ADVERTISEMENT

ವಿಶ್ಲೇಷಣೆ | ಪಿಎಂಶ್ರೀ: ಸ್ವಾಯತ್ತತೆಗೆ ಇತಿಶ್ರೀ!

ವಿ.ಪಿ.ನಿರಂಜನಾರಾಧ್ಯ
Published 11 ನವೆಂಬರ್ 2025, 19:30 IST
Last Updated 11 ನವೆಂಬರ್ 2025, 19:30 IST
_
_   
ಮಾದರಿ ಶಾಲೆಗಳ ನಿರ್ಮಾಣದ ಹೆಸರಿನ ‘ಪಿಎಂಶ್ರೀ’ ಯೋಜನೆಯ ಆಳದಲ್ಲಿ ಕೇಂದ್ರ ಸರ್ಕಾರದ ರಾಜಕೀಯ ಹಿತಾಸಕ್ತಿ ಅಡಗಿದೆ. ಈ ಯೋಜನೆ ಸಂಸ್ಕೃತಿಯ ಏಕರೂಪೀಕರಣದ ಪ್ರಯೋಗದಂತಿದೆ ಹಾಗೂ ರಾಜ್ಯ ಸರ್ಕಾರಗಳ ಸ್ವಾಯತ್ತತೆ ಕಸಿಯುವ ಉದ್ದೇಶ ಹೊಂದಿದೆ.

ಪ್ರಧಾನ ಮಂತ್ರಿ ಶಾಲೆಗಳ (ಪಿಎಂಶ್ರೀ) ಒಪ್ಪಂದವನ್ನು ಬಲವಾಗಿ ವಿರೋಧಿಸುತ್ತಿದ್ದ ರಾಜ್ಯಗಳಲ್ಲಿ ಒಂದಾದ ಕೇರಳ, ತನ್ನ ನಿಲುವು ಬದಲಾಯಿಸಿ ಸಹಿ ಮಾಡಲು ಮುಂದಾದ ನಂತರ, ಯೋಜನೆಯ ಬಗ್ಗೆ ಮತ್ತೊಮ್ಮೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಈ ಮೊದಲು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ನವದೆಹಲಿ ಮತ್ತು ಪಂಜಾಬ್‌, ಶಿಕ್ಷಣ ಹಕ್ಕು ಕಾಯ್ದೆಯ ಜಾರಿಗಾಗಿ ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ಅನುದಾನ ಪಡೆಯಲು, ಪಿಎಂಶ್ರೀ ಯೋಜನೆ ಅಡಿ ರಾಜ್ಯಗಳು ಒಪ್ಪಂದಕ್ಕೆ ಸಹಿ ಮಾಡಬೇಕೆಂಬ ಕೇಂದ್ರದ ನಿಲುವನ್ನು ಬಲವಾಗಿ ಪ್ರತಿಭಟಿಸಿದ್ದವು. ಕೇಂದ್ರದ ಯೋಜನೆ, ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದವು.

ದೇಶದ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಅಗತ್ಯ ಅನುದಾನ ಹಾಗೂ ಹೆಚ್ಚಿನ ಹಣಕಾಸು ಸಹಾಯ ಒದಗಿಸುವ ಹೊಣೆಗಾರಿಕೆಯನ್ನು ಹೊಂದಿದೆ. ಅಂದರೆ ಶೈಕ್ಷಣಿಕ ನೀತಿ, ಕಾನೂನು ನಿರೂಪಣೆ ಹಾಗೂ ಅನುಷ್ಠಾನದ ಜವಾಬ್ದಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಹಂಚಿಕೊಂಡಿವೆ.

ರಾಜ್ಯಗಳಿಂದ ಕೇಂದ್ರ ಸಂಗ್ರಹಿಸುವ ತೆರಿಗೆ ಹಣವನ್ನು, ರಾಜ್ಯಗಳು ಸಂವಿಧಾನದ ರಾಜ್ಯ ನಿರ್ದೇಶಕ ತತ್ತ್ವಗಳ ಆಶಯದಂತೆ ಕಲ್ಯಾಣ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ಅನುವಾಗುವಂತೆ ಮರು ಹಂಚಿಕೆ ಮಾಡುವ ಗುರುತರ ಜವಾಬ್ದಾರಿ ಕೇಂದ್ರದ ಮೇಲಿದೆ. ಇದರ ಭಾಗವಾಗಿಯೇ ಕೇಂದ್ರ ಸರ್ಕಾರ ಪ್ರಾರಂಭದಿಂದಲೂ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಾ ಬಂದಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (1975), ಕಪ್ಪು ಹಲಗೆ ಕಾರ್ಯಾಚರಣೆ ಯೋಜನೆ (1986), ಶಿಕ್ಷಾಕರ್ಮಿ ಯೋಜನೆ (1987), ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ (1994), ಮಧ್ಯಾಹ್ನದ ಉಪಾಹಾರ ಯೋಜನೆ (1995), ಸರ್ವ ಶಿಕ್ಷಣ ಅಭಿಯಾನ (2000), ಸಮಗ್ರ ಶಿಕ್ಷಣ ಯೋಜನೆ (2013), ಮುಂತಾದವುಗಳು. ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ರಾಜ್ಯಗಳ ಸಹಯೋಗದಲ್ಲಿ ಯಶಸ್ವಿಯಾಗಿ ಜಾರಿಗೊಳಿಸುತ್ತಾ ಬಂದಿದ್ದವು. ಕೇಂದ್ರ ಹಾಗೂ ರಾಜ್ಯ ಸಂಬಂಧಗಳ ನಡುವಿನ ಸಣ್ಣಪುಟ್ಟ ಗೊಂದಲ ಅಥವಾ ತಿಕ್ಕಾಟ ಬಿಟ್ಟರೆ, ಸಂಘರ್ಷ ಅಥವಾ ಬಲವಂತದ ಸರ್ವಾಧಿಕಾರ ಹೇರಿಕೆಗಳಿರಲಿಲ್ಲ.

ADVERTISEMENT

2014ರ ನಂತರ ಅಧಿಕಾರಕ್ಕೆ ಬಂದ ಸರ್ಕಾರ, ಒಕ್ಕೂಟ ವ್ಯವಸ್ಥೆಯ ಮೂಲ ಗುಣಧರ್ಮವಾದ ಸಹಯೋಗ, ಸಹಕಾರ ಮತ್ತು ಸಮಾನ ಜವಾಬ್ದಾರಿಯ ಮೌಲ್ಯಗಳನ್ನು ಬದಿಗೊತ್ತಿ ಅತೀ ಕೇಂದ್ರೀಕರಣ, ಸಂಘರ್ಷ ಹಾಗೂ ಹೇರಿಕೆಯ ಮೂಲಕ ರಾಜ್ಯ ಸರ್ಕಾರಗಳ ಮೇಲೆ ಸವಾರಿ ಪ್ರಾರಂಭಿಸಿದ್ದು, ನೇರ ಸಂಘರ್ಷಕ್ಕೆ ಕಾರಣವಾಗಿದೆ. ಈ ರಾಜಕೀಯ ಪ್ರೇರಿತ ಸಂಘರ್ಷ ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ. ಉದಾಹರಣೆಗೆ, ಪ್ರೌಢ ಶಿಕ್ಷಣದ ಸಾರ್ವತ್ರೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ರಾಷ್ಟ್ರಮಟ್ಟದಲ್ಲಿ ಪ್ರೌಢ ಶಿಕ್ಷಣ ಮುಗಿಯುವ ಮುನ್ನವೇ ಶಾಲೆ ತೊರೆಯುವ ಮಕ್ಕಳ ಸಂಖ್ಯೆ ಶೇ 14.1ರಷ್ಟಿದೆ. ನಮ್ಮ ರಾಜ್ಯವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದು ಶೇ 22ರಷ್ಟಿದೆ. ರಾಜ್ಯ ಸರ್ಕಾರಗಳು ಶೈಕ್ಷಣಿಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು, ಕೇಂದ್ರದಿಂದ ಕಾನೂನುಬದ್ಧವಾಗಿ ಬರಬೇಕಾದ ಅನುದಾನಗಳಿಗೆ ಗೋಗರೆಯುವಂತಾಗಿದೆ.

ವಾಸ್ತವದಲ್ಲಿ, ದೇಶದ ಎಲ್ಲಾ ಮಕ್ಕಳಿಗೆ ಸಂವಿಧಾನದ ಮೂಲಭೂತ ಹಕ್ಕನ್ನು ಜಾರಿಗೊಳಿಸಲು ರೂಪಿಸಿರುವ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 7ರ ಅಡಿಯಲ್ಲಿ, ಶಿಕ್ಷಣದ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಯಾವ ಬಗೆಯ ಹಣಕಾಸು ಒದಗಿಸಬೇಕೆಂಬುದನ್ನು ಸ್ಪಷ್ಟವಾಗಿ ಬರೆಯಲಾಗಿದೆ. ಅದರಂತೆ, ಕೇಂದ್ರ ಸರ್ಕಾರ ಆರ್‌ಟಿಇ ಅನುಷ್ಠಾನಕ್ಕಾಗಿ ಬಂಡವಾಳ ಮತ್ತು ಆವರ್ತಕ ವೆಚ್ಚದ ಅಂದಾಜುಗಳನ್ನು ಮುಂಗಡವಾಗಿ ತಯಾರಿಸಬೇಕು. ಕಾಲಕಾಲಕ್ಕೆ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ನಿರ್ಧರಿಸಬಹುದಾದಂಥ ಶೇಕಡಾವಾರು ಪಾಲನ್ನು ರಾಜಸ್ವಗಳ ಅನುದಾನ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ ಒದಗಿಸಬೇಕು. ಕೇಂದ್ರ ಸರ್ಕಾರ ಯಾವುದೇ ರಾಜ್ಯ ಸರ್ಕಾರಕ್ಕೆ ಒದಗಿಸಬೇಕಾದ ಹೆಚ್ಚುವರಿ ಸಂಪನ್ಮೂಲಗಳ ಅಗತ್ಯಗಳನ್ನು ಪರಿಶೀಲಿಸಲು ಸಂವಿಧಾನದ 280ನೇ ಅನುಚ್ಛೇದದ 3ನೇ ಖಂಡದ ‘ಡಿ’ ಉಪಖಂಡದ ಅಡಿಯಲ್ಲಿ ಹಣಕಾಸು ಆಯೋಗಕ್ಕೆ ಕೋರಿಕೆ ಸಲ್ಲಿಸುವ ಸಂಬಂಧ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಬಹುದು.

ಈಗಿನ ಕೇಂದ್ರ ಸರ್ಕಾರ, ರಾಜ್ಯಗಳಿಗೆ ನ್ಯಾಯಸಮ್ಮತ ಅನುದಾನ ನೀಡದೆ, ಶಿಕ್ಷಣ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಹೊರಟಿದೆ. ದಿನದಿಂದ ದಿನಕ್ಕೆ ಶಿಕ್ಷಣದ ಕೇಂದ್ರೀಕರಣ ಹೆಚ್ಚುತ್ತಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯಾಗುತ್ತಿದೆ. ಶಿಕ್ಷಣವನ್ನು ವಿಕೇಂದ್ರೀಕರಣಗೊಳಿಸಿ ಸಮನ್ವಯ, ಸಹಕಾರ ಮತ್ತು ಆರ್ಥಿಕ ಬೆಂಬಲದೊಂದಿಗೆ ರಾಜ್ಯಗಳು ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ನೆರವಾಗುವ ಮೂಲಕ ದೇಶದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ನೆರವಾಗಬೇಕಿದ್ದ  ಕೇಂದ್ರ ಸರ್ಕಾರ– ಸಂಘರ್ಷ, ಷರತ್ತು ಹಾಗೂ ದಬ್ಬಾಳಿಕೆಯ ಮೂಲಕ ರಾಜ್ಯಗಳ ಸ್ವಾಯತ್ತತೆಯ ಮೇಲೆ ಸವಾರಿ ಮಾಡಲು ಮುಂದಾಗಿದೆ.

ತನ್ನ ಗೋಪ್ಯ ರಾಜಕೀಯ ಗುರಿಯನ್ನು ಸಾಧಿಸಲು ಕೇಂದ್ರ ಸರ್ಕಾರ ಚಾಣಾಕ್ಷತನದಿಂದ ‘ಪಿಎಂಶ್ರೀ’ ಶಾಲಾ ಯೋಜನೆ ರೂಪಿಸಿ, ಅದನ್ನು ಒಂದು ದಾಳವಾಗಿ ಬಳಸುತ್ತಿದೆ. ಮಾದರಿ ಶಾಲೆಗಳ ನಿರ್ಮಾಣದ ಮೂಲಕ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶ ಹೊಂದಿದೆ ಎಂದು ಯೋಜನೆ ಹೇಳುತ್ತದೆ. ಅದರ ಉದ್ದೇಶ, ಸ್ವರೂಪ, ಷರತ್ತು ಮತ್ತು ಅನುಷ್ಠಾನದ ವಿಧಾನವನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿದಾಗ, ಅದು ಶಿಕ್ಷಣ ಸುಧಾರಣೆ ಯೋಜನೆಗಿಂತ ಶಿಕ್ಷಣವನ್ನು ಕೇಂದ್ರದ ನಿಯಂತ್ರಣಕ್ಕೆ ಒಳಪಡಿಸುವ ಮತ್ತು ರಾಜ್ಯಗಳ ಸ್ವಾಯತ್ತತೆಯನ್ನು ಕಸಿದು ಹಿಂಬಾಗಿಲಿನಿಂದ ತನ್ನ ರಾಜಕೀಯಪ್ರೇರಿತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಹೊಸ ಕಾರ್ಯತಂತ್ರವಾಗಿದೆ.

‘ಪಿಎಂಶ್ರೀ’ ಯೋಜನೆಯಡಿ ರಾಜ್ಯಗಳಲ್ಲಿ ಬೆರಳೆಣಿಕೆಯಷ್ಟು ರಾಜ್ಯ ಸ್ಥಾಪಿತ ಶಾಲೆಗಳಿಗೆ, 60:40 ಅನುಪಾತದಲ್ಲಿ (ಕೇಂದ್ರದಿಂದ ಶೇ 60 ಮತ್ತು ರಾಜ್ಯದಿಂದ ಶೇ 40) ಹಣಕಾಸಿನ ನೆರವು ದೊರೆಯುತ್ತದೆ. ಯೋಜನೆಯ ಉಸ್ತುವಾರಿ ಮತ್ತು ವರದಿ ವಿಧಿ-ವಿಧಾನಗಳು ಕೇಂದ್ರದಿಂದಲೇ ನಿರ್ಧಾರವಾಗುತ್ತವೆ. ಇದು ಎಷ್ಟು ಹಾಸ್ಯಾಸ್ಪದವೆಂದರೆ, ಸಂವಿಧಾನದ ಅನ್ವಯ ತಾಂತ್ರಿಕ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣವೂ ಸೇರಿದಂತೆ ಶಾಲಾ ಶಿಕ್ಷಣದ ಹಂತದಿಂದ ವಿಶ್ವವಿದ್ಯಾಲಯ ಶಿಕ್ಷಣದವರೆಗೆ ಶಿಕ್ಷಣ ವ್ಯವಸ್ಥೆಯನ್ನು ನಿರ್ವಹಿಸಲು ತಮ್ಮ ಆಯವ್ಯಯದ ಶೇ 10ರಿಂದ ಶೇ 20ರಷ್ಟು ದೊಡ್ಡ ಮೊತ್ತದ ಹಣವನ್ನು ವ್ಯಯಿಸುವ ರಾಜ್ಯ ಸರ್ಕಾರಗಳು, ಒಂದು ಸಣ್ಣ ಅನುದಾನಕ್ಕೆ ಕೇಂದ್ರದ ಮುಂದೆ ಮಂಡಿಯೂರುವ ಅಗತ್ಯವಾದರೂ ಏನು? ಇದು ಒಕ್ಕೂಟ ವ್ಯವಸ್ಥೆಯ ಮೂಲಧರ್ಮಕ್ಕೆ ಅಪಚಾರವಲ್ಲವೇ? ಆರ್‌ಟಿಇ ಉಲ್ಲಂಘನೆಯಲ್ಲವೇ?

ಶಿಕ್ಷಣವೆಂದರೆ ಬೆಂಚು, ಕುರ್ಚಿ, ಸೋಲಾರ್‌ ಪ್ಯಾನಲ್‌ ಮಾತ್ರವಲ್ಲ. ಅದು ಅಲ್ಲಿನ ಜನರ ಭಾಷೆ, ಸಂಸ್ಕೃತಿ, ಸಾಮಾಜಿಕ ವಾತಾವರಣ  ಮತ್ತು ಸ್ಥಳೀಯ ಅಗತ್ಯಗಳನ್ನು ಆಧರಿಸಿ ರೂಪಿಸುವ ಯೋಜನೆ. ಅದರಲ್ಲಿ ರಾಜ್ಯದ ಅಸ್ಮಿತೆ ಅಡಗಿದೆ. ಇದೆಲ್ಲವನ್ನೂ ಧಿಕ್ಕರಿಸುವ ಪಿಎಂಶ್ರೀ ಯೋಜನೆ, ‘ನಾನು ಹೇಳಿದ್ದನ್ನು ಮಾಡು’ ಎಂಬ ಸರ್ವಾಧಿಕಾರದ ನೆಲೆಯಲ್ಲಿ ಶಿಕ್ಷಣವನ್ನು ರಾಜಕೀಯ ಪ್ರಚಾರದ ಯಂತ್ರವಾಗಿ ಬಳಸಲು ಪ್ರಯತ್ನಿಸುತ್ತಿದೆ. ಈ ಯೋಜನೆ ಮೇಲ್ನೋಟಕ್ಕೆ ‘ಮಾದರಿ ಶಾಲೆಗಳ ನಿರ್ಮಾಣ’ದ ಮುಖವಾಡ ಧರಿಸಿದೆ. ಆದರೆ, ರಾಜ್ಯಗಳ ಸ್ವಾಯತ್ತೆಯನ್ನು ಕಸಿದು ಸಂವಿಧಾನವನ್ನು ದುರ್ಬಲಗೊಳಿಸುವ ವಿನ್ಯಾಸ ಇದಾಗಿದೆ; ‘ಒಂದು ರಾಷ್ಟ್ರ, ಒಂದು ಭಾಷೆ, ಒಂದು ಪಠ್ಯಕ್ರಮ, ಒಂದು ದೃಷ್ಟಿಕೋನ, ಒಂದು ಪಿಎಂ ಯೋಜನೆ’ ಹೇರುವ ಯೋಜಿತ ದುರುದ್ದೇಶದ ರಾಜಕೀಯ ಯೋಜನೆಯಾಗಿದೆ. ಸರಳವಾಗಿ ಹೇಳಬೇಕೆಂದರೆ, ಇದು ಸಂಸ್ಕೃತಿಯ ಏಕರೂಪೀಕರಣದ ರಾಜಕೀಯ ಪ್ರಯೋಗ.

ಯೋಜನೆಯ ಹೆಸರಿನಲ್ಲಿ ‘ಪ್ರಧಾನ ಮಂತ್ರಿ ಶಾಲೆ’ ಎಂಬ ರಾಜಕೀಯ ಹೆಗ್ಗುರುತು ಅಂಟಿದೆ. ಆಯ್ಕೆಯಾಗುವ ಪ್ರತಿ ಶಾಲೆಯ ಫಲಕ, ಶಿಕ್ಷಕರು, ಮಕ್ಕಳು, ಪಾಲಕರು, ಪಂಚಾಯಿತಿ ಮತ್ತು ಆಯಾ ಊರಿನ ಸಮುದಾಯ ದಿನನಿತ್ಯ ‘ಪ್ರಧಾನ ಮಂತ್ರಿ’ ಹೆಸರನ್ನು ಜಪಿಸುವ ಯೋಜನೆಯಾಗಿದೆ. ಖರೀದಿಸುವ ಪ್ರತಿಯೊಂದು ವಸ್ತು, ಬರೆಯುವ ಲೆಕ್ಕ, ಮೌಲ್ಯಮಾಪನ ವರದಿ, ಎಲ್ಲವೂ ಕೇಂದ್ರದ ‘ಪ್ರಧಾನ ಮಂತ್ರಿ’ ಬ್ರಾಂಡ್‌ನ ಭಾಗವಾಗಿದೆ; ಶಿಕ್ಷಣದ ಹೆಸರಿನಲ್ಲಿ ರಾಜಕೀಯ ಪ್ರಚಾರಕ್ಕಾಗಿ ರೂಪಿಸಿದ ವಿಶೇಷ ಅಭಿಯಾನವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, 2015ರಲ್ಲಿ ರೂಪಿಸಲಾಗಿದ್ದ ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ ಅಡಿಯಲ್ಲಿ 2016–2019ರ ಅವಧಿಯಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ ₹446.72 ಕೋಟಿಯಲ್ಲಿ ಶೇ 78.91ರಷ್ಟು ಹಣವನ್ನು ಮಾಧ್ಯಮ ಪ್ರಚಾರ ಹಾಗೂ ವಕಾಲತ್ತಿಗಾಗಿ ಖರ್ಚು ಮಾಡಲಾಗಿತ್ತು ಎಂಬ ಮಹಿಳಾ ಸಬಲೀಕರಣ ಕುರಿತಾದ ಸಂಸದೀಯ ಸಮಿತಿಯ ವರದಿಯನ್ನು ಇದನ್ನು ಪುಷ್ಟೀಕರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.