ADVERTISEMENT

ವಿಶ್ಲೇಷಣೆ | ಇದು ಬಿಹಾರಕ್ಕಷ್ಟೇ ಸೀಮಿತವಲ್ಲ

ಯೋಗೇಂದ್ರ ಯಾದವ್
Published 17 ಜುಲೈ 2025, 0:30 IST
Last Updated 17 ಜುಲೈ 2025, 0:30 IST
<div class="paragraphs"><p>ಮತದಾರರ ಪಟ್ಟಿ</p></div>

ಮತದಾರರ ಪಟ್ಟಿ

   

– ಎ.ಐ ಚಿತ್ರ

ಚುನಾವಣಾ ಆಯೋಗ, ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸುತ್ತಿದೆ. ಈ ಪರಿಷ್ಕರಣೆ ಬಿಹಾರಕ್ಕಷ್ಟೇ ಸೀಮಿತವಾಗಿಲ್ಲ, ಅಲ್ಲಿಗೆ ಮುಗಿಯುವುದಿಲ್ಲ. ಇದು, ಮತದಾನ ಪದ್ಧತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಭಾರತದ ಚುನಾವಣಾ ಪದ್ಧತಿಯ ಅಂತಃಸತ್ವವನ್ನೇ ಬದಲಿಸಲು ಹೊರಟಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಬಗೆಗಿನ ಅರ್ಜಿಯ ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್ ಸೂಚಿಸಿರುವ ಪರಿಹಾರ ಸ್ವಾಗತಾರ್ಹವೇನೋ ಹೌದು. ಆದರೆ, ನಿಜವಾದ ಸಮಸ್ಯೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಅಪಾಯವೂ ಅದರಲ್ಲಿ ಇದೆ. ಬಿಹಾರದಲ್ಲಿ ‘ಆಧಾರ್’ ಪರಿಶೀಲಿಸಿ ಮತದಾರರ ಗುರುತು ಪತ್ತೆ ಮಾಡುವುದು ಕಾಲಮಿತಿಯಲ್ಲಿ ಮಾಡಬಹುದಾದ ಕಾರ್ಯ ಅಲ್ಲ. ಬರೀ ಆಧಾರ್ ಹೊಂದಿದ್ದಾರೆಯೇ ಎಂದು ಪರಿಶೀಲಿಸುವ ಕೆಲಸವು, ಭಾರತದ ಪ್ರಜಾತಂತ್ರ ವ್ಯವಸ್ಥೆಯ ಭವಿಷ್ಯದ ದೃಷ್ಟಿಯಿಂದ ಗಮನಹರಿಸಬೇಕಾದನೈಜ ಸಂಗತಿಯ ಮೇಲೆ ಮೋಡ ಕವಿಯುವಂತೆ ಮಾಡುತ್ತದೆ. ‘ಎಸ್ಐಆರ್’ ವಿರೋಧಿಸುತ್ತಿರುವ (ಲೇಖಕನಾದ ನನ್ನನ್ನೂ ಒಳಗೊಂಡಂತೆ) ನಾವು ಜಾಗ್ರತೆ ವಹಿಸದಿದ್ದರೆ, ಎಸ್‌ಐಆರ್ ವಿರೋಧಿಗಳು (ಈ ಲೇಖಕನೂ ಸೇರಿ) ಸಣ್ಣ ಹೋರಾಟ ಗೆದ್ದು, ದೊಡ್ಡ ಯುದ್ಧದಲ್ಲಿ ಸೋಲುವ ಅಪಾಯಎದುರಿಸಬೇಕಾಗುತ್ತದೆ.

ADVERTISEMENT

‘ಎಸ್ಐಆರ್’ ಎನ್ನುವುದು ಬಿಹಾರಕ್ಕೆ ಮಾತ್ರ ಸೀಮಿತವಾದುದಲ್ಲ. ಅದು ಬಿಹಾರದಲ್ಲಿ ಪ್ರಾಯೋಗಿಕವಾಗಿಯೂ ನಡೆಯುತ್ತಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ‘ಭಾರತೀಯ ಚುನಾವಣಾ ಆಯೋಗ’ವು ದೇಶದ ಉಳಿದೆಲ್ಲೆಡೆ ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯ ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿದೆ; ಅದೂ ಈ ಪ್ರಕ್ರಿಯೆಯು ಕಾನೂನಿಗೆ ಅನುಗುಣವಾಗಿದೆಯೇ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವ ಹಂತದಲ್ಲಿ. ಇದು ಮತದಾರರ ಪಟ್ಟಿಯ ಪರಿಷ್ಕರಣೆ ಅಷ್ಟೇ ಆಗಿರದೆ, ಹೊಸ ಪಟ್ಟಿಯ ಕ್ರೋಡೀಕರಣವೂ ಆಗಿದೆ. ಅಷ್ಟೇ ಅಲ್ಲ, ಮತದಾರರ ಪಟ್ಟಿ ಸಿದ್ಧಪಡಿಸಲು ಇರುವ ನಿಯಮಗಳು, ಪ್ರಕ್ರಿಯೆ, ಶಿಷ್ಟಾಚಾರ ಎಲ್ಲವನ್ನೂ ತಿದ್ದುವಂತಹ ಕಾರ್ಯವಾಗಿದೆ. ಎಲ್ಲ ನಾಗರಿಕರಿಗೆ ತಮ್ಮ ಸಾಮಾಜಿಕ, ಆರ್ಥಿಕ ಸ್ಥಾನಮಾನ, ಹಿನ್ನೆಲೆಯ ಹೊರತಾಗಿಯೂ ಇರುವ ಮತದಾನದ ಹಕ್ಕನ್ನೇ ಹೊಸ ಪರಿಷ್ಕರಣೆಯು ಪ್ರಶ್ನಿಸುತ್ತದೆ. ಬಿಹಾರದ ವಿಷಯದಲ್ಲಿ ಯಾವ ಪರಿಹಾರ ಸಿಕ್ಕಿದೆ ಎನ್ನುವುದಕ್ಕಿಂತಲೂ, ಇಂತಹ ಪರಿಷ್ಕರಣೆ ರದ್ದಾಗದೆ ಹೋದಲ್ಲಿ ಮತದಾನದ ಸಾರ್ವತ್ರೀಕರಣವನ್ನೇ ನಾವು  ಕಳೆದುಕೊಳ್ಳಬೇಕಾಗು ತ್ತದೆ ಎನ್ನುವುದು ಮುಖ್ಯ. 

‘ಸಾರ್ವತ್ರಿಕ ಮತದಾನದ ಹಕ್ಕು’ ನಮ್ಮ ಸ್ವಾತಂತ್ರ್ಯ ಹೋರಾಟದ ಮುಖ್ಯ ತತ್ವಗಳಲ್ಲಿ ಒಂದಾಗಿತ್ತು. 1928ರಲ್ಲಿ ಮೋತಿಲಾಲ್ ನೆಹರೂ ವರದಿಯನ್ವಯ ಅದು ರೂಪಿತವಾಗಿತ್ತು. 1929ರಲ್ಲಿ ‘ಪೂರ್ಣ ಸ್ವರಾಜ್’ ಘೋಷಣೆಯಾದಾಗಲೂ ಅದನ್ನೇ ಪುನರುಚ್ಚರಿಸಲಾಗಿತ್ತು. ಸಂವಿಧಾನವು ವಯಸ್ಕರ ಮತದಾನ ತತ್ವವನ್ನು 326ನೇ ವಿಧಿಯಲ್ಲಿ ಸೇರಿಸಿತು. 21 ವರ್ಷ ದಾಟಿದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮತದಾರನಾಗಿ ನೋಂದಾಯಿಸಿಕೊಳ್ಳುವ ಹಕ್ಕು ಇದೆ ಎನ್ನುವುದನ್ನು ಅದು ಪ್ರತಿಪಾದಿಸಿತು. ಭಾರತದ ಪೌರತ್ವವು ಜನನ ಹಾಗೂ ವಾಸಸ್ಥಾನದ ಆಧಾರದ ಮೇಲೆ (ವಂಶದ ಹಿನ್ನೆಲೆ ಅಥವಾ ಜನಾಂಗದ ಆಧಾರದ ಮೇಲೆ ಅಲ್ಲ) ನಿರ್ಧಾರವಾಗುತ್ತದೆ ಎಂದು ಸಂವಿಧಾನದ 5ನೇ ವಿಧಿ ಒತ್ತಿಹೇಳಿದೆ. ಪೌರತ್ವ ಮುಂದುವರಿಸಿಕೊಂಡು ಹೋಗುವ ಹಾಗೂ ಅದನ್ನು ರಕ್ಷಿಸುವ ಕಾರ್ಯವನ್ನು 10ನೇ ವಿಧಿ ಮಾಡುತ್ತದೆ. ಅದರಂತೆ, ಭಾರತದ ಪ್ರತಿ ನಾಗರಿಕ ಅಥವಾ ಹಾಗೆ ಪರಿಗಣಿತವಾಗಿರುವ ವ್ಯಕ್ತಿ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ.

ಮೊದಲ 75 ವರ್ಷಗಳಲ್ಲಿ ಭಾರತೀಯ ಜನತಂತ್ರ ವ್ಯವಸ್ಥೆಯು ಸಾಂವಿಧಾನಿಕ ಭರವಸೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ಒಳಗೊಳ್ಳುವ ತತ್ವ’ವನ್ನು ಅನುಸರಿಸಿತು. ಸಂವಿಧಾನದ ಆಶಯ ಈಡೇರಿಸುವುದೇ ಅದರ ಉದ್ದೇಶವಾಗಿತ್ತು. ‘ಮ್ಯಾಪಿಂಗ್ ಆಫ್ ಸಿಟಿಜನ್ಸ್ ಆಫ್ ಇಂಡಿಯಾ’ ಪುಸ್ತಕದಲ್ಲಿ ಅನುಪಮಾ ರಾಯ್ ಅವರು ಒಳಗೊಳ್ಳುವಿಕೆಯ ತರ್ಕದ ಕುರಿತು ಚರ್ಚಿಸಿದ್ದಾರೆ. ಒಂದು ಭೌಗೋಳಿಕ ಪರಿಸರದಲ್ಲಿರುವ ಎಲ್ಲರನ್ನೂ ಒಳಗೊಳ್ಳುವುದು ವಿಶ್ವಮಾನವ ತತ್ವದೆಡೆಗಿನ ಒಂದು ಹೆಜ್ಜೆಯಾಗಿದ್ದು, ಎಲ್ಲರಿಗೂ ಪೌರತ್ವ ವಿಸ್ತರಿಸುವ ಮೂಲಕ ಭಿನ್ನತೆಗಳನ್ನು ಮಾನ್ಯ ಮಾಡುವ ಕೆಲಸವಾಗಿತ್ತು. ಜತೆಯಲ್ಲೇ, ಅದಕ್ಕೆ ವಿರುದ್ಧವಾದ ರೀತಿಯಲ್ಲಿ ಪೌರತ್ವ ನಿರಾಕರಣೆ, ಶಂಕೆ, ಪ್ರತ್ಯೇಕಗೊಳಿಸುವಿಕೆಯೂ ಇತ್ತು. ಹಾಗೆಂದ ಮಾತ್ರಕ್ಕೆ, ಈ ತರ್ಕವನ್ನು ಮತದಾನದ ಹಕ್ಕನ್ನು ಮೊಟಕುಗೊಳಿಸುವ ಮಟ್ಟಕ್ಕೆ ವಿಸ್ತರಿಸಲಾಗದು. ಮಾನವಶಾಸ್ತ್ರಜ್ಜೆ ಮುಕುಲಿಕಾ ಬ್ಯಾನರ್ಜಿ ಅವರ ‘ವೈ ಇಂಡಿಯಾ ವೋಟ್ಸ್?’ ಕೃತಿಯಲ್ಲಿ ಒಂದು ವಾದವಿದೆ: ಮತದಾನದ ಜಾತ್ಯತೀತ ರಿವಾಜು ಈಗ ಭಾರತದಲ್ಲಿ ಪರಮಪವಿತ್ರ ಸ್ಥಾನಮಾನವನ್ನು ಪಡೆದುಕೊಂಡಿದೆ. ಅದೀಗ ಸ್ವೀಕೃತ ಅಭಿಪ್ರಾಯವಾಗಿ ಬದಲಾಗಿರುವುದು ಕೂಡ ನಿಜ.

ಎಲ್ಲರನ್ನೂ ಒಳಗೊಳ್ಳುವ ತತ್ವವು ಆಕಸ್ಮಿಕವಾಗಿ ಸಂಭವಿಸಿದ್ದಾಗಿರದೆ, ಕಾನೂನು, ನಿಯಮ ಹಾಗೂ ಸಾಂಸ್ಥಿಕ ನಡಾವಳಿಗಳಲ್ಲಿ ಬೆರೆತುಹೋಗಿತ್ತು. ಯಾವ ಮತದಾರನನ್ನೂ ಮತದಾನದಿಂದ ಹೊರಗೆ ಇಡಬಾರದು ಎನ್ನುವುದೇ ಇವೆಲ್ಲವುಗಳ ಗುರಿಯಾಗಿತ್ತು. ಅಮೆರಿಕದಲ್ಲಿ ಹಾಗೂ ಇತರ ಕೆಲವು ದೇಶಗಳಲ್ಲಿ ಅರ್ಹ ವ್ಯಕ್ತಿಯು ಮತದಾರನಾಗಿ ನೋಂದಣಿ ಮಾಡಿಸಲು ಅರ್ಜಿ ಸಲ್ಲಿಸಬೇಕು. ಇದರಿಂದಾಗಿ, ಅಮೆರಿಕದಲ್ಲಿ ನೋಂದಾಯಿತ ಮತದಾರರು ಶೇ 74ರಷ್ಟು ಇದ್ದರೆ, ಭಾರತದಲ್ಲಿ ಶೇ 96ರಷ್ಟು ನಾಗರಿಕರಿಗೆ ಮತದಾನದ ಹಕ್ಕು ಇದೆ. ಮತದಾರರ ಪಟ್ಟಿಗೆ ಜನರು ತಾವೇ ಹೆಸರು ನೋಂದಾಯಿಸುವ ಅವಕಾಶ ನಮ್ಮಲ್ಲಿ ಇದೆಯಾದರೂ, ತಾತ್ವಿಕವಾಗಿ ಅದರ ಹೊಣೆಗಾರಿಕೆ ಚುನಾವಣಾ ಅಧಿಕಾರಿಗಳ ಮೇಲಿದೆ (ಈಗ ಬೂತ್ ಮಟ್ಟದ ಅಧಿಕಾರಿ– ಬಿಎಲ್ಒ ಹಾಗೂ ಚುನಾವಣಾ ನೋಂದಣಾ ಅಧಿಕಾರಿ– ಇಆರ್‌ಒ). ಪ್ರತಿ ವಯಸ್ಕ ನಿವಾಸಿಯನ್ನು ಸಂಪರ್ಕಿಸಿ, ಅರ್ಹರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ಮಾಡುವುದು ಅವರ ಹೊಣೆ. ಎರಡನೆಯದಾಗಿ, ಪೌರತ್ವ ಕುರಿತು ಒಂದು ಸಾಮಾನ್ಯ ಭಾವನೆ ಇದೆ– ವಯಸ್ಕನಂತೆ ಕಾಣುವ ಯಾವುದೇ ನಿವಾಸಿಗೂ ದೇಶದ ಪೌರತ್ವ ಸಿಗುತ್ತದೆ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರುತ್ತದೆ. ಯಾವುದೋ ದೂರು ಅಥವಾ ಶಂಕೆಯ ಕಾರಣದಿಂದ ಅದು ತಪ್ಪಬಹುದು ಅಷ್ಟೇ. ಒಂದು ಸಲ ಮತದಾರರ ಪಟ್ಟಿಗೆ ಹೆಸರು ಸೇರಿದರೆ, ಆಮೇಲೆ ಸಮರ್ಪಕ ಪ್ರಕ್ರಿಯೆ ಇಲ್ಲದೆ ಅದನ್ನು ತೆಗೆಯುವಂತಿಲ್ಲ. ಹೆಸರಾಂತ ಇತಿಹಾಸಕಾರ ಆರ್ನಿಟ್ ಶಾನಿ ಅವರ ಜನಪ್ರಿಯ ಕೃತಿ ‘ಹೌ ಇಂಡಿಯಾ ಬಿಕೇಮ್ ಡೆಮಾಕ್ರೆಟಿಕ್’ ಕೂಡ ಮತದಾರರ ಸಾರ್ವತ್ರೀಕರಣಕ್ಕೆ ಭಾರತೀಯ ಚುನಾವಣಾ ಆಯೋಗ ಏನೆಲ್ಲಾ ಅಸಾಮಾನ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಅಂಚಿನಲ್ಲಿ ಇರುವ ಜನರನ್ನು ಮತದಾರರ ಪಟ್ಟಿಗೆ ಸೇರಿಸಲು ಆಯೋಗ ಅನೇಕ ವರ್ಷಗಳಿಂದ ದಾರಿಗಳನ್ನು ಹುಡುಕುತ್ತಾ ಬಂದಿದೆ. ಅಲೆಮಾರಿ ಸಮುದಾಯಗಳು, ವಸತಿರಹಿತರು, ಲೈಂಗಿಕ ಕಾರ್ಯಕರ್ತರು, ಲಿಂಗತ್ವ ಅಲ್ಪಸಂಖ್ಯಾತರು, ಅನಾಥರು, ದಾಖಲೆಗಳಿಲ್ಲದ ನಾಗರಿಕರು ಹಾಗೂ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ಒದಗಿಸುವ ಪ್ರಯತ್ನಗಳನ್ನು ನಡೆಸಿದೆ. 

ಸಾರ್ವತ್ರೀಕರಣದ ತರ್ಕವನ್ನು ಚುನಾವಣಾ ಆಯೋಗ ಮಗುಚಿಹಾಕಲು ಹೊರಟಿದೆ. ಮತದಾನದ ಅವಕಾಶಕ್ಕೆ ತಡೆ ಒಡ್ಡುವ ತರ್ಕವನ್ನು ಅಧಿಕೃತವಾಗಿಸುವ ಅದರ ಉದ್ದೇಶ, ಪೌರತ್ವದಲ್ಲಿ ಎದ್ದುಕಾಣುವಂತಹ ಅಸಮಾನತೆ ಉಂಟುಮಾಡ ಬಲ್ಲದು. ಮುಕ್ತ ಹಾಗೂ ಸಮಾನ ರಾಜಕೀಯ ಸಮುದಾಯದ ಸದಸ್ಯತ್ವ ನೀಡುವ ಭರವಸೆಯನ್ನು ಭಾರತ ಸರ್ಕಾರವು ಮೊದಲ 75 ವರ್ಷಗಳಲ್ಲಿ ಈಡೇರಿಸುವಲ್ಲಿ ವಿಫಲವಾಗಿದೆ. ‘ಸಿಟಿಜನ್‌ಶಿಪ್‌ ಇಂಪೆರಿಲ್ಡ್: ಇಂಡಿಯಾಸ್ ಫ್ರ್ಯಾಜೈಲ್ ಡೆಮಾಕ್ರಸಿ’ ಕೃತಿಯಲ್ಲಿ ನೀರಜ್ ಗೋಪಾಲ್ ಜಯಾಲ್,  ಪೌರತ್ವದ ವಿನ್ಯಾಸದಲ್ಲಿ ವಿಪರೀತ ಬದಲಾವಣೆ ತರುವುದರಿಂದ ಕಟ್ಟುಪಾಡುಗಳ ಹೇರಿಕೆಯ ಪೌರತ್ವ ಸೃಷ್ಟಿಸುವುದು ಹಾಗಿರಲಿ, ಅಧಿಕೃತ ಪೌರತ್ವ ವ್ಯವಸ್ಥೆಯೂ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ವಿಶೇಷ ತೀವ್ರ ಪರಿಷ್ಕರಣೆ’ ಎನ್ನುವ, ಯಾರಿಗೂ ಹಾನಿಯಾಗದೆನ್ನುವ ಧೋರಣೆಯ ಪದಪುಂಜಗಳ ಬಳಕೆಯ ಈಗಿನ ಕಸರತ್ತು, ಮತದಾನದ
ಸಾರ್ವತ್ರೀಕರಣದ ಮೂಲ ತರ್ಕ ತಿರುಚಲು ಮುಂದಾಗಿದೆ. ಸಂವಿಧಾನದ 326ನೇ ವಿಧಿಯನ್ನು ಜಾರಿಗೆ ತರುವುದಾಗಿ ಅದು ತೋರಿಕೆಗಾಗಿ ಹೇಳುತ್ತಿದೆ
ಯಾದರೂ, ಪೌರತ್ವ ಮುಂದುವರಿಕೆಯ ಭರವಸೆ ನಿರಾಕರಿಸುವ ಮೂಲಕ ಮೂಲ ಉದ್ದೇಶವನ್ನು ತಿರುಚುತ್ತಿದೆ. ಲ್ಯಾಟಿನ್‌ನಲ್ಲಿ ‘ಯುಸ್ ಸಾಲಿ’ ಎಂಬ ತತ್ವವಿದೆ. ನೆಲದ ಜನರಿಗೆ ಪೌರತ್ವ ಎನ್ನುವ ಅರ್ಥವನ್ನು ಅದು ಹೊಮ್ಮಿಸುತ್ತದೆ. ಅದೇ ಭಾಷೆಯಲ್ಲಿ ‘ಯುಸ್ ಸಂಗ್ವಿನಿಸ್’ ಎಂಬ ಇನ್ನೊಂದು ತತ್ವವೂ ಬರುತ್ತದೆ. ಅದರ ಅರ್ಥ, ರಕ್ತದ ಆಧಾರದ ಮೇಲಿನ ಪೌರತ್ವ. ಜಯಾಲ್ ಅವರು ಭಾರತದಲ್ಲಿ ಆಗುತ್ತಿರುವ  ಬದಲಾವಣೆಯನ್ನು ಇದನ್ನೇ ಉದಾಹರಿಸಿ ಹೇಳಿದ್ದಾರೆ.

ವಯಸ್ಕರ ಮತದಾನದ ಸಾರ್ವತ್ರೀಕರಣಕ್ಕೆ ಭಾರತದಲ್ಲಿ ಆದ್ಯತೆ ನೀಡಿದ್ದ ಕ್ರಮಗಳನ್ನೆಲ್ಲ ‘ವಿಶೇಷ ತೀವ್ರ ಪರಿಷ್ಕರಣೆ’ ತಿರುವುಮುರುವು ಮಾಡ ಹೊರಟಿದೆ. ಮೊದಲನೆಯದಾಗಿ, ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎನ್ನುವ ಬದಲು ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಇದ್ದಾರೆ ಎಂದು ಬದಲಾಗುತ್ತದೆ. ಇದೇ ಮೊದಲ ಬಾರಿಗೆ, ಮೂಲ ಮತದಾರರೆಲ್ಲರಿಗೂ ಎಣಿಕೆ ಪತ್ರ ವೊಂದನ್ನು ತುಂಬಲು ಸೂಚಿಸಲಾಗಿದೆ. ಅದನ್ನು ಮಾಡದೇ ಇದ್ದಲ್ಲಿ ಮತದಾರರ ಕರಡು ಪಟ್ಟಿಯಲ್ಲಿ ಹೆಸರೇ ಬರುವುದಿಲ್ಲ. ಇದುವರೆಗೆ ಜನರು ಯಾವುದೇ ಮತದಾರರ ಪಟ್ಟಿಯಲ್ಲಿ ಇದ್ದರೂ ಅದು ಮುಖ್ಯವಲ್ಲ, 2023ರ ಪಟ್ಟಿಯಲ್ಲಿ ಇರಬೇಕು (2023ರ ಪಟ್ಟಿಯನ್ನೇ ಮೂಲವಾಗಿ ಯಾಕೆ ಇಟ್ಟುಕೊಳ್ಳಲಾಗಿದೆ ಎನ್ನುವುದಕ್ಕೂ ಸಮರ್ಥನೆಯಿಲ್ಲ. ಯಾಕೆಂದರೆ, ಯಾವುದೇ ದಾಖಲೆಗಳನ್ನು ಪರಿಶೀಲಿಸಿ ಪೌರತ್ವದ ಸ್ಥಿತಿ ನಿರ್ಧರಿಸುವ ಕ್ರಮ ಇಲ್ಲಿ ಇಲ್ಲ). ಎರಡನೆಯದಾಗಿ, ಪೌರತ್ವ ಕುರಿತು ಇರುವ ಸಹಜ ಭಾವನೆಯನ್ನು ಮಗುಚಿಹಾಕಲಾಗಿದೆ. ಈಗ ನೀವು ಅಕ್ರಮ ನಿವಾಸಿ ಅಲ್ಲ ಎನ್ನುವುದನ್ನು ಸಾಬೀತುಪಡಿಸಬೇಕು. ಇದೇ ಮೊದಲ ಬಾರಿಗೆ, ಎಲ್ಲರೂ ದಾಖಲೆಗಳನ್ನು ಒದಗಿಸಬೇಕಾದ ಒತ್ತಡ ಸೃಷ್ಟಿಯಾಗಿದೆ (2023ರ ಮತದಾರರ ಪಟ್ಟಿಯ ಪ್ರತಿ ಅಥವಾ ಜನನ ಪ್ರಮಾಣಪತ್ರ ಹಾಗೂ ವಾಸ ದೃಢೀಕರಣದ ಪತ್ರ). ಕೆಲವರಿಗೆ ಇದುವರೆಗೆ ಇಂತಹ ದಾಖಲೆಗಳನ್ನೇ ನೀಡಿಲ್ಲ. ಕೊನೆಯದಾಗಿ, ಪೌರತ್ವವನ್ನು ಕಾನೂನಾತ್ಮಕವಾಗಿ ಪಡೆಯಲು ಹಲವು ದಾಖಲೆ ಪತ್ರಗಳನ್ನು ಸ್ಥಳೀಯ ಅಧಿಕಾರಿಯಿಂದ ಪಡೆಯಬೇಕಾಗುತ್ತದೆ. ಅಲ್ಲಿಯೂ ಒಂದು ಸಮಗ್ರವಾದ ಪತ್ರ ದೊರೆಯುವುದಿಲ್ಲ. 

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳು, ಬಿಹಾರದಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ ಮೂಲಕ ನಡೆದ ಗೋಜಲುಗಳನ್ನು, ದುರಂತಗಳನ್ನು  ದಾಖಲಿಸಿವೆ. ‘ವಿಶೇಷ ತೀವ್ರ ಪರಿಷ್ಕರಣೆ’ ಜಾರಿಗೆ ತರುವುದರಲ್ಲಿನ ಅದಕ್ಷತೆ ಅಥವಾ ಅಪ್ರಾಮಾಣಿಕತೆ ನಿಜವಾದ ಸಮಸ್ಯೆಯೇ ಅಲ್ಲ. ಇದು, ಕೇಡು ಬಗೆಯುವ, ಅಸಾಂವಿಧಾನಿಕವಾದ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ಯೋಜನೆ ಎನ್ನುವುದನ್ನು ಗಮನಿಸಬೇಕು. ಅದು ಜಾರಿಗೆ ಬರಕೂಡದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.