
ಧಾರ್ಮಿಕ ರಾಷ್ಟ್ರದ ಮಾತುಗಳನ್ನಾಡುವವರು ಇರಾನಿನ ವರ್ತಮಾನವನ್ನು ಗಮನಿಸಬೇಕು. ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ದೇಶದ ನಾಗರಿಕರು ಸ್ವಾತಂತ್ರ್ಯ ಹಾಗೂ ನೆಮ್ಮದಿ ಎರಡನ್ನೂ ಕಳೆದುಕೊಂಡು ದಿಕ್ಕೆಟ್ಟಿದ್ದಾರೆ. ಆ ದಿಕ್ಕಿನಲ್ಲಿ ನಾವೂ ಸಾಗುತ್ತಿದ್ದೇವೆಯೆ? ಆ ಸ್ಥಿತಿ ನಮಗೆ ಬೇಕೆ?
ಧಾರ್ಮಿಕ ರಾಷ್ಟ್ರಗಳು ಜಗತ್ತಿನ ಕೆಲವೆಡೆ ಇವೆ. ಭಾರತದಲ್ಲಿ ಇತ್ತೀಚೆಗೆ ಹಿಂದೂ ರಾಷ್ಟ್ರದ ಮಾತುಗಳು ಆಗಾಗ ಮೇಲಕ್ಕೆ ಬಂದು, ಕಾಲಕ್ಕೆ ಕಾದು ಕುಳಿತಂತೆ ಅಡಗುತ್ತಿರುತ್ತವೆ. ಇರಾನ್‌ನಲ್ಲಿ ಪ್ರತಿಭಟನೆಯ ಸುದ್ದಿ ಮುನ್ನೆಲೆಗೆ ಬರುತ್ತಿರುವಾಗ ಈ ಧಾರ್ಮಿಕ ರಾಷ್ಟ್ರಗಳ ಕಥೆ ಮತ್ತು ವ್ಯಥೆಯೆಡೆಗೆ ತಿರುಗಿ ನೋಡಬೇಕೆನಿಸುತ್ತಿದೆ. ಯಾಕೆಂದರೆ, ನಮ್ಮಲ್ಲೂ ಕಿವಿಗೆ ಬೀಳುತ್ತಿರುವ ಎಷ್ಟೋ ಪದಗಳು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಚಲಾವಣೆಯಲ್ಲಿ ಇರುವಂತೆಯೇ ಇವೆ. ಇದು ಯೋಚಿಸಬೇಕಾದ ಸಂಗತಿ.
ಇರಾನ್‌ನಲ್ಲಿ ಸರ್ಕಾರದ ವಿರುದ್ಧ ಮಾತಾಡಿದವರನ್ನೆಲ್ಲ ‘ಕಮ್ಯುನಿಸ್ಟರು’ ಎಂದು ಬ್ರಾಂಡ್ ಮಾಡಲಾಯಿತು. ಬುದ್ಧಿಜೀವಿಗಳು, ಪ್ರಗತಿಪರರು, ಆಧುನಿಕತೆ ಪರ ಇರುವವರನ್ನು ‘ದೈವ ವಿರೋಧಿಗಳು’ ಎಂದು ದೂಷಿಸಿ ತನಿಖೆಯ ನೆಪದಲ್ಲಿ ಸೆರೆಮನೆಗೆ ತಳ್ಳಿ ಕೊಲ್ಲಲಾಯಿತು. ದೇಶದ್ರೋಹಿಗಳು ಎಂದು ಆಪಾದಿಸಲಾಯಿತು. ನೈತಿಕ ಪೊಲೀಸ್‌ಗಿರಿಯ ಹೆಸರಲ್ಲಿ ಧಾರ್ಮಿಕ ಗೂಂಡಾಗಳಿಗೆ ಬೆಂಬಲ, ಅಧಿಕಾರ ನೀಡಲಾಯಿತು. ನಮ್ಮಲ್ಲೂ ‘ನಗರ ನಕ್ಸಲರು’ ಎಂಬ ಪದ ಹುಟ್ಟುಹಾಕಿ ಬೇಕಾಬಿಟ್ಟಿ ಬಳಸಲಾಗುತ್ತಿದೆ. ಆಡಳಿತದ ನಿಲುವುಗಳನ್ನು ವಿರೋಧಿಸುವವರನ್ನು ತುಚ್ಛೀಕರಿಸಿ ಗೂಂಡಾಗಿರಿ ಮಾಡುವವನೂ ಲೇವಡಿ ಮಾಡುವ ಮಟ್ಟಕ್ಕೆ ಕುಮ್ಮಕ್ಕು ಕೊಡಲಾಗುತ್ತಿದೆ. ಕಮ್ಯುನಿಸ್ಟ್ ದ್ವೇಷವನ್ನು ಬೆಳೆಸಲಾಗುತ್ತಿದೆ.
ತಮಾಷೆಯ ಸಂಗತಿ ಎಂದರೆ, ಭ್ರಷ್ಟವಾಗಿದ್ದ ರಾಜಪ್ರಭುತ್ವವನ್ನು ವಿರೋಧಿಸಿ ಬದಲಾವಣೆಗಾಗಿ ನಿರಂತರ ಹೋರಾಡಿದ ಮೊಹಮ್ಮದ್ ರೆಜಾ ಪೆಹ್ಲವಿಯನ್ನು ಇಳಿಸುವಲ್ಲಿ ಕಮ್ಯುನಿಸ್ಟರು ಮತ್ತು ಉದಾರವಾದಿಗಳೇ ಮುಂಚೂಣಿಯಲ್ಲಿದ್ದರು. ಶಾ ಆಡಳಿತದಲ್ಲಿನ ಗುಪ್ತಚರ ಸಂಸ್ಥೆ ಸವಾಕ್ ಅಸಂಖ್ಯ ಜನರನ್ನು ಹತ್ಯೆ ಮಾಡಿತು. ಹತ್ತು ವರ್ಷದ ಹುಡುಗನೂ ‘ನನ್ನಪ್ಪ ಕೊಲೆಗಾರನಲ್ಲ, ಅವರು ಕೊಂದಿದ್ದು ಕಮ್ಯುನಿಸ್ಟ್‌ರನ್ನು, ಅವರು ದುಷ್ಟರು’ ಎನ್ನುವಂತಾಗುವುದು ಮಿದುಳನ್ನು ತಿದ್ದಿ ಹತ್ಯೆಗೆ ಆಳುವವರು ಸಮ್ಮತಿ ಪಡೆಯುವುದರ ಪ್ರತೀಕ. ಶಾ ಇಳಿದ ನಂತರ ಸಾವಿರಾರು ಹೋರಾಟಗಾರರು ಬಿಡುಗಡೆಗೊಂಡರು. ಆದರೆ, ಅವರೆಲ್ಲರ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಇರಾನ್ ಮೂಲಭೂತವಾದಿಗಳ ಕೈವಶವಾಯಿತು. ಅದುವರೆಗೂ ವಿದೇಶದಲ್ಲಿದ್ದ ರುಹೊಲ್ಲಾ ಖೊಮೇನಿ ಇರಾನ್‌ಗೆ ಆಗಮಿಸಿ ದೇಶವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಆಗಿಸಿದ. ನೆಪಮಾತ್ರಕ್ಕೆ ಅಧ್ಯಕ್ಷರ ಆಯ್ಕೆ ನಡೆದರೂ ತಾನೇ ಸರ್ವೋಚ್ಚ ನಾಯಕನೆನಿಸಿದ.
ಮೊದಲು ಜನ ಏನೋ ಬದಲಾವಣೆ ಆಗುತ್ತದೆ ಅಂದುಕೊಂಡರು. ಕೆಲವರು ಆಧುನಿಕತೆಯಿಂದಾಗಿ ಇರಾನಿ ಸಂಸ್ಕೃತಿ ನಶಿಸುತ್ತಿದ್ದು, ದೇಸಿ ಸಂಸ್ಕೃತಿಯ ದ್ಯೋತಕವಾಗಿ ಮೂಲಭೂತವಾದಿಗಳನ್ನು ಬೆಂಬಲಿಸಿದರು. ಆಧುನಿಕ ಶೈಲಿಯಲ್ಲಿ ಬದುಕುತ್ತಿದ್ದ, ಹಿಜಾಬ್ ಇತ್ಯಾದಿಗಳನ್ನು ಎಂದೂ ಧರಿಸದಿದ್ದ ಮಹಿಳೆಯರಿಗೆ ಹೊಸ ಆಡಳಿತ ಹಿಜಾಬ್ ಕಡ್ಡಾಯಗೊಳಿಸಿ ಕಣ್ಗಾವಲಿಗೆ ಒಳಪಡಿಸಿತು. ಪರ, ವಿರೋಧವಾಗಿ ಜನ ಇಬ್ಭಾಗವಾದರು. ಖೊಮೇನಿ ಪ್ರಭುತ್ವ ಹಂತ ಹಂತವಾಗಿ ಹೋರಾಟಗಾರರನ್ನು ನಿರ್ನಾಮ ಮಾಡಿತು. ಇವೆಲ್ಲವೂ ಶುರುವಾಗಿದ್ದು 1979ರಲ್ಲಿ. ನಂತರದ 46 ವರ್ಷಗಳಲ್ಲಿ ಇರಾನ್ ಜನತೆ ಧಾರ್ಮಿಕ ರಾಷ್ಟ್ರದ ಪರಿಣಾಮವನ್ನು ಅನುಭವಿಸುತ್ತಲೇ ಬದಲಾವಣೆ ಮಾಡಲಾರದೆ ಹೈರಾಣಾಗಿದ್ದಾರೆ. ಮೊದಲು ಬೆಂಬಲಿಸಿದವರು ಈಗ ಹತಾಶರಾಗಿದ್ದಾರೆ. ನೆಪಕ್ಕಷ್ಟೇ ನಡೆಯುವ ಚುನಾವಣೆಯಿಂದ ಏನನ್ನೂ ಮಾಡಲಾಗದು. ಇದರೊಂದಿಗೆ ಇಂಗ್ಲೆಂಡ್, ಅಮೆರಿಕ, ಇಸ್ರೇಲ್ ಅಲ್ಲಿನ ತೈಲ ಬಾವಿಯ ಮೇಲೆ ಕಣ್ಣಿಟ್ಟು ಆಡುತ್ತಿರುವ ಆಟದಿಂದಾಗಿ ಹುಟ್ಟಿಕೊಳ್ಳುವ ಯುದ್ಧ ಅಥವಾ ಯುದ್ಧಸ್ಥಿತಿಗಳು ಇರಾನಿಯರನ್ನು ಜರ್ಜರಗೊಳಿಸಿವೆ. ಈಗಲೂ ಅಲ್ಲಿಯ ಜನ ಬೀದಿಗಿಳಿದು ಹೋರಾಡುತ್ತಿದ್ದರೆ, ಅವರಿಗೆ ಬೆಂಬಲ ನೀಡುವ ಮಾತಾಡುತ್ತಾ, ತಮ್ಮ ನಿಯಂತ್ರಣಕ್ಕೆ ಸಿಕ್ಕುವ ಅಥವಾ ಇರಾನ್‌ನ ತೈಲ ಕಂಪನಿಗಳ ರಾಷ್ಟ್ರೀಕರಣವನ್ನು ತೆರವುಗೊಳಿಸಲು ಒಪ್ಪಿಕೊಳ್ಳುವ ನಾಯಕನನ್ನು ಅಲ್ಲಿ ಪ್ರತಿಷ್ಠಾಪಿಸಲು ಅಮೆರಿಕ ಸಂಚು ಹೂಡುತ್ತಿದೆ. ವಿದೇಶಿ ಕೈವಾಡ ಜನರಿಗೂ ಇಷ್ಟವಿಲ್ಲದ ಸಂದರ್ಭದಲ್ಲಿ ಅವರು ದೇಶಕ್ಕಾಗಿ ತಮ್ಮ ಸರ್ಕಾರವನ್ನೇ ಬೆಂಬಲಿಸುತ್ತಾರೆ. ಬಹುಶಃ ಅವರು ತಮ್ಮ ಸ್ವಾತಂತ್ರ್ಯವನ್ನು ತಮ್ಮ ದೇಶದಲ್ಲಿ ತೈಲ ಸಿಕ್ಕಿದಂದೇ ಕಳೆದುಕೊಂಡಿದ್ದಾರೆ.
ಕ್ರಾಂತಿ ನಡೆದಾಗ ಮಾರ್ಜಾನ್ ಸತ್ರಪಿ ಎಂಬ ಹುಡುಗಿ ಹತ್ತು ವರ್ಷದವಳಾಗಿದ್ದಳು. ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ಅವಳ ತಂದೆ, ತಾಯಿ ಯರೂ ಇದ್ದರು. ತಾನು ಕಂಡುಂಡ ದಾರುಣ ಬೆಳವಣಿಗೆಯನ್ನು ಆಧರಿಸಿ ಆಕೆ ‘ಪರ್ಸೆಪೊಲಿಸ್’ ಎಂಬ ಗ್ರಾಫಿಕ್ ಕಾದಂಬರಿಯನ್ನು ಬರೆದಿದ್ದಾಳೆ. ಜಗತ್ತಿನಾದ್ಯಂತ ಪ್ರಸಿದ್ಧವಾಗಿರುವ ಈ ಕೃತಿಯನ್ನು ಪ್ರೀತಿ ನಾಗರಾಜ ಕನ್ನಡಕ್ಕೆ ಅನುವಾದಿಸಿದ್ದು, ಛಂದ ಪ್ರಕಾಶನ ಪ್ರಕಟಿಸಿದೆ. ಸಿನಿಮಾವಾಗಿಯೂ ಇದು ಪ್ರಸಿದ್ಧವಾಗಿದೆ. ಪರ್ಸೆಪೊಲಿಸ್ ಎಂದರೆ ‘ಪರ್ಷಿಯನ್ನರ ನಗರ’ ಎಂದರ್ಥ. ಈ ಕೃತಿಯಲ್ಲಿ ‘ಕುರಿಗಳು’ ಎಂಬ ಅಧ್ಯಾಯ ಇದೆ. ಅದರಲ್ಲಿ ಶಾ ಆಡಳಿತದಲ್ಲಿ 9 ವರ್ಷ ಜೈಲಿನಲ್ಲಿದ್ದು ಬಿಡುಗಡೆ ಗೊಂಡ ಆಕೆಯ ಚಿಕ್ಕಪ್ಪ ಹೀಗನ್ನುತ್ತಾನೆ: ‘ಏನ್ ವಿಚಿತ್ರ, ಈ ಎಡಪಂಥೀಯ ಕ್ರಾಂತಿಯನ್ನ ಸರ್ಕಾರ ಇಸ್ಲಾಮಿಕ್ ಕ್ರಾಂತಿ ಅಂತ ಕರೀಬೇಕು ಅನ್ನುತ್ತೆ’. ಅಗ ಆಕೆಯ ಅಪ್ಪ, ‘ಅದೆಲ್ಲಾ ಅನಿವಾರ್ಯ. ಅನಕ್ಷರಸ್ಥರೇ ಹೆಚ್ಚಿರುವಲ್ಲಿ ಜನರಿಗೆ ಕಾರ್ಲ್ ಮಾರ್ಕ್ಸ್ ಅರ್ಥ ಆಗಲ್ಲ. ದೇಶ ಅಥವಾ ಧರ್ಮ ಅಂದರೆ ಮಾತ್ರ ಒಂದಾಗ್ತಾರೆ. ನಂತರ ಎಲ್ಲ ಸರಿ ಹೋಗುತ್ತೆ’ ಎನ್ನುತ್ತಾರೆ.
ಆಗ ಹೆಚ್ಚಿನವರು ಹಾಗೇ ತಿಳಿದಿದ್ದರು. ಆದರೆ, ‘ಮುಲ್ಲಾ
ಗಳಿಗೆ ಆಡಳಿತ ಗೊತ್ತಿಲ್ಲ, ಕಾರ್ಮಿಕರೇ ಆಳಬೇಕು’ ಎಂದು ಚಿಕ್ಕಪ್ಪ ಹೇಳುತ್ತಾರೆ. ಅವರಂದಂತೆ ಎಲ್ಲವೂ
ಬಿಗಡಾಯಿಸುತ್ತದೆ. ಆಕೆಯ ಚಿಕ್ಕಪ್ಪನನ್ನೂ ಸೇರಿಸಿ ಹಲವರ ಮೇಲೆ ಸುಳ್ಳು ಕೇಸು ಹಾಕಿ ಜೈಲಿನಲ್ಲಿ ಕೊಲ್ಲಲಾಗುತ್ತದೆ. ನೈತಿಕ ಪೊಲೀಸ್‌ಗಿರಿಯ ಹೆಸರಿನಲ್ಲಿ ಹಿಂಸೆ ಮಿತಿ ಮೀರುತ್ತದೆ.
ಒಂದು ಕಾಲದಲ್ಲಿ ಇರಾನ್ ಪ್ರವಾಸಿಗರಿಗೆ ವಿದೇಶಗಳಲ್ಲಿ ಇದ್ದ ಗೌರವ ಕಡಿಮೆಯಾಗಿ ಭಯೋತ್ಪಾದಕ ಪಟ್ಟ ಬಂದಿದ್ದನ್ನು ಲೇಖಕಿ ವಿಷಾದದಿಂದ ದಾಖಲಿಸುತ್ತಾರೆ. ಇರಾಕ್ ಜೊತೆಗಿನ ಹತ್ತು ವರ್ಷಗಳ ಪೊಳ್ಳು ಪ್ರತಿಷ್ಠೆಯ ಯುದ್ಧದಲ್ಲಿ ಶ್ರೀಮಂತ ಇರಾನ್ ನಲುಗಿತ್ತು. ಧರ್ಮದ ನಶೆ ಏರಿತ್ತು. ಹರೆಯದ ಹುಡುಗರನ್ನು ಮಿಲಿಟರಿಗೆ ಸೇರಲು ಪ್ರಚೋದಿಸಲಾಗುತ್ತಿತ್ತು. ಸಾವಿನ ನಂತರದ ಜಗತ್ತು ಡಿಸ್ನಿಲ್ಯಾಂಡ್‌ಗಿಂತ ರಮ್ಯವಾಗಿರುತ್ತದೆ ಎಂದು ನಂಬಿಸಲಾಗುತ್ತಿತ್ತಂತೆ! ಯುದ್ಧದ ಸರಿಯಾದ ತರಬೇತಿಯೂ ಇಲ್ಲದ ಮಕ್ಕಳ ಮಾರಣಹೋಮವೇ ನಡೆದುಹೋಗುತ್ತಿತ್ತಂತೆ. ತಮ್ಮ ಮಕ್ಕಳು ಸ್ವರ್ಗದಲ್ಲಿ ಎಲ್ಲ ಸುಖಗಳಲ್ಲಿ ಬದುಕಿದ್ದಾರೆ ಎಂದೇ ತಾಯಂದಿರು ನಂಬುತ್ತಿದ್ದರಂತೆ! ಎಂತಹ ವಿಚಿತ್ರ. ಯಾವ ಪಾಶ್ಚಾತ್ಯ ಬದುಕನ್ನು ನಿರಾಕರಿಸಲು ಬದುಕಿರುವವರಿಗೆ ಹೇಳಲಾಗುತ್ತಿತ್ತೋ, ಅವರಿಗೆ ಸಾಯಲು ಆಮಿಷವಾಗಿ ತೋರಿಸುತ್ತಿದ್ದುದು ಅದೇ ಪಾಶ್ಚಾತ್ಯ ಲೋಕವನ್ನು. ಧರ್ಮದ ಹೆಸರಿನಲ್ಲಿ ಎಲ್ಲವನ್ನೂ ನಂಬುವುದು, ಇಲ್ಲವೇ ಹೆದರಿ ಬಾಯಿ ಮುಚ್ಚಿಕೊಳ್ಳುವುದು ಸಾಮಾನ್ಯವಾಯಿತು. ಆಗಾಗ ತಲೆಯೆತ್ತಿದ ಪ್ರತಿರೋಧವನ್ನು ಕ್ರೂರವಾಗಿ ಹತ್ತಿಕ್ಕುವ ಮೂಲಕ, ನಕಲಿ ಮತದಾನದ ಮೂಲಕ ಇದನ್ನೆಲ್ಲ ದಕ್ಕಿಸಿಕೊಳ್ಳಲಾಗಿದೆ. ಆದರೂ ಹೆಂಗಸರ ನಿರಂತರ ಪ್ರತಿರೋಧದಿಂದಾಗಿ ಕಳೆದ ವರ್ಷ ತಲೆಕೂದಲು ಕಾಣಿಸಬಾರದೆಂಬ ಉಡುಗೆ ಪೊಲೀಸಿಂಗ್‌ಗೆ ತುಸು ರಿಯಾಯಿತಿ ನೀಡಿ, ತಂತ್ರಜ್ಞಾನದ ಕಾವಲು ಹಾಕಲಾಗಿದೆ.
ದಿಟ್ಟವಾಗಿ ಮಾತಾಡುವ ಬಾಲಕಿ ಮಾರ್ಜಾನ್ ಸತ್ರಪಿಯ ಸ್ವಭಾವವು ಒಂದು ಕಾಲದಲ್ಲಿ ಹೋರಾಟಗಾರ್ತಿಯಾಗಿದ್ದ ಅವಳ ತಾಯಿಗೆ ಆತಂಕ ಉಂಟು ಮಾಡುತ್ತದೆ. ಪಕ್ಕದ ಮನೆಯವರನ್ನೂ ನಂಬಲಾಗದ ಸ್ಥಿತಿಯಲ್ಲಿ ಮಗಳನ್ನು ವಿದೇಶಕ್ಕೆ ಓದಲು ಕಳಿಸುವ ನಿರ್ಧಾರ ಮಾಡುತ್ತಾರೆ. ಹದಿನಾಲ್ಕು ವರ್ಷದ ಆಕೆಯೊಬ್ಬಳನ್ನೇ ಆಸ್ಟ್ರಿಯಾಕ್ಕೆ ಕಳಿಸುತ್ತಾರೆ. ಸತ್ರಪಿ ಅಲ್ಲಿ ನಾಲ್ಕು ವರ್ಷ ಇದ್ದಳಾದರೂ ಖಿನ್ನತೆಗೆ ಒಳಗಾಗಿ, ತವರಿಗೆ ವಾಪಾಸಾಗುತ್ತಾಳೆ. ಹಾಗೆ ಮರಳಿದಾಗ ಅವಳಿಗೆ ವಿಚಿತ್ರ ಅನುಭವವಾಗುತ್ತದೆ. ತನ್ನ ಗೆಳತಿಯರು ಈಗ ಬೌದ್ಧಿಕವಾಗಿ ಯೋಚಿಸುವುದನ್ನೇ ನಿಲ್ಲಿಸಿದ್ದಾರೆ. ಅವರೊಂದಿಗೆ ಮಾತಾಡಲು ಆಕೆಗೆ ವಿಷಯವೇ ಸಿಗುವುದಿಲ್ಲ. ಅಮೆರಿಕದ ಟೀವಿ ಸೀರಿಯಲ್ ನಾಯಕಿಯರ ಅನುಕರಣೆ, ಮೇಕಪ್, ಮದುವೆ, ನೈಟ್‌ಕ್ಲಬ್ ಧ್ಯಾನ ಬಿಟ್ಟರೆ ಅವರಿಗೆ ಕನಸುಗಳೇ ಇರಲಿಲ್ಲ. ಬುದ್ಧಿವಂತರಾಗಿ ಎಂದು ಅವರಿಗೆ ಹೇಳುವವರೂ ಇರಲಿಲ್ಲ. ಬುರ್ಕಾದೊಳಗಿನ ತುಂಡುಡುಗೆಯ ಇವರಿಗೂ, ಹೊರಗೆ ಕಾಣಿಸುವ ಇವರಿಗೂ ಸಂಬಂಧವೇ ಇರಲಿಲ್ಲ. ಯಾವುದನ್ನಾದರೂ ನಿಷೇಧಿಸಿದಾಗ ಅದರ ಬಗ್ಗೆ ತೀರಾ ಹಟ ಹುಟ್ಟುತ್ತದೆ ಎಂದು ಸತ್ರಪಿಗೆ ಅನ್ನಿಸುತ್ತದೆ. ಹಾಗೆ ಪ್ರತಿರೋಧವನ್ನು ಬೇರೆ ಬೇರೆ ಬಗೆಯಲ್ಲಿ ತೋರುವವರ ಸಂಖ್ಯೆ ಬಹಳ ಇದ್ದದ್ದು ಅವಳ ಗಮನಕ್ಕೆ ಬರುತ್ತದೆ. ಆದರೆ, ಛಿದ್ರಗೊಂಡ ಈ ಬದುಕೂ ಕಷ್ಟವಾಗಿ ಆಕೆ ಕೊನೆಗೆ ಫ್ರಾನ್ಸ್‌ಗೆ ವಲಸೆ ಹೋದಳು. ಆದ್ದರಿಂದಲೇ ಅವಳಿಗೆ ಈ ಆತ್ಮಕಥಾನಕ ಕಾದಂಬರಿಯನ್ನು ಬರೆಯಲು ಸಾಧ್ಯವಾಯಿತು.
ನಮ್ಮನ್ನು ಸದಾ ಎಚ್ಚರಿಸಬೇಕಾದ ಅಲಾರಾಂನಂತೆ ಮನ ಮನದೊಳಗೂ ಇರಬೇಕಾದ ಕಾದಂಬರಿ ಇದು. ಪ್ರಾಚೀನ ನಾಗರಿಕತೆಯ, ಸಾಂಸ್ಕೃತಿಕ ವಾಗಿಯೂ ಶ್ರೀಮಂತವಾಗಿದ್ದ ಇರಾನ್ ಇಸ್ಲಾಮಿಕ್ ರಾಷ್ಟ್ರವಾಗಿರದೇ ಇದ್ದರೆ ಮಾದರಿ ರಾಷ್ಟ್ರವಾಗ ಬಹುದಿತ್ತು. ನಮ್ಮಲ್ಲೂ ಮರ್ಯಾದೆಗೇಡು ಹತ್ಯೆ, ನೈತಿಕ ಪೊಲೀಸ್‌ಗಿರಿ, ಧಾರ್ಮಿಕ ಗೂಂಡಾಗಿರಿ, ಮೂರು ಹೆತ್ತು ಒಂದನ್ನು ಸೈನ್ಯಕ್ಕೆ ಕೊಡಿ, ಬೊಟ್ಟಿಟ್ಕೋ ಎಂಬ ಅಪ್ಪಣೆಗಳು, ಅತ್ಯಾಚಾರಿಗಳಿಗೆ ಜಾಮೀನು, ವಿರೋಧಿಸಿದವರಿಗೆ ನಾನಾ ರೀತಿಯ ತನಿಖೆ, ಕೈ ಜೋಡಿಸುವ ಭ್ರಷ್ಟರಿಗೆ ಹುದ್ದೆ, ಪರಿಸರ ಹೋರಾಟಗಾರರಿಗೆ ಜೈಲು ಮತ್ತು ಇವೆಲ್ಲವನ್ನೂ ಸಮರ್ಥಿಸುವ ಮನಃಸ್ಥಿತಿ, ವಿರೋಧ ಮತ್ತು ವಿರೋಧ ಪಕ್ಷಗಳ ದಮನಕ್ಕೆ ಅಟ್ಟಹಾಸದ ಬೆಂಬಲ – ಯಾಕೋ ಇಸ್ಲಾಮಿಕ್ ರಾಷ್ಟ್ರದ ಅನುಕರಣೆ ಕಾಣುತ್ತಿದೆಯಲ್ಲ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.