
ಸಂಗ್ರಹ ಚಿತ್ರ
ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 31ರಂದು ಭಾರತವು ʻರಾಷ್ಟ್ರೀಯ ಏಕತಾ ದಿವಸ’ವನ್ನು ಆಚರಿಸುತ್ತದೆ. 1947ರ ನಂತರ 570ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಟ್ಟುಗೂಡಿಸಿ ಒಂದೇ ಒಕ್ಕೂಟ ವ್ಯವಸ್ಥೆಯನ್ನು ರಚಿಸಿದ ಪಟೇಲ್ ಅವರಂತಹ ನಿರ್ಣಾಯಕ ವ್ಯಕ್ತಿಗಳು ಗಣರಾಜ್ಯಕ್ಕೆ ಅಡಿಪಾಯವನ್ನು ಹಾಕಿದರು.
ಪಟೇಲ್ ಅವರ ವಾಸ್ತವ ಪ್ರಜ್ಞೆ, ತಾಳ್ಮೆ ಮತ್ತು ಉಕ್ಕಿನಂತಹ ದೃಢತೆಯೇ ದೇಶ ವಿಭಜನೆಯ ಹಿನ್ನೆಲೆಯಲ್ಲಿ ಭಾರತ ಉಪಖಂಡವನ್ನು ಮತ್ತಷ್ಟು ಭಾಗಗಳಾಗಿ ಒಡೆಯುವುದನ್ನು ತಡೆಯಿತು. ಜುನಾಗಢ್, ಹೈದರಾಬಾದ್ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಪಟೇಲ್ ಅವರ ಮನವೊಲಿಕೆ ಮತ್ತು ಸಂಕಲ್ಪವಿಲ್ಲದಿದ್ದರೆ ಅನಿಶ್ಚಿತತೆಗೆ ಜಾರುವ ಸಾಧ್ಯತೆಯಿತ್ತು. ಪಟೇಲ್ ಅವರು ಪ್ರತಿಪಾದಿಸಿದ ಏಕತೆಯ ಕಲ್ಪನೆಯು ಎಂದಿಗೂ ಏಕರೂಪವಾದಂಥದಲ್ಲ, ಸಮಾನ ಪರಂಪರೆಯಿಂದ ಮನಸ್ಸುಗಳು ಮತ್ತು ಹೃದಯಗಳು ಒಗ್ಗೂಡಿದಂತಹ ಒಕ್ಕೂಟ ವ್ಯವಸ್ಥೆಯನ್ನು ಅವರು ಪ್ರತಿಪಾದಿಸಿದರು. ವೈವಿಧ್ಯತೆಗಳು ಮತ್ತು ಹೊಸ ಆಕಾಂಕ್ಷೆಗಳ ಇಂದಿನ ಯುಗದಲ್ಲಿ ಆ ನಂಬಿಕೆಯು ಭಾರತದ ಆಧಾರ ಸ್ತಂಭವಾಗಿ ಉಳಿದಿದೆ.
2014ರಲ್ಲಿ ಪಟೇಲ್ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸುವ ನಿರ್ಧಾರದ ಮೂಲಕ, ಏಕತೆಯು ಒಮ್ಮೆಗೆ ಮುಗಿದ ವಿಚಾರವಲ್ಲ ಬದಲಿಗೆ, ಅದು ರಾಷ್ಟ್ರೀಯ ನವೀಕರಣದ ನಿರಂತರ ಪ್ರಯತ್ನ ಎಂಬುದನ್ನು ಗುರುತಿಸಲಾಯಿತು. ದೇಶಾದ್ಯಂತ ಶಾಲೆಗಳು, ನಾಗರಿಕ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ರಾಷ್ಟ್ರದ ಸಮಗ್ರತೆಯನ್ನು ಎತ್ತಿಹಿಡಿಯುವ ಸಂಕಲ್ಪವನ್ನು ಪುನರುಚ್ಚರಿಸುತ್ತಾರೆ. ʻಏಕತೆಗಾಗಿ ಓಟʼದಂತಹ ಕಾರ್ಯಕ್ರಮಗಳು ಸಾಮೂಹಿಕ ಕ್ರಮಕ್ಕಾಗಿ ಪಟೇಲ್ ಅವರ ಕರೆಯನ್ನು ಸಾಕಾರಗೊಳಿಸುತ್ತವೆ - ದೇಶಭಕ್ತಿಯು ಭಾವನೆಯಿಂದ ಭಾಗವಹಿಸುವಿಕೆಗೆ ಸಾಗಬೇಕು ಎಂದು ನಮಗೆ ನೆನಪಿಸುತ್ತವೆ.
ಈ ವರ್ಷ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯನ್ನು ʻಏಕ್ತಾ ನಗರʼದಲ್ಲಿ 182 ಮೀಟರ್ ಎತ್ತರದ ʻಏಕತಾ ಪ್ರತಿಮೆʼಯ ಬಳಿ ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ಸಾಂಸ್ಕೃತಿಕ ಮೆರವಣಿಗೆಗಳು, ರಾಜ್ಯಗಳ ಸ್ತಬ್ಧಚಿತ್ರಗಳು ಹಾಗೂ 900ಕ್ಕೂ ಹೆಚ್ಚು ಕಲಾವಿದರ ಪ್ರದರ್ಶನಗಳು ಇರಲಿವೆ. ದೇಶದ ಅನೇಕ ಧ್ವನಿಗಳು ಒಂದಾಗಿ ಧ್ವನಿಸುವುದರಲ್ಲಿ ಭಾರತದ ಶಕ್ತಿಯು ಅಡಗಿದೆ ಎಂಬ ಕಲ್ಪನೆಯನ್ನು ಈ ಕಾರ್ಯಕ್ರಮವು ಆಚರಿಸಲಿದೆ.
ಭಾಷೆಗಳು, ನಂಬಿಕೆಗಳು ಮತ್ತು ಜಾನಪದ ಸಂಪ್ರದಾಯಗಳ ಸಹಬಾಳ್ವೆಯನ್ನು ಹೊಂದಿರುವ ಈ ದೇಶದಲ್ಲಿ, ದೀರ್ಘಕಾಲದಿಂದ ಏಕತೆಯನ್ನು ಹಿಡಿದಿಟ್ಟಿರುವ ಎಳೆಯಾಗಿ ಸಂಸ್ಕೃತಿಯು ಕಾರ್ಯನಿರ್ವಹಿಸಿದೆ. ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸಂಸ್ಥೆಗಳು - ವಲಯ ಸಾಂಸ್ಕೃತಿಕ ಕೇಂದ್ರಗಳಿಂದ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳವರೆಗೆ - ಪರಂಪರೆಯನ್ನು ಪ್ರಜಾಸತ್ತಾತ್ಮಕಗೊಳಿಸಲು ಕೆಲಸ ಮಾಡುತ್ತವೆ, ಯಾವುದೇ ಪ್ರದೇಶವು ರಾಷ್ಟ್ರೀಯ ಕಥಾನಕದಿಂದ ಪ್ರತ್ಯೇಕವಾಗದಂತೆ ಖಚಿತಪಡಿಸುತ್ತವೆ.
ʻಏಕ ಭಾರತ-ಶ್ರೇಷ್ಠ ಭಾರತʼದಂತಹ ಕಾರ್ಯಕ್ರಮಗಳು ಭಾಷೆ, ಪಾಕಪದ್ಧತಿ ಮತ್ತು ಕಲೆಯ ವಿನಿಮಯಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಟ್ಟುಗೂಡಿಸುವ ಮೂಲಕ ಈ ಮನೋಭಾವವನ್ನು ಸಾಂಸ್ಥಿಕಗೊಳಿಸುತ್ತವೆ. ಮಹಾರಾಷ್ಟ್ರದ ವಿದ್ಯಾರ್ಥಿಗಳು ʻಬಿಹುʼ ಕಲಿತಾಗ ಅಥವಾ ಅಸ್ಸಾಂನ ಯುವ ಪ್ರದರ್ಶಕರು ಪುಣೆಯಲ್ಲಿ ಲಾವಣಿ ಪ್ರದರ್ಶಿಸುವುದನ್ನು ಕಲಿತಾಗ, ಅವರು ʻಒಬ್ಬರನ್ನೊಬ್ಬರು ತಿಳಿದುಕೊಳ್ಳುವುದು ಒಗ್ಗಟ್ಟಿನ ಮೊದಲ ಹೆಜ್ಜೆʼ ಎಂಬ ಪಟೇಲ್ ಅವರ ಕಲ್ಪನೆಯನ್ನು ಅಭ್ಯಾಸ ಮಾಡುತ್ತಾರೆ.
ಪ್ರವಾಸೋದ್ಯಮವೂ ಒಗ್ಗಟ್ಟಿನ ಸಾಧನವಾಗಿದೆ. ʻನಿಮ್ಮ ದೇಶವನ್ನು ನೋಡಿʼ ಅಭಿಯಾನ ಮತ್ತು ನವೀಕರಿಸಿದ ʻಇನ್ಕ್ರೆಡಿಬಲ್ ಇಂಡಿಯಾʼ ಡಿಜಿಟಲ್ ವೇದಿಕೆಯು ನಾಗರಿಕರು ತಮ್ಮ ಮಾತೃಭೂಮಿಯನ್ನು ಅನ್ವೇಷಿಸುವಂತೆ ಪ್ರೋತ್ಸಾಹಿಸುತ್ತದೆ – ಪಂಜಾಬ್ನ ಸ್ವರ್ಣಮಂದಿರದಿಂದ ಕೇರಳದ ಹಿನ್ನೀರಿನವರೆಗೆ, ಅಸ್ಸಾಂನ ಚಹಾ ತೋಟಗಳಿಂದ ರಾಜಸ್ಥಾನದ ಮರುಭೂಮಿಗಳವರೆಗೆ ದೇಶವನ್ನು ಸುತ್ತಲು ಉತ್ತೇಜಿಸುತ್ತದೆ. 2024ರಲ್ಲಿ, ದೇಶೀಯ ಪ್ರವಾಸೋದ್ಯಮವು 294 ಕೋಟಿ ಭೇಟಿಗಳನ್ನು ದಾಟಿದೆ, ಇದು ಭಾರತದ ಬಗ್ಗೆ ಭಾರತೀಯರಲ್ಲಿ ಕುತೂಹಲ ಮತ್ತು ಹೆಮ್ಮೆ ಹೆಚ್ಚಿರುವುದನ್ನು ಸೂಚಿಸುತ್ತದೆ.
ʻಸ್ವದೇಶ್ ದರ್ಶನ್ʼ ಮತ್ತು ʻಪ್ರಸಾದ್ʼ ನಂತಹ ಯೋಜನೆಗಳು ಸ್ಥಳೀಯ ಜೀವನೋಪಾಯವನ್ನು ಸೃಷ್ಟಿಸಲು ಮೂಲಸೌಕರ್ಯವನ್ನು ಮೀರಿ ಕೆಲಸ ಮಾಡುತ್ತವೆ. ನಾಗಾಲ್ಯಾಂಡ್ನ ಮಹಿಳೆಯೊಬ್ಬರು ಗುಜರಾತ್ನ ಪ್ರವಾಸಿಗರಿಗಾಗಿ ʻಹೋಮ್ಸ್ಟೇ ನಡೆಸಿದಾಗ ಅಥವಾ ಜೋಧ್ಪುರದ ಕುಶಲಕರ್ಮಿಯೊಬ್ಬರು ತಮಿಳುನಾಡಿನ ಪ್ರಯಾಣಿಕರಿಗೆ ಕರಕುಶಲ ವಸ್ತುಗಳನ್ನು ಮಾರಾಟ ಮಾಡಿದಾಗ, ಅವರು ಅಲ್ಲಿ ಸರಕುಗಳಿಗಿಂತ ಮಿಗಿಲಾದದ್ದನ್ನು ವಿನಿಮಯ ಮಾಡಿಕೊಳ್ಳುತ್ತಾರೆ - ಅವರು ಗಣರಾಜ್ಯವನ್ನು ಹತ್ತಿರಕ್ಕೆ ಹೆಣೆಯುವ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಏಕತೆ ಎಂಬುದು ಪ್ರತಿ ಪೀಳಿಗೆಯಲ್ಲೂ ನವೀಕರಣಗೊಳ್ಳುವಂಥದ್ದು. ಭಿನ್ನತೆ, ಅಜ್ಞಾನ ಮತ್ತು ಪ್ರಾದೇಶಿಕತೆಯ ವಿಛಿದ್ರ ಪ್ರಚೋದನೆಗಳಿಂದ ಅದನ್ನು ರಕ್ಷಿಸಬೇಕು ಎಂದು ಪಟೇಲರು ಬೋಧಿಸಿದ್ದರು. ʻಪಂಚ ಪ್ರಾಣʼ, ಅಂದರೆ ʻಸ್ವಾಂತಂತ್ರ್ಯದ ಅಮೃತ ಮಹೋತ್ಸವʼದ ಐದು ಸಂಕಲ್ಪಗಳು ರಾಷ್ಟ್ರೀಯ ಒಗ್ಗಟ್ಟಿನ ಸಂಕಲ್ಪವನ್ನು 2047ರತ್ತ ಭಾರತದ ಪ್ರಯಾಣದ ಹೃದಯಭಾಗದಲ್ಲಿರಿಸುತ್ತವೆ.
ಭಾರತವು 2025ರಲ್ಲಿ ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ಆಚರಿಸುತ್ತಿದೆ. ಈ ವೇಳೆ ಉಕ್ಕಿನ ಮನುಷ್ಯನಿಗೆ ನಾವು ಸಲ್ಲಿಸುವ ನೈಜ ಗೌರವವು ಅಮೃತಶಿಲೆ ಪ್ರತಿಮೆ’ ಅಥವಾ ಸ್ಮರಣೆಯಲ್ಲ, ಬದಲಿಗೆ ಪ್ರತಿಯೊಬ್ಬ ಭಾರತೀಯನೂ ಒಂದೇ ರಾಷ್ಟ್ರೀಯ ಯಶೋಗಾಥೆಯ ಭಾಗವಾಗುವಂತೆ ನೋಡಿಕೊಳ್ಳುವ ಮೂಲಕ ನಾವು ಅವರಿಗೆ ಗೌರವ ಸಲ್ಲಿಸಬಹುದಾಗಿದೆ. ಸಾಂಸ್ಕೃತಿಕ ಪ್ರದರ್ಶನ, ವಸ್ತುಸಂಗ್ರಹಾಲಯ ಪ್ರದರ್ಶನ ಅಥವಾ ರಾಜ್ಯಗಳಾದ್ಯಂತ ಪ್ರಯಾಣದ ಮೂಲಕ, ಭಾಗವಹಿಸುವಿಕೆಯ ಪ್ರತಿಯೊಂದು ಕ್ರಿಯೆಯು ಈ ನಾಗರಿಕತೆಯನ್ನು ಒಟ್ಟಿಗೆ ಇರಿಸುವ ಅಗೋಚರ ಎಳೆಗಳನ್ನು ಬಲಪಡಿಸುತ್ತದೆ.
ಸರ್ದಾರ್ ಪಟೇಲ್ ಅವರ ಮಾತುಗಳಲ್ಲಿ ಮತ್ತು ಪ್ರಧಾನಿ ಮೋದಿಯವರ ಅದೇ ಮಾತುಗಳ ಪುನರುಚ್ಛರದ ಮೂಲಕ ಹೇಳುವುದಾದರೆ, ಏಕತೆಯು - ʻಏಕ ಭಾರತ, ಶ್ರೇಷ್ಠ ಭಾರತʼ ಎಂಬ ಭಾರತದ ಆಶಯವನ್ನು ನಿರ್ಧರಿಸುವ ಸಾಧನ ಮತ್ತು ಗುರಿ ಎರಡೂ ಆಗಿದೆ.
(ಲೇಖಕರು ಭಾರತ ಸರ್ಕಾರದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು)