ADVERTISEMENT

ವಿಶ್ಲೇಷಣೆ | ರಾಷ್ಟ್ರೀಯತೆ: ಹಿಮ್ಮೆಟ್ಟುವಿಕೆ ಏಕೆ?

ಯೋಗೇಂದ್ರ ಯಾದವ್
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
   
ಗಣತಂತ್ರದ ಜೀವಶಕ್ತಿ ಬಗ್ಗೆ ನಂಬಿಕೆಯುಳ್ಳವರ ಮಾತುಗಳನ್ನು ಸಮಾಜ ಕೇಳಿಸಿಕೊಳ್ಳುತ್ತಿಲ್ಲ. ಆದರೆ, ಗಣರಾಜ್ಯವನ್ನು ನಾಶಗೊಳಿಸುವ ಪ್ರಯತ್ನದಲ್ಲಿ ಇರುವವರು ಎಲ್ಲರನ್ನೂ ಮರುಳುಗೊಳಿಸುವ ಮೋಸದ ಭಾಷೆಯನ್ನು ಯಶಸ್ವಿಯಾಗಿ ಬಳಸುತ್ತಿರುತ್ತಾರೆ. ನಮ್ಮ ಚಿಂತನೆ, ಸಂವಹನ ಮತ್ತು ನಡವಳಿಕೆಯನ್ನು ಪ್ರಜ್ಞಾಪೂರ್ವಕವಾಗಿ ಬದಲಿಸಿಕೊಳ್ಳಬೇಕಾದ ಸಮಯ ಇದು.

‘ನೀವು ಈ ಜಗತ್ತನ್ನು ಪ್ರಶ್ನಿಸಲೇಬೇಕು. ಬೇಕೆಂದಾದರೆ ಅದರ ಪದಗಳನ್ನು ನೀವು ಪ್ರಶ್ನಿಸಿ. ಆದರೆ, ಎಂದಿಗೂ ಅಕ್ಷರಗಳ ಜೊತೆಗೆ ಜಗಳ ಆಡಬೇಡಿ’. ಸೇವಾಗ್ರಾಮದಲ್ಲಿ ಗಾಂಧೀಜಿಯ ಕಾಲ
ಕೆಳಗೆ ಕುಳಿತಿದ್ದಾಗ, ನನ್ನ ಮಾರ್ಕ್ಸ್‌ವಾದಿ ಶಿಕ್ಷಕರೊಬ್ಬರು ಬಂಡಾಯ ಮನಃಸ್ಥಿತಿಯ ಯುವ ವಿದ್ಯಾರ್ಥಿ
ಗಳ ಗುಂಪಿಗೆ ನೀಡಿದ ಎಚ್ಚರಿಕೆ ನೆನಪಿಗೆ ಬಂತು. ಸಂವಹನಕ್ಕೆ ಸಂಬಂಧಿಸಿ ಗಹನವಾದ ಸತ್ಯವೊಂದ
ರತ್ತ ಅವರು ನಮ್ಮ ಗಮನ ಸೆಳೆದಿದ್ದರು: ಪರಸ್ಪರ ಹಂಚಿಕೊಂಡ ಭಾಷೆ, ರೂಪಕಗಳು ಮತ್ತು ಸಂಕೇತಗಳ ಮೂಲಕ ಮಾತ್ರವೇ ಹೊಸ ಅರ್ಥಗಳನ್ನು ಮತ್ತು ಹೊಸ ಜಗತ್ತೊಂದನ್ನು ಸೃಷ್ಟಿಸಲು ಸಾಧ್ಯ. 

ನಾನು ನನ್ನನ್ನೇ ಕೇಳಿಕೊಂಡೆ: ನಮ್ಮ ಶಿಕ್ಷಕರು ಎಚ್ಚರಿಕೆ ಕೊಟ್ಟಿದ್ದರೂ ನಾವು ಅದೇ ತಪ್ಪನ್ನು ಮಾಡು
ತ್ತಿದ್ದೇವೆಯೆ? ಉದಾರವಾದಿ, ಪ್ರಗತಿಪರ ಮತ್ತು ಜಾತ್ಯತೀತ ಭಾರತೀಯರು, ಭಾರತೀಯ ಸಮಾಜದ
ಅಕ್ಷರಗಳ ಜೊತೆಗೆ ವ್ಯರ್ಥ ಜಗಳ ಮಾಡುತ್ತಿದ್ದೇವೆಯೇ? ನಾವು ಮಾತನಾಡುವುದು ಅಥವಾ ಚಿಂತಿಸುವುದನ್ನು ಇಂಗ್ಲಿಷ್‌ನಲ್ಲಿ ಮಾಡುತ್ತಿದ್ದೇವೆ. ರಾಷ್ಟ್ರೀಯತೆ ಎಂಬುದನ್ನು ಉಲ್ಲೇಖಿಸಿದರೆ ಹಿಮ್ಮೆಟ್ಟು
ತ್ತೇವೆ. ನಾವು ಹೆಮ್ಮೆಪಡಬಹುದಾದ ವಿಚಾರಗಳ ನೆನಪಿಸುವಿಕೆಯು ನಮ್ಮ ನಾಗರಿಕತೆಯು ನಾಚಿಕೆ
ಪಟ್ಟುಕೊಳ್ಳಬೇಕಾದ ಎಲ್ಲವುಗಳನ್ನು ದೂಷಿಸುವ ನಮ್ಮ ಉತ್ಸಾಹಕ್ಕೆ ಸರಿಸಾಟಿಯೇ ಅಲ್ಲ. ‘ಹಿಂದೂ ರಾಷ್ಟ್ರೀಯವಾದಿ’ಗಳು ನಮ್ಮ ಎದುರಾಳಿಗಳು ಎಂದು ಹೇಳಲು ಖುಷಿಪಡುತ್ತೇವೆ. ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಬಹಿರಂಗ ಸಮಾರಂಭಗಳಲ್ಲಿ ಭಾಗವಹಿಸುತ್ತೇವೆ. ಧಾರ್ಮಿಕವಾದ ಎಲ್ಲದರಿಂದಲೂ, ವಿಶೇಷ
ವಾಗಿ ಹಿಂದೂ ಎಂಬುದರಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತೇವೆ. ಈ ದೇಶದ ಜನರು ನಮ್ಮ ಮಾತುಗಳನ್ನು ಏಕೆ ಕೇಳುತ್ತಿಲ್ಲ ಎಂದು ಆ ಬಳಿಕ ಅಚ್ಚರಿಪಡುತ್ತೇವೆ. 

ಕೊನೆಗಾಲದವರೆಗೆ ಮಹಾತ್ಮ ಗಾಂಧೀಜಿ ಅವರು ಬದುಕಿದ್ದ ‘ಸೇವಾಗ್ರಾಮ’ ಆಶ್ರಮದಲ್ಲಿ ಕುಳಿತಿದ್ದಾಗ ಸಿಕ್ಕ ಸಂದೇಶ ತಪ್ಪಾಗಲು ಸಾಧ್ಯವಿಲ್ಲ: ನೀವು ಬಯಸುವ ಬದಲಾವಣೆ ಮೊದಲು ನಿಮ್ಮಲ್ಲಿಯೇ ಆಗಲಿ. ಎಲ್ಲ ವಿಚಾರಗಳು ಬದಲಾಗಬೇಕು ಎಂದು ನೀವು ಬಯಸಿದ್ದರೆ ಆ ಬದಲಾವಣೆ ನಿಮ್ಮಿಂದಲೇ ಆರಂಭಗೊಳ್ಳಬೇಕು. ನಾವು ಚಿಂತಿಸುವ, ಸಂವಹನ ನಡೆಸುವ ಕ್ರಮ ಮತ್ತು ನಮ್ಮ ನಡವಳಿಕೆ ಎಲ್ಲವೂ ಆಮೂಲಾಗ್ರವಾಗಿ ಬದಲಾಗಬೇಕು. ಸದ್ಯದ ಆಕ್ರಮಣದಿಂದ ನಮ್ಮ ಗಣರಾಜ್ಯವನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಚಿಂತಿಸಲು ಸೇರಿದ್ದ ವೈವಿಧ್ಯಮಯ ಸಿದ್ಧಾಂತ ಪರಂಪರೆಯ– ಗಾಂಧಿವಾದಿಗಳು, ಅಂಬೇಡ್ಕರ್‌ವಾದಿಗಳು, ಸಮಾಜವಾದಿಗಳು, ಮಾರ್ಕ್ಸ್‌ವಾದಿಗಳು, ಸ್ತ್ರೀವಾದಿಗಳು– ಗೆಳೆಯರ ಜೊತೆಗೆ ನಡೆದ ಸಂವಾದದಲ್ಲಿ ನಾನು ಕಂಡುಕೊಂಡ ಸಂಗತಿಗಳು ಇವು. 

ADVERTISEMENT

ಮೊದಲ ಪಾಠ ಅಚ್ಚರಿದಾಯಕ ಎಂಬಷ್ಟು ಸರಳ: ಸಕಾರಾತ್ಮಕವಾಗಿರಿ. ಇಂದು ಗಣರಾಜ್ಯವನ್ನು ಧ್ವಂಸಗೊಳಿಸುವವರು ಮತ್ತು ರಕ್ಷಕರ ಮಾತುಗಳನ್ನು ಕೇಳಿಸಿಕೊಳ್ಳುವುದರಲ್ಲಿ ಗಾಢವಾದ ವ್ಯತ್ಯಾಸ ಇದೆ. ಗಣರಾಜ್ಯವನ್ನು ನಾಶಗೊಳಿಸಲು ಬಯಸುವವರು ಸಕಾರಾತ್ಮಕವಾಗಿ ಮೋಸಗೊಳಿಸುವ ರೀತಿಯಲ್ಲಿ ನವಭಾರತ, ಆತ್ಮನಿರ್ಭರ, ಏಕೀಕರಣ, ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರೀಯ ಪುನರುತ್ಥಾನ ಎಂದೆಲ್ಲ ಮಾತನಾಡುತ್ತಾರೆ. ಬೇಸರದ ಸಂಗತಿಯೆಂದರೆ, ಭಾರತ ಎಂಬ ಚಿಂತನೆಯನ್ನು ರಕ್ಷಿಸಲು ಬಯಸುವವರು ಭೀತಿ, ಅಪಮಾನ ಮತ್ತು ನಾಶದ ಭಾಷೆಯನ್ನು ಮಾತನಾಡುತ್ತಾರೆ. ಭಾರತದ ಕುರಿತು ನಮ್ಮ ಮುನ್ನೋಟವನ್ನು ಸ್ಪಷ್ಟವಾಗಿ ತಿಳಿಸುವುದು ಮತ್ತು ಆ ಕುರಿತ ಭರವಸೆಯನ್ನು ವರ್ಧಿಸುವುದು ನಮ್ಮ ಮುಂದಿರುವ ಮೊದಲ ಹಾಗೂ ಮುಖ್ಯವಾದ ಸವಾಲು. 

ಅನಗತ್ಯ ವಿಚಾರಗಳ ಕುರಿತು ಟೀಕಿಸುವ ಭರದಲ್ಲಿ ನಮ್ಮ ನಾಗರಿಕತೆಯ ಪರಂಪರೆಯಲ್ಲಿ ಶೋಧಿಸಲು ಮತ್ತು ಸಂಭ್ರಮಿಸಲು ಇರುವ ಹಲವು ವಿಚಾರಗಳನ್ನು ನಾವು ಮರೆತುಬಿಡಬಾರದು. ನಾಗರಿಕತೆಗಳು ಎಂದರೆ, ನದಿಗಳ ಹಾಗೆ; ಅವು ಹೊಸ ನೀರಿನ ಜೊತೆಗೆ ಕಲ್ಲು, ಮರಳು ಮತ್ತು ಕಸ ಎಲ್ಲವನ್ನೂ ತರುತ್ತವೆ. ನಮ್ಮ ಪರಂಪರೆಯಲ್ಲಿ ಇರುವ ಕೆಟ್ಟದ್ದರ ಕುರಿತೇ ಗಮನ ಕೇಂದ್ರೀಕರಿಸುವ ಬದಲು ನಾವು ಹೊಸ ಸಂಕೇತಗಳನ್ನು ಸೃಷ್ಟಿಸಬೇಕು, ಸಕಾರಾತ್ಮಕತೆಯನ್ನು ತುಂಬುವ ಚಾರಿತ್ರಿಕ ಸ್ಮರಣೆಗಳು ಹಾಗೂ ಸಮಕಾಲೀನ ಪದ್ಧತಿಗಳ ವಾಹಕರಾಗಬೇಕು. 

ಭಾರತ ಎಂಬ ಚಿಂತನೆಯ ನೆಲಗಟ್ಟೇ ಆಗಿರುವ ನಮ್ಮ ಸಾಂವಿಧಾನಿಕ ಮೌಲ್ಯಗಳು ಸಂಸ್ಕೃತಿಯಲ್ಲಿ ನೆಟ್ಟುಹೋಗಬೇಕಾದ ಅಗತ್ಯವಿದೆ ಎಂಬುದು ಎರಡನೇ ಪಾಠವಾಗಿದೆ. ಪ್ರತಿಯೊಂದು ತಲೆಮಾರು
ಈ ಮೌಲ್ಯಗಳತ್ತ ಮೋಹಗೊಳ್ಳುವಂತೆ, ಮರುಮೋಹಗೊಳ್ಳುವಂತೆ ನಾವು ಮಾಡಲೇಬೇಕಿದೆ. ಕಳೆದ 75 ವರ್ಷಗಳಲ್ಲಿ ಇದನ್ನು ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಸಾಂವಿಧಾನಿಕ ಆದರ್ಶಗಳು ಸಾಮಾನ್ಯ ಪೌರನ ನೈತಿಕ ಭಾಷೆಯೊಂದಿಗೆ ಮಿಳಿತಗೊಂಡರೆ ಮಾತ್ರ ಪ್ರಸ್ತಾವನೆಯ ಓದು ಮತ್ತು ಸಂವಿಧಾನದ ಕಿರುಹೊತ್ತಗೆಯನ್ನು ಎತ್ತಿ ತೋರುವುದು ಒಂದು ಪವಿತ್ರ ಪದ್ಧತಿಯಾಗಿ ರೂಪುಗೊಳ್ಳುತ್ತದೆ. ಬಿಡುಗಡೆಯು ಸ್ವಾತಂತ್ರ್ಯದ ಹುರುಪನ್ನು ತುಂಬಿಕೊಂಡಿರಬೇಕು. ಜಾತ್ಯತೀತತೆಯು ಸೌಹಾರ್ದವನ್ನು ಮರುಸ್ಥಾಪಿಸಬೇಕು. ಕರುಣೆ ಮತ್ತು ದಯೆಯ ಪರಿಕಲ್ಪನೆಯಿಂದ ಸಮಾಜವಾದವು ಸಶಕ್ತಗೊಳ್ಳಬೇಕು. ಪ್ರಜಾಪ್ರಭುತ್ವದ ಮೂಲವನ್ನು ವಿನಯ ಪಿಠಕದಲ್ಲಿಯೇ ಗುರುತಿಸಬಹುದು. ಒಕ್ಕೂಟವಾದವು ಸ್ಥಳೀಯ ಪದ್ಧತಿಗಳು ಮತ್ತು ಸಾಂಪ್ರದಾಯಿಕ ಕಾನೂನುಗಳನ್ನು ತಳಹದಿ ಆಗಿಸಿಕೊಳ್ಳಬೇಕು. ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಸಂಸ್ಕೃತಿಯೊಳಗೆ ಹುದುಗಿಸಿಕೊಳ್ಳುವ ಪರಿಕಲ್ಪನೆಯೇ ಗಣತಂತ್ರದ ಸ್ವಧರ್ಮವಾಗಿದೆ.

ಭಾರತದ ರಾಷ್ಟ್ರೀಯವಾದವನ್ನು ಮರಳಿ ಪಡೆಯುವುದು ಮೂರನೇ ಪಾಠವಾಗಿದೆ. ಜರ್ಮನಿಯ ರಾಷ್ಟ್ರೀಯತೆಯ ಕೀಳರಿಮೆ ಮತ್ತು ಯುರೋಪ್‌ನ ಅನ್ಯಗೊಳಿಸುವ ರಾಷ್ಟ್ರೀಯವಾದವನ್ನು ನಾವು ಅನುಸರಿಸಬಾರದು. ನಾವು ಸಕಾರಾತ್ಮಕ ಮತ್ತು ಪರಸ್ಪರ ನಂಟಿನ ಜನಾಂಗದ ಪರಂಪರೆಯಿಂದ ಬಂದವರು. ಯುರೋಪ್‌ನ ರಾಷ್ಟ್ರೀಯವಾದವನ್ನು ಅನುಸರಿಸುವವರು ನೆರೆಯವರ ಜೊತೆ ದ್ವೇಷ ಸಾಧಿಸುವವರು ಮತ್ತು ಆಂತರಿಕವಾಗಿ ದ್ವೇಷವನ್ನು ಹುಡುಕುವವರು. 

ನಮ್ಮ ರಾಷ್ಟ್ರೀಯವಾದವು ಪರಸ್ಪರ ನಂಟಿನ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು, ಆಂತರಿಕ ಸಂಘರ್ಷಗಳನ್ನು ಶಮನಗೊಳಿಸಬೇಕು ಮತ್ತು ವಿಶೇಷವಾಗಿ ಅನ್ಯಗೊಂಡಿರುವ ಭಾವನೆಯ ಇತಿಹಾಸವಿರುವ ಗಡಿ ಪ್ರದೇಶಗಳಲ್ಲಿ ಇದು ನಡೆಯಬೇಕು. ನಮ್ಮ ರಾಷ್ಟ್ರೀಯ ಏಕತೆಯು ಏಕರೂಪತೆ ಅಲ್ಲ, ಬದಲಿಗೆ ಅದು ನಮ್ಮ ಗಾಢ ಸಾಂಸ್ಕೃತಿಕ ವೈವಿಧ್ಯಗಳಲ್ಲಿ ವಿವರಿಸಲ್ಪಟ್ಟಿದೆ. ಮುಂದೆ ಬರಲಿರುವ ಕ್ಷೇತ್ರ ವಿಂಗಡಣೆಯು ಪ್ರಾದೇಶಿಕ ಅಸಮತೋಲನವನ್ನು ಉಂಟು ಮಾಡಬಹುದು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಬಹಿಷ್ಕೃತಗೊಳ್ಳುವ ಭೀತಿಯುಳ್ಳವರ ಕಳವಳಗಳು ಮತ್ತು ಹಿಂದಿಯೇತರ ಭಾಷಿಕರ ಕಳವಳಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ನಮ್ಮ ರಾಷ್ಟ್ರೀಯವಾದವು ವ್ಯಕ್ತವಾಗಬೇಕು; ಗಡಿಯಾಚೆಗಿನ ರಾಷ್ಟ್ರೀಯ ಭದ್ರತಾ ಕಳವಳಗಳ ಕುರಿತು ಪ್ರಾಮಾಣಿಕ ಸಂವಾದವನ್ನೂ ಇದು ಒಳಗೊಂಡಿರಬೇಕು. ಮತಾಂಧತೆಯು ಭಾರತೀಯ ರಾಷ್ಟ್ರೀಯವಾದಕ್ಕೆ ಮಾರಕ, ಹಾಗಾಗಿ ಅದನ್ನು ‘ಹಿಂದೂ ರಾಷ್ಟ್ರೀಯವಾದ’ ಎಂದು ಕರೆದು ವೈಭವೀಕರಿಸಬಾರದು. 

ಭಾರತದ ಬಹುಪಾಲು ಪೌರರ ನೈತಿಕ ಯೋಚನೆಗಳು ಮತ್ತು ಪದ್ಧತಿಗಳನ್ನು ರೂಪಿಸುವ ಬಹುಧರ್ಮ ಪರಂಪರೆಗಳಿಗೆ ಬೆನ್ನು ತಿರುಗಿಸಬಾರದು ಎಂಬುದು ನಾಲ್ಕನೇ ಪಾಠವಾಗಿದೆ. ಜಾತ್ಯತೀತತೆಗಾಗಿ ಪೌರರು ತಮ್ಮ ಧರ್ಮವನ್ನು ಕೈಬಿಡಬೇಕಾಗಿಲ್ಲ ಅಥವಾ ಸಾರ್ವಜನಿಕ ವ್ಯವಹಾರಗಳ ಕುರಿತು ಚಿಂತಿಸುತ್ತಾ ತಮ್ಮ ಧಾರ್ಮಿಕ ನಂಬಿಕೆಗಳನ್ನು ಪಕ್ಕಕ್ಕೆ ಇರಿಸಬೇಕಾಗಿಲ್ಲ. ಭಾರತವು ಬಹುಧರ್ಮಗಳು, ಧರ್ಮಗಳೊಳಗೆ ಬಹುಧಾರೆಗಳು, ವೈವಿಧ್ಯಮಯ ಧರ್ಮ ಪರಂಪರೆಗಳನ್ನು ಹೊಂದಿರುವುದು ನಮ್ಮ ಅದೃಷ್ಟ. ಸಂಘಟಿತ ಧರ್ಮಗಳು, ಸಾಂಸ್ಥಿಕ ಶ್ರೇಣೀಕರಣಗಳು, ನ್ಯಾಯಸಮ್ಮತವಲ್ಲದ ಸಾಮಾಜಿಕ ಪದ್ಧತಿಗಳು ಮತ್ತು ಧರ್ಮಾಂಧತೆಯೊಂದಿಗೆ ಸೇರಿಕೊಂಡಿರುವ ಎಲ್ಲ ಕೆಡುಕುಗಳನ್ನು ಎದುರಿಸಲು ಶಕ್ತವಾದ ಸಂಪನ್ಮೂಲಗಳು ಈ ಯೋಚನೆಗಳು ಮತ್ತು ಪದ್ಧತಿಗಳ ವಿಶಾಲ ಸಾಗರದಲ್ಲಿ ನಮಗೆ ಲಭ್ಯ ಇವೆ.

ಧರ್ಮ ಎಂಬುದು ಒಂದು ಭಾಷೆಯ ಹಾಗೆ, ಅದನ್ನು ಪ್ರೀತಿಗೂ ಕವಿತೆಗೂ ಬಳಸಿಕೊಳ್ಳಬಹುದು; ದುಷ್ಟ ಬೈಗುಳಗಳಿಗೂ ಬಳಸಿಕೊಳ್ಳಬಹುದು. ಹಿಂದೂ ಧರ್ಮವೂ ಸೇರಿದಂತೆ ನಮ್ಮ ಧಾರ್ಮಿಕ ಪರಂಪರೆಗಳನ್ನು ನಾವು ಈ ರೀತಿಯಲ್ಲಿ ಸಮೀಪಿಸಬೇಕಿದೆ. ಹಿಂದೂಯೇತರರನ್ನು ದ್ವೇಷಿಸು
ವುದು ಅಥವಾ ಸವರ್ಣೀಯರಲ್ಲದವರ ಮೇಲಿನ ದೌರ್ಜನ್ಯಕ್ಕೆ ಹಿಂದೂ ಧರ್ಮವು ಕೊಡುವ ಸಮ್ಮತಿಯನ್ನು ಖಂಡಿಸಬೇಕಿದೆ. ‘ಹಿಂದುತ್ವ’ ಎಂದು ಕರೆಯುವ ಮೂಲಕ ಇಂತಹ ಪದ್ಧತಿಗಳಿಗೆ ಗೌರವವನ್ನು ನೀಡಲೇಬಾರದು. 

ಇವು ಸಂವಹನ ಪದ್ಧತಿಗಳ ಕುರಿತಂತೆ ಇರುವ ಪಾಠಗಳಲ್ಲ. ಇವು ಅರಿವಿನ ವಿನಮ್ರತೆಯ ಕುರಿತ ನೈತಿಕ ಪಾಠಗಳು. ಪ್ರಜಾಪ್ರಭುತ್ವ ಎಂದರೆ ಜನರ ಮತದ ಆಯ್ಕೆಯನ್ನು ಗೌರವಿಸುವುದಷ್ಟೇ ಅಲ್ಲ. ಇದು ಜನರ ನಂಬಿಕೆಗಳು, ಸಂಸ್ಕೃತಿ ಮತ್ತು ಪರಂಪರೆಗಳನ್ನು ಗೌರವಿಸುವುದೂ ಹೌದು. ಅವರ ಆಯ್ಕೆಗಳು ಮತ್ತು ಅಭಿಪ್ರಾಯಗಳ ಕುರಿತು ನಾವು ಅಸಮ್ಮತಿಯನ್ನು ಸೂಚಿಸಬಹುದು ಮತ್ತು ಸೂಚಿಸುತ್ತೇವೆ. ಆದರೆ, ಅವರ ಜೊತೆಗೆ ಅವರ ಭಾಷೆಯಲ್ಲಿಯೇ ಮಾತನಾಡುವ ವಿನಮ್ರತೆಯು ನಮ್ಮಲ್ಲಿ ಇರಲೇಬೇಕು.

ಬಾಪು ಕುಟೀರದ ಪರಿಸರದಲ್ಲಿ ಸಂವಾದ ನಡೆದ ಕಾರಣ, ಈ ಎಲ್ಲ ಯೋಚನೆಗಳು ಸ್ವಯಂ–ಸ್ಪಷ್ಟ ಎಂದು ಕಾಣಿಸುತ್ತಿವೆಯೆ? 

ಯೋಗೇಂದ್ರ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.