ಬಸವರಾಜ ಬೊಮ್ಮಾಯಿ ಮತ್ತು ನರೇಂದ್ರ ಮೋದಿ
ಉತ್ತಮ ಸಂಸ್ಕಾರ, ಸಂಸ್ಕೃತಿಗೆ ಬಡವ–ಶ್ರೀಮಂತ ದೊಡ್ಡವರು–ಸಣ್ಣವರು ಎನ್ನುವ ಭೇದವಿಲ್ಲ ಎನ್ನುವುದಕ್ಕೆ ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ತಮ್ಮ ಪ್ರಾಮಾಣಿಕತೆಯನ್ನು ಸಾತ್ವಿಕ ಚಿಂತನೆ, ಕಠಿಣ ಪರಿಶ್ರಮ ಮತ್ತು ದೇಶ ಭಕ್ತಿ ಇವುಗಳನ್ನು ಚಿಕ್ಕಂದಿನಿದ್ದಾಗಲೇ ರೂಢಿ ಮಾಡಿಕೊಂಡಿದ್ದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಾಲ್ಯಾವಸ್ಥೆಯನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ.
ಬಡತನವೇ ಹಲವಾರು ರೀತಿಯಲ್ಲಿ ಸುಳ್ಳಿನ ದಾರಿ ಹಿಡಿಯಲು ಅನಿವಾರ್ಯ ಮಾಡುತ್ತದೆ ಎಂದು ಬಹಳಷ್ಟು ಜನ ಮಾತನಾಡುತ್ತಾರೆ. ಆದರೆ, ಕಡು ಬಡತನದಲ್ಲಿ ಜೀವನ ಮೌಲ್ಯ ಗಟ್ಟಿಯಾಗಿ ಇಟ್ಟುಕೊಂಡು ಕಷ್ಟ ಕಾರ್ಪಣ್ಯ ಎದುರಿಸಿ ಬೆಳೆದ ವ್ಯಕ್ತಿ ಮುಂದೆ ಯಶಸ್ವಿಯಾಗಿ ದೊಡ್ಡ ಅಧಿಕಾರವನ್ನು ಕೈಯಲ್ಲಿ ಹಿಡಿದಾಗ ಯಾವ ರೀತಿ ದೇಶ, ಸಮಾಜ ಪರಿವರ್ತನೆ ಮಾಡಲು ಸಾಧ್ಯ ಎನ್ನುವುದು ನರೇಂದ್ರ ಮೋದಿ ಅವರ ಜೀವನದಲ್ಲಿ ಬಂದತಹ ಕಷ್ಟಗಳು ಮತ್ತು ಅವಕಾಶಗಳನ್ನು ವಿಶ್ಲೇಷಣೆ ಮಾಡಿದಾಗ ಗೊತ್ತಾಗುತ್ತದೆ.
ವ್ಯಕ್ತಿತ್ವ ನಿರ್ಮಾಣದಲ್ಲಿ ನರೇಂದ್ರ ಮೋದಿ ಅವರ ತಾಯಿಯ ಪಾತ್ರ ಬಹಳ ದೊಡ್ಡದಾಗಿದೆ. ಮಗನನ್ನು ದೇಶ ಸೇವೆ ಮಾಡಲು ಸಮರ್ಪಣೆ ಮಾಡಿ ಅವನಿಂದ ಏನನ್ನೂ ಬಯಸದೇ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ತಾವೇ ಕೂಡಿಟ್ಟ ಹಣವನ್ನು ಪ್ರತಿವರ್ಷ ಕೊಡುತ್ತಿದ್ದುದು, ಆ ತಾಯಿಯ ದೊಡ್ಡತನ ತೋರಿಸುತ್ತದೆ. ಭಾರತ ದೇಶದ ಆಧುನಿಕ ತಾಯಿ.
ಮೋದಿಯವರ ವ್ಯಕ್ತಿತ್ವವನ್ನು ರೂಪಿಸಲು ಅವರು ನಂಬಿದ ತತ್ವ ಆಚರಣೆಗೆ ತರಲು ಅವರಿಗೆ ಮಾರ್ಗದರ್ಶಿಯಾಗಿ ಬಂದಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅವರ ಸಂಪರ್ಕ ಒಡನಾಟ. ಭಾರತ ದೇಶದ ಕಲ್ಪನೆ, ಮತ್ತು ಭಾರತ ದೇಶದಲ್ಲಿ ಆಗಬೇಕಿರುವ ಬದಲಾವಣೆಗಳು ಸದೃಢ, ಸಮೃದ್ಧ ಶ್ರೇಷ್ಠ ಭಾರತ ಆಗಬೇಕೆನ್ನುವ ವಿಚಾರ ಮತ್ತು ಯಾವುದೇ ಕಾರಣಕ್ಕೂ ರಾಜಿಯಾಗದ ಅಪ್ಪಟ ದೇಶಭಕ್ತಿಯನ್ನು ಆರ್‌ಎಸ್‌ಎಸ್ ಮುಖಾಂತರ ಮೋದಿ ಮೈಗೂಡಿಸಿಕೊಂಡರು.
ಈ ಎರಡು ಹಿನ್ನೆಲೆಯಲ್ಲಿ ಮೋದಿಯವರು ವ್ಯವಸ್ಥೆ ಜೊತೆಗೆ ರಾಜಿಯಾಗದೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಜೊತೆಗೆ ರಾಜಿಯಾಗದೇ ಅಪ್ಪಟ ದೇಶಭಕ್ತ ನಾಯಕನಾಗಿ ಹೊರ ಹೊಮ್ಮಿದ್ದಾರೆ ಮತ್ತು ಅವರ ದೇಶವನ್ನು ಅಭಿವೃದ್ಧಿ ಪಡಿಸುವ ಚಿಂತನೆ ಮತ್ತು ವಿಧಾನ ಎಲ್ಲರಿಗೂ ಮಾದರಿಯಾಗಿದೆ. ಹೀಗಾಗಿ ಭಾರತವನ್ನು ವಿಶ್ವದಲ್ಲಿಯೇ ಆರ್ಥಿಕವಾಗಿ ನಾಲ್ಕನೇ ಅತಿ ದೊಡ್ಡ ದೇಶ ಮತ್ತು ಇತರ ಎಲ್ಲ ಕ್ಷೇತ್ರದಲ್ಲಿ ಭಾರತದ ನಾಯಕತ್ವದ ಛಾಪನ್ನು ಮೂಡಿಸಿದ್ದಾರೆ. ಹೀಗಾಗಿ ಆಧುನಿಕ ಭಾರತದ ಆದರ್ಶ ನಾಯಕರಾಗಿ ರೂಪುಗೊಂಡಿದ್ದಾರೆ.
2014ಕ್ಕೂ ಮುಂಚೆ ಭಾರತವು ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದು ಹಣದುಬ್ಬರ ಶೇಕಡ 12ರಷ್ಟು ಏರಿರುವಂಥದ್ದು, ಕೇವಲ ಶೇಕಡ 12 ಜಿಡಿಪಿ ಮಾತ್ರ ಅಭಿವೃದ್ಧಿಗೆ ಖರ್ಚಾಗುತ್ತಿತ್ತು. ಬಹುತೇಕ ಬ್ಯಾಂಕ್‌ಗಳು ನಷ್ಟದ ದಾರಿ ಹಿಡಿದಾಗ ಅಭಿವೃದ್ಧಿಗೆ ಹಣದ ಕೊರತೆ, ಮತ್ತು ಭ್ರಷ್ಟಾಚಾರದ ಹಗರಣದಿಂದ ಕೂಡಿರುವ ಹಾಗೂ ನಿಷ್ಕ್ರಿಯ ಆಡಳಿತ ಭಾರತವನ್ನು ಹಿಂಜರಿತಕ್ಕೆ ದೂಡಿತ್ತು. ಮೋದಿಯವರು ಸ್ವಚ್ಛ, ದಕ್ಷ ಆಡಳಿತ ತಂದು ಭ್ರಷ್ಟಾಚಾರ ನಿರ್ಮೂಲನೆ ಮಾಡಿದ್ದಾರೆ. ಶೇಕಡ 22ರಷ್ಟು ಜಿಡಿಪಿ ಹಣ ಅಭಿವೃದ್ಧಿಗೆ, ಆಸ್ತಿ ಮಾಡಲು ಹೆಚ್ಚಿಸಿ ಹಣದುಬ್ಬರವನ್ನು ಶೇ 5ಕ್ಕೆ ಇಳಿಸಿ ಎಲ್ಲ ಬ್ಯಾಂಕ್‌ಗಳು ಲಾಭದಾಯಕವಾಗಿ ಜಿಎಸ್‌ಟಿಯನ್ನು ಅನಷ್ಠಾನ ಮಾಡಿ, ಒಂದೂವರೆ ಲಕ್ಷ ಕೊಟಿಗೂ ಹೆಚ್ಚು ಪ್ರತಿ ತಿಂಗಳು ಜಿಎಸ್‌ಟಿ ಸಂಗ್ರಹ ಮಾಡಿ, 596 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆ, ದಾಖಲೆ ಪ್ರಮಾಣದ ಶೇ 7ರಿಂದ 8ರಷ್ಟು ಆರ್ಥಿಕ ಬೆಳವಣಿಗೆ, ಅತಿ ದೊಡ್ಡ ಬಜೆಟ್ ಗಾತ್ರಗಳ ಮುಖಾಂತರ ಆರ್ಥಿಕ ಸದೃಢತೆಯನ್ನು ತಂದಿದ್ದಾರೆ. ಇದರಿಂದ ಬಡವರ, ದೀನದಲಿತರ ಪರ ಆಡಳಿತ ಕೊಡಲು ಸಾಧ್ಯವಾಯಿತು.
ಸುಮಾರು 1 ಲಕ್ಷ 27ಸಾವಿರ ಕೊಟಿ ಕೃಷಿ ಬಜೆಟ್, ಸುಮಾರು ಮೂರು ಲಕ್ಷ ಕೋಟಿಯಲ್ಲಿ 11 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಮುಖಾಂತರ 7.3 ಕೋಟಿ ರೈತರಿಗೆ ಕಡಿಮೆ ಬಡ್ಡಿಯ ಸಾಲ, 83 ಲಕ್ಷ ಮಹಿಳಾ ಸಂಘಗಳಿಗೆ ₹8 ಲಕ್ಷ ಕೋಟಿ ಸಾಲದ ಸಹಾಯ, ಒಂದು ಕೋಟಿ ಲಾಕ್ ಪತಿ ದೀದಿ ಯೋಜನೆಯ ಲಾಭ, 12 ಕೋಟಿಗಿಂತ ಹೆಚ್ಚು ಶೌಚಾಲಯಗಳು ಶೇ 75ರಷ್ಟು ಶಾಲೆಗಳಿಗೆ ಶೌಚಾಲಯ, 31 ಕೋಟಿ ಹೆಣ್ಣು ಮಕ್ಕಳಿಗೆ ಮುದ್ರಾ ಸಾಲ, ಪ್ರತಿ ದಿನ ಸುಮಾರು 30 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ, ಕಳೆದ ಹತ್ತು ವರ್ಷದಲ್ಲಿ 28 ಸಾವಿರ ಕೀ. ಮಿ. ರಾಷ್ಟ್ರೀಯ ಹೆದ್ದಾರಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ.
3 ಲಕ್ಷ 75 ಸಾವಿರ ಹೊಸ ಹಳ್ಳಿಗಳಿಗೆ ರಸ್ತೆ, ಅದೇ ರೀತಿ 500ಕ್ಕೂ ಹೆಚ್ಚು ಒಂದೇ ಭಾರತ ರೈಲು, ಸಾವಿರಾರು ಹೊಸ ರೈಲು ಸಂಪರ್ಕ ಮತ್ತು 70ಕ್ಕಿಂತ ಹೆಚ್ಚು ಹೊಸ ವಿಮಾನ ನಿಲ್ದಾಣ ಹೀಗೆ ಎಲ್ಲ ರಂಗದಲ್ಲಿ ಅಭಿವೃದ್ಧಿ ಮಾಡಿರುವುದು ಸಾಕ್ಷಿ ಇದೆ. ಅದೇ ರೀತಿ ಡಿಜಿಟಲ್‌ನಲ್ಲಿ ಭಾರತ ನಂಬರ್ ಒನ್ ಸ್ಥಾನದಲ್ಲಿದೆ. ಮೊಬೈಲ್ ಉತ್ಪಾದನೆ ಸ್ಟೀಲ್ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೆ ದಾಖಲೆಯ 6 ಲಕ್ಷ ಕೋಟಿ ರಕ್ಷಣಾ ಬಜೆಟ್ ಒಂದು ಕೋಟಿಗಿಂತ ಹೆಚ್ಚು ಆತ್ಮನಿರ್ಭರದಲ್ಲಿ ರಕ್ಷಣಾ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗಿದೆ. ಇದರಿಂದ ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆ ಸುವ್ಯವಸ್ಥೆಯಲ್ಲಿದೆ. ಭಯೋತ್ಪಾದನೆ ಹತೋಟಿಗೆ ತಂದಿರುವುದು, ನಕ್ಸಲ್ ಸಮಸ್ಯೆ ಬಹುತೇಕ ಬಗೆಹರಿಸಿರುವುದು. ಎಲ್ಲ ರಾಜ್ಯಗಳಿಗೆ ಆರ್ಥಿಕ ವಲಯದಲ್ಲಿ ಶೇ 40ರಷ್ಟು ಅವರ ಪಾಲು ಕೊಟ್ಡಿರುವುದು ಅತ್ಯಂತ ಗಮನಾರ್ಹ. ಹೀಗೆ ಪ್ರಮುಖ ನಿರ್ಣಯಗಳ ಮುಖಾಂತರ ಮೋದಿಯವರು ಭಾರತವನ್ನು ಮುನ್ನಡೆಸಿರುವುದಕ್ಕೆ ಸಾಕ್ಷಿ.
ಸವಾಲುಗಳು ಬಂದಾಗ ಒಬ್ಬ ವ್ಯಕ್ತಿ ಅವನು ಪ್ರಕಟ ಮಾಡಿದ ತತ್ವ ಮತ್ತು ನಿಲುವು ಪ್ರಕಟವಾಗುತ್ತದೆ. ನರೇಂದ್ರ ಮೋದಿಯವರು ದೇಶ ಮೊದಲು ಎಂದು ಪ್ರತಿಪಾದಿಸಿದ್ದರು. ಅವರಿಗೆ ಬಂದಿದ್ದ ಹಲವಾರು ಸವಾಲುಗಳನ್ನು ಗಟ್ಟಿಯಾಗಿ ತಮ್ಮ ನಿಲುವು ಬದಲಾವಣೆ ಮಾಡದೇ ನುಡಿದಂತೆ ನಡೆದಿರುವ ಒಬ್ಬ ಪ್ರಧಾನ ಮಂತ್ರಿ. ಪಾಕಿಸ್ತಾನದಿಂದ ಬಂದಿದ್ದ ಭಯೊತ್ಪಾದಕರು ಉರಿ ಮತ್ತು ಪಹಲ್ಗಾಮ್ ಸೈನಿಕರ ಮೇಲೆ ದಾಳಿ ಮಾಡಿದಾಗ ಪಾಕಿಸ್ತಾನದಲ್ಲಿದ್ದ ಅವರ ನೆಲೆಗಳ ಮೇಲೆ ಭಾರತ ಸೇನೆ ದಾಳಿ ಮಾಡಿ ಶಕ್ತಿ ಪ್ರದರ್ಶನ ಮಾಡಿರುವ ನಾಯಕತ್ವ ಮೋದಿಯದ್ದು. ಮೊನ್ನೆ ನಡೆದ ಪಹಲ್ಗಾಮ್ ದಾಳಿ ನಂತರ ಭಯೋತ್ಪಾದಕ ತಾಣ ಅಷ್ಟೆ ಅಲ್ಲ ಪಾಕಿಸ್ತಾನದ ವಾಯುನೆಲೆಗಳನ್ನು ಸಂಪೂರ್ಣ ಧ್ವಂಸ ಮಾಡಿ, ಸಂಪೂರ್ಣ ಸ್ವಾತಂತ್ರ ಮತ್ತು ಸಹಾಯವನ್ನು ರಕ್ಷಣಾ ಪಡೆಗೆ ನೀಡಿ ನರೇಂದ್ರ ಮೋದಿಯವರು ತಮ್ಮ ದೇಶ ಪ್ರೇಮ ಮೆರೆದಿದ್ದಾರೆ. ಅವರ ಆತ್ಮನಿರ್ಭರ ಕಲ್ಪನೆ, ಮತ್ತು ವಿಕಸಿತ ಭಾರತದ ಕನಸು ಪ್ರತಿ ದಿನ ಎಲ್ಲ ಯೋಜನೆಗಳಲ್ಲಿ ಕಾರ್ಯ ರೂಪಕ್ಕೆ ತರುತ್ತಿರುವುದಕ್ಕೆ ಸಾಕ್ಷಿ. ಉತ್ತರದ ರಾಜ್ಯಗಳು, ದಕ್ಷಿಣ ರಾಜ್ಯಗಳು, ಉತ್ತರ ಭಾರತದ ಪರ್ವತ ಪ್ರದೇಶಗಳ ಸಂಪರ್ಕ, ಬುಡಕಟ್ಟು ಅಭಿವೃದ್ಧಿ ಹೀಗೆ ಎಲ್ಲ ಪ್ರದೇಶದ ಅಭಿವೃದ್ಧಿ ಮುಟ್ಟುವ ರೀತಿಯಲ್ಲಿ ಮಾಡಿ ಸಮಗ್ರ ಭಾರತದ ಕಲ್ಪನೆಗೆ ಬಹಳಷ್ಟು ಶಕ್ತಿ ತುಂಬಿದ್ದಾರೆ.
ವಿಶ್ವದ ಬದಲಾಗುತ್ತಿರುವ ರಾಜಕೀಯ ವ್ಯವಸ್ಥೆಯಲ್ಲಿ ಭಾರತ ತನ್ನ ಸ್ವಾವಲಂಬಿ ಹಾಗೂ ಸ್ವಾಭಿಮಾನದ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ. ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಶೇ 50ರಷ್ಟು ತೆರಿಗೆ ಹಾಕಿದಾಗ ಅವರಿಟ್ಟ ಷರತ್ತುಗಳಿಗೆ ಒಪ್ಪಿಕೊಳ್ಳದೇ ಭಾರತದ ಉದ್ಯೋಗ, ವ್ಯಾಪಾರ ರಕ್ಷಣೆ ಮಾಡಿ ಇತರ ದೇಶಗಳೊಂದಿಗೆ ಸಂಬಂಧ ವೃದ್ದಿ ಮಾಡಿ, ತಮ್ಮ ದೇಶವನ್ನು ಸಂಪೂರ್ಣ ರಕ್ಷಿಸಬಹುದು ಮತ್ತು ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಆರ್ಥಿಕವಾಗಿ ನಿಲ್ಲಿಸಬಹುದು ಎಂದು ಮೋದಿಯವರು ಗಟ್ಟಿ ನಾಯಕತ್ವ ಇದ್ದರೆ ಏನು ಮಾಡಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಯಾವುದೇ ರೀತಿಯ ಪ್ರಭಾವ ಹಿನ್ನೆಲೆ ಇಲ್ಲದ ವ್ಯಕ್ತಿ ಮೂರು ಬಾರಿ ರಾಷ್ಟ್ರದ ಚುನಾವಣೆ ಗೆದ್ದು ಪ್ರಧಾನಿಯಾಗಿ ವಿಶ್ವನಾಯಕರಾಗಿ ಬೆಳೆದಾಗ ಸಹಜವಾಗಿ ಅವರ ಬಗ್ಗೆ ಅಸೂಯೆ, ಅಪಪ್ರಚಾರ ಇರುತ್ತದೆ. ಅದರಲ್ಲಿಯೂ ಪ್ರಮುಖ ವಿರೋಧ ಪಕ್ಷ ನಿರಂತರ ಚುನಾವಣೆಯಲ್ಲಿ ಸೋತು ಹತಾಸೆಗೊಂಡು ವೈಯಕ್ತಿಕ ಕೀಳುಮಟ್ಟದ ಟೀಕೆ ಮಾಡಿ, ಜನರು ಆಯ್ಕೆ ಮಾಡಿರುವ ಪ್ರಜಾಪ್ರಭುತ್ವದ ರೀತಿಯಲ್ಲಿ ಚುನಾವಣೆ ಗೆದ್ದಿರುವ ಮೋದಿಯವರ ಗೆಲುವಿನ ವಿಶ್ವಾಸಾರ್ಹತೆಯನ್ನು ಕಡಿಮೆಗೊಳಿಸಲು ಸಂವಿಧಾನದಿಂದ ನಿರ್ಮಿತವಾಗಿರುವ ವ್ಯವಸ್ಥೆಯ ಬಗ್ಗೆ ಸಂಶಯ ಬರುವ ರೀತಿಯಲ್ಲಿ ದೇಶದಲ್ಲಿ ಅರಾಜಕತೆ ಮೂಡಿಸುತ್ತಿರುವ ಪ್ರಯತ್ನವನ್ನು ಮೋದಿಯವರು ತಮ್ಮ ಪ್ರಾಮಾಣಿಕ, ದಕ್ಷ ಆಡಳಿತ ಹಾಗೂ ಸಚಾರಿತ್ರ್ಯ, ಸತ್ಯ ದೇಶಭಕ್ತಿಯ ವ್ಯಕ್ತಿತ್ವದಿಂದ ಅತ್ಯಂತ ಪ್ರಭಲವಾಗಿ ಎದುರಿಸಿ ಮುನ್ನುಗ್ಗುತ್ತಿದ್ದಾರೆ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬ ಭಾರತಿಯ ಮೋದಿಯವರ ದೂರದೃಷ್ಟಿ, ಅನುಷ್ಠಾನದ ವೇಗ, ಸಾಧಿಸುವ ಛಲ ಇರುವ ಯಶಸ್ವಿ ನಾಯಕತ್ವಕ್ಕೆ ಅವರಿಗೆ ಬೆಂಬಲ ಕೊಟ್ಟು ಅವರ ಜೊತೆ ನಿಲ್ಲುವುದು ಪ್ರತಿಯೊಬ್ಬ ಭಾರತಿಯರ ಕರ್ತವ್ಯ ಎಂದು ಬಾವಿಸುತ್ತೇನೆ. ಮೋದಿಯವರ ಏಕ ಭಾರತ ಶ್ರೇಷ್ಠ ಭಾರತ ರಥ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.