ಲೋಕಸಭಾ ಚುನಾವಣೆಯ ಬಹುನಿರೀಕ್ಷಿತ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಈ ಚುನಾವಣೆ ಎರಡು ಕಾರಣಗಳಿಗೆ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಒಂದು, ಹತಾಶ ವಾತಾವರಣದಲ್ಲಿ ಭರವಸೆಯ ಕನಸು ಬಿತ್ತಿ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿ, ಐದು ವರ್ಷಗಳ ಆಡಳಿತ ನಡೆಸಿ ಮತ್ತೊಮ್ಮೆ ಈ ಚುನಾವಣೆಯಲ್ಲಿ ಜನರೆದುರು ಮೌಲ್ಯಮಾಪನಕ್ಕೆ ನಿಂತಿದ್ದರು. ಎರಡು, ಮೋದಿ ನೇತೃತ್ವದ ಐದು ವರ್ಷಗಳ ಸರ್ಕಾರದ ಆಡಳಿತದ ವೈಖರಿಯನ್ನು, ವಿವಿಧ ರಾಜ್ಯಗಳಲ್ಲಿ ಬಿಜೆಪಿ ತನ್ನ ವರ್ಚಸ್ಸು ವೃದ್ಧಿಸಿಕೊಂಡ ರೀತಿಯನ್ನು ಗಮನಿಸಿದ್ದ ಪ್ರತಿಪಕ್ಷಗಳು ಒಂದಾಗಿ ಕೈ ಕೈ ಹಿಡಿದು ಅದರ ವಿರುದ್ಧ ನಿಂತಿದ್ದವು. ಹಾಗಾಗಿ ಸಾಧನೆಯ ಮಟ್ಟಿಗೆ ಮೋದಿ ಅವರಿಗೂ, ರಾಜಕೀಯ ಉಳಿವಿನ ಪ್ರಶ್ನೆಯಾಗಿ ಪ್ರತಿಪಕ್ಷಗಳಿಗೂ ಈ ಚುನಾವಣೆ ಮಹತ್ವದ್ದಾಗಿತ್ತು.
ಚುನಾವಣೆಯುದ್ದಕ್ಕೂ ಸತ್ಯದ ಮುಖವಾಡವಿರುವ ಸುಳ್ಳಿನ ಕೂರಂಬುಗಳು ಅತ್ತಿಂದಿತ್ತ ಚಲಾಯಿಸಲ್ಪಟ್ಟವು. ವೈಯಕ್ತಿಕ ಟೀಕೆ, ಎಲ್ಲೆ ಮೀರಿದ ನಿಂದನೆ, ‘ನೀನು ಕಳ್ಳ ಎಂದರೆ, ನಿಮ್ಮಪ್ಪ ಕಳ್ಳ’ ಎನ್ನುವ ಧಾಟಿಯ ಮಾತುಗಳು ಕೇಳಿಬಂದವು. ಆದರೆ ಯಾರೊಬ್ಬರೂ ‘ನಮ್ಮಲ್ಲಿ ಅರ್ಹರು ಯಾರೆಂಬುದನ್ನು ನೀವು ನಿರ್ಧರಿಸಿ’ ಎಂದು ಅಳೆದು ತೂಗಲು ಯಾವ ಮಾಪನಗಳನ್ನೂ ಜನರ ಮುಂದಿಡಲಿಲ್ಲ. ದೇಶದ ಆದ್ಯತೆ, ಸಮಸ್ಯೆಗಳ ಕುರಿತು ಸರಿಯೇನು, ತಪ್ಪೇನು ಎಂದು ವಿವೇಚಿಸುವ ಪ್ರಕ್ರಿಯೆಯಾಗಿ ಚುನಾವಣೆ ಬಳಕೆಯಾಗಲಿಲ್ಲ. ಚುನಾವಣೆಯ ಕೇಂದ್ರದಲ್ಲಿ ದೊಡ್ಡದಾಗಿ ಕಂಡದ್ದು ಕೇವಲ ಒಂದೇ ಪ್ರಶ್ನೆ. ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಬೇಕೇ? ಬೇಡವೇ? ಹಾಗಾಗಿ ಚುನಾವಣೆಯು ವ್ಯಕ್ತಿ ಕೇಂದ್ರಿತವಾಯಿತು. ಪ್ರತಿಪಕ್ಷಗಳು, ಹೀಗೆ ವ್ಯಕ್ತಿ ಕೇಂದ್ರಿತವಾಗುವ ಚುನಾವಣೆಯಿಂದ ತಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಮನಗಾಣಲಿಲ್ಲ!
ಹಾಗಂತ ಭಾರತದ ಮಟ್ಟಿಗೆ ವ್ಯಕ್ತಿ ಕೇಂದ್ರಿತ ಚುನಾವಣೆ ಹೊಸದೇನಲ್ಲ. ಜವಾಹರಲಾಲ್ ನೆಹರೂ ಅವರ ಅವಧಿಯಿಂದಲೂ ನಮ್ಮಲ್ಲಿ ವ್ಯಕ್ತಿ ಕೇಂದ್ರಿತ ಚುನಾವಣೆಗಳು ನಡೆದಿವೆ. ಸ್ವಾತಂತ್ರ್ಯೋತ್ತರ ಭಾರತದ ಮೊದಲ ದಶಕದಲ್ಲಿ ನೆಹರೂ, ಚುನಾವಣೆಗಳ ಕೇಂದ್ರಬಿಂದುವಾಗಿ ಇದ್ದರು. ನೆಹರೂ ಬಳಿಕ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಚುನಾವಣೆಗಳು ವ್ಯಕ್ತಿ ಕೇಂದ್ರಿತವಾಗಿಯೇ ನಡೆದವು. ಇಂದಿರಮ್ಮನ ಪಕ್ಷದಿಂದ ಯಾರು ನಿಂತರೂ ಗೆಲ್ಲುತ್ತಾರೆ ಎಂಬ ವಾತಾವರಣವನ್ನು ಕಾಂಗ್ರೆಸ್ ಒಂದು ಪಕ್ಷವಾಗಿ ಬೆಳೆಸಿತು. ಅದರಿಂದ ಪಕ್ಷಕ್ಕೆ ಲಾಭವಿತ್ತು. ತುರ್ತುಪರಿಸ್ಥಿತಿಯ ತರುವಾಯ ಜನತಾ ಪಕ್ಷ ಹುಟ್ಟಿಕೊಂಡಿತಾದರೂ ಒಂದು ಅವಧಿಗೆ ಅಧಿಕಾರ ನಡೆಸಲೂ ಏದುಸಿರುಬಿಟ್ಟಿತು. ಇಂದಿರಾರ ತರುವಾಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಪಕ್ವಗೊಳ್ಳುವ ಸೂಚನೆಯನ್ನು ಪ್ರಕಟಿಸಿತು. ಪ್ರಬಲ ನಾಯಕ–ನಾಯಕಿಯ ಹತೋಟಿಯಿಂದ ರಾಜಕೀಯ ಪಕ್ಷಗಳು ಹೊರಬಂದವು, ಜನರಿಗೆ ಆಯ್ಕೆಗಳು ದೊರೆತವು.
ಆ ಬಳಿಕ ಸುಮಾರು ಎರಡು ದಶಕಗಳ ಕಾಲ ಭಾರತದಲ್ಲಿ ಬಹುಮಟ್ಟಿಗೆ ವಿಷಯಾಧಾರಿತ ಚುನಾವಣೆಗಳು ನಡೆದವು. ಲೋಕಸಭೆಯ ಚುನಾವಣೆಯಲ್ಲೂ, ರಾಜ್ಯವಾರು ಆದ್ಯತೆಗಳು ಚರ್ಚೆಗೆ ಒಳಪಟ್ಟು ಜನಾದೇಶಕ್ಕೆ ಹಲವು ಆಯಾಮಗಳು ಸೇರ್ಪಡೆಯಾದವು. ಜನರು ವಿಷಯಾಧಾರಿತವಾಗಿ ಮತ ಚಲಾಯಿಸಿದರು. ಪ್ರಾದೇಶಿಕ ಪಕ್ಷಗಳು ಬಲಗೊಂಡವು. ಕೇಂದ್ರ ಸರ್ಕಾರದಲ್ಲಿ ಭಾಗಿಯಾದವು. ಸಾಮಾನ್ಯವಾಗಿ ವಿಷಯಾಧಾರಿತವಾಗಿ ನಡೆಯುವ ಚುನಾವಣೆಯಲ್ಲಿ ಸಮೂಹ ಸನ್ನಿಗೆ ಅವಕಾಶ ಇರುವುದಿಲ್ಲ. ಮತಗಳು ಒಂದು ಪಕ್ಷದ ಬೊಕ್ಕಸದಲ್ಲಿ ಸಾಂದ್ರಗೊಳ್ಳುವುದಿಲ್ಲ. ಹಾಗಾಗಿ ವಿಷಯಾಧಾರಿತವಾಗಿ ಚರ್ಚೆ ನಡೆದು ಚುನಾವಣೆ ನಡೆದಾಗಲೆಲ್ಲಾ, ಸಮ್ಮಿಶ್ರ ಸರ್ಕಾರಗಳು ಅನಿವಾರ್ಯವಾದವು. ವಿಪರ್ಯಾಸವೆಂದರೆ, ಸಮ್ಮಿಶ್ರ ಸರ್ಕಾರದ ಭಾಗವಾದ ರಾಜಕೀಯ ಪಕ್ಷಗಳು ಪ್ರೌಢಿಮೆಯನ್ನು ತೋರಲಿಲ್ಲ. ಸ್ಥಿರ ಸರ್ಕಾರ ಸಾಧ್ಯವಾಗಬೇಕಾದರೆ ಏಕಪಕ್ಷಕ್ಕೆ ಬಹುಮತ ಅನಿವಾರ್ಯ ಎನ್ನುವ ಸಂದೇಶ ರವಾನೆಯಾಯಿತು. ಗಟ್ಟಿ ದನಿಯ, ದೃಢ ನಿಲುವು ತಳೆಯಬಲ್ಲ ನಾಯಕ ಮಾತ್ರ ಉತ್ತಮ, ಸ್ಥಿರ ಸರ್ಕಾರವನ್ನು ಮುನ್ನಡೆಸಬಲ್ಲ ಎಂಬುದು ಜನರ ಮನಸ್ಸಿಗಿಳಿಯಿತು.
ಪ್ರಥಮವಾಗಿ, ಹೀಗೆ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತವಾಗಿ ನಡೆಸಲು ಆರಂಭಿಸಿದ್ದು ಕಾಂಗ್ರೆಸ್ ಆದರೂ ನಂತರ ಈ ಮಾದರಿಯನ್ನು ಬಯಸಿದ್ದು ಬಿಜೆಪಿ. 2014ರಲ್ಲಿ ಸೈದ್ಧಾಂತಿಕವಾಗಿ ಗಟ್ಟಿಗ ಎನಿಸಿದ್ದ, ಗುಜರಾತ್ ಮಟ್ಟಿಗೆ ಉತ್ತಮ ಆಡಳಿತ ನೀಡಿದ್ದ ನರೇಂದ್ರ ಮೋದಿ ಅವರನ್ನು ಅದು ಮುಖ್ಯ ಭೂಮಿಕೆಗೆ ತಂದಿತು. ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಗಾಢ ಮೌನವು ಮಾತಿನ ಮಹತ್ವ ಹೆಚ್ಚಿಸಿತ್ತು. ಹಾಗಾಗಿಯೇ ಚುನಾವಣೆಯುದ್ದಕ್ಕೂ ಮೌನದ ಮೇಲೆ ಮಾತು ಸವಾರಿ ಮಾಡಿತು. ಸರತಿ ಹಗರಣಗಳು, ಆಡಳಿತ ವಿರೋಧಿ ಅಲೆ, ಅಣ್ಣಾ ಹಜಾರೆ ಚಳವಳಿಯಿಂದ ಟಿಸಿಲೊಡೆದ ಜನಾಕ್ರೋಶ ಎಲ್ಲವೂ ಒಟ್ಟಾಗಿ ಮೋದಿ ಪರ ಅಲೆಗೆ ಕಾರಣವಾಗಿದ್ದವು. ನೆಹರೂ, ಇಂದಿರಾ ಬಳಿಕ ವ್ಯಕ್ತಿ ಕೇಂದ್ರಿತ ಸರ್ಕಾರ ಕೇಂದ್ರದಲ್ಲಿ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂತು.
ಹೀಗೆ ಅಪಾರ ಭರವಸೆಗಳನ್ನು ನೀಡಿ, ಜನರಲ್ಲಿ ನಿರೀಕ್ಷೆಯನ್ನು ತುಂಬಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರವು ಆಡಳಿತಾತ್ಮಕವಾಗಿಹೊಸ ಹೆಜ್ಜೆಗಳನ್ನು ಇರಿಸಿತು. ಆದರೆ ಬಹುಮತದ ಸರ್ಕಾರವೊಂದು ತರಬಹುದಾಗಿದ್ದ ಸಣ್ಣಪುಟ್ಟ ಆರ್ಥಿಕ, ಕಾನೂನಾತ್ಮಕ ಸುಧಾರಣೆಗಳನ್ನು ತರಲು ಅದು ಮನಸ್ಸು ಮಾಡಲಿಲ್ಲ. ಐದು ವರ್ಷದ ಅವಧಿಯಲ್ಲಿ ಸರ್ಕಾರ ಬಹುತೇಕ ಏಕವ್ಯಕ್ತಿ ಪ್ರದರ್ಶನದಂತೆಯೇ ಕಂಡಿತು. ಆದರೆ ಸರ್ಜಿಕಲ್ ಸ್ಟ್ರೈಕ್, ಪಾಕಿಸ್ತಾನ ಮತ್ತು ಭಯೋತ್ಪಾದನೆಯ ವಿಷಯದಲ್ಲಿ ತಳೆದ ಆಕ್ರಮಣಕಾರಿ ದೃಢ ನಿಲುವು ಈ ಅಪಸವ್ಯಗಳನ್ನು ಮರೆಸಿತು. ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಪ್ರತಿಪಕ್ಷಗಳು ಸೋತವು. ರಾಹುಲ್ ಗಾಂಧಿ ತಾವು ಪ್ರಚಾರಕ್ಕೆಂದು ಹೋದಲ್ಲೆಲ್ಲಾ ‘ಚೌಕೀದಾರ್ ಚೋರ್ ಹೈ’ ಎಂಬ ಘೋಷಣೆ ತೇಲಿಬಿಟ್ಟರಾದರೂ ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಅವರ ಬಳಿ ಪುರಾವೆಗಳು ಇರಲಿಲ್ಲ. ಹಾಗಾಗಿ ‘ಚೌಕೀದಾರ್ ಚೋರ್’ ಎಂಬ ಆರೋಪ ಜನರ ಮನಸ್ಸಿನಲ್ಲಿ ಉಳಿಯಲಿಲ್ಲ.
ಮುಖ್ಯವಾಗಿ, ನರೇಂದ್ರ ಮೋದಿ ಎದುರು ನಿಲ್ಲಬಲ್ಲ ಸಾಮರ್ಥ್ಯವಿರುವ ನಾಯಕನಾಗಿ ರಾಹುಲ್ ಕಾಣಲಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿ ತಮ್ಮ ಕಾರ್ಯಕ್ಷಮತೆಯನ್ನು, ನಾಯಕತ್ವದ ಸಾಮರ್ಥ್ಯವನ್ನು ರಾಹುಲ್ ತೋರಬಹುದಾಗಿತ್ತಾದರೂ ಆ ಅವಕಾಶವನ್ನು ಅವರು ಕೈಚೆಲ್ಲಿದ್ದರು. ಅವರ ಮಾತಿನಲ್ಲಿ ಕಾಣದ ದೃಢತೆ, ಆಂಗಿಕ ಕೌಶಲದ ಅಭಾವದಿಂದಾಗಿ ಅವರು ಏಕಾಂಗಿಯಾಗಿ ಮೋದಿ ವಿರುದ್ಧ ಪೈಪೋಟಿಗೆ ನಿಲ್ಲಲು ಇನ್ನೂ ಅಶಕ್ತರೇ. ಅದನ್ನು ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿ ಹೇಳುತ್ತಿದೆ.
ಇನ್ನು ಪ್ರಾದೇಶಿಕ ಪಕ್ಷಗಳನ್ನು ತೆಗೆದುಕೊಂಡರೆ, ಮೋದಿ ಎದುರು ಸ್ಥಿರವಾಗಿ ನಿಂತು ಮೈತ್ರಿ ಪಕ್ಷಗಳನ್ನು ಮುನ್ನಡೆಸಬಲ್ಲ ನಾಯಕನಾರೂ ಕಾಣುತ್ತಿಲ್ಲ. ಒಂದು ಕಾಲಘಟ್ಟದಲ್ಲಿ ಶರದ್ ಪವಾರ್ ಅವರು ನಾಯಕನ ರೀತಿ ಕಂಡಿದ್ದರು. ಈಗ ಅವರು ಬದಿಗೆ ಸರಿದಾಗಿದೆ. ನಂತರ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದ ಪರ್ಯಾಯ ಮುಖವಾಗಿ ಕಂಡಿದ್ದರು. ಇದೀಗ ಅವರು ಎನ್‌ಡಿಎ ಭಾಗವಾಗಿ ಮುಂದುವರಿದಿದ್ದಾರೆ. ಮಾಯಾವತಿ, ಅಖಿಲೇಶ್, ಮಮತಾ ಬ್ಯಾನರ್ಜಿ ತಮ್ಮ ರಾಜ್ಯಗಳ ಸರಹದ್ದು ದಾಟಿ ಪ್ರಭಾವಿಸುವ ಶಕ್ತಿ ಇನ್ನೂ ಬೆಳೆಸಿಕೊಂಡಿಲ್ಲ. ಹಾಗಾಗಿ, ಇದೊಂದು ಪೂರ್ವನಿರ್ಧರಿತ ಚುನಾವಣೆಯಂತೆಯೇ ಕಂಡಿತ್ತು. ಫಲಿತಾಂಶವೂ ಅದನ್ನೇ ಹೇಳುತ್ತಿದೆ. ಈ ಚುನಾವಣೆಯ ಸಂದೇಶ ಸ್ಪಷ್ಟವಿದೆ ‘ದಿಢೀರ್ ಉದ್ಭವವಾಗುವ ನಾಯಕನನ್ನು ಜನ ಒಪ್ಪಲಾರರು’ ‘ವ್ಯಕ್ತಿ ಕೇಂದ್ರಿತ ಚುನಾವಣೆಯಲ್ಲಿ ಜನರ ಒಲವು ಪ್ರಬಲ ನಾಯಕನ ಕಡೆಗೇ ಇರುತ್ತದೆ’. ಇದು ವೈಯಕ್ತಿಕವಾಗಿ ರಾಹುಲ್ ಗಾಂಧಿಯವರಿಗೂ, ಪ್ರತಿಪಕ್ಷಗಳಿಗೂ ಮನವರಿಕೆಯಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.