ADVERTISEMENT

ವಿಶ್ಲೇಷಣೆ | ಧರ್ಮಕಾರಣ: ಅರಾಜಕತೆಗೆ ಆಹ್ವಾನ

ಚಂದ್ರಕಾಂತ ವಡ್ಡು
Published 14 ಸೆಪ್ಟೆಂಬರ್ 2025, 23:30 IST
Last Updated 14 ಸೆಪ್ಟೆಂಬರ್ 2025, 23:30 IST
ವಿಶ್ಲೇಷಣೆ
ವಿಶ್ಲೇಷಣೆ   
ಧರ್ಮಕೇಂದ್ರಿತ ವಿಚಾರಧಾರೆ ರಾಜಕಾರಣದ ಪ್ರಮುಖ ಭಾಗವಾಗಿದೆ. ಸಮಾಜದ ಕಟ್ಟಕಡೆಯ ಮನುಷ್ಯನ ಹಿತಕ್ಕಿಂತಲೂ, ಸಮುದಾಯಗಳನ್ನು ವಿಭಜಿಸಿ, ಮತಬ್ಯಾಂಕ್‌ ಭದ್ರಪಡಿಸಿಕೊಳ್ಳುವ ರಾಜಕಾರಣ ಮುನ್ನೆಲೆಗೆ ಬಂದಿದೆ. ಈ ‘ಧರ್ಮರಾಜಕಾರಣ’ದಲ್ಲಿ ಜನಸಾಮಾನ್ಯರು ಹೈರಾಣಾಗಿದ್ದಾರೆ.

ಸುದ್ದಿ ವಾಹಿನಿಯ ನಿರೂಪಕರೊಬ್ಬರು, ‘ಆರೋಪಿಗಳು ಪತ್ತೆಯಾಗಿದ್ದು, ತನಿಖೆ ಮುಕ್ತಾಯ ಹಂತ ತಲುಪಿದೆ, ಬಾಕಿ ಉಳಿದಿರುವುದು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ನಿರ್ಧರಿಸುವುದಷ್ಟೇ’ ಎಂದು ಯಾವುದೇ ಅಂಜಿಕೆ, ಹಿಂಜರಿಕೆ, ಮುಜುಗರ ಇಲ್ಲದೇ ದೃಢವಾದ ದನಿಯಲ್ಲಿಯೇ ಘೋಷಿಸಿದರು. ಆ ಮೂಲಕ ಮಾಧ್ಯಮ ವಿಚಾರಣೆ ನಡೆಸುತ್ತಿದ್ದ ‘ಸುದ್ದಿ ನ್ಯಾಯಾಲಯ’ ಧರ್ಮಸ್ಥಳ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಕುರಿತ ತೀರ್ಪು ಕಾಯ್ದಿರಿಸಿ ಮದ್ದೂರು ಪ್ರಕರಣ ಕೈಗೆತ್ತಿಕೊಂಡಿತು. ಇದಕ್ಕೂ ಮೊದಲು ವಿಚಾರಣಾ ಪಟ್ಟಿಯಲ್ಲಿದ್ದ ದಸರಾ ಉದ್ಘಾಟನಾ ಪ್ರಕರಣವನ್ನು ವರದಿಗಾರ–ವಕೀಲರ ಕೋರಿಕೆ ಮೇರೆಗೆ ಮಧ್ಯಾಹ್ನದ ಕಲಾಪಕ್ಕೆ ಮುಂದೂಡಲಾಗಿತ್ತು!

ದೃಶ್ಯ ಮಾಧ್ಯಮ ಚಾಲ್ತಿಗೆ ಬಂದ ತರುವಾಯ ‘ಮೀಡಿಯಾ ಟ್ರೈಯಲ್’ ಅನ್ನುವುದು ಅಪರೂಪದ ವಿದ್ಯಮಾನವಾಗೇನೂ ಉಳಿದಿಲ್ಲ. ಆದರೆ, ಅನುಭವ ಮತ್ತು ಆದಾಯ ಆಧರಿಸಿ ಮಾಧ್ಯಮಗಳು ಈ ನಿಟ್ಟಿನಲ್ಲಿ ಆರಂಭಿಕ ಘಟ್ಟದ ಸಂಕೋಚವನ್ನು ಸಾಕಷ್ಟು ಪ್ರಮಾಣದಲ್ಲಿ ನಿವಾರಿಸಿಕೊಂಡಿರುವುದನ್ನು ಗಮನಿಸಬಹುದು. ಶುರುವಾತಿನಲ್ಲಿ ಕೆಳಹಂತದ ನ್ಯಾಯಾಲಯದ ಪಾತ್ರ ಮಾತ್ರ ನಿರ್ವಹಿಸುತ್ತಿದ್ದ ಟಿ.ವಿ ಮಾಧ್ಯಮ ಇದೀಗ ತನ್ನ ಕಾರ್ಯವ್ಯಾಪ್ತಿಯನ್ನು ಯೂಟ್ಯೂಬ್ ವಾಹಿನಿಗಳಿಗೆ ವಹಿಸಿ, ತನ್ನ ಕಾರ್ಯಭಾರವನ್ನು ಹೈಕೋರ್ಟ್‌ ಹಂತಕ್ಕೆ ಸ್ವಯಂ ಉನ್ನತೀಕರಿಸಿಕೊಂಡಂತೆ ತೋರುತ್ತಿದೆ. 

ಸದ್ಯ ಮಾಧ್ಯಮ ನ್ಯಾಯಾಲಯದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಧರ್ಮಸ್ಥಳ ಪ್ರಕರಣದ ಬಿನಾಪ್ರತಿವಾದಿ (ಎಕ್ಸ್–ಪಾರ್ಟಿ) ವಿಚಾರಣೆಯ ಆರಂಭವನ್ನು ನೋಡೋಣ. 2025ರ ಜೂನ್ 22ರಂದು ಬೆಂಗಳೂರಿನ ನ್ಯಾಯವಾದಿಗಳಾದ ಓಜಸ್ವಿ ಗೌಡ ಮತ್ತು ಸಚಿನ್‌ ದೇಶಪಾಂಡೆ ನೀಡಿದ ಹೇಳಿಕೆ ಸಂಚಲನಕ್ಕೆ ಕಾರಣವಾಯಿತು. 1995ರಿಂದ 2014ರ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಮೃತದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೇ ಮುಂದೆ ಬಂದಿದ್ದಾನೆ ಎಂಬುದು ಆ ಹೇಳಿಕೆಯ ಸಾರಾಂಶ. ಆನಂತರ ಆ ವ್ಯಕ್ತಿ ನ್ಯಾಯಾಲಯದ ಮುಂದೆ ಹಾಜರಾಗಿ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 183ರ ಅಡಿಯಲ್ಲಿ ಸುದೀರ್ಘ ಹೇಳಿಕೆ ದಾಖಲಿಸಿದ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದರು.

ADVERTISEMENT

ಕೊನೆಗೆ ರಾಜ್ಯ ಸರ್ಕಾರ ಜುಲೈ 19ರಂದು ಪ್ರಣವ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತು. ಮಹಿಳಾ ಆಯೋಗದ ಪತ್ರ ಮತ್ತು ಅನಾಮಿಕನ ಪ್ರಮಾಣ ವಚನದ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಸುವ ಆದೇಶ ಹೊರಬಿದ್ದಿರುವುದನ್ನು ವಿಶೇಷವಾಗಿ ಗಮನಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದಂತೆ, ‘ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದ್ದು, ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿ ಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ. ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ, ವರದಿ ನೀಡಲಿದೆ’.

ಸರ್ಕಾರಿ ಆದೇಶದ ಪ್ರಕಾರ ಎಸ್.ಐ.ಟಿ.ಗೆ ನಿರ್ದಿಷ್ಟ ಕಾರ್ಯಸೂಚಿ ನೀಡಲಾಗಿದೆ ಹಾಗೂ ತಂಡಕ್ಕೆ ವಹಿಸಿದ ‘ಟರ್ಮ್ಸ್ ಆಫ್ ರೆಫರೆನ್ಸ್’ ಮಹಿಳಾ ಆಯೋಗದ ಅಧ್ಯಕ್ಷರ ಪತ್ರದಲ್ಲಿ ಉಲ್ಲೇಖಿಸಿದ ಅಂಶಗಳನ್ನು ಆಧರಿಸಿದೆ ಎಂಬುದು ಸುಸ್ಪಷ್ಟ. ಅದರಂತೆ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಕೊಲೆ, ಅತ್ಯಾಚಾರ ಮತ್ತು ಅಸಹಜ ಸಾವುಗಳ ತನಿಖೆಯಲ್ಲಿ ಎಸ್.ಐ.ಟಿ. ತೊಡಗಿಕೊಂಡಿದೆ. ಈ ಮಧ್ಯೆ ಸಾಕ್ಷಿ–ದೂರುದಾರನ ಬಂಧನ, ಮಾಹಿತಿ ಹೊಂದಿದವರ, ಆರೋಪ ಮಾಡಿದವರ ವಿಸ್ತೃತ ವಿಚಾರಣೆ ನಡೆಯುತ್ತಿರುವುದು ತನಿಖೆಯ ಮುಂದುವರಿದ ಭಾಗವೇ ಆಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಎಸ್.ಐ.ಟಿ. ತನಿಖೆಯ ಜಾಡು ಸರಿಯಾದ ದಿಕ್ಕಿನಲ್ಲಿದೆ ಎಂದು ನಂಬಲು ಕಾರಣಗಳಿವೆ. ವಸ್ತುಸ್ಥಿತಿ ಹೀಗಿರುವಾಗ ‘ಮಾಧ್ಯಮ ನ್ಯಾಯಾಲಯ’ದ ವಿಚಾರಣೆ ಮಾತ್ರ ತನಿಖೆಯ, ಆರೋಪಗಳ ದಿಕ್ಕನ್ನೇ ತಿರುಗಿಸಿ, ಊಹಾತ್ಮಕ ಷಡ್ಯಂತ್ರದ ಸುತ್ತಲಿನ ಸಂಕಥನಗಳಲ್ಲಿ ಮುಳುಗಿರುವುದು ಮಾಧ್ಯಮದ ವಿಶ್ವಾಸಾರ್ಹತೆಯನ್ನು ಕಟಕಟೆಯಲ್ಲಿ ನಿಲ್ಲಿಸಿದೆ.

ಮಾಧ್ಯಮಗಳು ತಮ್ಮ ಅಜೆಂಡಾ ಮೂಲದ ಕಾರ್ಯವೈಖರಿ ಮುಖಾಂತರ ಏಕಮುಖೀ ವರ್ತನೆಯಲ್ಲಿ ನಿರತವಾಗಿರುವುದು ಸಾಮಾನ್ಯ ನೋಡುಗರ ಗ್ರಹಿಕೆಗೂ ನಿಲುಕಿಯಾಗಿದೆ. ಇನ್ನೊಂದೆಡೆ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಅಲ್ಪಕಾಲೀನ ಲಾಭದೃಷ್ಟಿಯ ನಿಲುವು–ನಿರ್ಧಾರಗಳು, ನುಡಿ–ನಡೆಗಳು ಜನರಲ್ಲಿ ಜುಗುಪ್ಸೆ ಹುಟ್ಟಿಸುವಷ್ಟು ಕೊಳಕನ್ನು ಮೆತ್ತಿಕೊಂಡಿವೆ. ಜನಸಾಮಾನ್ಯರು ಪವಿತ್ರ ಕ್ಷೇತ್ರ ಎಂದು ದೃಢವಾಗಿ ನಂಬಿರುವ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅನಾಚಾರಗಳ ವಿರುದ್ಧ ಎತ್ತಿದ ದನಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ವಿರೋಧಿ ಷಡ್ಯಂತ್ರ ಕೇಳಿಸುತ್ತದೆ. ಅಲ್ಲಿ ನಡೆಯುತ್ತಿರುವುದು ಕೆಲವು ವ್ಯಕ್ತಿಗಳು ಎಸಗಿರುವ ನಿರ್ದಿಷ್ಟ ಅಪರಾಧ ಕೃತ್ಯಗಳ ತನಿಖೆ ಎಂಬ ಸರಳ ಸತ್ಯವನ್ನು ಮರೆಮಾಚಿ ಕ್ಷೇತ್ರದ ವಿರುದ್ಧದ ದಾಳಿ, ಸಂಚು ಎಂಬಂತೆ ಬಿಂಬಿಸುವಲ್ಲಿ ಗುಪ್ತ ಕಾರ್ಯಸೂಚಿಯಲ್ಲದೇ ಬೇರೇನಿಲ್ಲ. ಅದೇ ರೀತಿ ಮೈಸೂರು ದಸರೆಯ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ, ಮದ್ದೂರು ಗಣೇಶ ಮೆರವಣಿಗೆಯ ವಿವಾದಗಳು ಮತೀಯ ರಾಜಕಾರಣದ ಬತ್ತಳಿಕೆಯನ್ನು ಭರ್ತಿಯಾಗಿ ಇರಿಸುತ್ತಿವೆ.

ಬಿಜೆಪಿಯಂತೆ ಖಚಿತ ಮತೀಯವಾದಿ ಚಿಂತನೆ ಹೊಂದಿರದ ಕಾಂಗ್ರೆಸ್ಸು ತಕ್ಕಮಟ್ಟಿಗೆ ಸೆಕ್ಯುಲರ್ ಎಂಬ ಕಾರಣಕ್ಕೆ ವಿಚಾರವಂತರ ತತ್ಕಾಲೀನ ಅನಿವಾರ್ಯ ಆಯ್ಕೆಯಾಗಿರುವುದೇನೋ ನಿಜ. ಆದರೆ, ಆ ಪಕ್ಷದೊಳಗೂ ಈ ವಿಷಯದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದು ಸಾಕಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಪಕ್ಷದ ಕೆಲವು ನೀತಿ ನಿರ್ಧಾರಗಳು ಮುಸ್ಲಿಂ ಸಮಾಜದ ಓಲೈಕೆ ಸ್ವರೂಪದಲ್ಲಿ ಪ್ರಕಟ ವಾಗುವುದನ್ನು ತಕ್ಷಣದ ಬಾಹ್ಯನೋಟದಲ್ಲಿ ಕಾಣಬಹುದು. ಕಾಂಗ್ರೆಸ್ ನಾಯಕರ ಹಾವಭಾವ, ಮಾತು, ವರ್ತನೆಗಳಂತೂ ಮತ್ತೊಂದು ಬದಿಯ ಶಂಕಿತ ಮನಸ್ಸುಗಳನ್ನು ಮತ್ತಷ್ಟು ಉದ್ರೇಕಿಸುವಂತೆ ಇರುತ್ತವೆ. ಅವರ ಆಂತರಿಕ ಉದ್ದೇಶವೂ ಅದೇ ಆಗಿರಬಹುದು. ಆದರೆ, ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷದ ಇಂಥ ಧೋರಣೆಯಿಂದ ಮುಸ್ಲಿಂ ಸಮುದಾಯಕ್ಕೆ ಒಟ್ಟಾರೆ ಆಗಿರುವ ನೆರವು ಮತ್ತು ನಷ್ಟದ ಪ್ರಮಾಣವನ್ನು ತುಲನೆಗೆ ಒಳಪಡಿಸಿದರೆ ವಿಸ್ಮಯಕಾರಿ ಫಲಿತಾಂಶ ಹೊರಬೀಳುವ ಸಾಧ್ಯತೆ ಖಂಡಿತಾ ಇದೆ.

ಸಮಾಜದ ಅವಿಭಾಜ್ಯ ಅಂಗವಾದ ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿ ಕಾಪಾಡುವ ಸಹಜ ಹಾಗೂ ನ್ಯಾಯಯುತ ಕ್ರಮಗಳನ್ನು ವಿಶೇಷವಾಗಿ ನೋಡುವುದರಲ್ಲಿ ಮತ್ತು ತೋರಿಸುವುದರಲ್ಲಿ ನಿಜವಾದ ತೊಡಕು ಅಡಕವಾಗಿದೆ. ಓಲೈಕೆ ಮತ್ತು ತೆಗಳಿಕೆ ರಾಜಕಾರಣದ ನಡುವೆ ಸಿಲುಕಿರುವ ಮುಸ್ಲಿಂ ಜನಾಂಗವು ಸಮಾಜದ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿಸುವ ಪ್ರಕ್ರಿಯೆಗೆ ಒಳಗಾಗಿದೆಯೇ ಎಂಬ ಸಂಶಯ ಸ್ವಾಭಾವಿಕವಾಗಿ ಮೂಡುತ್ತದೆ. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಬಗೆಗಿನ ತೋರಿಕೆಯ ಓಲೈಕೆ, ಆ ಸಮುದಾಯದ ಅಸುರಕ್ಷತೆಯ ಬಳಕೆ ಹಾಗೂ ಭಾರತೀಯ ಜನತಾ ಪಕ್ಷದ ಹಿಂದೂ ಭಾವನೆಗಳ ಒಗ್ಗೂಡಿಸುವಿಕೆಯ ಪ್ರತಿಯೊಂದು ಹೆಜ್ಜೆಯ ಹಿಂದಿರುವುದು ಮತಬ್ಯಾಂಕ್ ರಾಜಕಾರಣವೇ ಹೊರತು ಯಾವ ಸಮಾಜ ಅಥವಾ ಸಮುದಾಯದ ಹಿತಾಸಕ್ತಿಯೂ ಅಲ್ಲ. ಹಾಗೆಯೇ ಮಾಧ್ಯಮಗಳ ಏಕಮುಖೀ ಜಾಗಟೆ ಸದ್ದಿನ ಮರೆಯಲ್ಲಿ ಆಶ್ರಯ ಪಡೆದಿರುವ ಉದ್ದೇಶ ಕೂಡ ಸ್ವಾರ್ಥ ಮತ್ತು ಲಾಭವೇ ಹೊರತು ಯಾರ ಉದ್ಧಾರವೂ ಆಗಿರಲಾರದು.

ಒಂದು ವ್ಯವಸ್ಥೆಯ ಅವಿಭಾಜ್ಯ ಅಂಗಗಳೇ ಸಾರ್ವಜನಿಕ ಬದುಕಿನ ಹದ ಕದಡಲು ಸರ್ವಸನ್ನದ್ಧವಾಗಿರುವ ದುರಿತ ಕಾಲದಲ್ಲಿ ಹುಟ್ಟುವ ಹತಾಶೆಯ ಪ್ರಮಾಣ ಮತ್ತು ಆಕ್ರೋಶದ ದಿಕ್ಕನ್ನು ಊಹಿಸುವುದು ಕಷ್ಟ. ಆದಾಗ್ಯೂ ಇಂಥ ದುಃಸ್ಥಿತಿಗೆ ಈಡಾದ ಯಾವುದೇ ದೇಶದ ಸಾರ್ವತ್ರಿಕ ತಾಪದ ಪರಿಣಾಮದ ಸಜೀವ ನಿದರ್ಶನಕ್ಕಾಗಿ ನೆರೆಯ ಶ್ರೀಲಂಕಾ, ಬಾಂಗ್ಲಾ ಹಾಗೂ ಇದೀಗ ನೇಪಾಳ ವಿದ್ಯಮಾನಗಳನ್ನು ಪರಿಗಣಿಸಬಹುದು.

ಸೈದ್ಧಾಂತಿಕವಾಗಿ ಧರ್ಮಕೇಂದ್ರಿತ ವಿಚಾರಧಾರೆಯ ಪ್ರಭಾವಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಗಳ ಚಟುವಟಿಕೆಗಳನ್ನು ಸುರಕ್ಷಿತ ಅಂತರದಲ್ಲಿ ಇರಿಸುವ ವಿವೇಕವನ್ನು ಸಾರ್ವಜನಿಕ ಅಭಿವ್ಯಕ್ತಿಯ ವಿವಿಧ ರೂಪಗಳು ಅಳವಡಿಸಿಕೊಳ್ಳಬೇಕಾಗಿದೆ. ರಾಜಕೀಯ ಪಕ್ಷಗಳ ಧೋರಣೆಗಳಲ್ಲಿ ಕಾಣಿಸುವ ಒಟ್ಟು ಸಮಾಜದ ದೀರ್ಘಕಾಲಿಕ ಒಳಿತು ಮತ್ತು ಕೆಡುಕನ್ನು ನಿಕಷಕ್ಕೆ ಒಳಪಡಿಸುವ ಅಗತ್ಯವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.