
ನವೆಂಬರ್ 2ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳು ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಈ ದೇಶಗಳ ಅಣ್ವಸ್ತ್ರ ಪರೀಕ್ಷೆಯೇ ಅಮೆರಿಕ ಸಹ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸಲು ಪ್ರಮುಖ ಕಾರಣ ಎಂದಿದ್ದಾರೆ.
ಸಮಾಲೋಚನೆಯ ಸಂದರ್ಭದಲ್ಲಿ, ಶ್ವೇತ ಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹೆಗಾರರಾದ ಸ್ಕಾಟ್ ಬೆಸೆಂಟ್ ಅವರು ಟ್ರಂಪ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಎಪ್ರಿಲ್ - ಮೇ ತಿಂಗಳಲ್ಲಿ ಭಾರತದ ಜೊತೆಗಿನ ಉದ್ವಿಗ್ನತೆಗಳು ತೀವ್ರವಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಿತ್ತು ಎನ್ನುವ ಹಳೆಯ ಗಾಳಿಸುದ್ದಿಗೆ ಟ್ರಂಪ್ ಹೇಳಿಕೆ ಈಗ ಮರುಜೀವ ನೀಡಿದೆ.
ಎಪ್ರಿಲ್ 30ರಿಂದ ಮೇ 12ರ ನಡುವೆ, ಅಫ್ಗಾನಿಸ್ತಾನ - ಪಾಕಿಸ್ತಾನ ಪ್ರಾಂತ್ಯದಲ್ಲಿ ಭೂಕಂಪದ ನಾಲ್ಕು ಅನುಭವಗಳಾಗಿದ್ದವು.
ಈ ಕಂಪನಗಳು ರಿಕ್ಟರ್ ಮಾಪಕದಲ್ಲಿ 4.0ರಿಂದ 4.7 ತೀವ್ರತೆ ಹೊಂದಿದ್ದವು. 1998ರ ಮೇ 28 ಮತ್ತು ಮೇ 30ರಂದು, ಪಾಕಿಸ್ತಾನ ಪರಮಾಣು ಪರೀಕ್ಷೆಗಳನ್ನು ನಡೆಸಿದಾಗ (ಚಗಾಯ್ - 1 ಮತ್ತು ಚಗಾಯ್ - 2) ಇದೇ ಪ್ರಮಾಣದ ಕಂಪನ ಕಂಡುಬಂದಿತ್ತು.
1998ರ ಬಳಿಕ, ಭಾರತ ಮತ್ತು ಪಾಕಿಸ್ತಾನಗಳು ಅಧಿಕೃತವಾಗಿ ಮತ್ತು ಬಹಿರಂಗವಾಗಿ ಪರಮಾಣು ಶಕ್ತಿಗಳಾಗಿ ಹೊರಹೊಮ್ಮಿದ ಬಳಿಕ, ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ರಕ್ಷಣಾ ಗುರಾಣಿಯ ರೀತಿ ಬಳಸಿಕೊಂಡಿದೆ. ಇದನ್ನು ಜಳಪಿಸುತ್ತಾ, ಭಾರತದಿಂದ ಶಿಕ್ಷೆಯ ಭಯವಿಲ್ಲದೆ, ಪಾಕಿಸ್ತಾನ ಭಯೋತ್ಪಾದನೆಯನ್ನು ತನ್ನ ಅಧಿಕೃತ ಕಾರ್ಯತಂತ್ರವನ್ನಾಗಿಸಿಕೊಂಡಿತ್ತು.
ಮೇ 2025ರಲ್ಲಿ, ಭಾರತ ತಾನು ಪಾಕಿಸ್ತಾನದ ಪರಮಾಣು ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದು ಪಾಕಿಸ್ತಾನದ ಪರಮಾಣು ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಬಹಿರಂಗವಾಗಿ ಸವಾಲೆಸೆದಿತ್ತು.
ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯ ಸಂದರ್ಭದಲ್ಲಿ ಉಂಟಾಗುವ ಸ್ಫೋಟ ಅತ್ಯಂತ ಶಕ್ತಿಶಾಲಿಯಾಗಿರುವುದರಿಂದ, ಅವುಗಳು ಭೂಕಂಪದ ರೀತಿ ತೋರುತ್ತವೆ. 20 ಕಿಲೋಟನ್ ಪರಮಾಣು ಸ್ಫೋಟ 20,000 ಟನ್ ಟಿಎನ್‌ಟಿ ಸಮನಾಗಿದ್ದು, ಇದು ಜಗತ್ತಿನಾದ್ಯಂತ ಇರುವ ಭೂಕಂಪ ಸೆನ್ಸರ್‌ಗಳು ಗುರುತಿಸುವಂತಹ ಸೀಸ್ಮಿಕ್ ಅಲೆಗಳನ್ನು ಬಿಡುಗಡೆಗೊಳಿಸುತ್ತವೆ.
ಅಕ್ಟೋಬರ್ 9, 2006ರಂದು, ಉತ್ತರ ಕೊರಿಯಾ ನಡೆಸಿದ ಮೊದಲ ಅಣ್ವಸ್ತ್ರ ಪರೀಕ್ಷೆಯ ಸಂದರ್ಭದಲ್ಲಿ, ಭೂಕಂಪ ಸೆನ್ಸರ್‌ಗಳು 4ಕ್ಕಿಂತ ಹೆಚ್ಚಿನ ತೀವ್ರತೆಯನ್ನು ತೋರಿಸಿದ್ದರಿಂದ, ಅದನ್ನು ಭೂಕಂಪ ಎಂದು ಭಾವಿಸಲಾಯಿತು.
ಕೆಲವು ಗಂಟೆಗಳ ಬಳಿಕ, ಉತ್ತರ ಕೊರಿಯಾ ತಾನು ಅಣ್ವಸ್ತ್ರ ಪರೀಕ್ಷೆ ನಡೆಸಿರುವುದಾಗಿ ಘೋಷಿಸಿದ ನಂತರವೇ ಜಗತ್ತಿಗೆ ಉತ್ತರ ಕೊರಿಯಾ ಅಣ್ವಸ್ತ್ರ ರಾಷ್ಟ್ರವಾಗಿರುವುದು ತಿಳಿಯಿತು.
2025ರಲ್ಲಿ, ಭಾರತದ ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಅಫ್ಘಾನಿಸ್ತಾನ - ಪಾಕಿಸ್ತಾನ ಪ್ರದೇಶದಲ್ಲಿ ಉಂಟಾದದ್ದು ಸಹಜ ಭೂಕಂಪವೇ ಹೊರತು, ಪರಮಾಣು ಪರೀಕ್ಷೆಯ ಫಲಿತಾಂಶವಲ್ಲ ಎಂದು ಖಚಿತಪಡಿಸಿತ್ತು.
ವಿಶ್ವಸಂಸ್ಥೆಯ ಕಾಂಪ್ರೆಹೆನ್ಸಿವ್ ನ್ಯೂಕ್ಲಿಯರ್ ಟೆಸ್ಟ್ ಬ್ಯಾನ್ ಆರ್ಗನೈಸೇಶನ್ (ಸಿಟಿಬಿಟಿಒ) ಜಾಗತಿಕವಾಗಿ 300ಕ್ಕೂ ಹೆಚ್ಚು ನಿರ್ವಹಣಾ ಕೇಂದ್ರಗಳನ್ನು ಹೊಂದಿದ್ದು, ಎಲ್ಲೂ ಯಾವುದೇ ಪರಮಾಣು ಪರೀಕ್ಷೆಯ ಲಕ್ಷಣಗಳನ್ನು ಗುರುತಿಸಲಿಲ್ಲ.
ಅಫ್ಘಾನಿಸ್ತಾನ - ಪಾಕಿಸ್ತಾನದ ಬಹುತೇಕ ಭೂಕಂಪಗಳು ಪಾಕಿಸ್ತಾನದ ಏಕೈಕ ಪರಮಾಣು ಪರೀಕ್ಷಾ ತಾಣವಾದ, ಬಲೂಚಿಸ್ತಾನದ ರಾಸ್ ಕೊಹ್ ಬೆಟ್ಟದಿಂದ ನೂರಾರು ಕಿಲೋಮೀಟರ್ ದೂರದಲ್ಲಿ ಸಂಭವಿಸಿವೆ. ಪಾಕಿಸ್ತಾನ 1998ರಲ್ಲಿ ಈ ಬೆಟ್ಟ ಪ್ರದೇಶದಲ್ಲೇ ತನ್ನ ಬಾಂಬ್‌ಗಳನ್ನು ಪರೀಕ್ಷಿಸಿತ್ತು.
ಇತ್ತೀಚಿನ ವರ್ಷಗಳಲ್ಲಿ, ಭಾರತ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳು ಗಡಿ ಚಕಮಕಿಗಳನ್ನು ಕಂಡಿರುವುದರಿಂದ, ಅಫ್ಘಾನಿಸ್ತಾನ - ಪಾಕಿಸ್ತಾನ ಗಡಿ ಪ್ರದೇಶ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಅದರೊಡನೆ, ಈ ಪ್ರದೇಶದಲ್ಲೇ ಇಂಡಿಯನ್ ಪ್ಲೇಟ್ (ಭಾರತ, ಶ್ರೀಲಂಕಾ ಪ್ರದೇಶ) ಯುರೇಷ್ಯನ್ ಪ್ಲೇಟ್ ಅನ್ನು (ರಷ್ಯಾ, ಚೀನಾ ಮತ್ತು ಯುರೋಪ್ ಪ್ರದೇಶ) ಸಂಧಿಸುವುದರಿಂದ, ಇದು ಭೌಗೋಳಿಕವಾಗಿಯೂ ಸೂಕ್ಷ್ಮ ಪ್ರದೇಶವಾಗಿದೆ. ಈ ಕಾರಣದಿಂದಾಗಿ ಇಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ.
ನವೆಂಬರ್ 3ರಂದು, ಅಫ್ಘಾನಿಸ್ತಾನದ ಮಜಾರ್ ಎ ಷರೀಫ್ ನಗರದಲ್ಲಿ ಉಂಟಾದ 6.3 ತೀವ್ರತೆಯ ಭೂಕಂಪದಲ್ಲಿ 7 ಜನರು ಪ್ರಾಣ ಕಳೆದುಕೊಂಡರು. ಇದಕ್ಕೆ ಮೊದಲು, ಆಗಸ್ಟ್ 31ರಂದು 6.0 ತೀವ್ರತೆಯ ಭೂಕಂಪದಲ್ಲಿ 2,200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
ಪಾಕಿಸ್ತಾನದ ಮಿಲಿಟರಿ ನಾಯಕತ್ವ ಪರಮಾಣು ಪರೀಕ್ಷೆಯನ್ನು ಪ್ರದರ್ಶಿಸುವ ಅತಿದೊಡ್ಡ ಒತ್ತಡವನ್ನು ಎದುರಿಸುತ್ತಿದೆ. ಆದರೆ, ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ವಿಶ್ವ ಬ್ಯಾಂಕ್, ಐಎಂಎಫ್ ಸಾಲಗಳು ಮತ್ತು ಅಮೆರಿಕದ ಬೆಂಬಲವನ್ನು ಕಳೆದುಕೊಳ್ಳುವ ಭೀತಿ ಇರುವುದರಿಂದ ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗುವ ಸಾಧ್ಯತೆಗಳು ಕಡಿಮೆ.
ಆದರೆ, ಒಂದು ವೇಳೆ ಪಾಕಿಸ್ತಾನಿ ಮಿಲಿಟರಿ ಹತಾಶ ಸ್ಥಿತಿಗೆ ತಲುಪಿದರೆ, ಪರಿಸ್ಥಿತಿ ಯಾವಾಗ ಬೇಕಾದರೂ ಬದಲಾಗಬಹುದು. ಅಲ್ಲಿಯ ತನಕ, ಈ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಭೂಕಂಪವೂ ಸಹ ಪರಮಾಣು ಪರೀಕ್ಷೆಯ ಗಾಳಿಸುದ್ದಿಯನ್ನೇ ಹೊತ್ತು ತರಲಿದೆ. ತಜ್ಞರು ಅದನ್ನು ಸುಳ್ಳು ಎಂದು ಸಾಬೀತುಪಡಿಸುವ ತನಕವೂ ಅದೇ ನಿಜ ಎನ್ನುವಂತೆ ತೋರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.