ADVERTISEMENT

ಚಂದ್ರಕಾಂತ ವಡ್ಡು ವಿಶ್ಲೇಷಣೆ: ಕೋವಿಡ್ ಸಾವು: ತಪ್ಪುತ್ತಿದೆಯೇ ತಾಳ?

ಅವ್ಯವಹಾರ ಹಾಗೂ ತಪ್ಪು ಮಾಹಿತಿ ಆಧರಿಸಿದ ಅಧ್ಯಯನವು ತಜ್ಞರ ದಾರಿ ತಪ್ಪಿಸುತ್ತದೆ

ಚಂದ್ರಕಾಂತ ವಡ್ಡು
Published 22 ಸೆಪ್ಟೆಂಬರ್ 2020, 22:03 IST
Last Updated 22 ಸೆಪ್ಟೆಂಬರ್ 2020, 22:03 IST
   
""

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಕೊರೊನಾ ವೈರಾಣು, ವಿಶ್ವರಂಗದಲ್ಲಿ ಆಟ ಆರಂಭಿಸಿ ವರುಷ ಉರುಳುತ್ತ ಬಂದರೂ ತನ್ನ ಹುಟ್ಟು, ಬೆಳವಣಿಗೆ, ಭವಿಷ್ಯ, ದೌರ್ಬಲ್ಯ ಮತ್ತು ಅಪಾಯದ ಪ್ರಮಾಣದ ಬಗೆಗೆ ನಿಗೂಢವನ್ನು ಉಳಿಸಿಕೊಂಡೇ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಸಾಮಾನ್ಯ ವ್ಯಕ್ತಿಯ ತನಕ ಕೊರೊನಾ ಸೋಂಕಿನ ಕುರಿತು ಹರಿದಾಡುತ್ತಿರುವುದು ಅರೆಬರೆ ಆರಂಭಿಕ ಮಾಹಿತಿಯ ಮುಂದುವರಿಕೆ ಮಾತ್ರ.

ಬಹುಶಃ ಆಧುನಿಕ ಜಗತ್ತು ಒಂದು ವೈರಾಣುವಿನ ಕುರಿತು ಇಷ್ಟೊಂದು ಅಸ್ಪಷ್ಟತೆಯನ್ನು, ಮಾಹಿತಿಯ ಕ್ಷಾಮವನ್ನು ಇಷ್ಟು ದೀರ್ಘ ಕಾಲ ಅನುಭವಿಸಿದ ನಿದರ್ಶನ ಇನ್ನೊಂದಿರಲಿಕ್ಕಿಲ್ಲ. ‘ಇದು ನೈಸರ್ಗಿಕ ರೋಗಾಣು ಅಲ್ಲ, ಮಾನವ ಸೃಷ್ಟಿ, ಹಾಗಾಗಿ ಇದರ ರಹಸ್ಯ ಭೇದಿಸುವುದು ಸವಾಲೇ ಆಗಿದೆ’ ಎಂಬ ಮಾತು ಕೂಡಾ ಹಾಗೇ ಉಳಿದಿದೆ.

ಈ ವರ್ಷದ ಫೆಬ್ರುವರಿಯಲ್ಲಿ ಭಾರತಕ್ಕೆ ಕೊರೊನಾ ವೈರಾಣುವಿನ ಪ್ರವೇಶವಾದಾಗ, ಶೀಘ್ರ ಹರಡುವಿಕೆಯ ಈ ಸೋಂಕು ಉಂಟುಮಾಡುವ ಮರಣ ಪ್ರಮಾಣ ತೀರಾ ಕಡಿಮೆ, ಅಂದರೆ ಗರಿಷ್ಠ ಶೇಕಡ 3ರಷ್ಟು ಎಂದು ನಂಬಲಾಗಿತ್ತು. ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಇದನ್ನು ಒಪ್ಪಿಕೊಂಡಿತ್ತು. ವಿವಿಧ ರಾಜ್ಯಗಳು ದಿನಂಪ್ರತಿ ಬಿಡುಗಡೆ ಮಾಡುತ್ತಿರುವ ಅಂಕಿಅಂಶಗಳು ಇದನ್ನೇ ಸಮರ್ಥಿಸುತ್ತಿವೆ. ಇದೇ 22ರವರೆಗೆ ಹೊರಬಿದ್ದಿರುವ ಅಧಿಕೃತ ಮಾಹಿತಿಯ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55 ಲಕ್ಷಕ್ಕೂ ಅಧಿಕ ಹಾಗೂ ಸಾವಿಗೀಡಾದವರ ಸಂಖ್ಯೆ 89 ಸಾವಿರ ದಾಟಿದೆ. ಗುಣಮುಖರಾದವರ ಸಂಖ್ಯೆ 45 ಲಕ್ಷಕ್ಕೂ ಹೆಚ್ಚು. ಗುಣಮುಖರಾದವರ ಪ್ರಮಾಣ ವಿಶ್ವದಲ್ಲೇ ಅತಿ ಹೆಚ್ಚಿನದು. ಸಾವಿನ ಪ್ರಮಾಣ ಶೇ 1.61ರ ಮಿತಿಯಲ್ಲಿದೆ.

ADVERTISEMENT

ಆದರೆ, ಈ ರೋಗದ ಹರಡುವಿಕೆಯ ವೇಗ ಮತ್ತು ಸಾವಿನ ಪ್ರಮಾಣ ಕುರಿತಂತೆ ತಜ್ಞರು ಹಾಗೂ ಸರ್ಕಾರ ಜನರಲ್ಲಿ ಬಿತ್ತಿದ್ದ ನಂಬಿಕೆ, ಹುಟ್ಟಿಸಿದ್ದ ವಿಶ್ವಾಸದ ಬಗ್ಗೆ, ಬಿಡುಗಡೆ ಮಾಡುತ್ತಿರುವ ಅಂಕಿಅಂಶಗಳ ಸಾಚಾತನದ ಬಗ್ಗೆ ಅನುಮಾನ ಹುಟ್ಟಿಸುವಂತಹ ಬೆಳವಣಿಗೆಗಳು ಕಣ್ಣಿಗೆ ರಾಚುತ್ತಿವೆ, ಎಡೆಬಿಡದೆ ಅಪ್ಪಳಿಸುತ್ತಿರುವ ಆಪ್ತರ ಸಾವುಗಳು ಹೃದಯ ಹಿಚುಕುತ್ತಿವೆ.

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ತಂಡದವರು ಬೆಂಗಳೂರಿನಲ್ಲಿ ನಾನಿರುವ ಅಪಾರ್ಟ್‌ಮೆಂಟಿಗೆ ಕೋವಿಡ್ ಪರೀಕ್ಷೆಗೆಂದು ಇತ್ತೀಚೆಗೆ ಬಂದಿದ್ದರು. ನನ್ನ ಮೂಗಿನ ದ್ರವವನ್ನು ಮಾತ್ರ ಪಡೆದುಕೊಂಡ ಅವರು ಕಡಿಮೆ ವೆಚ್ಚದ ರ‍್ಯಾಪಿಡ್ ಟೆಸ್ಟ್ ಮಾಡಿದರು. ಆದರೆ ಅವರ ಜಾಲತಾಣದ ಕೊಂಡಿಯಲ್ಲಿ ಮಾತ್ರ, ನನ್ನ ಮೂಗು ಮತ್ತು ಗಂಟಲಿನ ದ್ರವ ಸಂಗ್ರಹಿಸಿ ದುಬಾರಿ ವೆಚ್ಚದ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ ಎಂದು ನಮೂದಿಸಲಾಗಿತ್ತು.

ಇದು, ರಾಜ್ಯ ಸರ್ಕಾರವು ಕೋವಿಡ್-19 ಸಾಂಕ್ರಾಮಿಕ ರೋಗದ ಮಾಹಿತಿ ಮತ್ತು ಸೇವೆಗಳ ಹಂಚಿಕೆಗಾಗಿ ನಿರ್ವಹಿಸುತ್ತಿರುವ ಏಕಗವಾಕ್ಷಿ ಜಾಲತಾಣದ ಅಧಿಕೃತ ಎಡವಟ್ಟಿಗೆ ಪುಟ್ಟ ಉದಾಹರಣೆ. ಈ ನಿರ್ದಿಷ್ಟ ಪ್ರಕರಣವನ್ನು ಬೊಮ್ಮಸಂದ್ರ ವಲಯದ ಕೋವಿಡ್ ನಿಗಾ ಹೊಣೆ ಹೊತ್ತ ಸಚಿವರ ಗಮನಕ್ಕೆ ತಂದರೂ ಯಾವುದೇ ತನಿಖೆಯಾಗಲಿಲ್ಲ.

ಒಂದಿಷ್ಟು ಪರಿಶೀಲನೆ ಮಾಡಿದಾಗ, ಇದು ಬಿಡಿ ಪ್ರಕರಣವಲ್ಲವೆಂಬುದು ಮನದಟ್ಟಾಯಿತು. ಅಲ್ಲದೆ ರಾಷ್ಟ್ರ ಮಟ್ಟದಲ್ಲಿ ಕೋವಿಡ್ ಮಾಹಿತಿ ದಾಖಲಿಸುವ ಐಸಿಎಂಆರ್ ಜಾಲತಾಣದಲ್ಲಿ ನನ್ನದೂ ಸೇರಿ ನಮ್ಮ ಸುತ್ತಮುತ್ತಲಿನ ಬಹುಪಾಲು ಜನರ ಮಾಹಿತಿ ದಾಖಲಾಗಿಲ್ಲ. ಹೀಗಿರುವ ವಾಸ್ತವ ಸ್ಥಿತಿಯಲ್ಲಿ ಸರ್ಕಾರ ನೀಡುತ್ತಿರುವ ಅಂಕಿಅಂಶಗಳನ್ನು ಅವಲಂಬಿಸುವುದು ಹೇಗೆ?

ಇಲ್ಲಿ ಅವ್ಯವಹಾರದ ವಾಸನೆ ಒಂದೆಡೆಯಾದರೆ, ಮಾಹಿತಿಯ ತಪ್ಪು ದಾಖಲಾತಿ ದೆಸೆಯಿಂದಾಗಿ, ಆ ದತ್ತಾಂಶಗಳನ್ನು ಆಧರಿಸಿ ಕೈಗೊಳ್ಳುವ ಅಧ್ಯಯನಗಳು, ಫಲಿತಾಂಶಗಳು ಸಹಜವಾಗಿಯೇ ತಜ್ಞರ ದಾರಿ ತಪ್ಪಿಸಲು ಕಾರಣವಾಗುತ್ತವೆ. ಇಂತಹ ಅಕ್ರಮಗಳಿಂದ ಅಂತಿಮವಾಗಿ ಸಾಂಕ್ರಾಮಿಕದಂತಹ ಪಿಡುಗನ್ನು ಅರ್ಥೈಸುವ, ಪರಿಹಾರ ಹುಡುಕುವ ಪ್ರಕ್ರಿಯೆ ಏರುಪೇರಾಗುವುದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಚಂದ್ರಕಾಂತ ವಡ್ಡು

ದಿನಬೆಳಗಾದರೆ ಹತ್ತಿರದವರ, ಬಂಧುಮಿತ್ರರ ಸಾವಿನ ಸುದ್ದಿಗಳು ಸಾಲಾಗಿ ತೇಲಿಬರುತ್ತಿವೆ. ಸಾಮಾಜಿಕ ಮಾಧ್ಯಮಗಳಂತೂ ಅಕಾಲಿಕ ಸಾವಿನ ವಾರ್ತೆ ಮತ್ತು ಸಂತಾಪಗಳಿಂದ ತುಂಬಿ ತುಳುಕುತ್ತಿವೆ. ಸರ್ಕಾರ ಸೂಚಿಸಿದ ಎಲ್ಲಾ ಎಚ್ಚರಿಕೆಗಳ ಪಾಲನೆ ನಂತರವೂ ಸೋಂಕು ತಗುಲಿದ ಪ್ರಕರಣಗಳು, ವೈದ್ಯವಿಜ್ಞಾನ ನೀಡಿದ ಅಪಾಯದ ಸುಳಿವುಗಳು ಇಲ್ಲದಿದ್ದರೂ ಸಂಭವಿಸಿದ ಸಾವುಗಳು ಬೇರೇನೋ ಕತೆ ಹೇಳಲು ಹವಣಿಸುತ್ತಿವೆ. ಆದರೆ ಸಮುದಾಯ ಪ್ರತಿರಕ್ಷೆಯೇ ಅಂತಿಮ ಪರಿಹಾರವೆಂದು ಕೈಚೆಲ್ಲಿ ತನ್ನ ಎಂದಿನ ರಾಜಕಾರಣದಲ್ಲಿ ಮುಳುಗಿರುವ ಸರ್ಕಾರಕ್ಕೆ ಇದನ್ನು ಕೇಳಲು ಕಿವಿ, ಸಮಯ, ಕಾಳಜಿ ಯಾವುದೂ ಇಲ್ಲ.

‘ಕೋವಿಡ್- 19 ಹೇಗೆ ಬರುತ್ತದೆ ಎಂದರೆ ಟೆಸ್ಟ್ ಮಾಡಿಸಿದರೆ ಬರುತ್ತದೆ’ ಎಂಬ ಹಾಸ್ಯೋಕ್ತಿಯಲ್ಲಿ ವ್ಯವಸ್ಥೆಯ ಕಟು ವಾಸ್ತವ ಹಾಗೂ ಜನಸಾಮಾನ್ಯರ ಅನುಭವ ಬೆರೆತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಜನರು ರೋಗಕ್ಕಿಂತ ಚಿಕಿತ್ಸೆ ನೀಡುವ ಆಸ್ಪತ್ರೆಯ ಸ್ಥಿತಿಗತಿಗೆ, ಆಸ್ಪತ್ರೆಯು ತಮ್ಮ ಕೈಗಿಡಬಹುದಾದ ದೊಡ್ಡ ಮೊತ್ತದ ಬಿಲ್ಲಿಗೆ, ಸಾವಿಗಿಂತ ಅಂತ್ಯಸಂಸ್ಕಾರದ ರೀತಿರಿವಾಜಿಗೆ ಅಂಜುತ್ತಿದ್ದಾರೆ. ಗಂಭೀರವಾದ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ ಎಷ್ಟೋ ಜನ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಬಳಲುವುದು ಸಾಮಾನ್ಯವಾಗಿದೆ. ಇದೇ ಕಾರಣದಿಂದ ಸಾವಿಗೆ ಶರಣಾದವರ ಸಂಖ್ಯೆಯೂ ಕಡಿಮೆಯೇನಲ್ಲ.

ವಿಚಿತ್ರವೂ ದುರಂತಮಯವೂ ಆದ ಸತ್ಯವೆಂದರೆ, ಕೋವಿಡ್ ಅಬ್ಬರದಲ್ಲಿ ಚಿಕಿತ್ಸೆ ಲಭಿಸದೆ ಸಂಭವಿಸುತ್ತಿರುವ ಸಾವುಗಳ ನಿಖರ ಮಾಹಿತಿ ಎಲ್ಲಿಯೂ ಸಿಗದಿರುವುದು. ಈ ಸಂದರ್ಭದಲ್ಲಿನ ಸಹಜ ಸಾವುಗಳು, ಚಿಕಿತ್ಸೆ ಸಿಗದ ಸಾವುಗಳು ಹಾಗೂ ಕೋವಿಡ್ ಸಾವುಗಳನ್ನು ಕುರಿತ ಅಂಕಿಅಂಶಗಳ ಸಂಗ್ರಹಕ್ಕೆ, ಅಧ್ಯಯನಕ್ಕೆ ಬಹಳ ಮಹತ್ವವಿದೆ.

ಇದೇ ರೀತಿ ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ವ್ಯವಸ್ಥೆಯ ಸಾಮರ್ಥ್ಯ, ಸಿದ್ಧತೆ, ನ್ಯೂನತೆಗಳ ಸಮೀಕ್ಷೆ ಕೂಡ ತುರ್ತಾಗಿ ಆಗಬೇಕಾದ ಕಾರ್ಯ. ಇಂತಹ ಕನಿಷ್ಠ ಜಾಗೃತಿಯನ್ನು ರೂಢಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಬಂದೆರಗಬಹುದಾದ ವೈರಾಣುಗಳ ನವನವೀನ ಅವತಾರಗಳನ್ನು ಎದುರಿಸಲು ಹೇಗೆ ಸಾಧ್ಯವಾದೀತು?!

ಕೊರೊನಾ ಸೋಂಕಿನ ಹರಡುವಿಕೆ ಸಮುದಾಯ ಹಂತ ತಲುಪಿದೆ ಎಂದು ಸರ್ಕಾರವೇ ಒಪ್ಪಿಕೊಂಡು, ಬಹುಪಾಲು ನಿರ್ಬಂಧಗಳನ್ನು ತೆರವುಗೊಳಿಸಿದೆ. ಹಾಗಾಗಿ ಸೋಂಕಿತರು, ಸಂಪರ್ಕಿತರು ಎಂದು ಶೋಧಿಸುವ, ಬೇರ್ಪಡಿಸುವ ತಾಪತ್ರಯ ಈಗ ಇಲಾಖೆ
ಗಳಿಗಿಲ್ಲ. ಈ ಅವಕಾಶವನ್ನು ಬಳಸಿಕೊಂಡು ಆಸ್ಪತ್ರೆ ನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸಲು ಸಾಧ್ಯವಿದೆ. ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಹೊಣೆ ಹೊತ್ತ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ಮುಖಂಡರು ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ವಿದ್ಯಮಾನಕ್ಕೆ ಈ ರಾಜ್ಯ ಮೂಕಸಾಕ್ಷಿಯಾಗಿದೆ. ಹೀಗಿರುವಾಗ, ಆಡಳಿತ ನಡೆಸುವವರಿಗೆ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟದ ಬಗ್ಗೆ, ಅವಲಂಬನಾರ್ಹ ಚಿಕಿತ್ಸೆ ಬಗ್ಗೆ ಖಾತರಿ ಕೊಡುವ ನೈತಿಕತೆ ಉಳಿಯುವುದೆಂತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.