ADVERTISEMENT

ಸೇವಾಲಾಲ್ ಎನ್ನುವ ಮಹಾ ಸಂತನ ನೆನಪಲ್ಲಿ...

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 20:20 IST
Last Updated 14 ಫೆಬ್ರುವರಿ 2025, 20:20 IST
   

ಒಂದು ಸಂಘರ್ಷದ ಕಾಲಘಟ್ಟದಲ್ಲಿ ಹುಟ್ಟಿದ ಸೇವಾಲಾಲ್ ಸಿರ್ಸಿಯ ಮಾರಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಿ ಸಂತನಾದ. ಆತ ಹುಟ್ಟಿದ್ದು ರಾಮವತ್ ಎನ್ನುವ ಬುಕ್ಯಾ ಬೆಡಗದಲ್ಲಿ. ಬಾಲ್ಯದಿಂದಲೂ ಸಂತ ಪರಂಪರೆಯ ಕಡೆಗೆ ಒಲವನ್ನು ಹೊಂದಿದ ಸೇವಾ, ತನ್ನ ಪವಾಡಗಳಿಂದ ಸೇವಾ ಭಾಯ (ಅಣ್ಣ) ನಾದ. ಹೆಂಗಸರು, ಗಂಡಸರು ಭಾಯ ಎನ್ನುವುದರಿಂದಾಗಿ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದು ಬಿಟ್ಟ. ಅವರು 1739ರ ಫೆಬ್ರುವಿ 15ರಂದು ಸುರಗೊಂಡನ ಕೊಪ್ಪದಲ್ಲಿ ಜನಿಸಿದರು ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಐತಿಹಾಸಿಕವಾಗಿ ಬಂಜಾರ ಚಿಂತಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಹೀಗೆ ಒಂದು ಜನ ಸಮುದಾಯದ ಸಾಂಸ್ಕೃತಿಕ ನಾಯಕ ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ಕೂಡ ಎಷ್ಟೊಂದು ಪ್ರಸ್ತುತರಾಗಿದ್ದಾರೆ ಎಂಬುದೆ ಮುಖ್ಯವಾಗುತ್ತದೆ.

ಅಲೆಮಾರಿ ಜನ ಸಮುದಾಯ ಬಂಜಾರ, ಲಂಬಾಣಿ, ಲಮಾಣಿ, ಸುಗಾಲಿ, ಸುಕಾಲಿ ಗೋರ್, ಢಾಡಿ, ಢಾಲ್ಯ, ಸೋನಾರ್, ಲೋಹಾರ್, ಕಾಂಗ್ಸಿಬಜಾರ, ಬಾಜೀಗರ್ ಬಂಜಾರ ಮುಂತಾದ ಅನೇಕ ಉಪನಾಮಗಳಿಂದ ಗುರುತಿಸಲ್ಪಡುವ ಬಂಜಾರರು ಮೂಲತಃ ದಿನಸಿ ಮತ್ತು ಲವಣದ ವ್ಯಾಪಾರಿಗಳಾಗಿದ್ದರು. ಆಂಗ್ಲರು ಇವರು ಲದೇಣಿಯದ (ಎತ್ತುಗಳ ಮೇಲೆ ಹೇರು) ಮೂಲಕ ವ್ಯಾಪರ ಮಾಡುತ್ತಿದ್ದ ಕಾರಣ ಇವರನ್ನು ‘ಕ್ಯಾರವನ್ಸ್’ಅಂದರೆ ಸಾಗಿಸುವ ಸಮುದಾಯ ಎಂದರು. ರಾಜನ ಸೈನ್ಯಕ್ಕೆ ಬೇಕಾದ ನೆರವು ನೀಡಲು ಎತ್ತುಗಳ ಮೇಲೆ ಸಾಮಗ್ರಿಗಳನ್ನು ಹೇರಿಕೊಂಡು ಎಂಥ ದುರ್ಗಮ ಹಾದಿಯೇ ಇದ್ದರೂ ಪಾರಾಗಿ ಬರುವ ಚಾಣಾಕ್ಷರು ಆಸೀಫ್ ಅಲಿ ಖಾನ್‌ನ ಹಿಂದೆ ಬಂದ ಜಂಗಿ - ಬಂಗಿ ಸಹೋದರರ ಬಳಿ, ಲಕ್ಷ ಎತ್ತುಗಳಿದ್ದವು ಇಂದು ದಾಖಲಾಗಿದೆ.

ಪ್ರತಿ ಎರಡು ಮೂರು ವರ್ಷಗಳಿಗೆ ಒಮ್ಮೆ ಗೋಧಿ ಸಸಿಯನ್ನು ಬೆಳೆದು ತೀಜ್ ಹಬ್ಬವೆಂದೆ ಪ್ರಸ್ತುತ ಗೊಂಡಿರುವ (ಮನೆಮನೆ ಪೂಜೆ) ಘರೆ ಘರೇರ್ ಹಬ್ಬ ಆಚರಿಸಿದಾಗ ಕನಿಷ್ಠ ಒಂದೆರಡು ಕುರಿಗಳನ್ನು ಪ್ರತಿಯೊಬ್ಬ ಬಂಜಾರ ಕುಟುಂಬ ಮರಿಯಮ್ಮಗೆ ಬಲಿಕೊಟ್ಟು ಬೀಗರಿಗೆ ಉಣಿಸುವುದು ವಾಡಿಕೆ. ಈ ಹಬ್ಬ ಬಂತೆಂದರೆ ಸುತ್ತಲ ಹಳ್ಳಿಗಳ ಮೆಲ್ವರ್ಗದವರಿಗೆ ಭಲೇ ಖುಷಿ ಕಾರಣ ‘ಲಮಾಣಿಗರು ದುಡಿಯುವುದು ಹೆಂಡಕ್ಕ ಕಂಡಕ್ಕೆ’ ಅಂತ ನಾಣ್ಣುಡಿಯೇ ಇದೆ. ಹೀಗಾಗಿ ಸಾಲ ಕೊಡುವ ನೆಪದಲ್ಲಿ ಮಾಂಸದ ರುಚಿಯನ್ನು ಕಂಡುಬಿಡುತ್ತಾರೆ. ಆದರೆ ಸೇವಾಭಾಯ ಇಂತ ಮೂಡ ಕಂದಾಚಾರಣೆಗಳನ್ನು ಮಾಡಬಾರದು ಎಂದು ಹೇಳಿದ್ದಾನೆ. ಆದರೆ ಅದು ಹೇಗೆ ಈ ರೀತಿಯ ಬದುಕಿಗೆ ಬಲಿಯಾಗಿದ್ದಾರೊ ಗೊತ್ತಿಲ್ಲ. 

ADVERTISEMENT

ಇವತ್ತು ಕೂಡ ನಗಾರಿ (ವಾಜು) ಕಂಚಿನ ತಟ್ಟೆ ಇದ್ದರೆ ಮುಗಿಯಿತು ಸೇವಾಭಾಯನ ಪ್ರಾರ್ಥನೆಗೆ. ಇವತ್ತಿಗೂ ಕರ್ನಾಟಕ, ಆಂಧ್ರ ಪದೇಶ, ತಮಿಳುನಾಡಿನ ಕೆಲವು ಹಾಗೂ ಮಹಾರಾಷ್ಟ್ರದ ಪ್ರತಿ ತಾಂಡದಲ್ಲಿ ಸೇವಾಭಾಯನ ನೆನೆಯದ ದಿನಗಳಿಲ್ಲ. ಆತನ ಹೆಸರಿಲ್ಲದ ಪ್ರಾರ್ಥನೆಗಳಿಲ್ಲ. ಪ್ರತಿತಾಂಡಗಳಲ್ಲಿ ಸೇವಾಭಾಯನ ನೆನೆಯದ ದಿನಗಳಲ್ಲಿ ಆತನಿಲ್ಲದ ಪ್ರಾರ್ಥನೆಗಳಲ್ಲಿ ಆತನ ವಾಣಿಯನ್ನ ಚಾಚುತಪ್ಪದೆ ಪಾಲಿಸಿದವರು ಒಳ್ಳೆಯ ಬದುಕನ್ನು ಬದುಕಿದ್ದಾರೆ. 

ಮನುಷ್ಯನಾಗಿ ಜನಿಸಿ, ಒಂದು ಜನಾಂಗದ ಏಳಿಗೆಗೆ ಶ್ರಮಿಸಿದ ಮಹಾನ್ ವ್ಯಕ್ತಿ, ಯಾವಾಗ ಒಬ್ಬ ವ್ಯಕ್ತಿಯನ್ನು ದೇವರು ಎಂದು ತಿಳಿದು ಆತನಿಗೆ ಗುಡಿಕಟ್ಟಿ ಪೂಜೆ ಮಾಡುತ್ತಾರೊ, ಅಂದು ಆತನ ಸಿದ್ಧಾಂತಗಳು, ವಿಚಾರಗಳು ಸತ್ತು ಹೋಗುತ್ತವೆ. ಈ ಜನ ಸಮುದಾಯದಲ್ಲೂ ಆದದ್ದು ಹಾಗೆ, ಜನರನ್ನ ಮೌಢ್ಯದಲ್ಲಿಟ್ಟು, ಕುರಿ ಬಲಿ, ಹಬ್ಬ ಮುಂತಾದ ಆಚರಣೆಗಳ ಹೆಸರಲ್ಲಿ ಆರ್ಥಿಕವಾಗಿ ಸಬಲಗೊಳ್ಳದಂತೆ ನೊಡಿಕೊಳ್ಳುವ ಜನರಿಂದ ಎಚ್ಚರಿಕೆಯಿಂದ ಇರಬೇಕಾಗಿದೆ.

ಸಮಾಜದಿಂದ ದೂರ, ವಿದ್ಯೆಯಿಂದ ವಂಚಿತರಾಗಿ ಕಾಡುಗಳಲ್ಲಿ ತಾಂಡ ಕಟ್ಟಿಕೊಂಡಿರುವ ಬಂಜಾರರು ಜಾಗರೂಕರಾಗಬೇಕಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ವಿದ್ಯೆ, ಸಂಘಟನೆ ಮತ್ತು ಹೋರಾಟಾದ ಹಾದಿಯನ್ನು ಹಿಡಿಯಬೇಕಾಗಿದೆ. ಇತ್ತೀಚೆಗೆ ಒಳಗೊಳ್ಳುವ ಗುಣವನ್ನ ರೂಢಿಸಿಕೊಂಡು ತಲೆ ಎತ್ತಿ ನಿಲ್ಲುವ ಸಾಹಸ ಮಾಡಿರುವ ಬಂಜಾರರಿಗೆ ಹದಿನೆಂಟನೇಯ ಶತಮಾನದ ಆದಿಯಲ್ಲಿ ಬದುಕಿದ್ದ ಸಂತ ಸೇವಲಾಲ್ ಆವಾಗಲೇ ಈ ಮಾತನ್ನ ಹೇಳಿದ್ದರು. ತಲೆ ಎತ್ತಿ ನಿಲ್ಲಿ ಎಂದು ಸೇವಾಲಾಲ್ ಅವರ ಈ ಪ್ರಾರ್ಥನೆ ‘ಕೀಡಿ ಮೂಂಗಿನ ಸಾಯವೇಣು, ಜೀವ ಜನಗಾನಿನ ಸಾಯಿ ವೇಣು, ಪೀಸಾನ ಸವಾಪೀಸಕರಣು’ (ಇರುವೆ ಅರವತ್ತು ಕೋಟಿ ಜೀವಿಗಳಿಗೆ ಒಳಿತಾಗಬೇಕು ಕಾಸಿಗೆ ಕಾಲುಭಾಗದಷ್ಟು ಹೆಚ್ಚು ಮಾಡಬೇಕು) ಎನ್ನುವುದು ಇವತ್ತಿಗೂ ಕೂಡ ಆಚರಣೆಯಲ್ಲಿದೆ. ವ್ಯಾಪಾರದಲ್ಲಿ ಬರುವ ಎಲ್ಲ ಲಾಭ ನಮಗೆ ಬರಬೇಕೆಂದು ಹೇಳಿಕೊಡಲಿಲ್ಲ. ಇಂತಹ ಉದಾತ್ತತೆಯನ್ನು ಹೇಳಿಕೊಟ್ಟ ಸೇವಾಲಾಲ್ ಇವತ್ತಿಗೂ ಪ್ರಸ್ತುತರಾಗಿದ್ದಾರೆ ಮತ್ತು ಬಂಜಾರ ಸಮುದಾಯದ ಸಮಸ್ತ ಜನ ಮಾನಸದಲ್ಲಿ ನೆಲೆನಿಂತಿದ್ದಾರೆ.

ಲೇಖಕ: ಪ್ರಾಧ್ಯಾಪಕ, ಇಂಗ್ಲಿಷ್ ಅಧ್ಯಯನ ವಿಭಾಗ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.