ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಅವರು ಭಾರತದಾದ್ಯಂತ ವಿಮಾನಯಾನ ವ್ಯತ್ಯಯ ಉಂಟಾಗಿ, ಸಾವಿರಾರು ಜನರಿಗೆ ತೊಂದರೆಯಾದುದಕ್ಕೆ ಕ್ಷಮೆ ಯಾಚಿಸಿ, ಡಿಸೆಂಬರ್ 10 - 15ರ ವೇಳೆಗೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 5, ಶುಕ್ರವಾರ, ಭಾರತೀಯ ವಿಮಾನಯಾನಕ್ಕೆ ಅತ್ಯಂತ ಕೆಟ್ಟ ದಿನವಾಗಿದ್ದು, 1,000ಕ್ಕೂ ಹೆಚ್ಚಿನ ಇಂಡಿಗೋ ವಿಮಾನಗಳು ಸ್ಥಗಿತಗೊಂಡವು. ’ವಿಮಾನ ರದ್ದು ಮತ್ತು ವಿಳಂಬದಿಂದ ನಮ್ಮ ಗ್ರಾಹಕರಿಗೆ ಉಂಟಾದ ಭಾರೀ ಸಮಸ್ಯೆಗೆ ಇಂಡಿಗೊ ಸಂಸ್ಥೆಯ ಎಲ್ಲರ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಪೀಟರ್ ಹೇಳಿದ್ದಾರೆ.
ಇಂಡಿಗೊದ ಮೂರು ಸುಧಾರಣಾ ಕ್ರಮಗಳು
ಮೊದಲನೆಯದಾಗಿ, ಇಂಡಿಗೊ ಗ್ರಾಹಕರೊಡನೆ ತನ್ನ ಸಂವಹನವನ್ನು ಉತ್ತಮಗೊಳಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಂಚಿಕೊಂಡು, ಹಣ ಮರುಪಾವತಿ, ರದ್ದತಿ ಕುರಿತು ವಿಸ್ತೃತ ಮಾಹಿತಿ ಮತ್ತು ನೆರವನ್ನು ನೀಡಲಾಗಿದೆ. ಗ್ರಾಹಕರಿಗೆ ನೆರವಾಗಲು ಕಾಲ್ ಸೆಂಟರ್ ಸಿಬ್ಬಂದಿಗಳನ್ನೂ ಹೆಚ್ಚಿಸಲಾಗಿದೆ.
ಎರಡನೆಯದಾಗಿ, ಬಹಳಷ್ಟು ಪ್ರಯಾಣಿಕರು ಡಿಸೆಂಬರ್ 4ರಂದು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬಾಕಿಯಾಗಿದ್ದರು. ಅವರೆಲ್ಲರನ್ನೂ ಡಿಸೆಂಬರ್ 5ರಂದು ಪ್ರಯಾಣಿಸಲು ಸಾಧ್ಯವಾಗುವಂತೆ ಮಾಡುವುದು ಇಂಡಿಗೋ ಗುರಿಯಾಗಿದ್ದು, ಅದನ್ನು ಸಂಸ್ಥೆ ಈಡೇರಿಸಿದೆ. ವಿಮಾನ ರದ್ದಾಗಿರುವ ಪ್ರಯಾಣಿಕರಿಗೆ ಈ ಕುರಿತು ಸಂದೇಶ ರವಾನಿಸಲಾಗಿದ್ದು, ಅವರು ವಿಮಾನ ನಿಲ್ದಾಣಕ್ಕೆ ಬರದಂತೆ ಪೀಟರ್ ಮನವಿ ಮಾಡಿದ್ದಾರೆ.
ಮೂರನೆಯದಾಗಿ, ಡಿಸೆಂಬರ್ 5ರಂದು ಕೆಲವು ವಿಮಾನಗಳು ರದ್ದಾಗಿದ್ದು, ಇಂಡಿಗೊ ತನ್ನ ಸಿಬ್ಬಂದಿಗಳು ಮತ್ತು ವಿಮಾನಗಳನ್ನು ಮರು ಹೊಂದಾಣಿಕೆ ನಡೆಸಿ, ಸೋಮವಾರದೊಳಗೆ ಎಲ್ಲವೂ ಸುಗಮವಾಗಿ ಸಾಗುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತಿದೆ.
ಇಂಡಿಗೊ ಬಿಕ್ಕಟ್ಟು ಇದ್ದಕ್ಕಿದ್ದಂತೆ ತೀವ್ರಗೊಂಡದ್ದು ಹೇಗೆ?
ಸಣ್ಣ ತಾಂತ್ರಿಕ ಸಮಸ್ಯೆಗಳು, ಚಳಿಗಾಲದ ವೇಳಾಪಟ್ಟಿ ಬದಲಾವಣೆ, ಅತಿಯಾದ ದಟ್ಟಣೆ ಮತ್ತು ಪ್ರತಿಕೂಲ ಹವಾಮಾನಗಳಂತಹ ಅನಿರೀಕ್ಷಿತ ಸಮಸ್ಯೆಗಳಿಂದ ಬಿಕ್ಕಟ್ಟು ನಿರ್ಮಾಣವಾಯಿತು ಎಂದು ಇಂಡಿಗೊ ಹೇಳಿದೆ. ಆದರೆ, ವಿಮಾನಯಾನ ತಜ್ಞರು ಮತ್ತು ನಿಯಂತ್ರಕರ ಪ್ರಕಾರ, ನಿಜವಾದ ಸಮಸ್ಯೆ ಆರಂಭಗೊಂಡಿದ್ದು ಪೈಲಟ್‌ಗಳು ಸುಸ್ತಾಗಿ ತೊಂದರೆ ಉಂಟಾಗದಂತೆ ತಡೆಯುವ ಸಲುವಾಗಿ ರೂಪುಗೊಂಡ ಹೊಸದಾದ ‘ವಿಮಾನ ಕರ್ತವ್ಯ ಸಮಯದ ಮಿತಿಗಳು’ (ಎಫ್‌ಡಿಟಿಎಲ್) ನಿಯಮಗಳ ಕಾರಣದಿಂದ. ಈ ನಿಯಮಗಳು ಸಿಬ್ಬಂದಿಯ ಕರ್ತವ್ಯ ಮತ್ತು ವಿಶ್ರಾಂತಿಯ ಸಮಯವನ್ನು ಮರು ರೂಪಿಸಿದ್ದವು.
ಈ ನಿಯಮಗಳನ್ನು 2024ರ ಜನವರಿಯಲ್ಲೇ ಪರಿಚಯಿಸಲಾಗಿದ್ದರೂ, ಇಲ್ಲಿಯತನಕ ಕಟ್ಟುನಿಟ್ಟಾಗಿ ಜಾರಿಗೆ ತಂದಿರಲಿಲ್ಲ. ಹೊಸ ನಿಯಮಗಳ ಅನುಸಾರ, ಸಿಬ್ಬಂದಿಗೆ ವಾರಕ್ಕೆ ಹಿಂದಿನ 36 ಗಂಟೆಗಳ ಬದಲು, 48 ಗಂಟೆಗಳ ವಿಶ್ರಾಂತಿ ಲಭಿಸಬೇಕಿದೆ. ರಾತ್ರಿ ಪಾಳಿಯ ಸಮಯವನ್ನು ಈಗ ಮಧ್ಯರಾತ್ರಿ 12ರಿಂದ ಬೆಳಗಿನ 5 ಗಂಟೆಯ ಬದಲಿಗೆ ಬೆಳಗ್ಗೆ 6 ಗಂಟೆಯ ತನಕ ವಿಸ್ತರಿಸಲಾಗಿದೆ. ಅಂದರೆ, ರಾತ್ರಿ ಪಾಳಿಯ ಅವಧಿಯನ್ನು ಇನ್ನೂ ಒಂದು ಗಂಟೆ ಹೆಚ್ಚು ಮಾಡಲಾಗಿದೆ.
ಇದರಿಂದ ಪೈಲಟ್‌ಗಳ ಮೇಲೇನು ಪರಿಣಾಮ?
ಈ ಮೊದಲು, ಓರ್ವ ಪೈಲಟ್ ಬೆಳಗ್ಗೆ 5 ಗಂಟೆಗೆ ಕೆಲಸ ಆರಂಭಿಸಿದರೆ, ಅದನ್ನು ರಾತ್ರಿ ಪಾಳಿ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಆದರೆ, ಈಗ ಬೆಳಗಿನ 5 ಗಂಟೆಗೆ ವಿಮಾನ ಚಾಲನೆಯನ್ನೂ ರಾತ್ರಿ ಪಾಳಿ ಎಂದೇ ಪರಿಗಣಿಸಲಾಗುತ್ತದೆ. ಅಂದರೆ, ಆ ಬಳಿಕ ಪೈಲಟ್ ಹೆಚ್ಚು ವಿಶ್ರಾಂತಿ ಪಡೆದು, ಬಳಿಕವೇ ಮತ್ತೆ ಕಾರ್ಯಾಚರಿಸಲಾಗುತ್ತಿತ್ತು. ಪೈಲಟ್‌ಗಳು ಈಗ ರಾತ್ರಿ ಪಾಳಿಯಲ್ಲಿ ಗರಿಷ್ಠ 8 ಗಂಟೆಗಳ ತನಕವಷ್ಟೇ ಹಾರಾಟ ನಡೆಸಬಹುದು.
ಅಕ್ಟೋಬರ್ 26ರಿಂದ ಇಂಡಿಗೊ ತನ್ನ ಚಳಿಗಾಲದ ಹಾರಾಟವನ್ನು ಹೆಚ್ಚಿಸಿತು. ಆದರೆ, ಇದೇ ವೇಳೆ ಬಹಳಷ್ಟು ಇಂಡಿಗೋ ಪೈಲಟ್‌ಗಳು ಕಡ್ಡಾಯ ವಿಶ್ರಾಂತಿಗೆ ತೆರಳುವಂತಾಗಿ, ಲಭ್ಯ ಪೈಲಟ್‌ಗಳಲ್ಲಿ ಭಾರೀ ಕೊರತೆ ಉಂಟಾಯಿತು. ಸಾಫ್ಟ್‌ವೇರ್ ತೊಂದರೆ ಎಂದರೆ, ವಿಮಾನದ ಕಂಪ್ಯೂಟರ್ ಸುರಕ್ಷತೆಗಾಗಿ ಪರಿಶೀಲಿಸಬೇಕಾದ ಎಚ್ಚರಿಕೆಯನ್ನು ಪ್ರದರ್ಶಿಸತೊಡಗಿತ್ತು. ಕೆಲವು ಏರ್‌ಬಸ್ ಎ320 ವಿಮಾನಗಳಲ್ಲಿ ಕಾಣಿಸಿಕೊಂಡ ಈ ಎಚ್ಚರಿಕೆಯಿಂದಾಗಿ ಒಂದಷ್ಟು ವಿಳಂಬ ಉಂಟಾಯಿತು. ಇದರಿಂದಾಗಿ ಬಹಳಷ್ಟು ವಿಮಾನಗಳು ಮಧ್ಯರಾತ್ರಿಯ ನಂತರವೂ ಸಂಚರಿಸುವಂತಾಗಿ, ಹೊಸ ನಿಯಮಗಳ ಅಡಿಯಲ್ಲಿ ಪೈಲಟ್‌ಗಳು ತಕ್ಷಣವೇ ಮುಂದಿನ ಹಾರಾಟ ನಡೆಸದಂತಾಯಿತು. ಇದರ ಪರಿಣಾಮವಾಗಿ ಹಾರಾಟ ವಿಳಂಬಗಳು ವಿಮಾನ ರದ್ದತಿಯ ಹಂತಕ್ಕೂ ತಲುಪಿದವು.
ಇಂಡಿಗೊ ಗಾತ್ರ: ಎರಡು ಅಲುಗಿನ ಕತ್ತಿ
400ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿರುವ ಇಂಡಿಗೊ, ದಿನವೊಂದಕ್ಕೆ 2,300ಕ್ಕಿಂತಲೂ ಹೆಚ್ಚಿನ ಹಾರಾಟಗಳನ್ನು ನಿರ್ವಹಿಸುತ್ತದೆ. ಇದು 90ಕ್ಕೂ ಹೆಚ್ಚು ದೇಶೀಯ ತಾಣಗಳು ಮತ್ತು 45 ಅಂತರರಾಷ್ಟ್ರೀಯ ಸ್ಥಳಗಳನ್ನು ತಲುಪುತ್ತದೆ. ಇಂಡಿಗೊ ತನ್ನಲ್ಲಿರುವ ಕನಿಷ್ಠ ಸಿಬ್ಬಂದಿಗಳೊಡನೆಯೇ ಈ ಬೃಹತ್ ಜಾಲವನ್ನು ನಿರ್ವಹಿಸುತ್ತಾ ಬಂದಿದೆ. ಅಂದರೆ, ಬೃಹತ್ ಪ್ರಮಾಣದ ಹಾರಾಟಕ್ಕೆ ಅಲ್ಲಿಂದಲ್ಲಿಗೆ ಸಾಕಾಗುವಷ್ಟು ಕನಿಷ್ಠ ಸಿಬ್ಬಂದಿಗಳನ್ನು ಮಾತ್ರವೇ ಇಂಡಿಗೊ ಹೊಂದಿದೆ.
ಈ ಗಾತ್ರದ ಪರಿಣಾಮವಾಗಿ, ಕೇವಲ 10% ವಿಮಾನಗಳ ರದ್ದತಿ ಎಂದರೂ ದಿನಕ್ಕೆ 230ಕ್ಕೂ ಹೆಚ್ಚು ಹಾರಾಟಗಳು ರದ್ದಾಗುತ್ತವೆ. ಇದಕ್ಕೆ ಹೋಲಿಸಿದರೆ, ಏರ್ ಇಂಡಿಯಾ ಇಂಡಿಗೊದ ಅರ್ಧಕ್ಕಿಂತಲೂ ಕಡಿಮೆ ವಿಮಾನಗಳನ್ನು ನಿರ್ವಹಿಸುತ್ತದೆ. ಆದ್ದರಿಂದ ಏನಾದರೂ ಅಡಚಣೆ ಉಂಟಾದರೆ, ಏರ್ ಇಂಡಿಯಾಗೆ ಅದು ಅಷ್ಟಾಗಿ ಬಾಧಿಸುವುದಿಲ್ಲ. ಬಹಳಷ್ಟು ಇಂಡಿಗೊ ವಿಮಾನಗಳು ನ್ಯಾರೋ ಬಾಡಿ ಏರ್‌ಬಸ್ ಎ320 ವಿಮಾನಗಳಾಗಿದ್ದು, ದಿನವೊಂದಕ್ಕೆ ಬಹಳಷ್ಟು ಕಡೆ ಸಂಚರಿಸುತ್ತವೆ. ಒಂದು ವಿಮಾನ ವಿಳಂಬ ಅಥವಾ ರದ್ದಾದರೂ, ಅದು ದಿನದ ಉಳಿದ ಪ್ರಯಾಣಗಳ ಮೇಲೂ ಪರಿಣಾಮ ಬೀರುತ್ತದೆ.
ಭಾರತದಲ್ಲಿ ಹೆಚ್ಚುತ್ತಿರುವ ಪೈಲಟ್ ಕೊರತೆಯ ಬಿಕ್ಕಟ್ಟು
ಭಾರತದಲ್ಲಿ ಈಗ 800ಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಿಸುತ್ತಿದ್ದು, ವಿಮಾನಯಾನ ಸಂಸ್ಥೆಗಳು 1,700ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸುತ್ತಿವೆ. ಒಂದು ವಿಮಾನವನ್ನು ಸಮರ್ಥವಾಗಿ ನಿರ್ವಹಿಸಲು ವಿಮಾನಯಾನ ಸಂಸ್ಥೆಗೆ 10ರಿಂದ 15 ಪೈಲಟ್‌ಗಳ ಅವಶ್ಯಕತೆಯಿದೆ. ಸದ್ಯದಲ್ಲೇ ನೂರಾರು ಹೊಸ ವಿಮಾನಗಳು ಸೇರ್ಪಡೆಗೊಳ್ಳಲಿದ್ದು, ಈ ಬೇಡಿಕೆ ಪೈಲಟ್‌ಗಳ ಗಂಭೀರ ಕೊರತೆಯನ್ನು ಸೃಷ್ಟಿಸಲಿದೆ.
ಭಾರತದಲ್ಲಿ ಅಂದಾಜು 8,000 ಸಕ್ರಿಯ ಪೈಲಟ್‌ಗಳಿದ್ದಾರೆ. ಇಂಡಿಗೊ ಒಂದೇ 5,450 ಪೈಲಟ್‌ಗಳನ್ನು ಹೊಂದಿದ್ದು, ಇತರ ವಿಮಾನಯಾನ ಸಂಸ್ಥೆಗಳಿಗೆ ಕನಿಷ್ಠ ಪ್ರಮಾಣದ ಪೈಲಟ್‌ಗಳು ಲಭ್ಯವಿದ್ದಾರೆ. ವಿಮಾನಗಳ ಕ್ಷಿಪ್ರ ಹೆಚ್ಚಳ ಮತ್ತು ಪೈಲಟ್‌ಗಳ ಲಭ್ಯತೆಗಳ ನಡುವೆ ಹೆಚ್ಚುತ್ತಿರುವ ಅಂತರ ಭಾರತದ ಅತಿದೊಡ್ಡ ವಿಮಾನಯಾನ ಸವಾಲಾಗಿ ಪರಿಣಮಿಸುತ್ತಿದೆ.
ಭಾರತಕ್ಕೆ ಮುಂದಿನ 15-20 ವರ್ಷಗಳಲ್ಲಿ 1,700ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸಲು 30,000ಕ್ಕೂ ಹೆಚ್ಚು ಪೈಲಟ್‌ಗಳ ಅಗತ್ಯ ಎದುರಾಗಲಿದೆ. ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ವಿಮಾನಯಾನ ತರಬೇತಿ ಕೇಂದ್ರಗಳನ್ನು ಹೆಚ್ಚಿಸಿ, ಉದ್ಯಮದ ಪ್ರಗತಿಗೆ ನೆರವಾಗಲು ಹೆಚ್ಚು ಪೈಲಟ್‌ಗಳನ್ನು ತರಬೇತುಗೊಳಿಸುತ್ತಿದೆ.
ಇತ್ತೀಚಿನ ಬೆಳವಣಿಗೆ
ಈ ಅಂಕಣ ಪೂರ್ಣಗೊಳ್ಳುವ ವೇಳೆಗೆ, ಡಿಜಿಸಿಎ ತನ್ನ ಎಫ್‌ಡಿಟಿಎಲ್ ಮಿತಿಗಳಿಗೆ ಫೆಬ್ರುವರಿ 2026ರ ತನಕ ವಿನಾಯಿತಿ ನೀಡಿದೆ. ಈ ತಾತ್ಕಾಲಿಕ ಪರಿಹಾರ ಈಗ ಸೃಷ್ಟಿಯಾಗಿರುವ ಕಾರ್ಯಾಚರಣಾ ಅವ್ಯವಸ್ಥೆಯನ್ನು ಸುಧಾರಿಸಿ, ವಿಮಾನಯಾನ ಸಂಸ್ಥೆಗಳಿಗೆ ತಮ್ಮ ಸಿಬ್ಬಂದಿ ನಿರ್ವಹಣೆಯನ್ನು ಮರು ರೂಪಿಸಲು ಮತ್ತು ಹೊಸ ನಿಯಮಗಳಿಗೆ ಹೊಂದಿಕೊಳ್ಳಲು ಅಗತ್ಯ ಸಮಯವನ್ನು ಕಲ್ಪಿಸುತ್ತಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.