ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಇಂಗ್ಲಿಷ್ ಮೌಲ್ಯಯುತವಾದ ಭಾಷೆ ಎಂದು ವಿಶ್ವದಾದ್ಯಂತ ಪೋಷಕರು ಗುರ್ತಿಸಿರುವುದಾಗಿ ‘ಯುನೆಸ್ಕೊ’ ಹೇಳಿದೆ. ‘ಬಹುಭಾಷಾ ಶಿಕ್ಷಣ ಕುರಿತಾದ ಜಾಗತಿಕ ಮಾರ್ಗದರ್ಶನ’ ಎನ್ನುವ ಪ್ರಬಂಧದಲ್ಲಿ, ಸಮಕಾಲೀನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಗೆ ಇರುವ ಸಾಮಾಜಿಕ ಹಾಗೂ ಆರ್ಥಿಕ ಮಹತ್ವವನ್ನು ‘ಯುನೆಸ್ಕೊ’ ಗುರ್ತಿಸಿದೆ. ಇಂಗ್ಲಿಷ್, ವಿಶ್ವದಾದ್ಯಂತ ವ್ಯಾಪಕವಾಗಿ ಕಲಿಸಲಾಗುತ್ತಿರುವ ವಿದೇಶಿ ಭಾಷೆಯಾಗಿದೆ. ವ್ಯಾಪಕ ಕಲಿಕೆಯ ಭಾಷೆಯಾಗಿದ್ದರೂ, ಇಂಗ್ಲಿಷ್ ಭಾಷೆಯಲ್ಲಿ ನೈಪುಣ್ಯ ಗಳಿಸಲು ಆಂಗ್ಲ ಮಾಧ್ಯಮ ಶಿಕ್ಷಣ ಅವಶ್ಯಕವೆಂಬ ತಪ್ಪು ಕಲ್ಪನೆ ಅಭಿವೃದ್ಧಿಶೀಲ ದೇಶಗಳಲ್ಲಿದೆ. ಈ ತಪ್ಪು ತಿಳಿವಳಿಕೆಗೆ ಭಾರತವೂ ಹೊರತಲ್ಲ.
ಇಂಗ್ಲಿಷ್ ಭಾಷಾ ಕಲಿಕೆಗೆ ಭದ್ರವಾದ ತಳಹದಿಯ ರೂಪದಲ್ಲಿ ತಾಯ್ನುಡಿಯಲ್ಲಿನ ಕೌಶಲ ಮಹತ್ವದ ಪಾತ್ರ ವಹಿಸುವುದನ್ನು, ಜಗತ್ತಿನಾದ್ಯಂತ ನಡೆದಿರುವ ಸಂಶೋಧನೆಗಳು ಪುರಾವೆಗಳ ಮೂಲಕ ಸಾಬೀತುಪಡಿಸಿವೆ. ತಾಯ್ನುಡಿಯಲ್ಲಿನ ಪ್ರಾಥಮಿಕ ಶಿಕ್ಷಣ ಮಗುವಿನ ಕಲಿಕೆಗೆ ಸುಭದ್ರ ಅಡಿಪಾಯವನ್ನು ಕಲ್ಪಿಸಿಕೊಡುತ್ತದೆ. ನಂತರದ ಹಂತದಲ್ಲಿ, ಇಂಗ್ಲಿಷ್ ಸೇರಿದಂತೆ ಯಾವುದೇ ಎರಡನೇ ಭಾಷೆಯ ಕಲಿಕೆ ಸುಲಭವಾಗುತ್ತದೆ ಎನ್ನುವುದನ್ನು ಅಧ್ಯಯನಗಳು ನಿರೂಪಿಸಿವೆ. ಅದರಲ್ಲೂ ವಿಶೇಷವಾಗಿ, ಯುನೆಸ್ಕೊ ಹಾಗೂ ಬ್ರಿಟಿಷ್ ಕೌನ್ಸಿಲ್ ಅಧ್ಯಯನಗಳು, ತಾಯ್ನುಡಿ ಆಧಾರಿತ ಶಿಕ್ಷಣ ಮಾಧ್ಯಮವು ಆಂಗ್ಲ ಭಾಷಾ ಕಲಿಕೆಗೆ ಹೆಚ್ಚು ಪರಿಣಾಮಕಾರಿ ಆಗಿರುವುದನ್ನು ಹಲವು ಯಶೋಗಾಥೆ ಹಾಗೂ ಪ್ರಕರಣಗಳ ಅಧ್ಯಯನದ ಮೂಲಕ ಸಾಬೀತುಪಡಿಸಿವೆ.
ಪ್ರಸ್ತುತ ಜಗತ್ತಿನ ಹಲವು ದೇಶಗಳು ಆಂಗ್ಲ ಭಾಷೆಯನ್ನು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ದ್ಯೋತಕವೆಂದು ಪರಿಗಣಿಸಿವೆ. ಈ ಕಾರಣದಿಂದಲೇ, ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹೆಚ್ಚು ಆಸಕ್ತರಾಗಿದ್ದಾರೆ. ಆದರೆ, ಶಿಕ್ಷಣದಲ್ಲಿ ಸಂಶೋಧನೆಯ ಸಾಕ್ಷ್ಯಾಧಾರಗಳಿಗೆ ಹೆಚ್ಚಿನ ಮಹತ್ವವಿದೆ. ಕಿವಿಮಾತು ಹಾಗೂ ಅನುಕರಣೆಯನ್ನು ಆಧರಿಸಿದ ಬೆಳವಣಿಗೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಹಾಗೂ ಗೊಂದಲಗಳಿವೆ. ತಾಯ್ನುಡಿ ಅಲ್ಲದ ಆಂಗ್ಲ ಭಾಷೆಯಲ್ಲಿ ಕನಿಷ್ಠ ಪ್ರಾವೀಣ್ಯವೂ ಇಲ್ಲದ ವಿದ್ಯಾರ್ಥಿಗಳಿಗೆ, ಆಂಗ್ಲ ಮಾಧ್ಯಮದಲ್ಲಿ ಇಂಗ್ಲಿಷ್ ಭಾಷಾ ಕಲಿಕೆ ಸಹಾಯಕಾರಿಯೇ ಎನ್ನುವ ಪ್ರಶ್ನೆಗೆ ತಾತ್ವಿಕ ಹಾಗೂ ಸಂಶೋಧನಾಧಾರಿತ ಅಂಶಗಳನ್ನು ಪರಿಶೀಲಿಸುವುದು ನೀತಿ ನಿರೂಪಣೆಯ ದೃಷ್ಟಿಯಿಂದ ಮುಖ್ಯವಾದುದು.
ಇಂಗ್ಲಿಷ್ ಕಲಿಕೆ ಕುರಿತಂತೆ ಮಕ್ಕಳ ಪಾಲಕರಿಗೆ ಸಾಮಾನ್ಯವಾಗಿ ಮೂರು ಪ್ರಮುಖ ನಂಬಿಕೆಗಳಿವೆ. ಒಂದು, ಆಂಗ್ಲ ಮಾಧ್ಯಮದ ಮೂಲಕ ಮಾತ್ರ ಇಂಗ್ಲಿಷ್ ಭಾಷಾ ಕಲಿಕೆ ಸಾಧ್ಯ ಎನ್ನುವುದು. ಎರಡು, ಆದಷ್ಟೂ ಬೇಗ ನರ್ಸರಿ ತರಗತಿಯಿಂದಲೇ– ಇಂಗ್ಲಿಷ್ ಕಲಿಕೆ ಪ್ರಾರಂಭಿಸಿದರೆ ಮಕ್ಕಳು ಉತ್ತಮವಾಗಿ ಇಂಗ್ಲಿಷ್ ಭಾಷೆ ಕಲಿಯುತ್ತಾರೆಂಬುದು. ಮೂರು, ಇಂಗ್ಲಿಷ್ ಕಲಿಕೆಗೆ ತಾಯ್ನುಡಿ ಭಾಷಾ ಮಾಧ್ಯಮ ಆಗಿರುವುದರಿಂದ ತೊಂದರೆಯಾಗುತ್ತದೆ ಎನ್ನುವ ತೀವ್ರ ಆತಂಕ.
ಪಾಲಕರ ಈ ನಂಬಿಕೆಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ತಾಯ್ನುಡಿಯಲ್ಲಿನ ಕಲಿಕೆಯ ಮೂಲಕ ಮಕ್ಕಳಿಗೆ ಸುಭದ್ರ ಶೈಕ್ಷಣಿಕ ಬುನಾದಿ ದೊರೆಯುತ್ತದೆ ಹಾಗೂ ಇಂಗ್ಲಿಷ್ ಭಾಷೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕಲಿಯುವುದು ಸಾಧ್ಯವಾಗುತ್ತದೆ; ತಾಯ್ನುಡಿಯಲ್ಲಿನ ನೈಪುಣ್ಯವು ‘ಶೈಕ್ಷಣಿಕ ಭಾಷಾ ಕೌಶಲ’ವನ್ನು ಬೆಳೆಸಲೂ ಸಹಾಯಕವಾಗುತ್ತದೆ ಎನ್ನುವುದನ್ನು ಅಧ್ಯಯನಗಳು ದೃಢಪಡಿಸಿವೆ (ಬೆನ್ಸನ್ ಅವರ 2002, 2005 ಹಾಗೂ 2008ರ ಅಧ್ಯಯನಗಳು).
‘ಬ್ರಿಟಿಷ್ ಕೌನ್ಸಿಲ್‌ನ 2019ರ ಅಧ್ಯಯನದ ಪ್ರಕಾರ, ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮ ನೀತಿಯನ್ನು ಅಕಾಲಿಕವಾಗಿ ಮತ್ತು ಅವೈಜ್ಞಾನಿಕವಾಗಿ ಜಾರಿಗೊಳಿಸುವುದರಿಂದ ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಇಂಗ್ಲಿಷ್ ಭಾಷೆಯ ಸಾಕಷ್ಟು ಜ್ಞಾನ ಮತ್ತು ಪರಿಣತಿಯಿಲ್ಲದೆ ಇದ್ದಾಗ, ಆಂಗ್ಲ ಮಾಧ್ಯಮ ನೀತಿ ಹೇರಿಕೆಯು ಕಲಿಕೆಯಲ್ಲಿ ಅವಘಡಕ್ಕೆ ಕಾರಣವಾಗುತ್ತದೆ ಎನ್ನುವುದನ್ನೂ ಅಧ್ಯಯನಗಳು ಸ್ಪಷ್ಟಪಡಿಸಿವೆ.
ಈ ಅಧ್ಯಯನಗಳು ನಮ್ಮ ಮುಂದಿಡುವ ಮುಖ್ಯ ಸಂಗತಿಗಳು: ಪರಿಣತಿ ಇಲ್ಲದ ಆಂಗ್ಲ ಮಾಧ್ಯಮ ಶಿಕ್ಷಣ ಪರೋಕ್ಷವಾಗಿ ಕಲಿಕೆಯ ಮೌಲ್ಯವನ್ನೇ ಹಾಳು ಮಾಡುತ್ತದೆ ಹಾಗೂ ಕಲಿಕೆಯನ್ನು ಕಬ್ಬಿಣದ ಕಡಲೆಯನ್ನಾಗಿಸುತ್ತದೆ. ಮಕ್ಕಳಲ್ಲಿ ಕಲಿಕೆಯ ಆತ್ಮವಿಶ್ವಾಸವನ್ನು ಕುಗ್ಗಿಸುವುದರೊಂದಿಗೆ, ಕಂಠಪಾಠವನ್ನು ಉತ್ತೇಜಿಸುವ ಶಿಕ್ಷಣ ಕ್ರಮ ಪಾಲಕರು ಮಕ್ಕಳ ಕಲಿಕೆಯಲ್ಲಿ ಸಹಭಾಗಿಯಾಗುವ ಅವಕಾಶವನ್ನೂ ಕಸಿದುಕೊಳ್ಳುತ್ತದೆ. ಕಲಿಕೆಯು ಸೃಜನಶೀಲ ಹಾಗೂ ರಚನಾತ್ಮಕವಾಗಿದ್ದು, ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆಯಾಗುವ ಬದಲು ನಿಷ್ಕ್ರಿಯ ಮಾಹಿತಿ ಸಂಗ್ರಹದ ಜಡ ಪ್ರಕ್ರಿಯೆಯಾಗುತ್ತದೆ.
ತಾಯ್ನುಡಿ ಆಧಾರಿತ ಶಿಕ್ಷಣವು ಮಕ್ಕಳ ಕಲಿಕೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎನ್ನುವ ಸಂಗತಿಯನ್ನು ನಿರ್ದಿಷ್ಟ ಪ್ರಕರಣಗಳನ್ನು ಆಧರಿಸಿ ‘ಯುನೆಸ್ಕೊ’ ನಡೆಸಿರುವ (2008) ಅಧ್ಯಯನಗಳು ಅನುಮಾನಕ್ಕೆ ಆಸ್ಪದವಿಲ್ಲದಂತೆ ನಿರೂಪಿಸಿವೆ. ಆ ಅಧ್ಯಯನಗಳು ಕಂಡುಕೊಂಡ ಪ್ರಮುಖ ಅಂಶಗಳು: ತಾಯ್ನುಡಿ ಮಾಧ್ಯಮದಲ್ಲಿ ಕಲಿಕೆಯು ಮಕ್ಕಳಿಗೆ ಸಂತಸದಾಯಕ ಹಾಗೂ ಸುಲಭವಾಗಿರುತ್ತದೆ. ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ತಾಯ್ನುಡಿ ಮಾಧ್ಯಮ ಉತ್ತಮ ಸಂವಹನ ಮತ್ತು ಸಂಬಂಧವನ್ನು ಉಂಟು ಮಾಡುತ್ತದೆ; ಮಕ್ಕಳಲ್ಲಿ ಆತ್ಮಗೌರವ ಮತ್ತು ಚಿಂತನಶೀಲತೆಯ ಶಕ್ತಿಯನ್ನೂ ಹೆಚ್ಚಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಪ್ರಾಥಮಿಕ ಕಲಿಕೆಯ ನಂತರದ ಹಂತದಲ್ಲಿ ಇಂಗ್ಲಿಷ್ ಸೇರಿದಂತೆ ಯಾವುದೇ ಎರಡನೇ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಯಲು ತಾಯ್ನುಡಿ ಮಾಧ್ಯಮ ಸಹಾಯ ಮಾಡುತ್ತದೆ.
ದಕ್ಷಿಣ ಆಫ್ರಿಕಾದಲ್ಲಿನ ‘ಶಿಕ್ಷಣದಲ್ಲಿ ಭಾಷಾ ನೀತಿ’ಯು, ಬಹುಭಾಷಾ ಸಮಾಜದಲ್ಲಿ ಮಕ್ಕಳಿಗೆ ಹೆಚ್ಚುವರಿ ಎರಡನೇ ಭಾಷೆಯನ್ನು ಕಲಿಸಲು ಪ್ರಾರಂಭಿಸುವ ಮೊದಲು, ತಾಯ್ನುಡಿ ಕಲಿಕೆಯ ಬಳಕೆಯನ್ನು ವಿಸ್ತರಿಸುವ ವಿಧಾನವನ್ನು ಪ್ರೋತ್ಸಾಹಿಸುತ್ತದೆ. ಈ ವಿಧಾನವು ವಿದ್ಯಾರ್ಥಿಗೆ ಹೆಚ್ಚುವರಿ ಭಾಷೆಯನ್ನು ಕಲಿಸುವ ಮೊದಲು, ವಿದ್ಯಾರ್ಥಿಗಳು ತಾಯ್ನುಡಿಯಲ್ಲಿ ಅಥವಾ ಮೊದಲ ಭಾಷೆಯಲ್ಲಿ ಸಾಕ್ಷರತೆ ಮತ್ತು ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳುವುದನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ತಮ್ಮ ತಾಯ್ನುಡಿಯಲ್ಲಿ ಸಾಕ್ಷರತೆ ಮತ್ತು ಭಾಷಾ ಸಾಮರ್ಥ್ಯವನ್ನು ಬೆಳೆಸಿಕೊಂಡರೆ, ಅವರು ಹೆಚ್ಚುವರಿ ಭಾಷೆ ಕಲಿಯಲು ಸುಲಭ
ವಾಗುತ್ತದೆ. ತಾಯ್ನುಡಿ ಮಾಧ್ಯಮದ ಕಲಿಕೆಯಲ್ಲಿ ವಿದ್ಯಾರ್ಥಿಗಳು, ಸಾಕ್ಷರತೆ ಮತ್ತು ಭಾಷಾ ಕೌಶಲಗಳನ್ನು ಮೊದಲ ಭಾಷೆಯಿಂದ ಎರಡನೇ ಭಾಷೆಗೆ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಲ್ಲರು ಎನ್ನುವುದನ್ನು ಸಂಶೋಧನೆ ನಿರೂಪಿಸಿದೆ (ಬೆನ್ಸನ್ ಹಾಗೂ ಕಮ್ಮಿನ್ಸ್, 2005ರ ಅಧ್ಯಯನ).
ತಾಯ್ನುಡಿಗೆ ಸಂಬಂಧಿಸಿದ ಎಲ್ಲಾ ಸಂಶೋಧನೆಗಳು ಭಾಷಾ ಕಲಿಕೆಯಲ್ಲಿ ಎರಡು ಪ್ರಮುಖ ತತ್ತ್ವಗಳನ್ನು ಗುರುತಿಸಿವೆ. ಒಂದು, ತಾಯ್ನುಡಿಯಲ್ಲಿ ಕಲಿತ ಕೌಶಲಗಳು ಇಂಗ್ಲಿಷ್ ಸೇರಿದಂತೆ ಯಾವುದೇ ಎರಡನೇ ಭಾಷೆಯ ಕಲಿಕೆಗೆ ವರ್ಗಾಯಿಸಬಹುದು. ಇದು, ಓದುವ ಕೌಶಲ, ಆಲೋಚನಾ ಶಕ್ತಿ ಮತ್ತು ಭಾಷಾ ಜ್ಞಾನವನ್ನು ಒಳಗೊಂಡಿರುತ್ತದೆ. ಎರಡು, ತಾಯ್ನುಡಿಯಿಂದ ಇಂಗ್ಲಿಷ್ ಸೇರಿದಂತೆ ಯಾವುದೇ ಎರಡನೇ ಭಾಷೆಗೆ ತಾತ್ವಿಕವಾಗಿ ಮತ್ತು ಕ್ರಮವಾಗಿ ಸ್ಥಿತ್ಯಂತರಗೊಳ್ಳುವ ಪ್ರಕ್ರಿಯೆ. ತಾಯ್ನುಡಿಯ ಹೊರತಾಗಿ ಯಾವುದೇ ಎರಡನೇ ಭಾಷೆಯಲ್ಲಿ ಮಾಧ್ಯಮ ಅಥವಾ ಕಲಿಕೆಯನ್ನು ಜಾರಿಗೊಳಿಸಿದರೆ ಮಕ್ಕಳಿಗೆ ಕಲಿಕೆ ಕಷ್ಟವಾಗುತ್ತದೆ. ಹೀಗಾಗಿ, ಇಂಗ್ಲಿಷ್ ಅನ್ನು ಮಾಧ್ಯಮವಾಗಿ ಹೇರಿಕೆ ಮಾಡುವ ಬದಲು, ಒಂದು ಭಾಷೆಯನ್ನಾಗಿ ಸೂಕ್ತ ಸಮಯದಲ್ಲಿ ಕಲಿಸುವುದು ಹೆಚ್ಚು ಪರಿಣಾಮಕಾರಿ.
ಯಾವ ದೇಶಗಳಲ್ಲಿ ಎಳೆಯ ಮಕ್ಕಳಿಗೆ ಅವರ ತಾಯ್ನುಡಿ ಅಥವಾ ಪರಿಚಿತ ಭಾಷೆಯಲ್ಲಿ ಕಲಿಸಲಾಗುತ್ತದೆಯೋ ಅಲ್ಲಿ, ಮಕ್ಕಳು ತಾವು ಕಲಿಯುತ್ತಿರುವುದನ್ನು ಅರ್ಥ ಮಾಡಿಕೊಂಡು ಕಲಿಕೆಯಲ್ಲಿ ಪೂರ್ಣ ಯಶಸ್ವಿಯಾಗಿದ್ದಾರೆ ಎಂದು ಪ್ರಮುಖ ಸಂಶೋಧನೆಗಳು ತೋರಿಸಿವೆ. ಶಿಕ್ಷಣದ ಮೊದಲ ಹಂತದಲ್ಲಿ ತಾಯ್ನುಡಿ ಅಥವಾ ಪರಿಚಿತ ಭಾಷೆಯಲ್ಲಿ ಕಲಿಯುವ ಮಕ್ಕಳು, ಗುಣಮಟ್ಟದ ಇಂಗ್ಲಿಷ್ ಭಾಷೆಯ ಕಲಿಕಾ ಅನುಭವಗಳನ್ನು ಹೊಂದಿರುವುದೂ ದೃಢಪಟ್ಟಿದೆ. ಇಂಗ್ಲಿಷ್ ಅನ್ನು ಒಂದು ಭಾಷಾ ವಿಷಯವನ್ನಾಗಿ ಕಲಿಸುವ ಮೂಲಕ ಇಂಗ್ಲಿಷ್‌ನ ಕಲಿಕೆಯ ಗುಣಮಟ್ಟ, ಕೌಶಲ ಮತ್ತು ನಿರರ್ಗಳತೆಯನ್ನು ಉತ್ತಮಪಡಿಸಬಹುದು, ಅಷ್ಟೇ. ಪ್ರಾಥಮಿಕ ಶಾಲಾ ಹಂತದಲ್ಲಿ ಇಂಗ್ಲಿಷ್ ಅನ್ನು ಕಲಿಕಾ ಮಾಧ್ಯಮವನ್ನಾಗಿ ಜಾರಿಗೊಳಿಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪಯುಕ್ತವಲ್ಲ.
ವಿಶ್ವದ ಮತ್ತು ಭಾರತದ ಬಹಳಷ್ಟು ಸಂಶೋಧನೆಗಳು ನಮ್ಮ ನೀತಿ ನಿರೂಪಕರಿಗೆ ಕೆಲವು ಸಾಮಾನ್ಯ ಸಂಗತಿಗಳನ್ನು ಸ್ಪಷ್ಟಪಡಿಸುತ್ತವೆ. ಅವುಗಳೆಂದರೆ: ಒಂದು ಉತ್ತಮ ಶಿಕ್ಷಣ ವ್ಯವಸ್ಥೆ ಅಲ್ಲಿನ ತಾಯ್ನುಡಿ ಮಾಧ್ಯಮದ ಆಧಾರದ ಮೇಲೆ ರೂಪುಗೊಳ್ಳಬೇಕು. ಇಂಗ್ಲಿಷ್ ಒಳಗೊಂಡಂತೆ ಯಾವುದೇ ಎರಡನೇ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುವುದು ಶಿಕ್ಷಣ ಶಾಸ್ತ್ರದ ದೃಷ್ಟಿಯಿಂದ ವೈಜ್ಞಾನಿಕ ಕ್ರಮವಾಗಿರುತ್ತದೆ. ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಪ್ರಭುತ್ವದ ಮಟ್ಟಕ್ಕೆ ಉತ್ತಮವಾಗಿ ಕಲಿಸಲು ಅಗತ್ಯ ಸಂಪನ್ಮೂಲ ಒದಗಿಸುವುದು ಹಾಗೂ ಶಿಕ್ಷಕರಿಗೆ ಆ ಭಾಷಾ ಕೌಶಲದ ಬಗ್ಗೆ ತರಬೇತಿ ನೀಡುವುದು ಎರಡನೇ ಭಾಷೆಯ ಕಲಿಕೆಗೆ ಬುನಾದಿಯಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಭಾಷೆಯ ಗುಣಮಟ್ಟದ ಕಲಿಕೆಗೆ ಶಿಕ್ಷಕರ ಶಿಕ್ಷಣದಲ್ಲಿ ಇಂಗ್ಲಿಷ್ ಅನ್ನು ಒಂದು ಕಲಿಕಾ ವಿಷಯವಾಗಿ ಉತ್ತೇಜಿಸಬಹುದು.
ವೈಜ್ಞಾನಿಕ ಅಧ್ಯಯನಗಳ ಸಾರವನ್ನು ಪರಿಗಣಿಸಿ, ತಾಯ್ನುಡಿ ಆಧಾರಿತ ಶಿಕ್ಷಣವು ಇಂಗ್ಲಿಷ್ ಕಲಿಕೆಗೆ ಹೆಚ್ಚು ಉತ್ತಮ ಮಾರ್ಗ ಎನ್ನುವ ನಿರ್ಣಯಕ್ಕೆ ಬರಬಹುದಾಗಿದೆ. ಆಂಗ್ಲ ಭಾಷಾ ಕಲಿಕೆಗೆ ಇಂಗ್ಲಿಷ್ ಮಾಧ್ಯಮ ಮುಖ್ಯವಲ್ಲ ಹಾಗೂ ತಾಯ್ನುಡಿ ಮಾಧ್ಯಮದ ಮೂಲಕ ಇಂಗ್ಲಿಷ್ ಕಲಿಯುವುದು ಮಕ್ಕಳ ಶಿಕ್ಷಣಕ್ಕೆ ಉತ್ತಮ ಅಡಿಪಾಯವಾಗಿ ರೂಪುಗೊಳ್ಳುತ್ತದೆ. ಹಾಗಾಗಿ, ಇಂಗ್ಲಿಷ್ ಮಾಧ್ಯಮದ ಬದಲಿಗೆ ತಾಯ್ನಡಿ ಆಧಾರಿತ ಕಲಿಕಾ ಮಾದರಿಯು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಉತ್ತಮವಾದುದು.
ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಇಂಗ್ಲಿಷ್ ಅನ್ನು ಮಾಧ್ಯಮವಾಗಿ ಬಳಸುವ ಬದಲು, ವಿಷಯವಾಗಿ ಕಲಿಸುವುದು ಹೆಚ್ಚು ಪರಿಣಾಮಕಾರಿ. ಪ್ರಾಥಮಿಕ ಹಂತದಲ್ಲಿಯೇ ಆಂಗ್ಲ ಭಾಷಾ ಮಾಧ್ಯಮ ಜಾರಿಗೊಳಿಸುವ ತೀರ್ಮಾನ, ತಾಯ್ನುಡಿಯನ್ನೇ ಸಮರ್ಥವಾಗಿ ಕಲಿಯದ ಮಕ್ಕಳ ಗಂಟಲಲ್ಲಿ ಕಡುಬು ತುರುಕಿದಂತಾಗುತ್ತದೆ. ಯಾವುದೇ ಹಂತದಲ್ಲಿ ಆಂಗ್ಲ ಮಾಧ್ಯಮ ಜಾರಿಗೊಳಿಸುವ ನೀತಿ– ನಿರ್ಧಾರ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ (1989) ಮೂಲ ತತ್ವವಾದ ‘ಮಕ್ಕಳ ಹಿತಾಸಕ್ತಿ’ಗೆ ಯಾವುದೇ ಬಗೆಯಲ್ಲಿ ಹಾನಿ ಮಾಡದಿರುವ ತತ್ತ್ವದ ಭಾಗವಾಗಿರಬೇಕು. ಈ ಕನಿಷ್ಠ ಕಾಳಜಿ ರಾಜಕಾರಣಿಗಳದು ಮತ್ತು ನೀತಿ ನಿರೂಪಕರದು ಆಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.