ADVERTISEMENT

ಕ್ರೆಡಿಟ್ ಕಾರ್ಡ್ ಜೇಬಿಗಿಳಿಸುವ ಮುನ್ನ

ಕ್ಲಿಯೋನ್ ಡಿಸೋಜ
Published 18 ಆಗಸ್ಟ್ 2019, 20:15 IST
Last Updated 18 ಆಗಸ್ಟ್ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ರೆಡಿಟ್ ಕಾರ್ಡ್ ಬಳಸುವುದು, ಸಾಲ ಮಾಡುವುದು ಎರಡು ಕೂಡ ಒಂದೇ ಎಂಬ ಅಭಿಪ್ರಾಯವಿರುವ ಕಾರಣ ಅನೇಕರು ಕ್ರೆಡಿಟ್ ಕಾರ್ಡ್ ನಿಂದ ದೂರ ಉಳಿಯುತ್ತಾರೆ. ಆದರೆ, ಜಾಣ್ಮೆಯಿಂದ ಬಳಸಿದರೆ ಕ್ರೆಡಿಟ್ ಕಾರ್ಡ್ ನಿಮ್ಮ ಪಾಲಿಗೆ ಉಪಯುಕ್ತ ಸಾಧನವಾಗುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ನೀವು ಮೊದಲ ಬಾರಿಗೆ ಪಡೆದುಕೊಂಡು ಬಳಸುತ್ತಿದ್ದರೆ ಕೆಲ ಸಂಗತಿಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ.

ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂ ನಲ್ಲಿ ಹಣ ತೆಗೆಯಬೇಡಿ: ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಹಣ ತೆಗೆಯುವುದು ಅತಿ ದೊಡ್ಡ ತಪ್ಪು. ಕ್ರೆಡಿಟ್ ಕಾರ್ಡ್ ಅನ್ನು ತಕ್ಷಣಕ್ಕೆ ನಗದು ಪಡೆಯಲು ಡೆಬಿಟ್ ಕಾರ್ಡ್‌ನಂತೆ ಬಳಸಲು ಸಾಧ್ಯವಿಲ್ಲ. ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಹಣ ತೆಗೆದ ಕೂಡಲೇ ಬಡ್ಡಿ ಅನ್ವಯವಾಗುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಬಳಕೆ ಮಾಡಿದಾಗ ಗ್ರೇಸ್ ಪಿರಿಯಡ್‌ನಲ್ಲಿ ಅದಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ. ಆದ್ದರಿಂದ ಎಚ್ಚರಿಕೆಯಿಂದ ಕ್ರೆಡಿಟ್ ಕಾರ್ಡ್ ಬಳಸಬೇಕು.

ರಿಯಾಯ್ತಿ ಅವಧಿ ಬಳಸಿಕೊಳ್ಳಿ: ಬಹುತೇಕ ಕ್ರೆಡಿಟ್ ಕಾರ್ಡ್‌ಗಳು ಗ್ರೇಸ್ ಪಿರಿಯಡ್ (ರಿಯಾಯಿತಿ ಅವಧಿ) ನೊಂದಿಗೆ ಬರುತ್ತವೆ. ಗ್ರೇಸ್ ಪಿರಿಯಡ್ ಅಂದರೆ ಕ್ರೆಡಿಟ್ ಕಾರ್ಡ್ ಬಳಸಿ ಖರ್ಚು ಮಾಡಿರುವ ಹಣದ ಮರುಪಾವತಿಗೆ ನೀಡುವ ಅವಧಿ. ಸಾಮಾನ್ಯವಾಗಿ 50 ದಿನಗಳ ಗ್ರೇಸ್ ಪಿರಿಯಡ್ ಅನ್ನು ನೀಡಲಾಗುತ್ತದೆ. ಉದಾಹರಣೆಗೆ ಪ್ರತಿ ತಿಂಗಳ 15 ನೇ ತಾರೀಕು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಆರಂಭವಾದರೆ, ಅಂದಿನಿಂದ 50 ದಿನಗಳ ವರೆಗೆ ನಿಮಗೆ ಗ್ರೇಸ್ ಪಿರಿಯಡ್ ಅನ್ವಯಿಸಲಿದೆ. ಗ್ರೇಸ್ ಪಿರಿಯಡ್‌ನ ಒಳಗಾಗಿ ಬಿಲ್ ಪಾವತಿಸಿದರೆ ಯಾವುದೇ ಬಡ್ಡಿ ಪಾವತಿಸುವ ಅಗತ್ಯವಿಲ್ಲ. ಇಷ್ಟೇ ಅಲ್ಲದೆ, ನೀವು ನಿಗದಿತ ಅವಧಿಗೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುತ್ತಾ ಬಂದಲ್ಲಿ ಕ್ರೆಡಿಟ್ ಸ್ಕೋರ್ (ಸಾಲದ ಋಣ ಚರಿತ್ರೆ) ಮೇಲೆ ಸಹ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ.

ADVERTISEMENT

ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ: ಕ್ರೆಡಿಟ್ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ, ಉಚಿತವಾಗಿ ನೀಡುತ್ತಿದ್ದೇವೆ ಎಂದರೆ ನಂಬಬೇಡಿ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್‌ಗಳಿಗೆ ಸೇರ್ಪಡೆ ಶುಲ್ಕ, ವಾರ್ಷಿಕ ಶುಲ್ಕ ಮತ್ತು ವಿಳಂಬ ಪಾವತಿ ಶುಲ್ಕಗಳು ಅನ್ವಯಿಸುತ್ತವೆ. ಬಹುತೇಕ ಕ್ರೆಡಿಟ್ ಕಾರ್ಡ್‌ಗಳಿಗೆ ಇದೇ ಮಾನದಂಡವಿದೆ. ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಮತ್ತು ಕ್ರೆಡಿಟ್ ಕಾರ್ಡ್‌ನ ಮಾದರಿ ಮತ್ತು ಮಿತಿಗಳಿಗೆ ಅನುಗುಣವಾಗಿ ಶುಲ್ಕಗಳಲ್ಲಿ ವ್ಯತ್ಯಾಸವಿರುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಖರೀದಿಸುವ ಮುನ್ನ ಈ ಬಗ್ಗೆ ಅರಿತುಕೊಳ್ಳಿ.

ಪುರಸ್ಕಾರ ಅಂಕ: ಇದರ ಜತೆಗೆ ಕ್ರೆಡಿಟ್ ಕಾರ್ಡ್ ಬಳಕೆಗೆ ಸಿಗುವ ರಿವಾರ್ಡ್ ಪಾಯಿಂಟ್ಸ್ (ಪ್ರತಿಫಲ ಅಂಕಗಳು) ಬಗ್ಗೆಯೂ ನಿಮಗೆ ಗೊತ್ತಿರಬೇಕು. ರಿವಾರ್ಡ್ ಪಾಯಿಂಟ್ಸ್‌ಗಳಿಂದ ನಿಮಗೆ ಕೆಲ ರಿಯಾಯಿತಿಗಳು ದೊರೆಯುತ್ತವೆ. ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಕಂಪನಿಗಳು ಸಂಪೂರ್ಣವಾಗಿ ಮನ್ನಾ ಮಾಡುತ್ತವೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಎನ್ನುವುದು ಗೊತ್ತಿರಲಿ.

ಅತಿಯಾದ ಖರೀದಿ ಬೇಡ: ಕ್ರೆಡಿಟ್ ಕಾರ್ಡ್ ಸಿಕ್ಕ ಖುಷಿಯಲ್ಲಿ ಅನೇಕರು ಅತಿಯಾದ ಕೊಳ್ಳುಬಾಕತನಕ್ಕೆ ಬೀಳುತ್ತಾರೆ. ಕ್ರಮೇಣ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲಾಗದೆ ಸಾಲದ ಸುಳಿಗೆ ಸಿಲುಕುತ್ತಾರೆ.

ಆದ್ದರಿಂದ ತುರ್ತು ಅಗತ್ಯಗಳು ಮತ್ತು ಆರ್ಥಿಕ ಇತಿಮಿತಿಗಳನ್ನು ಅರಿತು ಕ್ರೆಡಿಟ್ ಕಾರ್ಡ್ ಬಳಸುವ ಜಾಣ್ಮೆ ನಿಮಗಿರಬೇಕು. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ವಿಳಂಬವಾದರೆ ಬ್ಯಾಂಕ್‌ಗಳು ಶೇ 22 ರಿಂದ ಶೇ 48 ರ ವರೆಗೆ ಬಡ್ಡಿ ನಿಗದಿ ಮಾಡಬಹುದು ಎನ್ನುವುದನ್ನು ನೆನಪಿಡಿ.

ಸಿಗದ ಭರವಸೆ: ಕುಸಿದ ಪೇಟೆ
ಆರ್ಥಿಕತೆಗೆ ಬಲತುಂಬುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಘೋಷಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ಮತ್ತೆ ನಿರಾಸೆಯಾಗಿದೆ. ಇದರ ಪರಿಣಾಮವಾಗಿ ಷೇರುಪೇಟೆ ಸೂಚ್ಯಂಕಗಳು ಈ ವಾರವೂ ಕುಸಿತ ಕಂಡಿವೆ. 37,350 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್, ವಾರದ ಅವಧಿಗೆ ಶೇ 0.61 ರಷ್ಟು ಕುಸಿದಿದೆ. ನಿಫ್ಟಿ (50) 11,048 ರಲ್ಲಿ ವಹಿವಾಟು ಪೂರ್ಣಗೊಳಿಸಿದ್ದು, ಶೇ 0.56 ರಷ್ಟು ಕುಸಿತ ದಾಖಲಿಸಿದೆ.

ಸೆನ್ಸೆಕ್ಸ್‌ನ ಸಣ್ಣ ಶ್ರೇಣಿಯ ಸೂಚ್ಯಂಕ ಶೇ 0.91 ರಷ್ಟು ಹಿನ್ನಡೆ ಅನುಭವಿಸಿದ್ದು, ಮಧ್ಯಮ ಶ್ರೇಣಿಯ ಸೂಚ್ಯಂಕ ಶೇ 1.32 ರಷ್ಟು ಕುಸಿದಿದೆ. ಸೆನ್ಸೆಕ್ಸ್‌ನ ಸಣ್ಣ ಶ್ರೇಣಿಯಲ್ಲಿ ಸುಮಾರು 48 ಕಂಪನಿಗಳ ಷೇರುಗಳು ಶೇ 10 ರಿಂದ ಶೇ 30 ರಷ್ಟು ಇಳಿಕೆ ಕಂಡಿವೆ.

ವಲಯವಾರು: ವಲಯವಾರು ಪ್ರಗತಿಯಲ್ಲಿ ಈ ವಾರ ಮಿಶ್ರ ಫಲ ಸಿಕ್ಕಿದೆ. ನಿಫ್ಟಿ ಫಾರ್ಮಾ ಶೇ 3 ರಷ್ಟು ಗರಿಷ್ಠ ಕುಸಿತ ಕಂಡಿದ್ದು, ಐಟಿ ವಲಯ ಶೇ 2.9 ರಷ್ಟು ಕುಸಿದಿದೆ. ವಾಹನ ವಲಯ ಶೇ 1.9 ರಷ್ಟು ಹಿನ್ನಡೆ ಕಂಡಿದ್ದರೆ, ಹಣಕಾಸು ವಲಯ ಶೇ 1.8 ರಷ್ಟು ತಗ್ಗಿದೆ. ನಿಫ್ಟಿ ಎನರ್ಜಿ ಮತ್ತು ಮಾಧ್ಯಮ ವಲಯಗಳು ಕ್ರಮವಾಗಿ ಶೇ 3.1 ಮತ್ತು ಶೇ 1.4 ರಷ್ಟು ಹೆಚ್ಚಳ ಕಂಡಿವೆ.

ಗಳಿಕೆ: ಆಧಾರರಹಿತವಾಗಿ ಇಂಡಿಯಾ ಬುಲ್ಸ್ ವಿರುದ್ಧ ಕೇಸು ದಾಖಲಿಸಿರುವುದಾಗಿ ಮ್ಯಾನೇಗಿಯಂ ಲಾ ಫರ್ಮ್ ಸಾರ್ವಜನಿಕವಾಗಿ ಒಪ್ಪಿಕೊಂಡ ಕಾರಣದಿಂದಾಗಿ ವಾರದ ಅವಧಿಯಲ್ಲಿ ಇಂಡಿಯಾ ಬುಲ್ಸ್ ಹೌಸಿಂಗ್ ಶೇ 11 ರಷ್ಟು ಏರಿಕೆ ದಾಖಲಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ಸಭೆಯಲ್ಲಿ ಬೃಹತ್ ಘೋಷಣೆಗಳು ಮತ್ತು ಜಿಯೊ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸಿದ ಕಾರಣ ಕಂಪನಿ ಷೇರುಗಳು ಶೇ 10 ರಷ್ಟು ಏರಿಕೆ ಕಂಡಿವೆ. ಉತ್ತಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ ಪರಿಣಾಮ ಗೇಲ್ ಶೇ 3.7 ರಷ್ಟು ಹೆಚ್ಚಳವಾಗಿದೆ. ಉಳಿದಂತೆ ಜೀ ಶೇ 5.3, ಪವರ್ ಗ್ರಿಡ್ ಶೇ 4.5 ಮತ್ತು ಯುಪಿಎಲ್ ಶೇ 2.9 ರಷ್ಟು ಗಳಿಸಿವೆ.

ಇಳಿಕೆ: ವಾಹನ ತಯಾರಿಕಾ ವಲಯದಲ್ಲಿ ಹಿಂಜರಿಕೆ ಹೆಚ್ಚಳವಾಗಿರುವ ಪರಿಣಾಮ ಐಷರ್ ಮೋಟರ್ಸ್ ಶೇ 5.6 ರಷ್ಟು ಕುಸಿದಿದೆ. ತ್ರೈಮಾಸಿಕ ಫಲಿತಾಂಶದಲ್ಲಿ ಸಾಧಾರಣ ಪ್ರಗತಿ ದಾಖಲಿಸಿದ ಪರಿಣಾಮ ಎನ್‌ಟಿಪಿಸಿ ಶೇ 5 ರಷ್ಟು ತಗ್ಗಿದೆ. ವಿಪ್ರೊ ಶೇ 5.3, ಎಚ್‌ಡಿಎಫ್‌ಸಿ ಶೇ 5 ಮತ್ತು ಯೆಸ್ ಬ್ಯಾಂಕ್ ಶೇ 4.4 ರಷ್ಟು ಕುಸಿತ ದಾಖಲಿಸಿವೆ.

ಮುನ್ನೋಟ: ನಿರಾಶಾದಾಯಕ ತ್ರೈಮಾಸಿಕ ಫಲಿತಾಂಶಗಳು, ಆರ್ಥಿಕ ಚೇತರಿಕೆಗೆ ಸಿಗದ ಬಲ, ವಿದೇಶಿ ಹೂಡಿಕೆದಾರರಿಗೆ ತೆರಿಗೆ ವಿನಾಯ್ತಿ ಘೋಷಣೆ ಬಗ್ಗೆ ಸರ್ಕಾರದ ಮೌನ ಸೇರಿ ಇನ್ನಿತರ ಅಂಶಗಳಿಂದ ಪೇಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಳವಾಗಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನಾ ನಡುವಣ ವ್ಯಾಪಾರ ಬಿಕ್ಕಟ್ಟು ಸಹ ಸೂಚ್ಯಂಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ತ್ರೈಮಾಸಿಕ ಫಲಿತಾಂಶಗಳ ಪರ್ವ ಮುಗಿದಿರುವುದರಿಂದ ಪೇಟೆಯಲ್ಲಿ ಸದ್ಯದ ಮಟ್ಟಿಗೆ ಹೊಸ ಬೆಳವಣಿಗೆಗಳಿಲ್ಲ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯ ನಡೆಯತ್ತ ಚಿತ್ತಹರಿಸಬೇಕು.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.