ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಸ್ಥಾನಮಾನ ಕುರಿತ ಚರ್ಚೆಗೆ ಕೊನೆ ಮೊದಲಿಲ್ಲ ಎಂಬಂತಾಗಿದೆ. ಇತ್ತೀಚೆಗೆ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ಯು ಕನ್ನಡವೂ ಸೇರಿದಂತೆ ಪ್ರಥಮ ಭಾಷೆಗಳಿಗೆ ನಿಗದಿಯಾಗಿದ್ದ 125 ಅಂಕಗಳನ್ನು ಕೇಂದ್ರೀಯ ಪಠ್ಯಕ್ರಮಕ್ಕನುಗುಣವಾಗಿ 100 ಅಂಕಗಳಿಗೆ ಇಳಿಸಲು ನಿರ್ಧರಿಸಿದೆ. ಈ ನಿರ್ಧಾರವನ್ನು ನಾನು ವಿರೋಧಿಸಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದೆ. ಈ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ಪ್ರತಿನಿಧಿಯಾಗಿ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ನಿರ್ದೇಶಕರು ನನ್ನಲ್ಲಿಗೆ ಬಂದು ಚರ್ಚಿಸಿದರು. ಇದೊಂದು ಸಕಾರಾತ್ಮಕ ಸ್ಪಂದನೆಯಾಗಿದ್ದರೂ, ಸರ್ಕಾರದ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.
ಕನ್ನಡವೂ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿ ಮಾಡಿದ್ದಕ್ಕೆ ದೊಡ್ಡ ಇತಿಹಾಸವಿದೆ. ಅದು ದೇವರಾಜ ಅರಸು ಅವರ ನೇತೃತ್ವದ ಸರ್ಕಾರವಿದ್ದ ಕಾಲಾವಧಿ. ಆಗ ಪ್ರೌಢಶಾಲೆಯ ಪಠ್ಯಕ್ರಮದಲ್ಲಿ ಕನ್ನಡದ ಜೊತೆಗೆ ನಮ್ಮ ರಾಜ್ಯದ ಭಾಷಿಕ ಅಲ್ಪಸಂಖ್ಯಾತರ ಭಾಷೆಗಳೂ ಪ್ರಥಮ ಭಾಷೆಯ ಪಟ್ಟಿಯಲ್ಲಿ ಇದ್ದವು. ಇದು ಎಲ್ಲ ರಾಜ್ಯಗಳಿಗೂ ಅನ್ವಯಿಸುವ ಸಹಜ ನಿಯಮವಾಗಿತ್ತು. ವಿಶೇಷವೆಂದರೆ, ನಮ್ಮ ರಾಜ್ಯದಲ್ಲಿ ಜನಬಳಕೆಯಲ್ಲಿ ಇಲ್ಲದ, ಸಂಸ್ಕೃತವೂ ಪ್ರಥಮ ಭಾಷೆಯ ಪಟ್ಟಿಯಲ್ಲಿತ್ತು. ಪ್ರೌಢಶಾಲೆಯಲ್ಲಿ ಸಂಸ್ಕೃತವನ್ನು ಅಕ್ಷರಾಭ್ಯಾಸದಿಂದಲೇ ಕಲಿಸಬೇಕಾದ ಅನಿವಾರ್ಯವಿತ್ತು. ಯಾಕೆಂದರೆ, ಏಳನೇ ತರಗತಿಯವರೆಗೆ ಶಾಲಾ ಪಠ್ಯಕ್ರಮದಲ್ಲಿ ಸಂಸ್ಕೃತಾಭ್ಯಾಸಕ್ಕೆ ಅವಕಾಶವಿರಲಿಲ್ಲ.
ಹೀಗಾಗಿ, ಪ್ರೌಢಶಾಲಾ ಹಂತದ ಸಂಸ್ಕೃತ ಪಠ್ಯಗಳು ತೀರಾ ಸರಳವಾಗಿದ್ದವು. ಅಲ್ಲದೆ ಪರೀಕ್ಷೆಯಲ್ಲಿ ಆಯಾ ಭಾಷೆಯಲ್ಲೇ ಉತ್ತರ ಬರೆಯಬೇಕೆಂಬ ಕಡ್ಡಾಯ ನಿಯಮವನ್ನು ಸಂಸ್ಕೃತಕ್ಕೆ ಅನ್ವಯಿಸಿರಲಿಲ್ಲ. ಸಂಸ್ಕೃತ ಪ್ರಶ್ನೆಗಳಿಗೆ ಇಂಗ್ಲಿಷ್ ಅಥವಾ ಅವರವರ ಮಾತೃಭಾಷೆಯಲ್ಲೇ ಉತ್ತರಿಸಬಹುದಿತ್ತು. ಈಗಲೂ ಇದು ಮುಂದುವರಿದಿದೆ. ಸರಳ ಪಠ್ಯ, ಸರಳ ಪ್ರಶ್ನೆಪತ್ರಿಕೆ ಮತ್ತು ಸಂಸ್ಕೃತದಲ್ಲೇ ಉತ್ತರಿಸಬೇಕಾಗಿಲ್ಲವೆಂಬ ವಿಚಿತ್ರ ರಿಯಾಯಿತಿಗಳ ಫಲವಾಗಿ ಸಂಸ್ಕೃತವು ಹೆಚ್ಚು ಅಂಕಗಳನ್ನು ಪಡೆಯುವ ಸಾಧನವಾಯಿತು. ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಅಭ್ಯಾಸ ಮಾಡುವವರೇ ಅಧಿಕ ಅಂಕಗಳನ್ನೂ ರ‍್ಯಾಂಕ್‌ಗಳನ್ನೂ ಪಡೆಯುತ್ತಿದ್ದುದರಿಂದ, ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗತೊಡಗಿತು. ಸಂಸ್ಕೃತದ ಆಯ್ಕೆ ಅತಿಯಾಯಿತು.
ಈ ಕಾರಣದಿಂದ 1976ರಲ್ಲಿ ಶಿವಮೊಗ್ಗದಲ್ಲಿ ನಡೆದ 49ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು, ಸಂಸ್ಕೃತವನ್ನು ಪ್ರಥಮ ಭಾಷೆ ಪಟ್ಟಿಯಿಂದ ಕೈಬಿಡಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಕನ್ನಡೇತರ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿ, ಸರ್ಕಾರವನ್ನು ಒತ್ತಾಯಿಸಿತು. ಸರ್ಕಾರವು ‘ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ’ಗೆ ಈ ನಿರ್ಣಯವನ್ನು ಕಳಿಸಿ, ವರದಿ ಕೊಡುವಂತೆ ಕೇಳಿತು. ಈ ಮಂಡಳಿಯು ನಿರ್ಣಯವನ್ನು ಸಮರ್ಥಿಸಿ ವರದಿ ನೀಡಿತು. ಸಮ್ಮೇಳನದ ನಿರ್ಣಯ ಮತ್ತು ಈ ವರದಿಯನ್ನು ಜಾರಿಗೊಳಿಸಲು ಕನ್ನಡ ಪರ ವಲಯದಿಂದ ತೀವ್ರ ಒತ್ತಾಯ ಬಂದಿತು. ದೇವರಾಜ ಅರಸು ನೇತೃತ್ವದ ಸರ್ಕಾರವು 1979ರ ಅಕ್ಟೋಬರ್‌ನಲ್ಲಿ ಆದೇಶವೊಂದನ್ನು ಹೊರಡಿಸಿ, ಸಂಸ್ಕೃತವನ್ನು ಪ್ರಥಮ ಭಾಷೆ ಪಟ್ಟಿಯಿಂದ ತೆಗೆದು ಮೂರನೇ ಭಾಷೆಗೆ ವರ್ಗಾಯಿಸಿತು. ಇದು ಒಂದು ಮುಖ್ಯಘಟ್ಟ.
ಮುಂದಿನ ಬೆಳವಣಿಗೆಗಳು ಕನ್ನಡವನ್ನು ಹೋರಾಟದ ಕೇಂದ್ರವಾಗಿಸಿ ಮತ್ತೊಂದು ಪ್ರಮುಖ ಘಟ್ಟಕ್ಕೆ ಕಾರಣವಾದವು. ಅರಸು ಅವರ ನಂತರ ಅಧಿಕಾರಕ್ಕೆ ಬಂದ ಗುಂಡೂರಾವ್ ನೇತೃತ್ವದ ಸರ್ಕಾರವು ಕೆಲವರ ಒತ್ತಾಯಕ್ಕೆ ಒಪ್ಪಿ, ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಗೆ ಮತ್ತೆ ಸೇರಿಸಿ ಕಿಚ್ಚು ಹತ್ತಿಸಿತು! ಹಕ್ಕೊತ್ತಾಯ ಮತ್ತು ಹೋರಾಟಗಳ ಪರ್ವ ಪ್ರಾರಂಭವಾಯಿತು.
‘ಕನ್ನಡ ಉಳಿಸಿ’ ಕ್ರಿಯಾ ಸಮಿತಿ, ಧಾರವಾಡದ ಕೇಂದ್ರ ಕನ್ನಡ ಕ್ರಿಯಾ ಸಮಿತಿಯಾದಿಯಾಗಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರಿಂದ ಸರ್ಕಾರದ ನಿರ್ಧಾರಕ್ಕೆ ವಿರೋಧ ಎದುರಾಯಿತು. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯು, ಸಮುದಾಯ, ದಲಿತ ಸಂಘರ್ಷ ಸಮಿತಿ, ‘ಚಿತ್ರಾ’ ನಾಟಕ ತಂಡಗಳ ಸಹಕಾರದಿಂದ ಬೆಂಗಳೂರಿನಲ್ಲಿ ‘ಕನ್ನಡ ಹೋರಾಟವಾರ’ವನ್ನು ಹಮ್ಮಿಕೊಂಡು, ಸುಮಾರು 50ಕ್ಕೂ ಹೆಚ್ಚು ಪ್ರಮುಖ ಬರಹಗಾರರ ಸಹಿ ಪಡೆದ 25 ಸಾವಿರ ಕರಪತ್ರಗಳನ್ನು ಹಂಚಿತು. ಇದಲ್ಲದೆ, ಅನೇಕ ಸಂಘಟನೆಗಳ ಸಂಘಟಿತ ಹೋರಾಟದ ಫಲವಾಗಿ ಸರ್ಕಾರವು ಸಮಸ್ಯೆಯ ಪರಿಹಾರಕ್ಕಾಗಿ ವಿ.ಕೃ. ಗೋಕಾಕರ ನೇತೃತ್ವದಲ್ಲಿ 1980ರ ಜುಲೈ 5ರಂದು ಒಂದು ಸಮಿತಿಯನ್ನು ನೇಮಿಸಿ ಆದೇಶ ಹೊರಡಿಸಿತು. ಗೋಕಾಕ್ ನೇತೃತ್ವದ ಸಮಿತಿಯ ವರದಿಯಿಂದಲೇ ಅಂಕ ನಿಗದಿಯ ಚರ್ಚೆಯೂ ಆರಂಭವಾಯಿತು.
ಗೋಕಾಕ್ ಸಮಿತಿಯು 1981–82ನೇ ಶೈಕ್ಷಣಿಕ ವರ್ಷದಿಂದಲೇ ಕನ್ನಡವನ್ನು ‘ಏಕೈಕ’ ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಿ ಜಾರಿಗೆ ತರಬೇಕೆಂದು ಶಿಫಾರಸು ಮಾಡಿತು. ಅಷ್ಟೇ ಅಲ್ಲ, ಪ್ರಥಮ ಭಾಷೆ ಕನ್ನಡಕ್ಕೆ 150 ಅಂಕಗಳನ್ನು ನಿಗದಿಪಡಿಸಿತು. ಎರಡನೇ ಭಾಷೆಗಳ ಪಟ್ಟಿಯಲ್ಲಿ ತೆಲುಗು, ತಮಿಳು, ಮರಾಠಿ, ಹಿಂದಿ, ಉರ್ದು ಮುಂತಾದ ಭಾರತೀಯ ಭಾಷೆಗಳಲ್ಲಿ ಒಂದು ಅಥವಾ ಇಂಗ್ಲಿಷ್ ಅಥವಾ ಸಂಸ್ಕೃತವೇ ಮುಂತಾದ ಪ್ರಾಚೀನ ಭಾಷೆಗಳ ಅಭ್ಯಾಸಕ್ಕೆ ಶಿಫಾರಸು ಮಾಡಿ 100 ಅಂಕಗಳನ್ನು ನಿಗದಿಮಾಡಿತು. ಎರಡನೇ ಭಾಷೆಯಲ್ಲಿ ಆಯ್ಕೆ ಮಾಡಿಕೊಂಡಿದ್ದನ್ನು ಬಿಟ್ಟು, ಆ ಪಟ್ಟಿಯಲ್ಲೇ ಇರುವ ಇತರೆ ಒಂದು ಭಾಷೆಯನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಸಿತು. ಮೂರನೇ ಭಾಷೆಗೆ 50 ಅಂಕಗಳನ್ನು ನಿಗದಿ ಮಾಡಿದ್ದಲ್ಲದೆ, ಪರೀಕ್ಷೆಗೆ ಕಡ್ಡಾಯ ಮಾಡಬೇಕೆಂದು ತಿಳಿಸಿತು.
ಕನ್ನಡವು ಏಕೈಕ ಪ್ರಥಮ ಭಾಷೆಯಾಗಿರಬೇಕೆಂದು ಶಿಫಾರಸು ಮಾಡಿದ್ದಲ್ಲದೆ, ಅದಕ್ಕೆ 150 ಅಂಕಗಳನ್ನು ನಿಗದಿ ಮಾಡಿದ್ದು ಕನ್ನಡಿಗರಲ್ಲಿ ಸಹಜ ಸಂಭ್ರಮಕ್ಕೆ ಕಾರಣವಾಯಿತು. ಸರ್ಕಾರವು ‘ಗೋಕಾಕ್ ಸಮಿತಿ’ಯ ವರದಿಯನ್ನು ಒಪ್ಪಲು ವಿಳಂಬ ಮಾಡಿದಾಗ ಕರ್ನಾಟಕದಾದ್ಯಂತ ಹೋರಾಟದ ಉಮೇದು ಹೆಚ್ಚತೊಡಗಿತು. ಬೆಂಗಳೂರಿನಲ್ಲಿ ‘ಸಾಹಿತಿ– ಕಲಾವಿದರ ಬಳಗ’ದಿಂದ ಸರಣಿ ಉಪವಾಸ ಸತ್ಯಾಗ್ರಹ, ಧಾರವಾಡದ ಕೇಂದ್ರ ಕನ್ನಡ ಕ್ರಿಯಾ ಸಮಿತಿಯಿಂದ ನಿತ್ಯ ಹಕ್ಕೊತ್ತಾಯ, ಕನ್ನಡ ಹೋರಾಟಗಾರರ ಆಗ್ರಹ– ಎಲ್ಲವೂ ಸೇರಿ ಬಿಸಿ ವಾತಾವರಣ ಮೂಡುತ್ತಿದ್ದರೂ ಸರ್ಕಾರ ಮೌನವಾಗಿತ್ತು. ಆಗ ವರನಟ ರಾಜ್‌ಕುಮಾರ್ ಅವರು ಗೋಕಾಕ್ ವರದಿ ಜಾರಿಗೊಳಿಸಬೇಕೆಂಬ ಹೋರಾಟಕ್ಕೆ ನೇರವಾಗಿ ಪ್ರವೇಶಿಸಿ, ಚಲನಚಿತ್ರ ಕಲಾವಿದರೊಂದಿಗೆ ರಾಜ್ಯದಾದ್ಯಂತ ಸಂಚರಿಸಿ ಸಂಚಲನವುಂಟುಮಾಡಿದರು. ಹೋರಾಟವು ಜನ ಚಳವಳಿಯ ರೂಪ ಪಡೆಯಿತು. ಸರ್ಕಾರ ಮಣಿಯಲೇಬೇಕಾಯಿತು.
ಸರ್ಕಾರವು ಗೋಕಾಕ್ ವರದಿ ಆಧರಿಸಿ ಒಂದು ಸೂತ್ರವನ್ನು ರೂಪಿಸಿತು. ಏಕೈಕ ಪ್ರಥಮ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಿತು. ಆದರೆ, ಗೋಕಾಕ್ ಸಮಿತಿ ಸೂಚಿಸಿದ 150 ಅಂಕಗಳ ಬದಲು 100 ಅಂಕಗಳನ್ನು ನಿಗದಿಪಡಿಸಿತು. ಎರಡು ಮತ್ತು ಮೂರನೇ ಭಾಷೆಗಳಿಗೂ ತಲಾ ನೂರು ಅಂಕಗಳನ್ನು ಇಡುವುದಾಗಿ ತಿಳಿಸಿತು. ಈ ಸೂತ್ರಕ್ಕೆ ಮತ್ತೆ ಪ್ರಬಲ ವಿರೋಧ ವ್ಯಕ್ತವಾದ ಫಲವಾಗಿ, ಏಕೈಕ ಪ್ರಥಮ ಭಾಷೆಯಾಗಿ ಕನ್ನಡಕ್ಕೆ 125, ಎರಡು ಮತ್ತು ಮೂರನೇ ಭಾಷೆಗಳಿಗೆ ತಲಾ 100 ಅಂಕಗಳನ್ನು ನಿಗದಿಗೊಳಿಸಿ ಸರ್ಕಾರವು 1982ರ ಜುಲೈ 20ರಂದು ಆದೇಶ ಹೊರಡಿಸಿತು. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ/ ಮಾತೃಭಾಷೆ ಮಾಧ್ಯಮ ಮತ್ತು ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಕನ್ನಡವು ಐಚ್ಛಿಕ ಕಲಿಕೆಯ ಭಾಷೆಯಾಗಿರುತ್ತದೆಯೆಂದು ಈ ಆದೇಶ ಸೂಚಿಸಿತು.
ಇಷ್ಟಕ್ಕೇ ಭಾಷಾ ವಿವಾದ ನಿಲ್ಲಲಿಲ್ಲ. 1982ರ ಈ ಆದೇಶವನ್ನು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದವು. ಸಾಕಷ್ಟು ಕಾಲ ವಿಚಾರಣೆ ನಡೆದು, ಈ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತು. ಮುಖ್ಯವಾಗಿ, ಪ್ರಥಮ ಭಾಷೆಯಾಗಿ ಏಕೈಕ ಭಾಷೆಯನ್ನು (ಕನ್ನಡವನ್ನು) ಕಡ್ಡಾಯ ಮಾಡುವುದು ಸಂವಿಧಾನದ 14, 29(1) ಮತ್ತು 30(1)ನೇ ವಿಧಿಗಳಿಗೆ ವಿರುದ್ಧವಾದುದೆಂದು ತೀರ್ಪು ನೀಡಿತು. 14ನೇ ವಿಧಿ ಸಮಾನತೆಯ ತತ್ವಕ್ಕೆ, 29(1) ಅಲ್ಪಸಂಖ್ಯಾತರ ಅವಕಾಶ ರಕ್ಷಣೆಗೆ ಮತ್ತು 30(1)ನೇ ವಿಧಿಯು ಅಲ್ಪಸಂಖ್ಯಾತರ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿವೆ. ಒಂದೇ ಭಾಷೆಯನ್ನು ಕಡ್ಡಾಯ ಮಾಡುವುದರಿಂದ ಆಯಾ ರಾಜ್ಯದ ಭಾಷಿಕ ಅಲ್ಪಸಂಖ್ಯಾತರ ಮಾತೃಭಾಷಾ ಕಲಿಕೆಯ ಹಕ್ಕಿಗೆ ಧಕ್ಕೆಯಾಗುತ್ತದೆಯೆಂದು ಹೈಕೋರ್ಟ್ ತಿಳಿಸಿತು (ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಭಾಷಿಕ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕಿನ ಫಲವಾಗಿಯೇ ಕನ್ನಡಿಗರು ಕನ್ನಡ ಕಲಿಯುವ, ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಅವಕಾಶ ಪಡೆದಿರುವುದನ್ನು ಇಲ್ಲಿ ಗಮನಿಸಬಹುದು. ಅಲ್ಲದೆ, ಸಂವಿಧಾನದ 350ಎ ವಿಧಿಯು ಭಾಷಾ ಅಲ್ಪಸಂಖ್ಯಾತರು ತಮ್ಮ ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ಕೊಟ್ಟಿರುವುದು ಇಲ್ಲಿ ಉಲ್ಲೇಖನೀಯ).
ರಾಜ್ಯ ಹೈಕೋರ್ಟ್ ನೀಡಿದ ತೀರ್ಪಿನ ಪರಿಣಾಮವಾಗಿ ಕನ್ನಡವೊಂದೇ ಪ್ರಥಮ ಭಾಷೆಯಾಗಿರಬೇಕೆಂಬ ಗೋಕಾಕ್ ಸಮಿತಿ ನೀಡಿದ್ದ ಶಿಫಾರಸು ನಿಷ್ಫಲಗೊಂಡಿತು. ಸರ್ಕಾರವು 1989ರ ಜೂನ್ 19ರಂದು ಮತ್ತೊಂದು ಆದೇಶ ಹೊರಡಿಸಿ, ಕನ್ನಡವೂ ಸೇರಿದಂತೆ ಕರ್ನಾಟಕದಲ್ಲಿ ವಾಸಿಸುವ ಭಾಷಿಕ ಅಲ್ಪಸಂಖ್ಯಾತರ ಮಾತೃಭಾಷೆಗಳನ್ನು ಪ್ರಥಮ ಭಾಷೆ ಪಟ್ಟಿಗೆ ಸೇರಿತು. ಮೂಲತಃ ಯಾವ ಕಾರಣಕ್ಕಾಗಿ ಪ್ರತಿರೋಧ ಆರಂಭವಾಯಿತೋ ಅದೇ ಸಂಸ್ಕೃತ ಭಾಷೆಯನ್ನೂ ಈ ಆದೇಶದಲ್ಲಿ ಪ್ರಥಮ ಭಾಷೆ ಪಟ್ಟಿಗೆ ಸೇರಿಸಲಾಯಿತು! ಕನ್ನಡವೂ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನೇ ಮುಂದುವರಿಸಲಾಯಿತು.
ಈಗ ಇದ್ದಕ್ಕಿದ್ದಂತೆ ಕೇಂದ್ರೀಯ ಪಠ್ಯಕ್ರಮಕ್ಕನುಗುಣವಾಗಿ 125 ಅಂಕಗಳ ಬದಲು 100 ಅಂಕ ನಿಗದಿ ಮಾಡುವುದಾದರೆ, ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ವಿರೋಧಿಸಿದ್ದಾದರೂ ಯಾಕೆ? ರಾಜ್ಯ ಶಿಕ್ಷಣ ನೀತಿ ನಿರೂಪಣೆಗೆ ಸಮಿತಿ ರಚಿಸಿ ಅದರ ಶಿಫಾರಸುಗಳಿಗೂ ಕಾಯದೆ ಮತ್ತು ಬೇಗ ವರದಿ ಕೊಡಲು ಒತ್ತಾಯಿಸದೆ, ಶೈಕ್ಷಣಿಕ ಸುಧಾರಣೆ ಹೆಸರಲ್ಲಿ ಪ್ರಮುಖ ನಿರ್ಧಾರಗಳನ್ನು ಜಾರಿ ಮಾಡುವುದು ಸರಿಯೆ? ಸರ್ಕಾರ ಮರುಚಿಂತನೆ ಮಾಡಬೇಕಾಗಿದೆ.
ಹೋರಾಟದ ಫಲವಾಗಿ ನಿಗದಿಯಾದ 125 ಅಂಕಗಳನ್ನು ಹಾಗೇ ಉಳಿಸಿ, ಕನ್ನಡ ಓದುವ ಮಕ್ಕಳಿಗೆ ಪೂರಕ ಸುಧಾರಣೆಗಳನ್ನು ಜಾರಿಗೊಳಿಸುವ ಚರ್ಚೆ, ಚಿಂತನೆ ಮಾಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.