ಭೂಮಿಯೆಂದರೆ ಕೇವಲ ಬಾಹ್ಯಾಕಾಶದಲ್ಲಿ ತೇಲುತ್ತಿರುವ ನಿರ್ಜೀವ ಕಲ್ಲು ಬಂಡೆಯಲ್ಲ. ಭೂಮಿಯು ಒಂದು ಜೀವಂತವಾದ, ಉಸಿರಾಡುವ ಸಂವೇದನಾಶೀಲ ಜೀವಿಯಾಗಿದೆ. ಎಲ್ಲಾ ಪ್ರಾಚೀನ ಮತ್ತು ಬುಡಕಟ್ಟು ಸಂಸ್ಕೃತಿಗಳು ಈ ರಹಸ್ಯವನ್ನು ತಿಳಿದಿದ್ದವು. ಆದ್ದರಿಂದಲೇ, ಹಿಂದೂ ಶಾಸ್ತ್ರದಲ್ಲಿಯೂ ಸಹ ಭೂಮಿಯನ್ನು ಎಂದೂ ಕೇವಲ ‘ಭೂಮಿ’ ಎಂದು ಕರೆಯಲಾಗಿಲ್ಲ. ಆಕೆಯನ್ನು ‘ಭೂಮಿ ತಾಯಿ’ ಅಥವಾ ‘ಭೂದೇವಿ’ ಎಂಬ ಪವಿತ್ರ ಭಾವದಿಂದ ಉಲ್ಲೇಖಿಸಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ ನದಿಗಳು ಕೇವಲ ಜಲಮೂಲಗಳಾಗಿರಲಿಲ್ಲ - ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತಿತ್ತು ಮತ್ತು ದೇವತೆಗಳಂತೆ ಪೂಜಿಸಲಾಗುತ್ತಿತ್ತು. ಮರಗಳು, ಪರ್ವತಗಳು, ಪ್ರಾಣಿಗಳು, ಕಲ್ಲುಗಳು ಸಹ - ಪ್ರಕೃತಿಯಲ್ಲಿರುವ ಎಲ್ಲವನ್ನೂ ಪವಿತ್ರವೆಂದು ಪರಿಗಣಿಸಲಾಗುತ್ತಿತ್ತು.
ಈಗ ನಾವು ನಮ್ಮ ಆಧ್ಯಾತ್ಮಿಕ ಮೌಲ್ಯವನ್ನು ತಿಳಿಯಬೇಕಿದೆ ಮತ್ತು ತನ್ಮೂಲಕ ಈ ಅರಿವನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಮಾನವನ ಮನಸ್ಸಿನಲ್ಲಿ ಪರಿಸರದ ಬಗ್ಗೆ ನಿರ್ಲಕ್ಷ್ಯ ಮತ್ತು ಅಸಡ್ಡೆಯು ಉಂಟಾಗುವ ಕಾರಣಗಳನ್ನು ಮತ್ತು ಅದೇ ಪರಿಸರದ ಬಗ್ಗೆ ಕಾಳಜಿ ಮತ್ತು ಅದನ್ನು ಸಂರಕ್ಷಿಸುವ ಗುಣಗಳನ್ನು ಮೂಡಿಸುವ ವಿಧಾನಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ನಮ್ಮೊಳಗೆ ಕರುಣೆ ಹಾಗೂ ಕಾಳಜಿಯ ಭಾವವು ಬೆಳೆಯಲು ಪ್ರಾರಂಭವಾದರೆ, ಅದು ನಾವು ಪರಿಸರವನ್ನು ನಡೆಸಿಕೊಳ್ಳುವ ರೀತಿಯಲ್ಲಿಯೂ ಪ್ರತಿಬಿಂಬಿತವಾಗುತ್ತದೆ ಮತ್ತು ಅದರೊಂದಿಗೆ ಪವಿತ್ರತೆಯ ಭಾವನೆಯು ಸ್ವಾಭಾವಿಕವಾಗಿಯೇ ಬರುತ್ತದೆ. ಮರಗಳು, ಜನರು ಮತ್ತು ನದಿಗಳನ್ನು ನಮ್ಮದೇ ಎಂದು ಪರಿಗಣಿಸಬೇಕು; ಪ್ರಕೃತಿ ಮತ್ತು ಜನರಲ್ಲಿ ದೇವರನ್ನು ಕಾಣಬೇಕು. ಒಬ್ಬ ಸಂವೇದನಾಶೀಲ ವ್ಯಕ್ತಿ ಪ್ರಕೃತಿಯ ಬಗ್ಗೆ ಕಾಳಜಿ ವಹಿಸದೆ ಇರಲು ಸಾಧ್ಯವಿಲ್ಲ. ನೀವು ಪೂಜಿಸುವ ನದಿಯನ್ನು ಕಲುಷಿತಗೊಳಿಸಬೇಡಿ ಎಂದು ಹೇಳಲು ನಿಮಗೆ ನಿಯಮಗಳ ಅಗತ್ಯವಿಲ್ಲ. ನೀವು ನಮಸ್ಕರಿಸುತ್ತಿರುವ ಮರವನ್ನು ಕಡಿಯುವುದನ್ನು ತಡೆಯಲು ನಿಮಗೆ ಕಾನೂನು ಬೇಕಾಗುವುದಿಲ್ಲ.
ನೀವು ಯಾವುದನ್ನಾದರೂ ಪವಿತ್ರವೆಂದು ಪರಿಗಣಿಸಿದಾಗ, ನೀವು ಅದನ್ನು ಶೋಷಿಸುವುದಿಲ್ಲ. ಬದಲಾಗಿ, ಅದನ್ನು ರಕ್ಷಿಸುತ್ತೀರಿ, ಅದರ ಬಗ್ಗೆ ಕಾಳಜಿ ವಹಿಸುತ್ತೀರಿ, ನೀವು ಅದನ್ನು ಗೌರವಿಸುತ್ತೀರಿ.
ಆಧ್ಯಾತ್ಮಿಕತೆಯು ನಮ್ಮಲ್ಲಿ ಜವಾಬ್ದಾರಿಯನ್ನು ಜಾಗೃತಗೊಳಿಸುತ್ತದೆ – ತನ್ನ ಬಗ್ಗೆ, ಇತರರ ಬಗ್ಗೆ, ಮತ್ತು ಪ್ರಕೃತಿಯ ಬಗ್ಗೆ. ಅದು ಪರಿಸರದ ಪ್ರತಿ ಅಂಶದ ಬಗ್ಗೆಯೂ ನಮ್ಮಲ್ಲಿ ಹೆಚ್ಚು ಸೂಕ್ಷ್ಮತೆಯನ್ನು ತರುತ್ತದೆ. ನಾವು ನಮ್ಮ ನೈಜ ಸ್ವಭಾವದಿಂದ ದೂರ ಸರಿದಾಗಲೇ ಪ್ರಕೃತಿಯನ್ನು ಮಾಲಿನ್ಯಗೊಳಿಸಲು ಪ್ರಾರಂಭಿಸುತ್ತೇವೆ.
ಪ್ರಕೃತಿಯ ಕಡೆಗೆ ಪೂಜ್ಯ ಭಾವನೆಯನ್ನು ನಾವು ಪುನಃ ಬೆಳೆಸಿಕೊಳ್ಳಬೇಕಾಗಿದೆ - ಕೇವಲ ಸಂಪ್ರದಾಯಕ್ಕಾಗಿ ಮಾತ್ರವಲ್ಲ, ನಮ್ಮ ಗ್ರಹದ ಭವಿಷ್ಯಕ್ಕಾಗಿಯೂ ಕೂಡ.
ಮಾಲಿನ್ಯದ ಉದ್ಭವ ಕೇವಲ ಕಾರ್ಖಾನೆಗಳಲ್ಲಿ ಅಥವಾ ವಾಹನಗಳಿಂದ ಆಗುವುದಲ್ಲ, ಅದು ನಮ್ಮ ಮನಸ್ಸಿನಲ್ಲಿ ಹುಟ್ಟುತ್ತದೆ – ಒತ್ತಡ, ನಕಾರಾತ್ಮಕತೆ ಮತ್ತು ಲೋಭ ತುಂಬಿದ ಮನಸ್ಸಿನಿಂದ. ಅಂತಹ ಮನಸ್ಸಿಗೆ ನಮ್ಮ ಪರಿಸರವನ್ನು ನೋಡಿಕೊಳ್ಳಲು ಸೂಕ್ಷ್ಮತೆ ಅಥವಾ ಅರಿವು ಇರುವುದಿಲ್ಲ. ಅದು ತನ್ನ ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ನಿರಂತರವಾದ ಓಟದಲ್ಲಿರುತ್ತದೆ. ಯಾವುದನ್ನೂ ಗೌರವಿಸದ ಮನಸ್ಸು ಎಲ್ಲವನ್ನೂ ಉಲ್ಲಂಘಿಸುತ್ತದೆ. ಹೆಚ್ಚಿನದಕ್ಕಾಗಿ ದುರಾಸೆ, ಕ್ರಿಯೆಯಲ್ಲಿ ಅಜಾಗರೂಕತೆ, ಮತ್ತು ಪರಿಣಾಮಗಳನ್ನು ಕಡೆಗಣಿಸುವುದು – ಇವೆಲ್ಲವೂ ಆಂತರಿಕ ‘ಬಡತನ’ದಿಂದ ಹುಟ್ಟುತ್ತವೆ. ನೀವು ಯಾವುದನ್ನಾದರೂ ಪವಿತ್ರವೆಂದು ಭಾವಿಸಿದಾಗ, ಅದು ಒಂದು ರೀತಿಯ ಜಾಗರೂಕತೆಯನ್ನು, ಅದರ ಬಗ್ಗೆ ಅರಿವಿನ ಭಾವನೆಯನ್ನು ತರುತ್ತದೆ. ಆಗ ನಮ್ಮ ಪರಿಸರದ ಬಗ್ಗೆ ಜಾಗೃತರಾಗಿರುವುದು ನಮಗೆ ಸ್ವಾಭಾವಿಕವಾಗಿಯೇ ಬರುತ್ತದೆ.
ನಾವು ಪರಿಸರವನ್ನು ಉಳಿಸಲು ‘ಸಸ್ಟೇನಬಲ್ ಡೆವೆಲಪ್ಮೆಂಟ್’ ಅಥವಾ ‘ಸುಸ್ಥಿರ ಅಭಿವೃದ್ಧಿ’ಯ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಸುಸ್ಥಿರ ಅಭಿವೃದ್ಧಿ ಎಂದರೆ, ಯಾವುದೇ ಯೋಜನೆಯ ದೀರ್ಘಕಾಲೀನ ಪರಿಣಾಮಗಳು ಮತ್ತು ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಮಾಡುವ ಅಭಿವೃದ್ಧಿ. ದೀರ್ಘಾವಧಿಯ ದೃಷ್ಟಿಕೋನವಿಲ್ಲದೆ ನೈಸರ್ಗಿಕ ಸಂಪನ್ಮೂಲಗಳನ್ನು ಧ್ವಂಸಗೊಳಿಸುವುದು ಜೀವನದ ಮೂಲವಾದ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಅಭಿವೃದ್ಧಿಯ ಉದ್ದೇಶವು ಜೀವನವನ್ನು ಬೆಂಬಲಿಸುವುದು, ಪುನರುಜ್ಜೀವನಗೊಳಿಸುವುದು ಮತ್ತು ಉಳಿಸಿಕೊಳ್ಳುವುದು ಮತ್ತು ಜೀವನವನ್ನು ಉತ್ತಮಗೊಳಿಸುವುದಾಗಿರಬೇಕು. ಆಗ ಅಭಿವೃದ್ಧಿಯ ಪ್ರಕ್ರಿಯೆಯು ಪ್ರಕೃತಿ ಮತ್ತು ಅದರ ಸಂಪನ್ಮೂಲಗಳನ್ನು ಸಂರಕ್ಷಿಸುವ ಪ್ರಜ್ಞಾಪೂರ್ವಕ ಪ್ರಯತ್ನವಾಗುತ್ತದೆ. ಸುಸ್ಥಿರತೆಯ ಅಗತ್ಯವು ಆಳವಾದ ಅರಿವಿನಿಂದ ಉದ್ಭವಿಸಬೇಕು. ಅರಿವನ್ನು ಕ್ರಿಯೆಯಾಗಿ ಪರಿವರ್ತಿಸುವುದು ಭಕ್ತಿ ಮಾತ್ರ. ಒಬ್ಬ ವ್ಯಕ್ತಿಯು ಬೌದ್ಧಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂವೇದನಾಶೀಲನಾದಾಗ, ಅವನು ಹಗುರವಾಗಿ ನಡೆಯಲು, ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳಲು ಮತ್ತು ಕಡಿಮೆ ವ್ಯರ್ಥ ಮಾಡಲು ಪ್ರಾರಂಭಿಸುತ್ತಾನೆ.
ಈ ಪವಿತ್ರ ಭೂಮಿಯನ್ನು ಉಳಿಸಲು ನಾವು ಪ್ರಯತ್ನಿಸುತ್ತಿರುವಾಗ ಪ್ರಕೃತಿಯೇ ನಮ್ಮ ಗುರುವಾಗುತ್ತದೆ. ನಿಸರ್ಗವನ್ನು ಗೌರವಿಸಿದಷ್ಟು, ಅದರತ್ತ ಗಮನ ಹರಿಸಿದಷ್ಟು, ಆ ಪಾಠಗಳು ಸ್ಪಷ್ಟವಾಗುತ್ತವೆ. ಉದಾಹರಣೆಗೆ, ನೀವು ಅರಣ್ಯಕ್ಕೆ ಹೋದರೆ, ಅಲ್ಲಿ ಅನೇಕ ಪ್ರಾಣಿಗಳು ವಾಸಿಸುತ್ತವೆ, ಆದರೆ ಅವು ಮನುಷ್ಯರಂತೆ ಕಸವನ್ನು ಎಲ್ಲೆಡೆ ಹರಡುವುದಿಲ್ಲ. ಪ್ರಕೃತಿಯನ್ನು ಗಮನಿಸಿದರೆ, ಅದರಲ್ಲಿರುವ ಪಂಚಭೂತಗಳು ಪರಸ್ಪರ ವಿರೋಧಿಯಾಗಿರುವುದನ್ನು ಕಾಣಬಹುದು; ಪ್ರಾಣಿ ಸಾಮ್ರಾಜ್ಯದಲ್ಲಿಯೂ ಪರಸ್ಪರ ಶತ್ರುತ್ವ ಹೊಂದಿರುವ ವರ್ಗಗಳಿವೆ – ಆದರೂ ಸಹ ಪ್ರಕೃತಿಯಲ್ಲಿ ಸಂಪೂರ್ಣ ಸಮತೋಲನವಿದೆ. ಪ್ರಕೃತಿಯು ತ್ಯಾಜ್ಯವನ್ನು ಹೇಗೆ ಜೀರ್ಣಿಸಿಕೊಳ್ಳುತ್ತದೆ ಮತ್ತು ಮರುಬಳಕೆ ಮಾಡುತ್ತದೆ ಎಂಬುದಕ್ಕೆ ಎರೆಹುಳುಗಳು ಉತ್ತಮ ಉದಾಹರಣೆ. ಆದರೆ, ಅಂಧ ಬಳಕೆ, ಅರಣ್ಯನಾಶ ಮತ್ತು ಸಂಪನ್ಮೂಲಗಳ ಶೋಷಣೆಯಿಂದ ನಾವು ಈ ಸಮತೋಲನವನ್ನು ಕೆಡಿಸಿದಾಗ, ಪ್ರಕೃತಿಯು ಪ್ರತಿಕ್ರಿಯಿಸುತ್ತದೆ - ಪ್ರವಾಹ, ಬರ, ಹವಾಮಾನ ಬದಲಾವಣೆಗಳ ರೂಪದಲ್ಲಿ.
ಈ ನಿಟ್ಟಿನಲ್ಲಿ ‘ಆರ್ಟ್ ಆಫ್ ಲಿವಿಂಗ್’ ನ ಮೂಲಕ ನಾವು ಜಾಗತಿಕ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದೇವೆ - ನದಿಗಳನ್ನು ಪುನರುಜ್ಜೀವನಗೊಳಿಸುವುದು, 100 ದಶಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡುವುದು, ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು ಮತ್ತು ಪರಿಸರ-ಪರ ಜೀವನಶೈಲಿಯನ್ನು ಬೆಂಬಲಿಸುವುದು, ಈ ರೀತಿಯಾಗಿ. ಇದೆಲ್ಲವೂ ಆಧ್ಯಾತ್ಮಿಕ ಪಥದಲ್ಲಿ ಸಾಗುವ ಸಾಧಕನಲ್ಲಿ ಬೆಳೆಯುವ ಸಂವೇದನೆ ಮತ್ತು ಆತ್ಮಜಾಗೃತಿಯಲ್ಲಿ ಬೇರೂರಿದೆ. ಆಧ್ಯಾತ್ಮಿಕ ಅರಿವು ಇಲ್ಲದೆ ಮಾಡುವ ಕ್ರಿಯೆಗಳಲ್ಲಿ ಆಳವಿರುವುದಿಲ್ಲ. ನೀವು ಪ್ರಕೃತಿಯನ್ನು ಗೌರವಿಸಿದಾಗ ಮತ್ತು ಅದರ ಶುದ್ಧತೆಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡಿದಾಗ, ಪ್ರಕೃತಿಯು ನಿಮ್ಮ ಉಪಸ್ಥಿತಿಯನ್ನು ಹರ್ಷದಿಂದ ಆಚರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.