ADVERTISEMENT

ವಿಶ್ಲೇಷಣೆ | ಬಿಹಾರ: ಬಚ್ಚಿಟ್ಟಿರುವುದು ಏನನ್ನು?

ಯೋಗೇಂದ್ರ ಯಾದವ್
Published 29 ಆಗಸ್ಟ್ 2025, 23:52 IST
Last Updated 29 ಆಗಸ್ಟ್ 2025, 23:52 IST
<div class="paragraphs"><p>ವಿಶ್ಲೇಷಣೆ</p></div>

ವಿಶ್ಲೇಷಣೆ

   

ಭಾರತೀಯ ಚುನಾವಣಾ ಆಯೋಗವು (ಇಸಿಐ) ಆಗಸ್ಟ್‌ 24ರಂದು, ಬಿಹಾರದಲ್ಲಿ ‘ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಪ್ರಕ್ರಿಯೆಯು ಅಂದುಕೊಂಡ ರೀತಿಯಲ್ಲೇ ನಡೆಯುತ್ತಿದೆ ಎನ್ನುವ ಅಸಾಧಾರಣ ಸಂಗತಿಯೊಂದನ್ನು ಹೇಳಿದೆ. ಪಟ್ಟಿ ಕುರಿತು ತಕರಾರು ಸಲ್ಲಿಸುವ ಅಥವಾ ದಾಖಲೆ ಪೂರೈಸುವ ಕಾಲಮಿತಿ ಮುಗಿಯಲು ಎಂಟು ದಿನಗಳಿದ್ದಾಗಲೇ, ‘ಶೇ 98.2ರಷ್ಟು ಮತದಾರರಿಂದ ದಾಖಲೆಗಳನ್ನು ಸ್ವೀಕರಿಸಲಾಗಿದೆ’ ಎಂದೂ ಮಾಹಿತಿ ನೀಡಿದೆ. ಮತದಾರರ ಸೇರ್ಪಡೆ ಅರ್ಜಿಗಳನ್ನು ಸಂಗ್ರಹಿಸಿದಷ್ಟೇ ಸಲೀಸಾಗಿ ಇನ್ನೊಂದು ಅದ್ಭುತ ಯಶಸ್ಸನ್ನು ಅದು ಸಾಧಿಸಿದೆ ಅಥವಾ ಹಾಗೆ ನಾವೆಲ್ಲ ನಂಬಬೇಕು ಎಂದು ‘ಇಸಿಐ’ ಬಯಸಿದೆ.

ನನಗೆ ಈ ಸಂಗತಿ ಕೇಳಿದಾಕ್ಷಣ ಗಾಲಿಬ್‌ನ ‘ನಾನು ನಂಬಿಬಿಟ್ಟಿದ್ದೆನಾದರೆ, ಸಂತೋಷದಿಂದ ಪ್ರಾಣ ಬಿಡುತ್ತಿರಲಿಲ್ಲ’ ಎನ್ನುವ ಮಾತು ನೆನಪಾಯಿತು. ಅವಿಶ್ವಸನೀಯವಾದ ದತ್ತಾಂಶವನ್ನು ನಮ್ಮನ್ನು ಚಕಿತಗೊಳಿಸಲು ಅಥವಾ ಏನನ್ನೋ ಮರೆಮಾಚಲು ಇಸಿಐ ವಿನ್ಯಾಸಗೊಳಿಸಿರುವುದು ಸ್ಪಷ್ಟ. ‘ಪ್ರಜಾವಾಣಿ’ಯಲ್ಲಿನ ವರದಿಗಳೂ ಸೇರಿದಂತೆ ಬಿಹಾರದ ಯಥಾಸ್ಥಿತಿ ಕುರಿತ ಎಲ್ಲ ವಸ್ತುನಿಷ್ಠ ಬರಹಗಳನ್ನೂ ಬುಡಮೇಲು ಮಾಡುವ ರೀತಿಯ ದತ್ತಾಂಶವಿದು. ಇಸಿಐ ಕೇಳಿದ ದಾಖಲೆಗಳನ್ನು ಬಹುತೇಕ ಎಲ್ಲರೂ ನೀಡಿದ್ದಾರೆ ಹಾಗೂ ಕರಡು ಮತದಾರರ ಪಟ್ಟಿಯಲ್ಲಿರುವ ಅವರ ಹೆಸರುಗಳು ಅಂತಿಮ ಪಟ್ಟಿಯಲ್ಲೂ ಇರಲಿವೆ ಎಂದು ಈ ದತ್ತಾಂಶ ನಂಬಿಸುತ್ತದೆ. ಆದರೆ, ಅದು ಮುಖ್ಯವಾದ ಮಾಹಿತಿಯೊಂದನ್ನು ಮರೆಮಾಚುತ್ತಿದೆ. ಇಸಿಐ ಕೇಳಿರುವ ದಾಖಲೆಗಳನ್ನು ಸಲ್ಲಿಸಿರುವ ಮತದಾರರೆಷ್ಟು ಹಾಗೂ ಈಗಾಗಲೇ ನೀಡಿರುವ ಆಧಾರ್‌ ತರಹದ ದಾಖಲೆಗಳಲ್ಲಿ ಇಸಿಐ ತಿರಸ್ಕರಿಸಿರುವುದೆಷ್ಟು ಎನ್ನುವುದರ ಶೇಕಡಾವಾರು ಪ್ರಮಾಣವನ್ನು ಹೇಳಿಲ್ಲ.

ADVERTISEMENT

ಜುಲೈ 31ರಿಂದ ಆಗಸ್ಟ್‌13ರ ಅವಧಿಯ ‘ಭಾರತ್‌ ಜೋಡೊ’ ಅಭಿಯಾನದಲ್ಲಿ ಎರಡನೇ ಸಮೀಕ್ಷೆ ನಡೆಸಲಾಗಿತ್ತು. ಎಸ್‌ಐಆರ್‌ನ ಗಂಭೀರ ಚಿತ್ರಣವನ್ನು ಆ ಸಮೀಕ್ಷೆಯು ಕಟ್ಟಿಕೊಡುತ್ತದೆ. ಮತ ಎಣಿಕೆಗೆ ಅರ್ಜಿಯನ್ನು ಪೂರ್ಣ ಪ್ರಮಾಣದಲ್ಲಿ ಅಪೇಕ್ಷಿತ ದಾಖಲೆಗಳ ಸಹಿತ ಸಲ್ಲಿಸಿದವರ ಸಂಖ್ಯೆ ಶೇ 49ರಷ್ಟು ಮಾತ್ರ. ಬಹುಸಂಖ್ಯಾತರು ಹೇಳಿಕೊಂಡಂತೆ, ಅವರಿಗೆ ಅರ್ಜಿ ಸಲ್ಲಿಸಲು ಆಗಿರಲಿಲ್ಲ ಅಥವಾ ಅಪೂರ್ಣ ಅರ್ಜಿ ಸಲ್ಲಿಸಿದ್ದರು. ನಮ್ಮ ಸಮೀಕ್ಷೆಯ ಪ್ರಕಾರ, ಶೇ 81ರಷ್ಟು ವಯಸ್ಕರು ತಾವು ನೇರವಾಗಿ ಅಥವಾ ಪರೋಕ್ಷವಾಗಿ ಪಡೆದುಕೊಂಡಿದ್ದ ಅರ್ಜಿಯನ್ನು ಸಲ್ಲಿಸಿದ್ದರು; ಅದೂ ಪೂರ್ಣ ಪ್ರಮಾಣದಲ್ಲಿ ಅಥವಾ ಅರೆಬರೆ ತುಂಬಿ. ಕೇವಲ ಶೇ 3ರಷ್ಟು ಜನರು ಅರ್ಜಿಯನ್ನು ಪೂರ್ಣಗೊಳಿಸಿದ್ದಾಗಿ ಸ್ಪಷ್ಟವಾಗಿ ಹೇಳಿದರು.
ಶೇ 7ರಷ್ಟು ಜನರಿಗೆ ತಮ್ಮ ಅರ್ಜಿ ಪರಿಗಣಿತ ವಾಯಿತೋ ಇಲ್ಲವೋ ತಿಳಿದಿರಲಿಲ್ಲ. ಎಸ್‌ಐಆರ್‌ ನಲ್ಲಿ ಸ್ವೀಕೃತಿ ಪತ್ರ ನೀಡಲಾಗಿದೆ ಎಂದು ಈಗ ವಿಸ್ತೃತವಾಗಿ ವರದಿಯಾಗಿದೆ. ಆದರೆ, ಈ ಸಂಗತಿಯೇ ಕಾಲ್ಪನಿಕವೆನ್ನುವುದು ಸಮೀಕ್ಷೆಯಿಂದ ಸ್ಪಷ್ಟವಾಯಿತು. ಸಲ್ಲಿಸಿದ ಅರ್ಜಿಯ ಛಾಯಾಪ್ರತಿಯ ಮೂಲಕವೇ ಸ್ವೀಕೃತಿ ದೃಢೀಕರಣ ನೀಡಲಾಯಿತು ಎಂದು ಹೇಳಿದವರು ಶೇ 1ರಷ್ಟು ಜನ ಮಾತ್ರ. ಶೇ 10ರಷ್ಟು ಮತದಾರರಿಗೆ ಎಸ್‌ಎಂಎಸ್‌ ಮೂಲಕ ಅರ್ಜಿ ಸ್ವೀಕೃತಿಯಾಗಿದೆ ಎನ್ನುವುದು ಗೊತ್ತಾಗಿತ್ತು. ಉಳಿದ ಶೇ 89ರಷ್ಟು ಮಂದಿಯ ಬಳಿ ಅರ್ಜಿ ಸಲ್ಲಿಸಿರುವುದಕ್ಕೆ ಯಾವ ಅಧಿಕೃತ ಸ್ವೀಕೃತಿ ಪತ್ರವೂ ಇರಲಿಲ್ಲ. ಅರ್ಜಿ ಸ್ವೀಕೃತವಾಗಿದೆ ಎಂದು ದೃಢೀಕರಣ ಪತ್ರ ನೀಡುವುದನ್ನು ಸುಪ್ರೀಂ ಕೋರ್ಟ್ ಈಗ ಕಡ್ಡಾಯ
ಗೊಳಿಸಿದೆ. ಆದರೆ, ಅದೀಗ ಸಾಕಷ್ಟು ತಡವಾಗಿದೆ.

ಬಾಕಿ ಶೇ 9ರಷ್ಟು ಮಂದಿ ‘ನಾಪತ್ತೆಯಾದ ಮತದಾರರು’, ಬಿಹಾರದಲ್ಲಿ ವಾಸವಿದ್ದರೂ ಹಿಂದಿನ ಮತದಾರರ ಪಟ್ಟಿಯಲ್ಲಾಗಲೀ ಇತ್ತೀಚಿನ ಮತದಾರರ ಕರಡು ಪಟ್ಟಿಯಲ್ಲಾಗಲೀ ಹೆಸರು ಮೂಡದವರು. ಇಂತಹ ಮತದಾರರ ಸಂಖ್ಯೆಯೇ ಬಿಹಾರದಲ್ಲಿ ಸುಮಾರು 90 ಲಕ್ಷದಷ್ಟಿದೆ; ಹಿಂದೆ ಯಾವುದಾದರೂ ಮತದಾರರ ಪಟ್ಟಿಯಲ್ಲಿ ಇದ್ದವರಲ್ಲಿ ಅಂದಾಜು ಮೂರನೇ ಒಂದರಷ್ಟು ಮಂದಿ, ಮತದಾರರ ಪಟ್ಟಿಗೆ ಸೇರಲು ಪದೇ ಪದೇ ಯತ್ನಿಸಿದವರು ಸುಮಾರು ಆರನೇ ಒಂದು ಭಾಗದಷ್ಟು ಜನ, ಮತದಾರರ ಪಟ್ಟಿಯಲ್ಲಿ ಎಂದೂ ಇರದಿದ್ದರೂ ಅದಕ್ಕೆ ಸೇರ್ಪಡೆಯಾಗುವ ಪ್ರಯತ್ನವನ್ನೂ ನಡೆಸದವರು ಅರ್ಧಕ್ಕೂ ಹೆಚ್ಚು ಮಂದಿ. ಎಸ್‌ಐಆರ್‌ ಮೂಲಕ ಬಿಹಾರದ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡಿರುವುದ ಕ್ಕಿಂತ ತೆಗೆದುಹಾಕಿರುವುದೇ ಹೆಚ್ಚು ಎಂಬ ನಮ್ಮ ಊಹೆಯನ್ನು ಈ ಅಂಕಿಅಂಶವು ದೃಢಪಡಿಸುತ್ತದೆ.

ಇಸಿಐ ಪಟ್ಟಿ ಮಾಡಿರುವ 11 ದಾಖಲೆಗಳಲ್ಲಿ ಒಂದನ್ನು ಒದಗಿಸಬೇಕಾದ ಜನರೆಷ್ಟು? ಈ ಮುಖ್ಯವಾದ ಪ್ರಶ್ನೆಯಿಂದ ಇಸಿಐ ವಿಷಯಾಂತರ ಮಾಡುತ್ತಿದೆ. ಎಸ್‌ಐಆರ್‌ನ ಮೂಲ ಆದೇಶದ ಅನ್ವಯ, 2003ರ ಮತದಾರರ ಪಟ್ಟಿಯಲ್ಲಿ ಇದ್ದವರ ಹೆಸರುಗಳನ್ನು ಹೊರಗಿಡಬೇಕಾಗಿತ್ತು. ಜೂನ್‌ 30ರಂದು ಹೊರಡಿಸಿದ ಮಾಧ್ಯಮ ಪ್ರಕಟಣೆಯಲ್ಲಿ, ಇಸಿಐ ಈ ಸಂಗತಿಯನ್ನು ತುಸು ಮಾರ್ಪಡಿಸಿ ರುವುದಾಗಿ ತಿಳಿಸಿತು. ಅದರ ಪ್ರಕಾರ, 2003ರ ಮತದಾರರ ಪಟ್ಟಿಯಲ್ಲಿ ಇದ್ದ ಪೋಷಕರ ಹೆಸರುಗಳು ಅಳಿಸಿಹೋಗಲಿವೆ. ಅವರ ಮಕ್ಕಳು ದಾಖಲೆಗಳನ್ನು ಪೂರೈಸಬೇಕಾದುದು ಅನಿವಾರ್ಯ. ಆದರೆ, ಈ ನಿಯಮವನ್ನು ಇನ್ನೂ ಮಾರ್ಪಾಟು ಮಾಡಿರುವುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಇಸಿಐ ತಿಳಿಸಿತು. 2003ರ ಮತದಾರರ ಪಟ್ಟಿಯಲ್ಲಿ ಯಾವುದೇ ನಾಗರಿಕರ ಪೋಷಕರು ಅಥವಾ ಸಂಬಂಧಿಕರ ಹೆಸರು ಇದ್ದಲ್ಲಿ ಅಂಥವರು ಯಾವ ದಾಖಲೆಗಳನ್ನೂ ಸಲ್ಲಿಸಬೇಕಾಗಿಲ್ಲ ಎಂದಿತು. ನಮ್ಮ ಸಮೀಕ್ಷೆಯ ಪ್ರಕಾರ, ಒಂದು ವೇಳೆ ಎಸ್‌ಐಆರ್‌ನ ಮೂಲ ಆದೇಶವೇ ಅನ್ವಯವಾಗಿದ್ದಲ್ಲಿ, 2003ರ ಮತದಾರರ ಪಟ್ಟಿಯಲ್ಲಿರುವವರ ಹೆಸರುಗಳ ಪಟ್ಟಿಯನ್ನೇ ಹೊಂದಿಸಲಾಗದವರು ಶೇ 48ರಷ್ಟು ಇದ್ದು, ಅವರೆಲ್ಲರೂ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಿದ್ದರು. ಪೋಷಕರ ಹೆಸರು 2003ರ ಪಟ್ಟಿಯಲ್ಲಿ ಇದ್ದು; ತಾವು ದಾಖಲೆ ನೀಡಬೇಕಾಗಿ ಬಂದಿದ್ದಲ್ಲಿ, ಅದನ್ನು ಹೊಂದಿಸಲಾಗದೆ ಶೇ 6ರಷ್ಟು ಮಂದಿ ಅನರ್ಹರಾಗುತ್ತಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಇಸಿಐ ತಿಳಿಸಿದಂತೆ ಆಗಿದ್ದಲ್ಲಿ ಶೇ 17ರಷ್ಟು ಮಂದಿ ಮತದಾರರ ಪಟ್ಟಿಯಿಂದ ಹೊರಗೆ ಉಳಿಯುತ್ತಿದ್ದರು.

ಇಸಿಐ ಈಗ ಹೇಳಿಕೊಂಡಿರುವ ಸಂಗತಿಯ ಮೂಲ ಸಮಸ್ಯೆಯನ್ನು ಗಮನಿಸೋಣ. ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕವಿದ್ದವರಲ್ಲಿ ಎಷ್ಟು ಮಂದಿ ಸಲ್ಲಿಸಿರುವ ದಾಖಲೆಗಳು ಮಾನ್ಯವಾಗಿವೆ? ನಮ್ಮ ಸಮೀಕ್ಷೆ ಪ್ರಕಾರ ಈ ವಿಭಾಗದಲ್ಲಿ (2003ರ ಪಟ್ಟಿಯಲ್ಲಿ ಹೆಸರು ಪತ್ತೆ ಮಾಡಲು ಆಗದೆ ದಾಖಲೆ ಒದಗಿಸುವ ಅನಿವಾರ್ಯಕ್ಕೆ ಸಿಲುಕಿದವರು) ಶೇ 59ರಷ್ಟು ಮಂದಿ ಒಂದಲ್ಲ ಒಂದು ದಾಖಲೆಯನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದ್ದರು. ಕೇವಲ ಶೇ 18ರಷ್ಟು ಜನರಿಗೆ ಸೂಚಿಸಲಾಗಿದ್ದ 11 ದಾಖಲೆಗಳಲ್ಲಿ ಒಂದನ್ನು ಪೂರೈಸುವುದು ಸಾಧ್ಯವಾಗಿತ್ತು (ಬಹುತೇಕಮೆಟ್ರಿಕ್ಯುಲೇಷನ್, ವಾಸಸ್ಥಳ ದೃಢೀಕರಣ ಪತ್ರ ಅಥವಾ ಜಾತಿ ಪ್ರಮಾಣ ಪತ್ರ). ಉಳಿದ ಶೇ 41ರಷ್ಟು ಜನರು ಆಧಾರ್‌ ಅಥವಾ ಪಡಿತರ ಚೀಟಿಯ ಛಾಯಾಪ್ರತಿ ಲಗತ್ತಿಸಿದ್ದರು. ಇಸಿಐ ಸೂಚಿಸಿದ್ದ 11 ದಾಖಲೆಗಳ ಪಟ್ಟಿಯಲ್ಲಿ ಇವುಗಳಿಲ್ಲ.

2003ರ ಮತದಾರರ ಪಟ್ಟಿಯಲ್ಲಿ ತಮ್ಮ ಪೋಷಕರು, ಬಂಧುಗಳ ಹೆಸರಿವೆಯೇ ಎಂಬುದನ್ನು ಪತ್ತೆಹಚ್ಚುವಲ್ಲಿ ವಿಫಲರಾದವರಲ್ಲಿ ಶೇ 43ರಷ್ಟು ಮಂದಿಗೆ, 11 ‘ಅರ್ಹತಾ’ ದಾಖಲೆಗಳಲ್ಲಿ ಒಂದನ್ನೂ ಹೊಂಚಿಕೊಳ್ಳಲು ಸಾಧ್ಯವಾಗಿಲ್ಲ. 12 ಮಂದಿಯಲ್ಲಿ ಒಬ್ಬರಷ್ಟೇ ಜಾತಿ ಅಥವಾ ವಾಸಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಹಾಕಿದ್ದರು. 35–40 ಪ್ರತಿಶತ ಮಂದಿ ಒಂದಾದರೂ ಅರ್ಹತಾ ದಾಖಲೆ ಹೊಂಚಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಿದ್ದೂ ಇವರಲ್ಲಿ ಶೇ 97ರಷ್ಟು ಜನರ ಬಳಿ ಪಡಿತರ ಚೀಟಿಗಳಿವೆ ಹಾಗೂ 99.5 ಪ್ರತಿಶತ ಜನರಲ್ಲಿ ಆಧಾರ್‌ ಅಥವಾ ರೇಷನ್ ಕಾರ್ಡ್‌ಗಳಿವೆ.

ಎಸ್‌ಐಆರ್‌‍ ಪ್ರಕ್ರಿಯೆಯಲ್ಲಿನ ಹಕ್ಕು ನಿರಾಕರಣೆ ಪ್ರಚೋದನೆ ಕುರಿತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ್ದು, ಬಿಹಾರದಲ್ಲಿ ಒಂದಿಷ್ಟು ಪರಿಶೀಲನೆ ನಡೆಸಲು ಕಾರಣವಾಗಿದೆ. ಹಕ್ಕು ನಿರಾಕರಣೆ ಯಾವ ರೀತಿ ಇರಲಿದೆ ಎನ್ನುವುದು, ಯಾವ ದಾಖಲೆಯು ಸ್ವೀಕಾರಾರ್ಹ ಎಂಬ ಅಂತಿಮ ನಿರ್ಣಯ ಅವಲಂಬಿಸಿದೆ. ಶೇ 98.2ರಷ್ಟು ಜನರು ಮತದಾರರ ಪಟ್ಟಿ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂಬ ಇಸಿಐನ ಅಚ್ಚರಿಯ ಮಾಹಿತಿಯಲ್ಲಿ ಇನ್ನೊಂದು ಸತ್ಯ ಅಡಗಿದೆ. ಅರ್ಜಿ ಸಲ್ಲಿಸಿರುವ ಮೂರನೇ ಒಂದರಷ್ಟು ಜನರಿಗೆ, ಕೇಳಲಾದ 11 ದಾಖಲೆಗಳಲ್ಲಿ ಒಂದನ್ನು ಪೂರೈಸಲು ಸಾಧ್ಯವಾಗಿಲ್ಲ. ಹೀಗೆ ದಾಖಲೆ ಒದಗಿಸಲಾಗದೆ ಮತದಾರರ ಪಟ್ಟಿಯಿಂದ ಹೊರಗುಳಿಯುವವರಲ್ಲಿ ದಲಿತರು, ಆರ್ಥಿಕವಾಗಿ ಹಿಂದುಳಿದ ವರ್ಗದವರೇ ಹೆಚ್ಚು.

ಅಂತಿಮ ಚಿತ್ರಣಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಎರಡು ಸಾಧ್ಯತೆಗಳಿವೆ: ಎಸ್‌ಐಆರ್‌ ಆದೇಶದಲ್ಲಿನ ಅಗತ್ಯ ದಾಖಲೆಗಳ ಪೂರೈಕೆ ನಿಯಮದಲ್ಲಿ ಇಸಿಐ ಬದಲಾವಣೆಗಳನ್ನು ಮಾಡುವಂತೆ ಆಗುವುದು. ಹೀಗಾದಲ್ಲಿ, ಅತಿ ಹೆಚ್ಚಿನ ಮತದಾರರನ್ನು ಹೊರಗಿಡುವ ಇಸಿಐ ಕೈಚಳಕಕ್ಕೆ ಕಡಿವಾಣ ಬೀಳಲಿದೆ. ಆಧಾರ್‌ ಕಾರ್ಡ್‌ ಅನ್ನೂ ಪರಿಶೀಲಿತ ದಾಖಲೆಗಳ ಪಟ್ಟಿಗೆ ಸೇರಿಸಿಕೊಂಡರೆ, ಹೊರಗುಳಿಯುವ ಮತದಾರರ ಸಂಖ್ಯೆ ತಗ್ಗಲಿದೆ. ಹೀಗಾಗದಿದ್ದರೆ ಎರಡು ಕೋಟಿಗೂ ಹೆಚ್ಚು ಮಂದಿ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.