ADVERTISEMENT

ಕೋವಿಡ್‌ ಲಸಿಕೆ: ಭರವಸೆ ಮತ್ತು ಸವಾಲು

ಗುಂಪು ರೋಗನಿರೋಧಕತೆ ಸಾಧಿಸುವುದು ಹೇಳಿದಷ್ಟು ಸುಲಭ ಏನಲ್ಲ

ಪ್ರೊ.ಶ್ರೀಲತಾ ರಾವ್ ಶೇಷಾದ್ರಿ
Published 3 ಡಿಸೆಂಬರ್ 2020, 22:00 IST
Last Updated 3 ಡಿಸೆಂಬರ್ 2020, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳೆದ ಕೆಲವು ವಾರಗಳಿಂದ ಕೋವಿಡ್‌–19 ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಈ ಸಾಂಕ್ರಾಮಿಕದ ತೀವ್ರತೆಯ ಕಾಲ ಮುಗಿಯಿತು ಎಂಬ ಭರವಸೆಗೆ ಕಾರಣವಾಗಿದೆ. ಈ ಭರವಸೆಗೆ ಇನ್ನಷ್ಟು ಪುಷ್ಟಿ ಕೊಡುವ ಪ್ರೋತ್ಸಾಹದಾಯಕ ಸುದ್ದಿಗಳೂ ಬರುತ್ತಿವೆ. ವಿವಿಧ ಲಸಿಕೆಗಳು ಕೊರೊನಾ ಸೋಂಕು ತಡೆಯಲ್ಲಿ ವಿವಿಧ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿವೆ ಎಂಬ ಘೋಷಣೆಗಳು ಹೊರಬೀಳುತ್ತಿವೆ.

‘ಗುಂಪು ರೋಗನಿರೋಧಕತೆ’ ಪದಗಳು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಬಳಕೆಯಾಗುತ್ತಿವೆ. ರೋಗನಿರೋಧಕತೆಯ ಜತೆಗೆ ಸುರಕ್ಷತೆಯೂ ಇರುವುದರಿಂದ ಈ ಬಳಕೆ ಸರಿಯೂ ಹೌದು. ಗುಂಪು ರೋಗನಿರೋಧಕತೆಯನ್ನು ಎರಡು ರೀತಿಯಲ್ಲಿ ಸಾಧಿಸಲು ಸಾಧ್ಯವಿದೆ.

ಶೇ 70ಕ್ಕಿಂತಲೂ ಹೆಚ್ಚಿನ ಜನರಿಗೆ ರೋಗ ಬಂದು ಅವರಲ್ಲಿ ಪ್ರತಿರೋಧ ಬೆಳೆಯುವುದು ಒಂದು ವಿಧಾನ. ಇದು ಭಾರಿ ಅಪಾಯವನ್ನು ತನ್ನ ಒಳಗೆ ಇರಿಸಿಕೊಂಡಿರುವ ದಾರಿ. ಎರಡನೆಯದು, ದುರ್ಬಲಗೊಳಿಸಿದ ಅಥವಾ ಸತ್ತ ರೋಗಕಾರಕ ವೈರಸ್‌ ಅನ್ನು ಸಣ್ಣ ಪ್ರಮಾಣದಲ್ಲಿ ಲಸಿಕೆ ರೂಪದಲ್ಲಿ ಎಲ್ಲ ಜನರಿಗೂ ನೀಡುವುದು (ಈಗಿನ ಸಂದರ್ಭದಲ್ಲಿ ಕೊರೊನಾ ವೈರಸ್‌). ಇದು ದೇಹದ ರೋಗನಿರೋಧಕತೆಯನ್ನು ಸಕ್ರಿಯಗೊಳಿಸುತ್ತದೆ.

ADVERTISEMENT

ಸೋಂಕಿಗೆ ಒಳಗಾಗಿ ರೋಗನಿರೋಧಕತೆಯನ್ನು ಬೆಳೆಸಿಕೊಳ್ಳುವ ಮೊದಲ ವಿಧಾನದ ಪರಿಣಾಮವನ್ನು ಸೆರೊ ಸಮೀಕ್ಷೆಗಳ ಮೂಲಕ ಅಂದಾಜಿಸಬಹುದು. ರಕ್ತದಲ್ಲಿ ಪ್ರತಿಕಾಯಗಳ ಅಸ್ತಿತ್ವವನ್ನು ಈ ಸಮೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ. ಕರ್ನಾಟಕ ಸರ್ಕಾರವು 290 ಆಸ್ಪತ್ರೆಗಳಲ್ಲಿ ಸೆರೊ ಸಮೀಕ್ಷೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಿದೆ. ಅದರ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ ಶೇ 27.3ರಷ್ಟು ಮಂದಿ ಮಾತ್ರ ಆವರೆಗೆ ಸೋಂಕಿಗೆ ಒಳಗಾಗಿದ್ದರು ಎಂಬ ಅಂಶ ತಿಳಿದು ಬಂದಿತ್ತು. ಅತ್ಯಂತ ಅಪೇಕ್ಷಣೀಯವಾದ ಗುಂಪು ರೋಗನಿರೋಧಕತೆ ಸಾಧಿಸಲು ಬೇಕಾದ ಪ್ರತಿಕಾಯಗಳು ಅಗತ್ಯ ಪ್ರಮಾಣದ ಜನರಲ್ಲಿ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಹಾಗಾಗಿ, ಲಸಿಕೆ ಹಾಕಿಸಿಕೊಳ್ಳುವುದೇ ರೋಗನಿರೋಧಕತೆ ಸೃಷ್ಟಿಗೆ ನಮಗೆ ಇರುವ ದಾರಿಯಾಗಿದೆ. ಸಾಮಾನ್ಯ ಲಸಿಕೆ ಕಾರ್ಯಕ್ರಮದ ಮೂಲಕ ಅಥವಾ ಅಭಿಯಾನದ ಮಾದರಿಯಲ್ಲಿ ಲಸಿಕೆ ನೀಡಬಹುದು. ಕೋವಿಡ್‌–19ರ ಲಸಿಕೆ ನೀಡುವುದಕ್ಕಾಗಿ ಅಭಿಯಾನದ ಮಾದರಿಯನ್ನು ಅನುಸರಿಸಲು ಕರ್ನಾಟಕ ಸರ್ಕಾರವು ನಿರ್ಧರಿಸಿದೆ. ಲಸಿಕೆ ನೀಡಿಕೆಗಾಗಿ ಹಲವು ಕ್ರಮಗಳನ್ನು ಪ್ರಕಟಿಸಿದೆ: ಲಸಿಕೆ ನೀಡುವುದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಸ್ಥಳಗಳನ್ನು ಗುರುತಿಸಿದೆ, ಲಸಿಕೆ ನೀಡಿಕೆಯ ತರಬೇತಿ ಪಡೆದ ಸಾವಿರಾರು ಜನರಿಗೆ ಸಜ್ಜಾಗಿ ಇರಲು ಸೂಚನೆ ಕೊಟ್ಟಿದೆ; ಲಸಿಕೆ ವಿತರಣೆ ಮತ್ತು ಅದರ ಶೇಖರಣೆಯಲ್ಲಿ ಶೀಥಲೀಕರಣಗೃಹಗಳ ಪಾತ್ರ ಬಹಳ ಹಿರಿದು. ಇಂತಹ ಕೇಂದ್ರಗಳನ್ನು ಬಲಪಡಿಸಲಾಗಿದೆ. ಗುಂಪು ರೋಗನಿರೋಧಕತೆಯನ್ನು ಸಾಧಿಸಲು ದೊಡ್ಡ ಸಂಖ್ಯೆಯ ಜನರಿಗೆ ಕೋವಿಡ್‌–19 ಲಸಿಕೆ ನೀಡಲು ಮುಂದಾಗಿರುವುದು ಸ್ತುತ್ಯರ್ಹವೇ; ಆದರೆ ಈ ಪ್ರಕ್ರಿಯೆಯಲ್ಲಿ ಎದುರಿಸಬೇಕಾದ ಸವಾಲುಗಳು ಕಡಿಮೆ ಏನಲ್ಲ.

ಮೊದಲನೆಯದಾಗಿ, ಲಸಿಕೆಯು ಎಷ್ಟು ಪರಿಣಾಮಕಾರಿ ಎಂಬ ದತ್ತಾಂಶವು ಗರಿಷ್ಠವೆಂದರೆ ಆರು ತಿಂಗಳ ಪ್ರಯೋಗಗಳನ್ನು ಆಧರಿಸಿದೆ. ಹಾಗಾಗಿ, ಶೇ 90ರಷ್ಟು ಪರಿಣಾಮಕಾರಿ ಅಥವಾ ಶೇ 95ರಷ್ಟು ಪರಿಣಾಮಕಾರಿ ಎಂದು ಹೇಳುವುದೆಲ್ಲವೂ ಅಲ್ಪಾವಧಿಯಲ್ಲಿ ರೂಪುಗೊಂಡ ನಿರ್ಣಯಗಳು. ದೀರ್ಘಾವಧಿಯ ಪರಿಣಾಮ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಎರಡನೆಯದಾಗಿ, ಲಸಿಕೆಯ ಸ್ವೀಕಾರಾರ್ಹತೆಯೂ ಚರ್ಚೆಯ ವಿಷಯ. ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾಗಿಯಾದ ಶೇ 50ರಷ್ಟು ಮಂದಿ ಈ ಲಸಿಕೆಗಳನ್ನು ನಂಬುವುದಿಲ್ಲ ಎಂದೇ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಲಸಿಕೆಗಾಗಿ ಭಾರಿ ಧಾವಂತ ಕಾಣಿಸುತ್ತಿದ್ದರೂ ಈ ಜನರು ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಿಲ್ಲ ಎಂದಿದ್ದಾರೆ.

ಕೋವಿಡ್‌–19ರ ಪ್ರತಿಕಾಯಗಳು ಕೆಲವೇ ತಿಂಗಳಿಗಿಂತ ಹೆಚ್ಚು ಕಾಲ ಇರಲಿಕ್ಕಿಲ್ಲ ಎಂಬುದು ಮೂರನೆಯ ಮತ್ತು ಅತ್ಯಂತ ಮುಖ್ಯವಾದ ಅಂಶ. ಅದು ನಿಜ ಎಂದಾದರೆ, ಕೊರೊನಾ ಸೋಂಕಿನ ಮೇಲಿನ ಪ್ರತಿರೋಧವನ್ನು ಉಳಿಸಿಕೊಳ್ಳಬೇಕಿದ್ದರೆ ಜನರು ಮತ್ತೆ ಮತ್ತೆ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಲಸಿಕೆ ಕಾರ್ಯಕ್ರಮವು ಅಭಿಯಾನದ ಮಾದರಿಯಲ್ಲಿ ಇರುವುದಕ್ಕಿಂತ ಸರ್ಕಾರದ ಸಾಮಾನ್ಯ ಲಸಿಕೆ ಕಾರ್ಯಕ್ರಮದ ರೂಪದಲ್ಲಿಯೇ ಇರಬೇಕಾಗುತ್ತದೆ. ದುರದೃಷ್ಟವೆಂದರೆ, ಸಾಮಾನ್ಯ ಲಸಿಕೆ ಕಾರ್ಯಕ್ರಮದ ವಿಚಾರದಲ್ಲಿ ಕರ್ನಾಟಕದ ಹಿಂದಿನ ದಾಖಲೆಯು ಚಿಂತೆಯ ವಿಚಾರ: 12–23 ತಿಂಗಳ ಮಕ್ಕಳಿಗೆ ಬಿಸಿಜಿ, ದಡಾರ ಮತ್ತು ಡಿಪಿಟಿ ಹಾಗೂ ಪೋಲಿಯೊದ ತಲಾ ಮೂರು ಡೋಸ್‌ಗಳ ನೀಡಿಕೆಯ ಪ್ರಮಾಣವು 2015–16ರ ಅಂಕಿ ಅಂಶದ ಪ್ರಕಾರ, ಶೇ 62.6 ಮಾತ್ರ (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಸುತ್ತು–4). ಜಿಲ್ಲಾ ಮಟ್ಟದಲ್ಲಿನ ವ್ಯತ್ಯಾಸಗಳು ಕೂಡ ಗಣನೀಯವಾಗಿವೆ– ಚಿಕ್ಕಮಗಳೂರಿನಲ್ಲಿ ಶೇ 41.2ರಷ್ಟಿದ್ದರೆ, ದಕ್ಷಿಣ ಕನ್ನಡದಲ್ಲಿ ಶೇ 77.3ರಷ್ಟಿದೆ.

ಗಣನೀಯ ಪ್ರಮಾಣದ ಜನರು ಕೋವಿಡ್‌ ತಡೆ ಲಸಿಕೆ ಪಡೆದುಕೊಂಡರೆ ಮಾತ್ರ ಜೀವನವು ‘ಮರಳಿ ಸಹಜ ಸ್ಥಿತಿ’ ತಲುಪಬಹುದು ಎಂಬ ನಿರೀಕ್ಷೆ ಇದೆ. ಅಲ್ಪ ಅವಧಿಯಲ್ಲಿಯೇ ಜನರಿಗೆ ಕೋವಿಡ್‌–19 ಲಸಿಕೆಯು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವ ವ್ಯವಸ್ಥೆಯ ಶಕ್ತಿಯ ಮೇಲೆಯೇ ಮುಖ್ಯವಾಗಿ ಇದು ಅವಲಂಬಿತವಾಗಿದೆ. ಇದು ಸಾಧ್ಯವಾದರೆ ಮಾತ್ರ ಜನರು ಸುರಕ್ಷಿತವಾಗಿ ಮತ್ತು ವಿಶ್ವಾಸದಿಂದ ತಮ್ಮ ಸಹಜ ಚಟುವಟಿಕೆಗಳಿಗೆ ಹಿಂದಿರುಗುವುದು ಮತ್ತು ಆ ಮೂಲಕ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸುಸ್ಥಿತಿಯನ್ನು ಮರುಸ್ಥಾಪಿಸುವುದು ಸಾಧ್ಯ.

ಸುದೀರ್ಘ ವಿಳಂಬ, ಜೀವರಕ್ಷಕ ಲಸಿಕೆಯನ್ನು ಅದು ಅತ್ಯಂತ ಅಗತ್ಯ ಇರುವವರಿಗೆ ತಲುಪಿಸುವಲ್ಲಿ ಆರೋಗ್ಯ ವ್ಯವಸ್ಥೆಯ ವೈಫಲ್ಯವು ದುರಂತಮಯ ಪರಿಣಾಮಗಳಿಗೆ ಕಾರಣ ಆಗಬಹುದು. ಆದಾಯ ಗಳಿಸಲೇಬೇಕಾದ ತೀವ್ರವಾದ ಒತ್ತಡ ಜನರ ಮೇಲೆ ಇದೆ; ಅದರಿಂದಾಗಿ ಅವರು, ತಮ್ಮ ಮತ್ತು ತಮ್ಮ ಕುಟುಂಬದ ಖರ್ಚನ್ನು ಭರಿಸುವುದಕ್ಕಾಗಿ ಅಪಾಯಕಾರಿ ಸನ್ನಿವೇಶವನ್ನು ಪ್ರವೇಶಿಸುವ ಬಲವಂತಕ್ಕೆ ಒಳಗಾಗಬಹುದು.

ಲಸಿಕೆಯ ಸಂಶೋಧನೆಯಲ್ಲಿ ದೊರಕಿರುವ ಮುನ್ನಡೆ ನಮ್ಮಲ್ಲಿ ಭರವಸೆ ಮೂಡಿಸಿದೆ ಎಂಬುದು ನಿಜ. ಆದರೆ, ಲಸಿಕೆಯನ್ನು ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಾದ ಅಗತ್ಯವೂ ಇದೆ. ಅಭಿಯಾನ ಎಂಬುದು ತನ್ನ ಸ್ವರೂಪದಲ್ಲಿ ಅಲ್ಪಾವಧಿಯದ್ದು ಮತ್ತು ಹೆಚ್ಚು ಸಂಪನ್ಮೂಲ ಬೇಕಾಗಿರುವಂತಹುದು. ಪೋಲಿಯೊ ನಿರ್ಮೂಲನೆ ಕಾರ್ಯಕ್ರಮದ ಈ ಹಿಂದಿನ ಅನುಭವ ನಮಗೆ ಇದೆ– ಅತ್ಯುತ್ತಮ ಪ್ರಯತ್ನಗಳು ಇದ್ದಾಗಲೂ ಲಸಿಕೆ ನೀಡಿಕೆಯ ಅಭಿಯಾನ ಮಾದರಿಯು ತನ್ನ ಗುರಿ ಸಾಧಿಸಲು ಗಣನೀಯವಾದ ಸಮಯ ಬೇಕು. ಭಾರತದ ಪಲ್ಸ್‌ ಪೋಲಿಯೊ ಕಾರ್ಯಕ್ರಮವನ್ನು 1995ರಲ್ಲಿ ಘೋಷಿಸಲಾಯಿತು. ಆದರೆ, ಪೋಲಿಯೊ ಸಂಪೂರ್ಣ ನಿರ್ಮೂಲನೆ ಆಗಿದೆ ಎಂಬ ಅಂತಿಮ ಪ್ರಮಾಣಪತ್ರ ಸಿಕ್ಕಿದ್ದು ಸುಮಾರು ಎರಡು ದಶಕಗಳ ಬಳಿಕ, 2014ರಲ್ಲಿ.

ಕೋವಿಡ್‌ ಅಥವಾ ಲಸಿಕೆ ಮೂಲಕ ತಡೆಯಬಹುದಾದ ಇನ್ನಾವುದೇ ರೋಗದ ನಿರ್ಮೂಲನೆಗೆ ಸಂಬಂಧಿಸಿ ಸುದೀರ್ಘವಾದ ಮತ್ತು ನಿರಂತರವಾದ ಹೋರಾಟದ ಯೋಜನೆಯನ್ನು ಸರ್ಕಾರ ರೂಪಿಸಬೇಕು. ಇದು ಸಾಧ್ಯವಾಗಬೇಕಾದರೆ, ಸಾಮಾನ್ಯವಾದ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ ಜಾರಿಗೆ ಸಾಮರ್ಥ್ಯ ವೃದ್ಧಿಯ ಅಗತ್ಯ ಇದೆ.ಅಂದರೆ, ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಸುದೀರ್ಘ ಕಾಲ ಸುಸ್ಥಿರವಾಗಿರಿಸಬೇಕು; ಅಗತ್ಯ ಸಿಬ್ಬಂದಿ ಮತ್ತು ಸಂಪನ್ಮೂಲ ಇರುವ, ವಯಸ್ಕರು ಮತ್ತು ಮಕ್ಕಳಿಗೆ ತಲೆಮಾರುಗಳ ಕಾಲ ರಕ್ಷಣೆ ಕೊಡುವ ರೀತಿಯಲ್ಲಿ ವಿನ್ಯಾಸಗೊಂಡಿರುವ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಬೇಕು. ಈಗಿನ ಸಾಂಕ್ರಾಮಿಕದಿಂದ ಲಸಿಕೆ ಕಾರ್ಯಕ್ರಮವು ನಮ್ಮನ್ನು ದಡ ಸೇರಿಸಬಹುದು ಎಂಬುದು ಖಚಿತವಿಲ್ಲದ ಒಂದು ಸಾಧ್ಯತೆ. ಇದುವೇ ಅಂತಿಮ ಪರಿಹಾರ ಅಲ್ಲ ಎಂಬುದು ನಮ್ಮ ಗಮನದಲ್ಲಿ ಇರಬೇಕು.

ಲೇಖಕಿ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಪ್ರಾಧ್ಯಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.