ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ವಿಶ್ಲೇಷಣೆ | ಆ ಲಿಂಕನ್ ಮತ್ತು ಈ ಟ್ರಂಪ್
ಪಿಟಿಐ ಚಿತ್ರ
ಈಗ್ಯೆ ಕೆಲವು ದಿನಗಳ ಹಿಂದೆ ನನ್ನ ಹಳ್ಳಿಯ ಮನೆಯ ಅಟ್ಟದಲ್ಲಿ ನಮ್ಮ ತಂದೆಯವರು ಸಂಗ್ರಹಿಸಿ ಒಟ್ಟಿದ್ದ ಪುಸ್ತಕಗಳನ್ನು ಕೆದಕುತ್ತಿದ್ದಾಗ, ಒಂದು ಇಂಗ್ಲಿಷ್ ಪುಸ್ತಕ ಕಣ್ಣಿಗೆ ಬಿದ್ದಿತು. ಅದು 1936ರಲ್ಲಿ ಪ್ರಕಟಣೆಯಾದ 220 ಪುಟಗಳ ಪುಸ್ತಕ. ಅದರ ಹೆಸರು, ‘ರೀಡಿಂಗ್ಸ್ ಇನ್ ಪ್ರೋಜ್ ಅಂಡ್ ವರ್ಸ್’. ಅದರ ಪ್ರಕಾಶಕರು, ಅಂದಿನ ಮದರಾಸಿನ ‘ಭಾರತ್ ಪಬ್ಲಿಷಿಂಗ್ ಹೌಸ್’ ಸಂಸ್ಥೆಯವರು. ಅದು, 90 ವರ್ಷಗಳ ಹಿಂದೆ, ಅಂದಿನ ಭಾರತೀಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿಪಡಿಸಿದ್ದ ಇಂಗ್ಲಿಷ್ ಭಾಷಾ ಪಠ್ಯಪುಸ್ತಕ. ಆಗ ಅದರ ಬೆಲೆ, ಒಂದೂಕಾಲು ರೂಪಾಯಿ.
ಆ ಪಠ್ಯಪುಸ್ತಕದ ಮುನ್ನುಡಿಯಲ್ಲಿ ಹೀಗೆ ಹೇಳಲಾಗಿದೆ:
‘ಈ ಪಠ್ಯಪುಸ್ತಕದ ಪಠ್ಯಗಳ ಆಯ್ಕೆಯನ್ನು 14ರಿಂದ 16 ವರ್ಷದ ಭಾರತೀಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ...ಆಸಕ್ತಿ
ದಾಯಕ ವಸ್ತು ವಿಷಯವನ್ನು ಪರಿಗಣಿಸದೆ, ವಿದೇಶಿ ಭಾಷೆಯೊಂದನ್ನು ಕೇವಲ ಭಾಷೆಯನ್ನಾಗಿ ಬೋಧಿಸುವುದು ವಿದ್ಯಾರ್ಥಿ ಮತ್ತು ಬೋಧಕ
ರಿಬ್ಬರಿಗೂ ಶುಷ್ಕ ಹಾಗೂ ನೀರಸ ಪ್ರಕ್ರಿಯೆಯಾಗಿ ಬಿಡುತ್ತದೆ. ಈ ಅಪಾಯವನ್ನು ತಪ್ಪಿಸಲು ಈ ಪಠ್ಯಪುಸ್ತಕದಲ್ಲಿ ಜಾಗತಿಕ ಸಾಹಿತ್ಯದ ಶ್ರೇಷ್ಠ ಬರಹಗಳನ್ನು ಜಾಗರೂಕತೆಯಿಂದ ಅಳವಡಿಸ
ಲಾಗಿದೆ. ಇದರಿಂದ ಭಾಷಾ ಬೋಧನೆಯನ್ನು ಪರಿಣಾಮಕಾರಿ ವಾಹಕವನ್ನಾಗಿಸುವುದಲ್ಲದೆ, ಅವರ ಅಂದರೆ ವಿದ್ಯಾರ್ಥಿಗಳ ಮಾನವ ಸಹಜ ಆಸಕ್ತಿಯ ಜೀವಂತಿಕೆಯನ್ನು ಉಳಿಸಿದಂತಾಗುತ್ತದೆ’.
ಮುನ್ನುಡಿಯ ಆಶಯದಂತೆಯೇ ಈ ಪಠ್ಯಪುಸ್ತಕದ ಗದ್ಯಭಾಗದಲ್ಲಿ ಲಿಯೋ ಟಾಲ್‌ಸ್ಟಾಯ್, ಬುನ್ಯಾನ್, ಸ್ವಿಫ್ಟ್, ಕೌಪರ್, ಮೆಕಾಲೆ, ಅಬ್ರಹಾಂ ಲಿಂಕನ್, ಲಾರ್ಡ್ ಇರ್ವಿನ್, ಗೋಲ್ಡ್ ಸ್ಮಿತ್, ಇರ್ವಿಂಗ್... ಹೀಗೆ ಜಗತ್ಪ್ರಸಿದ್ಧರ ಬರಹಗಳಿವೆ.
ತೊಂಬತ್ತು ವರ್ಷಗಳ ಹಿಂದಿನ ಈ ಇಂಗ್ಲಿಷ್ ಭಾಷೆಯ ಪ್ರೌಢಶಾಲಾಮಟ್ಟದ ಪಠ್ಯಪುಸ್ತಕವನ್ನು ನೋಡಿದಾಗ, ನನಗೆ ಈಗ್ಯೆ 60 ವರ್ಷಗಳ ಹಿಂದೆ ನಾನು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಅಂದಿನ ಸರ್ಕಾರ ನಿಗದಿಪಡಿಸಿದ್ದ ಇಂಗ್ಲಿಷ್ ಮತ್ತು ಕನ್ನಡ ಪಠ್ಯಪುಸ್ತಕಗಳು ನೆನಪಿಗೆ ಬಂದವು. ಅದರ ಜೊತೆಯಲ್ಲಿಯೇ ಇಂದಿನ ಶಿಕ್ಷಣ ಕ್ರಮದ ಪಠ್ಯಗಳೂ ಕಣ್ಣ ಮುಂದೆ ಸುಳಿದವು.
ಒಂಬತ್ತು ದಶಕಗಳ ಹಿಂದಿನ ಈ ಇಂಗ್ಲಿಷ್ ಪಠ್ಯಪುಸ್ತಕ ಕೇವಲ ಭಾಷೆಯನ್ನು ಕಲಿಸುವ ಪಠ್ಯವಾಗಿರಲಿಲ್ಲ. ಬದಲಿಗೆ, ಅದರ ಮುನ್ನುಡಿ
ಯಲ್ಲಿಯೇ ಹೇಳಿರುವಂತೆ, ಜೀವನಾಸಕ್ತಿ ಮತ್ತು ಜೀವನ ಮೌಲ್ಯಗಳನ್ನು ಕಲಿಸುವ ಪಠ್ಯವೂ ಆಗಿತ್ತು ಎಂಬುದನ್ನು ಅದನ್ನು ಓದಿದ ಮೇಲೆ ನನಗನ್ನಿಸಿತು. ಲಿಯೋ ಟಾಲ್‌ಸ್ಟಾಯ್‌ರವರ ಪ್ರಸಿದ್ಧ ಕಥೆ ‘God Sees the truth but waits’ ಸಾರುವ ಸಂದೇಶದೊಂದಿಗೆ ಆ ಪಠ್ಯಪುಸ್ತಕ ಆರಂಭ
ಆಗುತ್ತದೆ. ಮತ್ತೊಂದು ಪಠ್ಯ ಮೆಕಾಲೆ ಬರೆದಿರುವ ವಾರನ್ ಹೇಸ್ಟಿಂಗ್ಸ್‌ನ ವರದಿ ರೂಪದ ಗದ್ಯಬರಹ. ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್‌ನು ಭಾರತದಲ್ಲಿ ನಡೆಸಿದ ಭ್ರಷ್ಟಾಚಾರದ ವ್ಯವಹಾರವೊಂದರಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಬೇಕಾಗಿ ಬಂದುದರ ವಿವರ ಅದು. ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್‌ನ ಸದಸ್ಯರು ಅವನ ಮೇಲೆ ಗುರುತರ ಆರೋಪ ಪಟ್ಟಿ ಮಾಡಿ, ಹೌಸ್ ಆಫ್ ಲಾರ್ಡ್ಸ್‌ನ ಜ್ಯೂರಿಗಳ ಮುಂದೆ ವಿಚಾರಣೆಗೆ ಒಳಪಡಿಸುತ್ತಾರೆ. ಆ ವಿಚಾರಣೆಯ ಸ್ವಾರಸ್ಯ, ಮಾಡಿದ ಆರೋಪ, ಇಟ್ಟ ರುಜುವಾತುಗಳು, ನಡೆದ ವಾದ–ಪ್ರತಿವಾದ ಇವುಗಳನ್ನು ಮೆಕಾಲೆ ತನ್ನದೇ ಭಾಷೆಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ.
ಅದೊಂದು ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯ ಶುಷ್ಕ ವರದಿಯಲ್ಲ. ಬದಲಿಗೆ ಅದು, ಇಂಗ್ಲೆಂಡಿನ ಪ್ರಜಾಪ್ರಭುತ್ವದ ಗಟ್ಟಿ ಬೇರುಗಳ ಚರಿತ್ರೆಯನ್ನು ಜೊತೆ ಜೊತೆಯಲ್ಲಿಯೇ ಹೇಳುತ್ತಾ ಹೋಗುತ್ತದೆ. ಇಂಗ್ಲೆಂಡಿನ ಪ್ರಜಾಪ್ರಭುತ್ವ ವ್ಯವಸ್ಥೆ ಎಂತೆಂತಹ ಅತಿರಥ ಮಹಾರಥರನ್ನು ಆಪೋಶನ ತೆಗೆದುಕೊಂಡಿತು ಎಂದು ಮೆಕಾಲೆ ಹೇಳುತ್ತಲೇ, ಇದೀಗ ವಾರನ್ ಹೇಸ್ಟಿಂಗ್ಸ್‌ನ ಸರದಿ ಎಂದು ಆರಂಭಿಸುತ್ತಾನೆ. ಇದು ನಮ್ಮ ದೇಶದ ಇಂದಿನ ರಾಜಕಾರಣದ ವ್ಯವಸ್ಥೆಗೆ ಪ್ರಸ್ತುತವೆಂದೇ ನನ್ನ ಭಾವನೆ.
ಹೀಗೆ ಈ ಪಠ್ಯಪುಸ್ತಕ ವಿದೇಶಿ ಭಾಷೆಯೊಂದನ್ನು ಭಾರತೀಯ ವಿದ್ಯಾರ್ಥಿಗಳಿಗೆ ಕಲಿಸುವಾಗ, ಬರಿಯ ಇಂಗ್ಲಿಷ್ ವ್ಯಾಕರಣದ Active voice, Passive voice, Direct- Indirect speechಗಳಿಗೆ ಸೀಮಿತವಾಗಿರದೆ, ಜೀವನಾದರ್ಶನಗಳನ್ನು ಬಿತ್ತುವ ಮಾರ್ಗದರ್ಶಿಯೂ ಆಗಿತ್ತು ಎಂಬುದು ಅದನ್ನು ಓದಿದಾಗ ನನಗನ್ನಿಸಿತು. ಆ ಪುಸ್ತಕದಲ್ಲಿನ ಒಂದು ಪಾಠವಂತೂ ಮನಸ್ಸನ್ನು ತೀವ್ರವಾಗಿ ಸೆಳೆಯಿತು. ಅದು, ಅಬ್ರಹಾಂ ಲಿಂಕನ್ ಅವರ ‘ಡೆಡಿಕೇಷನ್ ಆಫ್ ಗೆಟ್ಟಿಸ್‌ಬರ್ಗ್’ ಎಂಬುದು. 1863ನೇ ನವೆಂಬರ್ 19ರಂದು ಅಬ್ರಹಾಂ ಲಿಂಕನ್ ಅವರು ಮಾಡಿದ ಭಾಷಣದ ಆಯ್ದ ಭಾಗವದು.
ನಾವೆಲ್ಲ ತಿಳಿದಂತೆ ಅಮೆರಿಕ ಸಂಯುಕ್ತ ಸಂಸ್ಥಾನ ಸ್ವತಂತ್ರ ರಾಷ್ಟ್ರವಾಗಿ ಜನ್ಮ ತಳೆದದ್ದು 1776ನೇ ಜುಲೈ 4ರಂದು. ಅದಾದ ಸುಮಾರು 80 ವರ್ಷಗಳ ನಂತರ– ಅಂದರೆ, 19ನೇ ಶತಮಾನದ ಉತ್ತರಾರ್ಧದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಚಾರಿತ್ರಿಕವಾಗಿ ‘ಸಿವಿಲ್ ವಾರ್’ ಎಂದೇ ಕರೆಯಲಾಗುವ ಅಂತಃಕಲಹ ನಡೆಯಿತು. ಅಮೆರಿಕದ ಪ್ರಾಂತ್ಯಗಳು ನೀಗ್ರೊಗಳಿಗೂ ಎಲ್ಲರಂತೆ ಬದುಕುವ ಹಕ್ಕು ಇದೆ ಎಂಬ ಸರ್ಕಾರದ ನಿಲುವಿಗೆ ಬೆಂಬಲವಾಗಿ ನಿಂತವು. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಅಬ್ರಹಾಂ ಲಿಂಕನ್. ಗೆಟ್ಟಿಸ್‌ಬರ್ಗ್ ಎಂಬ ನೆಲದಲ್ಲಿ ನಡೆದದ್ದು ಆ ಯುದ್ಧ. ಉಕ್ಕಿನ ಕಾಠಿಣ್ಯದ ಆಡಳಿತಗಾರನಾಗಿ, ಆದರೆ ಅತ್ಯಂತ ಕೋಮಲ ಹೃದಯದ ಮಾನವತಾವಾದಿಯಾಗಿ, ವಸ್ತುನಿಷ್ಠ ಆದರ್ಶವಾದಿಯಾಗಿ ಲಿಂಕನ್ ಅವರು ಉತ್ತರ ಪ್ರಾಂತ್ಯಗಳ ಬೆಂಬಲದಿಂದ ಆ ಅಂತರ್ಯುದ್ಧವನ್ನು ಸಮರ್ಥವಾಗಿ ನಿಭಾಯಿಸಿದರು. ಸಂಯುಕ್ತ ಸಂಸ್ಥಾನದ ಏಕತೆ ಕಾಯ್ದುಕೊಳ್ಳುವುದರ ಜೊತೆಗೆ ತಮ್ಮ ಮಾನವತಾವಾದದ ಧ್ಯೇಯ ಗೆಲ್ಲುವಂತೆಯೂ ನೋಡಿಕೊಂಡರು.
ಆ ಅಂತರ್ಯುದ್ಧದಲ್ಲಿ ಉದಾತ್ತ ಮಾನವೀಯ ಮೌಲ್ಯಕ್ಕಾಗಿ ಪ್ರಾಣತೆತ್ತ ಧೀರಯೋಧರಿಗೆ ಗೌರವ ಸಮರ್ಪಣೆ ಮಾಡಲು ಗೆಟ್ಟಿಸ್‌ಬರ್ಗ್ ನೆಲದಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಲಿಂಕನ್ ಅವರು, ಈಗ್ಯೆ 162 ವರ್ಷಗಳ ಹಿಂದೆ ಮಾಡಿದ ಭಾಷಣ ಅಥವಾ ನೀಡಿದ ಸಂದೇಶವೇ ಆ ಪಠ್ಯಪುಸ್ತಕದಲ್ಲಿನ ಪಾಠ. ಅದೇ ನನಗೆ ತುಂಬ ಹಿಡಿಸಿದ್ದು. ಲಿಂಕನ್ ಅವರ ಆ ಸಂದೇಶ– ಭಾಷಣ ಹೀಗಿದೆ:
‘ಈಗ್ಯೆ 87 ವರ್ಷಗಳ ಹಿಂದೆ ನಮ್ಮ ಹಿರಿಯರೂ, ಪಿತಾಮಹರೂ ಈ ಖಂಡದ ಮೇಲೆ ಸ್ವಾತಂತ್ರ್ಯಕ್ಕೆ ಬದ್ಧವಾದ ಮತ್ತು ಎಲ್ಲ ಮನುಜರೂ ಸರ್ವಸಮಾನವಾಗಿ ಸೃಷ್ಟಿಸಲ್ಪಟ್ಟಿದ್ದಾರೆ ಎಂಬ ತತ್ವಕ್ಕೆ ಅನುಗುಣವಾದ ಹೊಸ ರಾಷ್ಟ್ರವೊಂದರ ಉದಯಕ್ಕೆ ಕಾರಣರಾದರು.
ಈಗ ನಾವು ಅಂತಃಕಲಹದಲ್ಲಿ ನಿರತರಾಗಿದ್ದೇವೆ. ಇದು ಅಂತಹ ಉದಾತ್ತ ಧ್ಯೇಯಕ್ಕೆ ಅರ್ಪಿಸಿಕೊಂಡಿರುವ ಒಂದು ರಾಷ್ಟ್ರ ಅಥವಾ ಅಂತಹ ಯಾವುದೇ ರಾಷ್ಟ್ರ ದೀರ್ಘಕಾಲ ಬಾಳಬಲ್ಲುದೇ ಎಂಬ ಪರೀಕ್ಷೆಯ ಸಮಯ ನಮಗೆ ಒದಗಿಸಿದೆ. ಇಂತಹ ರಾಷ್ಟ್ರ ಉಳಿಯಲೇಬೇಕೆಂಬ ವಾಂಛೆಯಿಂದ ತಮ್ಮ ಪ್ರಾಣವನ್ನೇ ಅರ್ಪಿಸಿದವರ ಶಾಶ್ವತ ವಿಶ್ರಾಂತಿಗೆಂದು ಈ ಯುದ್ಧಭೂಮಿಯ ಒಂದು ಭಾಗವನ್ನು ಅರ್ಪಿಸಲು ನಾವಿಲ್ಲಿ ಬಂದಿದ್ದೇವೆ. ಇದು ನಾವು ಮಾಡಲೇಬೇಕಾದ ಅರ್ಹ ಹಾಗೂ ಸರಿಯಾದ ಕರ್ತವ್ಯವಾಗಿದೆ.
ವಿಶಾಲವಾದ ಅರ್ಥದಲ್ಲಿ ಹೇಳುವುದಾದರೆ, ಈ ನೆಲದಲ್ಲಿ ನಾವು ಅರ್ಪಿಸಬೇಕಾದದ್ದಾಗಲೀ, ಪ್ರತಿಷ್ಠಾಪಿಸಬೇಕಾದದ್ದಾಗಲೀ, ಟೊಳ್ಳುಗೊಳಿಸಬೇಕಾದದ್ದಾಗಲೀ ನಮ್ಮ ಪಾಲಿಗೆ ಉಳಿದಿಲ್ಲ. ಏಕೆಂದರೆ, ಯುದ್ಧದಲ್ಲಿ ಬದುಕುಳಿದವರು ಮತ್ತು ಪ್ರಾಣತೆತ್ತಿರುವ ವೀರರು ಈ ನೆಲವನ್ನು ಈಗಾಗಲೇ ಮಹತ್ತಾಗಿ ಪ್ರತಿಷ್ಠಾಪಿಸಿಬಿಟ್ಟಿದ್ದಾರೆ. ಹಾಗಾಗಿ ಈ ಪವಿತ್ರ ಭೂಮಿಗೆ ನಾವು ಸೇರಿಸಬೇಕಾದದ್ದು, ಕಳೆಯ
ಬೇಕಾದದ್ದು ಏನೂ ಇಲ್ಲ. ಇದು ನಮ್ಮ ಯಃಕಶ್ಚಿತ್ ಅಧಿಕಾರಕ್ಕಿಂತಲೂ ಅತ್ಯಂತ ಮಿಗಿಲಾದದ್ದು ಮತ್ತು ಮಹತ್ತರವಾದದ್ದು. ಇಲ್ಲಿ ನಾವು ಹೇಳುವ ಮಾತುಗಳನ್ನು ಜಗತ್ತು ಗಮನಿಸದೇ ಹೋಗ
ಬಹುದು ಅಥವಾ ದೀರ್ಘಕಾಲ ನೆನಪಿನಲ್ಲಿ ಇಟ್ಟುಕೊಳ್ಳದಿರಬಹುದು. ಆದರೆ, ಆ ಧೀರರು ಇಲ್ಲಿ
ಮಾಡಿದ ಮಹತ್ಕಾರ್ಯವನ್ನು ಜಗತ್ತು ಎಂದಿಗೂ ಮರೆಯಲಾಗದು. ಯಾವ ಉದಾತ್ತ ಧ್ಯೇಯಕ್ಕಾಗಿ ಆ ಧೀರರು ಹೋರಾಡಿದರೋ ಆ ಉದಾತ್ತ ಧ್ಯೇಯವು ಅಪೂರ್ಣವಾಗದಂತೆ ಪೂರ್ಣವಾಗಿ ಸಾಕಾರ
ಗೊಳ್ಳಲು ಬದುಕಿರುವ ನಾವು ನಮ್ಮನ್ನು ನಾವೇ ಅರ್ಪಿಸಿಕೊಳ್ಳಬೇಕಾಗಿದೆ. ತಮ್ಮ ಜೀವದ ಕೊನೆಯ ಉಸಿರಿನವರೆಗೆ ಆ ಧೀರರು ಯಾವ ಘನ ಗುರಿ ಸಾಧನೆಗಾಗಿ ತಮ್ಮನ್ನು ತಾವು ತೆತ್ತುಕೊಂಡರೋ, ಅದರಿಂದ ಮತ್ತೂ ಹೆಚ್ಚಿನ ಸ್ಫೂರ್ತಿ ಪಡೆದು ಅಪೂರ್ಣವಾಗಿ ಉಳಿದಿರುವ ಘನಕಾರ್ಯವನ್ನು ಪೂರ್ಣ
ಗೊಳಿಸಲು ನಾವು ಪ್ರತಿಜ್ಞಾಬದ್ಧರಾಗಬೇಕಿದೆ.
ಈ ಧೀರರ ಸಾವು ನಿಷ್ಫಲವಾಗಬಾರದೆಂದರೆ, ಈ ರಾಷ್ಟ್ರದ ಸ್ವಾತಂತ್ರ್ಯದ ಹೊಸ ಹುಟ್ಟಿನಿಂದ ಪ್ರಜೆಗಳ, ಪ್ರಜೆಗಳಿಂದ, ಪ್ರಜೆಗಳಿಗಾಗಿ ನಡೆಸುವ ಪ್ರಜಾ ಸರ್ಕಾರವನ್ನು ಈ ಭೂಮಿಯ ಮೇಲೆ ನಾಶ
ಆಗದಂತೆ ಕಾಪಾಡಿಕೊಳ್ಳುತ್ತೇವೆ ಎಂಬ ಪ್ರತಿಜ್ಞೆಯನ್ನು ದೈವಸಾಕ್ಷಿಯಾಗಿ ನಾವೆಲ್ಲರೂ ಮಾಡಬೇಕಾಗಿದೆ’.
ಇದು 162 ವರ್ಷಗಳ ಹಿಂದೆ ಅಬ್ರಹಾಂ ಲಿಂಕನ್‌ರವರು ಆಡಿದ ಮಾತು. ನೀಡಿದ ಸಂದೇಶ. ಇದು ಈಗ ಹೆಚ್ಚು ಪ್ರಸ್ತುತ ಎಂದು ನನ್ನ ಭಾವನೆ. ಇದನ್ನು ಓದಿದಾಗ ನನಗೆ, ನಾನು ಹತ್ತನೇ ತರಗತಿಯಲ್ಲಿದ್ದಾಗ ಇದ್ದ ಪಠ್ಯಪುಸ್ತಕದ ಮೊದಲ ಪಾಠ ‘A Tryst with Destiny’ ಜ್ಞಾಪಕಕ್ಕೆ ಬಂತು. 1947ನೇ ಆಗಸ್ಟ್ 14ರ ಮಧ್ಯರಾತ್ರಿ ಭಾರತ ಸ್ವತಂತ್ರಗೊಂಡಾಗ ಜವಾಹರಲಾಲ್ ನೆಹರೂ ಅವರು ಮಾಡಿದ ಚಾರಿತ್ರಿಕ ಭಾಷಣ ಅದು. ‘ಇಡೀ ಜಗತ್ತೇ ಮಲಗಿರುವಾಗ ಭಾರತ ಎಚ್ಚರಗೊಂಡಿದೆ’ ಎಂದು ಭಾಷಣ ಆರಂಭಿಸುವ ನೆಹರೂ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸಾದ ‘ಪ್ರತಿಯೊಂದು ಕಣ್ಣಿನಿಂದಲೂ ಕಣ್ಣೀರು ಒರೆಸುವುದು ತಮ್ಮ ಜೀವನದ ಧ್ಯೇಯ’ ಎಂಬುದನ್ನು ಸಾಕಾರಗೊಳಿಸುವ ಸವಾಲು ನಮ್ಮ ಮುಂದಿದೆ ಎನ್ನುತ್ತಾರೆ.
ಈ ಸಂದೇಶಗಳು ಈಗ ಹೆಚ್ಚು ಪ್ರಸ್ತುತ ಎಂದು ನನ್ನ ಭಾವನೆ. ಇಂದು ಎಲ್ಲೆಲ್ಲೂ ನಮ್ಮನ್ನು ಯುದ್ಧೋನ್ಮಾದದ ಭೀತಿ ಕಾಡುತ್ತಿದೆ. ಧರ್ಮ, ಜಾತಿ, ವ್ಯಾಪಾರ, ವ್ಯವಹಾರ, ಒಣಪ್ರತಿಷ್ಠೆ, ಧನದಾಹ– ಹೀಗೆ ಒಂದಲ್ಲ ಒಂದು ಕಾರಣ. ಇಂತಹ ಪರಿಸ್ಥಿತಿಯ ಮಧ್ಯೆಯೇ, ಲಿಂಕನ್ ಅವರು ಕುಳಿತಿದ್ದ ಕುರ್ಚಿಯಲ್ಲಿ ಕುಳಿತಿರುವ ಡೊನಾಲ್ಡ್ ಟ್ರಂಪ್ ಮಹಾಶಯನ ಉದ್ಧಟತನ ಮತ್ತು ಅವಿವೇಕದ ನಡವಳಿಕೆಗಳನ್ನು ನೋಡಬೇಕಾಗಿದೆ.
ಅಂದು ಲಿಂಕನ್ ಮಾಡಿದ ಭಾಷಣದ ಪ್ರತಿಸಾಲೂ ಮನನಯೋಗ್ಯವಾಗಿದೆ. ಅದರಲ್ಲೂ ಭಾಷಣ ಮುಗಿಸುವ ಮುನ್ನ ಅವರು ಹೇಳಿದ ‘ಪ್ರಜೆಗಳ, ಪ್ರಜೆಗಳಿಂದ, ಪ್ರಜೆಗಳಿಗಾಗಿ ನಡೆಸುವ ಪ್ರಜಾ ಸರ್ಕಾರವನ್ನು ಈ ಭೂಮಿಯ ಮೇಲೆ ನಾಶವಾಗದಂತೆ ಕಾಪಾಡಿಕೊಳ್ಳಬೇಕಾಗಿದೆ’ ಎಂಬ ಮಾತು ನಮ್ಮನ್ನು ಸದಾ ಕಾಡುತ್ತಲೇ ಇರಬೇಕಾಗಿದೆ.
ಇದನ್ನು ಓದಿದ ಮೇಲೆ ನನಗೆ ಅನ್ನಿಸಿದ್ದು: ಆ ಲಿಂಕನ್ ಎಲ್ಲಿ? ಈ ಟ್ರಂಪ್ ಎಲ್ಲಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.