ADVERTISEMENT

ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!

ಚಂದ್ರಕಾಂತ ವಡ್ಡು
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
   
ನಂಜುಂಡಪ್ಪ ವರದಿಯಿಂದ ಈಗಿನ ಗೋವಿಂದರಾವ್‌ ವರದಿಯವರೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯತ್ನಗಳು ನಡೆದಿವೆ; ಅದೆಲ್ಲದರ ಪರಿಣಾಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿರುವುದನ್ನು ಕಂಡಿದ್ದೇವೆ.

ಪ್ರೊ.ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ಕುರಿತ ಸಮಿತಿಯ ವರದಿಯಲ್ಲಿದ್ದ ಹಿಂದುಳಿದ ತಾಲ್ಲೂಕುಗಳ ಸ್ಥಿತಿಗತಿ ಪರಿಶೀಲನೆಗಾಗಿ ರಚನೆಯಾದ ಪ್ರೊ. ಎಂ. ಗೋವಿಂದರಾವ್‌ ಅಧ್ಯಕ್ಷತೆಯ ‘ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ’ಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದೆ. ನಂಜುಂಡಪ್ಪ ಸಮಿತಿ ವರದಿ ಆಧರಿಸಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹಂಚಿಕೆಯಾದರೂ ಸಮರ್ಪಕವಾಗಿ ಬಳಕೆಯಾಗದ ಕಾರಣ ಸ್ಥಿತಿಗತಿ ಸುಧಾರಣೆಯಾಗದಿರುವುದನ್ನು ಸಮಿತಿ ಪತ್ತೆ ಹಚ್ಚಿದೆ.

ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಎರಡು ದಶಕಗಳ ಬಳಿಕ ಶೇ 65ರಿಂದ ಶೇ 72.8ಕ್ಕೆ ಹೆಚ್ಚಳವಾಗಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ರಾಜ್ಯದಲ್ಲಿನ ಒಟ್ಟು 59 ಅತಿ ಹಿಂದುಳಿದ ತಾಲ್ಲೂಕುಗಳ ಪೈಕಿ ಕಲಬುರಗಿ ಕಂದಾಯ ವಿಭಾಗದ 39 ಹಾಗೂ ಬೆಳಗಾವಿ ವಿಭಾಗದ 20 ತಾಲ್ಲೂಕುಗಳು ಅತಿ ಹಿಂದುಳಿದಿವೆ. ಇವೆಲ್ಲವೂ ಉತ್ತರ ಕರ್ನಾಟಕ ಭಾಗದಲ್ಲಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಿಂದುಳಿಯುವಿಕೆ ಮತ್ತು ಯಥಾಸ್ಥಿತಿಯ ಮುಂದುವರಿಕೆ ಕುರಿತಂತೆ ಬಹು ಆಯಾಮ ಮತ್ತು ಬಹು ಮಹತ್ವದ ಹಲವು ಪ್ರಶ್ನೆಗಳು ‘ಉತ್ತರ ಇಲ್ಲದ’ ಅಥವಾ ‘ಉತ್ತರ ಒಲ್ಲದ’ ಅಧಿಕಾರಸ್ಥರನ್ನು ಸುತ್ತುವರಿಯುತ್ತವೆ.

ಉತ್ತರ ಕರ್ನಾಟಕದವರನ್ನು ಹಳೇ ಮೈಸೂರಿನ ಜನ, ‘ಓಹೋ, ನೀವು ಆ ಕಡೆಯವರಾ...! ಅಲ್ಲಿ ತುಂಬಾ ಬಿಸಿಲಂತೆ, ದೂಳಂತೆ... ಜನ ತುಂಬಾ ಒರಟಂತೆ... ಅಲ್ಲಿ ಹೇಗಿರ್ತಾರೋಪಾ...!’ ಎಂದು ಆಡಿಕೊಳ್ಳುವುದು ಅಪರೂಪವೇನಲ್ಲ. ಹಾಗೆಯೇ ಹರಿಹರ ಬಳಿಯ ತುಂಗಭದ್ರಾ ಸೇತುವೆಯ ಆ ಕಡೆಯ ಭಾಗದವರು ದಕ್ಷಿಣ ಭಾಗದವರನ್ನು, ‘ಓಹ್... ಹೊಳೆಯಾಚೆಯ ಜನ!’ ಎಂದು ಮೂದಲಿಸುವುದೂ ಹೊಸದಲ್ಲ. ಹಾಗೆಯೇ ಬಳ್ಳಾರಿಯವರು ಗದಗ–ಧಾರವಾಡ ಕಡೆಯವರಿಗೆ, ‘ಮೇಲ್ಗಡೆಯವರು...’ ಎಂದು ತುಸು ಎಳೆದ ದನಿಯಲ್ಲಿ ಹೇಳುವಲ್ಲಿ ಬೇರೇನೋ ಕೇಳಿಸುತ್ತದೆ.

ADVERTISEMENT

ಇತ್ತೀಚೆಗೆ ಹೆಗ್ಗಡದೇವನಕೋಟೆಯಲ್ಲಿ ಭೇಟಿಯಾಗಿದ್ದ ಹಿರಿಯರೊಬ್ಬರು ನಾನು ಮೂಲತಃ ಬಳ್ಳಾರಿ ಜಿಲ್ಲೆಯಾತ, ಈಗ ಬೆಂಗಳೂರಿನಲ್ಲಿ ನೆಲೆಸಿದ್ದೇನೆ ಎಂದು ತಿಳಿದಾಕ್ಷಣ, ‘ಒಳ್ಳೇದಾತು ಬಿಡಿ... ನಮ್ಮ ಮೈಸೂರು ರಾಜ್ಯ ಸೇರಿಕೊಂಡ್ರಿ...’ ಎಂದು ಯಾವ ಹಿಂಜರಿಕೆಯೂ ಇಲ್ಲದೇ ನುಡಿದರು. ಉತ್ತರ ಕರ್ನಾಟಕದ ಜಿಲ್ಲೆಗಳೆಲ್ಲಾ ಪರಕೀಯ ಎಂಬ ಅವರ ಭಾವನೆಯ ಹಿಂದೆ ದುರುದ್ದೇಶವಾಗಲೀ, ಗಂಭೀರ ಚಿಂತನೆಯಾಗಲೀ ಇರಲಿಲ್ಲ; ಸಹಜ ನುಡಿಗಳಷ್ಟೇ. ಗಾಬರಿ ಹುಟ್ಟಿಸುವ ಸಂಗತಿಯೇನೆಂದರೆ, ಕರ್ನಾಟಕ ಏಕೀಕರಣಗೊಂಡು ದಶಕಗಳ ನಂತರವೂ ಇಂಥ ಉದ್ಗಾರಗಳು ಇನ್ನೂ ಉಳಿದುಕೊಂಡಿವೆ ಎಂಬುದು. ಇಂತಹ ಭಾವನೆಗಳ ಹಿಂದೆ ಚಾರಿತ್ರಿಕ ಮಹತ್ವದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಕಾರಣಗಳು ಸುಪ್ತಗಾಮಿನಿಯಾಗಿ ಹರಿಯುವುದನ್ನು ಮರೆಯಲಾಗದು.

ಹಾಗೆ ನೋಡಿದರೆ, ಇವೇ ಚಾರಿತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಕೂಡ ಅಖಂಡ ಪ್ರದೇಶವೆಂಬ ಪರಿಗಣನೆಗೂ ಒಳಪಡುವುದಿಲ್ಲ. ಅಲ್ಲಿಯೂ ಹಿಂದಿನ ಹೈದರಾಬಾದ್ ನಿಜಾಮ ಆಳ್ವಿಕೆಯ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಎಂದು ಕರೆಯಿಸಿಕೊಳ್ಳುವ ಮುಂಬೈ–ಕರ್ನಾಟಕದ ನಡುವಿನ ಬಿರುಕು ಕೂಡ ಸಾಕಷ್ಟು ದೊಡ್ಡದಾಗಿದೆ. ಇಲ್ಲಿನ ಜನಜೀವನ ಭಿನ್ನತೆಗೆ, ಬಹುತ್ವಕ್ಕೆ ಹೇರಳ ಅವಕಾಶಗಳನ್ನು ಅಂತರ್ಗತಗೊಳಿಸಿಕೊಂಡಿರುವ ದೆಸೆಯಿಂದಾಗಿಯೇ ಸ್ವಂತಿಕೆ ಅನ್ನುವುದು ಈ ಭಾಗಗಳ ಗಾಢ ಅಸ್ಮಿತೆಯಾಗಿ ರೂಪು ತಳೆದಿರುವುದನ್ನು ಗಮನಿಸಬೇಕಾಗುತ್ತದೆ. ಆದರೆ, ಜನಮಾನಸದ ಈ ‘ವಿಶಿಷ್ಟತೆ’ಯು ರಾಜಕಾರಣಿಗಳ ಮಾತಿನಲ್ಲಿ ತೂರಾಡುವ ‘ಪ್ರತ್ಯೇಕತೆ’ಯ ಅರ್ಥ ಮತ್ತು ವ್ಯಾಪ್ತಿಗಿಂತ ತೀರಾ ಭಿನ್ನ. ಅಂತೆಯೇ ಏಕತೆಯಲ್ಲಿನ ಈ ಬಗೆಯ ವಿವಿಧತೆಯನ್ನು ರಾಜಕಾರಣಿಗಳು ಕಾಲಕಾಲಕ್ಕೆ ಮುನ್ನೆಲೆಗೆ ತರುವ ಪ್ರತ್ಯೇಕತೆಯ ಕೂಗಿನ ಜೊತೆಗೆ ಸಮೀಕರಿಸುವ ಅವಿವೇಕ ಮತ್ತು ಅಪಾಯದ ಅರಿವು ಎಲ್ಲರಲ್ಲೂ ಮೂಡಬೇಕಿದೆ.

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಬೇಡಿಕೆಯನ್ನು ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಹಲವಾರು ಸಲ ಸಾರ್ವಜನಿಕ ಚರ್ಚೆಗೆ ಇರಿಸಿದ್ದನ್ನು ನಾಡು ಕಂಡಿದೆ. 2023ರ ಡಿಸೆಂಬರಿನಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಸಮಸ್ಯೆಗಳು ಎಂದಿನಂತೆ ಕಾಟಾಚಾರದ ಚರ್ಚೆಗೆ ಒಳಪಟ್ಟಿದ್ದವು. ಬಿಜೆಪಿ ಶಾಸಕ ಅಭಯ ಪಾಟೀಲ್ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನೂ ಪ್ರಸ್ತಾಪಿಸಿದ್ದರು. ಆಗ ಸಿಎಂ ಸಿದ್ದರಾಮಯ್ಯ, ‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆ ಸಲ್ಲಿಸುವುದು ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರಿಗೆ ಮಾಡುವ ಅವಮಾನ’ ಎಂದು ಚರ್ಚೆಗೆ ತೆರೆ ಎಳೆದಿದ್ದರು.

ಇತ್ತೀಚೆಗೆ ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅವರು ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, ‘ಉತ್ತರ ಕರ್ನಾಟಕ ಭಾಗದ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ಹಾವೇರಿ, ವಿಜಯನಗರ, ಬಳ್ಳಾರಿ ಮತ್ತು ದಾವಣಗೆರೆ ಒಳಗೊಂಡಂತೆ 15 ಜಿಲ್ಲೆಗಳ ಉತ್ತರ ಕರ್ನಾಟಕ‌ ಪ್ರತ್ಯೇಕ ರಾಜ್ಯ ರಚನೆಯಾಗಲಿ’ ಎಂಬ ಬೇಡಿಕೆ ಮಂಡಿಸಿ ಸುದ್ದಿಯಾಗಿದ್ದರು.

ಈ ಭಾಗದ ಅಭಿವೃದ್ಧಿಯಲ್ಲಿನ ನಿರ್ಲಕ್ಷ್ಯ, ಅನುದಾನದ ಕೊರತೆ ಮತ್ತು ಆಡಳಿತಾತ್ಮಕ ತಾರತಮ್ಯವನ್ನು ನೀಗಿಸಲು ಪ್ರತ್ಯೇಕ ರಾಜ್ಯವೇ ಏಕೈಕ ಪರಿಹಾರ ಎಂಬುದು ಕೆಲವು ‘ಪ್ರತ್ಯೇಕತಾವಾದಿ’ಗಳ ತೋರಿಕೆಯ ತರ್ಕ; ಒಳಗೆ ಮಾತ್ರ ಭ್ರಷ್ಟ–ಸ್ವಾರ್ಥ ರಾಜಕಾರಣದ ಸರೋವರ. ತೊಂಬತ್ತರ ದಶಕದಲ್ಲಿ ಇವರೆಲ್ಲರಿಗಿಂತ ಮುಂಚಿತವಾಗಿ ಇಂತಹದೊಂದು ದನಿ ಎತ್ತಿದ್ದು ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ. ಉತ್ತರ ಕರ್ನಾಟಕದ ಜನರು ಅನುಭವಿಸುತ್ತಿದ್ದ ತಾರತಮ್ಯದ ನೋವಿನ ನೊರೆಯಾಗಿ, ಎಚ್ಚರಿಸುವ ವಿವೇಕವಾಗಿ, ಬೆದರಿಕೆಯ ತಂತ್ರವಾಗಿ ಪಾಪು ಅವರು ‘ಪ್ರತ್ಯೇಕ ರಾಜ್ಯ ಬೇಡಬೇಕಾದೀತು...’ ಎಂದು ಗುಡುಗಿದ್ದರು. ಅವರ ದನಿಯಲ್ಲಾಗಲೀ ಹೃದಯದಲ್ಲಾಗಲೀ ಸ್ವಾರ್ಥದ ಲವಲೇಶವೂ ಇರಲಿಲ್ಲ; ವಾಚ್ಯಾರ್ಥ ಮೀರಿದ, ಪ್ರಭುತ್ವವನ್ನು ತಿವಿಯುವ ಅವರ ಧ್ವನಿ ಎಲ್ಲರನ್ನೂ ತಟ್ಟಿತ್ತು.

ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕವು ಕೈಗಾರಿಕೆ, ನೀರಾವರಿ ಮತ್ತು ಮೂಲಸೌಕರ್ಯಗಳಲ್ಲಿ ಹಿಂದುಳಿದಿದೆ; ರಾಜಕೀಯ ಮತ್ತು ಆರ್ಥಿಕ ನಿರ್ಧಾರಗಳಲ್ಲಿ ಉತ್ತರ ಕರ್ನಾಟಕದ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ಮತ್ತು ಅನುದಾನ ಸಿಗುತ್ತಿಲ್ಲ ಎಂಬುದು ಪ್ರತ್ಯೇಕ ರಾಜ್ಯ ಬಯಸುವ ರಾಜಕಾರಣಿಗಳು ಮುಂದಿಡುವ ಪ್ರಮುಖ ಕಾರಣಗಳು. ಹಾಗಾದರೆ ಪ್ರತ್ಯೇಕ ರಾಜ್ಯ ರಚನೆಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಬಿಡುತ್ತದೆಯೆ?

ಆಡಳಿತಾತ್ಮಕ ಅನುಕೂಲ ಮತ್ತು ದಕ್ಷತೆಯ ದೃಷ್ಟಿಯಿಂದ ಚಿಕ್ಕ ಚಿಕ್ಕ ಪ್ರದೇಶಗಳು ಹೆಚ್ಚು ಪರಿಣಾಮಕಾರಿ, ಪ್ರಭಾವಶಾಲಿ ಎಂಬ ಆಲೋಚನಾ ಕ್ರಮವೂ ಇದೆ. ಆದರೆ, ಕರ್ನಾಟಕದ ವಿಭಜನೆಯ ಮೂಲಕ ಅಭಿವೃದ್ಧಿ ಮತ್ತು ಸಮತೋಲನ ಸಾಧಿಸುವ ಸಾಧ್ಯತೆ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಯಾವುದೇ ಸುಳಿವು ಕಾಣಿಸುವುದಿಲ್ಲ. ಏಕೆಂದರೆ, ಉತ್ತರ ಕರ್ನಾಟಕವು ಸಮೃದ್ಧ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ‘ಬೆಳೆಸಿದ’ ಅತ್ಯಂತ ಹಿಂದುಳಿದ ಪ್ರದೇಶ ಎಂಬ ಕಟುಸತ್ಯ ಕಣ್ಣೆದುರಿಗಿದೆ. ಹೊಸ ರಾಜ್ಯದಲ್ಲಿಯೂ ಈ ಹಳೆಯ ಸಂತತಿಯ ಅಭಿವೃದ್ಧಿ ಇನ್ನಷ್ಟು ಮುಂದುವರಿದು ಜನಸಾಮಾನ್ಯರ ಬದುಕು ಮತ್ತಷ್ಟು ಹಿಂದುಳಿಯಲಾರದು ಎಂದು ನಂಬಬಹುದೆ?

ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ಈ ನಿಟ್ಟಿನ ಕಳಕಳಿ, ಇಚ್ಛಾಶಕ್ತಿ ಮತ್ತು ಪ್ರಾಮಾಣಿಕತೆ ಇದೆಯೇ ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರ ನೀಡಬಲ್ಲ ಏಕೈಕ ನಿದರ್ಶನವೂ ಸಿಗುವುದಿಲ್ಲ. ಉತ್ತರ ಕರ್ನಾಟಕದವರೇ ಆದ ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ವೀರೇಂದ್ರ ಪಾಟೀಲ, ಧರ್ಮಸಿಂಗ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ರಾಜ್ಯಭಾರ ಮಾಡಿದರೂ ಅಸಮತೋಲನ ಉಳಿದಿದ್ದಾದರೂ ಏಕೆ? ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಪಾಟೀಲ, ಭೀಮಣ್ಣ ಖಂಡ್ರೆ, ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ ಹಾಗೂ ಅವರ ಕುಟುಂಬಗಳು ಉತ್ತರ ಕರ್ನಾಟಕ ‘ಮುಂದುವರಿಯದಿರಲು ನೀಡಿದ ಕೊಡುಗೆ’ಯನ್ನು ಸ್ಮರಿಸದಿದ್ದರೆ ಹೇಗೆ?

ಏಳು ದಶಕಗಳ ಹಿಂದಿನ ಅಸಮತೋಲನದ ಕಾರಣಗಳನ್ನೇ ಈಗಲೂ ಮುಂದಿಟ್ಟುಕೊಂಡು ವಿಮರ್ಶೆಗಿಳಿಯುವುದು ಸರಿಯಾದ ನಡೆ ಎನ್ನಿಸುವುದಿಲ್ಲ. ಈ ಅವಧಿಯ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಂಭವಿಸಿದ ಲೋಪದೋಷಗಳ ಹೊಣೆಗಾರಿಕೆಯನ್ನು ಯಾರಾದರೂ ಹೊರಬೇಕಲ್ಲವೆ?

ಹಿಂದುಳಿದ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳಲ್ಲಿ ₹43,914 ಕೋಟಿ ಹೆಚ್ಚುವರಿ ಅನುದಾನ ನೀಡಿ ಪರಿಣಾಮಕಾರಿಯಾಗಿ ಬಳಸಬೇಕೆಂಬ ಪ್ರೊ. ಎಂ. ಗೋವಿಂದರಾವ್ ಸಮಿತಿಯ ಶಿಫಾರಸನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರುವ ಬಜೆಟ್‌ನಲ್ಲಿಯೇ ಹಣ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಅನುದಾನವೇ ಅಭಿವೃದ್ಧಿಯ ಅಳತೆಗೋಲು ಆಗಲು ಸಾಧ್ಯವೇ? ಕಬಳಿಕೆಗೆ ಕಾದುಕುಳಿತಿರುವ ತಿಮಿಂಗಿಲಗಳ ನಡುವೆ ಬಿಡುಗಡೆ ಆಗುವ ಅನುದಾನ ಅಭಿವೃದ್ಧಿಯನ್ನು ಯಾವ ದಿಕ್ಕಿನಲ್ಲಿ, ಯಾರ ಲಾಭದಲ್ಲಿ ಸಾಧಿಸುತ್ತದೆ ಎಂಬ ಪ್ರಶ್ನೆ ಸಹ ಉತ್ತರ ಬಯಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.