
ರೂಪಾಯಿ-ಡಾಲರ್
ಹಿಂದೊಮ್ಮೆ ರೂಪಾಯಿ ಕುಸಿತವನ್ನು ಅಸ್ಥಿರತೆಯ ರೂಪದಲ್ಲಿ ವಿಶ್ಲೇಷಿಸಿದ್ದವರು, ಈಗಿನ ತೀವ್ರ ಕುಸಿತವನ್ನು ‘ಒಳ್ಳೆಯ ಲಕ್ಷಣ’ದ ರೂಪದಲ್ಲಿ ಕಾಣುತ್ತಿದ್ದಾರೆ. ರೂಪಾಯಿ ಕುಸಿತವನ್ನು ರಾಜಕೀಯ ವಿದ್ಯಮಾನವನ್ನಾಗಿ ನೋಡುವುದರ ಜೊತೆಗೆ, ಆರ್ಥಿಕ ದೃಷ್ಟಿಕೋನದಿಂದಲೂ ನೋಡಿದಾಗಷ್ಟೇ ಡಾಲರ್ ಎದುರು ರೂಪಾಯಿ ಕುಸಿತದ ಅಸಲಿ ಕಾರಣಗಳನ್ನು ಕಂಡುಕೊಳ್ಳಲು ಸಾಧ್ಯ.
ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಇಂದು ನಿನ್ನೆಯ ವಿದ್ಯಮಾನವಲ್ಲ. ಕಳೆದ ನಾಲ್ಕು ದಶಕಗಳಿಂದಲೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ.
1980ರಲ್ಲಿ ಒಂದು ಡಾಲರಿಗೆ 12.37 ರೂಪಾಯಿ ಇತ್ತು. 1991ರಲ್ಲಿ ಸರ್ಕಾರದ ಉದ್ದೇಶಪೂರ್ವಕ ಕ್ರಮದಿಂದ ಅದು 22.74 ರೂಪಾಯಿಯಾಯಿತು. ನಂತರ ಡಾಟ್‌ಕಾಮ್ ಗುಳ್ಳೆ, ಜಾಗತಿಕ ಹಣಕಾಸು ಬಿಕ್ಕಟ್ಟು, ಕೋವಿಡ್ ಮೊದಲಾದ ಸಂಕಷ್ಟಗಳು ಎದುರಾದಾಗ ಹಾಗೂ ಕೆಲವೊಮ್ಮೆ ರೂಪಾಯಿ ಅಪಮೌಲ್ಯದಂತಹ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಾಗ, ರೂಪಾಯಿ ಮೌಲ್ಯ ಕುಸಿದಿತ್ತು. ಆದರೆ, ಆಗ ಕುಸಿಯುವ ದರ ಶೇ 3ರ ಆಸುಪಾಸಿನಲ್ಲಿತ್ತು. ಈಗ ಅದು ಶೇ 6ರಷ್ಟಾಗಿದೆ. ಪ್ರಸ್ತುತ, ಒಂದು ಡಾಲರಿಗೆ ಬರೋಬ್ಬರಿ 91 ರೂಪಾಯಿ ತೆರಬೇಕಾಗಿದೆ.
ಹಿಂದೆ ರೂಪಾಯಿ ಮೌಲ್ಯ ಕುಸಿಯುತ್ತಿದ್ದಾಗ ಡಾಲರ್ ಮೌಲ್ಯ ಜಾಗತಿಕವಾಗಿ ಹೆಚ್ಚುತ್ತಿತ್ತು. ಈಗ
ಯುರೊ, ಪೌಂಡ್ ಇತ್ಯಾದಿ ಕರೆನ್ಸಿಗಳ ಎದುರು ಡಾಲರ್ ಕುಸಿಯುತ್ತಿದೆ. ಅಷ್ಟೇ ಅಲ್ಲ, ಇತರ ಅಭಿವೃದ್ಧಿ
ಶೀಲ ರಾಷ್ಟ್ರಗಳಾದ ಮಲೇಷ್ಯಾ, ಫಿಲಿಪ್ಪೀನ್ಸ್ ಹಾಗೂ ಥಾಯ್ಲೆಂಡ್ ದೇಶಗಳ ಕರೆನ್ಸಿಯ ಮೌಲ್ಯ ಹೆಚ್ಚುತ್ತಿದೆ. ಆದರೆ, ಭಾರತದ ರೂಪಾಯಿ ಮಾತ್ರ ಕುಸಿಯುತ್ತಿದೆ. ರೂಪಾಯಿ ಏಷ್ಯಾದಲ್ಲೇ ಅತ್ಯಂತ ದುಸ್ಥಿತಿಯಲ್ಲಿರುವ ಕರೆನ್ಸಿ ಎನಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದಾಗಿ ರೂಪಾಯಿ ಕುಸಿತ ಆತಂಕವನ್ನು ಮೂಡಿಸಿದೆ.
ರೂಪಾಯಿ ಮೌಲ್ಯ ಲಾಗಾಯ್ತಿನಿಂದಲೂ ರಾಜಕೀಯವಾಗಿ ಸೂಕ್ಷ್ಮ ವಿಷಯ. ಕಾಂಗ್ರೆಸ್ ಆಡಳಿತದಲ್ಲಿ ರೂಪಾಯಿ ಮೌಲ್ಯ ಕುಸಿದಾಗ, ನರೇಂದ್ರ ಮೋದಿಯವರು ಕಾಂಗ್ರೆಸ್ ಪಕ್ಷವನ್ನು ‘ದೆಹಲಿ ಸರ್ಕಾರ ಹಾಗೂ ರೂಪಾಯಿಯ ನಡುವೆ, ಯಾವುದರ ಮೌಲ್ಯ ಹೆಚ್ಚು ತೀವ್ರವಾಗಿ ಕುಸಿಯುತ್ತಿದೆ ಎಂಬ ಸ್ಪರ್ಧೆ ನಡೆಯುತ್ತಿರುವಂತೆ ಕಾಣುತ್ತಿದೆ’ ಎಂದು ಲೇವಡಿ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದರೆ ಮತ್ತೆ ನಲವತ್ತು ರೂಪಾಯಿಗೆ ಡಾಲರ್ ಸಿಗುವಂತೆ ಮಾಡುತ್ತೇವೆ ಎಂದಿದ್ದರು. ಈಗ ಅವರೇ ಆಡಳಿತದಲ್ಲಿದ್ದಾರೆ. ಆದರೆ ರೂಪಾಯಿ ಮೌಲ್ಯ ಆಗಿನದ್ದಕ್ಕಿಂತ ದುಪ್ಪಟ್ಟು ವೇಗದಲ್ಲಿ ಕುಸಿಯುತ್ತಿದೆ.
ಮೋದಿ ಅವರ ವಾದ ಈಗ ಬದಲಾಗಿದೆ; ರೂಪಾಯಿ ಕುಸಿತ ಅವರಿಗೆ ಹಾಗೂ ಅವರ ಪರಿವಾರಕ್ಕೆ ಒಳ್ಳೆಯ ಲಕ್ಷಣವಾಗಿ ಕಾಣುತ್ತಿದೆ! ಇದರಿಂದ ರಫ್ತಿಗೆ ಅನುಕೂಲವಾಗುತ್ತದೆ; ಅನಿವಾಸಿ ಭಾರತೀಯರು ಇಲ್ಲಿಗೆ ಕಳುಹಿಸುವ ಡಾಲರಿಗೆ ಹೆಚ್ಚಿನ ಕಿಮ್ಮತ್ತು ಸಿಗುತ್ತದೆ; ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಬದಲಿಗೆ ಡಾಲರ್ ಮೌಲ್ಯ ಹೆಚ್ಚುತ್ತಿದೆ; ರೂಪಾಯಿ ತನ್ನ ಸ್ವಾಭಾವಿಕ ಮಟ್ಟವನ್ನು ಕಂಡುಕೊಳ್ಳುತ್ತಿದೆ, ಆತಂಕಕ್ಕೆ ಕಾರಣವಿಲ್ಲ... ಇತ್ಯಾದಿ ಹೇಳಿಕೆಗಳನ್ನು ಕೇಳುತ್ತಿದ್ದೇವೆ. ಈ ರಾಜಕೀಯ ಕಸರತ್ತುಗಳನ್ನು ಬದಿಗಿಟ್ಟು ರೂಪಾಯಿ ಮೌಲ್ಯದ ಕುಸಿತವನ್ನು ಆರ್ಥಿಕ ದೃಷ್ಟಿಕೋನದಿಂದ ಗಮನಿಸುವುದು ಅವಶ್ಯಕ.
ರೂಪಾಯಿ ಮೌಲ್ಯ ಕುಸಿಯುವುದಕ್ಕೆ ಹಲವು ಕಾರಣಗಳಿವೆ. ಮೂಲತಃ ರೂಪಾಯಿ ಕೂಡ ಒಂದು ಸರಕು. ಬೇಡಿಕೆ ಹೆಚ್ಚಿದರೆ ರೂಪಾಯಿಯ ಬೆಲೆಯೂ ಹೆಚ್ಚುತ್ತದೆ, ಬೇಡಿಕೆ ಇಳಿದರೆ ಮೌಲ್ಯ ಕುಸಿಯುತ್ತದೆ. ಸರಕುಗಳನ್ನು ಆಮದು ಮಾಡಿಕೊಂಡಾಗ ಅದಕ್ಕೆ ಡಾಲರಿನಲ್ಲಿ ಪಾವತಿಸಬೇಕು. ರೂಪಾಯಿ ಕೊಟ್ಟು ಡಾಲರನ್ನು ಕೊಳ್ಳುತ್ತೇವೆ. ಡಾಲರಿಗೆ ಬೇಡಿಕೆ ಹೆಚ್ಚುತ್ತದೆ. ಡಾಲರ್ ಮೌಲ್ಯ ಹೆಚ್ಚುತ್ತದೆ, ರೂಪಾಯಿ ಮೌಲ್ಯ ಕುಸಿಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ರಫ್ತು ಹೆಚ್ಚಾದರೆ ರೂಪಾಯಿಗೆ ಬೇಡಿಕೆ ಹೆಚ್ಚುತ್ತದೆ, ಅದರ ಮೌಲ್ಯ ಹೆಚ್ಚಾಗುತ್ತದೆ.
ನಾವು ರಫ್ತು ಮಾಡುತ್ತಿರುವುದಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದರಿಂದ, ಚಾಲ್ತಿ ಖಾತೆಯಲ್ಲಿನ ಕೊರತೆ ಹೆಚ್ಚುತ್ತಿದೆ. ಕಳೆದ ವರ್ಷ ರಫ್ತಿಗಿಂತ 41.7 ಶತಕೋಟಿ ಡಾಲರ್‌ನಷ್ಟು ಹೆಚ್ಚು ಆಮದು ಮಾಡಿಕೊಂಡಿದ್ದೇವೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆಮದು ಶೇ 48.1ರಷ್ಟು ಹೆಚ್ಚಾಗಿದ್ದು, ಚಾಲ್ತಿ ಖಾತೆಯ ಕೊರತೆ 9900 ಕೋಟಿ ಡಾಲರ್ ತಲಪಿದೆ. ಕೊರತೆ ಮೂರು ಪಟ್ಟು ಹೆಚ್ಚಿದೆ.
ನಾವು ಪೆಟ್ರೋಲ್, ಕಲ್ಲಿದ್ದಲು, ಚಿನ್ನ, ಬೆಳ್ಳಿ, ಹೀಗೆ ಹಲವು ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಅವಶ್ಯಕತೆಗೆ ಬೇಕಾದಷ್ಟು ಕಲ್ಲಿದ್ದಲನ್ನು ಉತ್ಪಾದಿಸುವುದಕ್ಕೆ ಸಾಧ್ಯವಿದ್ದರೂ, ಹೆಚ್ಚಿನ ಬೆಲೆ ತೆತ್ತು ಆಮದು ಮಾಡಿಕೊಳ್ಳುತ್ತಿದ್ದೇವೆ. ಚಿನ್ನ ಹಾಗೂ ಬೆಳ್ಳಿಯ ಆಮದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಆಮದು ದುಪ್ಪಟ್ಟಾಗಿದೆ. ಜನರಿಗೆ ಚಿನ್ನದಲ್ಲಿ ಹಣ ತೊಡಗಿಸುವುದು ಹೆಚ್ಚು ಸುರಕ್ಷಿತವೆನಿಸಿದೆ. ಸ್ಟಾಕ್ ಮಾರುಕಟ್ಟೆಯಿಂದ ಹಣ ತೆಗೆದು ಚಿನ್ನದಲ್ಲಿ ಹೂಡುತ್ತಿದ್ದಾರೆ. ವ್ಯಾಪಾರದ ಕೊರತೆ ಹೆಚ್ಚಿದಷ್ಟೂ ಡಾಲರಿಗೆ ಬೇಡಿಕೆ ಹೆಚ್ಚುತ್ತದೆ, ರೂಪಾಯಿ ಮೌಲ್ಯ ಕುಸಿಯುತ್ತದೆ.
ವಿದೇಶಿ ಬಂಡವಾಳ ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದ್ದರೆ ಚಾಲ್ತಿ ಖಾತೆಯ ಕೊರತೆಯನ್ನು ನಿಭಾಯಿಸಬಹುದಿತ್ತು. 2008ರ ನಂತರ ಭಾರತದಲ್ಲಿ ವಿದೇಶಿ ಬಂಡವಾಳದ ಹೂಡಿಕೆ ಹೆಚ್ಚಿತ್ತು. ಅಂದು ಅಮೆರಿಕದಂತಹ ದೇಶಗಳು ಬಡ್ಡಿದರವನ್ನು ಇಳಿಸಿದ್ದರಿಂದ ಅಗ್ಗದಲ್ಲಿ ಸಿಕ್ಕ ಡಾಲರನ್ನು ಹೂಡಿಕೆದಾರರು ಭಾರತದಂತಹ ದೇಶಗಳಲ್ಲಿ ಹೂಡಿದ್ದರು. ಆದರೆ, ಇತ್ತೀಚೆಗೆ ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರವನ್ನು ಹೆಚ್ಚಿಸಿದೆ. ಅಮೆರಿಕದಲ್ಲೇ ಹೆಚ್ಚಿನ ಬಡ್ಡಿ ಸಿಗುತ್ತಿರುವುದರಿಂದ, ವಿದೇಶಿ ಹೂಡಿಕೆದಾರರು ಭಾರತದಿಂದ ಬಂಡವಾಳವನ್ನು ಹಿಂತೆಗೆದುಕೊಂಡು ಅಮೆರಿಕದಲ್ಲಿ ಹೂಡುತ್ತಿದ್ದಾರೆ. ಈ ವರ್ಷ ಸುಮಾರು 18 ಶತಕೋಟಿ ಡಾಲರ್‌ನಷ್ಟು ಹಣ ಹೊರಗೆ ಹೋಗಿದೆ. ಚೀನಾದ ಬದಲಿಗೆ ಭಾರತದಲ್ಲಿ ಹೂಡಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಅದು ಹುಸಿಯಾಗಿದೆ. ಹೂಡಿಕೆ ಈಗ ಚೀನಾದತ್ತ ಸಾಗುತ್ತಿದೆ. ಹಿಂದೆಯೂ ರೂಪಾಯಿ ಕುಸಿದಾಗಲೆಲ್ಲ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಾಗಿತ್ತು. ಹಾಗಾಗಿ ಬಂಡವಾಳದ ಹೊರಹರಿವು ರೂಪಾಯಿ ಕುಸಿಯುವುದಕ್ಕೆ ಒಂದು ಮುಖ್ಯ ಕಾರಣ.
ಟ್ರಂಪ್ ಆರಂಭಿಸಿರುವ ಸುಂಕ ಸಮರದಿಂದ ಭಾರತದ ಸರಕುಗಳು ಅಮೆರಿಕದ ಗ್ರಾಹಕರಿಗೆ ದುಬಾರಿಯಾಗಲಿವೆ. ಇದರಿಂದ ಬೇಡಿಕೆ ಕುಸಿದು, ರಫ್ತುದಾರರ ಡಾಲರ್ ವರಮಾನ ಕಡಿಮೆ ಆಗುತ್ತಿದೆ. 2025ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಶೇ 12ರಷ್ಟು ಕಡಿಮೆಯಾಗಿದೆ. ಆದರೆ, ಬೇರೆ ದೇಶಗಳಿಗೆ ಹೋಲಿಸಿದರೆ ರಫ್ತಿಗಾಗಿ ಭಾರತ ಅಮೆರಿಕವನ್ನು ಕಡಿಮೆ ಅವಲಂಬಿಸಿದೆ. ಹಾಗಾಗಿ ರೂಪಾಯಿಯ ತೀವ್ರ ಕುಸಿತಕ್ಕೆ ಇದೊಂದೇ ಕಾರಣ ಎನ್ನಲಾಗದು.
ಕೆಲವರ ದೃಷ್ಟಿಯಲ್ಲಿ ಅಮೆರಿಕದೊಂದಿಗೆ ಒಪ್ಪಂದ ಸಾಧ್ಯವಾಗದೇ ಇರುವುದು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣ. ಬಹುತೇಕ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಭಾರತಕ್ಕೆ ಮಾತ್ರ ಸಾಧ್ಯವಾಗಿಲ್ಲ. ಅನಿಶ್ಚಿತ ಪರಿಸ್ಥಿತಿ ಆರ್ಥಿಕತೆಗೆ ಒಳ್ಳೆಯದಲ್ಲ. ಇವೆಲ್ಲ ನಿಜ. ಆದರೆ, ಭಾರತದ ಹಿತಾಸಕ್ತಿಯನ್ನು ಬದಿಗೊತ್ತಿ ಒಪ್ಪಂದ ಮಾಡಿಕೊಳ್ಳುವುದು ಒಳ್ಳೆಯದಲ್ಲ.
‘ಜನರ ನಿರೀಕ್ಷೆ’ಯೂ ಕುಸಿತದ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತದೆ. ರೂಪಾಯಿ ಮೌಲ್ಯ ಕುಸಿಯುತ್ತಿದ್ದಾಗ ರಫ್ತುದಾರರು, ಇನ್ನೂ ಕುಸಿಯಲಿ, ಹೆಚ್ಚು ರೂಪಾಯಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ರಫ್ತು ಮಾಡುವ ತೀರ್ಮಾನವನ್ನು ಮುಂದೂಡುತ್ತಾರೆ. ಆದರೆ ಆಮದುದಾರರು, ಇನ್ನೂ ಕುಸಿದರೆ ಹೆಚ್ಚು ಹಣ ಕೊಡಬೇಕಾಗುತ್ತದೆ ಎಂಬ ಆತಂಕದಲ್ಲಿ ತಕ್ಷಣವೇ ಆಮದು ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಾರೆ. ಇದರಿಂದ ಡಾಲರಿಗೆ ಬೇಡಿಕೆ ಹೆಚ್ಚಿ ರೂಪಾಯಿ ಇನ್ನಷ್ಟು ಕುಸಿಯುತ್ತದೆ.
ರೂಪಾಯಿ ಕುಸಿತ ಮಿಶ್ರ ಪರಿಣಾಮ ಹೊಂದಿದೆ. ರಫ್ತುದಾರರಿಗೆ, ಅನಿವಾಸಿ ಭಾರತೀಯರಿಗೆ ಇದು ಲಾಭದಾಯಕ. ವಿದೇಶದಿಂದ ಭಾರತಕ್ಕೆ ಬರುವ ಹಣ ಹೆಚ್ಚಾಗಬಹುದು. ಆದರೆ, ಆಮದುದಾರರಿಗೆ ಮತ್ತು ಜನಸಾಮಾನ್ಯರಿಗೆ ಇದು ಹೊರೆಯಾಗುತ್ತದೆ. ಇಂಧನವನ್ನು ಭಾರತ ಬಹುತೇಕ ಆಮದು ಮಾಡಿಕೊಳ್ಳುತ್ತಿರುವುದರಿಂದ ಪೆಟ್ರೋಲ್, ಡೀಸೆಲ್ ದುಬಾರಿಯಾಗುತ್ತದೆ. ಇದರಿಂದ ತರಕಾರಿ, ಹಾಲು, ಗೊಬ್ಬರ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆಯೇರುತ್ತದೆ. ವಿದೇಶದಲ್ಲಿ ವ್ಯಾಸಂಗ ಮಾಡುವುದು ದುಬಾರಿಯಾಗುತ್ತದೆ.
ರೂಪಾಯಿ ಮೌಲ್ಯ ಕುಸಿದಾಗಲೆಲ್ಲ ರಿಸರ್ವ್ ಬ್ಯಾಂಕ್ ಡಾಲರನ್ನು ಮಾರುಕಟ್ಟೆಯಲ್ಲಿ ಮಾರಿ ರೂಪಾಯಿ ಮೌಲ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು. ಇತ್ತೀಚೆಗೆ ಆರ್‌ಬಿಐ ತನ್ನ ನಿಲುವನ್ನು ಬದಲಿಸಿಕೊಂಡಂತೆ ತೋರುತ್ತದೆ. ರೂಪಾಯಿ ಮೌಲ್ಯವನ್ನು ಕಾಪಾಡಿಕೊಳ್ಳುವ ಬದಲು, ಅದಕ್ಕೆ ತನ್ನದೇ ಆದ ‘ಸಹಜ ಮಟ್ಟ’ವನ್ನು ಕಂಡುಕೊಳ್ಳಲು ಬಿಡಲಾಗಿದೆ. ರೂಪಾಯಿ ಕುಸಿದರೆ ನಮ್ಮ ರಫ್ತು ಅಗ್ಗವಾಗಿ, ಟ್ರಂಪ್ ಸುಂಕದ ಹೊರೆಯನ್ನು ಸರಿತೂಗಿಸಿಕೊಳ್ಳುವುದಕ್ಕೆ ಅನುಕೂಲವಾಗಬಹುದೆಂಬ ಲೆಕ್ಕಾಚಾರವೂ ಇದರ ಹಿಂದಿರಬಹುದು. ಅಥವಾ ವಿದೇಶಿ ವಿನಿಮಯ ಮೀಸಲು ಕಮ್ಮಿಯಾಗಿ ತೊಂದರೆಯಾಗಬಹುದು ಅನ್ನುವ ಆತಂಕವೂ ಇರಬಹುದು.
ಡಾಲರ್ ಮಾರಿ ರೂಪಾಯಿ ಕುಸಿತ ತಡೆಯುವುದು ತಾತ್ಕಾಲಿಕ ಪರಿಹಾರವಷ್ಟೇ. ಅನವಶ್ಯಕ ಆಮದುಗಳಿಗೆ ಕಡಿವಾಣ ಹಾಕುವುದು, ರಫ್ತು ಮಾರುಕಟ್ಟೆಯನ್ನು ವೈವಿಧ್ಯಮಯಗೊಳಿಸುವುದು ಮತ್ತು ದೇಶೀಯ ಬೇಡಿಕೆಯನ್ನು ಹೆಚ್ಚಿಸುವುದು ದೀರ್ಘಕಾಲೀನ ಪರಿಹಾರಗಳಾಗಿವೆ. ರೂಪಾಯಿ ಮೌಲ್ಯವನ್ನು ಹಿಂದಿನ ಮಟ್ಟಕ್ಕೆ ಕೊಂಡೊಯ್ಯುವುದು ಕಷ್ಟವಾಗಬಹುದು. ಆದರೆ, ಇನ್ನಷ್ಟು ಕುಸಿಯುವುದನ್ನು ತಪ್ಪಿಸಬಹುದು. ಲಭ್ಯವಿರುವ ಸಂಪನ್ಮೂಲ ಮತ್ತು ಮಾನವಶಕ್ತಿ ಬಳಸಿಕೊಂಡು, ಬಹುಸಂಖ್ಯಾತರ ಏಳಿಗೆ ಸಾಧ್ಯವಾಗುವ ಸುಭದ್ರ ಆರ್ಥಿಕತೆಯನ್ನು ಕಟ್ಟುವುದಕ್ಕೆ ಸರ್ಕಾರ ಜರೂರಾಗಿ ಗಮನಕೊಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.