ADVERTISEMENT

ವಿಶ್ಲೇಷಣೆ | ಮಹಾರಾಷ್ಟ್ರ ಫಲಿತಾಂಶ ಎತ್ತಿದ ಪ್ರಶ್ನೆಗಳು

ಈ ಅಚ್ಚರಿಯ ಫಲಿತಾಂಶಕ್ಕೆ ನಮ್ಮಲ್ಲಿ ಸಮಂಜಸ ವಿವರಣೆ ಇದೆಯೇ?

ಯೋಗೇಂದ್ರ ಯಾದವ್
Published 3 ಡಿಸೆಂಬರ್ 2024, 0:30 IST
Last Updated 3 ಡಿಸೆಂಬರ್ 2024, 0:30 IST
   

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಯ ಗೆಲುವಾಗಲೀ, ಸುಲಭವಾಗಿ ಗೆಲ್ಲಬಹುದಾಗಿದ್ದ ಚುನಾವಣೆಯಲ್ಲಿ ಮಹಾ ವಿಕಾಸ ಆಘಾಡಿ (ಎಂವಿಎ) ವಿಫಲವಾಗಿದ್ದಾಗಲೀ ನನ್ನನ್ನು ಚಕಿತಗೊಳಿಸಿಲ್ಲ. ಆದರೆ ದೊಡ್ಡ ಮಟ್ಟದ ಈ  ಗೆಲುವನ್ನು ಮಾತ್ರ ನನಗೆ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಈ ಫಲಿತಾಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ನನ್ನ ಸಾಮಾನ್ಯಜ್ಞಾನ ಅಥವಾ ರಾಜ್ಯಶಾಸ್ತ್ರದ ನೈಪುಣ್ಯ ನೆರವಿಗೆ ಬರುತ್ತಿಲ್ಲ. ಆದರೊಂದು ಪ್ರಶ್ನೆ ಕೇಳಲೇಬೇಕಿದೆ: ಗೆದ್ದವರು ಉದ್ದೀಪನ ಮದ್ದು ಸೇವಿಸಿದ್ದರೇ?!

ಮಹಾರಾಷ್ಟ್ರದ ಚುನಾವಣೆಯು ನಾಲ್ಕು ಆಯಾಮಗಳ ಅಚ್ಚರಿಗಳನ್ನು ನಮ್ಮೆದುರು ತೆರೆದಿಟ್ಟಿದೆ. ಮೊದಲನೆಯದಾಗಿ, ಮಹಾಯುತಿಯ ಗೆಲುವಿನಲ್ಲಿ ಇರುವ ಮಹಾ ಅಂತರ: ನಾಲ್ಕನೇ ಮೂರರಷ್ಟು ಸ್ಥಾನಗಳಲ್ಲಿ ಗೆಲುವು ಮತ್ತು ಮತ ಪ್ರಮಾಣದಲ್ಲಿ ಶೇ 14ರಷ್ಟು ವ್ಯತ್ಯಾಸ. ಇಂತಹ ಗೆಲುವುಗಳು ಅತ್ಯಂತ ಅಪರೂಪ, ಆದರೆ ಅಸಾಧ್ಯವಂತೂ ಅಲ್ಲ. ಇದಕ್ಕಿಂತಲೂ ಚಕಿತಗೊಳಿಸುವಂಥದ್ದು ಮಹಾರಾಷ್ಟ್ರ ಚುನಾವಣೆಯ ಎಂದಿನ ಸ್ವರೂಪವು ಬಹುತೇಕ ಅಳಿಸಿಹೋಗಿರುವುದು. ಇಲ್ಲಿನ ಪ್ರತಿ ಚುನಾವಣೆಯಲ್ಲೂ ಪ್ರಾದೇಶಿಕ ಭಿನ್ನತೆ, ನಗರ–ಗ್ರಾಮೀಣ ಪ್ರದೇಶಗಳ ನಡುವಿನ ವ್ಯತ್ಯಾಸ, ಮೈತ್ರಿಯಲ್ಲಿನ ಒಡಕುಗಳು ಸಾಮಾನ್ಯ. ಆದರೆ ಈ ಬಾರಿ ಯಾವುದೋ ಒಂದು ಕಾಣದ ಕೈ ಇವೆಲ್ಲವನ್ನೂ ಮಟ್ಟಗೊಳಿಸಿದೆ.

ಮೂರನೆಯದು: ಲೋಕಸಭಾ ಚುನಾವಣೆಯಲ್ಲಿ 17–30ರ ಅಂತರದ ಸೋಲು ಕಂಡಿದ್ದ ಮಹಾಯುತಿಯು ವಿಧಾನಸಭಾ ಚುನಾವಣೆಯಲ್ಲಿ 235–50 ಸ್ಥಾನಗಳ ಭಾರಿ ಅಂತರದ ಗೆಲುವು ಸಾಧಿಸಿದೆ. ಜತೆಗೆ, ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ ಆಘಾಡಿಗಿಂತ ಶೇಕಡ 1ರಷ್ಟು ಕಡಿಮೆ ಮತ ಪಡೆದಿದ್ದ ಮಹಾಯುತಿ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶೇ 14ರಷ್ಟು ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಐದೇ ತಿಂಗಳ ಅಂತರದಲ್ಲಿ ನಡೆದ ಎರಡು ಚುನಾವಣೆಗಳಲ್ಲಿ ಇಂತಹ ಬದಲಾವಣೆ ಆಗಿದೆ. ಇದು ಸಹ ಭಾರತದ ಚುನಾವಣಾ ಇತಿಹಾಸದಲ್ಲಿ ಅಭೂತಪೂರ್ವ ಬೆಳವಣಿಗೆಯೇನೂ ಅಲ್ಲ. 

ADVERTISEMENT

ಆದರೆ ತಲೆಕೆಳಗಾದ ಈ ಫಲಿತಾಂಶವು ಅನಿರೀಕ್ಷಿತ ಸಂದರ್ಭದಲ್ಲಿ ಆಗಿರುವುದು ಮಾತ್ರ ನಿಜಕ್ಕೂ ಅಭೂತಪೂರ್ವ ಬೆಳವಣಿಗೆಯೇ ಆಗಿದೆ. ರಾಷ್ಟ್ರೀಯ ಪಕ್ಷ ಮತ್ತದರ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿನ ತನ್ನ ವೈಫಲ್ಯವನ್ನು ವಿಧಾನಸಭಾ ಚುನಾವಣೆಯಲ್ಲಿ ತಲೆಕೆಳಗು ಮಾಡಿ, ಗೆಲುವಿನತ್ತ ಹೋದ ಉದಾಹರಣೆಗಳೇ ನಮ್ಮಲ್ಲಿ ಇಲ್ಲ. ಮಹಾರಾಷ್ಟ್ರದ ಚುನಾವಣಾ ಇತಿಹಾಸವನ್ನೇ ನೋಡುವುದಾದರೆ, ಈ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಕಳಪೆಯಾಗಿರುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿಯ ಚುನಾವಣಾ ಚೆಂಡು ಬಹಳ ಕ್ಷಿಪ್ರವಾಗಿ ತಿರುವು ಪಡೆಯಿತು, ಅದೂ ‘ತಪ್ಪು’ ದಿಕ್ಕಿನತ್ತ. ನಿಜಕ್ಕೂ ಇದು ಚುನಾವಣಾ ಗೂಗ್ಲಿಯೆ.

ಈ ಅಚ್ಚರಿಯ ಫಲಿತಾಂಶಕ್ಕೆ ನಮ್ಮಲ್ಲಿ ಉತ್ತಮ ವಿವರಣೆ ಅಥವಾ ವಿಶ್ಲೇಷಣೆಗಳು ಇವೆಯೇ? ಈಗ ಎಲ್ಲೆಡೆ ಕೇಳಿಬರುತ್ತಿರುವ ಸಾಮಾನ್ಯ ವಿವರಣೆಗಳನ್ನೇ ಗಮನಿಸೋಣ. ಅನಗತ್ಯ ಗದ್ದಲ ಮತ್ತು ದೂರದೃಷ್ಟಿಯಿಲ್ಲದ ನಿಲುವುಗಳಿಂದ ಎಂವಿಎ ನಾಯಕರು ತಮ್ಮೆದುರು ಇದ್ದ ಮಹಾ ಅವಕಾಶವನ್ನು ಮುಟ್ಠಾಳರಂತೆ ಕೈಚೆಲ್ಲಿದರು ಎನ್ನಲಾಗುತ್ತಿದೆ. ಇದು ನಿಜಕ್ಕೂ ಸತ್ಯ. ಲೋಕಸಭಾ ಚುನಾವಣೆಯ ಫಲಿತಾಂಶವು ಎಂವಿಎಗೆ ಒಂದು ಉತ್ತಮ, ಸ್ಥೈರ್ಯ ಹೆಚ್ಚಿಸಬಲ್ಲಂತಹ ಹಾಗೂ ವಿಧಾನಸಭಾ ಚುನಾವಣಾ ಪ್ರಚಾರವನ್ನು ಶಕ್ತಿಯುತವಾಗಿ ಆರಂಭಿಸಲು ಅನುಕೂಲವಾಗುವಂತಹ ವೇದಿಕೆಯನ್ನು ಒದಗಿಸಿಕೊಟ್ಟಿತ್ತು. ಚುನಾವಣಾ ವಿಷಯಗಳಿಗೆ ಬರವೇ ಇರಲಿಲ್ಲ. ಮಹಾಯುತಿಯು ಬಿಜೆಪಿ–ಶಿಂದೆ ಮತ್ತು ಅಜಿತ್ ಪವಾರ್ ಅವರ ನಡುವಿನ ಅಪವಿತ್ರ ಮೈತ್ರಿಯಿಂದ ಹುಟ್ಟಿಕೊಂಡ ಕೂಸಾಗಿತ್ತು. ಶಿವಸೇನಾ ಮತ್ತು ಎನ್‌ಸಿಪಿಯನ್ನು ಒಡೆದದ್ದು ಹೇಸಿಗೆಯ ತಂತ್ರವಾಗಿತ್ತು. ಒಬ್ಬ ಪ್ರಬುದ್ಧ ರಾಜಕಾರಣಿ ಮತ್ತು ಕೋವಿಡ್‌ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿರ್ವಹಿಸಿದ ಮುಖ್ಯಮಂತ್ರಿ ಎಂಬ ವರ್ಚಸ್ಸು ಉದ್ಧವ್ ಠಾಕ್ರೆ ಅವರಿಗೆ ಇತ್ತು. ಹೀಗಿದ್ದೂ ಎಂವಿಎ ನಾಯಕರು ಐದು ತಿಂಗಳ ಅವಧಿಯಲ್ಲಿ ಮೈತ್ರಿಕೂಟಕ್ಕೆ ಅನುಕೂಲವಾಗುವಂತೆ ಇದ್ಯಾವುದನ್ನೂ ಬಳಸಿಕೊಳ್ಳಲಿಲ್ಲ. 

ಆದರೆ ಬಿಜೆಪಿ ನೇತೃತ್ವದ ಮಹಾಯುತಿಯು ಲೋಕಸಭಾ ಚುನಾವಣೆಯಲ್ಲಿನ ತನ್ನ ಸೋಲಿನಿಂದ ಪಾಠ ಕಲಿಯಿತು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಅದನ್ನು ಚೆನ್ನಾಗಿಯೇ ಪ್ರಯೋಗಿಸಿತು. ಮೈತ್ರಿಕೂಟದಲ್ಲಿನ ಭಿನ್ನರಾಗವನ್ನು ಇಲ್ಲವಾಗಿಸಿತು, ಮಹಿಳೆಯರಿಗೆ ಲಾಡ್ಕಿ ಬಹೀನ್‌ ಸೇರಿ ಹತ್ತಾರು ಸೌಲಭ್ಯಗಳನ್ನು ಘೋಷಿಸಿತು, ಅತ್ಯಂತ ಹಿಂದುಳಿದ ದಲಿತರು ಮತ್ತು ಒಬಿಸಿ ಮತಗಳನ್ನು ಒಗ್ಗೂಡಿಸಿತು, ಇಡೀ ಸಂಘ ಪರಿವಾರವನ್ನು ಕಣಕ್ಕೆ ಇಳಿಸಿತು. ಜತೆಗೆ ‘ಡಮ್ಮಿ’ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ಕಣಕ್ಕೆ ಇಳಿಸಿ, ಮತಗಳನ್ನು ಒಡೆಯಿತು. ಇವೆಲ್ಲವುಗಳ ಜತೆಗೆ ಬಿಜೆಪಿಯ ಭಾರಿ ಹಣಬಲ ಮತ್ತು ಮಾಧ್ಯಮ ಬೆಂಬಲವೂ ಸೇರಿಕೊಂಡಿತು. 

ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಪ್ರಮಾಣದ ಮತ ಕಳೆದುಕೊಂಡಿದ್ದ, ವಿಧಾನಸಭಾ ಚುನಾವಣೆಯಲ್ಲಿ ಇನ್ನೂ ಶೇ 5ರಷ್ಟು ಮತಗಳನ್ನು ಕಳೆದುಕೊಳ್ಳುವ ಅಪಾಯದಿಂದ ಮಹಾಯುತಿ ಹೇಗೆ ಪಾರಾಯಿತು ಮತ್ತು ಈ ಮೂಲಕ ಎಂವಿಎಗಿಂತ ಹೇಗೆ ಮುನ್ನಡೆ ಸಾಧಿಸಿತು ಎಂಬುದನ್ನಷ್ಟೇ ಇವೆಲ್ಲಾ ವಿವರಿಸಬಲ್ಲವು. ಆದರೆ ಶೇ 14ರಷ್ಟು ಮತ ಪ್ರಮಾಣದ ಮುನ್ನಡೆ ಪಡೆದುಕೊಂಡದ್ದು ಹೇಗೆ ಎಂಬುದನ್ನು ಇವು ವಿವರಿಸಬಲ್ಲವೇ?

ಖಂಡಿತವಾಗಿಯೂ ಇಲ್ಲ. ಇದೇ ನನಗೆ ಅರ್ಥವಾಗದೇ ಇರುವುದು. ನಿಜ ಏನೆಂದರೆ ಸಮೀಕ್ಷಾ ಸಂಸ್ಥೆಗಳಾಗಲೀ ಮಾಧ್ಯಮಗಳಾಗಲೀ ಕಡೆಗೆ ಗೆದ್ದವರೂ ಒಳಗೊಂಡಂತೆ ಯಾವ ರಾಜಕೀಯ ನಾಯಕರೂ ಈ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ಯಾರೂ ಇದನ್ನು ಸಮರ್ಥವಾಗಿ ವಿಶ್ಲೇಷಿಸಲು ಆಗುತ್ತಿಲ್ಲ.

ಒಬ್ಬರ ಅಥವಾ ಒಂದು ಪಕ್ಷದ ಪರವಾದ ಅಲೆ ಇರುವ ಚುನಾವಣೆಗಳು ರಾಜಕೀಯ ನಾಯಕರು, ವೀಕ್ಷಕರು ಮತ್ತು ವರದಿಗಾರರನ್ನೂ ದಿಗ್ಭ್ರಮೆಗೆ ದೂಡುತ್ತವೆ. ಅಂತಹ ಹಲವು ಚುನಾವಣೆಗಳನ್ನು ನಾನು ಕಂಡಿದ್ದೇನೆ. 1977ರಲ್ಲಿ ಜನತಾ ಪಕ್ಷವು ಉತ್ತರ ಭಾರತದಲ್ಲಿ ಕಂಡ ಯಶ, 1985ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್‌ ಮತ್ತು 2019ರಲ್ಲಿ ಈಶಾನ್ಯ ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಗೆಲುವು ಇದಕ್ಕೆ ಉತ್ತಮ ನಿದರ್ಶನಗಳು. ಆದರೆ ಅಂತಹ ಅಲೆ ಇದೆ ಎಂಬುದರ ವಾಸನೆ ಎಲ್ಲರಿಗೂ ಬಡಿದಿರುತ್ತದೆ. ಗೆಲುವಿನ ಅಂತರವನ್ನು ಅಂದಾಜು ಮಾಡಲು ಆಗದೇ ಇದ್ದರೂ, ಯಾರು ಗೆಲ್ಲಬಲ್ಲರು ಎಂಬುದನ್ನು ಸಾಮಾನ್ಯ ಜನರೂ ಗ್ರಹಿಸಬಲ್ಲರು. ಗೆಲುವಿನ ಅಂತರವನ್ನು ಸರಿಯಾಗಿ ಊಹಿಸದಿದ್ದರೂ, ಸರಳ ಬಹುಮತವಂತೂ ದೊರೆಯುತ್ತದೆ ಎಂಬುದನ್ನು ವರದಿಗಾರರು, ಸಮೀಕ್ಷಾಕಾರರು ಅಂದಾಜಿಸಬಲ್ಲರು. ಆದರೆ ಮಹಾರಾಷ್ಟ್ರದ ಚುನಾವಣೆಯಲ್ಲಿ ಈ ಸ್ವರೂಪದ ವಾಸನೆ, ಗ್ರಹಿಕೆ ಮತ್ತು ಅಂದಾಜುಗಳು ಯಾವುವೂ ವರದಿಯಾಗಿರಲೇ ಇಲ್ಲ. 

ಲೋಕನೀತಿ–ಸಿಎಸ್‌ಡಿಎಸ್‌ ನವೆಂಬರ್ ಕೊನೆಯ ವಾರದಲ್ಲಿ ಒಂದು ವಿಶ್ಲೇಷಣೆ ಪ್ರಕಟಿಸಿತ್ತು. ಬೇಸರವೆಂದರೆ, ಮಹಾಯುತಿ ಸರ್ಕಾರದ ಆಡಳಿತ, ಡಬ್ಬಲ್‌ ಎಂಜಿನ್‌ ಸರ್ಕಾರದ ಸಂಬಂಧ ಜನರ ಆದ್ಯತೆ, ರಾಜಕೀಯ ನಾಯಕರ ಜನಪ್ರಿಯತೆ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜನರ ಮನದಾಳವನ್ನು ವಿವರಿಸುವಲ್ಲಿ ಆ ವಿಶ್ಲೇಷಣೆ ಸಾಕಾಗುವುದಿಲ್ಲ. ಯಾವುದೇ ಅಲೆಭರಿತ ಚುನಾವಣೆಯಲ್ಲಿ ಇರುವಂತಹ ಏಕಪಕ್ಷೀಯವಾದ ಜನಾಭಿಪ್ರಾಯವನ್ನಂತೂ ಈ ವಿಶ್ಲೇಷಣೆಗಳು ನಮ್ಮೆದುರು ಇಡುವುದಿಲ್ಲ. 

ಇವುಗಳ ಹೊರತಾಗಿ ಮಹಾರಾಷ್ಟ್ರದ ಫಲಿತಾಂಶಕ್ಕೆ ಕಾರಣವಾದ, ನಮಗೆ ಅರ್ಥವಾಗದ ಅಂಶವೊಂದು ಇದ್ದೇ ಇದೆ. ಇವಿಎಂಗಳನ್ನು ದೂರುವುದು ಈಗ ದುಡುಕಿನ ನಿಲುವಾದರೂ ಅವುಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳು ಏಳುವುದನ್ನು ತಡೆಯುವುದಂತೂ ಅಸಾಧ್ಯ. ಇವಿಎಂಗಳನ್ನು ತಿರುಚಲಾಗುತ್ತದೆ ಎಂಬ ಸಂಚಿನ ಬಗ್ಗೆ ನನ್ನ ರಾಜಕೀಯ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಆರೋಪವನ್ನು ನಾನು ಕಳೆದೊಂದು ದಶಕದಿಂದ ಟೀಕಿಸುತ್ತಲೇ ಬಂದಿದ್ದೇನೆ. ಮತ ಚಲಾವಣೆ ಪ್ರಮಾಣದ ಆರಂಭಿಕ ಅಂದಾಜು ಮತ್ತು ಅಂತಿಮ ಪ್ರಮಾಣದ ನಡುವಣ ಭಾರಿ ಅಂತರವಷ್ಟೇ ಇವಿಎಂಗಳಲ್ಲಿ ವಂಚನೆ ನಡೆದಿದೆ ಎಂಬುದನ್ನು ಸಾಬೀತು ಮಾಡುವುದಿಲ್ಲ. ಅದೇ ರೀತಿ, ಇವಿಎಂನಲ್ಲಿ ಚಲಾವಣೆಯಾದ ಮತಗಳು ಮತ್ತು ಎಣಿಕೆ ಮಾಡಲಾದ ಮತಗಳ ಸಂಖ್ಯೆಯಲ್ಲಿನ ಅಂತರವು ಶಂಕಾಸ್ಪದವಾದುದಾದರೂ, ವಂಚನೆ ಎಂಬುದಕ್ಕೆ ಪ್ರಬಲ ಸಾಕ್ಷ್ಯವಾಗಲಾರದು. ಇವಿಎಂ ವಂಚನೆ ಬಗ್ಗೆ ಮಾತನಾಡುವವರು, ಆ ಬಗ್ಗೆ ಈವರೆಗೆ ಮುಂದಿಡದೇ ಇರುವ ಮತ್ತು ಇನ್ನೂ ಪ್ರಬಲವಾದ ಸಾಕ್ಷ್ಯಗಳನ್ನು ಹೊತ್ತುಬರಬೇಕಾಗುತ್ತದೆ. ಆದರೂ ನಮ್ಮ ಕಣ್ಣಿಗೆ ಕಾಣದೇ ಇರುವ ಹಲವು ಸಂಗತಿಗಳು ಈ ಫಲಿತಾಂಶಕ್ಕಾಗಿ ಕೆಲಸ ಮಾಡಿವೆ ಎಂಬುದಂತೂ ದಿಟ.

ಫಲಿತಾಂಶಗಳ ಬಗ್ಗೆ ಬಹುದೊಡ್ಡ ಪ್ರಶ್ನೆಗಳನ್ನು ಎತ್ತಿರುವ ಮೂರು ವಿಧಾನಸಭಾ (ಮಧ್ಯಪ್ರದೇಶ, ಹರಿಯಾಣ ಮತ್ತು ಮಹಾರಾಷ್ಟ್ರ) ಚುನಾವಣೆಗಳು ಒಂದು ವರ್ಷದೊಳಗೇ ನಡೆದಿದ್ದು ಮತ್ತು ಆ ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಗದೇ ಇರುವುದು ಅತ್ಯಂತ ದುರದೃಷ್ಟಕರ. ಲೋಕಸಭಾ ಚುನಾವಣೆಯ ದತ್ತಾಂಶಗಳಿಗೆ ಸಂಬಂಧಿಸಿದ ವ್ಯತ್ಯಾಸಗಳ ಸಂಬಂಧ ಎದ್ದ ಗಂಭೀರ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಸರಿಯಾಗಿ ಸ್ಪಂದಿಸಲೇ ಇಲ್ಲ. ಈ ಬಾರಿ ಉತ್ತರಪ್ರದೇಶದ ಉಪಚುನಾವಣೆಯೊಂದರಲ್ಲಿ ನಡೆದದ್ದು ಚುನಾವಣಾ ವಂಚನೆ ಎಂಬುದೇ ಸರಿ. ರಾಜೀವ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾದ ನಂತರವೇ ಈ ಎಲ್ಲಾ ಚುನಾವಣೆಗಳು ನಡೆದಿವೆ ಎಂಬುದೇ ವಿಪರ್ಯಾಸ. ನಮ್ಮ ನೆರೆ ದೇಶಗಳಂಥ ಸ್ಥಿತಿಗೆ ನಾವು ಕುಸಿಯಬಾರದು ಎಂದಿದ್ದರೆ, ನಾವು ಈ ಬಗ್ಗೆ ಕಾರ್ಯಪ್ರವೃತ್ತರಾಗಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.