ADVERTISEMENT

ವಿಶ್ಲೇಷಣೆ: ‘ಕ್ಯಾಂಟಬರಿ’ಯ ಹೊಸ ಕಥೆ–ವ್ಯಥೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 22:30 IST
Last Updated 19 ಸೆಪ್ಟೆಂಬರ್ 2025, 22:30 IST
   
ಇಂಗ್ಲೆಂಡ್‌ನ ‘ಕ್ಯಾಂಟಬರಿ ಕ್ರೈಸ್ಟ್‌ ವಿಶ್ವವಿದ್ಯಾಲಯ’ ಇಂಗ್ಲಿಷ್‌ ಸಾಹಿತ್ಯದ ಪದವಿ ತರಗತಿಗಳನ್ನು ನಿಲ್ಲಿಸಿದೆ. ಇಂಗ್ಲಿಷ್‌ ಸಾಹಿತ್ಯದ ಅಧ್ಯಯನಕ್ಕೆ ತವರು ನೆಲದ ವಿಶ್ವವಿದ್ಯಾಲಯದಲ್ಲಿಯೇ ಆಸ್ಪದ ಇಲ್ಲದಾಗಿರುವುದು, ವರ್ತಮಾನದಲ್ಲಿ ಸಾಹಿತ್ಯದ ಅಧ್ಯಯನಕ್ಕೆ ಇರುವ ಸ್ಥಿತಿಗತಿಯ ಸಂಕೇತದಂತಿದೆ. ಇಂಗ್ಲಿಷ್ ಸಾಹಿತ್ಯದ ಸ್ಥಿತಿಯೇ ಹೀಗಿರುವಾಗ, ಕನ್ನಡ ಸಾಹಿತ್ಯದ ಗತಿಯೇನು?

ಇಂಗ್ಲೆಂಡ್‌ನ ಕೆಂಟ್‌ ಕೌಂಟಿಯ ಕ್ಯಾಂಟಬರಿಯಲ್ಲಿ ಇರುವ ‘ಕ್ಯಾಂಟಬರಿ ಕ್ರೈಸ್ಟ್‌ ವಿಶ್ವವಿದ್ಯಾಲಯ’ ಎರಡು ವರ್ಷಗಳ ಹಿಂದೆ, 2025ರಿಂದ ಇಂಗ್ಲಿಷ್ ಸಾಹಿತ್ಯದ ಪದವಿ ತರಗತಿಗಳನ್ನು ಮುಚ್ಚುವುದಾಗಿ ಪ್ರಕಟಿಸಿತ್ತು. 2024ರ ನವೆಂಬರ್‌–ಡಿಸೆಂಬರ್‌ನಲ್ಲಿ ಲಂಡನ್‌ ವಿಶ್ವವಿದ್ಯಾಲಯದ ‘ಇನ್‌ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌ ಸ್ಟಡೀಸ್‌’ನ ವಿದ್ವಾಂಸರೂ ಸೇರಿದಂತೆ ಹಲವಾರು ವಿದ್ವಾಂಸರು, ಇಂಗ್ಲಿಷ್ ಸಾಹಿತ್ಯದ ಅಧ್ಯಯನ ತರಗತಿಗಳನ್ನು ಮುಚ್ಚದಂತೆ ಒತ್ತಾಯಿಸಿದ್ದರು.

ಆಂಗ್ಲ ಸಾಹಿತ್ಯದಲ್ಲಿ ಕ್ಯಾಂಟಬರಿ ಊರಿಗಿರುವ ಪಾರಂಪರಿಕ ಮಹತ್ವ ಗಮನಿಸಿ, ಅಲ್ಲಿ ಪದವಿ ತರಗತಿಗಳನ್ನು ನಿಲ್ಲಿಸುವುದು ಸರಿಯಲ್ಲ ಎನ್ನುವ ವಿದ್ವಾಂಸರ ಆಗ್ರಹ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಆ ಒತ್ತಾಯ–ಚರ್ಚೆ, ‘ಬಿಬಿಸಿ’, ‘ದಿ ಗಾರ್ಡಿಯನ್‌’, ‘ದಿ ಟೆಲಿಗ್ರಾಫ್‌’ ಸೇರಿದಂತೆ ಜಾಗತಿಕ ಮಾಧ್ಯಮಗಳಲ್ಲೂ ಪ್ರತಿಫಲಿಸಿತು. ಆದಾಗ್ಯೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ, ಸಾಹಿತ್ಯದ ಅಧ್ಯಯನಕ್ಕೆ ಕಡಿಮೆ ಆಗುತ್ತಿರುವ ಬೆಂಬಲ, ಮುಂತಾದ ಕಾರಣಗಳನ್ನು ನೀಡಿ 2025ರ ಸೆಪ್ಟೆಂಬರ್‌ನಿಂದ ಇಂಗ್ಲಿಷ್ ಸಾಹಿತ್ಯದ ಸ್ನಾತಕ ಪದವಿಗಳ ಪ್ರವೇಶವನ್ನು ಕ್ಯಾಂಟಬರಿ ಕ್ರೈಸ್ಟ್‌ ವಿಶ್ವವಿದ್ಯಾಲಯ ನಿಲ್ಲಿಸಿದೆ. ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಪದವಿ ಮುಂದುವರಿಯಲಿವೆ. ಈ ವಿದ್ಯಮಾನ, ಕ್ಯಾಂಟಬರಿ ಸ್ಥಳಕ್ಕೆ ಆಂಗ್ಲ ಸಾಹಿತ್ಯದಲ್ಲಿ ಇರುವ ಮಹತ್ವವನ್ನು ಗಮನಿಸಿದರೆ ದೊಡ್ಡದೊಂದು ಆಘಾತವೇ ಸರಿ.

‘ಕ್ಯಾಂಟಬರಿ ಟೇಲ್ಸ್‌’ ಇಂಗ್ಲಿಷ್ ಸಾಹಿತ್ಯದ ಪಿತಾಮಹ ಜೆಫ್ರಿ ಚಾಸರ್‌ ಅವರ 24 ಕಥೆಗಳ ಸಂಕಲನ, ಆಂಗ್ಲ ಸಾಹಿತ್ಯದ ಅಧ್ಯಯನಕ್ಕೊಂದು ಪ್ರವೇಶವೂ ಹೌದು. ಯುನೆಸ್ಕೊ ಹೆರಿಟೇಜ್‌ ನಗರವಾದ ಕ್ಯಾಂಟಬರಿಗಾಗಿಯೇ ಸಂಕಲನದಲ್ಲಿನ ಕಥೆಗಳು ರೂಪುಗೊಂಡಿವೆ. ಲಂಡನ್‌ನಿಂದ ಕ್ಯಾಂಟಬರಿಯ ಕ್ಯಾಥೆಡ್ರೆಲ್‌ನ ಸೇಂಟ್‌ ಥಾಮಸ್‌ ಬೆಕೆಟ್‌ ದೇವಾಲಯದ ಸಂದರ್ಶನಕ್ಕೆಂದು ಹೋಗುವ ಮಾರ್ಗದಲ್ಲಿ ಯಾತ್ರಾರ್ಥಿಗಳು ಹೇಳುವ ಕಥೆಗಳ ಸ್ಪರ್ಧೆಯಲ್ಲಿ ರೂಪುಗೊಂಡ ಕಾವ್ಯಾತ್ಮಕವಾದ ಕಥನಗಳಿವು. ಸಾಹಿತ್ಯದಿಂದ ಸಾಧ್ಯ ಆಗುವ ದಣಿವಿನ ನಿವಾರಣೆ ಹಾಗೂ ಉಲ್ಲಾಸದ ಆನಂದವನ್ನು ಕೊಡುವ ಚಾಸರ್‌ನ ಈ ಅತ್ಯದ್ಭುತ ಕೃತಿ ಇಂದಿಗೂ ಆಂಗ್ಲ ಸಾಹಿತ್ಯದ ಪ್ರವೇಶಿಕೆಯೇ! 

ADVERTISEMENT

ವಿಶ್ವಪ್ರಸಿದ್ಧ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್‌ಗೆ ಪ್ರೇರಣೆಯನ್ನು ಕೊಟ್ಟ ನಾಟಕಕಾರ, ಕವಿ ಕ್ರಿಸ್ಟೊಫರ್‌ ಮಾರ್ಲೊ ಜನ್ಮಸ್ಥಳ ಎನ್ನುವುದು ಕ್ಯಾಟಂಬರಿಯ ಮತ್ತೊಂದು ಅಗ್ಗಳಿಕೆ. ಕ್ರಿಸ್ಟೊಫರ್‌ ಮಾರ್ಲೊನ ನಂತರದ ಮತ್ತೋರ್ವ ನಾಟಕಕಾರ, ಕವಿ ಅಫ್ರಾ ಬೆನ್‌ ಹುಟ್ಟೂರು ಕೂಡ. ಈ ಸಾಹಿತ್ಯಿಕ, ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ಕ್ಯಾಂಟಬರಿಯನ್ನು 1988ರಲ್ಲಿ ಪಾರಂಪರಿಕ ನಗರವೆಂದು ಯುನೆಸ್ಕೊ ಘೋಷಿಸಿದೆ. ಇಂಥ ಕ್ಯಾಂಟಬರಿಯಲ್ಲಿ  ಆಂಗ್ಲ ಸಾಹಿತ್ಯದ ಪದವಿಯ ಓದು ನಿಲ್ಲುವುದು, ಈಗಾಗಲೇ ಹಿಮ್ಮುಖವಾಗಿ ನಡೆದಿರುವ ಮೂಲ ವಿಜ್ಞಾನ, ಮಾನವಿಕ ಹಾಗೂ ಕಲೆಯ ಅಧ್ಯಯನಗಳ ಪ್ರಸ್ತುತ ಪರಿಸ್ಥಿತಿಯಲ್ಲಿ ಒಂದು ಎಚ್ಚರಿಕೆಯ ಗಂಟೆಯೇ ಸರಿ.

ಇತ್ತೀಚೆಗೆ ಹಲವಾರು ವಿಶ್ವವಿದ್ಯಾಲಯಗಳು ಬೋಧನಾಶುಲ್ಕ, ಆಡಳಿತಶುಲ್ಕ ಮುಂತಾದವುಗಳ ಸಂಗ್ರಹದಿಂದ ವಹಿವಾಟು ನಡೆಸುವ ಸ್ಥಾವರಗಳಾಗಿವೆ. ವಿದ್ಯಾರ್ಥಿಯು ವ್ಯಾಸಂಗಕ್ಕೆ ಖರ್ಚು ಮಾಡಿದ ಹಣದ ಮರುಗಳಿಕೆಯ ಲೆಕ್ಕಾಚಾರ ಪ್ರಸಕ್ತ ಸಂದರ್ಭದಲ್ಲಿ ಬಹುಚರ್ಚಿತ ಸಂಗತಿಯಾಗಿದೆ. ಇದನ್ನೇ ಒಂದು ಬಗೆಯಲ್ಲಿ ಜಾಹೀರಾತು ಮಾದರಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಮಾಹಿತಿಯಾಗಿಸಿ ಹಂಚುವುದು ಕೂಡ ಅನೇಕ ಕೋರ್ಸ್‌ಗಳ ಹಿನ್ನಡೆಗೆ ಕಾರಣವಾಗಿದೆ. ಹಿಂದೊಮ್ಮೆ ಶೈಕ್ಷಣಿಕ ತಾಣಗಳೆಂದರೆ ಕಲಿಯುವ ಆಸಕ್ತಿಗೆ ಬೆಂಬಲವಾಗುವ ಸ್ಥಳಗಳೆಂಬ ಹೆಗ್ಗಳಿಕೆ ಇತ್ತು. ವಿಶ್ವವಿದ್ಯಾಲಯದ ಪ್ರಮುಖ ಗುರಿಯು, ಕಲಿಕೆಯ ಅಗತ್ಯದ ಎಲ್ಲಾ ವಿಭಾಗಗಳನ್ನೂ ತೆರೆಯುವುದಾಗಿತ್ತು. ಇತ್ತೀಚೆಗೆ, ಲಾಭ–ನಷ್ಟದ ಲೆಕ್ಕಾಚಾರ ಮುಂದೊಡ್ಡಿ, ಕೆಲವು ವಿಭಾಗಗಳನ್ನು ವ್ಯವಸ್ಥಿತವಾಗಿ ಮುಚ್ಚುವುದು ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯವಾಗಿದೆ.

ಇಂಗ್ಲೆಂಡಿನಲ್ಲೇ ಇಂಗ್ಲಿಷ್ ಸಾಹಿತ್ಯದ ಅಧ್ಯಯನ ಕಷ್ಟಕರ ಎನ್ನುವುದಾದರೆ, ಇತರ ಭಾಷೆಗಳ ಸಾಹಿತ್ಯದ ಗತಿ ಏನು? ಕನ್ನಡದ ಸಂದರ್ಭದಲ್ಲೂ ಒಂದು ಭಾಷೆಯಾಗಿ ಅದರ ಅಧ್ಯಯನವು ಉಳಿದರೂ, ಸಾಹಿತ್ಯದ ಅಧ್ಯಯನವು ಮೊದಲಿನಂತೆ ಇಲ್ಲದ ಪರಿಸ್ಥಿತಿ ಖಂಡಿತಾ ಬಂದೀತು. ಇನ್ನು ಮುಂದಂತೂ ಕಲೆ, ಮಾನವಿಕ ಅಧ್ಯಯನಗಳಿಗೆ ಉಂಟಾಗಬಹುದಾದ ಹಿನ್ನಡೆಗಳನ್ನು ನಿಭಾಯಿಸಲು ಅನುಸರಿಸಬೇಕಾದ ಅಥವಾ ಬದಲಾವಣೆಯನ್ನು ಸಹಿಸಿಕೊಂಡೂ ಮಾಡಬಹುದಾದ ಚಟುವಟಿಕೆಗಳಿಗೆ ತೊಡಗುವುದು ಅನಿವಾರ್ಯವಾಗಲಿದೆ.

‘ಕೃತಕ ಬುದ್ಧಿಮತ್ತೆ’ (ಎ.ಐ.) ಪ್ರವೇಶದಿಂದ ಸಾಹಿತ್ಯ ಕ್ಷೇತ್ರದಲ್ಲಿ ಆಗಬಹುದಾದ ಪಲ್ಲಟಗಳ ಕುರಿತು ಬರಹಗಾರರ ಆತಂಕದ ಮಾತುಗಳನ್ನು ಈಗಾಗಲೇ ಕೇಳುತ್ತಿದ್ದೇವೆ. ಮಾನವರೇ ನಿರ್ವಹಿಸುವ ಅನೇಕ ಕೆಲಸಗಳು ‘ಎ.ಐ.’ನಿಂದಾಗಿ ಬದಲಾಗಲಿವೆ ಅಥವಾ ಮನುಷ್ಯರ ಕೈತಪ್ಪುವ ಸುದ್ದಿಗಳೂ ಚಾಲ್ತಿಯಲ್ಲಿವೆ. ‘ದ ಗೋಲ್ಡ್‌ಮನ್‌ ಸಾಚ್‌’ ಕಂಪನಿಯ ವರದಿಯಂತೆ, ಜಗತ್ತಿನ ಶೇ 18ರಷ್ಟು, ಸುಮಾರು 300 ದಶಲಕ್ಷ  ಪೂರ್ಣ ಪ್ರಮಾಣದ ಕೆಲಸಗಳು ‘ಎ.ಐ.’ನಿಂದಾಗಿ ವ್ಯತ್ಯಯಗೊಳ್ಳಲಿವೆ. ಆದರೆ, ಮಸಾಚುಸೆಟ್ಸ್‌ ತಾಂತ್ರಿಕ ಸಂಸ್ಥೆಯ ಅಧ್ಯಯನದಲ್ಲಿ, ‘ಅದೊಂದು ಸುಲಭ ವಲ್ಲದ ಹೆಚ್ಚು ಖರ್ಚಿನ ಬಾಬತ್ತು’ ಎಂದು ಸಂಸ್ಥೆಯ ‘ಬಿಯಾಂಡ್‌ ಎ.ಐ. ಎಕ್ಸ್‌ಪೋಷರ್‌’ ಹೆಸರಿನ ಸಂಶೋಧಕರ ಗುಂಪೊಂದು ಅಭಿಪ್ರಾಯಪಟ್ಟಿದೆ.

ಶೈಕ್ಷಣಿಕ ಸಮಾಜಕ್ಕೆ ಬಹುದೊಡ್ಡ ಚಾರಿತ್ರಿಕ ಪಾಠವಾಗಿ ಮಹತ್ವದ್ದಾಗಿರುವ ಕ್ಯಾಂಟಬರಿ ವಿಶ್ವವಿದ್ಯಾಲಯದ ಪ್ರಸಕ್ತ ಬೆಳವಣಿಗೆಯನ್ನು ಗಮನಿಸಿದರೆ, ನಾವೀಗ ಬದಲಾಗಬೇಕಾದುದು ಅನಿವಾರ್ಯ ಹಾಗೂ ಬದಲಾವಣೆಗೆ ಬೇಕಾದ ತಯಾರಿಯನ್ನು ಮಾಡದೇ ವಿಧಿಯಿಲ್ಲ. ಇದು ಬರೀ ಸಾಹಿತ್ಯಕ್ಕೆ ಸೀಮಿತವಾದ ಸಂಗತಿಯಲ್ಲ. ಏಕೆಂದರೆ, ಈಗಾಗಲೇ ಮಾರುಕಟ್ಟೆ ಆಧಾರಿತ ಪದವಿಗಳನ್ನು ಜಾಹೀರಾತು ಮಾಡುವಲ್ಲಿ ಬಹುತೇಕ ವಿಶ್ವವಿದ್ಯಾಲಯಗಳು ತೊಡಗಿವೆ. ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಂದ ಈ ಬೆಳವಣಿಗೆಗಳು ತೀವ್ರ ಗತಿಯಲ್ಲಿ ಸಾಗುತ್ತಿವೆ. ಹಾಗಾಗಿ, ಬಹುಪಾಲು ಕೃಷಿಯ ಕೆಲಸಗಳನ್ನು ಹೊರತುಪಡಿಸಿ ನ್ಯಾಯಾಂಗ, ವೈದ್ಯಕೀಯ, ಶಿಕ್ಷಣದಂತಹ ವೃತ್ತಿಗಳನ್ನೂ ‘ಎ.ಐ.’ ಪ್ರಭಾವಿಸಲಿದೆ ಎಂಬುದಂತೂ ಸತ್ಯ.  

ಸಾಹಿತ್ಯದ ಅಧ್ಯಯನವನ್ನಷ್ಟೇ ಯೋಚಿಸುವು ದಾದರೆ, ಸಾಹಿತ್ಯವು ಹೊಸ ಮಾರ್ಗಗಳನ್ನು ಹಿಡಿಯದೇ ಅನ್ಯದಾರಿಯಿಲ್ಲ. ವಿಜ್ಞಾನ–ಗಣಿತ ದಂತಹ ಮಾನವ ನಿರ್ಮಿತಿಯ ಅಭಿವ್ಯಕ್ತಿಯನ್ನು ಬರೀ ಮಾಹಿತಿಯೆಂಬಂತೆ ಅರ್ಥೈಸುವ ಸಾಹಿತ್ಯದ ತಿಳಿವಳಿಕೆ ಬದಲಾಗಲೇಬೇಕಿದೆ. ಕನ್ನಡ ಭಾಷೆಯನ್ನು ಕಂಪ್ಯೂಟರ್‌ ಕಲಿಕೆಗೆ ಅಳವಡಿಸುವ ಸಂಶೋಧನೆಯ ಅಧ್ಯಯನದಲ್ಲಿ ಆಸಕ್ತನಾಗಿರುವ ವಿದ್ಯಾರ್ಥಿ ಹೇಳಿದ್ದು ಹೀಗಿದೆ: ‘ಕನ್ನಡ ಭಾಷೆಯ ಕಂಪ್ಯೂಟರ್‌ ಕಲಿಕೆಯಲ್ಲಿ ಅಳವಡಿಸಲು ಪಂಪ, ರನ್ನ, ಲಕ್ಷ್ಮೀಶ, ಹರಿಹರ, ರಾಘವಾಂಕ, ವಚನಕಾರರು, ಕೀರ್ತನಕಾರರ ಸಾಹಿತ್ಯ ಮಾರ್ಗವೇ ಸಾಕು. ಪ್ರಸ್ತುತ ರೂಪುಗೊಳ್ಳುತ್ತಿರುವ ಸಾಹಿತ್ಯದ ಉಪಯೋಗ ಏನೂ ಇಲ್ಲ’. ಈ ಮಾತು, ಕನ್ನಡದಲ್ಲಿ ಬರೆಯುತ್ತಿರುವ ನನಗೂ ಒಂದು ಎಚ್ಚರಿಕೆಯಂತೆ ಭಾಸವಾಗುತ್ತಿದೆ.

ಬದಲಾಗುತ್ತಿರುವ ಡಿಜಿಟಲ್‌ ಸಮಾಜದಲ್ಲಿ ಸಾಹಿತ್ಯದ ಸ್ಥಾನ, ಇತರ ಮಾನವಿಕ ಅವಶ್ಯಕತೆಗಳಲ್ಲಿ ಒಂದೆನ್ನುವ ರೂಪದಲ್ಲಿ ಇರಬೇಕಾಗಿದೆ. ಸಾಹಿತ್ಯದ ಅಧ್ಯಯನವು ವಿಶ್ವವಿದ್ಯಾಲಯಗಳಿಂದ ಹೊರ ಬಂದು ಹೊಸ ರೂಪವನ್ನೂ ತಳೆದು, ಸಾರ್ವಜನಿಕ ಸಾಂಗತ್ಯವನ್ನು ಪಡೆಯಬೇಕಿದೆ. ಇದಕ್ಕೆ ಅನುವಾಗುವಂತಹ ಕಲಿಕೆಯನ್ನು ಶೈಕ್ಷಣಿಕ ಸಂಸ್ಥೆಗಳು ನಡೆಸುವುದು ಅನಿವಾರ್ಯ. ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ, ಪಾರಂಪರಿಕ ಸಾಹಿತ್ಯದ ಬೆಳವಣಿಗೆಯು ಹಿಮ್ಮುಖವಾಗಿ ಚಲಿಸುತ್ತಿರುವಂತೆ ಕಾಣಿಸುವುದು ಸಹಜ. ಬೆಳೆಯುತ್ತಿರುವ ತಾಂತ್ರಿಕ ಅನುಶೋಧಗಳನ್ನು ದೂರುತ್ತಾ, ವಿಜ್ಞಾನವನ್ನು ಖಳನಂತೆ ಗುರುತಿಸುತ್ತಲೇ ಅದರ ಬಳಕೆಯನ್ನು ಒಪ್ಪಿಕೊಂಡಿದ್ದೇವೆ. ತಂತ್ರಜ್ಞಾನದ ಬೆಳವಣಿಗೆಗಳು ಮನುಷ್ಯನ ಮನಸ್ಸಿನ ಆಲೋಚನೆಯ ನಿರಂತರತೆಯ ಆವಿಷ್ಕಾರ. ಆ ಆವಿಷ್ಕಾರ, ಮಾರುಕಟ್ಟೆಯ ಅಸ್ತ್ರಗಳಾ ಗುವುದು, ಲಾಭದ ಹುನ್ನಾರದ ಮನುಷ್ಯನ ಹಿತಾಸಕ್ತಿ ಆಗಿರುವುದೂ ದುರದೃಷ್ಟಕರ.

ಸದ್ಯದ ಸಂದಿಗ್ಧ ಪರಿಸ್ಥಿತಿಯಲ್ಲಿ, ಸಾಹಿತ್ಯದ ಕನಿಷ್ಠ ಹಿತಾಸಕ್ತಿಯನ್ನು ಉಳಿಸುವುದು ಎಂದರೆ, ಬದಲಾವಣೆ ಅಪ್ಪಿಕೊಂಡೇ ಮುಂದುವರಿಯುವುದು. ಡಿಜಿಟಲ್‌ ಹ್ಯುಮಾನಿಟಿ, ಡಿಜಿಟಲ್‌ ಕಥೆ ಹೇಳುವುದು, ಪರಿಸರಾತ್ಮಕ ಆಲೋಚನೆಯ ಸಾಹಿತ್ಯ ಸೃಷ್ಟಿ, ವಿಜ್ಞಾನ ಹಾಗೂ ತಂತ್ರಜ್ಞಾನದ ಮಾನವಿಕ ಬೆಸುಗೆಯ ಸಾಹಿತ್ಯ ಇಂದಿನ ತುರ್ತು. ಕೇವಲ ಮಾಹಿತಿ ಹಂಚಿಕೆಯಂತಹ ಶಿಕ್ಷಣದ ಕಲಿಕೆಯು ಬೇಕಿಲ್ಲ. ಮಾಹಿತಿಗಾಗಿ ವಿದ್ವಾಂಸ/ಶಿಕ್ಷಕರನ್ನು ಅವಲಂಬಿಸದಿರುವ ದಿನಗಳು ಈಗಾಗಲೇ ಆರಂಭವಾಗಿವೆ. ಅಲೋಚನೆಗಳನ್ನು ಉತ್ಪನ್ನಗಳಾಗಿಸುವ ವಿಧಾನಗಳಿಗೆ ಎಂದಿಗೂ ಬೇಡಿಕೆ ಕಡಿಮೆಯಾಗುವುದಿಲ್ಲ ಎಂಬುದು ಹಲವಾರು ಅಧ್ಯಯನಕಾರರ ಅಭಿಪ್ರಾಯ. ಬದಲಾವಣೆಯ ಪ್ರಕ್ರಿಯೆಯಲ್ಲಿ ಸಾಹಿತ್ಯಿಕ ಅಧ್ಯಯನವು ಸುಲಭದ ಗುರಿಯಾಗಿ ಕಾಣಿಸಬಹುದು. ಆದರೆ, ಅದನ್ನು ಬದಲಾವಣೆಗಳ ಬೆಸುಗೆಯಿಂದ ಆಕರ್ಷಕವಾಗಿ ಎರಕಹೊಯ್ದರೆ ಸೂಕ್ತ ಮಾರ್ಗಗಳನ್ನು ಹುಡುಕಲು ಸಾಧ್ಯವಿದೆ. ಇಂತಹ ಸಾಧ್ಯತೆಗಳಿಗೆ ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವ ಸಂಸ್ಥೆಗಳಷ್ಟೇ ಆಗದೆ, ಕಲಿಕೆಯನ್ನು ಹೊರ ಸಮಾಜದ ಸೃಷ್ಟಿಗಳಿಗೆ ಬೆಸೆಯುವುದು ಅಗತ್ಯವಾಗಿದೆ. ವಿಶ್ವವಿದ್ಯಾಲಯಗಳು ತಿಳಿವನ್ನು ಸೃಜಿಸುವ ಸಂಸ್ಥೆಗಳಾಗಲು ಹೆಚ್ಚು ಹೆಚ್ಚು ಶ್ರಮಿಸುವ ಅನಿವಾರ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.