ADVERTISEMENT

ಮೂನ್ ಲೈಟಿಂಗ್: ಬೆಳದಿಂಗಳ ಉದ್ಯೋಗವೋ? ಉದ್ಯೋಗದಾತರಿಗೆ ಬಗೆದ ದ್ರೋಹವೋ?

ಶ್ರೀಹರ್ಷ ಸಾಲಿಮಠ
Published 17 ಸೆಪ್ಟೆಂಬರ್ 2022, 19:30 IST
Last Updated 17 ಸೆಪ್ಟೆಂಬರ್ 2022, 19:30 IST
ಕಲೆ: ಪ್ರಕಾಶ್ ಶೆಟ್ಟಿ
ಕಲೆ: ಪ್ರಕಾಶ್ ಶೆಟ್ಟಿ   

ಉದ್ಯೋಗಿಗಳು ತಮ್ಮ ಅಧಿಕೃತ ಉದ್ಯೋಗದ ಸಮಯ ಮುಗಿದ ನಂತರ ಹೆಚ್ಚುವರಿ ಸಂಪಾದನೆಗಾಗಿ ಅಥವಾ ಆತ್ಮತೃಪ್ತಿಗಾಗಿ ಬೇರೆ ಬೇರೆ ಉದ್ಯೋಗಗಳನ್ನು ಕೈಗೊಳ್ಳುವುದೇ ಮೂನ್‌ ಲೈಟಿಂಗ್‌. ಆದರೆ, ದೈತ್ಯ ಐ.ಟಿ. ಕಂಪನಿಗಳು ಈಗ ಮೂನ್‌ ಲೈಟಿಂಗ್‌ ವಿರುದ್ಧ ದೊಡ್ಡದಾಗಿ ಧ್ವನಿ ಎತ್ತಿವೆಯಲ್ಲ, ಯಾಕೋ?

***

ಐ.ಟಿ. ದೈತ್ಯ ಇನ್ಫೊಸಿಸ್ ಇತ್ತೀಚೆಗೆ ತನ್ನಲ್ಲಿ ಕೆಲಸ ಮಾಡುವವರಿಗೆಲ್ಲ ಒಂದು ಇಮೇಲ್ ಕಳಿಸಿ ತನ್ನ ಯಾವುದೇ ಕೆಲಸಗಾರರು ಬೇರೆಲ್ಲೂ ಕೆಲಸ ಮಾಡಬಾರದೆಂದೂ ಒಂದು ವೇಳೆ ಹಾಗೆ ಕೆಲಸ ಮಾಡಿದಲ್ಲಿ, ಯಾವುದೇ ಮುಲಾಜಿಲ್ಲದೇ ಅವರನ್ನು ಕೆಲಸದಿಂದ ತೆಗೆದುಹಾಕಲಾಗುವುದೆಂದೂ ಎಚ್ಚರಿಕೆ ನೀಡಿತು. ಇದೊಂದು ಇಮೇಲ್ ಐ.ಟಿ. ವಲಯದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.

ADVERTISEMENT

ಇನ್ಫೊಸಿಸ್‌ನ ಜೊತೆ ದನಿಗೂಡಿಸಿರುವ ಇನ್ನೂ ಅನೇಕ ಕಂಪನಿಗಳು ತಮ್ಮಲ್ಲಿ ಕೆಲಸದಲ್ಲಿ ಇದ್ದುಕೊಂಡು ಬೇರೆ ಕಂಪನಿಗಳಲ್ಲಿ ಉದ್ಯೋಗ ಕೈಗೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ವಿಪ್ರೊ ಕಂಪನಿಯ ಚೇರ್‌ಮನ್ ರಿಷದ್‌ ಪ್ರೇಮ್‌ಜಿ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಈ ರೀತಿ ಬೇರೆಡೆಗೆ ಕೆಲಸ ಮಾಡುವುದು ಮಹಾಮೋಸ ಅಂತ ಟ್ವೀಟ್ ಮಾಡಿದ್ದಾರೆ. ದೈತ್ಯರು ಹೀಗೆ ತಮ್ಮ ಉದ್ಯೋಗಿಗಳ ಮೇಲೆ ಮುಗಿಬೀಳುತ್ತಿರುವಾಗ ಆಹಾರ ಬಟವಾಡೆ ಕಂಪನಿ ಸ್ವಿಗ್ಗಿ ತನ್ನ ಕಂಪನಿಯ ಉದ್ಯೋಗಿಗಳು ತನ್ನಲ್ಲಿ ಕೆಲಸ ಮುಗಿದ ಮೇಲೆ ಬೇರೆಡೆ ಉದ್ಯೋಗ ಕೈಗೊಳ್ಳಲು ಸ್ವತಂತ್ರರು ಅಂತ ಅಧಿಕೃತ ಪ್ರಕಟಣೆ ನೀಡಿದೆ. ಇವೆಲ್ಲ ಚರ್ಚೆ ಬೆಳವಣಿಗೆಗಳ ಮೂಲಕ ‘ಮೂನ್ ಲೈಟಿಂಗ್’ ಅಥವಾ ‘ಬೆಳದಿಂಗಳ ಉದ್ಯೋಗ’ ಎಂಬ ಹೊಸ ಹೆಸರು ವ್ಯಾಪಕವಾಗಿ ಚಾಲ್ತಿಗೆ ಬಂದಿದೆ.

ಏನಿದು ಮೂನ್ ಲೈಟಿಂಗ್?
ಮೂನ್ ಲೈಟಿಂಗ್ ಎಂದರೆ ಉದ್ಯೋಗಿಗಳು ತಮ್ಮ ಅಧಿಕೃತ ಉದ್ಯೋಗದ ಸಮಯ ಮುಗಿದ ನಂತರ ಹೆಚ್ಚುವರಿ ಸಂಪಾದನೆಗಾಗಿ ಅಥವಾ ಆತ್ಮತೃಪ್ತಿಗಾಗಿ ಬೇರೆ ಬೇರೆ ಉದ್ಯೋಗಗಳನ್ನು ಕೈಗೊಳ್ಳುವುದು. ಬಹುತೇಕ ಇಂತಹ ಉದ್ಯೋಗಗಳನ್ನು ರಾತ್ರಿ ಅಥವಾ ವಾರಾಂತ್ಯಗಳಲ್ಲಿ ಕೈಗೊಳ್ಳುವ ಕಾರಣ ಇದನ್ನು ಮೂನ್ ಲೈಟಿಂಗ್ ಅಂತ ಕರೆಯಲಾಗುತ್ತದೆ.

ಮೂನ್ ಲೈಟಿಂಗ್ ಇತ್ತೀಚೆಗೆ ಬಂದದ್ದಲ್ಲ. ದಶಕಗಳ ಹಿಂದಿನಿಂದಲೂ ಕಾಲೇಜಿನಲ್ಲಿ ಪಾಠ ಮಾಡಿಬರುವ ಶಿಕ್ಷಕರು ಮತ್ತು ಉಪನ್ಯಾಸಕರು, ನಿತ್ಯ ಬೆಳಿಗ್ಗೆ, ಸಂಜೆ ಹಾಗೂ ವಾರಾಂತ್ಯಗಳಂದು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಾರೆ. ವೈದ್ಯರು ಆಸ್ಪತ್ರೆಯ ಕೆಲಸ ಮುಗಿದ ಮೇಲೆ ತಮ್ಮ ಮನೆಗಳಲ್ಲೇ ರೋಗಿಗಳನ್ನು ಪರೀಕ್ಷಿಸುತ್ತಾರೆ. ನನಗೆ ಗೊತ್ತಿರುವ ಬ್ಯಾಂಕ್ ಮ್ಯಾನೇಜರ್ ಒಬ್ಬರು ಬ್ಯಾಂಕ್ ಅವಧಿಯ ನಂತರ ತಮ್ಮ ಹೆಂಡತಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ಐ.ಟಿ. ಉದ್ಯಮ ಪ್ರಸಿದ್ಧಿಗೆ ಬಂದ ನಂತರ ಉದ್ಯೋಗಿಗಳು ವಾರಾಂತ್ಯದಲ್ಲಿ ಹವ್ಯಾಸಿ ಮತ್ತು ವೃತ್ತಿಪರ ಫೋಟೊಗ್ರಫಿ ಮಾಡುವುದು, ಕೋಡಿಂಗ್ ಕ್ಲಾಸ್‌ಗಳನ್ನು ತೆಗೆದುಕೊಳ್ಳುವುದು ಸಹ ರೂಢಿಯಾಗಿದೆ. ನನ್ನ ಸಹೋದ್ಯೋಗಿಯೊಬ್ಬ ಸಂಜೆಗಳಲ್ಲಿ ಮೊಬೈಲ್ ರಿಪೇರಿಯನ್ನೂ ಮಾಡುತ್ತಿದ್ದ!

ವ್ಯಾಪಕವಾಗುತ್ತಿರುವುದು ಏಕೆ?
ಕೊರೊನಾ ನಂತರದ ಕಾಲಘಟ್ಟದಲ್ಲಿ ಪ್ರಪಂಚದಾದ್ಯಂತ ಐ.ಟಿ. ಕಾರ್ಯ ವೈಖರಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಎರಡೂವರೆ ವರ್ಷಗಳ ಕಾಲ ಸತತ ಮನೆಯಲ್ಲಿ ಕೂತು ಕೆಲಸ ಮಾಡುವ ಸವಲತ್ತು ಒದಗಿ ಬಂದಾಗ ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ದಿನವಹಿ ತಮಗಾಗಿ ಸಾಕಷ್ಟು ಸಮಯ ಉಳಿತಾಯವಾಗತೊಡಗಿತು. ಆಫೀಸಿಗೆ ಪ್ರಯಾಣಿಸಲು ವಿನಿಯೋಗಿಸುತ್ತಿದ್ದ ಎರಡು ತಾಸುಗಳ ಕಾಲ ಪ್ರಯಾಣದ ಸಮಯ ಉಳಿತಾಯ, ಮಧ್ಯಾಹ್ನ ಊಟದ ಸಮಯ ಉಳಿತಾಯ, ನಡುನಡುವೆ ಬ್ರೇಕ್‌ಗಾಗಿ ಗೆಳೆಯರ ಜೊತೆ ಆಚೆ ಹೋಗುವ ಸಮಯದ ಉಳಿತಾಯ ಇತ್ಯಾದಿ. ಐ.ಟಿ. ಕಂಪನಿಗಳಲ್ಲಿ ಒಮ್ಮೊಮ್ಮೆ ದಿನಕ್ಕೆ ಹದಿನಾಲ್ಕು ತಾಸು ಕೆಲಸ ಮಾಡುವಷ್ಟು ಅತಿಯಾದ ಕೆಲಸಗಳಿದ್ದರೆ ಒಮ್ಮೊಮ್ಮೆ ದಿನದ ಕೆಲಸ ಎರಡು ತಾಸುಗಳಲ್ಲೇ ಮುಗಿದುಹೋಗುತ್ತದೆ. ಆಫೀಸಿನಲ್ಲಿ ಕೆಲಸ ಮಾಡುವಾಗಿನ ದೊಡ್ಡ ಕಿರಿಕಿರಿಯೆಂದರೆ ನಮಗೆ ಹೆಚ್ಚಿನ ಕೆಲಸ ಇಲ್ಲದಿದ್ದಾಗ್ಯೂ ಕಂಪ್ಯೂಟರ್ ಮುಂದೆ ಸುಮ್ಮನೆ ಕುಳಿತಿರಬೇಕು.

ಮನೆಯಲ್ಲಿ ಕೆಲಸ ಮಾಡುವ ಸೌಲಭ್ಯ ದೊರಕಿದಾಗಿನಿಂದ ಪ್ರಯಾಣದ ಸಮಯದ ಜೊತೆಗೆ ಸುಮ್ಮನೆ ಕುಳಿತಿರುವ ಅನುತ್ಪಾದಕ ಸಮಯದಲ್ಲಿ ಹೊಸ ಕೆಲಸಗಳನ್ನು ಮಾಡಲು ಐ.ಟಿ. ಉದ್ಯೋಗಿಗಳಿಗೆ ಅವಕಾಶಗಳನ್ನು ಒದಗಿಸಿದವು. ಇತ್ತೀಚೆಗೆ ಬೆಂಗಳೂರಿನ ಟೆಕ್ಕಿಯೊಬ್ಬ ಒಂದೇ ಬಾರಿಗೆ ಏಳು ಕಂಪನಿಗಳಲ್ಲಿ ಕೆಲಸ ಮಾಡುವ ವಿಷಯ ಸಾಕಷ್ಟು ವೈರಲ್ ಆಗಿತ್ತು. ಪ್ರಪಂಚದಾದ್ಯಂತ ತಂತ್ರಜ್ಞಾನದ ಅತಿವೇಗದ ಬೆಳವಣಿಗೆಯಿಂದ ಮತ್ತು ಈ ವಲಯದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಆಗುತ್ತಿರುವುದರಿಂದ ಸಾಫ್ಟ್‌ವೇರ್ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತಿದೆ ಹಾಗೂ ಬೇಡಿಕೆಗೆ ತಕ್ಕಂತೆ ನಿಪುಣರು ದೊರೆಯುತ್ತಿಲ್ಲ. ಕಂಪನಿಗಳು ಕೌಶಲ್ಯ ಹೊಂದಿರುವವರಿಗೆ ಕೇಳಿದಷ್ಟು ಹಣ ಕೊಡಲು ತಯಾರಿವೆ. ಈ ಹಣ, ತಾಸಿನ ಲೆಕ್ಕದಲ್ಲಿ ದೊರೆಯುತ್ತದೆ. ಕೆಲ ಅಂತರರಾಷ್ಟ್ರೀಯ ಕಂಪನಿಗಳು ಒಂದು ತಾಸಿಗೆ ಐದು ಸಾವಿರ ರೂಪಾಯಿವರೆಗೆ ಪಾವತಿಸುತ್ತವೆ. ಇಂತಹ ಆಕರ್ಷಕ ಸಂಬಳಗಳು ಯುವ ಟೆಕ್ಕಿಗಳನ್ನು ಹೆಚ್ಚುವರಿ ಕೆಲಸಕ್ಕಾಗಿ ಆಕರ್ಷಿಸುತ್ತವೆ.

ಮೂನ್ ಲೈಟಿಂಗ್ ಅನ್ನು ಕಂಪನಿಗಳು ಮುಖ್ಯವಾಗಿ ಮೂರು ಕಾರಣಗಳಿಗಾಗಿ ವಿರೋಧಿಸುತ್ತವೆ. ಮೊದಲನೆಯದಾಗಿ ಕಂಪನಿಯ ದತ್ತಾಂಶ, ಬೌದ್ಧಿಕ ಸ್ವತ್ತುಗಳ ಸುರಕ್ಷತೆ. ಮನೆಯಿಂದ ಕೆಲಸ ಮಾಡುವಾಗ ಕಂಪನಿಗಳಿಗೆ ತಮ್ಮ ಉದ್ಯೋಗಿಗಳ ಮೇಲಿನ ಹಿಡಿತ ತೀರಾ ಸಡಿಲವಾಗಿರುತ್ತದೆ. ಈ ಹಿಡಿತದ ಕೊರತೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಆಂತರಿಕ ಸ್ವತ್ತುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡಿಬಿಟ್ಟರೆ ಏನು ಗತಿ? ಕಂಪನಿಯ ಸುರಕ್ಷತೆಯಲ್ಲದೆ ಹೆಸರಿಗೂ ಇದು ಧಕ್ಕೆ ತರುತ್ತದೆ. ತಮ್ಮ ಡೇಟಾ ಸುರಕ್ಷಿತವಾಗಿಲ್ಲ ಎಂದರೆ ಈ ಕಂಪನಿಗಳಿಗೆ ಕೆಲಸ ಔಟ್ ಸೋರ್ಸ್ ಮಾಡಲು ಬೇರೆ ಕಂಪನಿಗಳು ಹಿಂಜರಿಯುತ್ತವೆ. ಇದರಿಂದ ಆದಾಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ.

ಎರಡನೆಯದು ಹಿತಾಸಕ್ತಿಗಳ ಸಂಘರ್ಷ. ಉದಾಹರಣೆಗೆ ‘ಕ’ ಎಂಬ ಕಂಪನಿ ಮಕ್ಕಳಿಗೆ ಆ್ಯನಿಮೇಷನ್‌ ಮುಖಾಂತರ ಗಣಿತವನ್ನು ಕಲಿಸುವ ಮೊಬೈಲ್ ಆ್ಯಪ್‌ ಅನ್ನು ತಯಾರಿಸುತ್ತಿದೆ ಎಂದಿಟ್ಟುಕೊಳ್ಳೊಣ. ಈ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯು ಇದೇ ರೀತಿ ಗಣಿತ ಕಲಿಸುವ ಮತ್ತೊಂದು ಆ್ಯನಿಮೇಷನ್‌ ಕಂಪನಿಯಾದ ‘ಟ’ಕ್ಕೂ ಸಂಜೆಯ ಸಮಯದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅಂದರೆ ಒಂದೇ ರೀತಿಯ ಕೆಲಸ ಮಾಡುವ ಎರಡು ಕಂಪನಿಗಳಿಗೆ ಕೆಲಸ ಮಾಡುವಾಗ ಹಿತಾಸಕ್ತಿ ಸಂಘರ್ಷ ಅಥವಾ conflict of interest ಹುಟ್ಟುತ್ತದೆ. ‘ಕ’ ಕಂಪನಿಯಲ್ಲಿ ಆ್ಯನಿಮೇಷನ್‌ ಮತ್ತು ತಂತ್ರಜ್ಞಾನದ ಚರ್ಚೆಗಳು ಸುಲಭವಾಗಿ ಎರಡೂ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯ ಮೂಲಕ ಯಾವುದೇ ಖರ್ಚಿಲ್ಲದೇ ‘ಟ’ ಕಂಪನಿಗೆ ದೊರೆಯುತ್ತವೆ. ‘ಕ’ದಲ್ಲಿ ಕಲಿತದ್ದನ್ನು ಉದ್ಯೋಗಿಯು ಅದೇ ಸಮಯಕ್ಕೆ ‘ಟ’ದಲ್ಲೂ ಬಳಸುತ್ತಾನೆ ಅಥವಾ ತಾನೆ ಸ್ವಂತ ಕಂಪನಿ ಸ್ಥಾಪಿಸಿ ಇದೇ ರೀತಿಯ ಆ್ಯಪ್‌ ಅನ್ನು ತಯಾರಿಸಿದರೆ ಅದೂ ಹಿತಾಸಕ್ತಿ ಸಂಘರ್ಷವಾಗುತ್ತದೆ.

ಮೂರನೆಯದು ಉದ್ಯೋಗಿಗಳ ಸಾಮರ್ಥ್ಯ ಕುಗ್ಗುವಿಕೆ. ಉದ್ಯೋಗಿಯು ದಿನಕ್ಕೆ ಎಂಟು ತಾಸು ಕಂಪನಿಯೊಂದರಲ್ಲಿ ಕೆಲಸ ಮಾಡಿ ಉಳಿದ ಸಮಯದಲ್ಲಿ ಮತ್ತೆ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗುವುದರಿಂದ ದೈಹಿಕ ಮತ್ತು ಮಾನಸಿಕ ದಣಿವಿನಿಂದ ಆತನ ಉತ್ಪಾದಕತೆ ಕಡಿಮೆಯಾಗುತ್ತದೆ. ಇದೂ ಕಂಪನಿಯ ಆದಾಯಕ್ಕೆ ಪೆಟ್ಟು ಕೊಡುತ್ತದೆ.

ಉದ್ಯೋಗಿಗಳ ನಿಲುವೇನು?
ವಿಪ್ರೊ ಚೇರ್‌ಮನ್ ಅವರು ಮೂನ್ ಲೈಟಿಂಗ್ ಎಂಬುದು ಮಹಾ ಮೋಸ ಎಂದು ಕರೆದಿದ್ದನ್ನು ಆಕ್ಷೇಪಿಸಿರುವ ಇನ್ಫೊಸಿಸ್‌ನ ಮಾಜಿ ನಿರ್ದೇಶಕ ಮೋಹನ್‌ದಾಸ್‌ ಪೈ, ಇದನ್ನು ಸಾರಾಸಗಟಾಗಿ ಮೋಸ ಎನ್ನಲು ಬರುವುದಿಲ್ಲ. ಉದ್ಯೋಗಿಗಳು ತಮ್ಮ ಬಿಡುವಿನ ಸಮಯದಲ್ಲಿ ಏನು ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು ಎಂದು ಹೇಳಿಕೆ ನೀಡಿದ್ದಾರೆ. ಇದಲ್ಲದೇ ಇತ್ತೀಚೆಗೆ ತಮ್ಮ ಹಕ್ಕುಗಳ ಕುರಿತು ಎಚ್ಚೆತ್ತುಕೊಂಡಿರುವ ಹೊಸ ತಲೆಮಾರಿನ ಟೆಕ್ಕಿಗಳು, ನಾವು ನಮ್ಮ ಜೀವನದ ದಿನದ ಎಂಟು ತಾಸುಗಳನ್ನು ಕಂಪನಿಗೆ ಬಾಡಿಗೆ ನೀಡಿ ಕೆಲಸ ಮಾಡಿ, ಸೂಕ್ತ ಮೌಲ್ಯವನ್ನು ಪಡೆಯುತ್ತೇವೆಯೇ ಹೊರತು ನಮ್ಮ ಇಡೀ ಜೀವನವನ್ನು ಅವರಿಗೆ ಬರೆದುಕೊಟ್ಟಿರುವುದಿಲ್ಲ. ಈ ಕೆಲಸ ಮುಗಿದ ಮೇಲೆ ವೈಯಕ್ತಿಕ ಜೀವನದಲ್ಲಿ ಏನೇನುಮಾಡುತ್ತೇವೆ ಎನ್ನುವುದು ನಮಗೆ ಬಿಟ್ಟದ್ದು ಎಂಬ ನಿಲುವು ತಾಳುತ್ತಿದ್ದಾರೆ.

ಮೂನ್ ಲೈಟಿಂಗ್‌ ಬಗ್ಗೆ ವಿರೋಧ ವ್ಯಕ್ತಪಡಿಸುವ ಕಂಪನಿಗಳ ನಿರ್ದೇಶಕರು, ಚೇರ್‌ಮನ್‌ಗಳು ಅನೇಕ ಕಂಪನಿಗಳಿಗೆ ಸಲಹೆಗಾರರಾಗಿ, ಗೌರವ ನಿರ್ದೇಶಕರುಗಳಾಗಿ ಕೆಲಸ ಮಾಡಿ ಸಂಬಳ ಪಡೆಯುತ್ತಿರುತ್ತಾರೆ. ಅವರಿಗೆ ಇಲ್ಲದ ಬೇಲಿ ಸಾಮಾನ್ಯ ಉದ್ಯೋಗಿಗಳಿಗೆ ಏಕೆ? ಸಿರಿವಂತರಿಗೊಂದು ಬಡವರಿಗೊಂದು ನ್ಯಾಯವೇ ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ. ಅಲ್ಲದೇ ಇದೇ ಕಂಪನಿಗಳು ಅಮೆರಿಕ, ಆಸ್ಟ್ರೇಲಿಯಾ ಇತ್ಯಾದಿ ದೇಶಗಳಲ್ಲಿ ಕೆಲಸ ಮಾಡುವ ಅಲ್ಲಿನ ಉದ್ಯೋಗಿಗಳಿಗೆ ಮೂನ್ ಲೈಟಿಂಗ್‌ಗೆ ಅವಕಾಶ ಕೊಡುತ್ತವೆ.

ಭಾರತದಲ್ಲಿ ಮಾತ್ರ ಈ ರೀತಿ ನಿರ್ಬಂಧ ಹೇರುವುದು ಎಷ್ಟು ಸರಿ? ಇದು ಭಾರತದಲ್ಲಿನ ದುರ್ಬಲ ಕಾರ್ಮಿಕ ಕಾನೂನು ಮತ್ತು ಉದ್ಯೋಗಿಗಳ ಅಭದ್ರತೆಯನ್ನು ಬಳಸಿಕೊಂಡು ಅವರಿಂದ ದಿನಕ್ಕೆ ಎರಡು ಪಟ್ಟು ದುಡಿಸಿಕೊಂಡು ಶೋಷಿಸುವ ಹುನ್ನಾರವಷ್ಟೆ ಎಂದೂ ವಿಶ್ಲೇಷಿಸಲಾಗುತ್ತದೆ. ಎಲ್ಲಿಯವರೆಗೆ ನಾವು ನಮ್ಮ ಡೆಡ್‌ಲೈನ್‌ಗಳನ್ನು ಮುಟ್ಟುತ್ತೇವೋ ಎಲ್ಲಿಯವರೆಗೆ ನಮ್ಮ ಹೊರಗಿನ ಉದ್ಯೋಗವು ಕಂಪನಿಯ ಉದ್ಯೋಗದ ವೇಗಕ್ಕೆ ಧಕ್ಕೆ ತರುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಎರಡನೆಯ ಉದ್ಯೋಗವನ್ನು ಪ್ರಶ್ನಿಸಬಾರದು ಎಂಬುದು ಐ.ಟಿ. ಕಂಪನಿ ಉದ್ಯೋಗಿಗಳ ಅಂಬೋಣ.

ಕಾನೂನು ಏನು ಹೇಳುತ್ತದೆ?
ವಿಶ್ವದ ಬಹುತೇಕ ದೇಶಗಳಲ್ಲಿ ದ್ವಿ ಉದ್ಯೋಗ ಎಂಬುದು ಕಾನೂನುಬದ್ಧವಾಗಿದೆ. ಭಾರತದಲ್ಲಿ ಇದರ ಬಗ್ಗೆ ಕಾನೂನಿನಲ್ಲಿ ಸ್ಪಷ್ಟ ನಿರ್ದೇಶನಗಳಿಲ್ಲ. ಆದರೆ, 1948ರ ಫ್ಯಾಕ್ಟರಿಗಳ ಕಾಯ್ದೆ ಅನುಚ್ಛೆದ 60ರಲ್ಲಿ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯು ಒಂದೇ ದಿನ ಎರಡು ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಬಾರದು ಎಂದು ನಿರ್ದೇಶಿಸುತ್ತದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ಬೇರೆಯೇ ಚರ್ಚೆಯ ವಿಷಯ. ಆದರೆ ಈ ನಿರ್ದೇಶನ ಐ.ಟಿ. ಕಂಪನಿಯ ಉದ್ಯೋಗಿಗಳಿಗೆ ಅನ್ವಯವಾಗುವುದಿಲ್ಲ.

ಹಾಗಿದ್ದರೆ ಮೂನ್ ಲೈಟಿಂಗ್ ಯಾವಾಗ ಸರಿ, ಯಾವಾಗ ತಪ್ಪು? ಮೂನ್ ಲೈಟಿಂಗ್ ಬಗ್ಗೆ ಐಪಿಸಿಯಲ್ಲಿ ಸ್ಪಷ್ಟವಾದ ಯಾವುದೇ ನಿರ್ದೇಶನ ಇಲ್ಲದಿರುವುದರಿಂದ ಕಂಪನಿ ಮತ್ತು ಉದ್ಯೋಗಿಗಳ ನಡುವಿನ ಒಪ್ಪಂದವೇ ಇದರ ಸಂವಿಧಾನ. ಉದ್ಯೋಗಿಗಳು ಕೆಲಸವನ್ನು ಒಪ್ಪಿಕೊಳ್ಳುವ ಮುನ್ನ ಕಂಪನಿಯು ಒದಗಿಸುವ ಔದ್ಯೋಗಿಕ ಒಪ್ಪಂದದ ಪ್ರತಿಯನ್ನು ಒಮ್ಮೆ ವಿವರವಾಗಿ ಓದಿಕೊಂಡು ಸಾಧ್ಯವಾದರೆ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯುವುದು ಸೂಕ್ತ. ಒಪ್ಪಂದದಲ್ಲಿ ಕಂಪನಿಯು ತನ್ನಲ್ಲಿ ಬಿಟ್ಟು ಬೇರೆಡೆಗೆ ಕೆಲಸ ಮಾಡುವಂತಿಲ್ಲ ಎಂಬ ಅನುಬಂಧವನ್ನು ಸೇರಿಸಿದ್ದು, ಅದಕ್ಕೆ ನೀವು ಸಹಿ ಹಾಕಿದ್ದರೆ, ಅದನ್ನು ಪಾಲಿಸಬೇಕಾಗುತ್ತದೆ. ತಪ್ಪಿ ಕಂಪನಿಯ ಅನುಮತಿ ಪಡೆಯದೇ ಮತ್ತೊಂದು ಉದ್ಯೋಗದಲ್ಲಿ ತೊಡಗಿಕೊಂಡರೆ ಕಂಪನಿಯು ಅವರ ಮೇಲೆ ಕಾನೂನು ಕ್ರಮ ಜರುಗಿಸಬಹುದು. ಕಂಪನಿಯು ಮೂನ್ ಲೈಟಿಂಗ್ ಬಗ್ಗೆ ಯಾವುದೇ ನಿಯಮಗಳನ್ನು ಒಪ್ಪಂದದಲ್ಲಿ ನೀಡಿಲ್ಲವೆಂದರೆ ಹೆಚ್ಚುವರಿ ಉದ್ಯೋಗಗಳಲ್ಲಿ ನಿರಾತಂಕವಾಗಿ ತೊಡಗಿಕೊಳ್ಳಬಹುದು. ಕೆಲ ಕಂಪನಿಗಳು ಭಾಗಶಃ ಮೂನ್ ಲೈಟಿಂಗ್‌ಗೆ ಅನುಮತಿ ನೀಡುತ್ತವೆ. ಅಂದರೆ ಒಪ್ಪಂದದಲ್ಲಿ ಇಂತಿಂಥ ಕಂಪನಿಗಳ ಪರವಾಗಿ ಕೆಲಸ ಮಾಡುವ ಹಾಗಿಲ್ಲ ಅಥವಾ ಇಂತಿಂಥ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಿಲ್ಲ ಎಂಬ ನಿಬಂಧನೆಗಳನ್ನು ಒಡ್ಡುತ್ತವೆ.

ಇನ್ನೊಂದು ನೈತಿಕ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದವನು ಸಂಗೀತ ಕಛೇರಿ ಮಾಡುವ ಮೂಲಕ ಹಣ ಸಂಪಾದಿಸುತ್ತಿದ್ದರೆ ಅಥವಾ ಕಾರ್‌ಗಳನ್ನು ಪ್ರವಾಸೋದ್ಯಮಿಗಳಿಗೆ ಬಾಡಿಗೆ ಕೊಡುವ ವ್ಯಾಪಾರ ಮಾಡುತ್ತಿದ್ದರೆ ಮೂನ್ ಲೈಟಿಂಗ್ ಅನ್ನು ನಿರಾಕರಿಸಲು ಕಾರಣವಾಗುವ ಮೇಲೆ ವಿವರಿಸಿದ ಯಾವುದೇ ಭೀತಿ ಕಂಪನಿಗಳಿಗೆ ಇರುವುದಿಲ್ಲವಲ್ಲ. ಆಗ ಮೂನ್ ಲೈಟಿಂಗ್ ಮಾಡಬಹುದೇ? ಈ ಬಗ್ಗೆ ಇತ್ತೀಚಿಗಿನ ಚರ್ಚೆಯಲ್ಲಿ ಇನ್ಫೊಸಿಸ್ ನಿರ್ದೇಶಕರು ಈ ರೀತಿಯ ಕೆಲಸಗಳನ್ನು ಕಂಪನಿಯ ಅನುಮತಿ ಪಡೆದು ಮಾಡಬಹುದು. ಆದರೆ ಕಂಪನಿಯು ಯಾವುದೇ ಸಮಯದಲ್ಲಿ ಈ ಅನುಮತಿಯನ್ನು ಹಿಂಪಡೆಯಬಹುದು ಎಂದು ಹೇಳಿದ್ದು ಮತ್ತೆ ಚರ್ಚೆಗೆ ಕಾರಣವಾಗಿತ್ತು.

ಕಡೆಗೆ ಮೂನ್ ಲೈಟಿಂಗ್ ಎಂಬುದು ನೈತಿಕವಾಗಿ ಎಷ್ಟು ಸರಿ ಎಂಬುದರ ಬಗ್ಗೆಯೇ ಚರ್ಚೆ ಸುತ್ತುವರಿಯುತ್ತದೆ. ಉದ್ಯೋಗಿಗಳ ದುಡಿಯವ ಹಕ್ಕನ್ನು ನಿಯಂತ್ರಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯೋ ಅಥವಾ ಹೆಚ್ಚುವರಿಯಾಗಿ ದುಡಿಯುವುದು ತನ್ನನ್ನು ನಂಬಿದ ಕಂಪನಿಗೆ ದ್ರೋಹ ಮಾಡಿದಂತೆಯೋ ಎಂಬುದು ಇನ್ನೂ ಚರ್ಚೆಯಾಗುತ್ತದೆ. ಆದರೆ ಕೊನೆಗೆ ಈ ಚರ್ಚೆಗಳು ರೂಪಿಸಲಿರುವ ಕಾನೂನು ಬಂಡವಾಳಶಾಹಿ ಕಂಪನಿಗಳ ಪರವಾಗಿ ಇರುವುದೋ ಅಥವಾ ಉದ್ಯೋಗಿಗಳ ಪರವಾಗಿರುವುದೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.