ADVERTISEMENT

ವಿಶ್ಲೇಷಣೆ | ಸಣ್ಣ ಹೂಡಿಕೆದಾರರಿಗೆ ಸಿಗುವುದೇ ಆದ್ಯತೆ?

ಹೇಮಂತ್ ಮಜಿಥಿಯಾ
Published 17 ಫೆಬ್ರುವರಿ 2022, 20:38 IST
Last Updated 17 ಫೆಬ್ರುವರಿ 2022, 20:38 IST
   

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒಗೆ ಸಂಬಂಧಿಸಿದ ಮಾತುಗಳು ದಿನಕಳೆದಂತೆ ಜೋರಾಗುತ್ತಿವೆ. ಎಲ್ಲರ ಕಣ್ಣುಗಳು ಎಲ್‌ಐಸಿ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಕಡೆ ನೆಟ್ಟಿವೆ. ಎಲ್‌ಐಸಿಯ ಮಾರುಕಟ್ಟೆ ಮೌಲ್ಯವು ₹ 15 ಲಕ್ಷ ಕೋಟಿ ಆಗಬಹುದು ಎಂಬ ವರದಿಗಳಿವೆ.

ಎಲ್‌ಐಸಿ ಐಪಿಒ ಸಂದರ್ಭದಲ್ಲಿ, ಕಂಪನಿಯ ಷೇರುಗಳಿಗೆ ಸಾಂಸ್ಥಿಕ ಹೂಡಿಕೆದಾರರಿಂದ ಮಾತ್ರವಲ್ಲದೆ ಸಣ್ಣ ಹೂಡಿಕೆದಾರರಿಂದಲೂ ಭಾರಿ ಪ್ರಮಾಣದ ಬೇಡಿಕೆ ಬರಬಹುದು ಎಂಬ ನಿರೀಕ್ಷೆ ಇದೆ. ಈಚಿನ ದಿನಗಳಲ್ಲಿ ಐಪಿಒ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರಿಂದ ಬರುವ ಅರ್ಜಿಗಳ ಸಂಖ್ಯೆಯು ದೊಡ್ಡ ಮಟ್ಟದಲ್ಲಿಯೇ ಇದೆ. ಉದಾಹರಣೆಗೆ, ಲೇಟೆಂಟ್ ವ್ಯೂ ಅನಾಲಿಟಿಕ್ಸ್‌ನ ₹ 600 ಕೋಟಿ ಮೌಲ್ಯದ ಐಪಿಒ ವೇಳೆ ಸಣ್ಣ ಹೂಡಿಕೆದಾರರಿಗೆ ಮೀಸಲಿದ್ದ ಷೇರುಗಳಿಗೆ 120 ಪಟ್ಟು ಹೆಚ್ಚು ಬಿಡ್‌ಗಳು ಸಲ್ಲಿಕೆಯಾಗಿದ್ದವು. ಪಾರಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಟೆಕ್ನಾಲಜೀಸ್‌ನ ಐಪಿಒ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರಿಗೆ ಮೀಸಲಿದ್ದ ಷೇರುಗಳಿಗೆ 113 ಪಟ್ಟು ಹೆಚ್ಚು ಅರ್ಜಿಗಳು ಬಂದಿದ್ದವು.

ದುರದೃಷ್ಟದ ಸಂಗತಿಯೆಂದರೆ, ಸಣ್ಣ ಹೂಡಿಕೆದಾರರಿಗೆ ಮೀಸಲಾದ ಕೋಟಾ ಅಡಿಯಲ್ಲಿ ಲಭ್ಯವಿರುವ ಷೇರುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಾಗ, ಸಣ್ಣ ಹೂಡಿಕೆದಾರರ ‍ಪೈಕಿ ಹಲವರಿಗೆ ಒಂದು ಷೇರು ಕೂಡ ಸಿಗುವುದಿಲ್ಲ. ಇದರಿಂದ ಅವರಿಗೆ ಹಣಕಾಸಿನ ನಷ್ಟವೇನೂ ಆಗುವುದಿಲ್ಲವಾದರೂ,
ಅವರ ಉತ್ಸಾಹವನ್ನು ಇದು ಕುಂದಿಸಬಹುದು. ಅದರಲ್ಲೂ ಮುಖ್ಯವಾಗಿ, ಈಕ್ವಿಟಿಗಳಲ್ಲಿ ಹೊಸದಾಗಿ ಹೂಡಿಕೆ ಮಾಡುತ್ತಿರುವವರ ಉತ್ಸಾಹವನ್ನು ಇದು ಕುಗ್ಗಿಸಬಹುದು.

ADVERTISEMENT

ಹೀಗಾಗಿ, ಐಪಿಒ ಮೂಲಕ ಷೇರು ಹಂಚಿಕೆ ಸಂದರ್ಭದಲ್ಲಿ ಎಲ್‌ಐಸಿ ಹೊಸ ಮಾದರಿಯೊಂದನ್ನು ಕಟ್ಟಿಕೊಡಬೇಕು. ಅರ್ಜಿ ಸಲ್ಲಿಸುವ ಸಣ್ಣ ಹೂಡಿಕೆದಾರರಿಗೆಲ್ಲರಿಗೂ ಷೇರುಗಳು ಸಿಗಬಾರದೇಕೆ? ಹೀಗೆ ಮಾಡುವುದರಿಂದ ಷೇರು ಮಾರುಕಟ್ಟೆಗಳ ನೆಲೆ ವಿಸ್ತರಣೆ ಕಾಣುವುದಲ್ಲದೆ, ಇದು ಹೂಡಿಕೆದಾರರಿಗೆ ದೇಶದ ಬಲಿಷ್ಠ ಬ್ರ್ಯಾಂಡ್‌ ಒಂದರ ಮಾಲೀಕತ್ವ ಹೊಂದಲು ಅವಕಾಶ ಕಲ್ಪಿಸುತ್ತದೆ.

ಕಳವಳಕ್ಕೆ ಕಾರಣ ಆಗುವ ಇನ್ನೊಂದು ವಿಚಾರವೂ ಇಲ್ಲಿದೆ. ದೊಡ್ಡ ಕಂಪನಿಗಳ ಐಪಿಒಗಳ ಮೂಲಕ ಷೇರು ಖರೀದಿಸಲು ಸಣ್ಣ ಹೂಡಿಕೆದಾರರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ, ಆ ಕಂಪನಿಗಳ ಷೇರು, ಷೇರುಪೇಟೆಯಲ್ಲಿ ನೋಂದಣಿ ಆದ ನಂತರದಲ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಲಾಭ ಕೊಡದಿದ್ದರೆ ಸಣ್ಣ ಹೂಡಿಕೆದಾರರು ನಿರಾಶೆ ಅನುಭವಿಸುತ್ತಾರೆ. ಆದರೆ ಎಲ್‌ಐಸಿಯು ಹೂಡಿಕೆದಾರರಿಗೆ ದೊಡ್ಡ ಅವಕಾಶ ಎಂಬುದು ನಿಜ.

ವಿಮಾ ವಲಯದಲ್ಲಿ ಖಾಸಗಿಯವರಿಗೆ ಪ್ರವೇಶ ನೀಡಿದ ನಂತರದಲ್ಲಿಯೂ ಎಲ್ಐಸಿ ದೊಡ್ಡ ಮಾರುಕಟ್ಟೆ ಪಾಲನ್ನು ಉಳಿಸಿಕೊಂಡಿದೆ. ವಿಮಾ ವಲಯದಲ್ಲಿ ಖಾಸಗಿ ಕಂಪನಿಗಳ ಪ್ರವೇಶ ಆಗಿ 20 ವರ್ಷಗಳು ಪೂರ್ಣಗೊಂಡಿದ್ದರೂ ಎಲ್‌ಐಸಿ ಇಲ್ಲಿ ಅತ್ಯಂತ ಬಲಿಷ್ಠ ಕಂಪನಿಯಾಗಿ ಮುಂದುವರಿದಿದೆ. ದೂರಸಂಪರ್ಕ ಕ್ಷೇತ್ರದಿಂದ ಆರಂಭಿಸಿ ಬ್ಯಾಂಕಿಂಗ್ ಕ್ಷೇತ್ರದವರೆಗೆ, ಖಾಸಗಿ ಕಂಪನಿಗಳು ಆಯಾ ಕ್ಷೇತ್ರದ ಸರ್ಕಾರಿ ಕಂಪನಿಗಳ ನೆಲೆಯನ್ನು ಅಲುಗಾಡಿಸಿವೆ. ಆದರೆ, ವಿಮಾ ವಲಯದಲ್ಲಿ ಮಾತ್ರ ಖಾಸಗಿ ಕಂಪನಿಗಳು ಎಲ್‌ಐಸಿ ಸ್ಥಾನವನ್ನು ಅಲುಗಾಡಿಸಿಲ್ಲ.

ಜಾಗತಿಕ ಮಟ್ಟದಲ್ಲಿ ಎಲ್‌ಐಸಿ ಮೂರನೆಯ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್, 10ನೆಯ ಅತ್ಯಂತ ಮೌಲ್ಯಯುತ ವಿಮಾ ಬ್ರ್ಯಾಂಡ್. ಮೊದಲ ಬಾರಿಗೆ ಹೂಡಿಕೆ ಮಾಡುತ್ತಿರುವವರಿಗೆ ಎಲ್‌ಐಸಿಯಂತಹ ಕಂಪನಿಗಳಲ್ಲಿ ಹೂಡಿಕೆ ಮಾಡಲು ಅವಕಾಶ ದೊರೆತರೆ, ನೈಜ ಸಂಪತ್ತು ಸೃಷ್ಟಿಸುವ ಕಂಪನಿಯೊಂದರ ಮಾಲೀಕರಾಗುವ ಖುಷಿಯನ್ನು ಅವರು ಅನುಭವಿಸುತ್ತಾರೆ. ಮುಂದೆಯೂ ಅವರು ಈಕ್ವಿಟಿ ಹೂಡಿಕೆಗಳಲ್ಲಿ ಆಸಕ್ತಿ ಉಳಿಸಿಕೊಳ್ಳುತ್ತಾರೆ.

ಹಿಂದಿನ ಎರಡು ವರ್ಷಗಳಿಂದ ಸಣ್ಣ ಹೂಡಿಕೆದಾರರು ಭಾರಿ ಸಂಖ್ಯೆಯಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಸಣ್ಣ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಇನ್ನಷ್ಟು ಹೆಚ್ಚಿಸಲು ಅವಕಾಶಗಳು ಇವೆ.

ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್‌ (ಅರ್ಥಾತ್ ಸಿಡಿಎಸ್‌ಎಲ್‌) 5.26 ಕೋಟಿಗಿಂತ ಹೆಚ್ಚು ಡಿ–ಮ್ಯಾಟ್ ಖಾತೆಗಳನ್ನು ಹೊಂದಿದೆ. ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ಸರಿಸುಮಾರು 2.45 ಕೋಟಿ ಡಿ–ಮ್ಯಾಟ್ ಖಾತೆಗಳನ್ನು ಹೊಂದಿದೆ. ಇದು 2021ರ ನವೆಂಬರ್‌ವರೆಗಿನ ಮಾಹಿತಿ. ಎಲ್‌ಐಸಿ ಬ್ರ್ಯಾಂಡ್‌ಗೆ ಇರುವ ಶಕ್ತಿಯ ಕಾರಣದಿಂದಾಗಿ ಇನ್ನಷ್ಟು ಹೊಸ ಹೂಡಿಕೆದಾರರು ಇದರತ್ತ ಆಕರ್ಷಿತರಾಗಬಹುದು. ಆದರೆ, ಹೀಗೊಂದು ಸಂದರ್ಭವನ್ನು ಊಹಿಸಿಕೊಳ್ಳಿ. ಸಣ್ಣ ಹೂಡಿಕೆದಾರರು ಎಲ್‌ಐಸಿ ಐಪಿಒ ಮೂಲಕ ಷೇರು ಖರೀದಿಸುವ ಉದ್ದೇಶದಿಂದ ಹೊಸದಾಗಿ ಡಿ–ಮ್ಯಾಟ್ ಖಾತೆ ಆರಂಭಿಸುತ್ತಾರೆ. ಆದರೆ, ಐಪಿಒ ವೇಳೆ ಷೇರುಗಳಿಗೆ ಭಾರಿ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿ ಹೊಸ ಸಣ್ಣ ಹೂಡಿಕೆದಾರರಿಗೆ ಷೇರುಗಳು ಸಿಗುವುದಿಲ್ಲ ಎಂದು ಭಾವಿಸಿ. ಈ ರೀತಿ ಆದಲ್ಲಿ, ಹೊಸ ಸಣ್ಣ ಹೂಡಿಕೆದಾರರು ತಮ್ಮ ಹೂಡಿಕೆ ಪಯಣವನ್ನು ಆರಂಭಕ್ಕೂ ಮೊದಲೇ ಕೊನೆಗೊಳಿಸಬಹುದು.

ಐಪಿಒ ನಿಯಮಗಳು ಸಣ್ಣ ಹೂಡಿಕೆದಾರರ ಪರವಾಗಿ ಇರುವಂತೆ ಮಾಡಬೇಕು. ಬಂಡವಾಳ ಮಾರುಕಟ್ಟೆಯನ್ನು ಸಣ್ಣ ಹೂಡಿಕೆದಾರರ ಮಟ್ಟದಲ್ಲಿ ಇನ್ನಷ್ಟು ವಿಸ್ತರಿಸುವ ಅವಕಾಶವನ್ನು ಎಲ್‌ಐಸಿ ಐಪಿಒ ಪ್ರಕ್ರಿಯೆಯು ಕೇಂದ್ರ ಸರ್ಕಾರಕ್ಕೆ ಒದಗಿಸುತ್ತಿದೆ. ಐಪಿಒ ವೇಳೆ ಸಾಂಸ್ಥಿಕ ಖರೀದಿದಾರರಿಗೂ ಮೊದಲು, ಸಣ್ಣ ಹೂಡಿಕೆದಾರರಿಗೆ ಎಲ್‌ಐಸಿ ಷೇರುಗಳು ಸಿಗುವಂತೆ ಮಾಡಬೇಕು. ಈಗಿರುವ ನಿಯಮಗಳ ಅನ್ವಯ, ಸಾಂಸ್ಥಿಕ ಖರೀದಿದಾರರಿಗೆ ಐಪಿಒ ಪೂರ್ವ ಹಂತದಲ್ಲಿ ಷೇರುಗಳ ಹಂಚಿಕೆ ಆಗುತ್ತದೆ.

ಅದಾದ ನಂತರದಲ್ಲಿ ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಷೇರುಗಳನ್ನು ಹಂಚಿಕೆ ಮಾಡಲಾಗುತ್ತದೆ. ಸಣ್ಣ ಹೂಡಿಕೆದಾರರು ಕನಿಷ್ಠ ಒಂದು ಲಾಟ್ ಷೇರುಗಳಿಗೆ ಬಿಡ್ ಸಲ್ಲಿಸಬೇಕು ಎಂಬ ನಿಯಮ ಇದೆ. ಒಂದು ಲಾಟ್ ಷೇರುಗಳನ್ನು ಖರೀದಿಸಲು ₹ 10 ಸಾವಿರದಿಂದ ₹ 15 ಸಾವಿರದವರೆಗೆ ಹಣ ತೆಗೆದಿರಿಸಬೇಕು. ಲಭ್ಯವಿರುವ ಷೇರುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಡ್ ಸಲ್ಲಿಕೆಯಾದರೆ, ಸಣ್ಣ ಹೂಡಿಕೆದಾರರಿಗೆಲ್ಲರಿಗೂ ಷೇರುಗಳು ಸಿಗುವುದಿಲ್ಲ. ಆಗ ಲಾಟರಿ ಆಧಾರದಲ್ಲಿ ಷೇರು ಹಂಚಿಕೆ ಆಗುತ್ತದೆ. ಅದೃಷ್ಟದ ಆಧಾರದಲ್ಲಿ ಷೇರುಗಳನ್ನು ಹಂಚಿಕೆ ಮಾಡುವ ಈ ಕ್ರಮವು ಸಣ್ಣ ಹೂಡಿಕೆದಾರರು ಐಪಿಒಗಳಿಂದ ಹಿಂದಕ್ಕೆ ಸರಿಯುವಂತೆ ಮಾಡಲಾರಂಭಿಸಿದೆ.

ಎಲ್‌ಐಸಿ ಷೇರುಗಳಿಗೆ ಸಣ್ಣ ಹೂಡಿಕೆದಾರರಿಂದ ಭಾರಿ ಪ್ರಮಾಣದಲ್ಲಿ ಬಿಡ್ ಸಲ್ಲಿಕೆಯಾಗುವ ಸಾಧ್ಯತೆ ಹೆಚ್ಚು. ಇತರ ಎಲ್ಲರಿಗಿಂತ ಹೆಚ್ಚಿನ ಆದ್ಯತೆಯು ಎಲ್‌ಐಸಿ ಐಪಿಒ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರಿಗೆ ಸಿಗುತ್ತದೆ ಎಂಬುದನ್ನು ಖಾತರಿಪಡಿಸಲು ಸರ್ಕಾರಕ್ಕೆ ಸಾಧ್ಯವಾದರೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಹೂಡಿಕೆದಾರರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ಅದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸುವ ಹಣಕಾಸಿನ ಒಳಗೊಳ್ಳುವಿಕೆಗೆ ಪೂರಕವಾಗಿ ಇರುತ್ತದೆ. ಸರ್ಕಾರವು ತನ್ನ ಅತ್ಯುತ್ತಮ ಕಂಪನಿಯೊಂದರ ಷೇರುಗಳನ್ನು ಸಾರ್ವಜನಿಕರಿಗೆ
ಖರೀದಿಗೆ ಮುಕ್ತವಾಗಿಸುತ್ತಿರುವುದು ಹಾಗೂ ದೊಡ್ಡ ಹೂಡಿಕೆದಾರರಿಗಿಂತ ಹೆಚ್ಚಿನ ಆದ್ಯತೆಯನ್ನು ಸಣ್ಣ ಹೂಡಿಕೆದಾರರಿಗೆ ನೀಡುವುದು ದೊಡ್ಡ ಸಂದೇಶವೊಂದನ್ನು ರವಾನಿಸುತ್ತದೆ. ಎಲ್‌ಐಸಿ ಬಹಳ ಬಲಿಷ್ಠವಾದ ಸರ್ಕಾರಿ ಕಂಪನಿ. ದೇಶದ ಹಲವು ಬ್ಲೂಚಿಪ್ ಕಂಪನಿಗಳಲ್ಲಿ ಎಲ್‌ಐಸಿ ಪಾಲು ಹೊಂದಿದೆ. ಎಲ್‌ಐಸಿಯ ಮಾಲೀಕರಾಗುವ ಮೊದಲ ಹಕ್ಕು ದೇಶದ ಸಣ್ಣ ಹೂಡಿಕೆದಾರರಿಗೆ ಸಿಗಬೇಕು.

ಎಲ್‌ಐಸಿ ಐಪಿಒದಲ್ಲಿ ಪಾಲಿಸಿದಾರರ ವರ್ಗ ಎಂಬ ವಿಭಾಗವೊಂದನ್ನು ಆರಂಭಿಸಿ ಮೇಲ್ಪಂಕ್ತಿಯನ್ನು ಸರ್ಕಾರ ಹಾಕಿದೆ. ಇದನ್ನು ಇನ್ನಷ್ಟು ವಿಸ್ತರಿಸಿ, ದೇಶದಲ್ಲಿ ಈಕ್ವಿಟಿ ಹೂಡಿಕೆಯ ಸಂಸ್ಕೃತಿಗೆ ಒಂದು ದೊಡ್ಡ ಪ್ರೋತ್ಸಾಹವನ್ನು ಸರ್ಕಾರ ನೀಡಬಹುದು. ಸಣ್ಣ ಹೂಡಿಕೆದಾರರ ನಡುವೆ ಈಕ್ವಿಟಿ ಹೂಡಿಕೆಯ ಪ್ರವತ್ತಿಗೆ ನೀರೆರೆಯಲು ಎಲ್‌ಐಸಿಯಂತಹ ಕಂಪನಿಗಳ ಷೇರುಗಳಲ್ಲಿ ಹೂಡಿಕೆಗೆ ಅವಕಾಶ ಕೊಡುವುದಕ್ಕಿಂತ ದೊಡ್ಡ ಅವಕಾಶ ಇನ್ನೊಂದು ಇರಲಾರದು.

ಲೇಖಕ: ನಿರ್ದೇಶಕ ಮತ್ತು ಸಿಇಒ,ವೆಂಚುರಾ ಸೆಕ್ಯುರಿಟೀಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.