ವಿಶ್ಲೇಷಣೆ: ಸಾವಿತ್ರಿ ಮಾತ್ರವಲ್ಲ, ರುರುವೂ ಇದ್ದಾನೆ
ಹೌದು, ಆದರೆ ನಮಗೆ ಅವನ ಪರಿಚಯವೇ ಇಲ್ಲ. ಎಲ್ಲೋ ಕೆಲವರನ್ನುಳಿದು ಹೆಚ್ಚಿನವರಿಗೆ ಅವನ ಹೆಸರೇ ಗೊತ್ತಿಲ್ಲ. ಇದನ್ನೇ ಸಾಂಸ್ಕೃತಿಕ ರಾಜಕಾರಣ ಎನ್ನುವುದು. ಸಾವಿತ್ರಿಯ ಕತೆ ಇಡೀ ದೇಶದ ಹಳ್ಳಿ ಹಳ್ಳಿಯಲ್ಲಿ ಪುಣ್ಯಕತೆಗಳಾಗಿ ಮಕ್ಕಳ ತಲೆಯೊಳಗೇ ಅದನ್ನು ಭದ್ರವಾಗಿಸಿ ಅದೊಂದು ಆದರ್ಶವೆಂದೂ, ಸಾವಿತ್ರಿಯನ್ನು ಪತಿವ್ರತೆಯರ ಮಾದರಿಯೆಂದೂ ಪ್ರಚುರಪಡಿಸಲಾಯಿತು. ಆದರೆ ಇದನ್ನಷ್ಟೇ ಯಾಕೆ ಮುನ್ನೆಲೆಗೆ ತರಲಾಯಿತು. ಪುರುಷನೊಬ್ಬನ ಇಂಥದೇ ಕತೆಯನ್ನು ಪುರುಷರೇ ಯಾಕೆ ಮುನ್ನೆಲೆಗೆ ತರಲಿಲ್ಲ? ಹಾಡಿ ಹೊಗಳಲಿಲ್ಲ? ಅದರ ಹಿಂದೆ ಇದ್ದ ಭಯ ಯಾವುದು?
ಹಗ್ಗದ ಒಂದು ತುದಿಗೆ ಬೆಂಕಿ ಹಚ್ಚಿ ಚಂದ ನೋಡುತ್ತಾ ಕುಳಿತರೆ ಅಥವಾ ಇನ್ನೊಂದು ತುದಿಗೆ ಅದು ಹಬ್ಬುವುದಕ್ಕೆ ನಾವು ಬಿಡುವುದಿಲ್ಲ ಎಂದು ಭಂಡತನದಿಂದ ಕುಳಿತರೆ ಅದು ನಿಜವಾಗುವುದಿಲ್ಲ. ಯಾಕೆಂದರೆ, ಸುಡುವುದು ಬೆಂಕಿಯ ಗುಣ ಮತ್ತು ಸುಡಿಸಿಕೊಳ್ಳುವುದು ಹಗ್ಗದ ಗುಣ. ಇಂದು ಅಲ್ಲಲ್ಲಿ ಕುಟುಂಬದ ದೌರ್ಜನ್ಯದಿಂದಲೋ ಒತ್ತಡದಿಂದಲೋ ಪತ್ರ ಬರೆದು ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವ ಒಂದೆರಡು ವರದಿಗಳು ಹಲವರನ್ನು ಬೆಚ್ಚಿ ಬೀಳಿಸುತ್ತಿವೆ. ಅಷ್ಟೇ ಅಲ್ಲ, ಚಿಕ್ಕ ಹುಡುಗರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ಹುಡುಗಿಯರಂತೆಯೇ ಹುಡುಗರು ಕೂಡಾ ಇದನ್ನು ಯಾರಿಗೂ ಹೇಳದೆ ಒಳಗೊಳಗೇ ನಲುಗುತ್ತಿದ್ದಾರೆ. ಮಾನಸಿಕವಾಗಿ ಕ್ಷೋಭೆಗೆ ಒಳಗಾಗುತ್ತಿದ್ದಾರೆ. ವರದಕ್ಷಿಣೆ ಹತ್ಯೆಗಳು, ಹೆಣ್ಣಿನ ಮೇಲಿನ ಆಕ್ರಮಣಗಳು, ಅತ್ಯಾಚಾರಗಳು ದಿನ ದಿನದ ಸುದ್ದಿಗಳಾಗಿ ಮಾರ್ಪಟ್ಟರೂ ತಲೆಕೆಡಿಸಿಕೊಳ್ಳದ ವ್ಯವಸ್ಥೆ ಅದೆಲ್ಲಕ್ಕೂ ಹೆಣ್ಣೇ ಕಾರಣ ಎಂದು ತಿಪ್ಪೆ ಸಾರಿಸಿದ್ದೇ ಹೆಚ್ಚು. ಅವಳಿಗೇ ಉಪದೇಶ ಕೊಡುತ್ತಾ, ದೂಷಿಸುತ್ತಾ, ಕರಾಟೆ ಕಲಿತುಕೋ ಎಂದು ಅವಳ ಮೇಲೇ ಹೊರೆ ಹೊರಿಸುತ್ತಾ ಪ್ರವಚನ ಮಾಡುವವರಿಗೇನೂ ಕೊರತೆಯಿಲ್ಲ.
ಎಲ್ಲೋ ಒಂದು ಸಲ ನಿದ್ದೆಯಿಂದ ಎಚ್ಚೆತ್ತುಕೊಂಡು, ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಅರಚಿದರೆ ಆಗುವುದಿಲ್ಲ. ಮೊದಲು ನಾವು ನಮ್ಮ ನಮ್ಮ ಪ್ರಜ್ಞೆಗಳನ್ನು ಎಚ್ಚರಿಸಿಕೊಳ್ಳಬೇಕಾಗಿದೆ ಮತ್ತು ಆ ಪ್ರಜ್ಞೆಯನ್ನು ಎಚ್ಚರಿಸಲು ಬೇಕಾದ ಪರಿಸರವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ.
ಪರಿಸರ ರೂಪಿಸುವುದೇಕೆ ಎಂಬುದಕ್ಕೆ ಒಂದು ಉದಾಹರಣೆಯನ್ನು ಕೊಡುವೆ. ಇತ್ತೀಚೆಗೆ ಒಂದು ಅಧ್ಯಯನ ಶಿಬಿರದಲ್ಲಿ ಎಲ್ಲ ವಲಯದ ಮಹಿಳೆಯರು ಸೇರಿದ್ದರು. ಒಂದು ಆಪ್ತ ಸೆಷನ್‌ನಲ್ಲಿ ಅವರೆಲ್ಲರೂ ಕುಟುಂಬವೆಂದರೇನು ಎಂಬ ಬಗೆಗೆ ತಮ್ಮ ತಮ್ಮ ಅನುಭವದ ಹಿನ್ನೆಲೆಯಲ್ಲಿ ಮಾತಾಡಿದರು. ಅದರಲ್ಲಿ ಉಪನ್ಯಾಸಕಿ, ಸಿಂಗಲ್ ಪೇರೆಂಟ್, ದೇವದಾಸಿ, ಲಾಯರ್, ಸರ್ಕಾರಿ ನೌಕರಳು, ಎನ್‌ಜಿಒದಲ್ಲಿ ಕೆಲಸ ಮಾಡುವಾಕೆ ಹೀಗೆ ಎಲ್ಲ ಜಾತಿ, ವೃತ್ತಿ, ವರ್ಗದ ಸ್ತ್ರೀಯರೂ ಇದ್ದರು. ಅವರ ಸಂಗಾತಿಗಳು, ಒಡಹುಟ್ಟಿದವರಲ್ಲಿ ಕೂಡ ಹೀಗೆ ಎಲ್ಲಾ ರೀತಿಯ ವೃತ್ತಿ ಹಿನ್ನೆಲೆಯವರಿದ್ದರು. ಆದರೆ ಅವರೆಲ್ಲರ ಅನುಭವಗಳಲ್ಲಿ ಒಂದು ಸಾಮಾನ್ಯ ಅಂಶ ಇತ್ತು. ಎಲ್ಲರಿಗೂ ಪುರುಷ ಸಂಗಾತಿಗಳಿಂದ ಮತ್ತು ಒಡಹುಟ್ಟಿದವರಿಂದ ದೈಹಿಕ ಮತ್ತು ಮಾನಸಿಕ ಹಲ್ಲೆಯಾಗಿದೆ. ತಮ್ಮ ಚಾರಿತ್ರ್ಯವನ್ನು ಅನುಮಾನಿಸುವ ಹಿಂಸೆ ಎಲ್ಲರ ಸಾಮಾನ್ಯ ಅನುಭವವಾಗಿತ್ತು.
ಹಾಗೆ ನೋಡಿದರೆ ದೇವದಾಸಿಯ ಪೋಷಕ ಬಹಳ ಚೆನ್ನಾಗಿ ನೋಡಿಕೊಂಡಿದ್ದ. ಆದರೆ ಅವಳು ಮದುವೆ ಮಾಡಿಕೊಟ್ಟ ಅವಳ ಮಗಳ ಗಂಡ ಇತರ ಗಂಡಸರಂತೆಯೇ ವರ್ತಿಸಿದ್ದಾನೆ. ಈ ಅನುಭವಗಳು ಅವರಲ್ಲಿ ಹುಟ್ಟಿಸಿದ ಭೀತಿ, ಅಸಹಾಯಕತೆ, ಅಭದ್ರತೆಯನ್ನು ಹೇಳುತ್ತಾ, ಕಾಲಾಂತರದಲ್ಲಿ ತಾವು ಅದನ್ನು ಮೆಟ್ಟಿ ನಿಂತು ತಮ್ಮ ಬದುಕನ್ನು ಆ ವ್ಯವಸ್ಥೆಯೊಳಗಿದ್ದೇ ನಿಭಾಯಿಸುವುದು ಮತ್ತು ತಮ್ಮ ಕ್ಷೇತ್ರಗಳಲ್ಲಿ ಸಾಧನೆಯನ್ನು ಮುಂದುವರಿಸಿರುವುದನ್ನು ಹೇಳಿದರು. ‘ಈಗ ನಾವು ಅವರನ್ನೆಲ್ಲಾ ನಿರ್ಲಕ್ಷಿಸುವುದನ್ನು ಕಲಿತಿದ್ದೇವೆ. ಆದರೆ ನಮ್ಮ ಕನಸಿನ ಸಾಂಗತ್ಯ ನಮಗೆ ಸಿಗಲಿಲ್ಲ’ ಎಂಬ ವಿಷಾದವೂ ಅವರಿಗಿದೆ. ಇಲ್ಲಿನ ಎಲ್ಲ ವಲಯದ ಪುರುಷರೂ ಮನೆಯೊಳಗೆ ಒಂದೇ ರೀತಿಯ ವರ್ತನೆಯನ್ನು ಹೆಂಗಸರೆಡೆಗೆ ತೋರಿದ್ದಾರೆ. ಅವರಿಗೆ ಸಿಕ್ಕಿದ ಶಿಕ್ಷಣ ಅವರೊಳಗೆ ಅಂತಹ ವ್ಯತ್ಯಾಸವನ್ನೇನೂ ಮಾಡಿಲ್ಲ. ಅವರು ಮನೆಯ ಹೊರಗೆ ಕೆಲವು ಸಭ್ಯತೆಗಳನ್ನು ಅನಿವಾರ್ಯವಾಗಿ ಪಾಲಿಸುತ್ತಿರಬಹುದು. ಆದರೆ ಹೆಂಡತಿ, ಸೋದರಿಯರ ಜೊತೆಗೆ ಅವರೇಕೆ ಯಜಮಾನಿಕೆಯನ್ನು ಹೀಗೆ ತೋರ್ಪಡಿಸುತ್ತಾರೆ? ಮುಖ್ಯವಾಗಿ ಸಾಮಾಜಿಕವಾದ ತರಬೇತಿಯು ಈ ವರ್ತನೆಗೆ ಸಮ್ಮತಿಯನ್ನು ನೀಡಿದೆ. ಹೆಣ್ಣನ್ನು ಆಳಬೇಕು ಎಂಬುದು ಮೌಲ್ಯವಾಗಿದೆಯೇ ವಿನಾ ಹೆಣ್ಣಿನೊಂದಿಗೆ ಪ್ರೀತಿ ಹಂಚಿಕೊಳ್ಳಬೇಕು, ಗೌರವಿಸಬೇಕು ಎಂಬುದು ತರಬೇತಿಯಿಂದಾಗಲೀ ಶಿಕ್ಷೆಯಿಂದಾಗಲೀ ತಿಳಿವಳಿಕೆಯಾಗಿ ದಾಟಿಲ್ಲ.
ಈಗ ಹೆಣ್ಣುಮಕ್ಕಳೂ ಕೆಲವರು ಗಂಡಿನೊಂದಿಗೆ ಹೀಗೇ ವರ್ತಿಸುತ್ತಿರಬಹುದು. ಆದರೆ ಅದು ಕೂಡಾ ಈಗಾಗಲೇ ಹೆಣ್ಣಿನೊಂದಿಗೆ ಗಂಡು ವರ್ತಿಸುತ್ತಿರುವುದರ ಅನುಕರಣೆಯೇ ಆಗಿದೆ ಎಂಬುದನ್ನು ಒಪ್ಪಲು ಮನಸ್ಸು ಸಿದ್ಧಗೊಂಡಿಲ್ಲ. ಅಂದರೆ, ಗಂಡಸು ಮಾಡಿದರೆ ಸರಿ, ಹೆಂಗಸು ಮಾಡಿದರೆ ತಪ್ಪು ಎಂಬ ಧೋರಣೆಯನ್ನು ಬದಲಿಸದೇ, ಹೆಂಗಸರು ಮಾತ್ರ ಹಾಗೆ ವರ್ತಿಸಬಾರದು ಎಂದರೆ ಅದು ಕಾರ್ಯಸಾಧ್ಯವಾಗದು.
ಚೀನಾದಲ್ಲಿ ಹತ್ತು ವರ್ಷಗಳಿಂದ ವಾಸಿಸುತ್ತಿರುವ ಹೆಣ್ಣುಮಗಳೊಬ್ಬಳು ಮಾಡಿರುವ ‘ವೈ ಐ ಲೆಫ್ಟ್ ಇಂಡಿಯಾ ಫಾರ್ ಚೀನಾ’ ಎಂಬ ವಿಡಿಯೊ ಗಮನ ಸೆಳೆಯುವಂತಿದೆ. ಅದರಲ್ಲಿ ಆಕೆ ‘ನಾನು ಮರಳಿ ಭಾರತಕ್ಕೆ ಬರಲು ಇಷ್ಟಪಡುವುದಿಲ್ಲ’ ಎನ್ನುತ್ತಿದ್ದಳು. ಅದಕ್ಕೆ ಆಕೆ ಕೊಟ್ಟ ಕಾರಣಗಳಲ್ಲಿ ಎರಡು ಸಂಗತಿಗಳನ್ನು ನಾವು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ‘ಒಂದು: ಇಲ್ಲಿ ಮದುವೆ, ಮಕ್ಕಳಿಂದ ಮಾತ್ರ ನಮ್ಮನ್ನು ಅಳೆಯುವುದಿಲ್ಲ. ಎರಡು: ನಡುರಾತ್ರಿಯಲ್ಲಿ ಕೂಡಾ ಹೆಣ್ಣುಮಕ್ಕಳು ಒಬ್ಬೊಬ್ಬರೇ ಬೀದಿಯಲ್ಲಿ ತಿರುಗಾಡುತ್ತಿದ್ದರೂ ಯಾವೊಬ್ಬ ಗಂಡಸೂ ನಮ್ಮೆಡೆಗೆ ತಿರುಗಿ ನೋಡುವುದಿಲ್ಲ. ನಮಗೆ ಎಂದೂ ನಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ, ನಮ್ಮ ಮೇಲೆ ಅತ್ಯಾಚಾರವಾದರೆ ಎಂಬ ಭಯ ಕಾಡುವುದೇ ಇಲ್ಲ. ಬಹಳ ನಿರುಮ್ಮಳವಾಗಿ ತಿರುಗಾಡಬಹುದು. ಅಷ್ಟು ಬಿಗಿಯಾದ ಸುರಕ್ಷತಾ ವ್ಯವಸ್ಥೆ ಇದೆ’. ಇಲ್ಲಿ ಗಮನಿಸಬೇಕಾದದ್ದು, ಈ ವ್ಯವಸ್ಥೆಯೇ ಅಲ್ಲಿನ ಗಂಡಸರಿಗೆ ತಮ್ಮ ನಡೆಯನ್ನು ರೂಪಿಸಿಕೊಳ್ಳಲು ತರಬೇತಿ ನೀಡಿದೆ. ಅಷ್ಟೇ ಅಲ್ಲ, ಇಲ್ಲಿ ತನ್ನ ಸುರಕ್ಷತೆಗಾಗಿ ಹೆಂಗಸು ಏನೇನನ್ನೋ ಹೊದ್ದುಕೊಳ್ಳಬೇಕಾಗಿಲ್ಲ. ಅವಳು ಹೇಗೇ ಉಡುಗೆ ತೊಟ್ಟಿದ್ದರೂ ಅವಳ ಮೇಲೆ ಆಕ್ರಮಣ ಮಾಡುವುದಕ್ಕೆ ಅದು ನೆಪವಾಗುವುದಿಲ್ಲ. ಇಂತಹ ಪರಿಸರವೊಂದು ಮಾತ್ರ ಪ್ರಜ್ಞೆಯನ್ನು ರೂಪಿಸಬಲ್ಲದು.
ಆದರೆ ನಮ್ಮ ದುರ್ದೈವ ನೋಡಿ. ಗಂಡನೊಬ್ಬ ಹೆಂಡತಿಯೊಂದಿಗೆ ಅನೈಸರ್ಗಿಕವಾಗಿ ವರ್ತಿಸಿ, ಅದರ ಪರಿಣಾಮವಾಗಿ ಅವಳು ಸತ್ತರೆ ‘ವಿವಾಹದೊಳಗೆ ಗಂಡನ ಯಾವ ವರ್ತನೆಯೂ ಅಪರಾಧ ಅಲ್ಲ’ ಎನ್ನುವವರಿದ್ದಾರೆ. ‘ಮೂರೂವರೆ ವರ್ಷದ ಬಾಲಕಿಯ ವರ್ತನೆಯೇ ಲೈಂಗಿಕ ದೌರ್ಜನ್ಯಕ್ಕೆ ಕಾರಣ’ ಎಂದು ತಮಿಳುನಾಡಿನಲ್ಲಿ ಜಿಲ್ಲಾಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ನಾವು ಯಾವ ಪರಿಸರ, ಶಿಕ್ಷಣದ ಬಗೆಗೆ ಮಾತಾಡೋಣ?
ನಾವು ಎಂಹತವರು ಎಂದರೆ, ಮಹಾಭಾರತದ ಆದಿಪರ್ವದ ರುರುವಿನ ಕತೆಯನ್ನು ಮುಚ್ಚಿಟ್ಟಿದ್ದೇವೆ. ಸಾವಿತ್ರಿ ತನ್ನ ಗಂಡನನ್ನು ಬದುಕಿಸಿಕೊಳ್ಳಲು ತನ್ನ ಅರ್ಧ ಆಯಸ್ಸನ್ನು ಧಾರೆ ಎರೆದಳು. ಅದೇ ರೀತಿಯಲ್ಲಿ ರುರು ಎಂಬ ಋಷಿಯು ತನ್ನ ಪತ್ನಿ ಪ್ರಮದ್ವರೆಯು ಹಾವು ಕಚ್ಚಿ ಸತ್ತಾಗ ಅಪಾರವಾಗಿ ರೋದಿಸುತ್ತಾನೆ. ‘ಈ ವಿಶಾಲ ವಿಶ್ವದನಂತ ಚೆಲುವು ತೆರೆದ ಹಾದಿಯಲ್ಲವೆ, ನಿನ್ನಂಥ ಪುರುಷೋತ್ತಮನಿಗೆ ಸಾವಿರ ಪ್ರಮದೆಯರಿದ್ದಾರೆ ನೀನೊಲಿದರೆ’ ಎಂಬ ಲೋಕದ ಅದೇ ಮಾತುಗಳಿಗೆ ‘ಮಿಡಿಯಲಿಲ್ಲ ರುರು ಜಗದನಂತ ಚೆಲುವಿಗೆ ಪ್ರಮದೆಯೊಬ್ಬಳೆ ನನ್ನೊಲವಿಗೆ’ (ಕವಿತೆ: ರುರು ಪ್ರಮದಾ ಪ್ರೀತಿ: ಸ.ಉಷಾ) ಎಂದು ಶೋಕಿಸಿದಾಗ ಅಶರೀರವಾಣಿ ‘ನಿನ್ನ ಅರ್ಧ ಆಯಸ್ಸು ಧಾರೆ ಎರೆದರೆ ಅವಳು ಬದುಕುತ್ತಾಳೆ’ ಎಂದಾಗ ಕ್ಷಣವೂ ಯೋಚಿಸದೆ ಅಸ್ತು ಎನ್ನುತ್ತಾನೆ. ಬದುಕುಳಿದ ಅವಳ ಜೊತೆಗೆ ಆಯಸ್ಸಿಡೀ ಸಂತಸದಿಂದ ಬದುಕುತ್ತಾನೆ. ಸಾವಿತ್ರಿ, ರುರುಗಳಿಬ್ಬರನ್ನೂ ಒಂದೇ ತಕ್ಕಡಿಯಲ್ಲಿ ಇಡಬೇಕಾದ್ದೇ ನಮ್ಮ ಮುಂದಿರುವ ದಾರಿ. ಗಂಡು– ಹೆಣ್ಣು ಇಬ್ಬರೂ ದೌರ್ಜನ್ಯದಿಂದ ಬಳಲದೆ ನವಪ್ರಜ್ಞೆಯೊಂದಿಗೆ ಪ್ರಜ್ಞಾವಂತ ಸಮಾಜಕ್ಕೆ ಮುನ್ನುಡಿ ಬರೆಯಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.