ADVERTISEMENT

ವಿಶ್ಲೇಷಣೆ | ಬಂಡವಾಳ ಹರಿವು: ಹಾದಿ ಹಸಿರಾಗಿರಲಿ

ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ನೈಸರ್ಗಿಕ ಪರಿಸರದ ಪೋಷಣೆ ಅತ್ಯಗತ್ಯ

ಕೇಶವ ಎಚ್.ಕೊರ್ಸೆ
Published 14 ನವೆಂಬರ್ 2022, 18:50 IST
Last Updated 14 ನವೆಂಬರ್ 2022, 18:50 IST
   

ಮನೆಮಾತಾಗುವಷ್ಟು ಯಶಸ್ವಿಯಾಗಿರುವ ಚಲನಚಿತ್ರ ‘ಕಾಂತಾರ’, ರಾಜ್ಯ ಸರ್ಕಾರವು ಇತ್ತೀಚೆಗೆ ಆಯೋಜಿಸಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲೂ ಸದ್ದು ಮಾಡಿತು. ಕಡಿಮೆ ಹಣವಿದ್ದರೂ ಕ್ಷಮತೆಯಿಂದ ಹೂಡಿ, ಶಿಸ್ತಿನಿಂದ ಉದ್ಯಮ ನಿರ್ವಹಿಸಿದರೆ ಲಾಭ ಸಾಧ್ಯವೆಂದು, ಆ ಸಿನಿಮಾವನ್ನೇ ಉದಾಹರಿಸಿ ಕೇಂದ್ರ ವಾಣಿಜ್ಯ ಸಚಿವರು ಉದ್ಯಮಿಗಳ ಗಮನಸೆಳೆದರು. ಆರ್ಥಿಕ ಬೆಳವಣಿಗೆ ಹಾಗೂ ವ್ಯಾಪಕ ಉದ್ಯೋಗ ಸೃಷ್ಟಿಯು ಸಾಧ್ಯವಾಗಿ ಅಭಿವೃದ್ಧಿ ಫಲವು ಸಕಲರಿಗೂ ತಲುಪುವಂತಾಗಲು, ಹಣ ಹೂಡಿಕೆಯ ಈ ಬಗೆಯ ಹರಿವು ಅಗತ್ಯ ಎಂಬುದು ಎಲ್ಲರೂ ಒಪ್ಪುವ ಮಾತೇ. ಪ್ರಸ್ತುತ ವಾರ್ಷಿಕ ಸುಮಾರು ಮೂರೂಕಾಲು ಲಕ್ಷ ಕೋಟಿ ಅಮೆರಿಕನ್ ಡಾಲರ್‌ನಷ್ಟು ಇರುವ ದೇಶದ ಆರ್ಥಿಕತೆಯ ಗಾತ್ರವು ಇನ್ನು ಆರು ವರ್ಷಗಳಲ್ಲಿ ಐದು ಲಕ್ಷ ಕೋಟಿ ಡಾಲರ್‌ಗೆ ತಲುಪಲು ಆಗ ಸಾಧ್ಯವೆಂದು ಭಾರತೀಯ ರಿಸರ್ವ್‌ ಬ್ಯಾಂಕ್ ಸಹ ಅಭಿಪ್ರಾಯಪಟ್ಟಿದೆ.

ಕರ್ನಾಟಕವೂ ಇನ್ನು ಮೂರು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ಅಮೆರಿಕನ್ ಡಾಲರ್‌ನಷ್ಟು ಗಾತ್ರದ ಆರ್ಥಿಕತೆಯಾಗುವ ಗುರಿಯನ್ನು ರಾಜ್ಯ ಸರ್ಕಾರ ಮುಂದಿಟ್ಟಿದೆ. ಇದನ್ನು ಸಾಧಿಸಲು ಶೇಕಡ 8ರ ಆಸುಪಾಸಿನ ಈಗಿನ ಜಿಡಿಪಿ ಬೆಳವಣಿಗೆ ದರವು ಎರಡಂಕಿ ದಾಟಬೇಕಿರುವ ಅಗತ್ಯವನ್ನು ನೀತಿ ಆಯೋಗವೂ ಸೇರಿದಂತೆ ಆರ್ಥಿಕ ತಜ್ಞರೆಲ್ಲ ಸಾರುತ್ತಿದ್ದಾರೆ. ಹೀಗಾಗಿ, ವಿದೇಶಿ ಹಾಗೂ ದೇಶಿ ಬಂಡವಾಳ ಹೂಡಿಕೆಯತ್ತ ಎಲ್ಲರ ಚಿತ್ತ ಹರಿಯುವುದು ಸಹಜವೇ.

ನಿಜ, ಅಂಥ ಬಂಡವಾಳ ಹೂಡಿಕೆ ಹಾಗೂ ಅದರ ಶಿಸ್ತಿನ ನಿರ್ವಹಣೆ ಇಂದಿನ ಅಗತ್ಯ. ಏರುತ್ತಿರುವ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಅಭಿವೃದ್ಧಿ ಆಶೋತ್ತರಗಳ ಭಾರವು ಈ ಆರ್ಥಿಕ ಬೆಳವಣಿಗೆಯ ಮೇಲಿದೆ. ಆದರೆ, ಸಾಧಿಸಿದ ನಂತರವೂ ಈ ಅಭಿವೃದ್ಧಿಯು ಸುಸ್ಥಿರವಾಗಿ ಇರಬೇಕಾದರೆ, ಸರ್ಕಾರ, ಕೈಗಾರಿಕೆ ಹಾಗೂ ಉದ್ಯಮ ವಲಯಗಳು ನೆಲ-ಜಲ-ಗಾಳಿಯ ಸುರಕ್ಷತೆಯತ್ತಲೂ ಕಾಳಜಿ ವಹಿಸಬೇಕಿದೆ. ಹಿಂದೆಂದಿಗಿಂತಲೂ ಇದು ಹೆಚ್ಚು ಅನಿವಾರ್ಯವಾಗುತ್ತಿರುವುದರಿಂದ ಪರಿಸರದ ಸುಸ್ಥಿರ ನಿರ್ವಹಣೆಯ ಹೊಣೆಯನ್ನು ಉದ್ಯಮಲೋಕಕ್ಕೆನೆನಪಿಸಲೇಬೇಕಿದೆ.

ADVERTISEMENT

ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳು ಸಾಧಿಸುತ್ತಿರುವ ಆರ್ಥಿಕ ಪ್ರಗತಿಯನ್ನು ಹಿಂದೆಳೆದು ಕುಗ್ಗಿಸುತ್ತಿರುವ ಹಲವಾರು ಅಂಶಗಳನ್ನು ಈಗಾಗಲೇ ಗುರುತಿಸಿಯಾಗಿದೆ. ಪರಿಸರ ನಾಶದ ಸಂಗತಿ ಅವುಗಳಲ್ಲಿ ಪ್ರಮುಖವಾದದ್ದು. ಇದನ್ನು ಸ್ಥೂಲವಾಗಿ ಎರಡು ಆಯಾಮಗಳಲ್ಲಿ ಗಮನಿಸ ಬಹುದು. ಮೊದಲಿನದು, ಜಾಗತಿಕ ಹವಾಮಾನ ಬದಲಾವಣೆಯು ಹುಟ್ಟುಹಾಕುತ್ತಿರುವ ಸವಾಲುಗಳು. ಇನ್ನೊಂದು, ದೂರದೃಷ್ಟಿರಹಿತ ಆಡಳಿತ ನೀತಿ ಹಾಗೂ ಅಭಿವೃದ್ಧಿಯ ತಪ್ಪು ಮಾದರಿಗಳಿಂದಾಗಿ ಅನಗತ್ಯವಾಗಿ ಜರುಗುತ್ತಿರುವ ನೀರು- ನೆಲ, ಗಗನ- ಕಾನನಗಳ ಪರಿಸರ ನಾಶದ ಪರಿಣಾಮ.

ಹವಾಮಾನ ಬದಲಾವಣೆಯು ದೇಶದ ಆರ್ಥಿಕತೆಗೆ ಭಾರಿ ಹೊಡೆತವನ್ನೇ ನೀಡುತ್ತಿದೆ. ಚಂಡಮಾರುತ, ಬಿಸಿಗಾಳಿ, ನೆರೆ, ಬರದಂತಹ ನೈಸರ್ಗಿಕ ಪ್ರಕೋಪಗಳು ಪ್ರತಿವರ್ಷ ಏರುತ್ತಿವೆ. 2030ರ ವೇಳೆಗೆ ಜಗತ್ತಿನಲ್ಲಿ ಪ್ರತಿವರ್ಷ 560ಕ್ಕೂ ಮಿಕ್ಕಿ ಅಂಥ ಬೃಹತ್ ಅವಘಡಗಳು ಜರುಗಲಿವೆಯೆಂದು ವಿಶ್ವಸಂಸ್ಥೆಯ ಪರಿಸರ ಸಂಘಟನೆ (ಯು.ಎನ್.ಡಿ.ಪಿ.) ಅಂದಾಜಿಸಿದೆ. ಒಂದೊಂದು ಪ್ರಕೃತಿ ವಿಕೋಪ ಘಟಿಸಿದಾಗಲೂ ಬರಿದಾಗುವ ಗದ್ದೆ- ತೋಟ, ಕುಸಿಯುವ ಮನೆ- ಮಠ, ಬಿರಿಯುವ ರಸ್ತೆ- ಸೇತುವೆ, ಜಜ್ಜರಿತವಾಗುವ ನಗರ–ಹಳ್ಳಿಗಳು! ಈ ನಷ್ಟಗಳು ಜನಜೀವನವನ್ನು ಇನ್ನಿಲ್ಲದ ಸಂಕಷ್ಟಕ್ಕೆ ತಳ್ಳುತ್ತಿವೆ.

ಇವನ್ನೆಲ್ಲ ನಿರ್ವಹಿಸಲು ಪ್ರತಿವರ್ಷ ಜಾಗತಿಕವಾಗಿ ಹತ್ತು ಸಾವಿರ ಕೋಟಿ ಡಾಲರಿಗೂ ಮಿಕ್ಕಿ ಖರ್ಚಾಗುತ್ತಿದ್ದು, ಭವಿಷ್ಯದಲ್ಲಿ ಅದು ತ್ರಿಗುಣವಾಗಲಿದೆ ಎನ್ನುತ್ತದೆ ಅದರ ವರದಿ. ಭಾರತ ಸಹ ಸುಮಾರು ಸಾವಿರ ಕೋಟಿ ಡಾಲರ್‌ನಷ್ಟು ಹಣವನ್ನು ಪ್ರತಿವರ್ಷ ನೈಸರ್ಗಿಕ ಪ್ರಕೋಪಗಳಿಂದಾಗಿ ಕಳೆದುಕೊಳ್ಳುತ್ತಿರುವುದನ್ನು ಜಾಗತಿಕ ಹವಾಮಾನ ಸಂಸ್ಥೆ ತನ್ನ ಇತ್ತೀಚಿನ ‘ಏಷ್ಯಾದ ಹವಾಮಾನ ಪರಿಸ್ಥಿತಿ ವರದಿ’ಯಲ್ಲಿ ಹೇಳಿದೆ. ತಾತ್ಪರ್ಯವಿಷ್ಟೇ. ಪರಿಸರ ನಾಶದ ವೆಚ್ಚ ಹಾಗೂ ಪರಿಣಾಮವನ್ನು ಲೆಕ್ಕಹಾಕಿದರೆ, ಸರ್ಕಾರ ಹಾಗೂ ಖಾಸಗಿ ವಲಯವು ಸೃಷ್ಟಿಸುತ್ತಿರುವ ಆರ್ಥಿಕ ಅಭಿವೃದ್ಧಿಯ ಫಲವನ್ನುಜನಸಾಮಾನ್ಯರಿಗೆ ತಲುಪಿಸುವಲ್ಲಿ ಸೋಲುತ್ತಿದ್ದೇವೆ. ಆರ್ಥಿಕ ಅಭಿವೃದ್ಧಿ ಎಂಬ ಹುಣಸೆಹಣ್ಣು ನೈಸರ್ಗಿಕ ಪ್ರಕೋಪಗಳ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದೆ!

ಎರಡನೇ ಬಗೆಯ ಪರಿಸರ ನಾಶವು ಸರ್ಕಾರದ ತಪ್ಪು ನೀತಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅವೈಜ್ಞಾನಿಕ ಅನುಷ್ಠಾನದಿಂದಲೇ ಜರುಗುವಂಥದ್ದು. ಉದ್ಯಮಗಳು ಬೆಳೆಯಲು ಹಣ, ಮಾನವ ಸಂಪನ್ಮೂಲ ಹಾಗೂಉದ್ಯಮಶೀಲತೆಯ ಜೊತೆ ಭೂಮಿಯೂ ಬೇಕೆಂಬುದು ಅರ್ಥಶಾಸ್ತ್ರದ ಪ್ರಾಥಮಿಕ ಪಾಠ. ಆದರೆ, ನೆಲವನ್ನು ಬರೀ ರಿಯಲ್ ಎಸ್ಟೇಟ್ ಜಾಗದಂತೆ ನೋಡುತ್ತಿರುವ ಪ್ರಸಕ್ತ ಆರ್ಥಿಕ ನೀತಿಯಿಂದಾಗಿ, ಭೂಮಿಯೊಂದಿಗೆ ಅಂತರ್ಗತವಾಗಿರುವ ನೆಲ-ಜಲ-ಕಾಡು-ಗಾಳಿ ಪರಿಸರದ ಮಹತ್ವವೇ ಕಡೆಗಣನೆಗೆ ಒಳಗಾಗಿದೆ. ಪರಿಸರ ಸುರಕ್ಷತೆಗೆಂದೇ ರೂಪಿಸಲಾಗಿರುವ ಕಾನೂನಾತ್ಮಕ ವಿಧಿ-ನಿಷೇಧಗಳನ್ನು ಕನಿಷ್ಠ ಮಟ್ಟದಲ್ಲಿ ಪಾಲಿಸಲೂ ಬಹುಪಾಲು ಕೈಗಾರಿಕೆ ಹಾಗೂ ಉದ್ಯಮಗಳು ಸೋಲುತ್ತಿವೆ!

ಇದರ ಪರಿಣಾಮವಾದರೂ ಏನು? ಕೃಷಿ ಹಾಗೂ ಉದ್ದಿಮೆಯ ವಿಸ್ತರಣೆಯಿಂದಾಗಿ, ಅಳಿದುಳಿದ ಅಮೂಲ್ಯ ಕಾಡೂ ನಾಶವಾಗುತ್ತಿದೆ. ತ್ಯಾಜ್ಯ ಸಂಸ್ಕರಣೆಯ ಉತ್ತರದಾಯಿತ್ವವನ್ನೇ ತೋರದ ಕೈಗಾರಿಕೆಗಳಿಂದಾಗಿ ಹೊಳೆ-ಕೆರೆ, ನದಿ-ಸಮುದ್ರದ ಮಾಲಿನ್ಯ ಮಿತಿ ಮೀರುತ್ತಿದೆ. ಅಭಿವೃದ್ಧಿ ಯೋಜನೆಗಳ ಅವೈಜ್ಞಾನಿಕ, ಅಸಡ್ಡೆಯ ಕಾಮಗಾರಿಗಳಿಂದಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತಗಳಾಗುತ್ತಿವೆ. ಕೃತಕ ರಾಸಾಯನಿಕಗಳ ಒಳಸುರಿಗೆ ನಿಯಂತ್ರಣವಿಲ್ಲದೆ ಕೃಷಿಭೂಮಿ ಉತ್ಪಾದಕತೆ ಕುಸಿಯುತ್ತಿದೆ. ಭೂಮಿಯಾಳದ ಅಂತರ್ಜಲವೂ ಕೀಟ ನಾಶಕ ಹಾಗೂ ಭಾರಲೋಹದ ಮಾಲಿನ್ಯಕ್ಕೊಳಗಾಗಿ ಕುಡಿಯುವ ಶುದ್ಧ ನೀರೂ ದುರ್ಲಭವಾಗುತ್ತಿದೆ.

ಒಂದು ಬೃಹತ್ ಆರ್ಥಿಕತೆಯಾಗಿ ಬೆಳೆದು ನಿಂತಿರುವ ಈ ಗಳಿಗೆಯಲ್ಲೂ, ದೇಶದ ಎಂಬತ್ತು ಪ್ರತಿಶತಕ್ಕೂ ಹೆಚ್ಚಿನ ಜಲಸಂಪನ್ಮೂಲವು ಅತಿಯಾಗಿ ಮಾಲಿನ್ಯಗೊಂಡಿ ರುವುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಉಸಿರಾಡಲೂ ಜನ ಪರದಾಡುವಷ್ಟು ಹವಾಮಾನ ಹದಗೆಟ್ಟಿರುವ ದೆಹಲಿ ಅಥವಾ ಸಣ್ಣ ಮಳೆಗೂ ನೆರೆ ಕಾಣುವ ಬೆಂಗಳೂರು- ಇವೆಲ್ಲ, ಈಗಿನ ಪರಿಸರ ತುರ್ತುಪರಿಸ್ಥಿತಿಯನ್ನು ಢಾಳಾಗಿ ತೋರುತ್ತಿರುವ ಚಿಹ್ನೆಗಳಷ್ಟೆ!

ಜಾಗತಿಕ ಹವಾಮಾನ ಬದಲಾವಣೆ ಹಾಗೂ ಆಂತರಿಕ ಪರಿಸರ ನಿರ್ವಹಣೆಯ ವೈಫಲ್ಯ- ಇವೆರಡರ ಜವಾಬ್ದಾರಿಯನ್ನು ಈಗಲಾದರೂ ಸರ್ಕಾರ ಹಾಗೂ ಖಾಸಗಿ ಕ್ಷೇತ್ರ ಜಂಟಿಯಾಗಿ ತೆಗೆದುಕೊಳ್ಳಬೇಕಿದೆ. ಪ್ರವರ್ತಕರು ಹಾಗೂ ಷೇರುದಾರರಿಗೆ ತರುವ ಲಾಭವನ್ನು ದೀರ್ಘಕಾಲ ಉಳಿಸಿಕೊಳ್ಳುವ ಸೀಮಿತ ಉದ್ದೇಶಕ್ಕಾ ದರೂ ಉದ್ಯಮಗಳು ಪರಿಸರದ ಅಂಶಗಳನ್ನು ಸುಸ್ಥಿರವಾಗಿ ನಿರ್ವಹಿಸಲೇಬೇಕಿದೆ. ನೀರು, ಅದಿರು, ಮರಮಟ್ಟು, ಕೃಷಿತ್ಯಾಜ್ಯದಂತಹ ಕೈಗಾರಿಕಾ ಕಚ್ಚಾವಸ್ತುಗಳ ಬಳಕೆ, ಉತ್ಪನ್ನಗಳ ಉತ್ಪಾದನಾ ಪ್ರಕ್ರಿಯೆ, ತ್ಯಾಜ್ಯಗಳ ಸಂಸ್ಕರಣೆ ಹಾಗೂ ವಿಲೇವಾರಿ, ವಾಣಿಜ್ಯ ವಸ್ತುಗಳ ಪ್ಯಾಕೇಜಿಂಗ್- ಈ ಎಲ್ಲ ಹಂತಗಳಲ್ಲಿ ಪರಿಸರ ಸಂರಕ್ಷಣಾ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕಿದೆ. ಗಣಿಗಾರಿಕೆ, ಬಂದರು, ಹೆದ್ದಾರಿ, ರೈಲುಮಾರ್ಗ, ನಗರ ವಿಸ್ತರಣೆಯಂಥ ಯೋಜನೆಗಳಲ್ಲಿ ಪರಿಸರ ಸುರಕ್ಷತೆಗೆ ಆದ್ಯತೆ ದೊರೆಯಬೇಕಿದೆ. ಇದಕ್ಕಾಗುವ ವೆಚ್ಚವನ್ನು ಅನಗತ್ಯವೆಂದು ಪರಿಗಣಿಸದೆ, ಭವಿಷ್ಯದ ಕ್ಷೇಮಕ್ಕಾಗಿ ಮಾಡುವ ಹೂಡಿಕೆಯೆಂದು ಭಾವಿಸಬೇಕಿದೆ. ಈ ಕುರಿತ ಜಾಗತಿಕ ಒಪ್ಪಂದಗಳು ಹಾಗೂ ಈ ನೆಲದ ಕಾನೂನು ಗಳನ್ನು ಪಾಲಿಸಬೇಕಿದೆ. ನಡೆಯುವ ಹಾದಿ ಹಾಗೂ ಹಿಂದೆ ಬಿಡುವ ಹೆಜ್ಜೆಗಳು ಪರಿಸರದ ಆರೋಗ್ಯಕ್ಕೆ ಸದಾ ಪೂರಕವಾಗಿರುವಂತೆ ಉದ್ಯಮಗಳು ಬಂಡವಾಳ ಹೂಡುವಾಗ ಎಚ್ಚರ ವಹಿಸಲೇಬೇಕಿದೆ. ಎಲ್ಲರೂ ಬಯಸುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಆಗ ಸಾಧ್ಯವಾದೀತು.

ಇವನ್ನೆಲ್ಲ ಚರ್ಚಿಸಲೆಂದೇ, ವಿಶ್ವಸಂಸ್ಥೆಯ ‘ಹವಾ ಮಾನ ಬದಲಾವಣೆ ಕುರಿತ ಇಪ್ಪತ್ತೇಳನೆಯ ಜಾಗತಿಕ ಸಮ್ಮೇಳನ’ವು (CoP27) ಇದೇ 6ರಿಂದ 18ರವರೆಗೆ ಈಜಿಪ್ಟಿನಲ್ಲಿ ಜರುಗುತ್ತಿದೆ. ಅಲ್ಲಿಯೂ ‘ಕಾಂತಾರ’ ಅನುರಣಿಸಿದ್ದರೆ ಚೆನ್ನಾಗಿತ್ತೇನೋ! ಏಕೆಂದರೆ, ಆ ಚಲನಚಿತ್ರದ ಅಂತಿಮ ಆಶಯವೂ ಸಮಾಜ ಹಾಗೂ ನಿಸರ್ಗದ ನಡುವೆ ಸಮನ್ವಯದ ಸಂಬಂಧ ಇರಬೇಕೆಂಬುದೇ ಆಗಿದೆ. ಸರ್ಕಾರದನೀತಿ ಹಾಗೂ ಉದ್ಯಮಗಳ ಹೂಡಿಕೆಗೆ ಅಂಥ ವಿವೇಕದ ಜರೂರತ್ತಿದೆ ಈಗ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.