
ವಿಶ್ಲೇಷಣೆ
ಇತಿಹಾಸದಲ್ಲಿ ಶಿಕ್ಷಣವು ಅಕ್ಷರಗಳ ಅಭ್ಯಾಸವಷ್ಟೇ ಆಗಿರಲಿಲ್ಲ. ಅದು ಅಧಿಕಾರ, ಸಂಸ್ಕೃತಿ ಮತ್ತು ಸಾಮಾಜಿಕ ನಿಯಂತ್ರಣದೊಂದಿಗೆ ಜೋಡಿಸಿಕೊಂಡಿದ್ದ ಶಕ್ತಿಯ ಕ್ಷೇತ್ರವಾಗಿತ್ತು. ಯಾರು ಓದಬೇಕು, ಯಾರು ಓದಬಾರದು ಎಂಬ ನಿರ್ಧಾರವೇ ಒಂದು ಸಮಾಜದ ನ್ಯಾಯಬುದ್ಧಿ ಮತ್ತು ಮಾನವೀಯತೆಯನ್ನು ನಿರ್ಧರಿಸುತ್ತಿತ್ತು. ಭಾರತೀಯ ಸಮಾಜದಲ್ಲಿ ಈ ನಿರ್ಧಾರ ಶತಮಾನಗಳ ಕಾಲ ವರ್ಣ, ಜಾತಿ ಮತ್ತು ಲಿಂಗದ ಆಧಾರ ದಲ್ಲಿ ನಡೆಯುತ್ತಿತ್ತು; ಅಕ್ಷರವು ಸಮಾನತೆಯ ದಾರಿ ಯಾಗುವ ಬದಲು ಶೋಷಣೆಯ ಉಪಕರಣವಾಗಿತ್ತು. ಇಂತಹ ಹಿನ್ನೆಲೆಯಲ್ಲಿಯೇ ಶಿಕ್ಷಣವನ್ನು ದೈವದತ್ತ ಅಧಿಕಾರದಿಂದ ಮಾನವಹಕ್ಕಾಗಿ ಪರಿವರ್ತಿಸಿದ ಹೋರಾಟಗಳು ರೂಪುಗೊಂಡವು. ಆ ಹೋರಾಟ ಗಳ ಕೇಂದ್ರಬಿಂದುವಾಗಿರುವುದು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಯ ಶಿಕ್ಷಣಕ್ರಾಂತಿ. ಅದು ಬರೀ ಶಾಲೆಗಳ ಸ್ಥಾಪನೆಯ ಕಥೆಯಲ್ಲ, ಸಮಾಜದ ಬೌದ್ಧಿಕ ಆತ್ಮಗೌರವವನ್ನು ಪುನರ್‌ರಚಿಸಿದ ಮಾನವೀಯ ಪಯಣ.
ಮಕ್ಕಳಿಗೆ ಶಿಕ್ಷಣ ಒದಗಿಸುವುದು ಪ್ರಸ್ತುತ ತೀರಾ ಕಷ್ಟವಾದ ವಿಚಾರವಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಿಕ್ಷಣವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಸಂವಿಧಾನಾತ್ಮಕ ಭರವಸೆಗಳು, ರಾಜ್ಯದ ಶಿಕ್ಷಣ ನೀತಿಗಳು ಮತ್ತು ಸಾಮಾಜಿಕ ಜಾಗೃತಿಯ ಪರಿಣಾಮವಾಗಿ, ಪೋಷಕರು ಮಕ್ಕಳನ್ನು ತಮ್ಮ ಆಸಕ್ತಿ, ಸಾಮರ್ಥ್ಯ ಹಾಗೂ ಭವಿಷ್ಯದ ಗುರಿಗಳಿಗೆ ತಕ್ಕಂತೆ ಶಿಕ್ಷಣ ಪಡೆಯುವಂತೆ ಪ್ರೇರೇಪಿಸುವ ಅವಕಾಶವನ್ನು ಇಂದು ಸಂವಿಧಾನ ಕಲ್ಪಿಸಿದೆ. ಮತ, ಧರ್ಮ, ಜಾತಿ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣಕ್ಕೆ ನಿರ್ಬಂಧ ಹೇರುವ ವ್ಯವಸ್ಥೆಯನ್ನು ಸಮಕಾಲೀನ ಸಮಾಜ ತಿರಸ್ಕರಿಸಿದೆ. ಆದರೆ, ಈ ಸ್ಥಿತಿಯನ್ನು ಸಮಾಜ ಸಹಜವಾಗಿ ತಲಪಿಲ್ಲ. ಇದರ ಹಿಂದೆ ಅಪಾರ ವಾದ ಹೋರಾಟ, ತ್ಯಾಗ, ಬೌದ್ಧಿಕ ಚಿಂತನೆ ಮತ್ತು ಸಾಮಾಜಿಕ ಪ್ರತಿರೋಧಗಳ ದೀರ್ಘ ಇತಿಹಾಸ ಇದೆ.
ಭಾರತೀಯ ಸಮಾಜದ ಪೂರ್ವಾಧುನಿಕ ಹಂತವನ್ನು ಅವಲೋಕಿಸಿದರೆ, ಅಕ್ಷರಸಂಸ್ಕೃತಿ ಕೆಲವೇ ಕೆಲವು ವರ್ಗಗಳಿಗೆ ಸೀಮಿತವಾಗಿದ್ದುದನ್ನು ಕಾಣಬಹುದು. ಶಿಕ್ಷಣವೆಂಬುದು ದೈವದತ್ತವಾದ ಕೊಡುಗೆ, ಕೆಲವರಿಗಷ್ಟೇ ಮೀಸಲಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಕ್ಕು ಎಂಬಂತೆ ವ್ಯವಸ್ಥಿತವಾಗಿ ಪ್ರತಿಪಾದಿಸಲಾಗುತ್ತಿತ್ತು. ಇದರ ಪರಿಣಾಮವಾಗಿ ಶೂದ್ರರು, ಅತಿಶೂದ್ರರು ಹಾಗೂ ಮಹಿಳೆಯರು ಶಿಕ್ಷಣದ ವಲಯಕ್ಕೆ ಪ್ರವೇಶಿಸುವುದೇ ಧರ್ಮಭ್ರಷ್ಟತೆ, ಪಾಪಕಾರ್ಯ ಎಂಬ ಮಿಥ್ಯಭಾವನೆಗಳು ಸಮಾಜದಲ್ಲಿ ಗಟ್ಟಿಯಾಗಿ ನೆಲೆಸಿದ್ದವು. ಈ ವ್ಯವಸ್ಥೆ ಶಾರೀರಿಕ ಹಾಗೂ ಮಾನಸಿಕ ದಾಸ್ಯವನ್ನು ನಿರ್ಮಿಸುವ ಕ್ರೂರ ತಂತ್ರವಾಗಿತ್ತು.
ಜನವಿರೋಧಿ ಮತ್ತು ಅಮಾನವೀಯ ವ್ಯವಸ್ಥೆಯ ವಿರುದ್ಧ ಗಟ್ಟಿಧ್ವನಿ ಎತ್ತಿದವರು ಆಧುನಿಕ ಭಾರತದ ಮಹಾನ್ ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಮಾತೆ ಸಾವಿತ್ರಿಬಾಯಿ ಫುಲೆ. ಅವರು ಶಿಕ್ಷಣವನ್ನು ಬರೀ ಜ್ಞಾನಾರ್ಜನೆಯ ಸಾಧನವಾಗಿಯಷ್ಟೇ ನೋಡದೆ, ಸಾಮಾಜಿಕ ವಿಮೋಚನೆಯ ಮುಲಾಮನ್ನಾಗಿ ಗ್ರಹಿಸಿದರು. ಶೂದ್ರ–ಅತಿಶೂದ್ರರು ಹಾಗೂ ಮಹಿಳೆಯರಿಗೆ ಶಿಕ್ಷಣ ಒದಗಿಸುವುದನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡ ಈ ದಂಪತಿ, ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಅಪೂರ್ವ ಪಾತ್ರವಹಿಸಿದರು. ಈ ಕಾರಣಕ್ಕಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾತ್ಮ ಜ್ಯೋತಿಬಾ ಫುಲೆಯವರನ್ನು ‘ಭಾರತೀಯ ಸಮಾಜ ಪರಿವರ್ತನೆಯ ಪಿತಾಮಹ’ ಎಂದು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.
ಸಾವಿತ್ರಿಬಾಯಿ ಫುಲೆಯವರು ಭಾರತದ ಮೊದಲ (ಮಹಿಳಾ) ಶಿಕ್ಷಕಿ ಎಂಬ ಐತಿಹಾಸಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು 1831ರ ಜನವರಿ 3ರಂದು ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ನೈಗಾಂವ ಗ್ರಾಮದಲ್ಲಿ ನೇವಸೆ ಪಾಟೀಲ ಮತ್ತು ಲಕ್ಷ್ಮೀ ದಂಪತಿಗೆ ಜನಿಸಿದರು. ಬಾಲ್ಯದಲ್ಲೇ ಜ್ಯೋತಿಬಾ ಫುಲೆ ಅವರೊಂದಿಗೆ ವಿವಾಹವಾದ ಸಾವಿತ್ರಿಬಾಯಿಗೆ ಆ ಸಮಯದಲ್ಲಿ ಕೇವಲ ಒಂಬತ್ತು ವರ್ಷ!
ಜಗತ್ತಿನ ಅನೇಕ ಭಾಗಗಳಲ್ಲಿ ಕೈಗಾರಿಕಾ ಯುಗದ ಆರಂಭದಿಂದ ಯಂತ್ರಯುಗದ ಚಲನೆಗಳು ಕಂಡುಬರುತ್ತಿದ್ದರೆ, ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದಡಿ ಮಂತ್ರ–ಮೌಢ್ಯ ಮತ್ತು ಮತಾಂಧತೆ ಪ್ರಾಬಲ್ಯದಲ್ಲಿತ್ತು. ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಗಳನ್ನು ದೈವಸಿದ್ಧವೆಂದು ಘೋಷಿಸಿ, ಶಿಕ್ಷಣವನ್ನು ಬ್ರಾಹ್ಮಣ ವರ್ಗಕ್ಕೆ ಸೀಮಿತ ಗೊಳಿಸಲಾಗಿತ್ತು. ಪೇಶ್ವೆಗಳ ಆಡಳಿತದ ಪತನದ ನಂತರ ಬ್ರಿಟಿಷರ ಆಡಳಿತ ಸ್ಥಾಪನೆಯಾಯಿತು. ಈ ರಾಜಕೀಯ ಬದಲಾವಣೆ ಸಾಮಾಜಿಕ ಕ್ಷೇತ್ರದಲ್ಲಿ ಸಂಪೂರ್ಣ ಸಮಾನತೆಯನ್ನು ತಕ್ಷಣವೇ ತರಲಿಲ್ಲವಾದರೂ, ಹೊಸ ಅವಕಾಶಗಳ ಕಿಟಕಿಯನ್ನು ತೆರೆದಿತು.
ಸೀಮಿತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಜ್ಯೋತಿಬಾ ಫುಲೆ, ಶೂದ್ರರು ಮತ್ತು ಅತಿಶೂದ್ರರ ಶಿಕ್ಷಣಕ್ಕಾಗಿ ಮೊದಲ ಸಂಘಟಿತ ಪ್ರಯತ್ನ ಆರಂಭಿಸಿದರು. ಮೊದಲ ಹಂತದಲ್ಲಿ ಕೆಲವೇ ಕೆಲವು ಮಂದಿಗೆ ಅಕ್ಷರಜ್ಞಾನ ನೀಡಿದ ಅವರು, ಆ ಶಿಕ್ಷಣ ಪಡೆದವರನ್ನೇ ಶಿಕ್ಷಕರನ್ನಾಗಿ ರೂಪಿಸುವ ಮೂಲಕ ಸಮುದಾಯಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿದರು. ಇದು ಕೆಳವರ್ಗಗಳಲ್ಲಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವ ಮಹತ್ವದ ಹೆಜ್ಜೆಯಾಗಿತ್ತು.
1840ರಲ್ಲಿ ಅಸ್ಪೃಶ್ಯ ಸಮುದಾಯದವರಿಗಾಗಿ ಪುಣೆಯಲ್ಲಿ ಶಾಲೆ ಆರಂಭಿಸಿದ ಫುಲೆಯವರ ಪ್ರಯತ್ನವು, ಸಂಪ್ರದಾಯಬದ್ಧ ಶಕ್ತಿಗಳಿಂದ ವಿರೋಧಕ್ಕೆ ಗುರಿಯಾಯಿತು. ವೈದಿಕ ವರ್ಗದ ಒತ್ತಡಕ್ಕೆ ಮಣಿದ ಫುಲೆಯವರ ತಂದೆಯೇ ಮಗ ಮತ್ತು ಸೊಸೆಯನ್ನು ಮನೆಯಿಂದ ಹೊರಹಾಕಿದರು. ಶಾಲೆಯನ್ನೂ ಮುಚ್ಚಿಸಲಾಯಿತು. ಆದರೆ, ಆ ಘಟನೆ ಫುಲೆ ದಂಪತಿಯನ್ನು ಹಿಂಜರಿಯುವಂತೆ ಮಾಡಲಿಲ್ಲ. 1851ರ ಜುಲೈ 3ರಂದು ಅವರು ಮಹಿಳೆಯರಿಗಾಗಿ ಶಾಲೆ ಪ್ರಾರಂಭಿಸಿದರು. ಮಹಿಳೆಯರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದ ಕಾಲಘಟ್ಟದಲ್ಲಿ, ಮಹಿಳಾ ಶಿಕ್ಷಣದ ಮಹತ್ವವನ್ನು ದೂರದೃಷ್ಟಿಯಿಂದ ಗ್ರಹಿಸಿದ್ದರು. ಮಹಿಳೆಯರ ಶಿಕ್ಷಣವೇ ಸಮಾಜದ ಸಮಗ್ರ ಪರಿವರ್ತನೆಗೆ ಮೂಲವೆಂಬ ಅವರ ನಂಬಿಕೆ ಇಂದಿಗೂ ಪ್ರಸ್ತುತ.
ಸಾವಿತ್ರಿಬಾಯಿ ಅವರಿಗೆ ಸ್ವತಃ ಜ್ಯೋತಿಬಾ ಫುಲೆಯವರೇ ಮರಾಠಿ, ಇಂಗ್ಲಿಷ್, ಪಾರ್ಸಿ ಹಾಗೂ ಸಂಸ್ಕೃತ ಭಾಷೆಯ ಶಿಕ್ಷಣ ನೀಡಿದರು. ಈ ತರಬೇತಿಯ ಮೂಲಕ ಅವರು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ಸಮರ್ಥರಾದರು. ಆದರೆ, ಶಿಕ್ಷಕಿಯ ಪಾತ್ರ ಸುಲಭವಾಗಿರಲಿಲ್ಲ. ಶಾಲೆಗೆ ತೆರಳುವ ಮಾರ್ಗದಲ್ಲಿ ಅವಮಾನ, ಕಲ್ಲುತೂರಾಟ, ಶಾರೀರಿಕ ಹಲ್ಲೆ, ಕೊಳಕು ಎರಚುವಂತಹ ಹಿಂಸೆಯನ್ನು ಎದುರಿಸಿದರೂ, ಸಾವಿತ್ರಿಬಾಯಿ ತಮ್ಮ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ. ರಕ್ತಸ್ರಾವವಾದರೂ ಶಾಲೆಗೆ ತೆರಳಿ ಬೋಧನೆ ಮಾಡಿದ ಅವರ ಧೈರ್ಯ ಮತ್ತು ಬದ್ಧತೆ, ಭಾರತೀಯ ಮಹಿಳಾ ಶಿಕ್ಷಣದ ಇತಿಹಾಸದಲ್ಲಿ ಅನನ್ಯ ಉದಾಹರಣೆ. ಫುಲೆ ದಂಪತಿಯ ನಿರಂತರ ಹೋರಾಟದ ಫಲವಾಗಿ ಪುಣೆಯಲ್ಲಿ ಅನೇಕ ಶಾಲೆಗಳು ಆರಂಭವಾದವು. ‘ಸತ್ಯಶೋಧಕ ಸಮಾಜ’ ಸ್ಥಾಪಿಸುವ ಮೂಲಕ ಅವರು ಶಿಕ್ಷಣವಷ್ಟೇ ಅಲ್ಲದೆ, ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದರು. ಬಾಲ್ಯವಿವಾಹ, ದೇವದಾಸಿ ಪದ್ಧತಿ, ವಿಧವೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಸಂಘಟಿತ ಪ್ರತಿರೋಧ ರೂಪಿಸಿದರು. ವಿಧವಾಶ್ರಮಗಳನ್ನು ಸ್ಥಾಪಿಸಿ, ವಿಧವೆಯರ ಮಾನವೀಯ ಹಕ್ಕುಗಳ ಪರವಾಗಿ ಧ್ವನಿ ಎತ್ತಿದರು. ಸಾವಿತ್ರಿಬಾಯಿ ಅವರು ತಮ್ಮ ಕಾವ್ಯ ಮತ್ತು ಬರಹಗಳ ಮೂಲಕವೂ ಮಹಿಳೆಯರಲ್ಲಿ ಮತ್ತು ಶೋಷಿತ ವರ್ಗಗಳಲ್ಲಿ ಜಾಗೃತಿ ಮೂಡಿಸಿದರು. ‘ಕಾವ್ಯ ಫುಲೆ’ ಅವರ ಕವಿತೆಗಳ ಸಂಕಲನ. ‘ಭವನಕಾಶಿ ಸುಭೋದ ರತ್ನಾಕರ್’ ಆತ್ಮಕಥೆ.
ಜ್ಯೋತಿಬಾ ಅವರ ನಿಧನದ (1890) ನಂತರವೂ ಸಾವಿತ್ರಿಬಾಯಿ ಅವರು ‘ಸತ್ಯಶೋಧಕ ಸಮಾಜ’ದ ಕಾರ್ಯಗಳನ್ನು ಮುಂದುವರಿಸಿದರು. 1897ರಲ್ಲಿ ಪ್ಲೇಗ್ ರೋಗಕ್ಕೆ ತುತ್ತಾಗಿ ನಿಧನರಾದರು.
ಫುಲೆ ದಂಪತಿ ಕಂಡ ಸಮಾನತೆ, ಶಿಕ್ಷಣ ಮತ್ತು ಮಾನವೀಯತೆಯ ಕನಸು ಕಾಲಾತೀತವಾಗಿದೆ. ಅದು ಇಂದಿಗೂ ಭಾರತೀಯ ಸಮಾಜಕ್ಕೆ ದಿಕ್ಕು ತೋರಿಸುವ ಚಿಂತನಾದೀಪವಾಗಿದೆ. ಶೂದ್ರರು, ಅತಿಶೂದ್ರರು ಹಾಗೂ ಮಹಿಳೆಯರು ಅಕ್ಷರಜ್ಞಾನದಿಂದ ಸಬಲರಾಗಬೇಕು ಎಂಬ ಫುಲೆ ದಂಪತಿ ಕನಸನ್ನು ಸಾಕಾರಗೊಳಿಸುವ ಹೊಣೆಗಾರಿಕೆ ಇಂದಿನ ತಲೆಮಾರಿನ ಮೇಲಿದೆ. ಅವರ ಚಿಂತನೆಗಳನ್ನು ಇತಿಹಾಸದ ಭಾಗವಾಗಿಯಷ್ಟೇ ಕಾಣದೆ, ಸಮಕಾಲೀನ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುವ ಜೀವಂತ ಚಿಂತನಾ ಪರಂಪರೆಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಫುಲೆ ದಂಪತಿಯ ಹೋರಾಟವು ಇಂದಿಗೂ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಮಹತ್ವದ ಮಾರ್ಗದರ್ಶಿಯಾಗಿದೆ.
ಪ್ರಸ್ತುತ ಶಿಕ್ಷಣವು ಎಲ್ಲರಿಗೂ ಲಭ್ಯವಿರುವಂತೆ ಕಂಡರೂ, ಅದರ ಸಮಾನ ಪ್ರವೇಶ, ಗುಣಮಟ್ಟ ಮತ್ತು ಸಾಮಾಜಿಕ ನ್ಯಾಯ ಇನ್ನೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ. ಈ ಸಂದರ್ಭದಲ್ಲೇ ಫುಲೆ–ಸಾವಿತ್ರಿಬಾಯಿ ಅವರ ಹೋರಾಟ ನಮಗೆ ನೆನಪಿಸುವುದು ಒಂದೇ ಸತ್ಯವನ್ನು: ಶಿಕ್ಷಣವು ಕೇವಲ ವ್ಯಕ್ತಿಯ ಉನ್ನತಿಗಲ್ಲ, ಸಮಾಜದ ನೈತಿಕ ಮರುಸಂರಚನೆಗೆ ಅಗತ್ಯವಾದ ಶಕ್ತಿ. ಶೂದ್ರರು, ಅತಿಶೂದ್ರರು ಮತ್ತು ಮಹಿಳೆಯರು ಅಕ್ಷರಜ್ಞಾನದಿಂದ ಸಬಲರಾಗಬೇಕು ಎಂಬ ಅವರ ಕನಸು, ಇಂದಿನ ತಲೆಮಾರಿನ ಜವಾಬ್ದಾರಿಯಾಗಿ ನಮ್ಮ ಮುಂದೆ ನಿಂತಿದೆ. ಆ ಕನಸನ್ನು ಜೀವಂತವಾಗಿಡುವುದು ಎಂದರೆ ಫುಲೆ ದಂಪತಿಯನ್ನು ಸ್ಮರಿಸುವುದಲ್ಲ; ಅವರ ಪ್ರಶ್ನೆಗಳನ್ನು, ಅವರ ಪ್ರತಿರೋಧವನ್ನು ಮತ್ತು ಅವರ ಮಾನವೀಯ ದೃಷ್ಟಿಯನ್ನು ಸಮಕಾಲೀನ ಸಮಾಜದಲ್ಲಿ ಮುಂದುವರಿಸುವುದೇ ನಿಜವಾದ ಗೌರವವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.