ಕರ್ನಾಟಕದ ರಾಜಕೀಯ, ಅದರಲ್ಲೂ ಚುನಾವಣಾ ರಾಜಕೀಯ ‘ಜನ ತಮ್ಮ ಹಕ್ಕುಗಳನ್ನು ಚಲಾಯಿಸುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಂವಿಧಾನಿಕ ಪ್ರಕ್ರಿಯೆ’ ಎನ್ನುವ ಅರ್ಥವನ್ನು ಮೀರಿ, ರಾಜಕೀಯ ಪಕ್ಷಗಳ ಪಾಲಿಗೆ ಪ್ರಭಾವಿ ನಾಯಕರ ಪ್ರತಿಷ್ಠೆಯ ಪ್ರಶ್ನೆಯಾಗಿ, ಕೆಲವು ಮಾಧ್ಯಮಗಳ ಪಾಲಿಗೆ ಕದನಕಣ, ರಣರಂಗದಂತಹ ನಿರೂಪಣೆಯಾಗುವ ಸ್ಥಿತಿಯನ್ನು ತಲುಪಿ ಬಹಳ ಕಾಲವಾಗಿದೆ. ಮೊನ್ನೆ ನಡೆದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಮತ್ತು ಅದರ ಸುತ್ತಲಿನ ಸಂಕಥನವು ರಾಜಕೀಯ ನಾಯಕರ ಪ್ರತಿಷ್ಠಿತ ಚುನಾವಣೆಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ ಅಷ್ಟೆ.
ಹಾಗೆ ನೋಡುವುದಾದರೆ, ಚನ್ನಪಟ್ಟಣದ ಚುನಾವಣಾ ಫಲಿತಾಂಶವು ಹಲವಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ಇದು ಜೆಡಿಎಸ್‌ನ ಸ್ವಯಂಕೃತ ಅಪರಾಧ ಎಂದರೆ, ಇನ್ನು ಕೆಲವರು ಇದು ಅತಿಯಾದ ಕುಟುಂಬ ರಾಜಕಾರಣಕ್ಕೆ ಜನ ನೀಡಿದ ಪ್ರತಿಕ್ರಿಯೆ ಎನ್ನುವ ಅರ್ಥದಲ್ಲಿ ವಿಶ್ಲೇಷಿಸಿದ್ದಾರೆ. ಸಾಮಾಜಿಕ ಜಾಲತಾಣ ಮತ್ತು ಟ್ರೋಲ್ ಪೇಜ್‍ಗಳಂತೂ ಈ ಸೋಲನ್ನು ಪುರಾಣದ ಅರ್ಜುನ ಮತ್ತು ಬಬ್ರುವಾಹನನಿಗೆ ಹೋಲಿಸಿ, ಅತ್ಯಂತ ಕಳಪೆ ರಾಜಕೀಯ ವ್ಯಂಗ್ಯದ ಮಾದರಿಯೊಂದನ್ನು ಜನರ ಮುಂದಿಟ್ಟು ವಿಕೃತಿ ಮೆರೆದಿವೆ.
ಇಂತಹ ಹೊತ್ತಿನಲ್ಲಿಯೇ ನಾವು ಚನ್ನಪಟ್ಟಣದಲ್ಲಿನ ರಾಜಕೀಯ ವಿದ್ಯಮಾನವನ್ನು ಟ್ರೋಲ್ ಸೇನೆ ಮುಂದಿಟ್ಟ ಜೆಡಿಎಸ್ ಎಂಬ ಪಕ್ಷ ಅಥವಾ ಅಪ್ಪ-ಮಗನ ಸೋಲು ಎಂಬ ಸರಳೀಕೃತ ಅರ್ಥದಲ್ಲಿ ನೋಡಬೇಕೆ ಅಥವಾ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮಗೊಳಿಸುತ್ತಿರುವ 1990ರ ನಂತರದ ರಾಜಕಾರಣದ ಭಾಗವಾಗಿ ನೋಡಬೇಕೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ನನಗೆ ಅನ್ನಿಸುವಂತೆ, ಚನ್ನಪಟ್ಟಣ ಎಂಬ ರಾಜಕೀಯ ವಿದ್ಯಮಾನವನ್ನು ‘ಅಪ್ಪ-ಮಗನ ಸೋಲು’ ಎಂಬುದರ ಆಚೆಗೂ ವಿಶ್ಲೇಷಣೆ ಮಾಡುವುದು ಕರ್ನಾಟಕದ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮುಖ್ಯವಾದುದು ಅನ್ನಿಸುತ್ತದೆ.
ಭಾರತದ ಚುನಾವಣಾ ರಾಜಕಾರಣದಲ್ಲಿ 1977ರ ಲೋಕಸಭಾ ಚುನಾವಣೆ ಬಹಳ ಮಹತ್ವವಾದದ್ದು. ಏಕೆಂದರೆ, ಕೇಂದ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ರಾಜಕೀಯ ಶಕ್ತಿಯು ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಬೆಳವಣಿಗೆಯು ಪ್ರಾದೇಶಿಕ ಪಕ್ಷಗಳ ಉಗಮಕ್ಕೆ, ಅದಕ್ಕಿಂತಲೂ ಮಿಗಿಲಾಗಿ ‘ಪ್ರಾದೇಶಿಕ ಅಸ್ಮಿತೆ’ಗಳನ್ನು ಆಧರಿಸಿ ಹೊಸ ರಾಜಕೀಯ ತಾತ್ವಿಕತೆಯೊಂದಕ್ಕೆ ನಾಂದಿ ಹಾಡಿತ್ತು. ಯಾವುದೇ ರಾಜಕೀಯ ಪಕ್ಷ ತನ್ನ ರಾಜಕೀಯ ಅಸ್ತಿತ್ವವನ್ನು ತಾನು ನಿರ್ವಹಿಸಿದ್ದ ಜನಪರ ಹೋರಾಟವೊಂದರ ಸ್ಮೃತಿಯ ಮೇಲೆ ಕಟ್ಟಿಕೊಂಡಿರುತ್ತದೆ. ಉದಾಹರಣೆಗೆ, ಕಾಂಗ್ರೆಸ್ ಪಕ್ಷವು ದೇಶದ ಸ್ವಾತಂತ್ರ್ಯ ಹೋರಾಟವನ್ನು ತನ್ನ ಬುನಾದಿ ಮಾಡಿಕೊಂಡಿದ್ದರೆ, ಬಿಜೆಪಿಯು ರಾಮಜನ್ಮಭೂಮಿ ಹೋರಾಟವನ್ನು ತನ್ನ ಅಸ್ಮಿತೆ ಆಗಿಸಿಕೊಂಡಿದೆ, ಎಡಪಕ್ಷಗಳು ದುಡಿಯುವ ಜನರ ಪರವಾದ ಹೋರಾಟವನ್ನು ತಮ್ಮ ಅಸ್ಮಿತೆಯಾಗಿ ಜನಸಮೂಹದ ಮುಂದಿಡುತ್ತವೆ.
ರಾಷ್ಟ್ರೀಯ ಪಕ್ಷಗಳು ಜನರ ಮುಂದಿಡುತ್ತಿದ್ದ ಈ ಬೃಹತ್ ಚಾರಿತ್ರಿಕ ಹೋರಾಟಗಳ ಸ್ಮೃತಿಗಳನ್ನು ಒಡೆದದ್ದು 1980ರ ದಶಕದಿಂದ ಆರಂಭವಾದ ‘ಪ್ರಾದೇಶಿಕ ಅಸ್ಮಿತೆ ಮತ್ತು ಹಕ್ಕಿನ ಪ್ರಶ್ನೆಗಳು’. ಈ ಪ್ರಶ್ನೆಗಳು ರಾಜ್ಯಗಳ ಭಾಷಾ ಚಳವಳಿಯ ಪ್ರಶ್ನೆಗಳಾಗಿ, ಸಮಾಜೋ ಆರ್ಥಿಕ ಹಿಂದುಳಿದಿರುವಿಕೆಯ ಪ್ರಶ್ನೆಗಳಾಗಿ, ಉತ್ತರ- ದಕ್ಷಿಣದ ನಡುವಿನ ಸಂಪನ್ಮೂಲಗಳ ಅಸಮಾನ ಹಂಚಿಕೆಯ ಪ್ರಶ್ನೆಗಳಾಗಿ ಹಲವಾರು ಪ್ರಾದೇಶಿಕ ಜನಪರ ಹೋರಾಟಗಳಿಗೆ ನಾಂದಿ ಹಾಡಿವೆ. ಇದರ ಪರಿಣಾಮವಾಗಿ, ‘ಪ್ರಾದೇಶಿಕ ಅಸ್ಮಿತೆಗಳನ್ನು ಹಕ್ಕುಗಳನ್ನಾಗಿ ಮಂಡಿಸುವ’ ಹೊಸ ಪ್ರಾದೇಶಿಕ ಪಕ್ಷಗಳ ಯುಗವೊಂದು ಆರಂಭವಾಗಿತ್ತು. ಅದರಲ್ಲೂ 1996- 2014ರ ತನಕದ ‘ದೆಹಲಿಯ ರಾಜಕೀಯ’ವನ್ನು ಪ್ರಾದೇಶಿಕ ಪಕ್ಷಗಳ ನೆರವಿಲ್ಲದೇ ಊಹಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಈ ವಿದ್ಯಮಾನವನ್ನು ರಾಜಕೀಯ ವಿಶ್ಲೇಷಕರು ‘ಸಮ್ಮಿಶ್ರ ಸರ್ಕಾರಗಳ ಯುಗ’ ಎಂದೇ ಗುರುತಿಸುತ್ತಾರೆ.
ಈ ಹಂತದಲ್ಲಿ ಕರ್ನಾಟಕದ ಪ್ರಾದೇಶಿಕ ಅಸ್ಮಿತೆಯನ್ನು ಇಲ್ಲಿನ ಭಾಷಾ ಚಳವಳಿ, ರೈತ ಹೋರಾಟ, ಬಹಳ ಮುಖ್ಯವಾಗಿ ಹಿಂದುಳಿದ ವರ್ಗಗಳ ಚಳವಳಿಯಂತಹ ಜನಪರ ಹೋರಾಟಗಳ ಸ್ಮೃತಿಯ ಮೇಲೆ ಕಟ್ಟುವ ಬೆಳವಣಿಗೆಗಳು ಆರಂಭವಾದವು. ಈ ಅಸ್ಮಿತೆಗೆ ಬಸವಾದಿ ಶರಣರು, ಸೂಫಿಗಳು, ದಾಸರು, ಕವಿಗಳಿಂದ ಜಾತ್ಯತೀತ ರಾಜಕೀಯ ತಾತ್ವಿಕತೆಯನ್ನು ಬಸಿದುಕೊಳ್ಳಲಾಯಿತು. ಈ ಕಾಲದಲ್ಲಿ ಹಳೆಮೈಸೂರು ಭಾಗದಲ್ಲಿದ್ದ ರೈತ ಹೋರಾಟ ಮತ್ತು ಭಾಷಾ ಚಳವಳಿಯ ಭಾಗವಾಗುವ ಮೂಲಕ ಎಚ್.ಡಿ.ದೇವೇಗೌಡ ರಾಜಕೀಯ ನಾಯಕರಾಗಿ ಬೆಳೆದುನಿಂತರು. ಇದರ ಅರ್ಥ ಅವರ ‘ಪ್ರಾದೇಶಿಕ ರಾಜಕೀಯ’ಕ್ಕೆ ಈ ನಾಡಿನ ಭಾಷೆ, ರೈತ ಚಳವಳಿಗಳ ತಾತ್ವಿಕತೆ ವ್ಯಾಪಕವಾಗಿ ಒದಗಿಬಂದವು. ಮುಂದೆ ಜೆಡಿಎಸ್ ಪಕ್ಷದ ತಾತ್ವಿಕತೆಯನ್ನು ಈ ಹೋರಾಟಗಳು ಪ್ರಭಾವಿಸಿದವು. ಭಾಷೆ ಮತ್ತು ರೈತ ಹೋರಾಟದ ಜೊತೆ ಜೊತೆಗೆ ದೇವೇಗೌಡರು 1992ರಲ್ಲಿ ಬಾಬರಿ ಮಸೀದಿ ಧ್ವಂಸವನ್ನು ಕಟುವಾಗಿ ವಿಮರ್ಶಿಸಿದ್ದರು. ಆ ಮೂಲಕ, ಮಸೀದಿ ಧ್ವಂಸದ ಕಾರಣದಿಂದ ಅಭದ್ರತೆಯಿಂದ ಕುಸಿದಿದ್ದ ದೊಡ್ಡಸಂಖ್ಯೆಯ ಅಲ್ಪಸಂಖ್ಯಾತ ವರ್ಗಕ್ಕೆ ದೇವೇಗೌಡರು ಆಸರೆಯಾಗಿ ಕಂಡಿದ್ದರು. ಈ ಬೆಳವಣಿಗೆಯಿಂದ ಉತ್ತರ ಕರ್ನಾಟಕದಲ್ಲೂ ಪಕ್ಷದ ಬೇರುಗಳು ನಿಧಾನವಾಗಿ ಹಬ್ಬಿಕೊಳ್ಳುತ್ತಿದ್ದವು.
ಹಾಗಂತ ದೇವೇಗೌಡರ ರಾಜಕೀಯವು ವಿಮರ್ಶಾತೀತವಲ್ಲ. ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರ ನಿರ್ಗಮನ, ಬಿಜೆಪಿ ಜೊತೆಗಿನ ಜೆಡಿಎಸ್ ಸಖ್ಯ, ಪಕ್ಷದ ಮೇಲೆ ಕುಟುಂಬದ ಆಧಿಪತ್ಯ ಸೇರಿದಂತೆ ಕೆಲವು ಬೆಳವಣಿಗೆಗಳನ್ನು ಉಲ್ಲೇಖಿಸಿ ಪಕ್ಷದ ‘ಜಾತ್ಯತೀತ’ ನಿಲುವನ್ನು ರಾಜಕೀಯ ವಿಶ್ಲೇಷಕರು ಕಟುವಾದ ವಿಮರ್ಶೆಗೆ ಗುರಿಯಾಗಿಸಿದ್ದಾರೆ. ಈ ವಿಮರ್ಶೆಗಳಲ್ಲಿ ಹುರುಳಿರುವುದೂ ಉಂಟು.
ಇಂದಿನ ಜೆಡಿಎಸ್ ಎಂದರೆ ಏನು? ಅದಕ್ಕಿರುವ ಜನಪರ ಹೋರಾಟಗಳ ಸ್ಮೃತಿ ಯಾವುದು? ಯಾವ ಹೋರಾಟಗಳನ್ನು ಆಧರಿಸಿ ಅದು ಜನರನ್ನು ಸೆಳೆಯುತ್ತದೆ ಎಂದು ಪ್ರಶ್ನಿಸಿಕೊಂಡರೆ ಸ್ಪಷ್ಟ ಉತ್ತರಗಳು ಕಾಣಸಿಗುವುದಿಲ್ಲ. ಜೆಡಿಎಸ್ ಚರಿತ್ರೆಯು ನಾಡಿನ ಭಾಷೆ, ಅಲ್ಪಸಂಖ್ಯಾತರು, ರೈತಪರ ಹೋರಾಟಗಳ ಸ್ಮೃತಿಯಿಂದ ತುಂಬಿರಬೇಕಾಗಿತ್ತು. ಆದರೆ ಕುಮಾರಸ್ವಾಮಿಯವರು ಪ್ರವರ್ಧಮಾನಕ್ಕೆ ಬಂದ ನಂತರದ ಜೆಡಿಎಸ್ ನಿಧಾನವಾಗಿ ತನ್ನ ಸ್ಮೃತಿಯನ್ನೇ ಮರೆಯುತ್ತಿರುವಂತಿದೆ. ಈಗ ಅವರು ರಾಷ್ಟ್ರೀಯ ಪಕ್ಷವೊಂದರ ಜೊತೆ ಚುನಾವಣಾ ಹೊಂದಾಣಿಕೆಯನ್ನು ಮಾಡಿಕೊಂಡಿರುವುದರಿಂದ ಅವರ ಭಾಷೆಯೂ ಬದಲಾಗಿದೆ. ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ‘ನನ್ನ ಸೋಲಿಗೆ ಒಂದು ಕೋಮು ಕಾರಣ’ ಎಂದು ಬಾಲಿಶ ಹೇಳಿಕೆ ನೀಡಿದ್ದನ್ನು ಇದರ ಭಾಗವಾಗಿಯೇ ನಾವು ಗಮನಿಸಬೇಕಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ವರ್ತಮಾನದ ಜೆಡಿಎಸ್ ಕಳೆದುಕೊಂಡಿರುವುದು ತನ್ನ ತಾತ್ವಿಕತೆಯನ್ನು ಮತ್ತು ಪಕ್ಷ ಮುನ್ನಡೆಸಬೇಕಾದ ಜನಪರ ಹೋರಾಟಗಳ ಸ್ಮೃತಿಗಳನ್ನು. ಅವುಗಳನ್ನು ಮರುಸ್ಥಾಪಿಸದ ವಿನಾ ನಿಖಿಲ್ ಜಾಗದಲ್ಲಿ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಿದರೂ ಜನಬೆಂಬಲ ಪಡೆಯುವುದು ಕಷ್ಟವಿದೆ.
ಸ್ವಾತಂತ್ರ್ಯದ ಆರಂಭದ ಕಾಲದಲ್ಲಿ ಚುನಾವಣೆಗಳು ಒಂದು ಪಕ್ಷ ಮತ್ತು ಅದರ ಬೆಂಬಲಿತ ಭೂಮಾಲೀಕರ ಆಣತಿಯಲ್ಲಿದ್ದವು. ನಂತರ ಅವು ಜಾತಿಕೇಂದ್ರಿತ ನಾಯಕತ್ವದ ತೆಕ್ಕೆಗೆ ಸರಿದವು. 1990ರ ದಶಕದ ನಂತರದ ಚುನಾವಣೆಗಳು ಹಣದ ಹಿಡಿತಕ್ಕೆ ಸಿಲುಕಿದವು. ಇಂದು ಕಾರ್ಪೊರೇಟ್ ಸಂಸ್ಥೆಗಳ ಧಣಿಗಳು ಚುನಾವಣೆಗಳನ್ನು ನಿರ್ವಹಿಸುತ್ತಿರುವ ವಿಶ್ಲೇಷಣೆಗಳು ನಮ್ಮ ನಡುವೆ ಇವೆ. ಈ ಬದಲಾವಣೆಯ ಭಾಗವಾಗಿಯೇ ನಾವು ‘ಒಂದು ದೇಶ ಒಂದು ಚುನಾವಣೆ’ ಎಂಬ ಸಂಕಥನವನ್ನು ಗಮನಿಸಬೇಕಿದೆ. ಇಂತಹ ಸಂದಿಗ್ಧ ಸ್ಥಿತಿಯನ್ನು ದಾಟಲು ಭಾರತೀಯ ಪ್ರಜಾಪ್ರಭುತ್ವದಲ್ಲಿ ಪ್ರಾದೇಶಿಕ ತಾತ್ವಿಕತೆಗೆ ಮಾತ್ರ ಸಾಧ್ಯವಿದೆ. ಆದ್ದರಿಂದ ಜೆಡಿಎಸ್ ಸೇರಿದಂತೆ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳ ಇಂದಿನ ಸ್ಥಿತಿಯು ಪಕ್ಷಗಳ ಸೋಲಷ್ಟೇ ಅಲ್ಲ! ಬದಲಾಗಿ, ರಾಜಕೀಯ ಹೋರಾಟವಾಗಿ ‘ಪ್ರಾದೇಶಿಕ ಅಸ್ಮಿತೆ’ಗೆ ಆದ ತುಸು ಹಿನ್ನಡೆ ಅನ್ನುವ ಅರ್ಥದಲ್ಲಿಯೂ ವಿಶ್ಲೇಷಣೆ ನಡೆಸಬೇಕಿದೆ.
ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷ ಈ ದಿಸೆಯಲ್ಲಿ ಯೋಚಿಸಬಹುದೇ? ಪಕ್ಷದ ಯುವಪೀಳಿಗೆ ತಮ್ಮದೇ ಪಕ್ಷ ಹಾದುಬಂದ ದಾರಿಯನ್ನು, ತಾತ್ವಿಕ ನೆನಪುಗಳನ್ನು ಅವಲೋಕಿಸಿ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವ ಬದ್ಧತೆ ತೋರುವುದೇ? ‘ನಾಡು-ನುಡಿ’ ಕೇಂದ್ರಿತ, ಜಾತ್ಯತೀತ ರಾಜಕೀಯ ಹೋರಾಟವೊಂದರ ಕಲ್ಲುಮುಳ್ಳಿನ ಹಾದಿಯನ್ನು ಅವರು ಎದುರುಗೊಳ್ಳುವರೇ?
ಲೇಖಕ: ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.