
ಡೊನಾಲ್ಡ್ ಟ್ರಂಪ್
ಅದು 1960ರ ದಶಕ. ಜಗತ್ತಿನೆದುರು ಭಾರತವನ್ನು ಅತ್ಯಂತ ದೈನೇಸಿಯಾಗಿ ಬಿಂಬಿಸಲಾಗಿತ್ತು. ಸ್ವಾತಂತ್ರ್ಯದ ಹೊಸ್ತಿಲಿನಲ್ಲಿದ್ದ ನಮ್ಮ ಸಮಸ್ಯೆಗಳ ಸರಣಿಯೂ ಅಷ್ಟೇ ಇತ್ತು ಬಿಡಿ. ಆದರೆ ನೆನಪಿಟ್ಟುಕೊಳ್ಳಿ, ಯಾವತ್ತೂ ನಾವು ತಿನ್ನಲು ಗತಿಯಿಲ್ಲದವರೇನೂ ಆಗಿರಲಿಲ್ಲ. ಬ್ರಿಟಿಷರು ಸೇರಿದಂತೆ ಕಂಡಕಂಡವರು ಇಲ್ಲಿ ಬಂದು ಕೊಳ್ಳೆ ಹೊಡೆದುಕೊಂಡು ಹೋದಮೇಲೂ ನಮ್ಮ ’ಆಹಾರ ಸ್ವಾತಂತ್ರ್ಯ‘ಕ್ಕೆ ಧಕ್ಕೆ ಬಂದಿರಲಿಲ್ಲ. ಆದರೆ ನಾವು ತಿನ್ನುವುದರಲ್ಲಿ ಏನೂ ಹುರುಳಿಲ್ಲ ಎಂಬ ’ಮಹತ್ತರ ಸಂಶೋಧನಾ ವರದಿಯನ್ನು (?) ಜಗದ ಮುಂದಿಟ್ಟು, ಬಡ ದೇಶಗಳ ಅಪೌಷ್ಟಿಕತೆಯನ್ನು ನಿವಾರಿಸುವ ಧಾರಾಳತನದ ಫೋಸುಕೊಟ್ಟು ತನ್ನ ಗೋಡೌನ್‌ಗಳಲ್ಲಿ ಕೊಳೆಯುತ್ತಿದ್ದ ಮುಗ್ಗುಲು ಗೋಧಿಯನ್ನು ನಮ್ಮ ಬಂದರುಗಳಿಗೆ ತಂದು ಸುರಿಯಲಾರಂಭಿಸಿತ್ತು ಅಮೆರಿಕ. ಅದನ್ನು ಪ್ರಮೋಟ್ ಮಾಡಲೆಂದೇ ಭಾರತ ಮಧುಮೇಹಿಗಳಿಂದ ತುಂಬಿ ಹೋಗಿದೆ. ಇದಕ್ಕೆ ಕಾರಣ ಭಾರತೀಯ ಆಹಾರ ಪದ್ಧತಿಯಲ್ಲಿನ ಅವೈಜ್ಞಾನಿಕ ಕಾರ್ಬೋಹೈಡ್ರೇಡ್ ಬಳಕೆ. ಅಕ್ಕಿಯ ಬದಲು ಗೋಧಿ ತಿಂದರೆ ಶುಗರ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎಂಬ ಹುಯಿಲೆಬ್ಬಿಸಿದ್ದಲ್ಲದೇ, ಇದಕ್ಕಾಗಿ ಖಾಸಗೀ ಕಾರ್ಪೊರೇಟ್ ವಲಯದ ವೈದ್ಯರನ್ನು ಹೇರಳ ಹಣಕೊಟ್ಟು ಬಳಸಿಕೊಳ್ಳಲಾಯಿತು. ಇಂದಿಗೂ ಆ ಲಾಬಿಯೇ ದಟ್ಟವಾಗಿ ಹಬ್ಬಿ ನಿಂತಿರುವುದರಿಂದಲೇ ನಮ್ಮ ವೈದ್ಯರು ಮಧುಮೇಹಿಗಳಿಗೆ ಒಣ ಚಪಾತಿಯನ್ನು ತಿನ್ನಿಸುತ್ತಲೇ ಇದ್ದಾರೆ. ಮಾತ್ರವಲ್ಲ, ಊಟದಲ್ಲಿ ಚಪಾತಿ ಬಳಕೆ, ಕಾಫಿ ಸೇವನೆ ಶ್ರೀಮಂತಿಕೆಯ ಪ್ರತೀಕ ಎಂಬ ಭ್ರಮೆಯನ್ನೂ ಬಿತ್ತಲಾಗಿದೆ!
ಪಾಶ್ಚಾತ್ಯ ಪಾರುಪತ್ಯಗಾರಿಕೆ
ತನ್ನ ಹೆಚ್ಚುವರಿ ಗೋಧಿಯನ್ನು ‘ಮಾನವೀಯ ಸಹಾಯ’ದ ಹೆಸರಿನಲ್ಲಿ ಭಾರತಕ್ಕೆ ಸುರಿದು, ನಮ್ಮ ಆಹಾರ ನೀತಿಯನ್ನು ಅವಲಂಬಿತವಾಗಿಸಲು ಅಮೆರಿಕ ಪ್ರಯತ್ನಿಸಿದ್ದಕ್ಕೆ ಇದೊಂದು ಪುಟ್ಟ ಉದಾಹರಣೆ. ಸಾಸಿವೆ ಎಣ್ಣೆಯ ಮೇಲಿನ ರೀಫೈನ್ಡ್ ಎಣ್ಣೆಗಳ ಸವಾರಿ, ನಮ್ಮ ಬಾಳೆಹಣ್ಣು, ಪೇರಲೆಯ ಮೇಲೆ ಸೇಬನ್ನು ಪ್ರತಿಷ್ಠಾಪಿಸಲೆತ್ನಿಸಿದ್ದು, ಶೇಂಗಾ, ಗೋಡಂಬಿಯ ಸ್ಥಾನವನ್ನು ಅವರ ಬಾದಾಮಿ ಆಕ್ರಮಿಸಿದ್ದು ಇವೆಲ್ಲವೂ ನಮ್ಮ ಸ್ವಾವಲಂಬನೆಯ ಮೇಲಿನ ಅಮೆರಿಕದ ಸವಾರಿಯ ಭಾಗವೇ. ಧೀಮಂತ ರೈತ ನಾಯಕ ಫ್ರೊ. ನಂಜುಂಡಸ್ವಾಮಿಯವರು ಈ ನೆಲದಲ್ಲಿ ಇದ್ದಿರದಿದ್ದರೆ ಬಹುಶಃ ಕೆಂಟಕಿ, ಕೋಕಾಕೋಲಾ ಕಂಪನಿಗಳೂ ನಮ್ಮಲ್ಲಿ ಸಾಮ್ರಾಜ್ಯ ಸ್ಥಾಪಿಸಿಬಿಡುತ್ತಿದ್ದವು. ಅಮೆರಿಕ ಅಥವಾ ಪಾಶ್ಚಾತ್ಯರ ಇಂಥ ಪಾರುಪತ್ಯಗಾರಿಕೆಯ ಕಹಿ ಅನುಭವವೇ ಹಸಿರು ಕ್ರಾಂತಿಯ ಮೂಲಕ ಸ್ವಾವಲಂಬನೆಗೆ ನಮ್ಮನ್ನು ಪ್ರೇರೇಪಿಸಿತು. ಇದೀಗ ಡೊನಾಲ್ಡ್ ಟ್ರಂಪ್ ಎಂಬ ಮಹಾನುಭಾವ ಹುಟ್ಟುಹಾಕಿರುವ ನಮ್ಮ ಅಕ್ಕಿ ಮೇಲಿನ ನಿರ್ಬಂಧ ಹಾಗೂ ತಮ್ಮ ದೇಶದಿಂದ ನಮಗೆ ರವಾನಿಸಲು ಹೊರಿಟ್ಟ ಹಾಲಿ(?)ನ ವಿವಾದವೂ ಇಂಥದ್ದೇ ಹಕ್ಕುದಾರಿಕೆಯ ಎಚ್ಚರಿಕೆಯನ್ನು ರವಾನಿಸಿದೆ. ಅವರ ಧೋರಣೆ ಸ್ಪಷ್ಟ; ಭಾರತದಂಥ ದೇಶಗಳು ನಾವು ಹಾಕಿದ್ದನ್ನು ತಿಂದಕೊಂಡು, ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಎಂಬುದು.
ಆದರೆ ಅಮೆರಿಕಕ್ಕೆ ಗೊತ್ತಿರಲಿ, ನಮಗೆ ಅನ್ನ ಕೇವಲ ತಿನ್ನುವ ನಿರ್ಜೀವ ವಸ್ತುವಲ್ಲ, ಅದು ಸ್ವಭಾವ, ಅಂತಃಕರಣವನ್ನು ರೂಪಿಸುವ ಶಕ್ತಿ ಕಣಜ. ಅಂಥ ಅನ್ನ ತಿಂದೇ ರೂಢಿಸಿಕೊಂಡ ಸ್ವಾಭಿಮಾನ ನಮ್ಮಲ್ಲಿನ್ನೂ ಬತ್ತಿಲ್ಲ ಎಂಬುದನ್ನುಇತಿಹಾಸದಲ್ಲಿ ಮೇಲಿಂದ ಮೇಲೆ ಸಾಬೀತು ಮಾಡಿದ್ದೇವೆ.
ಟ್ರಂಪ್‌ಗೆ ಆಹಾರವೂ ಅಸ್ತ್ರ
ಭಾರತದ ಅಕ್ಕಿ ರಫ್ತಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತೋರಿಸುತ್ತಿರುವ ಕಠಿಣ ಧೋರಣೆಯನ್ನು ಕೇವಲ ವ್ಯಾಪಾರ ಅಥವಾ ವಾಣಿಜ್ಯಿಕ ಸಂಗತಿ ಎಂದುಕೊಂಡರೆ ಅದು ಅರ್ಧ ಸತ್ಯಮಾತ್ರ. ವಾಸ್ತವವಾಗಿ ಇದು ಅಂತರರಾಷ್ಟ್ರೀಯ ರಾಜಕೀಯ ಮೇಲಾಟ, ರೈತ ಲಾಬಿ, ಪ್ರತೀಕಾರದ ಮನೋಭಾವ ಮತ್ತು ಆಹಾರವನ್ನು ಅಸ್ತ್ರವಾಗಿಸುವ ಅಪಾಯಕಾರಿ ಪ್ರವೃತ್ತಿಯ ಸ್ಪಷ್ಟ ಉದಾಹರಣೆ.
ಟ್ರಂಪ್‌ನ ಸದ್ಯದ ರಾಜಕಾರಣ ನಿಂತಿರುವುದೇ ‘ಅಮೆರಿಕ ಫಸ್ಟ್’ ಎಂಬ ಘೋಷಣೆಯ ಮೇಲೆ. ಆತ ಅಧಿಕಾರಕ್ಕೆ ಬಂದಿದ್ದೂ ಇದೇ ಘೋಷಣೆಯ ಅಡಿಯಲ್ಲೇ. ಇದು ಕೇವಲ ಅಧಿಕಾರಕ್ಕಾಗಿನ ತಂತ್ರವಾಗಿಯಷ್ಟೇ ಬಳಕೆಯಾಗಿದ್ದರೆ ಸುಮ್ಮನಿರಬಹುದಿತ್ತೇನೋ. ಅಷ್ಟಕ್ಕೆ ಅವರು ನಿಲ್ಲಿಸಿಲ್ಲ. ಬದಲಿಗೆ ಜಗತ್ತಿನ ಉಳಿದ ರಾಷ್ಟ್ರಗಳ ಆಹಾರ ಭದ್ರತೆಯೊಂದಿಗೆ ಆಟವಾಡುವ ಧೋರಣೆಯನ್ನೂ ಪ್ರದರ್ಶಿಸುತ್ತಿದ್ದಾರೆ. ಹಾಲು–ಅಕ್ಕಿಯ ಬಗೆಗಿನ ಅಮೆರಿಕ ನೀತಿ ಇದರ ಸ್ಪಷ್ಟ ಪ್ರತಿಫಲನ. ಅಮೆರಿಕದ ಅಕ್ಕಿ ಉತ್ಪಾದಕರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಸ್ಥಾನದಲ್ಲೇನೂ ಇಲ್ಲ. ಅಲ್ಲಿ ಉತ್ಪಾದನೆಯಾಗುವ ಅಕ್ಕಿಯ ಬೆಲೆಯೂ ತೀರಾ ದುಬಾರಿ. ಭಾರತದ ಅಗ್ಗದ, ಸಮೃದ್ಧ ಅಕ್ಕಿ ಅಮೆರಿಕನ್ ರೈತ ವಲಯದ ಅಸಮರ್ಥತೆಗೆ ಹಿಡಿದ ಕೈಗನ್ನಡಿಯೂ ಹೌದು. ಇದಕ್ಕೆ ಪರಿಹಾರ ಕಂಡುಕೊಳ್ಳುವ, ಕೃಷಿ ಉತ್ಪಾದನಾ ವಲಯದ ಸುಧಾರಣಾ ಕ್ರಮಗಳನ್ನು ಬಿಟ್ಟು ರಫ್ತು ಹೇರಿಕೆ, ಆಮದು ನಿರ್ಬಂಧಗಳಿಗೆ ಬೆದರಿಕೆ ಹಾಕುವುದು ’ಜಗಮೊಂಡ‘ನೆಂದೇ ಖ್ಯಾತರಾದ ಟ್ರಂಪ್‌ರ ಸರ್ವಾಧಿಕಾರಿ ಶೈಲಿಯ ರಾಜಕಾರಣ.
ಚೀನಾ–ಆಫ್ರಿಕಾ ಸಮೀಕರಣ
ಗಮನಾರ್ಹ ಸಂಗತಿಯೆಂದರೆ, ಆಫ್ರಿಕಾದಲ್ಲಿ ಚೀನಾ ತನ್ನ ಪ್ರಭಾವ ವಿಸ್ತರಿಸಲು ಸಾಲ, ಮೂಲಸೌಕರ್ಯ ಮತ್ತು ಆಹಾರವನ್ನು ಒಟ್ಟಿಗೆ ಬಳಸುತ್ತಿದೆ. ಆದರೆ ಅಕ್ಕಿಯನ್ನು ಅಗ್ಗದ ದರದಲ್ಲಿ ರವಾನಿಸುವ ಮೂಲಕ ಭಾರತವೂ ಆಫ್ರಿಕಾದ ನಂಬಿಕಸ್ಥ ಮಿತ್ರತ್ವವನ್ನು ಸಂಪಾದಿಸಿದೆ. ಇದು ಚೀನಾಕ್ಕೆ ಮಾತ್ರವಲ್ಲ, ಅಮೆರಿಕಕ್ಕೂ ನುಂಗಲಾರದ ತುತ್ತು. ಆಹಾರ ಮಾರುಕಟ್ಟೆಯಲ್ಲಿ ಭಾರತದ ಪ್ರಾಬಲ್ಯವನ್ನು ಕುಗ್ಗಿಸುವುದು, ಪರೋಕ್ಷವಾಗಿ ಆಫ್ರಿಕಾದ ಮೇಲೆ ಹಿಡಿತ ಸಾಧಿಸುವ ಟ್ರಂಪ್ ರಾಜಕೀಯ ಲೆಕ್ಕಾಚಾರವೂ ಹೌದು.
ಹೇಗೇ ನೋಡಿದರೂ ಡೊನಾಲ್ಡ್ ಟ್ರಂಪ್‌ರರ ಎರಡನೇ ಅಧ್ಯಕ್ಷೀಯ ಅವಧಿ ಅಮೆರಿಕದ ವಿದೇಶಾಂಗ ನೀತಿಯನ್ನು ರಾಜತಾಂತ್ರಿಕ ಶಿಷ್ಟಾಚಾರಗಳಿಂದ ಹೊರತಂದು ನೇರ ಲಾಭ–ನಷ್ಟದ ಲೆಕ್ಕಾಚಾರಕ್ಕೆ ತಂದು ನಿಲ್ಲಿಸಿದೆ. 'ಅಮೆರಿಕಾ ಫಸ್ಟ್' ಎಂಬ ಘೋಷಣೆಯ ಹಿಂದಿನ ನಿಜವಾದ ಅಜೆಂಡಾ, ಮಿತ್ರ ರಾಷ್ಟ್ರಗಳನ್ನೂ ಕೂಡ ಚುನಾವಣಾ ಲಾಭದ ಬಲಿಪಶು ಮಾಡುವುದೇ. ಈ ರಾಜಕಾರಣದ ತೀವ್ರತೆಯನ್ನು ಅನುಭವಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಟ್ರಂಪ್‌ನ ಸೋಕಾಲ್ಡ್ ಪರಮ ಮಿತ್ರ ನರೇಂದ್ರ ಮೋದಿ ನೇತೃತ್ವದಲ್ಲಿರುವ ಭಾರತವೂ ಸೇರಿದ್ದು ದುರದೃಷ್ಟಕರ.
ಒಂದು ಕಡೆ ಚೀನಾವನ್ನು ತಡೆಹಿಡಿಯಲು ಭಾರತದ ಅಗತ್ಯವಿದೆ ಎಂದು ಹೇಳುತ್ತಲೇ, ಮತ್ತೊಂದು ಕಡೆ ಭಾರತವನ್ನು 'ಟ್ಯಾರಿಫ್ ಕಿಂಗ್' ಎಂದು ಸಾರ್ವಜನಿಕವಾಗಿ ನಿಂದಿಸುವ ಟ್ರಂಪ್‌ರ ದ್ವಿಮುಖ ಧೋರಣೆ, ಅಮೆರಿಕದ ರಾಜಕೀಯ ಸ್ವಾರ್ಥ ಎಷ್ಟರಮಟ್ಟಿಗೆ ವಿದೇಶಾಂಗ ನೀತಿಯನ್ನು ಆವರಿಸಿಕೊಂಡಿದೆ ಎಂಬುದನ್ನು ಜಗಜ್ಜಾಹೀರು ಮಾಡಿದೆ. ತಂತ್ರಾತ್ಮಕ ಪಾಲುದಾರಿಕೆ ಎಂಬ ಪದ ಬಳಸಿ, ವ್ಯಾಪಾರದಲ್ಲಿ ಮಾತ್ರ ಶುದ್ಧ ವ್ಯಾಪಾರಿಗಳಂತೆ ವರ್ತಿಸುವ ಈ ನಿಲುವಿಗೆ ಎಂದಿಗೂ 'ಗೆಳೆತನ' ಎನ್ನಲಾಗುವುದಿಲ್ಲ, ಬದಲಿಗೆ ಇದು ಬಲವಂತದ ಒಪ್ಪಂದ ರಾಜಕಾರಣ!
ಮಧ್ಯಪ್ರಾಚ್ಯದ ಮೂಗಿಗೆ ತುಪ್ಪ
ಅಮೆರಿಕದ ಒಳರಾಜಕೀಯವೇ ಈ ಸಂಘರ್ಷದ ನಿಜವಾದ ಇಂಧನ. ಮಧ್ಯಪ್ರಾಚ್ಯದ ರೈತರು, ಹಾಲು ಉತ್ಪಾದಕರು, ಕೈಗಾರಿಕಾ ಲಾಬಿಗಳು – ಇವರೆಲ್ಲರ ಅಸಮಾಧಾನವನ್ನು ಭಾರತದಂಥ ದೇಶಗಳನ್ನು ದೂಷಿಸುವ ಮೂಲಕ ಶಮನಗೊಳಿಸುವುದು ಟ್ರಂಪ್ ರಾಜಕೀಯ ತಂತ್ರ. ಭಾರತದಲ್ಲಿನ ಹಾಲು ಉತ್ಪನ್ನಗಳು, ಕೃಷಿ ವಸ್ತುಗಳು, ವೈದ್ಯಕೀಯ ಸಾಧನಗಳ ಮೇಲೆ ಇರುವ ನಿಯಂತ್ರಣಗಳನ್ನು ಗುರಿಯಾಗಿಸುವುದು ಈ ತಂತ್ರದ ಭಾಗವೇ ಹೊರತು, ಮುಕ್ತ ವ್ಯಾಪಾರದ ಮೇಲಿನ ನಿಜವಾದ ಕಾಳಜಿ ಅಲ್ಲ.
2019ರಲ್ಲಿ ಭಾರತವನ್ನು GSP ಪಟ್ಟಿಯಿಂದ ಹೊರಗಿಟ್ಟ ಕ್ರಮ ಸಹ ವ್ಯಾಪಾರ ನೀತಿಯಲ್ಲ, ಅದು ರಾಜಕೀಯ ಎಚ್ಚರಿಕೆ. 'ನಮ್ಮ ಮಾತು ಕೇಳದಿದ್ದರೆ ರಿಯಾಯಿತಿ ಇಲ್ಲ' ಎಂಬ ದಬ್ಬಾಳಿಕೆಯ ಸಂದೇಶವನ್ನು ವಾಷಿಂಗ್ಟನ್ ನವದೆಹಲಿಗೆ ಕಳುಹಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವೂ ಪ್ರತೀಕಾರಾತ್ಮಕ ತೆರಿಗೆಗಳ ಮೂಲಕ ಪ್ರತಿರೋಧ ತೋರಿದಾಗ, ಟ್ರಂಪ್ ಶಿಬಿರಕ್ಕೆ ಅದು ಸಹನೀಯವಾಗಲಿಲ್ಲ. ಸ್ನೇಹವು ಏಕಮುಖವಾಗಿರಬೇಕು ಎಂಬ ಅಮೆರಿಕನ್ ನಿರೀಕ್ಷೆ ಅಲ್ಲಿ ಸ್ಪಷ್ಟವಾಗಿ ಬಯಲಾಯಿತು.
ಚೀನಾ–ಅಮೆರಿಕ ವ್ಯಾಪಾರ ಸಂಘರ್ಷದ ನೆರಳಿನಲ್ಲಿ ಭಾರತವನ್ನು ಪರ್ಯಾಯ ಮಾರುಕಟ್ಟೆ ಹಾಗೂ ಉತ್ಪಾದನಾ ಕೇಂದ್ರವಾಗಿ ಬಳಸಿಕೊಳ್ಳಲು ಅಮೆರಿಕ ಬಯಸಿತು. ಆದರೆ ಅದೇ ಸಮಯದಲ್ಲಿ ಭಾರತದ ಆರ್ಥಿಕ ಸ್ವಾಯತ್ತತೆ, ರೈತರ ಹಿತಾಸಕ್ತಿ ಮತ್ತು ದೇಶೀಯ ಉದ್ಯಮ ರಕ್ಷಣೆಯನ್ನು ಒಪ್ಪಿಕೊಳ್ಳಲು ಟ್ರಂಪ್ ಸಿದ್ಧರಾಗಿರಲಿಲ್ಲ. ಭಾರತದ ಮಾರುಕಟ್ಟೆ ಬೇಕು; ಆದರೆ ಭಾರತದ ಷರತ್ತುಗಳು ಬೇಡ – ಇದೇ ಈ ಸಂಘರ್ಷದ ಸಾರ.
ಹಾಲಿನಿಂದ ಅಕ್ಕಿವರೆಗೆ ಪ್ರತೀಕಾರ
ಇಲ್ಲಿ ಹಾಲಿನ ವಿಚಾರವನ್ನು ಮರೆತರೆ ಚಿತ್ರ ಅಪೂರ್ಣವಾಗುತ್ತದೆ. ಅಮೆರಿಕ ತನ್ನ ಹೆಚ್ಚುವರಿ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಭಾರತಕ್ಕೆ ನೂಕಲು ಪ್ರಯತ್ನಿಸಿದಾಗ, ದೇಶದ ರೈತರು ಮತ್ತು ಸಹಕಾರಿ ವ್ಯವಸ್ಥೆ ಎದ್ದು ನಿಂತವು. ಆ ವಿರೋಧ ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಹಾಲಿನ ಮಾರುಕಟ್ಟೆಯಲ್ಲಿ ಪ್ರವೇಶ ಸಿಗದಿದ್ದರೆ, ಅಕ್ಕಿಯ ಮೂಲಕ ಒತ್ತಡ ತರುವುದೇ ಮುಂದಿನ ಹೆಜ್ಜೆ ಎಂಬ ಅನುಮಾನಕ್ಕೆ ಕಾರಣ ಇಲ್ಲದಿಲ್ಲ. ಇದು ವ್ಯಾಪಾರ ವಿವಾದವಲ್ಲ; ಇದು ಪ್ರತೀಕಾರದ ರಾಜಕಾರಣ.
ಭಾರತದ ಅಕ್ಕಿಯನ್ನು ನಿರ್ಬಂಧಿಸಿದರೆ ಅಮೆರಿಕದ ಗ್ರಾಹಕರಿಗೆ ಲಾಭವಾಗುವುದಿಲ್ಲ. ಆದರೆ ಭಾರತದ ರೈತರು, ಆಫ್ರಿಕಾದ ಬಡ ದೇಶಗಳು ಮತ್ತು ಜಾಗತಿಕ ಆಹಾರ ಭದ್ರತೆ ಮಾತ್ರ ಹೊಡೆತ ತಿನ್ನುತ್ತವೆ. ರಾಜಕೀಯ ನಾಯಕರ ಅಹಂಕಾರದ ಬೆಲೆಯನ್ನು ಸದಾ ಬಡವರು ಕಟ್ಟಬೇಕಾಗುತ್ತದೆ ಎಂಬುದು ಇತಿಹಾಸದ ಕಹಿ ಸತ್ಯ.
ನವವಾಣಿಜ್ಯ ಸಾಮ್ರಾಜ್ಯವಾದ
ಹೇಗೇ ನೋಡಿದರೂ ಟ್ರಂಪ್‌ನ –ಭಾರತ ವ್ಯಾಪಾರ ಸಂಘರ್ಷವು ಆಮದು–ರಫ್ತು ಅಂಕಿಅಂಶಗಳ ಜಗಳವಲ್ಲ. ಅದು ಅಮೆರಿಕದ ಚುನಾವಣಾ ರಾಜಕಾರಣ, 'ಅಮೆರಿಕಾ ಫಸ್ಟ್' ಎಂಬ ಸ್ವಾರ್ಥದ ಸಿದ್ಧಾಂತ ಮತ್ತು ಜಾಗತಿಕ ದಕ್ಷಿಣದ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ನವವಾಣಿಜ್ಯ ಸಾಮ್ರಾಜ್ಯವಾದದ ಪ್ರತಿಬಿಂಬ.
ಹೀಗಾಗಿ ಅಕ್ಕಿ ಕುರಿತ ಟ್ರಂಪ್ ಹೇಳಿಕೆಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಇದು ಭಾರತದ ಮೇಲೆ ರಾಜಕೀಯ ಒತ್ತಡ ತರುವ ಪ್ರಯತ್ನ. ಇಂತಹ ಸಮಯದಲ್ಲಿ ಭಾರತ ತನ್ನ ಅನ್ನದ ಮೇಲಿನ ಸ್ವಾಯತ್ತೆಯನ್ನು ರಾಜತಾಂತ್ರಿಕ ದೃಢತೆಯೊಂದಿಗೆ ರಕ್ಷಿಸಿಕೊಳ್ಳಲೇಬೇಕು. ಏಕೆಂದರೆ ಅನ್ನದ ಮೇಲೆ ಹಿಡಿತವಿದ್ದವನು, ರಾಜಕಾರಣದಲ್ಲಿಯೂ ತಲೆ ಎತ್ತುತ್ತಾನೆ. ಈ ಸತ್ಯವನ್ನು ಭಾರತ ಮರೆತ ದಿನವೇ ಅಪಾಯ ಆರಂಭವಾಗುತ್ತದೆ. ಈ ಸಂಘರ್ಷ ನಮಗೆ ಕಲಿಸುವ ಪಾಠ ಒಂದೇ– ತಂತ್ರಾತ್ಮಕ ಸ್ನೇಹದ ಮಾತುಗಳ ಹಿಂದೆ ಮರೆಮಾಚಲಾಗಿರುವ ಲಾಭದ ರಾಜಕಾರಣವನ್ನು ಗುರುತಿಸದೆ ಹೋದರೆ, ಅದರ ಬೆಲೆ ದೇಶದ ರೈತ, ಉದ್ಯಮಿ ಮತ್ತು ಮಾರುಕಟ್ಟೆ ಕಟ್ಟಲೇಬೇಕಾಗುತ್ತದೆ.
ಭಾರತದ ಅಕ್ಕಿ ಉತ್ಪಾದನೆ, ಬಳಕೆ, ರಫ್ತು
ಭಾರತದ ವಾರ್ಷಿಕ ಸರಾಸರಿ ಅಕ್ಕಿ ಉತ್ಪಾದನೆ: 125–135 ಮಿಲಿಯನ್ ಟನ್
ದೇಶೀಯ ಬಳಕೆ: ಸುಮಾರು 100–105 ಮಿಲಿಯನ್ ಟನ್
ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಡಿತರ): ಮಹತ್ವದ ಪಾಲು
ರಫ್ತು: 20–22 ಮಿಲಿಯನ್ ಟನ್ (ವರ್ಷಾವಾರು ವ್ಯತ್ಯಾಸ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.