ADVERTISEMENT

ವಿಶ್ಲೇಷಣೆ | ಆರ್ಥಿಕ ಸ್ಥಿತಿ: ಹೊಸ ಸವಾಲು

ಸರ್ಕಾರಿ ಸಂಸ್ಥೆಗಳು ಹೆಚ್ಚು ಸಶಕ್ತವೂ ಸ್ವಾಯತ್ತವೂ ಆಗಬೇಕು

ವೇಣುಗೋಪಾಲ್‌ ಟಿ.ಎಸ್‌.
Published 17 ಜನವರಿ 2025, 0:30 IST
Last Updated 17 ಜನವರಿ 2025, 0:30 IST
   

ನಾವು ಹೊಸ ವರ್ಷಕ್ಕೆ ಕಾಲಿಟ್ಟು ಎರಡು ವಾರಗಳು ಸಂದಿವೆ. ಭಾರತದ ಆರ್ಥಿಕ ಪರಿಸ್ಥಿತಿ ಹೆಚ್ಚೆಚ್ಚು ಸಂಕೀರ್ಣವಾಗುತ್ತಿದೆ. ಜಿಡಿಪಿಯ ಅಂದಾಜನ್ನು ಇತ್ತೀಚೆಗೆ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಪ್ರಕಟಿಸಿದೆ. ಜಿಡಿಪಿ ಅಂದರೆ ದೇಶದೊಳಗೆ ತಯಾರಾದ ಒಟ್ಟು ಸರಕು ಹಾಗೂ ಸೇವೆಗಳ ಮಾರುಕಟ್ಟೆ ಮೌಲ್ಯ. ಜಿಡಿಪಿಯು 2024–25ರಲ್ಲಿ ಶೇಕಡ 6.4ರಷ್ಟು ದಾಖಲಾಗುತ್ತದೆ ಎನ್ನುವ ಮೂಲಕ ಅದು ತನ್ನ ನಿರೀಕ್ಷೆಯನ್ನು ತಗ್ಗಿಸಿಕೊಂಡಿದೆ.

ವಾಸ್ತವವಾಗಿ ಹಿಂದಿನ ವರ್ಷಗಳಲ್ಲೂ ಜಿಡಿಪಿ ಕಡಿಮೆಯೇ ಇತ್ತು. ಆದರೆ 2020– 21ರಲ್ಲಿ ಕೋವಿಡ್‌ನಿಂದ ಆರ್ಥಿಕತೆಯಲ್ಲಿ ತೀವ್ರ ಕುಸಿತವಾಗಿತ್ತು. ಅದಕ್ಕೆ ಹೋಲಿಸಿದಾಗ ನಂತರದ ವರ್ಷಗಳಲ್ಲಿ ಜಿಡಿಪಿ ತೀವ್ರವಾಗಿ ಏರುತ್ತಿರುವಂತೆ ತೋರುತ್ತಿತ್ತು. 2019ರಿಂದ ಲೆಕ್ಕಹಾಕಿದರೆ, ಸರಾಸರಿ ಜಿಡಿಪಿ ದರ ಶೇ 5 ದಾಟುವುದಿಲ್ಲ. ಭಾರತದ ಜಿಡಿಪಿ ಬರುವ ದಿನಗಳಲ್ಲಿ ಹೆಚ್ಚೆಂದರೆ ಶೇ 6.5ರ ಆಸುಪಾಸಿನಲ್ಲಿ ಇರುತ್ತದೆ ಅನ್ನುವುದು ಹೆಚ್ಚಿನವರ ಅಭಿಪ್ರಾಯ. ಅಂದರೆ ನಿರೀಕ್ಷಿತ ಶೇ 9ರಷ್ಟು ಬೆಳವಣಿಗೆ ಸಾಧ್ಯವಾಗಲಿಕ್ಕಿಲ್ಲ. ಆದರೆ ಜಿಡಿಪಿಯ ಹೆಚ್ಚಳವು ದೇಶದ ಸಮಸ್ಯೆಗಳಿಗೆ ಪರಿಹಾರವಾಗುವುದಿಲ್ಲ ಎಂದು ಅಮರ್ತ್ಯ ಸೇನ್ ಅಂತಹವರು ವಾದಿಸುತ್ತಲೇ ಬಂದಿದ್ದಾರೆ. ಆದರೂ ನಾವು ಇನ್ನೂ ಆರ್ಥಿಕತೆಯ ಸ್ಥಿತಿಯನ್ನು ತಿಳಿಯುವುದಕ್ಕೆ ಜಿಡಿಪಿಗೇ ಜೋತು ಬಿದ್ದಿದ್ದೇವೆ. ಜಿಡಿಪಿಯ ಹೆಚ್ಚಳದಿಂದ ಹೂಡಿಕೆ, ಉದ್ಯೋಗ, ಉತ್ಪಾದನೆ ಇವೆಲ್ಲಾ ಹೆಚ್ಚುತ್ತವೆ ಎಂದು ನಂಬಿಕೊಂಡಿದ್ದೇವೆ.

ಜಿಡಿಪಿಯ ಗಾತ್ರವನ್ನು 5 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಕನಸು ಇಟ್ಟುಕೊಂಡಿರುವ ಸರ್ಕಾರಕ್ಕೆ ಜಿಡಿಪಿ ಕುಸಿತ ನಿಜವಾಗಿ ಆತಂಕದ ವಿಷಯ. ಜಿಡಿಪಿಯ ಲೆಕ್ಕಾಚಾರವನ್ನು ಗಮನಿಸಿದರೆ, ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಕೆಲವು ಸಮಸ್ಯೆಗಳು ಪ್ರಮುಖವಾಗಿ ಕಾಣುತ್ತವೆ. ಮುಖ್ಯವಾಗಿ, ಜನರ ಕೊಳ್ಳುವ ಪ್ರಮಾಣದಲ್ಲಿ ತೀವ್ರ ಕುಸಿತ ಕಾಣಿಸಿಕೊಂಡಿದೆ. ಹಾಗೆಯೇ ಹೂಡಿಕೆಯಲ್ಲಿ ತೀವ್ರ ಇಳಿಕೆಯಾಗಿದೆ. ಸರ್ಕಾರದ ವೆಚ್ಚವೂ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಇವೆಲ್ಲಾ ಪರಸ್ಪರ ತೆಕ್ಕೆ ಹಾಕಿಕೊಂಡಿರುವ ಸಂಗತಿಗಳು. ಜನರ ಕೊಳ್ಳುವ ಪ್ರಮಾಣ ಕಡಿಮೆಯಾಗಿರುವುದಕ್ಕೆ ಅವರ ಕೊಳ್ಳುವ ಶಕ್ತಿ ಕಡಿಮೆಯಾಗಿರುವುದು ಕಾರಣ. ಹಣದುಬ್ಬರದ ಏರಿಕೆಗೆ ಅನುಗುಣವಾಗಿ ಕೂಲಿಯಲ್ಲಿ ಏರಿಕೆಯಾಗದೇ ಇರುವುದರಿಂದ ಸ್ವಾಭಾವಿಕವಾಗಿಯೇ ಜನರ ಕೊಳ್ಳುವ ಪ್ರಮಾಣ ಕಡಿಮೆಯಾಗಿದೆ. ಖರ್ಚನ್ನು ಸರಿದೂಗಿಸಿಕೊಳ್ಳುವುದಕ್ಕೆ ಹೆಚ್ಚೆಚ್ಚು ಸಾಲವನ್ನು ಮಾಡಿಕೊಳ್ಳುತ್ತಿದ್ದಾರೆ. ಆರ್‌ಬಿಐ ವರದಿ ಕೂಡ ಕೌಟುಂಬಿಕ ಸಾಲದ ಪ್ರಮಾಣ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ದಾಖಲಿಸಿದೆ. ಸಾಲದ ಮರುಪಾವತಿ, ಬಡ್ಡಿಯ ಹೊರೆ ಇವೆಲ್ಲಾ ಸೇರಿಕೊಂಡು ಕೊಳ್ಳುವ ಶಕ್ತಿಯನ್ನು ಇನ್ನಷ್ಟು ತಗ್ಗಿಸಿವೆ. ಸರಕು ಹಾಗೂ ಸೇವೆಗಳಿಗೆ ಬೇಡಿಕೆ ಮತ್ತೂ ಕಡಿಮೆಯಾಗಿದೆ. ಬೇಡಿಕೆ ತಗ್ಗಿದರೆ ಉದ್ದಿಮೆದಾರರು ಬಂಡವಾಳ ಹೂಡಲು ಹಿಂಜರಿಯುತ್ತಾರೆ. ವಿದೇಶಿ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಾರೆ.

ADVERTISEMENT

ಭಾರತದಲ್ಲಿ ಇಂದು ವಿದೇಶಿ ಬಂಡವಾಳದ ಒಳಹರಿವಿನ ಪ್ರಮಾಣ ಹೆಚ್ಚಿದೆ ಅನ್ನುವುದು ನಿಜ. ಆದರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೊರಗೆ ಹೋಗುತ್ತಿದೆ. ಹಾಗಾಗಿ, ನಿವ್ವಳ ವಿದೇಶಿ ಬಂಡವಾಳದ ಹೂಡಿಕೆಯಲ್ಲಿ ತೀವ್ರ ಇಳಿಕೆಯನ್ನು ಕಾಣುತ್ತಿದ್ದೇವೆ. 2021ರಲ್ಲಿ ನಿವ್ವಳ ವಿದೇಶಿ ಬಂಡವಾಳ ಹೂಡಿಕೆಯು 34 ಶತಕೋಟಿ ಡಾಲರ್ ಇತ್ತು. ಈಗ ಅದು 14.5 ಶತಕೋಟಿ ಡಾಲರ್‌ಗೆ ಇಳಿದಿದೆ. ಅದನ್ನೇ ಜಿಡಿಪಿಗೆ ಹೋಲಿಸಿ ಹೇಳಿದರೆ, ವಿದೇಶಿ ಬಂಡವಾಳದ ಹೂಡಿಕೆಯು 2008ರಲ್ಲಿ ಜಿಡಿಪಿಯ ಶೇ 3.4ರಷ್ಟು ಇತ್ತು. 2023ರಲ್ಲಿ ಅದು ಶೇ 0.84ರಷ್ಟು ಇತ್ತು. ಭಾರತೀಯ ಉದ್ದಿಮೆದಾರರೂ ಭಾರತಕ್ಕಿಂತ ವಿದೇಶಗಳಲ್ಲಿ ಹೆಚ್ಚೆಚ್ಚು ಬಂಡವಾಳವನ್ನು ಹೂಡತೊಡಗಿದ್ದಾರೆ. ಇದು ನಿಜವಾಗಿ ಆತಂಕದ ವಿಷಯ.

ಕಾರ್ಪೊರೇಟ್‌ ಸಂಸ್ಥೆಗಳ ಹೂಡಿಕೆಯು ಲಾಭದ ನಿರೀಕ್ಷೆಯನ್ನು ಆಧರಿಸಿರುತ್ತದೆ. ಅವರ ಗಮನವೆಲ್ಲಾ ಸದ್ಯದ ಲಾಭಕ್ಕಿಂತ ಭವಿಷ್ಯದ ಲಾಭದ ಕಡೆಗಿರುತ್ತದೆ. ಖಾಸಗಿ ಹೂಡಿಕೆ ಕಡಿಮೆಯಿದ್ದಾಗ ಸರ್ಕಾರ ಹೆಚ್ಚು ಹೂಡಿಕೆಯನ್ನು ಮಾಡಿ, ಆರ್ಥಿಕತೆಯಲ್ಲಿ ಹೂಡಿಕೆಯ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯದಂತಹ ಸಾರ್ವಜನಿಕ ಸೇವೆಯನ್ನು ಒದಗಿಸುವುದಕ್ಕೆ, ಉತ್ಪಾದಕತೆಯನ್ನು ಹೆಚ್ಚಿಸುವುದಕ್ಕೂ ಸರ್ಕಾರ ಬಂಡವಾಳ ತೊಡಗಿಸಬೇಕಾಗುತ್ತದೆ. ಇದಕ್ಕೆ ತಾಗಿಕೊಂಡಂತೆ ಇನ್ನೊಂದು ಸಮಸ್ಯೆ ಅಂದರೆ, ಕೆಲವೇ ಉದ್ದಿಮೆಗಳು ಬೆಳೆಯುತ್ತಿವೆ ಹಾಗೂ ಹೆಚ್ಚೆಚ್ಚು ಕೇಂದ್ರೀಕರಣಗೊಳ್ಳುತ್ತಿವೆ. ಸ್ಪರ್ಧೆ ಇಲ್ಲದಿರುವುದರಿಂದ ಅವುಗಳ ಲಾಭ ಹಾಗೂ ಸಂಪತ್ತು ತೀವ್ರವಾಗಿ ಏರುತ್ತಿದೆ. ಹಾಗೆಯೇ ಮಧ್ಯಮ ಹಾಗೂ ಕೆಳವರ್ಗದವರ ಸಂಪತ್ತು ಕುಸಿಯುತ್ತಿದೆ. ಇದನ್ನು ಥಾಮಸ್ ಪಿಕೆಟ್ಟಿಯವರ ಅಧ್ಯಯನ ತೋರಿಸಿದೆ. ಹಾಗಾಗಿಯೇ ದುಬಾರಿ ಕಾರಿ ನಂತಹ ಐಷಾರಾಮಿ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ, ದ್ವಿಚಕ್ರವಾಹನದಂತಹ ವಸ್ತುಗಳಿಗೆ ಬೇಡಿಕೆ ತಗ್ಗುತ್ತಿದೆ.

ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದಕ್ಕೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಿದೆ. ಹಲವು ಸಬ್ಸಿಡಿಗಳನ್ನು ನೀಡಿದೆ. ಉತ್ಪಾದನೆ ಆಧರಿತ ಉತ್ತೇಜನದಂತಹ (ಪಿಎಲ್‌ಐ) ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇವ್ಯಾವುವೂ ಖಾಸಗಿ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುತ್ತಿಲ್ಲ. ಅಂದುಕೊಂಡಂತೆ ಹೆಚ್ಚಿನ ಉದ್ಯೋಗವೂ ಸೃಷ್ಟಿಯಾಗುತ್ತಿಲ್ಲ. ಹಾಗಾಗಿ, ಸರ್ಕಾರ ತನ್ನ ಕಾರ್ಪೊರೇಟ್ ನೀತಿಯ ಬಗ್ಗೆ ಮರುಚಿಂತನೆ ಮಾಡಬೇಕಾಗಿದೆ.

ನಮ್ಮಲ್ಲಿ ವ್ಯಾಪಾರ ಮಾಡುವುದಕ್ಕೆ ಪೂರಕವಾದ ವಾತಾವರಣ ರೂಪುಗೊಂಡಿದೆ ಎಂದು ಹೇಳಲಾಗುತ್ತಿದೆ. ಸಮರ್ಥನೆಗೆ ವ್ಯಾಪಾರಸ್ನೇಹಿ ಸೂಚಿಯನ್ನು ಉಲ್ಲೇಖಿಸಲಾಗುತ್ತಿದೆ. 2014ರಲ್ಲಿ ವ್ಯಾಪಾರಸ್ನೇಹಿ ಸೂಚಿಯಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ ಈಗ 63ನೇ ಸ್ಥಾನದಲ್ಲಿದೆ. ನಿಜ, ಆದರೆ ನಮಗೆ ಸ್ಪರ್ಧೆಯನ್ನು ಒಡ್ಡುತ್ತಿರುವ ವಿಯೆಟ್ನಾಂ, ಇಸ್ರೇಲ್‌ನಂತಹ ದೇಶಗಳು ನಮಗಿಂತ ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿವೆ. ಚೀನಾವನ್ನು ಹೊರಗಿಡುವ ಅಮೆರಿಕದ ನೀತಿಯಿಂದ ನಮಗಿಂತ ಆ ದೇಶಗಳಿಗೆ ಲಾಭವಾಗಬಹುದು. ಜೊತೆಗೆ ಜಾಗತಿಕವಾಗಿಯೂ ಆರ್ಥಿಕ ಬೆಳವಣಿಗೆ ದರ ಮಂದಗತಿಯಲ್ಲಿ ಇದೆ.

ಐರೋಪ್ಯ ದೇಶಗಳು ಸಂಕಟದಲ್ಲಿವೆ. ಹಾಗಾಗಿ, ಬಹುತೇಕ ದೇಶಗಳು ತಮ್ಮ ವ್ಯಾಪಾರದ ಕೊರತೆಯನ್ನು ಸರಿದೂಗಿಸಿಕೊಳ್ಳಲು ಆಮದಿನಲ್ಲಿ ಕಡಿತ ಮಾಡಿಕೊಳ್ಳುವ ಚಿಂತನೆಯಲ್ಲಿವೆ. ಅಮೆರಿಕ ಎಲ್ಲಾ ದೇಶಗಳ ಮೇಲೆ ಸುಂಕವನ್ನು ವಿಧಿಸಲು ಯೋಚಿಸುತ್ತಿದೆ. ಈ ನಡೆಗಳು ನಮ್ಮ ರಫ್ತನ್ನು ಕುಗ್ಗಿಸಬಹುದು. ಜೊತೆಗೆ ನಾವು ಎಲೆಕ್ಟ್ರಾನಿಕ್, ಆಟೊಮೊಬೈಲ್‌ನಂತಹವುಗಳ ಬಿಡಿಭಾಗಗಳಿಗೆ, ಔಷಧಿಗಳಿಗೆ ಚೀನಾವನ್ನು ನೆಚ್ಚಿಕೊಂಡಿದ್ದೇವೆ. ಹಾಗಾಗಿ, ಬದಲಾಗುತ್ತಿರುವ ಜಾಗತಿಕ ರಾಜಕೀಯ ವಾತಾವರಣ ದಲ್ಲಿ ನಾವು ತೀರಾ ಎಚ್ಚರದಿಂದ ಇರಬೇಕಾಗುತ್ತದೆ.

ಬೇಡಿಕೆಯನ್ನು ತಗ್ಗಿಸುವಲ್ಲಿ ಹಣದುಬ್ಬರದ ಪಾತ್ರವೂ ಇದೆ. ಭಾರತದಲ್ಲಿನ ಸದ್ಯದ ಹಣದುಬ್ಬರಕ್ಕೆ ಆಹಾರ ಪದಾರ್ಥಗಳ ಬೆಲೆ ಏರಿಕೆ ಬಹುಮಟ್ಟಿಗೆ ಕಾರಣ. ಹೀಗಾಗಿ, ಬೇರೆ ವಸ್ತುಗಳನ್ನು ಕೊಳ್ಳುವುದಕ್ಕೆ ಜನರಿಗೆ ಕಷ್ಟವಾಗುತ್ತದೆ. ಆಹಾರ ಪದಾರ್ಥಗಳ ಬೆಲೆಯನ್ನು ರಿಸರ್ವ್‌ ಬ್ಯಾಂಕಿನ ಹಣಕಾಸು ನೀತಿಯಿಂದ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ. ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಬೇಕಾಗುತ್ತದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮ ನೀತಿ–ನಿಲುವುಗಳು ಮರುಚಿಂತನೆಗೆ ಒಳಗಾಗಬೇಕು. ಕೃಷಿಯ ಮೇಲೆ ತುಂಬಾ ಒತ್ತಡವಿದೆ. ಉದ್ಯೋಗಕ್ಕೂ ಹೆಚ್ಚೆಚ್ಚು ಜನ ಕೃಷಿಯನ್ನು ಆಧರಿಸುತ್ತಿದ್ದಾರೆ. ಪಿಎಲ್‌ಐನಂತಹ ಯೋಜನೆಗಳಿಂದ ಕೃಷಿಗೆ ಅನುಕೂಲವಾಗಬಹುದೇನೊ.

ನಮ್ಮ ಮುಂದಿರುವ ಸವಾಲು ಬರೀ ಆರ್ಥಿಕತೆಯನ್ನು ಬೆಳೆಸುವುದಲ್ಲ, ಅದರ ಫಲವನ್ನು ಕಟ್ಟಕಡೆಯ ಮನುಷ್ಯನಿಗೂ ತಲುಪಿಸುವುದು. ಶಿಕ್ಷಣ, ಆರೋಗ್ಯದಂತಹ ಜನಕಲ್ಯಾಣ ಕಾರ್ಯಕ್ರಮಗಳಿಗಾಗಿ
ಹಣ ತೊಡಗಿಸುವುದು ಮುಖ್ಯ. ಆದರೆ, ಅನುದಾನ ಒದಗಿಸಿದರಷ್ಟೇ ಸಾಲದು, ಯೋಜನೆಗಳು ಪರಿಣಾಮ
ಕಾರಿಯಾಗಿ ಜಾರಿಯಾಗಬೇಕು. ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಿದರೆ ಸಾಲುವುದಿಲ್ಲ, ಅವರ ಕಲಿಕೆಯ ಗುಣಮಟ್ಟವೂ ಹೆಚ್ಚಬೇಕು. ಆದರೆ ಐದನೇ ತರಗತಿ ಓದಿದ ಶೇ 50ರಷ್ಟು ಮಕ್ಕಳಿಗೆ ಓದುವ ಸಾಮರ್ಥ್ಯ ದಕ್ಕಿಲ್ಲ. ಆರೋಗ್ಯ, ಕಾನೂನು ಸೇರಿದಂತೆ ಬಹುತೇಕ ವಿಷಯಗಳಿಗೂ ಇದು ಅನ್ವಯವಾಗುತ್ತದೆ.

ಇವೆಲ್ಲಾ ಸಾಧ್ಯವಾಗಬೇಕಾದರೆ ಸರ್ಕಾರಿ ಸಂಸ್ಥೆಗಳು ಹೆಚ್ಚು ಸಶಕ್ತವೂ ಸ್ವಾಯತ್ತವೂ ಆಗಬೇಕು. ಆರೋಗ್ಯ ಸೇವೆ, ಶಿಕ್ಷಣ ಇವೆಲ್ಲಾ ಪರಿಣಾಮಕಾರಿಯಾದರೆ ಜನರ ಕೌಶಲ ಹೆಚ್ಚುತ್ತದೆ, ಉದ್ಯೋಗಾವಕಾಶಗಳು ಹೆಚ್ಚುತ್ತವೆ, ಆರ್ಥಿಕತೆಯೂ ಸುಧಾರಿಸುತ್ತದೆ, ಜನರ ಬದುಕೂ ಉತ್ತಮಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.