್ಲಿ ಅಧಿಕಾರಕ್ಕೆ ಬಂದಾಗ ಮೊದಲು ಮಾಡಿದ ಕೆಲಸ, ಹಿಂದುಳಿದ ಜಾತಿಗಳಿಗಿದ್ದ ಶೇ 27ರಷ್ಟು ಮೀಸಲಾತಿಯನ್ನು ಒಡೆದು, ಹಿಂದುಳಿದ ಜಾತಿಗಳಿಗೆ ಶೇ 12 ಮತ್ತು ಅತಿ ಹಿಂದುಳಿದ ಜಾತಿಗಳಿಗೆ ಶೇ 18ರ ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸಿದ್ದು. ಎರಡು ವರ್ಷಗಳ ಹಿಂದೆ ಇಬಿಸಿ ಮೀಸಲಾತಿಯನ್ನು ಶೇ 18ರಿಂದ 25ಕ್ಕೆ ಮತ್ತು ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಶೇ 12ರಿಂದ 18ಕ್ಕೆ ಹೆಚ್ಚಿಸಿದರು. (ಇದು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ).
ಇದರ ಜೊತೆಗೆ ನಿತೀಶ್ ಕುಮಾರ್ ಬಹಳ ಜತನದಿಂದ ಮಹಿಳಾ ಮತಬ್ಯಾಂಕನ್ನು ಸೃಷ್ಟಿಸಿದ್ದಾರೆ. ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಬಿಹಾರದಲ್ಲಿಯೂ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇತ್ತು. 2006ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ದೇಶದಲ್ಲಿಯೇ ಮೊದಲ ಬಾರಿ ಮಹಿಳೆಯರ ಮೀಸಲಾತಿಯನ್ನು ಶೇ 50ಕ್ಕೆ ಹೆಚ್ಚಿಸಿದ್ದರು. ಇದು ಅಂದಾಜು ಒಂದೂವರೆ ಲಕ್ಷ ಮಹಿಳೆಯರಿಗೆ ತಳಮಟ್ಟದಲ್ಲಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದೆ.
ಮುಂದಿನ ದಿನಗಳಲ್ಲಿ ಮಹಿಳಾ ಮತಬ್ಯಾಂಕನ್ನು ವಿಸ್ತರಿಸಿದ ನಿತೀಶ್ ‘ಜೀವಿಕಾ’ ಎಂಬ ಸ್ವಸಹಾಯ ಗುಂಪನ್ನು ಸ್ಥಾಪಿಸಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನಮಾಡಿದರು. ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ವಿತರಿಸಿದರು. ವೈಫಲ್ಯಗಳ ಆರೋಪಗಳೇನೇ ಇರಲಿ, ನಿತೀಶ್ ಜಾರಿಗೆ ತಂದಿರುವ ಸಾರಾಯಿ ನಿಷೇಧ ಕೂಡಾ ಮಹಿಳೆಯರ ಮೆಚ್ಚುಗೆಗೆ ಪಾತ್ರವಾದ ನಿರ್ಧಾರ. ಈ ಅತಿಹಿಂದುಳಿದ ಜಾತಿಗಳು ಮತ್ತು ಮಹಿಳೆಯರ ಮತಬ್ಯಾಂಕ್ ಕಳೆದ 20 ವರ್ಷಗಳಲ್ಲಿ ನಿತೀಶ್ ಕುಮಾರ್ ಅವರ ರಾಜಕೀಯಕ್ಕೆ ನಿರಂತರವಾಗಿ ಬಲವನ್ನು ತುಂಬುತ್ತಾ ಬಂದಿದೆ. ಚುನಾವಣಾಪೂರ್ವದಲ್ಲಿ ಆಮಿಷದ ರೂಪದಲ್ಲಿ ನೀಡಲಾದ ಹತ್ತು ಸಾವಿರ ರೂಪಾಯಿಗಳ ‘ಉಡುಗೊರೆ’ ಈ ಮಹಿಳಾ ಮತಬ್ಯಾಂಕಿನ ಬೆಂಬಲವನ್ನು ಗ್ಯಾರಂಟಿ ಮಾಡಿದೆ.
ಗೆಲುವಿನ ಎರಡನೇ ಕಾರಣ, ನಿರಾಯಾಸವಾಗಿ ಎನ್‌ಡಿಎ ಮಿತ್ರಪಕ್ಷಗಳ ನಡುವೆ ನಡೆದಿರುವ ಮತ ವರ್ಗಾವಣೆ. ಕಳೆದ ಚುನಾವಣೆಯಲ್ಲಿ ಎನ್‌ಡಿಎ ಕೂಟದಲ್ಲಿ ಇಲ್ಲದ ಎಲ್‌ಜೆಪಿ ಪ್ರಧಾನವಾಗಿ ಜೆಡಿಯುಗೆ ಇದಿರಾಗಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿ 28 ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳನ್ನು ಸೋಲಿಸಿತ್ತು. ಚಿರಾಗ್ ಪಾಸ್ವಾನ್ ಪ್ರತ್ಯೇಕವಾಗಿ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಕುಮ್ಮಕ್ಕಿನಿಂದಾಗಿ ಜೆಡಿಯು ಮತ್ತು ಬಿಜೆಪಿ ನಡುವೆ ಕೂಡಾ ಮತಗಳ ವರ್ಗಾವಣೆಯಲ್ಲಿ ವ್ಯತ್ಯಾಸ ಉಂಟಾಗಿತ್ತು. ಈ ಬಾರಿ ಹಳೆಯ ತಪ್ಪನ್ನು ಬಿಜೆಪಿ ಮಾಡಿಲ್ಲ. ಬಿಜೆಪಿಯನ್ನು ಸಾಂಪ್ರದಾಯಿಕವಾಗಿ ಬೆಂಬಲಿಸುತ್ತಾ ಬಂದಿರುವ ಶೇ 15ರಷ್ಟಿರುವ ಬ್ರಾಹ್ಮಣ, ಭೂಮಿಹಾರ್, ರಜಪೂತಗಳನ್ನೊಳಗೊಂಡ ಮೇಲ್ಜಾತಿಗಳು ಈ ಚುನಾವಣೆಯಲ್ಲಿ ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳ ಅಭ್ಯರ್ಥಿಗಳಿಗೂ ಮತ ನೀಡಿವೆ. ಇದೇ ರೀತಿ ನಿತೀಶ್ ಅವರ ಅತಿಹಿಂದುಳಿದ ಜಾತಿಗಳು ಬಿಜೆಪಿ ಮತ್ತು ಎಲ್‌ಜೆಪಿ ಪಕ್ಷಗಳ ಅಭ್ಯರ್ಥಿಗಳನ್ನು ಕೂಡಾ ಬೆಂಬಲಿಸಿವೆ. ಈ ಒಗ್ಗಟ್ಟನ್ನು ಫಲಿತಾಂಶದಲ್ಲಿ ಕಾಣಬಹುದಾಗಿದೆ.
ಮೂರನೆಯದಾಗಿ, ‘ಸುಶಾಸನಬಾಬು’ ಎಂಬ ಬಿರುದನ್ನು ನೀಡಿದ ನಿತೀಶ್ ಅವರ ಆಡಳಿತ. ಬಿಹಾರದಲ್ಲಿ ಹಿಂಸಾಚಾರ ಸಂಪೂರ್ಣವಾಗಿ ನಿಂತು ಶಾಂತಿ ಸ್ಥಾಪನೆಯಾಗಿದೆ ಎಂದು ಯಾರೂ ಹೇಳಲಾರರು. ಆದರೆ ಲಾಲು ಪ್ರಸಾದ್ ಅವರ ಕಾಲದಲ್ಲಿದ್ದಂತೆ ಅನಿಯಂತ್ರಿತವಾಗಿ ನಡೆಯುತ್ತಿಲ್ಲ. 2005ರಲ್ಲಿ ನಿತೀಶ್ ಕುಮಾರ್ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾಗ 27 ಸಾವಿರ ಆರೋಪಿಗಳಿಗೆ ಶಿಕ್ಷೆ ಆಗಿತ್ತು. ‘ಬಾಹುಬಲಿ’ಗಳಾಗಿದ್ದ ಶಹಾಬುದ್ದೀನ್, ಪಪ್ಪುಯಾದವ್, ಅನಂತ್ ಸಿಂಗ್, ಮುನ್ನಾಶುಕ್ಲಾ ಮೊದಲಾದವರು ಜೈಲು ಸೇರಿದ್ದರು. 20 ವರ್ಷಗಳ ಹಿಂದೆ ಆರು ಗಂಟೆಗೆ ಪಾಟ್ನಾದ ಬೀದಿಗಳು ನಿರ್ಜನವಾಗಿರುತ್ತಿದ್ದವು. ಜೈಲು ಸೇರಿದ್ದ ಕೆಲವು ‘ಬಾಹುಬಲಿ’ಗಳು ಈ ಬಾರಿ ಎನ್‌ಡಿಎ ಅಭ್ಯರ್ಥಿಗಳಾಗಿದ್ದೂ, ಹಳೆಯ ಭಯಭೀತ ವಾತಾವರಣದಿಂದ ಬಿಹಾರ ಹೊರಬರುತ್ತಿರುವುದು ನಿಜ. ಚುನಾವಣಾ ಕಾಲದಲ್ಲಿಯೂ ಎಲ್ಲಿಯೂ ಹಿಂಸಾಚಾರ ನಡೆದಿಲ್ಲ ಎನ್ನುವುದು ಕೂಡಾ ಗಮನಿಸುವಂತಹದ್ದು.
ನಾಲ್ಕನೆಯದಾಗಿ, ವೈಯಕ್ತಿಕ ಮಟ್ಟದಲ್ಲಿ ನಿತೀಶ್ ಕುಮಾರ್ ಕಾಪಾಡಿಕೊಂಡು ಬಂದಿರುವ ಭ್ರಷ್ಟಾಚಾರದ ಕಳಂಕದಿಂದ ಮುಕ್ತವಾದ ಶುಭ್ರ ಇಮೇಜ್. ಭ್ರಷ್ಟಾಚಾರ ಎನ್ನುವುದು ಸಹಜನಡವಳಿಕೆಯಾಗಿರುವ ಬಿಹಾರದಲ್ಲಿ ಇಂತಹದ್ದೊಂದು ಇಮೇಜನ್ನು ಎರಡು ದಶಕಗಳ ಕಾಲ ಕಾಪಿಟ್ಟುಕೊಳ್ಳುವುದು ಸುಲಭದ ಕೆಲಸ ಅಲ್ಲ.
ಐದನೆಯದಾಗಿ, ನಿತೀಶ್ ಕುಮಾರ್ ಸೈದ್ಧಾಂತಿಕವಾಗಿ ಎಷ್ಟೇ ಪಲ್ಟಿ ಹೊಡೆದರೂ ಅವರಿಗೆ ಕೋಮುವಾದಿ ಎಂಬ ಹಣೆಪಟ್ಟಿ ಹಚ್ಚಲು ಅವರ ರಾಜಕೀಯ ವಿರೋಧಿಗಳಿಗೂ ಸಾಧ್ಯವಾಗಿಲ್ಲ. ಪಕ್ಕದ ಉತ್ತರಪ್ರದೇಶದಲ್ಲಿ ಬುಲ್ಡೋಜರ್‌ಗಳು ಕಂಡಕಂಡಲ್ಲಿ ದಾಳಿಮಾಡುತ್ತಿದ್ದರೂ, ಬಿಹಾರದಲ್ಲಿ ಕಳೆದ ಎರಡು ದಶಕಗಳಲ್ಲಿ ದೊಡ್ಡ ಮಟ್ಟದ ಕೋಮುಗಲಭೆಗಳು ನಡೆದಿಲ್ಲ. ಚುನಾವಣಾ ಪ್ರಚಾರದಲ್ಲಿ ಸ್ಥಾನದ ಶಿಷ್ಟಾಚಾರವನ್ನೂ ಮೀರಿ ಕೋಮುದ್ವೇಷ ಕಾರುವ ಪ್ರಧಾನಿ ನರೇಂದ್ರ ಮೋದಿಯವರ ಬಿಹಾರದ ಪ್ರಚಾರ ಭಾಷಣ ‘ಅಸ್ಸಿ–ಬೀಸ್’, ‘ಸ್ಮಶಾನ–ಕಬರ್ ಸ್ಥಾನ್’ ಮೊದಲಾದ ಕೋಮು ಕಿಡಿನುಡಿಗಳಿಂದ ಮುಕ್ತವಾಗಿತ್ತು.
ಆರನೆಯದಾಗಿ, ವಂಶಾಡಳಿತದ ಆರೋಪದಿಂದಲೂ ನಿತೀಶ್ ಕುಮಾರ್ ಮುಕ್ತವಾಗಿದ್ದಾರೆ. ರಾಜಕೀಯವಾಗಿ ತಾವು ನಿರ್ಗಮನದ ಹಾದಿಯಲ್ಲಿದ್ದರೂ, ತನ್ನ ಒಬ್ಬನೇ ಮಗನನ್ನು ಚುನಾವಣೆಗೆ ಇಳಿಸಿ ಉತ್ತರಾಧಿಕಾರಿಯನ್ನಾಗಿ ಮಾಡುವ ದೌರ್ಬಲ್ಯಕ್ಕೆ ಕೂಡಾ ನಿತೀಶ್ ಬಲಿಯಾಗಲಿಲ್ಲ. ಕಳೆದ ನಾಲ್ಕು ದಶಕಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಚರ್ಚೆಯಾಗಿರುವ ಪ್ರಮುಖ ವಿಷಯಗಳೆಂದರೆ–ಭ್ರಷ್ಟಾಚಾರ, ಕೋಮುವಾದ ಮತ್ತು ವಂಶಾಡಳಿತ ಎನ್ನುವುದನ್ನು ತಿಳಿದುಕೊಂಡರೆ, ಬಿಹಾರದ ಜನತೆ ಯಾಕೆ ನಿತೀಶ್ ಕುಮಾರ್ ಅವರನ್ನು ಇಷ್ಟಪಟ್ಟಿದ್ದಾರೆ ಎನ್ನುವುದು ಅರ್ಥವಾಗಬಹುದು.
ಎನ್‌ಡಿಎಗೆ ಇದಿರಾಗಿ ಸ್ಪರ್ಧಿಸಿರುವ ಮಹಾಘಟಬಂಧನದಲ್ಲಿ ಗೆಲ್ಲಲು ಕಾರಣಗಳು ಇರಲಿಲ್ಲ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತನ್ನ ಮತಗಳ ನೆಲೆಯನ್ನು ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಳೆದ ಬಾರಿ ಇಬಿಸಿಗಳಿಗೆ ಕೇವಲ 19 ಟಿಕೆಟ್ ನೀಡಿದ್ದ ತೇಜಸ್ವಿ ಯಾದವ್ ಈ ಬಾರಿ 33 ಟಿಕೆಟ್ ನೀಡಿದ್ದರೂ, ಇಬಿಸಿಗಳು ಅವರ ಕೈ ಹಿಡಿದಿಲ್ಲ. ಕೊನೆಗೂ ಆರ್‌ಜೆಡಿಯ ಬಲ ಹಳೆಯ ಎಂ–ವೈ ಸೂತ್ರಕ್ಕಷ್ಟೇ ಸೀಮಿತವಾಗಿದ್ದನ್ನು ಕಾಣಬಹುದು. ಮನೆಗೊಂದು ಸರ್ಕಾರಿ ಉದ್ಯೋಗದ ಭರವಸೆ ಯುವಜನರನ್ನು ಆಕರ್ಷಿಸಲು ವಿಫಲವಾಯಿತು. 3.40 ಲಕ್ಷ ಕೋಟಿ ರೂಪಾಯಿ ಬಜೆಟ್‌ನ ಬಿಹಾರ ರಾಜ್ಯದಲ್ಲಿ ಇಂತಹದ್ದೊಂದು ಭರವಸೆಯನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.
ಇನ್ನು ಕಾಂಗ್ರೆಸ್ ಪಕ್ಷ, ಮತದಾನ ನಡೆಯುವ ಮೊದಲೇ ಸೋತುಹೋಗಿತ್ತು. ಸತತ ಸೋಲಿನಿಂದ ಪಕ್ಷ ಪಾಠ ಕಲಿತಿರುವ ಸೂಚನೆಗಳು ಈ ಬಾರಿಯೂ ಕಾಣಲಿಲ್ಲ. ಅಧಿಕಾರ ಕಳೆದುಕೊಂಡ ಕಳೆದ 30 ವರ್ಷಗಳ ಅವಧಿಯಲ್ಲಿ ಜನಪ್ರಿಯ ಸ್ಥಳೀಯ ನಾಯಕನೊಬ್ಬನನ್ನು ರಾಜ್ಯದಲ್ಲಿ ಬೆಳೆಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ. ಹಿಂದುಳಿದ ಜಾತಿಗಳ ಮತಗಳ ನಿರ್ಣಾಯಕ ಪಾತ್ರದ ಅರಿವಿದ್ದರೂ, ತಮ್ಮ ಪಕ್ಷದಲ್ಲಿರುವ ಹಿಂದುಳಿದ ಜಾತಿಗೆ ಸೇರಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಳಸಿಕೊಳ್ಳುವ ಯೋಚನೆಯನ್ನು ಯಾರೂ ಮಾಡಲಿಲ್ಲ. ಕರ್ನಾಟಕದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನವೂ ನಡೆಯಲಿಲ್ಲ.
ಗೆಲ್ಲಲಿಕ್ಕೆ ಬೇಕಾಗಿರುವ ಕಾರಣಗಳನ್ನು ನೀಡಲು ಸಾಧ್ಯವಾದಾಗ ಮಾತ್ರ ಸೋಲಿಗೆ ಕಾರಣಗಳನ್ನು ನೀಡುವ ಅಧಿಕಾರ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.