ADVERTISEMENT

ವಿಶ್ಲೇಷಣೆ | ವಲಸೆಯ ಸುಳಿಯಲ್ಲಿ ದೇಶಪ್ರೀತಿ

ಕ್ಯಾಪ್ಟನ್‍ ಗೋಪಿನಾಥ್‍
Published 17 ಅಕ್ಟೋಬರ್ 2025, 23:30 IST
Last Updated 17 ಅಕ್ಟೋಬರ್ 2025, 23:30 IST
   

ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಭ್ರಮನಿರಸನಗೊಂಡ ನಮ್ಮ ಯುವಕರು ಪಶ್ಚಿಮವನ್ನೇ ತಮ್ಮ ನೆಲೆಯನ್ನಾಗಿಸಿಕೊಳ್ಳಲು ಆರಂಭಿಸಿದರು. 1960ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭವಾದ ಈ ವಲಸೆ ಅನಂತರದಲ್ಲಿ ಅಮೆರಿಕದ ಶ್ರೀಮಂತ ವೈದ್ಯರು ಮತ್ತು ಎಂಜಿನಿಯರ್‌ಗಳ ಯಶಸ್ವಿ ಕಥೆಗಳ ಜೊತೆ ಜೊತೆಗೇ ಹೆಚ್ಚುತ್ತಹೋಯಿತು.

ಪೆಪ್ಸಿ ಕಂಪನಿಯ ಇಂದಿರಾ ನೂಯಿ, ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೊಸಾಫ್ಟ್‌ನ ಸತ್ಯ ನಾಡೆಲ್ಲಾ ಮತ್ತು ಇತರರ ಹೆಜ್ಜೆಗಳನ್ನು ಅನುಸರಿಸಿ ಈಗ ಫಾರ್ಚೂನ್ 500 ಕಂಪನಿಯ ಸಿಇಒ ಆಗಿ ಮತ್ತೊಬ್ಬ ಭಾರತೀಯ ನೇಮಕಗೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗ ಅಮೆರಿಕದಲ್ಲಿ ಭಾರತೀಯರ ಬಗ್ಗೆ ಉಕ್ಕಿ ಹರಿದ ಪ್ರಶಂಸೆಗಳೇ ಕೇಳಿಬಂದವು. ಇದರಿಂದ ಉಂಟಾದ ವಲಸೆಯು ಅನಂತರದಲ್ಲಿ ಪ್ರವಾಹವಾಗಿಯೇ ಮಾರ್ಪಟ್ಟಿತು. ಕಳೆದ ಐದು ದಶಕಗಳಿಂದ ನಿರಂತರವಾಗಿ ನಾವು ಭಾರತೀಯ ಪ್ರತಿಭೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹೀಗೆ ಹೊರಹೊರಟ ಯುವಕ–ಯುವತಿಯರು ತುಂಬ ಪ್ರತಿಭಾನ್ವಿತರು; ಮಾತ್ರವಲ್ಲ, ಅವರೆಲ್ಲರೂ ನಮ್ಮ ಪ್ರತಿಷ್ಠಿತ ಸಂಸ್ಥೆಗಳಿಂದ ಸಬ್ಸಿಡಿ ರೂಪದಲ್ಲಿ ಶಿಕ್ಷಣ ಪಡೆದುಕೊಂಡು ವಲಸೆ ಹೋದವರು.

ಇದೀಗ ‘ಟ್ರಂಪ್ ಶಾಕ್‌’! ಎಚ್‌-1ಬಿ ಉದ್ಯೋಗ ವೀಸಾವನ್ನು ಬಯಸುವ ಹೊಸ ಅರ್ಜಿದಾರರಿಗೆ ಈಗ ಒಂದು ಲಕ್ಷ ಡಾಲರ್‌ ಶುಲ್ಕ ವಿಧಿಸಲಾಗಿದೆ. ಯಾವುದೇ ಸೂಚನೆಯಿಲ್ಲದೆ ಕೆಲವು ವಾರಗಳ ಹಿಂದೆಯಷ್ಟೇ ಜಾರಿಗೆ ಬಂದ ವ್ಯವಸ್ಥೆ ಒಂದು ವಿಧದಲ್ಲಿ ಅವ್ಯವಸ್ಥೆಯನ್ನೇ ಸೃಷ್ಟಿಸಿತು. ಇನ್ನೇನು ಇಲ್ಲಿಂದ ವಿಮಾನವನ್ನು ಹತ್ತಿ ಹೊರಡಲು ಸಿದ್ಧರಾಗಿದ್ದವರನ್ನು ಕಂಗಾಲಾಗಿಸಿತು; ಈಗಾಗಲೇ ವೀಸಾವನ್ನು ಹೊಂದಿರುವವರನ್ನೂ ಆತಂಕಕ್ಕೆ ದೂಡಿತು. ಅಮೆರಿಕದ ಅಧ್ಯಕ್ಷ, ಯಾರ ಊಹೆಗೂ ನಿಲುಕದಂಥ ವ್ಯಕ್ತಿತ್ವದ ಡೊನಾಲ್ಡ್‌ ಟ್ರಂಪ್‌ ಆಳ್ವಿಕೆಯಲ್ಲಿ ಇವರೆಲ್ಲರೂ ಅನಿಶ್ಚಿತ ಸ್ಥಿತಿಯಲ್ಲಿದ್ದಾರೆ. ಅಮೆರಿಕ ಎಂಬ ಕುಬೇರಲೋಕವನ್ನು ಕುರಿತಾದ ಇವರೆಲ್ಲರ ಹತಾಶೆ–ಆಕರ್ಷಣೆಗಳ ಬಗ್ಗೆ ನನಗೆ ಅತೀವ ಸಂಕಟವಾಗುತ್ತಿದೆ.

ADVERTISEMENT

ಲಕ್ಷಾಂತರ ವಲಸೆ ಕಾರ್ಮಿಕರು ನಮ್ಮಲ್ಲಿದ್ದಾರೆ. ಅನೇಕರು ಅರಬ್ ರಾಷ್ಟ್ರಗಳಲ್ಲಿ ಕಟ್ಟಡ ನಿರ್ಮಾಣದ ಕೆಲಸಗಾರರಾಗಿ, ತೈಲಬಾವಿಗಳ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ನರ್ಸ್‌ಗಳು, ಹೋಟೆಲ್‌
ಕಾರ್ಮಿಕರು – ಹೀಗೆ ನಾನಾ ರೀತಿಯ ದುಡಿತಗಳಲ್ಲಿ ತೊಡಗಿಕೊಂಡಿದ್ದಾರೆ. ವೈದ್ಯರು–ಎಂಜಿನಿಯರ್‌ಗಳಾಗಿರುವವರೂ ಉದ್ಯಮಿಗಳಾಗಿರುವವರೂ ಇದ್ದಾರೆ. ಸ್ಥಳೀಯ ಅರಬ್ಬರ ಸಂಖ್ಯೆಗಿಂತಲೂ ಹೆಚ್ಚಾಗಿರುವ ಈ ಕಾರ್ಮಿಕರು ಆ ದೇಶಗಳ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. 

ಭಾರತದ ಹೊರಗೆ ಅವಕಾಶಗಳನ್ನು ಹುಡುಕುತ್ತಿರುವ ಅಕ್ರಮ ವಲಸಿಗರೂ ಇದ್ದಾರೆ; ಆದರೆ, ಹೆಚ್ಚುತ್ತಲೇ ಇರುವ ಈ ವರ್ಗವನ್ನು ದೇಶದ ಆರ್ಥಿಕತೆಯ ಭಾಗವಾಗಿಸಿಕೊಳ್ಳಲು ಸಾಧ್ಯವಾಗದಿರುವುದು ವಿಷಾದಕರ. ಇವರು ಕಪಟ ಏಜೆಂಟ್‌ಗಳ ಮೋಸದ ಜಾಲಕ್ಕೆ ಬಲಿಯಾಗುತ್ತಾರೆ. ಅಮೆರಿಕಕ್ಕೋ ಕೆನಡಾಕ್ಕೋ ಯುರೋಪಿಗೋ ಅಕ್ರಮವಾಗಿ ನುಸುಳಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನದಲ್ಲಿ ಕೆಲವರು ಸಾವಿಗೆ ತುತ್ತಾಗುತ್ತಾರೆ; ಹಲವರು ಜೈಲು ಪಾಲಾಗುತ್ತಾರೆ; ಇನ್ನು ಕೆಲವರು ಗಡಿಪಾರಿಗೆ ಒಳಗಾಗುತ್ತಾರೆ.

ನಮ್ಮಲ್ಲಿ ಇನ್ನೊಂದು ವರ್ಗವಿದೆ; ಗುಜರಾತ್‌ನ ವ್ಯಾಪಾರಿ ಸಮುದಾಯ. ಮೊದಲು ಆಫ್ರಿಕಾದಲ್ಲಿ ನೆಲೆಸಿ, ನಂತರ ಅಲ್ಲಿಂದ ಹೊರದೂಡಲ್ಪಟ್ಟು, ಬ್ರಿಟನ್ ಮತ್ತು ಅಮೆರಿಕದಲ್ಲಿ ನೆಲೆ ಕಂಡುಕೊಂಡವರು. ಇವರು ಉದ್ಯಮಶೀಲರು, ಪರಿಶ್ರಮಿಗಳು; ‘ಪಟೇಲ್ಸ್‌ ಮೋಟೆಲ್’ಗಳ ಹೆಸರಿನಲ್ಲಿ ಹೆದ್ದಾರಿ ಹೋಟೆಲ್‌ ಉದ್ಯಮದಲ್ಲಿ ಏಕಸ್ವಾಮ್ಯವನ್ನೇ ಸಾಧಿಸಿದ್ದಾರೆ.

ಸುಮಾರು ಒಂದು ಶತಮಾನದ ಹಿಂದೆ ಪಶ್ಚಿಮಕ್ಕೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದ ಹಲವರು ಭಾರತೀಯರು ಆ ದೇಶಗಳಲ್ಲಿಯ ಲಾಭದಾಯಕ ವೃತ್ತಿಜೀವನವನ್ನು ತ್ಯಜಿಸಿ, ಭಾರತಕ್ಕೆ ಮರಳಿದರು; ಅಲ್ಲಿಯೇ ಉಳಿಯುವ ಪ್ರಲೋಭನೆಗೂ ಅವರು ಸೋಲಲಿಲ್ಲ. ಅಂಥವರು ಭಾರತದ ಅತ್ಯಂತ ಕರಾಳ ಕಾಲದಲ್ಲಿಯೂ ಹಾಗೆಯೇ ನಡೆದುಕೊಂಡರು; ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಗಳಿಸಲು ಹೋರಾಡಿದವರಿಗೂ, ಬಡತನ, ಅಜ್ಞಾನ, ಸಾಮಾಜಿಕ ಅನಿಷ್ಟಗಳು ಮತ್ತು ಅನ್ಯಾಯಗಳನ್ನು ತೊಡೆದುಹಾಕಲು ಶ್ರಮಿಸಿದ ಅಸಂಖ್ಯಾತ ಜನರಿಗೂ ಸ್ಫೂರ್ತಿಯಾದರು. ಅವರು ಕಂಡ ಭಾರತವೂ ಇತರರು ಕಂಡ ಭಾರತವೇ ಆಗಿತ್ತು. ಆದರೆ, ಅವರು ಬೇರೆಡೆ ಅವಕಾಶಗಳು ಕಾಣಿಸಿದ ಕೂಡಲೇ ಭಾರತವನ್ನು ಜರಿದು, ಹೊರದೇಶದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಮುಂದಾಗದೆ, ಸ್ವದೇಶವನ್ನು ಉತ್ತಮಗೊಳಿಸಲು ಪ್ರಯತ್ನಿಸಿದರು. ಅವರ ತ್ಯಾಗ ಪ್ರಶಂಸಾರ್ಹ.

ದಕ್ಷಿಣ ಆಫ್ರಿಕಾದಲ್ಲಿ ಲಾಭದಾಯಕ ಕಾನೂನು ವೃತ್ತಿಯಲ್ಲಿದ್ದ ಗಾಂಧಿಯವರು ಭಾರತಕ್ಕೆ ಮರಳಿದ್ದು ಎಲ್ಲರಿಗೂ ತಿಳಿದಿದೆ. ಅಂಬೇಡ್ಕರ್ ಅವರು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ – ಈ ಎರಡು ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದರು. ಮುಂದೆ ನಮ್ಮ ಸಂವಿಧಾನದ ಶಿಲ್ಪಿ ಎನಿಸಿಕೊಂಡರು. ಜವಾಹರಲಾಲ್ ನೆಹರೂ, ಹ್ಯಾರೋ ಮತ್ತು ಕೇಂಬ್ರಿಡ್ಜ್‌ನಲ್ಲಿ ಶಿಕ್ಷಣ ಪಡೆದು ಇನ್ನರ್ ಟೆಂಪಲ್‌ನಲ್ಲಿ ಕಾನೂನು ತರಬೇತಿಯನ್ನು ಪಡೆದ ನಂತರ ಬ್ಯಾರಿಸ್ಟರ್ ಆಗಿ, ಕೊನೆಗೆ ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ಸೇರಲು ಭಾರತಕ್ಕೆ ಹಿಂದಿರುಗಿದರು. ಕೇಂಬ್ರಿಡ್ಜ್‌ನಿಂದ ಹಿಂದಿರುಗಿದ ಬೋಸ್ ಕಾಂಗ್ರೆಸ್‌ನಲ್ಲಿ ಮತ್ತು ನಂತರ ಆಜಾದ್ ಹಿಂದ್ ಫೌಜ್‌ನಲ್ಲಿ ವಹಿಸಿದ ಧೈರ್ಯಶಾಲಿ ನಾಯಕತ್ವದ ಕಥೆ ರೋಮಾಂಚನಕಾರಿಯಾಗಿದೆ. ಸರ್ದಾರ್ ಪಟೇಲ್ ಹಣವನ್ನು ಕೂಡಿಟ್ಟು ಲಂಡನ್‌ಗೆ ಹೋದವರು; ಮಿಡಲ್ ಟೆಂಪಲ್ ಇನ್‌ನಲ್ಲಿ ಕಾನೂನು ತರಬೇತಿ ಪಡೆದು ಬ್ಯಾರಿಸ್ಟರ್ ಆದರು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಸೇರಲು ಭಾರತಕ್ಕೆ ಹಿಂದಿರುಗಿದರು. ಕೇಂಬ್ರಿಡ್ಜ್‌ನಿಂದ ಹಿಂದಿರುಗಿದ ಅರವಿಂದ ಘೋಷ್ ಕ್ರಾಂತಿಕಾರರಾದರು; ಯೋಗಿಗಳಾದರು. ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಕೇಂಬ್ರಿಡ್ಜ್‌ಗಳ ವಿದ್ಯಾರ್ಥಿನಿ ‘ಭಾರತದ ಕೋಗಿಲೆ’ ಸರೋಜಿನಿ ನಾಯ್ಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡರು. ಲಿಂಕನ್ಸ್ ಇನ್‌ನಿಂದ ಪದವಿಯನ್ನು ಪಡೆದ ಶ್ಯಾಮ ಪ್ರಸಾದ್ ಮುಖರ್ಜಿ ಬ್ಯಾರಿಸ್ಟರ್ ಆದವರು, ಹಿಂದೂ ಮಹಾಸಭಾವನ್ನು ಮುನ್ನಡೆಸಿದರು; ಗಾಂಧಿಯವರ ಹತ್ಯೆಯ ನಂತರ ಅದರಿಂದ ದೂರ ಸರಿದರು, ನೆಹರೂ ಸಂಪುಟದಲ್ಲಿ ಸಚಿವರಾದರು. ಬಳಿಕ ರಾಜೀನಾಮೆ ನೀಡಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು.

ಇವರೆಲ್ಲರ ಜೀವನ–ಹೋರಾಟಗಳು, ಸಂಕಲ್ಪಶಕ್ತಿ, ಸಮಾಜ ಸುಧಾರಣೆಯ ಉತ್ಸಾಹ ಮತ್ತು ಅಕ್ಷಯ ಆಶಾವಾದ, ದೇಶಪ್ರೀತಿಗಳು ಚೇತೋಹಾರಿಯಾಗಿವೆ. ಬ್ರಿಟಿಷರ ದಬ್ಬಾಳಿಕೆಯ ಕರಾಳ ಅವಧಿಯಲ್ಲಿ ಆಂತರಿಕ ಕಲಹಗಳಿಂದ ದೇಶ ಛಿದ್ರಗೊಂಡಿದ್ದಾಗ, ಜಾತೀಯತೆ–ಕೋಮುವಾದಗಳ ಸುಳಿಯಲ್ಲಿದ್ದಾಗ, ಬಡತನದಲ್ಲಿ ಮುಳುಗಿದ್ದ ಜನರಿಗಾಗಿ ವಿದೇಶಗಳಿಂದ ಇವರು ಮರಳಿದರು; ಪೆಟ್ಟು–ಬುಲೆಟ್ಟುಗಳನ್ನು ಎದುರಿಸಿದರು; ಜೈಲುವಾಸ ಅನುಭವಿಸಿದರು. ಈ ಅಸಾಧಾರಣ ವ್ಯಕ್ತಿಗಳು ನಮ್ಮ ಸಮಾಜದ ಕೇಡುಗಳನ್ನು ಸರಿಪಡಿಸುವ ಕಾಯಕದಲ್ಲಿ ತೊಡಗಿದರು. ಅವಕಾಶಗಳ ಕೊರತೆ, ಜಾತಿವಾದ ಮತ್ತು ದೋಷಪೂರಿತ ಮೀಸಲಾತಿ ವ್ಯವಸ್ಥೆ, ಸಾಮಾಜಿಕ ಮತ್ತು ಕೋಮು ಕಲಹಗಳು, ಭ್ರಷ್ಟಾಚಾರ ಮತ್ತು ಅರ್ಹತೆಗೆ ತಕ್ಕ ಫಲ ನೀಡದ ಸಮಾಜ – ಇಂಥವು ಈಗ ದೇಶವನ್ನು ತೊರೆದು ಅಮೆರಿಕವನ್ನು ಸೇರಲು ಬಯಸುತ್ತಿರುವವರಿಗೆ ಕಾರಣವಾಗುತ್ತಿವೆ ಎಂಬುದು ಆತಂಕದ ವಿಷಯ.

ನಮ್ಮ ಯುವಜನರು ನಮ್ಮ ಸಮಾಜದ ಸಮಸ್ಯೆಗಳಿಗೆ ವಿಮುಖರಾಗಿ ಪಶ್ಚಿಮದತ್ತ ಏಕೆ ಮುಖ ಮಾಡುತ್ತಿದ್ದಾರೆ? ಇಂದಿನವರಲ್ಲಿ ಅಂದಿನವರ ಉತ್ಸಾಹ ಏಕೆ ಕಾಣೆಯಾಗಿದೆ? ಜಾಗತೀಕರಣ ನಮ್ಮ ಉದಾತ್ತ ಭಾವನೆಗಳನ್ನು ಕೊಂದುಬಿಟ್ಟಿವೆಯೆ? ಪಶ್ಚಿಮದ ಐಷಾರಾಮಿತನದ ಅಂಧಾರಾಧನೆಯು ನಮ್ಮ ಇಂದ್ರಿಯಗಳನ್ನು ಮಂದಗೊಳಿಸಿವೆಯೆ? ಉತ್ತಮ ಉದ್ಯೋಗಗಳಿದ್ದರೂ ವಿದೇಶಗಳಲ್ಲಿ
ನೆಲಸಿರುವವರು ಇಂದು ಹೆಚ್ಚು ಅಸುರಕ್ಷಿತ ಭಾವದಲ್ಲಿರುವುದು ಏಕೆ? ಅಬ್ಬರದ ದೇಶಭಕ್ತಿಯನ್ನು ಪ್ರತಿಪಾದಿಸುತ್ತಿರುವುದಾದರೂ ಏಕೆ?

ಸ್ವಾತಂತ್ರ್ಯಪೂರ್ವದಲ್ಲೂ ಸ್ವಾತಂತ್ರ್ಯಾ ನಂತರದಲ್ಲೂ, ಪಾಶ್ಚಾತ್ಯ ದೇಶಗಳು ನಿರ್ಬಂಧಗಳನ್ನು ಹೇರುವ ತನಕ, ನೆಹರೂ ಮತ್ತು ಇಂದಿರಾ ಗಾಂಧಿಯವರಂಥಾಗಲಿ, ಹೋಮಿ ಭಾಭಾ ಮತ್ತು ವಿಕ್ರಮ್ ಸಾರಾಭಾಯ್ ಅವರಂಥವರಾಗಲಿ ವಿಜ್ಞಾನಿಗಳು, ಎಂಜಿನಿಯರ್‌ಗಳು, ಕಲಾವಿದರು, ಶಿಕ್ಷಣತಜ್ಞರನ್ನು ವಿದೇಶಕ್ಕೆ ಕಳುಹಿಸುತ್ತಿದ್ದರು; ಭಾರತಕ್ಕೆ ಮರಳಿ ಸೇವೆ ಸಲ್ಲಿಸಲು ಅವರಿಗೆ ಅವಕಾಶಗಳನ್ನು ಒದಗಿಸುತ್ತಿದ್ದರು. ನೆಹರೂ ಅವರ ಆಹ್ವಾನದ ಮೇರೆಗೆ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಿಂದ ಹಿಂದಿರುಗಿದ ಜಯಪ್ರಕಾಶ್ ನಾರಾಯಣ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು, ಕ್ವಿಟ್ ಇಂಡಿಯಾ ಚಳವಳಿಯ ನಾಯಕರಾದರು; ನಂತರ ಇಂದಿರಾ ಗಾಂಧಿ ಮತ್ತು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ದೇಶದ ಯುವಕರು ಮತ್ತು ವಿರೋಧ ಪಕ್ಷಗಳನ್ನು ಹುರಿದುಂಬಿಸಿದರು. ವರ್ಗೀಸ್ ಕುರಿಯನ್ ಅವರನ್ನು ನೆಹರೂ ಸರ್ಕಾರ ಪರಮಾಣು ಎಂಜಿನಿಯರಿಂಗ್ ಅಧ್ಯಯನ ಮಾಡಲು ವಿದೇಶಕ್ಕೆ ಕಳುಹಿಸಿತು; ಅಲ್ಲಿಂದ ಹಿಂದಿರುಗಿದ ಮೇಲೆ ಅವರನ್ನು ಅಮುಲ್ ಡೈರಿ ಚಳವಳಿಗಾಗಿ ಕಳುಹಿಸಲಾಯಿತು. ಹೀಗೆ ನೂರಾರು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ವಿದೇಶಗಳಿಗೆ ಹೋದರು; ಆದರೆ ಅವರು ಭಾರತಕ್ಕೆ ಸೇವೆ ಸಲ್ಲಿಸಲು ಹಿಂದಿರುಗಿದರು; ಹಲವರು ಹಲವು ಸಾಮಾಜಿಕ ಸಂಸ್ಥೆಗಳನ್ನು ಕಟ್ಟಿದರು; ಇನ್ನೂ ಕೆಲವರು ಐಐಟಿ, ಐಐಎಂ ಮತ್ತು ಏಮ್ಸ್ ಮುಂತಾದ ವಿದ್ಯಾಸಂಸ್ಥೆಗಳಲ್ಲಿ ಬೋಧಿಸಲು ಹಿಂದಿರುಗಿದರು.

ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಲಿ, ನೂತನ ದೇಶವನ್ನು ಅನ್ವೇಷಿಸಲು ಸಾಗರಗಳನ್ನು ದಾಟುವವರ ಬಗ್ಗೆ ನಾವು ಔದಾರ್ಯದಿಂದ ನಡೆದುಕೊಳ್ಳಬೇಕು. ತಾಯ್ನಾಡಿಗೆ ಮರಳಲು ಉತ್ಸುಕರಾಗಿರುವ ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸಬೇಕು; ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ಯ ಚೈತನ್ಯವನ್ನು ಅವರಲ್ಲಿ ತುಂಬಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.