ADVERTISEMENT

ಮಿಥ್ಯೆಗಳ ಸುಳಿ ಮತ್ತು ಸಂವಿಧಾನ

ಪ್ರೊ.ಬರಗೂರು ರಾಮಚಂದ್ರಪ್ಪ
Published 9 ಆಗಸ್ಟ್ 2019, 20:00 IST
Last Updated 9 ಆಗಸ್ಟ್ 2019, 20:00 IST
   

ಸಂವಿಧಾನದ 370 ಮತ್ತು 35 (ಎ) ವಿಧಿಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಲಭ್ಯವಿದ್ದ ವಿಶೇಷ ಸ್ಥಾನಮಾನವನ್ನುಕೇಂದ್ರ ಸರ್ಕಾರವು ಕ್ಷಿಪ್ರಕ್ರಮದ ಮೂಲಕ ರದ್ದು ಮಾಡಿದ ಮೇಲೆ, ಕೆಲವು ಮುಖ್ಯ ಪ್ರಶ್ನೆಗಳು ಕಾಡತೊಡಗಿವೆ. ಕೆಲವು ಮಿಥ್ಯೆಗಳನ್ನು ಮುನ್ನೆಲೆಗೆ ತರುತ್ತಿರುವ ಪ್ರವೃತ್ತಿಯೂ‍ಪ್ರಶ್ನೆಗಳಿಗೆ ಕಾರಣವಾಗಿದೆ. ಜೊತೆಗೆ ಪ್ರಶ್ನೆಯೇ ಪತ್ತೆಯಿಲ್ಲದ ಪ್ರಶಂಸೆಯಲ್ಲಿ ತೊಡಗಿದ ಕೆಲವು ಮಾಧ್ಯಮಗಳ ಅಬ್ಬರದಲ್ಲಿ, ಪ್ರಜಾಸತ್ತಾತ್ಮಕ ಮೌಲ್ಯಗಳು ಪಾತಾಳಕ್ಕೆ ತಳ್ಳಲ್ಪಟ್ಟಂತೆ ಕಾಣುತ್ತಿವೆ. ಮುಖ್ಯವಾಗಿ, ಕಾಶ್ಮೀರವು ಈಗತಾನೆ ಭಾರತದ ಭಾಗವಾಗಿ ಅಖಂಡ ರಾಷ್ಟ್ರ ಸಾಕಾರವಾಯಿತೆಂಬಂತೆ ಪ್ರಚಾರ ಮಾಡುತ್ತಿರುವುದನ್ನು ಗಮನಿಸಬೇಕು.

ಕಾಶ್ಮೀರದ ದೊರೆಯಾಗಿದ್ದ ಹರಿಸಿಂಗ್ ಅವರ ಜೊತೆಗಾದ ‘ವಿಲೀನ ಒಪ್ಪಂದ’ದ ದಿನದಿಂದಲೂ ಆ ರಾಜ್ಯವು ಅಖಂಡ ಭಾರತದ ಒಂದು ಭಾಗವೇ ಆಗಿತ್ತು ಎಂಬುದನ್ನಿಲ್ಲಿ ಮರೆಯಬಾರದು. ಈ ವಿಲೀನ ಒಪ್ಪಂದದ ಪ್ರಕಾರ, ಅಂದು 370ನೇ ವಿಧಿಯನ್ನು ಸಂವಿಧಾನಾತ್ಮಕಗೊಳಿಸಿ ಕೆಲವು ವಿಶೇಷಾಧಿಕಾರಗಳನ್ನು ಕೊಟ್ಟಿದ್ದರೂ ಕಾಶ್ಮೀರ ಯಾವತ್ತೂ ಭಾರತದ ಅವಿಭಾಜ್ಯ ರಾಜ್ಯವೇ ಆಗಿತ್ತು. ಅಂದು ಕೊಟ್ಟ ವಿಶೇಷಾಧಿಕಾರ ಈಗ ರದ್ದಾಗಿದೆಯೇ ಹೊರತು, ಕಾಶ್ಮೀರವನ್ನು ಹೊಸದಾಗಿ ಭಾರತಕ್ಕೆ ಸೇರ್ಪಡೆ ಮಾಡಿಕೊಳ್ಳುವಂತಹ ಕ್ಷಿಪ್ರ ಕ್ರಾಂತಿಯೇನೂ ನಡೆದಿಲ್ಲ.

ಇನ್ನೊಂದು ಮುಖ್ಯಾಂಶವೆಂದರೆ, ಕಾಶ್ಮೀರದ ಸಮಸ್ಯೆಗೆಲ್ಲ ನೆಹರೂ ಅವರೇ ಕಾರಣರೆಂದು ಕಂಠಪಾಠ ಒಪ್ಪಿಸುವ ಗೀಳಿನದೇ ಒಂದು ಸಮಸ್ಯೆ. ಸ್ವಾತಂತ್ರ್ಯ ಸಂದ ಸಂದರ್ಭವನ್ನು ಯಾವ ಕೋನದಿಂದ ನೋಡಿದರೂ, ಕಾಶ್ಮೀರದ ರಾಜ ಹರಿಸಿಂಗ್‌ ಅವರ ಷರತ್ತುಗಳಿಗೆ ಒಪ್ಪದೇ ಇದ್ದಿದ್ದರೆ ಆ ರಾಜ್ಯವು ಭಾರತದ ಭಾಗವಾಗುತ್ತಿರಲಿಲ್ಲ. ಅಂದು (ಇಂದು ಕೂಡ) ಕಾಶ್ಮೀರವನ್ನು ಕಬಳಿಸಲು ಬಾಯಿ ತೆರೆದಿದ್ದ ಪಾಕಿಸ್ತಾನದಿಂದ ಅದನ್ನು ಕಾಪಾಡಿ ಭಾರತದ ಭಾಗವಾಗಿಸಿದ್ದೇ 1947ರ ಅಕ್ಟೋಬರ್‌ 26ರಂದು ಆದ ಈ ಷರತ್ತುಬದ್ಧ ಒಪ್ಪಂದ. ಸ್ವತಂತ್ರವಾಗಿರಲು ಬಯಸಿದ್ದ ಹರಿಸಿಂಗ್‌, ಪಾಕಿಸ್ತಾನದ ದಾಳಿಯಿಂದ ಪಾರಾಗಲು ನೆರವು ಕೇಳಿದಾಗ, ವಿಲೀನಕ್ಕೆ ಒಪ್ಪಬೇಕೆಂಬ ಷರತ್ತಿನೊಂದಿಗೆ ಸಹಾಯಹಸ್ತ ನೀಡಿದ ನೆಹರೂ ಅವರು ಮಾಡಿದ್ದು ತಪ್ಪೇ ಆಗಿದ್ದರೆ, ಕಾಶ್ಮೀರವು ಭಾರತದಲ್ಲಿ ಇರುತ್ತಿತ್ತೇ ಎಂದು ಪ್ರಶ್ನಿಸಿಕೊಳ್ಳಬೇಕು. ಅಂದು ‘ತಾತ್ಕಾಲಿಕ’ ಎಂಬ ಷರತ್ತಿನೊಂದಿಗೆ 370ನೇ ವಿಧಿಯನ್ನು ಸೇರಿಸಿದ್ದರಿಂದ ಇಂದು ವಿಶೇಷಾಧಿಕಾರವನ್ನು ರದ್ದು ಮಾಡಲು ಸಾಧ್ಯವಾಯಿತು ಎಂಬುದನ್ನೂ ಗಮನಿಸಬೇಕು. 1947ರ ಜೂನ್ 18ರಂದು ಶ್ರೀನಗರಕ್ಕೆ ಭೇಟಿ ನೀಡಿದ್ದ ವೈಸ್‌ರಾಯ್ ಲಾರ್ಡ್‌ ಮೌಂಟ್ ಬ್ಯಾಟನ್, ಕಾಶ್ಮೀರವನ್ನು ಸ್ವತಂತ್ರ ರಾಜ್ಯವೆಂದು ಘೋಷಿಸಬಾರದೆಂದು ರಾಜಾ ಹರಿಸಿಂಗ್‌ ಅವರಿಗೆ ಬುದ್ಧಿ ಹೇಳಿದ್ದನ್ನೂ ಇಲ್ಲಿ ನೆನೆಯಬೇಕು. ಒಟ್ಟಾರೆ ವಾತಾವರಣವೊಂದು ರೂಪುಗೊಂಡು ಕಾಶ್ಮೀರವು ಭಾರತೀಯವಾಯಿತು.

ADVERTISEMENT

ಇಷ್ಟಕ್ಕೂ ನಮ್ಮ ಸಂವಿಧಾನವು ಕಾಶ್ಮೀರಕ್ಕೆ ಮಾತ್ರ ವಿಶೇಷ ಸ್ಥಾನ ಮತ್ತು ಅಧಿಕಾರಗಳನ್ನು ಕೊಟ್ಟಿಲ್ಲ. 371ನೇ ವಿಧಿಯ ಪ್ರಕಾರ ಇನ್ನೂ ಕೆಲವು ರಾಜ್ಯಗಳಿಗೆ ವಿಶೇಷ ಸೌಲಭ್ಯದ ಸ್ಥಾನಮಾನ ಮತ್ತು ಅಧಿಕಾರಗಳನ್ನು ನೀಡಿದೆ. ಮಹಾರಾಷ್ಟ್ರ ಮತ್ತು ಗುಜರಾತ್ (371), ಅಸ್ಸಾಂ (371ಬಿ), ಆಂಧ್ರಪ್ರದೇಶ ಮತ್ತು ತೆಲಗಾಂಣ (371ಡಿ), ಸಿಕ್ಕಿಂ (371ಎಫ್), ಕರ್ನಾಟಕ (371ಜೆ)– ಈ ರಾಜ್ಯಗಳಿಗೆ ಶಿಕ್ಷಣ, ಉದ್ಯೋಗ, ಅಭಿವೃದ್ಧಿ ವಿಷಯಗಳಲ್ಲಿ ಕೆಲವು ಕಡೆ ಇಡೀ ರಾಜ್ಯಕ್ಕೆ, ಇನ್ನು ಕೆಲವು ಕಡೆ ರಾಜ್ಯವೊಂದರ ನಿರ್ದಿಷ್ಟ ಪ್ರದೇಶಕ್ಕೆ ಪ್ರತ್ಯೇಕ ಸ್ಥಾನಮಾನ ಮತ್ತು ಸೌಲಭ್ಯಗಳನ್ನು ನೀಡಲಾಗಿದೆ. ಈ ರಾಜ್ಯಗಳಿಗೆ ನೀಡಿದ ವಿಶೇಷ ಸ್ಥಾನಮಾನಕ್ಕೂಕಾಶ್ಮೀರದ ವಿಶೇಷ ಸ್ಥಾನಮಾನಕ್ಕೂ ವ್ಯತ್ಯಾಸವಿದೆ ಎಂಬುದು ನಿಜ.

ಆದರೆ ನಾಗಾಲ್ಯಾಂಡ್ (371ಎ), ಮಿಜೋರಾಂ (371ಜಿ), ಅರುಣಾಚಲ ಪ್ರದೇಶ (371ಎಚ್) ಮತ್ತು ಮಣಿಪುರಕ್ಕೆ (371ಸಿ) ಸಂವಿಧಾನಾತ್ಮಕವಾಗಿ ಲಭ್ಯವಿರುವ ಸ್ಥಾನಮಾನಗಳು ಸ್ವಲ್ಪ ಅಂತರದಲ್ಲಿ ಕಾಶ್ಮೀರಕ್ಕಿದ್ದ ಸ್ಥಾನಮಾನವನ್ನೇ ಹೋಲುತ್ತವೆ. ಮುಖ್ಯವಾಗಿ ನಾಗಾಲ್ಯಾಂಡ್ ಮತ್ತು ಮಿಜೋರಾಂಗೆ ನೀಡಿದ ವಿಶೇಷಾಧಿಕಾರಗಳನ್ನು ಗಮನಿಸಬೇಕು. 371ಎ ವಿಧಿಯಲ್ಲಿ, ನಾಗಾ ಜನ ಸಮಾವೇಶ 1960 ಮತ್ತು ಕೇಂದ್ರದ ನಡುವೆ ಆದ 16 ಅಂಶಗಳ ಒಪ್ಪಂದದಂತೆ ವಿಶೇಷಾಧಿಕಾರದ ಕೆಲವು ಅಂಶಗಳನ್ನು ಅಳವಡಿಸಲಾಗಿದೆ. 1963ರಲ್ಲಿ ರೂಪುಗೊಂಡ ನಾಗಾಲ್ಯಾಂಡ್‌ಗೆ ಸಂಬಂಧಿಸಿದಂತೆ ದೇಶದ ಪಾರ್ಲಿಮೆಂಟು, ಧರ್ಮ, ಸಾಮಾಜಿಕ ಪದ್ಧತಿ, ಆಚರಣೆ, ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯ, ಬಹುಮುಖ್ಯವಾಗಿ ಆಸ್ತಿ ಮಾಲೀಕತ್ವದ ಬಗ್ಗೆ ವಿಶೇಷಾಧಿಕಾರವನ್ನು 371ಎ ವಿಧಿ ನೀಡಿದೆ. ನಾಗಾಲ್ಯಾಂಡ್‌ನ ಶಾಸನಸಭೆಯ ಒಪ್ಪಿಗೆಯಿಲ್ಲದೆ ಕೇಂದ್ರ ಸರ್ಕಾರವಾಗಲೀ, ಪಾರ್ಲಿಮೆಂಟಾಗಲೀ ಸ್ವತಂತ್ರವಾಗಿ ತಮ್ಮ ಕಾನೂನನ್ನು ಜಾರಿ ಮಾಡುವಂತಿಲ್ಲ. ಈ ಎಲ್ಲ ಅಂಶಗಳೂ 371ಜಿ ಪ್ರಕಾರ ಮಿಜೋರಾಂಗೆ ಅನ್ವಯಿಸುತ್ತವೆ. ಅಂದರೆ ಸತ್ಯ ಇಷ್ಟು:ಕಾಶ್ಮೀರಕ್ಕೆ 370 ಮತ್ತು 35 (ಎ) ಪ್ರಕಾರ ಅನ್ವಯಿಸುತ್ತಿದ್ದ ಅನೇಕ ವಿಷಯಗಳು ನಾಗಾಲ್ಯಾಂಡ್ ಮತ್ತು ಮಿಜೋರಾಂಗೂ ಅನ್ವಯಿಸುತ್ತವೆ. ಬೇರೆ ರಾಜ್ಯದವರು, ಕಾಶ್ಮೀರದಲ್ಲಿ ಇದ್ದಂತೆ ಈ ರಾಜ್ಯದಲ್ಲೂ ಆಸ್ತಿ ಖರೀದಿಸುವಂತಿಲ್ಲ ಎಂಬ ನಿರ್ಬಂಧ ಸೇರಿದಂತೆ ಸ್ವತಂತ್ರ ಕಾನೂನುಗಳೇ ಇವೆ. ಆದರೆ ಕಾಶ್ಮೀರಕ್ಕೆ ಸಿಕ್ಕಿದ ಪ್ರಚಾರ, ಪ್ರಸಿದ್ಧಿ ಮತ್ತು ಪ್ರಾಮುಖ್ಯ ಈ ರಾಜ್ಯಗಳ ನಿರ್ಬಂಧಗಳಿಗೆ ಸಿಗಲಿಲ್ಲ. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನ ಕೊಡುತ್ತಿರುವ ಕೆಟ್ಟಕಾಟವೂ ಪ್ರಾಮುಖ್ಯಕ್ಕೆ ಕಾರಣವಿದ್ದೀತು.

ಇನ್ನು ಅರುಣಾಚಲ ಪ್ರದೇಶ ಮತ್ತು ಮಣಿಪುರಕ್ಕೆ ಕಾಶ್ಮೀರ, ನಾಗಾಲ್ಯಾಂಡ್, ಮಿಜೋರಾಂನಂತೆ ತೀರಾ ವಿಶೇಷಾಧಿಕಾರ ಇಲ್ಲದಿದ್ದರೂ ರಾಜ್ಯಪಾಲರಿಗೆ ಕೆಲವು ವಿಶೇಷಾಧಿಕಾರಗಳನ್ನು ನೀಡಲಾಗಿದೆ. ಅಂದರೆ ರಾಷ್ಟ್ರಪತಿ ತಮ್ಮ ಪ್ರತಿನಿಧಿಯಾದ ರಾಜ್ಯಪಾಲರ ಮೂಲಕ ಕೆಲವು ನಿರ್ಣಯ, ನಿರ್ಬಂಧಗಳಿಗೆ ಕಾರಣವಾಗಬಹುದಾಗಿದೆ. ಎಲ್ಲವೂ ಸಂವಿಧಾನದ ಅಡಿಯಲ್ಲೇ ನಡೆಯುತ್ತವೆ! ಮಿಥ್ಯೆಗಳು ಮುಂದೆ, ಸತ್ಯಗಳು ಹಿಂದೆ. ಇದು ಇಂದಿನ ವಾಸ್ತವ.

ಈಗ ‘ಕಾಶ್ಮೀರ ಕ್ರಾಂತಿ’, ‘ನವಕಾಶ್ಮೀರ’ ಎಂದೆಲ್ಲ ಪ್ರಚಾರಗೊಂಡ ಕ್ರಮಕ್ಕೆ ಬರೋಣ.ಕಾಶ್ಮೀರಕ್ಕೆ ಕೊಟ್ಟಿದ್ದ ವಿಶೇಷಾಧಿಕಾರ ‘ತಾತ್ಕಾಲಿಕ’ವಾದ್ದರಿಂದ ಅದು ಎಂದಾದರೊಂದು ದಿನ ರದ್ದಾಗಲೇಬೇಕಿತ್ತು. ಆದರೆ ಭಾರತಕ್ಕೆ ಸೇರಿಸಿಕೊಳ್ಳುವುದಕ್ಕಾಗಿಯೇ ಕೊಟ್ಟಿದ್ದ ವಿಶೇಷಾಧಿಕಾರವು ಒಪ್ಪಂದದಿಂದ ಮೂಡಿದ್ದನ್ನು ಮರೆಯದೆ, ಅದೇ ಮಾದರಿಯ ಕ್ರಮಕ್ಕೆ ಮುಂದಾಗಬೇಕಿತ್ತಲ್ಲವೆ? ನಲವತ್ತು ಸಾವಿರಕ್ಕೂ ಹೆಚ್ಚು ಮಿಲಿಟರಿ, ಅರೆಮಿಲಿಟರಿ ಸೈನಿಕರನ್ನುಕಾಶ್ಮೀರಕ್ಕೆ ಕಳಿಸಿ ಜನಜೀವನವನ್ನು ಹೃದಯಸ್ತಂಭನಕ್ಕೊಳಪಡಿಸಿ ವಿಶೇಷಾಧಿಕಾರವನ್ನು ರದ್ದು ಮಾಡಿರುವುದು ಸಂವಿಧಾನಾತ್ಮಕವಾದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಂತೆ ಅಲ್ಲವೇ?

ಪಾಕಿಸ್ತಾನದ ಕಿಡಿಗೇಡಿತನ ಮತ್ತು ಕಾಶ್ಮೀರವಾಸಿ ಕೆಲವು ವಿಕ್ಷಿಪ್ತರ ಪ್ರತ್ಯೇಕತಾವಾದಿತನ ನಮ್ಮ ಶತ್ರುಗಳೆಂಬುದು ಸತ್ಯ. ಆದರೆಕಾಶ್ಮೀರದ ಜನಸಮುದಾಯವು ನಮ್ಮ ಶತ್ರುವಲ್ಲ. ಅವರೂ ಭಾರತೀಯರೇ. ಭಾರತೀಯರನ್ನೇ ಬಲಾತ್ಕಾರಕ್ಕೆ ಒಳಪಡಿಸುವುದು ಸಂವಿಧಾನಬದ್ಧವೇ? ಮಾಜಿ ಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ ನಾಲ್ಕು ನೂರರಷ್ಟು ನೇತಾರರನ್ನು ಬಂಧಿಸಿ ಈ ಕಾರ್ಯ ಸಾಧಿಸಿದ್ದು ಸರಿಯೇ?ಕಾಶ್ಮೀರದ ವಿಶೇಷಾಧಿಕಾರ ಹೋಗಲಿ ಎಂದರೆ ರಾಜ್ಯದ ಸ್ಥಾನಮಾನವೇ ಹೋಗಬೇಕೇ? ಅದು ಕೇಂದ್ರಾಡಳಿತ ಪ್ರದೇಶವಾಗಬೇಕೇ? ರಾಜ್ಯದ ವಿಶೇಷಾಧಿಕಾರಕ್ಕೆ ಕೇಂದ್ರದ ಏಕಾಧಿಕಾರ ಉತ್ತರವೇ? ನೀಟ್, ಜಿ.ಎಸ್.ಟಿ., ಆರ್.ಟಿ.ಐ., ಭಯೋತ್ಪಾದನೆ ವಿರೋಧಿ ಕಾಯ್ದೆಗಳ ನಂತರ ಈಗ ಕಾಶ್ಮೀರಕ್ಕೆ ಕೇಂದ್ರಾಧಿಕಾರ! ನಾಗಾಲ್ಯಾಂಡ್, ಮಿಜೋರಾಂಗೆ? ಗೊತ್ತಿಲ್ಲ. ಒಟ್ಟಿನಲ್ಲಿಕಾಶ್ಮೀರಕ್ಕೆ ಒಳಿತಾಗಲಿ. ಸಂವಿಧಾನವು ಮಿಥ್ಯೆಗಳ ಸುಳಿಯಲ್ಲಿ ಸಿಕ್ಕದಿರಲಿ, ಉಳಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.