ಕನ್ನಡಿಗರಾದ ನಾವು ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ನಮ್ಮ ತಾಯ್ನುಡಿಯಾದ ಕನ್ನಡದ ಆರೋಗ್ಯ ಸ್ಥಿತಿಗತಿಯನ್ನು ಸ್ವಲ್ಪಮಟ್ಟಿಗೆ ವಿಚಾರಿಸುತ್ತೇವೆ. ವರ್ಷದಿಂದ ವರ್ಷಕ್ಕೆ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಹೆಚ್ಚಾಗುತ್ತಿದೆ. ಕಾರ್ಯನಿರ್ವಹಿಸುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಕೂಡ ಬಹುತೇಕ ‘ತುರ್ತು ನಿಗಾ ಘಟಕ’ದಲ್ಲಿ ಇರುವಂತಹ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತು, ಪರಿಹಾರಕ್ಕೆ ಸೂಕ್ತ ಮಾರ್ಗಸೂಚಿ, ಕಾರ್ಯತಂತ್ರ ರೂಪಿಸಿ ಕಾರ್ಯಗತಗೊಳಿಸುವ ಜರೂರು ಇದೆ. ಆದರೆ ಈ ದಿಸೆಯಲ್ಲಿ ಸರ್ಕಾರದ ಪ್ರಯತ್ನ ಕಾಣುತ್ತಿಲ್ಲ.
ಪ್ರಾದೇಶಿಕ ಭಾಷಾ ಮಾಧ್ಯಮದ ಶಾಲೆಗಳು ಮೂಲೆ ಗುಂಪಾಗುತ್ತಿರುವುದು ನಿರಾಶಾದಾಯಕ ವಿದ್ಯಮಾನ. ಅಧಿಕಾರಸ್ಥರಿಗೆ ಈ ಸಮಸ್ಯೆಯ ಮೂಲ ಗೊತ್ತಿದೆ, ಅದಕ್ಕೆ ಪರಿಹಾರವೂ ಗೊತ್ತಿದೆ. ಆದರೆ, ಈ ಪ್ರಕ್ರಿಯೆಯು ಬದಲಾಗುತ್ತಿರುವ ಜಗತ್ತಿನ ಒಂದು ಸಹಜ ಬೆಳವಣಿಗೆ ಎನ್ನುವಂತೆ ಜಾಣಮೌನ ಪ್ರದರ್ಶಿಸುತ್ತಿರುವುದರಲ್ಲಿ ಸ್ವಹಿತಾಸಕ್ತಿ ಇದೆ.
ನಾಡಿನ ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯ ದಿದ್ದಲ್ಲಿ, ಅವರು ಆ ಭಾಷೆ, ಅದು ರೂಪಿಸಿರುವ ಸಂಸ್ಕೃತಿ ಮತ್ತು ಇತಿಹಾಸದಿಂದ ದೂರ ಉಳಿಯುತ್ತಾರೆ. ಅವರಲ್ಲಿ ಪರಕೀಯ ಭಾವ ಮೂಡುತ್ತದೆ. ಅವರು ಕನ್ನಡದಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಇದಕ್ಕಿಂತ ಮುಖ್ಯವಾಗಿ, ಮಕ್ಕಳಿಗೆ ಅವರ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೇ ಸಿಗುವುದು ಅವರ ಜ್ಞಾನಾರ್ಜನೆಯ ಮಾರ್ಗವನ್ನು ಸುಲಭಗೊಳಿಸುತ್ತದೆ ಮತ್ತು ಆತ್ಮೀಯವಾಗಿಸುತ್ತದೆ ಎನ್ನುವುದನ್ನು ಶಿಕ್ಷಣ ತಜ್ಞರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ಕಿವಿಗೊಡುವ ಸದ್ಬುದ್ಧಿ ನೀತಿನಿರೂಪಕರಲ್ಲಿ ಮೂಡಬೇಕು.
ಪರಿಸರ ಭಾಷೆಯನ್ನು ಪ್ರಾಥಮಿಕ ಶಿಕ್ಷಣದ ಮಾಧ್ಯಮವಾಗಿಸದ ವಿನಾ ಅದು ಮುಂದಿನ ಪೀಳಿಗೆಗಳಿಂದ ನಿಸ್ಸಂಶಯವಾಗಿ ದೂರವಾಗುತ್ತದೆ ಎನ್ನುವ ಸತ್ಯ ಗೊತ್ತಿದ್ದರೂ ಮತ್ತು ಈ ಕುರಿತಂತೆ ಬಹಳಷ್ಟು ವರದಿಗಳು ನಮ್ಮ ಮುಂದಿದ್ದರೂ ಈ ದಿಸೆಯಲ್ಲಿ ಸೂಕ್ತ ಕ್ರಮಗಳನ್ನು ನಾಡಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿ ಕೊಳ್ಳಲು ನಮ್ಮ ಸರ್ಕಾರಗಳಿಗೆ ಇಚ್ಛಾಶಕ್ತಿ ಇಲ್ಲವಾಗಿದೆ. ಬಾಯಿಮಾತಿನಲ್ಲಿ ಕನ್ನಡದ ಭವ್ಯ ಇತಿಹಾಸವನ್ನು ಹೆಮ್ಮೆಯಿಂದ ಹೊಗಳಿದ ಮಾತ್ರಕ್ಕೆ ಭಾಷೆಯ ಬೆಳವಣಿಗೆ ಆಗುವುದಿಲ್ಲ. ಅದರ ಭವಿಷ್ಯದ ಬಗ್ಗೆ ಕೃತಿಯಲ್ಲಿ ಕಾಳಜಿ ಪ್ರಕಟಗೊಳ್ಳಬೇಕು. ಕನ್ನಡದ ಇಂದಿನ ದುರ್ಗತಿಗೆ ಜನಪ್ರತಿನಿಧಿಗಳ ನಿರುತ್ಸಾಹವೇ ಮುಖ್ಯ ಕಾರಣ. ಅಧಿಕಾರದಲ್ಲಿ ಇರುವವರು ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಹಾಗಿದ್ದಲ್ಲಿ, ಇದಕ್ಕೆ ಪರಿಹಾರಗಳೇನು? ಇದನ್ನು, ಸಾಮಾಜಿಕ ಹೊಣೆಗಾರಿಕೆಯ ಆಧಾರದಲ್ಲಿ ಮೂರು ಆಯಾಮಗಳಿಂದ ಚರ್ಚಿಸಬಹುದು. ಮೊದಲನೆಯದು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಪಾತ್ರ. ಶಿಕ್ಷಣ ಸಂಸ್ಥೆಗಳಿಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸ್ಥಾಪನೆಗೆ ಸರ್ಕಾರವು ಪರವಾನಗಿ ನೀಡುವಾಗ, ಅವು ಪ್ರಾರಂಭಿಸುವ ಪ್ರತಿ ಶಾಲೆಯ ಸಂಖ್ಯಾವಾರು ಅನುಪಾತದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ತೆಗೆದುಕೊಂಡು, ಅವುಗಳನ್ನು ಕೂಡ ಸಮಾನವಾಗಿ ಪೋಷಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಬೇಕು. ಹಾಗೆಯೇ, ಇನ್ನಿತರ ಕ್ಷೇತ್ರಗಳಲ್ಲಿ ಉದ್ಯಮಗಳನ್ನು ನಡೆಸುತ್ತಿರುವವರೂ ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯ ಸ್ವಲ್ಪ ಹಣವನ್ನು ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ವಿನಿಯೋಗಿಸಬೇಕು ಎನ್ನುವ ನಿಯಮ ರೂಪಿಸಬೇಕು. ಸೊರಗುತ್ತಿರುವ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಇದರಿಂದ ನೆರವಾಗಲಿದೆ.
ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ಇಂದು ಬೇಕಾಗಿರುವುದು ಸದೃಢವಾದ ಕಟ್ಟಡಗಳು, ಸುಸಜ್ಜಿತ ತರಗತಿ ಕೋಣೆಗಳು, ಪ್ರಯೋಗಾಲಯಗಳು, ಗ್ರಂಥಾಲಯಗಳು, ವಿಷಯ ಪರಿಣತಿ ಹೊಂದಿದ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವ ಶಿಕ್ಷಕರು. ಇಂತಹ ಕನ್ನಡಪರ ಕಾರ್ಯಕ್ರಮಗಳನ್ನು ತಮ್ಮ ಗ್ಯಾರಂಟಿಗಳಲ್ಲಿ ಅಳವಡಿಸಿಕೊಳ್ಳಲು ಯಾವುದೇ ಸರ್ಕಾರಕ್ಕೆ ಹಿಂಜರಿಕೆ ಇರಕೂಡದು. ಇದಕ್ಕೆ ವಿಶ್ವದರ್ಜೆಯ ಶಿಕ್ಷಣ ನೀಡುವ ಭರವಸೆ ಕೊಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಇನ್ನಿತರ ಉದ್ಯಮಗಳು ಕೂಡ ಕೈಜೋಡಿಸಬೇಕು.
ಎರಡನೆಯದು, ಜನಪ್ರತಿನಿಧಿಗಳ ಜವಾಬ್ದಾರಿ. ಒಂದುವೇಳೆ ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟ ಸುಧಾರಿಸಿದಲ್ಲಿ, ಅಲ್ಲಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಸಿದ್ಧರಿರುವ ಅಸಂಖ್ಯಾತ ಕನ್ನಡಪ್ರೇಮಿ ಹೆತ್ತವರು ಇಂದಿಗೂ ನಮ್ಮ ನಾಡಿನಲ್ಲಿ ಇದ್ದಾರೆ. ಶಿಕ್ಷಣವು ತಮ್ಮ ಮಕ್ಕಳ ಭವಿಷ್ಯದ ಅಡಿಪಾಯ ಆಗಿರುವುದರಿಂದ, ಗುಣಮಟ್ಟದ ಶಿಕ್ಷಣವನ್ನು ಸಹಜವಾಗಿ ಹೆತ್ತವರು ನಿರೀಕ್ಷಿಸುತ್ತಾರೆ ಮತ್ತು ಅದಕ್ಕಾಗಿ ಹಣ ಖರ್ಚು ಮಾಡಲು ಸಿದ್ಧರಿರುತ್ತಾರೆ. ಹಾಗಾಗಿ, ಕನ್ನಡ ಮಾಧ್ಯಮ ಶಾಲೆಗಳನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮ ಜನಪ್ರತಿನಿಧಿ
ಗಳಿಗಿದೆ. ಹಾಗಾಗಿ, ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವನ್ನು ಪೋಷಿಸಬೇಕು. ಇದೊಂದು ಕಡ್ಡಾಯ ಕಾರ್ಯಕ್ರಮ ಆಗಬೇಕಿದೆ. ಅವರು ಈ ನಾಡಿನ ಭಾಷೆಗೆ ಮತ್ತು ತಮ್ಮ ಕ್ಷೇತ್ರದ ಜನರಿಗೆ ಮಾಡಬೇಕಾದ ಅನಿವಾರ್ಯ ಜನಸೇವೆ ಇದು. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಓದಲು, ಬರೆಯಲು ಬಾರದ ‘ಕನ್ನಡಿಗ’ರನ್ನು ಅವರು ಪ್ರತಿನಿಧಿಸಲಿದ್ದಾರೆ.
ಮೂರನೆಯದು, ವಿವಿಧ ಕೆಲಸಗಳಲ್ಲಿ ದುಡಿದು ನಿವೃತ್ತರಾಗಿರುವ ಕನ್ನಡಿಗರ ಸಮಾಜಸೇವೆ. ನಾವು ನಮ್ಮ ಸುತ್ತಮುತ್ತ ಬಹಳಷ್ಟು ಸಂಖ್ಯೆಯಲ್ಲಿ ನಿವೃತ್ತರು ಗುಂಪು ಗುಂಪಾಗಿ ಸೇರಿ ತಮ್ಮ ಗತಕಾಲದ ದಿನಗಳನ್ನು ಮೆಲುಕು ಹಾಕುತ್ತಾ, ವರ್ತಮಾನವನ್ನು ನಿರಾಶೆಯಿಂದ ನೋಡುವುದನ್ನು ಕಾಣುತ್ತೇವೆ. ಇವರಲ್ಲಿ ಬಹುತೇಕರು ಶ್ರೇಷ್ಠ ಮಟ್ಟದ ಜೀವನಾನುಭವ ಮತ್ತು ವಿಷಯ ತಜ್ಞತೆ ಹೊಂದಿದವರಾಗಿರುತ್ತಾರೆ. ಅವರಿಗೂ ಕನ್ನಡದ ಭವಿಷ್ಯದ ಬಗ್ಗೆ ಬಹಳಷ್ಟು ಆತಂಕವಿದೆ. ಹಾಗಾಗಿ, ಅವರು ಬಿಡುವಿನ ವೇಳೆಯಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರದ ಕನ್ನಡ ಮಾಧ್ಯಮ ಶಾಲೆಗಳನ್ನು ಸಶಕ್ತಗೊಳಿಸಲು ಅಳಿಲುಸೇವೆ ಸಲ್ಲಿಸಬೇಕು. ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರೆ ಉಚಿತ ಬೋಧನೆಯಂತಹ ಕಾರ್ಯನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು.
ಮಕ್ಕಳೊಂದಿಗೆ ಸಮಯ ಕಳೆಯುವ ಇಂತಹ ಸುಂದರ ಕ್ಷಣಗಳು ಆತ್ಮತೃಪ್ತಿ ಕೊಡುತ್ತವೆ. ಇಳಿವಯಸ್ಸಿನಲ್ಲಿ ಚೈತನ್ಯ ಉಳಿಸಿಕೊಳ್ಳಲು ನೆರವಾಗುತ್ತವೆ. ಇದೊಂದು ಅಮೋಘ ಸಮಾಜಸೇವೆಯೂ ಹೌದು. ಇದು, ಅವರನ್ನು ಕಾಡುವ ವಯೋಸಹಜ ಒಂಟಿತನವನ್ನು ದೂರ ಮಾಡುತ್ತದೆ. ಇದರಿಂದ, ಅವರಲ್ಲಿರುವ ವಿದ್ವತ್ತು, ಕೌಶಲ, ಜೀವನಾನುಭವವು ಮುಂದಿನ ಪೀಳಿಗೆಗಳಿಗೆ ರವಾನೆ ಆಗುತ್ತದೆ. ಜೊತೆಗೆ, ಗೊಂದಲದಲ್ಲಿರುವ ಇಂದಿನ ಮಕ್ಕಳಿಗೆ ಜ್ಞಾನವೃದ್ಧರ ಮಾರ್ಗದರ್ಶನ ಅತ್ಯಗತ್ಯ. ಇದನ್ನು ಕೆಲವು ಹಿರಿಯ ನಾಗರಿಕರು ಈಗಾಗಲೇ ಎಲೆಮರೆಯ ಕಾಯಿಯಂತೆ ಮಾಡುತ್ತಿದ್ದಾರೆ. ಉದಾಹರಣೆಗೆ, ಪ್ರಮೀಳಾ
ಶಿವಣ್ಣ. ಇವರು ತಮ್ಮ ಅಧ್ಯಾಪನ ವೃತ್ತಿಯನ್ನು ದೆಹಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಮಾಡಿ, ನಿವೃತ್ತಿಯ ನಂತರ ತಮ್ಮ ಊರಾದ ತುಮಕೂರು ಜಿಲ್ಲೆಯ ನಂದಿಹಳ್ಳಿ ಗ್ರಾಮದಲ್ಲಿ ನೆಲಸಿ, ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹದಿನೇಳು ವರ್ಷಗಳಿಂದ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮೂಲ ಸೌಕರ್ಯಕ್ಕೆ ಅಪಾರ ಕೊಡುಗೆ ನೀಡಿ, ಶಾಲೆಯ ಗಮನಾರ್ಹ ಬದಲಾವಣೆಗಳಿಗೆ ಕಾರಣರಾಗಿ, ಗ್ರಾಮಸ್ಥರ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಂತಹ ಉತ್ತಮ ಉದಾಹರಣೆಗಳು ಸಾಮುದಾಯಿಕ ಆಂದೋಲನ ಆಗಬೇಕಾಗಿದೆ. ಹಾಗಾಗಿ, ಪ್ರಮೀಳಾ ಅವರಂತೆ ನಾಡಿನ ಹಿರಿಯ ನಾಗರಿಕರು ಮನಸ್ಸು ಮಾಡಿದಲ್ಲಿ, ನಮ್ಮ ಕನ್ನಡ ಶಾಲೆಗಳು ಮತ್ತೊಮ್ಮೆ ತಮ್ಮ ವೈಭವದ ದಿನಗಳಿಗೆ ಮರಳಬಹುದು ಮತ್ತು ಈ ಮೂಲಕ ಕನ್ನಡ ಭಾಷೆಯೂ ತನ್ನ ಭವಿಷ್ಯದ ದಿನಗಳನ್ನು ನೋಡಬಹುದು. ಕನ್ನಡ ಮಾಧ್ಯಮವು ಅಲ್ಲಿ ಕಲಿಯುವ ಮಕ್ಕಳಲ್ಲಿ ಯಾವುದೇ ಬಗೆಯಲ್ಲಿ ಕೀಳರಿಮೆ ತರಿಸಬಾರದು. ಬದಲಾಗಿ, ಉಳ್ಳವರ ಮಕ್ಕಳು ಕೂಡ ಕನ್ನಡ ಶಾಲೆಗಳಿಗೆ ಬರುವಂತೆ ಅವುಗಳ ಗುಣಮಟ್ಟ ಹೆಚ್ಚಿಸಬೇಕು. ಕನ್ನಡದ ಉಜ್ವಲ ಭವಿಷ್ಯಕ್ಕೆ ಬರೀ ಘೋಷಣೆಗಳು ಸಾಕಾಗುವುದಿಲ್ಲ, ಪ್ರಾಮಾಣಿಕ ಪ್ರಾಯೋಗಿಕ ಕಾರ್ಯಕ್ರಮಗಳು ಬೇಕಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.