ADVERTISEMENT

ವಿಶ್ಲೇಷಣೆ: ಅಂತರದ ಅಳಿವು ಪ್ರಗತಿಯ ಉಳಿವು

ಮಾನವ ಅಭಿವೃದ್ಧಿಯ ಸಾಧನೆಗಾಗಿ ಸಮಾನತೆ ನಮ್ಮ ಸಾಮೂಹಿಕ ಆಯ್ಕೆಯಾಗಬೇಕಿದೆ

ವೇಣುಗೋಪಾಲ್‌ ಟಿ.ಎಸ್‌.
Published 6 ಮೇ 2025, 0:58 IST
Last Updated 6 ಮೇ 2025, 0:58 IST
<div class="paragraphs"><p>ವಿಶ್ಲೇಷಣೆ: ಅಂತರದ ಅಳಿವು ಪ್ರಗತಿಯ ಉಳಿವು</p></div>

ವಿಶ್ಲೇಷಣೆ: ಅಂತರದ ಅಳಿವು ಪ್ರಗತಿಯ ಉಳಿವು

   

ಕೆಲವು ದೇಶಗಳಲ್ಲಿ ಅಭಿವೃದ್ಧಿ ಉತ್ತಮ ರೀತಿಯಲ್ಲಿ ಆಗಿದೆ. ಜನ ಹೆಚ್ಚು ಸುಖವಾಗಿದ್ದಾರೆ. ಕೆಲವು ದೇಶಗಳಲ್ಲಿ ಜನ ಹೆಚ್ಚು ಸಂಕಷ್ಟದಲ್ಲಿದ್ದಾರೆ. ಹಾಗೆಯೇ ದೇಶದೊಳಗೆ ಕೆಲವು ರಾಜ್ಯಗಳು ಅಭಿವೃದ್ಧಿಯಾಗಿವೆ. ಕೆಲವು ಅಷ್ಟೇ ಹಿಂದುಳಿದಿವೆ. ಯಾಕೆ ಹೀಗೆ ಅನ್ನುವುದರ ಬಗ್ಗೆ ಪರಿಣತರಲ್ಲಿ ಒಮ್ಮತವಿಲ್ಲ.

ಕೆಲವರು ಆಯಾ ಪ್ರದೇಶದ ಚರಿತ್ರೆ ಕಾರಣ ಎನ್ನುತ್ತಾರೆ. ಕೆಲವರು ಹವಾಮಾನ, ತಂತ್ರಜ್ಞಾನ, ಸಂಪನ್ಮೂಲದಂತಹ ಅಂಶಗಳು ಕಾರಣ ಎನ್ನುತ್ತಾರೆ. ಆದರೆ ಈ ಅಂಶಗಳು ದೇಶದ ಪ್ರಗತಿಗೆ ಪೂರಕ  ಆಗಬಹುದೇ ವಿನಾ ಅವುಗಳಿಂದಲೇ ಬೆಳವಣಿಗೆ ಸಾಧ್ಯವಿಲ್ಲ ಎನ್ನುತ್ತಾರೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಡೆರೆನ್ ಅಸಿಮೊಗ್ಲು. ಅವರ ದೃಷ್ಟಿಯಲ್ಲಿ ದೇಶದ ಪ್ರಗತಿಯನ್ನು ಆಯಾ ದೇಶದಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆಗಳು ನಿರ್ಧರಿಸುತ್ತವೆ.

ADVERTISEMENT

ಸಂಶೋಧಕಿ ಪ್ರೇರಣಾ ಸಿಂಗ್ ಅವರು ಭಾರತದ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾ, ಭಿನ್ನ ನೋಟವನ್ನು ನೀಡುತ್ತಾರೆ. ಅವರ ದೃಷ್ಟಿಯಲ್ಲಿ ರಾಜ್ಯ– ರಾಷ್ಟ್ರೀಯತೆಯ ಪ್ರಜ್ಞೆ ಅಂದರೆ ‘ನಾವೆಲ್ಲ ಒಂದೇ ರಾಜ್ಯಕ್ಕೆ ಸೇರಿದವರು. ಹಾಗಾಗಿ, ನಾವೆಲ್ಲ ಒಂದು’ ಅನ್ನುವ ಪ್ರಾಂತೀಯ ಏಕತೆಯ ಭಾವನೆ ರಾಜ್ಯದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ‘ನಮ್ಮತನ’ದ ಪ್ರಜ್ಞೆ ತೀವ್ರವಾಗಿರುವ ಕಡೆ ಅಭಿವೃದ್ಧಿಯೂ ತೀವ್ರವಾಗಿರುತ್ತದೆ.

ಕೆಲವು ಶತಮಾನಗಳ ಹಿಂದೆ ಕೇರಳ, ತಮಿಳುನಾಡು, ಬಿಹಾರ, ಉತ್ತರಪ್ರದೇಶ ಎಲ್ಲವೂ ಒಂದೇ ಸ್ಥಿತಿಯಲ್ಲಿದ್ದವು. ಆರ್ಥಿಕವಾಗಿ ದುರ್ಬಲವಾಗಿದ್ದವು. ಹಾಗೆ ನೋಡಿದರೆ ಉತ್ತರಪ್ರದೇಶ ಹೆಚ್ಚು ಉತ್ತಮ ಸ್ಥಿತಿಯಲ್ಲಿತ್ತು. ನಂತರದ ದಿನಗಳಲ್ಲಿ ಕೇರಳ ಹಾಗೂ ತಮಿಳುನಾಡಿನ ಜನರಲ್ಲಿ ಕ್ರಮೇಣ ಪ್ರಾದೇಶಿಕತೆಯ ಭಾವನೆ ಬೆಳೆಯುತ್ತಾ ಹೋಯಿತು. ಒಟ್ಟಾರೆ, ರಾಜ್ಯದ ಹಿತ ಅವರ ಮುಖ್ಯ ಕಾಳಜಿಯಾಗುತ್ತಾ ಹೋಯಿತು. ಅಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳು ಒಟ್ಟಾರೆ ರಾಜ್ಯದ ಹಿತಕ್ಕಾಗಿ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ.

ಕೆಲವು ನಿರ್ದಿಷ್ಟ ಸಮೂಹವನ್ನು ಸಂತೃಪ್ತಿಗೊಳಿಸುವುದಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ರಾಜಕೀಯವಾಗಿ ಲಾಭದಾಯಕ ಆಗುವುದಿಲ್ಲ. ಜನರ ಪ್ರಾಂತೀಯ ಪ್ರಜ್ಞೆಯಿಂದಾಗಿ ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಸುಧಾರಣೆ ಸಾಧ್ಯವಾಗುತ್ತದೆ. ಈ ರೀತಿಯ ಪ್ರಾಂತೀಯ ಏಕತೆ ಬೆಳೆಯದೇ ಇದ್ದ ರಾಜ್ಯಗಳಲ್ಲಿ ಪ್ರಗತಿ ಸಾಧ್ಯವಾಗಿಲ್ಲ. ಉದಾಹರಣೆಗೆ, ಉತ್ತರಪ್ರದೇಶದಲ್ಲಿ ಉಪರಾಷ್ಟ್ರೀಯತೆಗಿಂತ ಹೆಚ್ಚಾಗಿ ಹಿಂದೂ ರಾಷ್ಟ್ರೀಯವಾದ ತೀವ್ರತೆ ಪಡೆದುಕೊಂಡಿತು. ಒಟ್ಟಾರೆಯಾಗಿ ಪ್ರಾದೇಶಿಕ ಪ್ರಜ್ಞೆ ಹಾಗೂ ಅಭಿವೃದ್ಧಿಗೂ ನೇರವಾದ ಸಂಬಂಧ ಇದೆ ಅನ್ನುವುದು ಪ್ರೇರಣಾ ಅವರ ಅಧ್ಯಯನದ ಸಾರಾಂಶ.

ಸ್ವಾತಿ ನಾರಾಯಣ್ ಇದೇ ಪ್ರಶ್ನೆಯನ್ನು ಇನ್ನೊಂದು ಮಗ್ಗುಲಿನಿಂದ ನೋಡಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಭಾರತದ ಕೆಲವು ರಾಜ್ಯಗಳಲ್ಲಿ ಹಾಗೂ ಪಕ್ಕದ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶದಲ್ಲಿ ಕ್ಷೇತ್ರ ಸಮೀಕ್ಷೆ ನಡೆಸಿದ್ದಾರೆ. 1990ರ ಸಮಯದಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾಕ್ಕೆ ಹೋಲಿಸಿದರೆ ಭಾರತ ಬಹಳಷ್ಟು ಮುಂದಿತ್ತು. ಅವುಗಳಿಗಿಂತ ಆರ್ಥಿಕವಾಗಿ ಬಲಾಢ್ಯವಾಗಿತ್ತು. ಭಾರತದಲ್ಲಿ ಪ್ರಜಾಸತ್ತೆಯೂ ಬಲವಾಗಿತ್ತು. ಸಾಮಾಜಿಕ ಸುರಕ್ಷತೆಗಾಗಿ ಸರ್ಕಾರ ಹೆಚ್ಚು ಹಣವನ್ನು ಖರ್ಚು ಮಾಡುತ್ತಿತ್ತು. ಹಾಗಾಗಿ, ಅವುಗಳಿಗೆ ಮತ್ತು ಭಾರತಕ್ಕೆ ಹೋಲಿಕೆಯೇ ಇರಲಿಲ್ಲ. ಆದರೆ ಒಂದೆರಡು ದಶಕಗಳಲ್ಲೇ ಅವು ನಮ್ಮನ್ನು ಆರೋಗ್ಯ, ಪೌಷ್ಟಿಕತೆ, ನೈರ್ಮಲ್ಯ, ಲಿಂಗಸಮಾನತೆಯಂತಹ ಮಾನವ ಸಂಪನ್ಮೂಲದ ಹಲವು ಸೂಚಿಗಳಲ್ಲಿ ಹಿಂದೆ ಹಾಕಿಬಿಟ್ಟವು. ಅಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ನಮ್ಮಲ್ಲಿ ಇರುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡತೊಡಗಿದವು.

ಬಾಂಗ್ಲಾದೇಶಕ್ಕೆ ಬಯಲು ಶೌಚಾಲಯ ಪದ್ಧತಿಯನ್ನು ಹೆಚ್ಚುಕಡಿಮೆ ನಿರ್ಮೂಲ ಮಾಡುವುದಕ್ಕೆ ಸಾಧ್ಯವಾಯಿತು. ಪ್ರತಿ ಮನೆಯಲ್ಲೂ ಸ್ವಚ್ಛ ಶೌಚಾಲಯ ಬಂದಿತು. ಅಲ್ಲಿ ಮಹಿಳೆಯರ ಜೀವಿತಾವಧಿ ನಮಗಿಂತ ಹೆಚ್ಚಾಗಿದೆ. ಮಕ್ಕಳು ಹೆಚ್ಚು ಆರೋಗ್ಯದಿಂದ ಇದ್ದಾರೆ. ಹೆಚ್ಚು ಜನ ಶಿಕ್ಷಣ ಪಡೆದಿದ್ದಾರೆ. ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ. ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳ ಸಂಖ್ಯೆಯೂ ಅಲ್ಲಿ ಹೆಚ್ಚಿಗೆ ಇದೆ.

ಯಾಕೆ ಹೀಗೆ? ಸ್ವಾತಿಯವರ ಅಧ್ಯಯನದ ಪ್ರಕಾರ, ಆ ದೇಶಗಳಿಗಿಂತ ಭಾರತದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಲಿಂಗಾಧಾರಿತ ಅಸಮಾನತೆ ಹೆಚ್ಚು ತೀವ್ರವಾಗಿದೆ. ಭಾರತ ಆರ್ಥಿಕವಾಗಿ ತುಂಬಾ ಮುಂದಿದೆ. ಆದರೆ ಜನರಿಗೆ ಅವಶ್ಯ ಸೌಕರ್ಯವನ್ನು ಒದಗಿಸುವುದರಲ್ಲಿ ಅವರಿಗಿಂತ ಹಿಂದಿದೆ. ನಮ್ಮಲ್ಲಿರುವ ವಿಭಿನ್ನ ಮಜಲಿನ ಅಸಮಾನತೆಗಳೇ ನಮಗೆ ಅಡ್ಡಿಯಾಗಿವೆ. ಬಹುಶಃ ಬಯಲಿನಲ್ಲಿ ಮಲ ವಿಸರ್ಜನೆ ಮಾಡುವ ಅಭ್ಯಾಸ ಇನ್ನೂ ಉಳಿದುಕೊಂಡು ಬಂದಿರುವುದಕ್ಕೂ ನೈರ್ಮಲ್ಯ ವೃತ್ತಿಯು ನಿರ್ದಿಷ್ಟ ಜಾತಿಗೆ ಮೀಸಲಿರುವುದಕ್ಕೂ ಸಂಬಂಧವಿದೆ. ಹಾಗೆಯೇ ಹೆಂಗಸರಿಗೆ ಹೆಚ್ಚಿನ ಅಧಿಕಾರ ಇದ್ದಿದ್ದರೆ ಮಕ್ಕಳು ಪೌಷ್ಟಿಕತೆಯ ಕೊರತೆಯಿಂದ ನರಳಬೇಕಾಗುತ್ತಿರಲಿಲ್ಲ. ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸಿಗುವುದಕ್ಕೆ ಸಾಧ್ಯವಾಗಿದ್ದರೆ ಅಭಿವೃದ್ಧಿ ಬೇರೆಯದೇ ಹಾದಿ ಹಿಡಿಯುತ್ತಿತ್ತು. ಅಂಚಿನಲ್ಲಿರುವ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಮುಖ್ಯ ಎಂದು ನಮಗಿನ್ನೂ ಅನ್ನಿಸಿಲ್ಲ. ಸಾಮಾಜಿಕ ಅಂತರವು ಸಾರ್ವತ್ರಿಕ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಸಾಮಾಜಿಕ ಅಸಮಾನತೆಗೂ ಮಾನವ ಅಭಿವೃದ್ಧಿಗೂ ಸಂಬಂಧವಿದೆ. ಮಾನವ ಅಭಿವೃದ್ಧಿಯು ಸಾಮಾಜಿಕ ಸಹಕಾರವನ್ನು ಬೇಡುತ್ತದೆ. ಹಲವು ರೀತಿಯ ಬಿರುಕುಗಳಿರುವ ಸಮಾಜದಲ್ಲಿ ಸಾಮಾಜಿಕ ಸಹಕಾರ ಕಷ್ಟ.

ಭಾರತದಲ್ಲಿ ಆರ್ಥಿಕ ಅಸಮಾನತೆ ತೀವ್ರವಾಗಿದೆ. ಬಡವರು ಹಾಗೂ ಶ್ರೀಮಂತರು ವಿಭಿನ್ನ ಭಾರತಗಳಲ್ಲಿ ಬದುಕುತ್ತಿದ್ದಾರೆ. ಅರ್ಧದಷ್ಟು ಜನ ದೇಶದ ಶೇಕಡ 6ರಷ್ಟು ಸಂಪತ್ತನ್ನಷ್ಟೇ ಹಂಚಿಕೊಂಡು ಬದುಕುತ್ತಿದ್ದಾರೆ. ಬಹುತೇಕ ಸಂಪತ್ತು ಮೇಲ್ವರ್ಗದವರ ಕೈಯಲ್ಲಿದೆ. ಹಾಗೆಯೇ ಭಾರತದಲ್ಲಿ ಲಿಂಗತಾರತಮ್ಯವು ಭ್ರೂಣದಲ್ಲೇ ಪ್ರಾರಂಭವಾಗುತ್ತದೆ. ದೇಶದಲ್ಲಿ ದುಡಿಯುತ್ತಿರುವ ಮಹಿಳೆಯರ ಪ್ರಮಾಣ ಕಡಿಮೆಯಾಗುತ್ತಿದೆ. ಬಹುಪಾಲು ಮಹಿಳೆಯರು ಶಿಕ್ಷಣ, ಸಂಪತ್ತಿನಂತಹ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಇನ್ನೂ ದುರಂತವೆಂದರೆ, ಹಲವರು ಮೂರು ಬಗೆಯ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. ಉದಾಹರಣೆಗೆ, ಅತ್ಯಾಚಾರಕ್ಕೆ ಒಳಗಾದ ಮಹಿಳೆ ಸಾಮಾನ್ಯವಾಗಿ ಬಡವಳೂ ದುರ್ಬಲ ವರ್ಗಕ್ಕೆ ಸೇರಿದವಳೂ ಆಗಿರುತ್ತಾಳೆ. ಅಂದರೆ, ಹೆಚ್ಚಾಗಿ ಅತ್ಯಾಚಾರಕ್ಕೆ ಒಳಗಾಗುವವರು ಬಡಮಹಿಳೆಯರಾಗಿರುತ್ತಾರೆ.

ಪಕ್ಕದ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ನೇಪಾಳವು ಅಸಮಾನತೆಯ ತೀವ್ರತೆಯನ್ನು ತಗ್ಗಿಸಿಕೊಳ್ಳುವಲ್ಲಿ ಬಹಳಷ್ಟು ಸಫಲವಾಗಿವೆ. ಸುದೀರ್ಘ ಸಾಮಾಜಿಕ ಚಳವಳಿಗಳು, ಸಾರ್ವಜನಿಕ ಸೇವೆ ಹಾಗೂ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ಜನರ ಜೀವನಮಟ್ಟ ಬಹಳಷ್ಟು ಸುಧಾರಿಸಿದೆ. ಶಿಕ್ಷಣ, ಆರೋಗ್ಯದಂತಹ ಅವಶ್ಯ ಸೌಲಭ್ಯಗಳು ಉಚಿತವಾಗಿ ಸಿಗುತ್ತಿವೆ. ಆಸ್ಪತ್ರೆ ಹಾಗೂ ಶಾಲೆಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಏಷ್ಯಾದಲ್ಲೇ ಮೊದಲಿಗೆ ಮತದಾನದ ಹಕ್ಕು ಪಡೆದವರು ಶ್ರೀಲಂಕಾದ ಮಹಿಳೆಯರು.

ಭಾರತದೊಳಗೆ ದಕ್ಷಿಣದ ರಾಜ್ಯಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸಿವೆ. ಬಿಹಾರ, ಉತ್ತರಪ್ರದೇಶದಂತಹ ರಾಜ್ಯಗಳು ಮಾನವ ಸಂಪನ್ಮೂಲ ಸೂಚಿಯಲ್ಲಿ ಬಹಳಷ್ಟು ಹಿಂದಿವೆ. ಕನಿಷ್ಠ  ಮಟ್ಟದ ಆರ್ಥಿಕ, ಶೈಕ್ಷಣಿಕ ಹಾಗೂ ಇತರ ಅವಶ್ಯ ಸೇವೆಗಳಿಂದ ವಂಚಿತರಾದವರ ಸಂಖ್ಯೆ ಕೇರಳ, ತಮಿಳುನಾಡಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚಿಗೆ ಇದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಸಾಮಾಜಿಕ ಚಳವಳಿಗಳು, ಕಲ್ಯಾಣ ಕಾರ್ಯಕ್ರಮಗಳು, ಮಹಿಳಾ ಚಳವಳಿಯಂತಹ ಕಾರಣಗಳಿಂದಾಗಿ ಅಸಮಾನತೆಯ ತೀವ್ರತೆ ಕಡಿಮೆಯಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜಾತಿ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಸರ್ಕಾರಗಳು ಸಾಮಾಜಿಕ ರಕ್ಷಣೆಗಾಗಿ ಮಾಡುತ್ತಿರುವ ಖರ್ಚು ಕೂಡ ಕಡಿಮೆ. ಹಾಗಾಗಿ, ಅಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳು ಹಿಂದೆ ಬಿದ್ದಿವೆ. ಪ್ರಗತಿಯೂ ಕುಂಠಿತವಾಗಿದೆ.

ಹೆಚ್ಚಿನ ಆರ್ಥಿಕ ಬೆಳವಣಿಗೆ ಆಗದಿದ್ದಾಗಲೂ ಪ್ರಜೆಗಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಹಾಗೂ ನೈರ್ಮಲ್ಯವನ್ನು ಒದಗಿಸುವುದಕ್ಕೆ ಬಡದೇಶಗಳಿಗೆ ಸಾಧ್ಯ. ಜಿಡಿಪಿ ಹೆಚ್ಚಳದಿಂದ ಇದೆಲ್ಲಾ ಅದರಷ್ಟಕ್ಕೆ ಅದೇ ಆಗಿಬಿಡುವುದಿಲ್ಲ. ಅಷ್ಟೇ ಅಲ್ಲ, ಇದನ್ನು ಸಾಧಿಸುವುದಕ್ಕೆ ಜಿಡಿಪಿಯ ಹೆಚ್ಚಳ ಅನಿವಾರ್ಯವೂ ಅಲ್ಲ. ಜನರ ನಡುವಿನ ಜಾತಿ, ವರ್ಗ, ಲಿಂಗ ಆಧಾರಿತ ಅಂತರಗಳನ್ನು ತಗ್ಗಿಸುವ ಮೂಲಕ ಸಾಮಾಜಿಕ ಸಹಕಾರವನ್ನು ಸಾಧಿಸುತ್ತಾ, ಅವರ ಒಳಿತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಮಾನವ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ. ಸಮಾನತೆ ನಮ್ಮ ಸಾಮೂಹಿಕ ಆಯ್ಕೆಯಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.