ಭಾರತವು ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ಶಾಸನವನ್ನು ರೂಪಿಸುತ್ತಿರುವ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಬೃಹತ್ ಸ್ವರೂಪ ಪಡೆದುಕೊಂಡಿದೆ. ತನ್ನ ಜೊತೆ ಅದು ಖಾಸಗಿತನವನ್ನು ಅತಿಕ್ರಮಿಸುವ ತಂತ್ರಜ್ಞಾನವನ್ನು ಹೊತ್ತುತಂದಿದೆ. ಜನವರಿ 28 ಅನ್ನು ವಿಶ್ವವು ದತ್ತಾಂಶಗಳ ಖಾಸಗಿತನದ ದಿನವನ್ನಾಗಿ ಆಚರಿಸಿತು. ಭಾರತದಲ್ಲಿ ದತ್ತಾಂಶದ ಖಾಸಗಿತನವು ಬಹಳಷ್ಟು ಹೋರಾಟದ ನಂತರ ದಕ್ಕಿದೆ. ಈಗ ಅದು ಮೂಲಭೂತ ಹಕ್ಕುಗಳಲ್ಲಿ ಒಂದು.
ದೇಶದ ಪ್ರತಿ ಪ್ರಜೆಗೂ ಮೂಲಭೂತ ಹಕ್ಕುಗಳು ಇರಬೇಕು, ಪ್ರತಿ ಪ್ರಜೆಯೂ ಆ ಹಕ್ಕುಗಳನ್ನು ಸಮಾನವಾಗಿ ಅನುಭವಿಸುವಂತಿರಬೇಕು ಎಂಬ ಆಲೋಚನೆಯ ಆಧಾರದಲ್ಲಿ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ. ಸಮಕಾಲೀನ ಆಧುನಿಕ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಖಾಸಗಿತನಕ್ಕೆ ಸಂಬಂಧಿಸಿದ ಚರ್ಚೆಯು ಹೊಸದು. ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಪರಿಗಣಿಸುವುದಕ್ಕೆ ರಾಷ್ಟ್ರದ ಭದ್ರತೆ ಮತ್ತು ಅದೇ ಬಗೆಯ ಇತರ ಸಾರ್ವಜನಿಕ ಹಿತಾಸಕ್ತಿಗಳ ಆಧಾರದಲ್ಲಿ ವಿರೋಧ ದಾಖಲಾಗಿದೆ. ವ್ಯಕ್ತಿಮಟ್ಟದಲ್ಲಿನ ಖಾಸಗಿತನಕ್ಕಿಂತ ಸಮಷ್ಟಿಯ ಹಿತವು ಹೆಚ್ಚು ಮಹತ್ವದ್ದು ಎಂದು ವಾದಿಸಲಾಗಿದೆ.
ಡಿಜಿಟಲೀಕರಣ ಹಾಗೂ ಸೈಬರ್ ಜಗತ್ತಿನ ಹೃದಯಭಾಗದಲ್ಲಿ ಇರುವುದು ದತ್ತಾಂಶ. ದತ್ತಾಂಶ ಆಧಾರಿತ ಅರ್ಥವ್ಯವಸ್ಥೆ ಹಾಗೂ ಉದ್ಯಮಕ್ಕೆ ವೇಗ ನೀಡಿದ್ದೇ ಇದು. ಬಹಳ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಹಲವು ಆ್ಯಪ್‌ಗಳು, ಸರ್ಚ್ ಎಂಜಿನ್‌ಗಳು, ಸಾಮಾಜಿಕ ಜಾಲತಾಣ ವೇದಿಕೆಗಳು ಮತ್ತು ವೆಬ್‌ಸೈಟ್‌ಗಳು ತಮ್ಮ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಹಾಗೂ ಅವುಗಳನ್ನು ಅಗತ್ಯ ರೀತಿಯಲ್ಲಿ ಸಂಸ್ಕರಿಸುವ ಕೆಲಸಗಳಲ್ಲಿ ತೊಡಗಿವೆ.
ಬಳಕೆದಾರರು ಯಾರು, ಅವರ ನಿಲುವುಗಳು ಎಂಥವು ಎಂಬುದನ್ನು ಗುರುತಿಸಿ, ಅವರನ್ನು ಗುರಿಯಾಗಿಸಿಕೊಂಡು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಇಂತಹ ದತ್ತಾಂಶ ಸಂಗ್ರಹಣೆ ಕಾರ್ಯದ ಅತ್ಯಂತ ಕಳವಳಕಾರಿ ಆಯಾಮ. ಖಾಸಗಿತನ, ಮಾಹಿತಿ ಮತ್ತು ದತ್ತಾಂಶದ ಖಾಸಗಿತನದ ಸುತ್ತಲಿನ ಚರ್ಚೆಗಳು ಭಾರಿ ದೊಡ್ಡ ಮಟ್ಟದಲ್ಲಿ ನಡೆಯುವಂತೆ ಆಗಿದ್ದಕ್ಕೆ ಕಾರಣ ಇದುವೇ. ವೈಯಕ್ತಿಕ ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳುವ ಸಂಗತಿಯು 2010ರಿಂದಲೂ ವ್ಯಾಪಕವಾಗಿ ಅರಿವಿಗೆ ಬಂದಿದೆ. ಫೇಸ್‌ಬುಕ್–ಕೇಂಬ್ರಿಜ್ ಅನಾಲಿಟಿಕಾ ಪ್ರಕರಣವನ್ನು ಈ ಮಾತಿಗೆ ನಿದರ್ಶನವಾಗಿ ಹೇಳಬಹುದು. ಈ ಪ್ರಕರಣವು ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಕೂಡ ಎದುರಾಗುವ ಅಪಾಯಗಳನ್ನು ತೋರಿಸಿಕೊಟ್ಟಿತು. ಆನ್‌ಲೈನ್ ಜಗತ್ತಿನಲ್ಲಿ ವೈಯಕ್ತಿಕ ಖಾಸಗಿತನವನ್ನು ಕಾಪಾಡಲು ಶಾಸನದ ಅಗತ್ಯವಿದೆ ಎಂಬ ಬೇಡಿಕೆ ಗಟ್ಟಿಯಾಗಲು ಕಾರಣವಾಯಿತು.
‘ಖಾಸಗಿತನವು ಹಿಂದೆಲ್ಲ ಸಹಜವಾಗಿಯೇ ಇತ್ತು. ಮಾಹಿತಿ ಗುರುತಿಸಿ, ಅದನ್ನು ಕಲೆಹಾಕುವುದು ಕಷ್ಟವಾಗಿತ್ತು. ಆದರೆ ಡಿಜಿಟಲ್ ಜಗದಲ್ಲಿ ನಮಗೆ ಸ್ಪಷ್ಟವಾದ ನಿಯಮಗಳ ಅಗತ್ಯವಿದೆ. ಇದು ಸರ್ಕಾರಗಳಿಗೆ ಮಾತ್ರ ಅನ್ವಯವಾಗುವಂತೆ ಅಲ್ಲ; ಬದಲಿಗೆ ಖಾಸಗಿ ಕಂಪನಿಗಳಿಗೂ ಅನ್ವಯವಾಗುವಂತಿರಬೇಕು’ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಖಾಸಗಿತನವು ರಾಜಿ ಮಾಡಿಕೊಳ್ಳಲು ಆಗದಂತಹ ಹಕ್ಕಾಗಿ ಬದಲಾವಣೆ ಕಂಡಿದೆ.
ಪ್ರಜಾತಂತ್ರ ವ್ಯವಸ್ಥೆಗಳು ಹೊಸ ಸವಾಲುಗಳ ವಿಚಾರದಲ್ಲಿ ತಮ್ಮ ಜನರಿಗಾಗಿ ಹೇಗೆ ಶಾಸನಗಳನ್ನು ರೂಪಿಸುತ್ತವೆ ಎಂಬುದಕ್ಕೆ ಭಾರತದಲ್ಲಿ ಖಾಸಗಿತನದ ಸುತ್ತ ನಡೆದಿರುವ ಚರ್ಚೆಯು ಒಂದು ನಿದರ್ಶನ. ಇತರ ಪ್ರಜಾತಂತ್ರ ವ್ಯವಸ್ಥೆಗಳಿಗೆ ಇದು ಅಧ್ಯಯನಯೋಗ್ಯ ವಸ್ತು.
ಭಾರತದಲ್ಲಿ ರಾಷ್ಟ್ರ ಮಟ್ಟದ ಡಿಜಿಟಲೀಕರಣ ಯೋಜನೆಯ ಆಲೋಚನೆ ಮೊದಲು ಮೂಡಿದ್ದು 2000ನೆಯ ಇಸವಿಯಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಇದ್ದಾಗ. ನಂತರ ಡಿಜಿಟಲ್ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಯನ್ನು 2009ರಲ್ಲಿ ಆರಂಭಿಸಲಾಯಿತು. ಆದರೆ ಭಾರಿ ಪ್ರಮಾಣದ ಈ ದತ್ತಾಂಶ ಕೋಶವನ್ನು ರೂಪಿಸುವ ಕೆಲಸವು ಆರಂಭದಿಂದಲೂ ದೋಷಪೂರಿತವಾಗಿತ್ತು. ಸಾರ್ವಜನಿಕರ ಜೊತೆ ಸಮಾಲೋಚನೆ ವ್ಯಾಪಕವಾಗಿರಲಿಲ್ಲ, ಪ್ರಜೆಗಳನ್ನು ಈ ಯೋಜನೆ ವ್ಯಾಪ್ತಿಗೆ ಬರುವಂತೆ ಬಲವಂತ ಮಾಡಲಾಯಿತು, ದತ್ತಾಂಶವನ್ನು ಸಂಗ್ರಹಿಸಿ ಇಡುವ ಬಗೆಯು ಬಿಗಿಯಾಗಿರಲಿಲ್ಲ.
ಯೋಜನೆಯ ಚೌಕಟ್ಟು ಬಹಳ ದುರ್ಬಲವಾಗಿದ್ದರೂ 50 ಕೋಟಿಗೂ ಹೆಚ್ಚು ಮಂದಿ ಈ ಯೋಜನೆಯ ವ್ಯಾಪ್ತಿಗೆ ಬಂದರು. ಇದರಿಂದಾಗಿ ಎರಡು ಬಗೆಯ ಸಮಸ್ಯೆಗಳಿಗೆ ಆಧಾರ್ ರಹದಾರಿಯಂತಾಯಿತು – ನಕಲಿ ಗುರುತಿನ ಚೀಟಿಗಳಿಗೆ ಇದು ಅನುವು ಮಾಡಿಕೊಟ್ಟಿತು, ವ್ಯಕ್ತಿಗಳ ಗುರುತಿನ ಚೀಟಿಯ ವಿವರಗಳು ಸೋರಿಕೆಯಾಗುತ್ತಿದ್ದವು. ಅಂದಿನ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಆಧಾರ್ ಎಂಬ ಒಳ್ಳೆಯ ಆಲೋಚನೆಯು ಕೆಟ್ಟ ಯೋಜನೆಯಾಗಿ ಪರಿವರ್ತನೆಯಾಗಿತ್ತು. ಹೀಗಾಗಿಯೇ, ಖಾಸಗಿತನ ಮತ್ತು ದತ್ತಾಂಶಗಳ ಸುರಕ್ಷತೆಗೆ ಬಲವಾದ ಆಗ್ರಹಗಳು ಬರಲಾರಂಭಿಸಿದವು.
2010ರಲ್ಲಿ ನಾನು ಖಾಸಗಿತನದ ಹಕ್ಕು ಮಸೂದೆಯನ್ನು ಮಂಡಿಸಿದ್ದೆ. ಇದು ಸಂಸತ್ತಿನ ಒಳಗೆ ಮತ್ತು ಹೊರಗೆ ಚರ್ಚೆಯನ್ನು ಹುಟ್ಟುಹಾಕಿತ್ತು. ‘ಖಾಸಗಿತನಕ್ಕೆ ಸಂಬಂಧಿಸಿದ ಶಾಸನವು ಭಾರತದಲ್ಲಿ ಎಲ್ಲರಿಗೂ ಖಾಸಗಿತನದ ಹಕ್ಕನ್ನು ನೀಡಬೇಕು’ ಎಂದು ನ್ಯಾಯಮೂರ್ತಿ ಅಜಿತ್ ಶಾ ಅವರು 2012ರಲ್ಲಿ ಹೇಳಿದ್ದರು. ಆದರೆ ‘ಖಾಸಗಿತನವು ಬಹಳ ಉಚ್ಚವರ್ಗದವರಿಗೆ ಸಂಬಂಧಿಸಿದ್ದು’, ‘ಆಧಾರ್ ಯೋಜನೆಯಲ್ಲಿ ಖಾಸಗಿತನದ ರಕ್ಷಣೆಯು ಅಂತರ್ಗತವಾಗಿಯೇ ಇದೆ’ ಎಂದು ಹೇಳುತ್ತ ಸರ್ಕಾರವು ನಮ್ಮ ಯತ್ನಗಳಿಗೆ ಅಡ್ಡಿ ಸೃಷ್ಟಿಸುತ್ತಿತ್ತು.
ನ್ಯಾಯಮೂರ್ತಿ ಪುಟ್ಟಸ್ವಾಮಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಒಂದನ್ನು ಸಲ್ಲಿಸಲಾಯಿತು, ಇದಕ್ಕೆ ನನ್ನ ಬೆಂಬಲವಿತ್ತು, ಇದರಲ್ಲಿ ನಾನೂ ಒಂದು ಅರ್ಜಿಯನ್ನು ಹಾಕಿದ್ದೆ. ಖಾಸಗಿತನವನ್ನು ಮೂಲಭೂತ ಹಕ್ಕನ್ನಾಗಿ ಘೋಷಿಸಬೇಕು ಎಂದು ಕೋರಿದ್ದೆ. 2017ರ ಆಗಸ್ಟ್‌ನಲ್ಲಿ ಕೋರ್ಟ್ ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಸಾರಿತು.
ಮುಂದಿನ ಹೆಜ್ಜೆ ದತ್ತಾಂಶ ಸುರಕ್ಷತೆ ಕಾನೂನಿನ ಮೂಲಕ ಈ ಹಕ್ಕಿಗೆ ಸಂಹಿತೆಯ ರೂಪವನ್ನು ಕೊಡುವುದಾಗಿತ್ತು. 2017ರಲ್ಲಿ ಮೂರು ಬಗೆಯ ಡಿಜಿಟಲ್ ನಿಯಂತ್ರಣ ಮಾದರಿಗಳು ಲಭ್ಯವಿದ್ದವು. ಮೊದಲನೆಯದು, ಅಮೆರಿಕದ ಮಾದರಿಯಾಗಿತ್ತು. ಖಾಸಗಿತನವನ್ನು ಗುರುತಿಸಿ ಅದಕ್ಕೆ ಮಾನ್ಯತೆ ನೀಡುವ ಕೆಲಸವನ್ನು ಈ ಮಾದರಿಯು ಮಾರುಕಟ್ಟೆಗಳಿಗೆ ಮತ್ತು ಗ್ರಾಹಕರಿಗೆ ನೀಡಿತ್ತು. ಚೀನಾದ ಮಾದರಿಯಲ್ಲಿ ಹಕ್ಕುಗಳು ಸಂಹಿತೆಯ ರೂಪ ಪಡೆದುಕೊಂಡಿರಲಿಲ್ಲ, ಅಲ್ಲಿ ವೈಯಕ್ತಿಕ ದತ್ತಾಂಶವನ್ನು ಯಾರು ಪರಿಶೀಲಿಸಬಹುದು, ಪ್ರಜೆಗಳಿಗೆ ಖಾಸಗಿತನದ ಹಕ್ಕು ಇದೆಯೇ ಎಂಬುದನ್ನು ಪ್ರಭುತ್ವವು ಕಾಲಕಾಲಕ್ಕೆ ತೀರ್ಮಾನಿಸುತ್ತಿತ್ತು.
ಐರೋಪ್ಯ ಒಕ್ಕೂಟದ ಮಾದರಿಯು ಬಹಳ ವ್ಯಾಪಕವಾಗಿ ಉಲ್ಲೇಖವಾಗುತ್ತಿದ್ದ ದತ್ತಾಂಶ ಸುರಕ್ಷತಾ ಮಾದರಿಯಾಗಿತ್ತು. 2021ರಲ್ಲಿ ನಾನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವನಾಗಿ ನೇಮಕಗೊಂಡ ನಂತರ, ಮಸೂದೆಯನ್ನು ಸರಳವಾಗಿ ಪುನರ್‌ರಚಿಸುವ ಕೆಲಸ ಆರಂಭಿಸಿದೆ. ಆರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಹೊಸ ಮಸೂದೆ ಸಿದ್ಧವಾಗಿತ್ತು. ಇದನ್ನು ಸಂಸತ್ತಿನಲ್ಲಿ ಮಂಡಿಸಿ 2023ರಲ್ಲಿ ಅಂಗೀಕಾರ ಪಡೆದುಕೊಳ್ಳಲಾಯಿತು. ಈ ಕಾಯ್ದೆಯ ಅನುಷ್ಠಾನಕ್ಕೆ ಬೇಕಿರುವ ನಿಯಮಗಳನ್ನು ಸಮಾಲೋಚನೆಯ ನಂತರ ಈ ತಿಂಗಳಲ್ಲೇ ಅಧಿಸೂಚನೆಯಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.
ಭಾರತವು ದತ್ತಾಂಶ ಸುರಕ್ಷತೆಯ ಶಾಸನವನ್ನು ರೂಪಿಸುತ್ತಿದ್ದ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯು ಭಾರಿ ಸ್ವರೂಪದಲ್ಲಿ ಬೆಳೆದು ನಿಂತಿದೆ. ಇದು ತನ್ನೊಂದಿಗೆ ಖಾಸಗಿತನವನ್ನು ಅತಿಕ್ರಮಿಸುವ ತಂತ್ರಜ್ಞಾನವನ್ನು, ಮಾದರಿಗಳನ್ನು ಮತ್ತು ಉತ್ಪನ್ನಗಳನ್ನು ಹೊತ್ತುತಂದಿದೆ.
ನಿಯಂತ್ರಣ ಕ್ರಮಗಳು ಹಾಗೂ ಹೊಸತನದ ಅನ್ವೇಷಣೆ ನಡುವಿನ ಅಂತರವು ಇನ್ನಷ್ಟು ಹೆಚ್ಚಾಗುತ್ತಿದೆ. ಎ.ಐ ಆ್ಯಪ್‌ಗಳು, ಉಪಕರಣಗಳು, ಭಾಷಾ ಮಾದರಿಗಳು ಬೃಹತ್ ಪ್ರಮಾಣದ ದತ್ತಾಂಶವನ್ನು ನೆಚ್ಚಿಕೊಂಡು ಕೆಲಸ ಮಾಡುತ್ತವೆ. ದತ್ತಾಂಶ ವ್ಯವಸ್ಥೆಯು ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಅಂದರೆ, ವೈಯಕ್ತಿಕವಲ್ಲದ ದತ್ತಾಂಶಗಳ ಸುತ್ತ ಮಾಡಬೇಕಿರುವ ಕೆಲಸಗಳು ಇನ್ನೂ ಹಲವಷ್ಟಿವೆ ಎಂಬುದನ್ನು ಇದು ಹೇಳುತ್ತಿದೆ. ಎ.ಐ ಮಾದರಿಗಳು ಬಳಸಿಕೊಳ್ಳುತ್ತಿರುವುದು ಇಂತಹ ದತ್ತಾಂಶವನ್ನು.
ಭಾರತದ ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆಯು (ಡಿಪಿಡಿಪಿ ಕಾಯ್ದೆ) ಡಿಜಿಟಲ್ ಜಗತ್ತಿನಲ್ಲಿ ಹೊಸತನಕ್ಕೆ ಉತ್ತೇಜನ ನೀಡುವುದು ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಬೇರೆ ಬೇರೆ ಅಲ್ಲ ಎಂಬುದನ್ನು ಸಾಬೀತು ಮಾಡಿದೆ. ಭಾರತದ ಶಕ್ತಿಶಾಲಿ ಹಾಗೂ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ಡಿಜಿಟಲ್ ಅರ್ಥ ವ್ಯವಸ್ಥೆಯಲ್ಲಿ ಇದೊಂದು ಪ್ರಮುಖ ಗುರುತು.
ಲೇಖಕ: ಕೇಂದ್ರದ ಮಾಜಿ ಸಚಿವ, ಅಭಿಪ್ರಾಯಗಳು ವೈಯಕ್ತಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.